ಕೃಷಿ ರಾಸಾಯನಿಕಗಳ ವಿವೇಚನಾ ರಹಿತ ಬಳಕೆ

ಇಂದಿನ ಎಲ್ಲಾ ಕಾಯಿಲೆಗಳಿಗೆ ತೊಂದರೆಗಳಿಗೆ ಕೀಟನಾಶಕಗಳೇ ಕಾರಣ, ಕೀಟನಾಶಕಗಳು ಮನುಷ್ಯನನ್ನು ಕೊಲ್ಲಲೆಂದೇ ಆವಿಷ್ಕಾರವಾಗಿದೆ ಎಂದು ಅದನ್ನು ಖಳನಾಯಕನೆಂದು ಬಿಂಬಿಸಲಾಗುತ್ತಿದೆ. ಆದರೆ ಕೀಟನಾಶಕಗಳ ಆವಿಷ್ಕಾರವಾಗದಿದ್ದರೆ ಮನುಷ್ಯ ಎಷ್ಟೊಂದು ತೊಂದರೆ ಅನುಭವಿಸಬೇಕಾಗುತ್ತಿತ್ತು. ಇವೆಲ್ಲಾ ಆಯುಧಗಳ ಹಾಗೆ ಅವುಗಳನ್ನು ಎಚ್ಚರಿಕೆಯಿಂದ ಬಳಸಿಕೊಂಡರೆ ಮನುಷ್ಯನ ಬದುಕಿಗೆ ಉಪಕಾರಿ. ಇಲ್ಲದಿದ್ದರೆ ಅವೇ ಅವನ ಬದುಕನ್ನು ನಾಶ ಮಾಡುತ್ತವೆ. ಕೀಟನಾಶಕಗಳನ್ನು ಎಚ್ಚರಿಕೆಯಿಂದ ಸರಿಯಾದ ಪ್ರಮಾಣದಲ್ಲಿ, ಎಲ್ಲ ಎಚ್ಚರಿಕೆಯೊಂದಿಗೆ ಬಳಸಿದರೆ ಅವು ಮನುಕುಲಕ್ಕೆ ಉಪಕಾರಿ. ರಾಸಾಯನಿಕ

-ಡಾ: ವೆಂಕಟ್ರಮಣ ಹೆಗಡೆ

ವಿಜ್ಞಾನಿಗಳು ಪರಮಾಣುವಿನಿಂದ ಹಿಡಿದು ಅನೇಕ ವಸ್ತುಗಳನ್ನು ಮನುಷ್ಯನ ಬದುಕನ್ನು ಸುಗಮಗೊಳಿಸಲು ಕಂಡು ಹಿಡಿದ್ದಾರೆ. ಅವರು ಅವನ್ನೆಲ್ಲಾ ಜಾಗೃತೆಯಿಂದ ಬಳಸಲು ತಿಳಿಸಿರುತ್ತಾರೆ. ಆದರೆ ಅದನ್ನೋ ಹೇಗೆ ಬೇಕಾದರೂ ಬಳಸಿ ಕೊನೆಗೆ ವಿಜ್ಞಾನಿಗಳನ್ನು ವಿಜ್ಞಾನವನ್ನು ದ್ವೇಷಿಸುವುದು ಬಾವಿಯಿಂದ ನೀರು ಸೇದಲೆಂದು ಹಗ್ಗ ತಯಾರಿಸಿದ ಕಂಪನಿಯ ಮೇಲೆ ʻಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆʼ ಪ್ರಕರಣದ ಮರ್ಡರ್ ಕೇಸ್ ದಾಖಲಿಸಿದಂತೆ! ಆದರೆ ಇದೇ ನಡೆಯಿತ್ತಿದೆ. ತಜ್ಞರ ಬದಲು ವೇದಿಕೆ ವೀರರು ತಾಂತ್ರಿಕ ವಿಷಯಗಳನ್ನು ಹೇಳಲು ಹೊರಟರೆ ಆಗುವುದು ಹೀಗೆಯೇ. ಈ ಲೇಖನದಲ್ಲಿ ಕೀಟನಾಶಕಗಳ ಸಾಧಕ ಬಾಧಕಗಳ ಬಗ್ಗೆ ಕೃಷಿ ತಜ್ಞರಾದ ಡಾ: ವೆಂಕಟ್ರಮಣ ಹೆಗಡೆ, ಪ್ರಧಾನ ಸಂಪಾದಕರು, ಶ್ರಮಜೀವಿ ಕೃಷಿ ಮಾಸಿಕ ಪತ್ರಿಕೆ ಮತ್ತು ಫಾರ್ಮ್ ಟಿವಿ ಮುಖ್ಯಸ್ಥರು, ಬೆಂಗಳೂರು ಇವರು ಬರೆದ ಲೇಖನ ಓದಿ. ರಾಸಾಯನಿಕ
ಡಾ: ಎನ್.ಬಿ.ಶ್ರೀಧರ

ಕೃಷಿ ರಾಸಾಯನಿಕಗಳ ವಿವೇಚನಾ ರಹಿತ ಬಳಕೆ

ಇಂದಿನ ಪರಿಸರ – ಮಾನವ – ಜೀವಿಗಳ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಕೃಷಿ ರಾಸಾಯನಿಕಗಳನ್ನು ದೂರುವುದು ಸರ್ವೇ ಸಾಮಾನ್ಯ. ಈ ಸಮಸ್ಯೆ – ತಪ್ಪಿನಲ್ಲಿ ಯಾರ ಪಾಲೆಷ್ಟು ಎಂಬುದರ ವಿಶ್ಲೇಷಣೆ. ರಾಸಾಯನಿಕ

ಹಿರಿಯ ಪರಿಸರವಾದಿ, ಪತ್ರಕರ್ತ, ನನ್ನ ಗುರುಗಳಾದ ಶ್ರೀ ನಾಗೇಶ್ ಹೆಗಡೆ ಮತ್ತು ಹೆಚ್ಚಿನೆಲ್ಲ ಪರಿಸರವಾದಿಗಳು ಇಂದಿನ ಕೃಷಿ-ಗ್ರಾಮೀಣ ಮಣ್ಣು-ಪರಿಸರ-ಆಹಾರ ಉತ್ಪನ್ನಗಳ ಮಾಲಿನ್ಯಕ್ಕೆ-ವಿಷಾಂಶಕ್ಕೆ ರಸಗೊಬ್ಬರಗಳು, ರೋಗ-ಕೀಟ-ಕಳೆನಾಶಕ ರಸಾಯನಿಕಗಳನ್ನು, ಅದನ್ನು ಸೃಷ್ಟಿಸಿದ ವಿಜ್ಞಾನಿಗಳನ್ನು, ಉತ್ಪಾದಿಸುವ ಕಂಪನಿಗಳನ್ನು, ಮಾರುವ ಅಂಗಡಿಯವರನ್ನು ದೂರುತ್ತಾರೆ. ಆದರೆ ಇದು ಅರ್ಧ ಸತ್ಯ. ರಾಸಾಯನಿಕ

ಇದು ಹೇಗಪ್ಪ ಎಂದರೆ ಬಾವಿಯಿಂದ ನೀರು ಸೇದಲೆಂದು ಹಗ್ಗ ತಯಾರಿಸಿದ ಕಂಪನಿಯ ಮೇಲೆ ’ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ’ ಪ್ರಕರಣದ ಮರ್ಡರ್ ಕೇಸ್ ದಾಖಲಿಸಿದಂತೆ! ಯಾವುದೇ ವಸ್ತುವಿನ – ವಿಚಾರದ – ಸಂಶೋಧನೆಯ ಸರಿಯಾದ ಬಳಕೆ – ಸದ್ಬಳಕೆ – ದುರ್ಬಳಕೆ ಎಂಬ ಹಲವು ಮುಖಗಳಿವೆ. ಹಾಗಾಗಿ ಅಂತಿಮ ಬಳಕೆಯಲ್ಲಿ ಆಗುವ ತಪ್ಪುಗಳಿಗೆ ಸಂಶೋಧಕ – ಉತ್ಪಾದಕ – ಮಾರಾಟಗಾರರ ಜೊತೆಗೆ ಬಳಕೆದಾರರೂ ಜವಾಬ್ದಾರ – ಪಾಲುದಾರರಾಗುತ್ತಾರೆ. ಕೃಷಿ ರೋಗ-ಕೀಟನಾಶಕಗಳು ಘನಘೋರ ವಿಷಯಗಳೆಂದು ಎಲ್ಲರಿಗೂ ಗೊತ್ತು. ಕೊರಾಜಿನ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಕೇವಲ 0.3 ಮಿಲಿ ಹಾಕಿದರೆ ಖತರ್ನಾಕ್ ಕೀಟ ಸ್ಪೋಡೋಪ್ಟೊರಾ ನಿಶ್ಚಿತವಾಗಿ ಸಾಯುತ್ತದೆ. ಇಂಥ ವಿಷಗಳನ್ನು ತಿಳಿದೋ – ತಿಳಿಯದೆಯೋ – ಬೇಜವಾಬ್ದಾರಿಯಿಂದಲೋ ಮನಬಂದಂತೆ ಬಳಸಿದರೆ ಈ ತಪ್ಪನ್ನು ಯಾರ ಮೇಲೆ ಹೊರಿಸೋಣ? ರಾಸಾಯನಿಕ

ಇದನ್ನೂ ಓದಿ: ಕಪ್ಪತಗುಡ್ಡದ ಸುತ್ತಮುತ್ತಲ ಪ್ರದೇಶ ಪರಿಸರ ಸೂಕ್ಷ್ಮ ವಲಯ: ಎಸ್.ಆರ್.ಹಿರೇಮಠ

ಪ್ರಕರಣ 1: ತಿಪಟೂರಿನ ಚಂದ್ರಶೇಖರ 10 ಎಕರೆ ತೆಂಗು-ಅಡಕೆ ತೋಟದಲ್ಲಿ ಫಾರ್ಮ್ ಟಿವಿಯ ಸಲಹೆ ಮೇರೆಗೆ ಮೂರು ವರ್ಷಗಳ ಕೆಳಗೆ ಕಾಫಿ-ಕಾಳುಮೆಣಸು ಹಾಕಿದ್ದಾರೆ, ಚೆನ್ನಾಗಿ ಬಂದಿದೆ. ಮೊನ್ನೆ ಫೋಟೋ ಕಳಿಸಿ ನೇರ ಪ್ರಸಾರಕ್ಕೆ ಕರೆ ಮಾಡಿದಾಗ ನಾನು ಕಂಗಾಲು. ಕಾಫಿ-ಕಾಳುಮೆಣಸು-ಅಡಕೆ ಎಲೆಗಳು ಅರ್ಧ ಸುಟ್ಟಂತಾಗಿ ತಿರುಚಿಕೊಂಡಿವೆ. ಒಂದೊಂದಾಗಿ ಬಾಯಿ ಬಿಡಿಸಿದಾಗ ಗೊತ್ತಾಗಿದ್ದೇನೆಂದರೆ ಎಲ್ಲವಕ್ಕೂ ಪ್ರತಿ ತಿಂಗಳು ಒಂದು ಸಿಂಪಡಣೆ ಮಾಡಿದ್ದಾರೆ. 1 ಅಂತರ್ವ್ಯಾಪಿ ಕೀಟನಾಶಕ, 1 ಅಂತರ್ವ್ಯಾಪಿ ಶಿಲೀಂಧ್ರನಾಶಕ, 1 ಮುಖ್ಯ ಸಂಯುಕ್ತ ರಸಗೊಬ್ಬರ, 1 ಸೂಕ್ಷ್ಮಪೋಷಕಾಂಶ ಮತ್ತು 1 ಬೂಸ್ಟರ್ – ಹೀಗೆ 5 ವಿಧಗಳನ್ನು ಸೇರಿಸಿದ್ದಾರೆ.

ಸಿ.ಪಿ.ಸಿ.ಆರ್‌.ಐ. ವಿಜ್ಞಾನಿಯೊಬ್ಬರು ಅಡಕೆ ಎಲೆ ಚುಕ್ಕಿಗೆ ಮಳೆಗಾಲದಲ್ಲಿ ಮಲೆನಾಡಿನಲ್ಲಿ ತಿಂಗಳಿಗೊಂದು ಸಿಂಪಡಣೆ ಬೇಕು ಎಂದು ಹೇಳಿದ್ದನ್ನು ಅರ್ಧಂಬರ್ಧ ಕೇಳಿಸಿಕೊಂಡು, ತಿಪಟೂರಿನಂತ ಒಣ ಪ್ರದೇಶದಲ್ಲಿ, ಇವೆಲ್ಲಾ ಒಂದಕ್ಕೊಂದು ಹೊಂದಾಣಿಕೆಯಾಗುತ್ತವೆಯೆ ಎಂದು ನೋಡದೆ, ಪ್ರತಿ ತಿಂಗಳು ಸಿಂಪಡಿಸಿದ್ದಾರೆ! ಅವೆಲ್ಲವನ್ನು ಸೇರಿಸುವ ಸಲಹೆ ಕೊಟ್ಟವ ಕೃಷಿ ಅಂಗಡಿಯವ. ನಾನು ಬೇಡ ಎಂದು ಬಯ್ಯುತ್ತೇನೆಂದು ಸಿಂಪಡಣೆಗೆ ಮೊದಲು ನನಗೆ ಹೇಳಲಿಲ್ಲ. ಗಿಡಗಳು ಸಾಯುವ ಹಂತ ತಲುಪಿದಾಗ ಅನಿವಾರ್ಯವಾಗಿ ನೇರ ಪ್ರಸಾರಕ್ಕೆ ಕರೆ ಮಾಡಿದ್ದಾರೆ. ಅದನ್ನು ಸರಿ ಮಾಡಲು ನಾನು ಮತ್ತೇನಾದರೂ ಸಿಂಪಡಣೆ ಸೂಚಿಸಬೇಕಂತೆ! ನೀವು ಮಾಡಿದ ಸಿಂಪಡಣೆಯಿಂದ ಹೀಗಾಗಿದೆ ಎಂದರೆ ಒಪ್ಪಲು ಸಿದ್ಧರಿಲ್ಲ. ನಾನು ರೋಸಿಹೋಗಿ ಬಬ್ಬೂರು ಫಾರ್ಮ್ ಮತ್ತು ಸಿ.ಸಿ.ಆರ್.ಐ.ಗೆ ಸಾಗಹಾಕಿದೆ. ಮತ್ತೇನಿಲ್ಲ, ಅಡಕೆ, ಕಾಳಮೆಣಸು, ಕಾಫಿಗಳಲ್ಲಿ ಅತಿ ಶೀಘ್ರ – ಅತ್ಯಧಿಕ ಬೆಳೆ ತೆಗೆಯಬೇಕೆಂಬ ಧಾವಂತ.

ಪ್ರಕರಣ 2: ಕಳಸ ಸನಿಹದ ರಾಜೇಂದ್ರ ಬಡಮಣೆ ಅಡಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆಂದು ಪ್ರತಿ 15-20 ದಿನಕ್ಕೊಮ್ಮೆಯಂತೆ ವರ್ಷಕ್ಕೆ 8 ಬಾರಿ ಪ್ರೊಪಿಕೊನೊಝೋಲ್ (ಟಿಲ್ಟ್) ಸಿಂಪಡಿಸಿದ್ದಾರೆ. ನಾವು ಅಧ್ಯಯನ ಪ್ರವಾಸಕ್ಕೆಂದು ಮರಸಣಿಗೆಗೆ ಹೋದಾಗ ಸಿ.ಪಿ.ಸಿ.ಆರ್.ಐ. ವಿಜ್ಞಾನಿಗಳನ್ನು ತರಾಟೆಗೆ ತೆಗೆದುಕೊಳ್ಳಲು (ಉಗಿಯಲು!) ತಮ್ಮ ತಂಡದೊಂದಿಗೆ ಹುಡುಕಿಕೊಂಡು ಬಂದರು. ಟಿಲ್ಟ್ ಸಿಂಪಡಿಸುತ್ತಿದ್ದರೆ ನಿಯಂತ್ರಣ ಸಾಧ್ಯ ಎಂದು ನನಗೇ ಗೊತ್ತು; ಆದರೆ ಈ ವಿಜ್ಞಾನಿಗಳು ಬೋರ್ಡೋ, ಸಾಫ್, ಹೆಕ್ಸಾಕೊನೊಝೋಲ್ ಇತ್ಯಾದಿಗಳನ್ನು ಶಿಫಾರಸ್ಸು ಮಾಡಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕೊತಕೊತ ಕುದಿಯುತ್ತಿದ್ದರು. ಮತ್ತೆ ಮತ್ತೆ ಅಂತರ್ವ್ಯಾಪಿ ಶಿಲೀಂಧ್ರ ನಾಶಕ ಸಿಂಪಡಿಸಿದರೆ ಅಡಿಕೆ ತೋಟ ಹೇಗೆ ಹಾಳಾಗುತ್ತದೆ ಎಂದು ನಾನು ಸಾಧ್ಯಂತವಾಗಿ ವಿವರಿಸಿದಾಗ ತಣ್ಣಗಾದರು – ಪೆಚ್ಚಾದರು. ಸಿ.ಪಿ.ಸಿ.ಆರ್.ಐ. ವಿಜ್ಞಾನಿಗಳು ರಾಜೇಂದ್ರರಿಂದ ಬಚಾವಾದರು!

ಪ್ರಕರಣ 3: ರಾಣೆಬೆನ್ನೂರಿನ ಶಿವಪ್ಪ ಕಪ್ಪು ಮಣ್ಣಿನ ಬಟ್ಟಾನಬಯಲು ಪ್ರದೇಶದಲ್ಲಿ 5000 ಅಡಕೆ ಸಸಿ ನೆಟ್ಟು 6 ತಿಂಗಳಾಗಿದೆ. ಆ ಪುಟ್ಟ ಗಿಡಗಳ ಬುಡಕ್ಕೆ ಅಂತರ್ವ್ಯಾಪಿ ಶಿಲೀಂಧ್ರನಾಶಕ ಮೆಟಲ್ಯಾಕ್ಸಿಲ್ ಮತ್ತು ಕೀಟನಾಶಕ ಕ್ಲೋರೋಪೈರಿಫಾಸನ್ನು ಈಗಾಗಲೇ 3 ಬಾರಿ ಹುಯ್ದಿದ್ದಾರೆ. ಹಾಗೆ ಮಾಡಿದರೆ ಅಡಕೆ ಗಿಡಕ್ಕೆ ಯಾವುದೇ ರೋಗ-ಕೀಟ ಬರುವುದಿಲ್ಲ; ಅದ್ಭುತವಾಗಿ – ಶೀಘ್ರವಾಗಿ ಬೆಳೆಯುತ್ತದೆ ಎಂದು ಯಾರೋ ಹೇಳಿದರಂತೆ!

ಪ್ರಕರಣ 4: ಗೌರಿಬಿದನೂರಿನ ರಾಮಚಂದ್ರಪ್ಪರ ಮೂರು ಎಕರೆ ಅಡಕೆ ತೋಟ ಬಹುತೇಕ ಸಾಯುವ ಹಂತದಲ್ಲಿದೆ. ಗೊಬ್ಬರ ಕೊಟ್ಟಾಗಿಂದ ಹಾಗಾಗಿದೆ ಎನ್ನುತ್ತಾರೆ. ಫೋಟೋ ತೋರಿಸದೆ ನಾನು ಯಾವ ಸಲಹೆಯನ್ನೂ ಕೊಡುವುದಿಲ್ಲ. ನೋಡಿದರೆ ಗರಿಗಳೆಲ್ಲ ತುದಿಯಿಂದ ಸುಟ್ಟು ಬೆಳ್ಳಗಾಗಿದೆ. ನನಗೆ ತಕ್ಷಣ ಅರ್ಥವಾಗಿದ್ದು ಇದು ವಿಷವೇರಿದ ಪ್ರಕರಣ. ಬಾಯಿ ಬಿಡಿಸಿದಾಗ ತಿಳಿದಿದ್ದೇನೆಂದರೆ ಪ್ರತಿ ಮರಕ್ಕೆ ತಲಾ 250 ಗ್ರಾಂ ಝಿಂಕ್ ಸಲ್ಫೇಟ್ ಮತ್ತು ಬೋರಾನ್ ಕೊಟ್ಟಿದ್ದಾರೆ. ಸಲಹೆ ಕೊಟ್ಟವ ರೈತ ಸಂಪರ್ಕ ಕೇಂದ್ರದ ಅಸಾಮಿ. ಈಗ ಗಿಡ-ತೋಟ ಉಳಿಸಬೇಕೆಂದರೆ ವಿಷ ಕಾರಿಸಬೇಕು. ಇಡೀ ತೋಟಕ್ಕೆ ಕಟ್ಟುಹಾಕಿ ಒಂದು ಅಡಿ ನೀರು ನಿಲ್ಲಿಸಿ, ಮರುದಿನ ಹರಿಬಿಡುವುದು – ಹೀಗೆ ನಾಲ್ಕಾರು ಬಾರಿ ಮಾಡಿ, ನಂತರ ಪ್ರತಿ ಮರಕ್ಕೆ 100 ಗ್ರಾಂ ಯೂರಿಯಾ ಕೊಡಿಸಿದೆ. ಒಂದು ತಿಂಗಳಲ್ಲಿ ತೋಟ ಮತ್ತೆ ಹಸಿರಾಗುತ್ತಿದೆ.

ಇಂಥ ಸಾವಿರಾರು ಪ್ರಕರಣ ಹೇಳಬಲ್ಲೆ. ಅರ್ಜೆಂಟಾಗಿ ಅತಿ ಹೆಚ್ಚು ಹಣ ಗಳಿಸಬೇಕೆಂಬ ತರಾತುರಿಯ ಅಡಕೆ, ದಾಳಿಂಬೆ, ಶುಂಠಿ ಮುಂತಾದ ಬೆಳೆಗಳಲ್ಲೇ ಇಂಥ ಪ್ರಕರಣ ಹೆಚ್ಚು. ಕಂಡ ಕಂಡ ಕೀಟನಾಶಕಗಳನ್ನು ತಲೆಬುಡವಿಲ್ಲದೆ ಸಿಂಪಡಿಸಿ ಬಹುತೇಕ ಕೀಟಗಳಿಗೆ ನಿರೋಧಕ ಶಕ್ತಿ ಬಂದಿದೆ. ಹಾಗಾಗಿ ಮತ್ತಷ್ಟು ವಿಷ ಸಿಂಪಡಣೆ. ಸಂಶೋಧಕರು ಮತ್ತು ಉತ್ಪಾದಕ ಕಂಪನಿಗಳು ಸಿಂಪಡಣೆಯ ಪ್ರಮಾಣ, ಯಾವೆಲ್ಲ ಕೀಟ-ರೋಗಗಳಿಗೆ, ಮನುಷ್ಯ-ಪ್ರಾಣಿಗಳಿಗೆ ವಿಷವೇರಿದರೆ ಕೊಡಬೇಕಿರುವ ಪ್ರತಿ ರಸಾಯನಿಕ (ಆಂಟಿಡೋಟ್) ಇತ್ಯಾದಿಗಳನ್ನೆಲ್ಲ ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಮುಂದೆ ಹೆಚ್ಚು ಮಾರಾಟ ಮಾಡಬೇಕೆಂದು ಟೊಂಕ ಕಟ್ಟಿ ನಿಂತ ಕಂಪನಿಯ ಮಾರಾಟ ವಿಭಾಗ, ವಿತರಕರು, ಅಂಗಡಿಯವರು ಈ ಎಲ್ಲಾ ಸೂಚನೆಗಳನ್ನು ಕಡೆಗಣಿಸುತ್ತಾರೆ. ಇದ್ಯಾವುದರ ಪರಿವೆ – ಜ್ಞಾನ – ತರಬೇತಿಯಿಲ್ಲದ ರೈತ ಮನಬಂದಂತೆ ಪ್ರಯೋಗಿಸಿ ಹಣ – ಬೆಳೆ ಎರಡನ್ನೂ ಕಳೆದುಕೊಳ್ಳುತ್ತಾನೆ. ಇಂಥ ಘನಘೋರ ರಾಸಾಯನಿಕಗಳನ್ನು ಸಿಂಪಡಿಸುವಾಗಲೂ ಭಾರತದ ಬಹುತೇಕ ರೈತರು ಮುಖ-ಮೈಗೆ ಯಾವುದೇ ರಕ್ಷಣಾ ಕವಚ ಬಳಸುವುದಿಲ್ಲ. ಹೆಚ್ಚೆಂದರೆ ಮೂಗು-ಬಾಯಿಗೆ ಒಂದು ಟವಲ್! ಹಾಗಾಗಿ ಈ ರಸಾಯನಿಕ ಕೃಷಿಯ ಎಡವಟ್ಟು – ಅನಾಹುತಗಳಲ್ಲಿ ಈ ಸರಣಿಯ ಎಲ್ಲರ ಪಾಲೂ ಇದೆ; ಎಲ್ಲರೂ ಜವಾಬ್ದಾರರು.

ಕೆಂಪು – ಹಳದಿ – ನೀಲಿ – ಹಸಿರು ಲೇಬಲ್

ಪೀಡೆನಾಶಕ ಕಾಯ್ದೆ (ಪೆಸ್ಟಿಸೈಡ್ ಆಕ್ಟ್) ಪ್ರಕಾರ ಕೃಷಿ ವಿಷರಾಸಾಯನಿಕಗಳನ್ನು 4 ರೀತಿ ವರ್ಗೀಕರಿಸಿದ್ದಾರೆ. ಅದರ ಪ್ರಕಾರವೇ ಆಯಾ ಉತ್ಪನ್ನದ ಲೇಬಲ್ಲಿನ ಬಣ್ಣವಿರುತ್ತದೆ. ಆದರೆ ಹೆಚ್ಚಿನ ರೈತರಿಗೆ ಈ ವರ್ಗೀಕರಣ ತಿಳಿದಿಲ್ಲ ಅಥವಾ ಅದರ ಮಹತ್ವ ಗೊತ್ತಿಲ್ಲ. ಘನಘೋರ ವಿಷಕಾರಿ (Extremely Toxic) ಗೆ ಪ್ರಖರ ಕೆಂಪು; ಭಾರಿ ವಿಷಕಾರಿ (Highly Toxic) ಗೆ ಪ್ರಖರ ಹಳದಿ; ಮಧ್ಯಮ ವಿಷಕಾರಿ (Moderately Toxic) ಗೆ ಪ್ರಖರ ನೀಲಿ ಮತ್ತು ಅಲ್ಪ ಪ್ರಮಾಣದ ವಿಷಕಾರಿ (Slightly Toxic) ಗೆ ಪ್ರಖರ ಹಸಿರು ಬಣ್ಣದ ಲೇಬಲ್ ಬಳಸಲಾಗುತ್ತದೆ.

ಈ ಸಂಕೇತ ಅನುಸರಿಸಿ ಬಳಕೆದಾರ ರೈತ ಎಚ್ಚರಿಕೆ ವಹಿಸಬೇಕು. ಈ ವಿಷಯ ಕೃಷಿ ರಸಾಯನಿಕ ಕಂಪನಿ, ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಅಂಗಡಿಯವರಿಗೆ ಗೊತ್ತಿದೆ. ಆದರೆ ಎಷ್ಟು ಜನ ರೈತರಿಗೆ ಈ ಕುರಿತು ಎಚ್ಚರಿಕೆ – ತರಬೇತಿ – ಜ್ಞಾನ ಕೊಡಲಾಗಿದೆ? ಐಪಿಎಲ್ ನ ಎಲ್ಲಾ ಆಟಗಾರರ ಜಾತಕವೇ ತಿಳಿದಿರುವ ನಮ್ಮ ಯುವ ರೈತರಿಗೆ ತಮ್ಮ ಜೀವನ – ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಬಲ್ಲ ಈ ವಿಷಯ ಎಷ್ಟು ಗೊತ್ತು? ಹೇಳಿದರೆ ತಿಳಿದುಕೊಳ್ಳುವ ವ್ಯವಧಾನವಿದೆಯೇ?

ಕೀಟ-ರೋಗನಾಶಕಗಳ ನಿಷೇಧ (ಬ್ಯಾನ್) ಎಂಬ ಪ್ರಹಸನ

ಒಂದು ಹೊಸ ರಾಸಾಯನಿಕ (ಮಾಲಿಕ್ಯೂಲ್) ಸಿದ್ಧವಾದಾಗ ಸಂಶೋಧಕ – ಕಂಪನಿ 20 ವರ್ಷಗಳಿಗೆ ಅದರ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆಯುತ್ತದೆ. ಮತ್ತಿನ್ಯಾರೇ ಉತ್ಪಾದಿಸಿ ಮಾರಾಟ ಮಾಡಬೇಕೆಂದರೆ ಮೂಲ ಕಂಪನಿಗೆ ರಾಜಧನ (ರಾಯಲ್ಟಿ) ಕೊಡಬೇಕು. ಒಂದು ರೋಗ-ಕೀಟ ನಾಶಕವನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಮೊದಲು ಅದರಿಂದ ಕೃಷಿ-ಪರಿಸರ-ಬಳಕೆದಾರ ರೈತ-ಜೀವಿ ಸಂಕುಲದ ಮೇಲಾಗುವ ಪರಿಣಾಮ-ದುಷ್ಪರಿಣಾಮಗಳ ಕೂಲಂಕುಶ ಅಧ್ಯಯನ ನಡೆಯಬೇಕು, ನಡೆಯುತ್ತದೆ ಕೂಡ.

ಭಾರತದಂತ ದೇಶದಲ್ಲಿ ಲೈಸೆನ್ಸ್ ಹೇಗೆ ಸಿಗುತ್ತದೆ ಎಂದು ನಮಗೆಲ್ಲ ಗೊತ್ತು. ಒಂದು ನಾಶಕ ರಸಾಯನಿಕದ ಪೇಟೆಂಟ್ ಅವಧಿ ಮುಗಿಯುತ್ತಿದ್ದಂತೆ ಬಿಡುಗಡೆಗೆ ಇನ್ನೊಂದು ಸಿದ್ಧವಾಗಿರುತ್ತದೆ. ಆ 20 ವರ್ಷಗಳ ಅವಧಿಯಲ್ಲಿ ಅದರಿಂದ ಏನೆಲ್ಲಾ ಅನಾಹುತ – ದುಷ್ಪರಿಣಾಮಗಳಾಗಿವೆ ಎಂದು 19 ನೇ ವರ್ಷ ವರದಿ ಬರುತ್ತದೆ! ಅಷ್ಟು ಹೊತ್ತಿಗೆ ಆ ರಾಸಾಯನಿಕವನ್ನು ಸ್ವಂತ ಕೀಟ-ರೋಗ ನಾಶಕ ಸಂಶೋಧಿಸಲಾಗದ ಭಾರತದಂತ ದೇಶಗಳಲ್ಲಿ ವ್ಯಾಪಕವಾಗಿ ಬಳಸುತ್ತಿರುತ್ತಾರೆ.

ಆಗ ಅದನ್ನು ನಿಷೇಧಿಸಬೇಕು ಎಂದು ಯೂರೋಪು-ಅಮೇರಿಕಾ ದೇಶಗಳಿಂದ ದೊಡ್ಡ ಕೂಗು ಏಳುತ್ತದೆ. ಏಕೆಂದರೆ ಅವರ ಹೊಸ ರಾಸಾಯನಿಕ ಮಾರಾಟವಾಗಬೇಕು. ಹಾಗಾದರೆ ಇಷ್ಟು ವರ್ಷ ಅದರ ದುಷ್ಪರಿಣಾಮಗಳನ್ನು ಏಕೆ ವರದಿ ಮಾಡಲಿಲ್ಲ? ಎಲ್ಲವೂ ಮಾರುಕಟ್ಟೆ ಲಾಬಿ – ತಂತ್ರ. ಸದ್ಯ ಭಾರತದಲ್ಲಿ ಬಳಕೆಯಾಗುತ್ತಿರುವ ಒಟ್ಟಾರೆ ಕೀಟನಾಶಕಗಳಲ್ಲಿ ಕ್ಲೋರೊಪೈರಿಫಾಸ್ ನ ಪಾಲೇ 45% ಗಿಂತ ಹೆಚ್ಚಿದೆ. ಈಗ ಅದನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಬಹುತೇಕ ಪಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಬ್ಯಾನ್ ಆಗಿದೆ ಕೂಡ. ನನ್ನ ಅನಿಸಿಕೆಯಲ್ಲಿ ಈ ಎಲ್ಲಾ ರೋಗ-ಕೀಟನಾಶಕಗಳು ಅಪಾಯಕಾರಿಗಳೇ.

ಅಪಾಯದ ಪ್ರಮಾಣ – ಅವಧಿ ಹೆಚ್ಚು ಕಡಿಮೆ ಇರಬಹುದು. ಈ ಎಲ್ಲವನ್ನು ಒಂದೋ ತುಂಬಾ ಸೀಮಿತ ಪ್ರಮಾಣದಲ್ಲಿ, ವಿವೇಚನೆಯಿಂದ ಬಳಸಬೇಕು. ಅಥವಾ ಸಂಪೂರ್ಣವಾಗಿ ನಿಷೇಧಿಸಿಬಿಡಬೇಕು. 20-30 ವರ್ಷ ಬಳಸಿ, ಹಾನಿಯಾಗುವಷ್ಟು ಆದಮೇಲೆ ನಿಷೇಧವೆಂಬ ನಾಟಕದಲ್ಲಿ ಅರ್ಥವಿಲ್ಲ. ನೆನಪಿಡಿ, ಈ ಪ್ರಹಸನ ಕೇವಲ ಕೃಷಿ ರಾಸಾಯನಿಕಗಳಲ್ಲಷ್ಟೇ ಅಲ್ಲ; ಮಾನವ ಔಷಧಿಗಳಲ್ಲಿ ಇದು ಇನ್ನೂ ದೊಡ್ಡ ಕಿತಾಪತಿ. ಈಗ ನಾವೆಲ್ಲ ಸ್ವಲ್ಪ ಮೈ ಬಿಸಿಯಾದರೂ ತಿನ್ನುವ ಪ್ಯಾರಾಸಿಟಮಾಲ್, ಇನ್ನೊಂದು ಪರಿಣಾಮಕಾರಿಯಾದ ಔಷದ ಸಿಕ್ಕಾಗ ಬ್ಯಾನ್ ಆದರೆ ಅಶ್ಚರ್ಯವಿಲ್ಲ. ಆಗ ಈ ಪ್ಯಾರಾಸಿಟಮಾಲ್ ನಮ್ಮ ಲಿವರ್-ಕಿಡ್ನಿಗಳ ಮೇಲೆ ಏನೆಲ್ಲಾ – ಹೇಗೆಲ್ಲಾ ಹಾನಿ ಮಾಡಿದೆ ಎಂಬ ’ವಿದ್ವತ್ಪೂರ್ಣ’ ವರದಿಗಳು ಬೆಳಕಿಗೆ ಬರುತ್ತವೆ!

ಅಸಮರ್ಪಕ ರಾಸಾಯನಿಕ – ಪ್ರಮಾಣದ ಬಳಕೆ

ನಿರ್ದಿಷ್ಠ ಪ್ರಕಾರದ ಕೀಟ-ರೋಗಾಣುಗಳಿಗೆ ಇಂಥವರ್ಗದ ಕೀಟ-ರೋಗನಾಶಕಗಳು ಪರಿಣಾಮಕಾರಿ ಎಂದಿರುತ್ತದೆ. ಅದನ್ನೇ ಶಿಫಾರಸ್ಸು ಮಾಡಬೇಕು, ಬಳಸಬೇಕು. ಇನ್ನೂ ಕೆಲವೊಮ್ಮೆ ವಿಶಾಲ ವ್ಯಾಪ್ತಿ (ಬ್ರಾಡ್ ಸ್ಪೆಕ್ಟ್ರಮ್) ಕೀಟ-ರೋಗ ನಾಶಕಗಳಿರುತ್ತವೆ. ಉದಾಹರಣೆಗೆ ಕ್ಲೋರೊಪೈರಿಫಾಸ್ ಇತ್ಯಾದಿ ಕೀಟನಾಶಕಗಳು ಮತ್ತು ಸಿ.ಓ.ಸಿ. – ಬೋರ್ಡೋ ದ್ರಾವಣದಂತ ತಾಮ್ರಯುಕ್ತ ಶಿಲೀಂಧ್ರನಾಶಕಗಳು. ಈ ಪರಿಜ್ಞಾನ ನನ್ನನ್ನೂ ಸೇರಿದಂತೆ ಹೆಚ್ಚಿನಲ್ಲ ಕೃಷಿ ಸಲಹೆಗಾರರು, ಅರ್ಧಕ್ಕರ್ಧ ಕೃಷಿ ವಿಜ್ಞಾನಿಗಳು, ಆಗ್ರೋ ಅಂಗಡಿಯವರಿಗೆ ಇರುವುದಿಲ್ಲ. ನಾನು ಗೊತ್ತಿಲ್ಲದ್ದನ್ನು ತಜ್ಞರೊಂದಿಗೆ ಚರ್ಚಿಸಿ ಸಲಹೆ ಕೊಡುತ್ತೇನೆ. ’ನಂಗೆ ಈ ಕ್ಷಣಕ್ಕೆ ಗೊತ್ತಿಲ್ಲ, ಕೇಳಿ ಹೇಳುವೆ’ ಎನ್ನಲು ನನಗೆ ಯಾವ ಬಿಗುಮಾನ-ಪ್ರತಿಷ್ಠೆ-ಇಗೋ ಇಲ್ಲ. ಆದರೆ ರೈತರ ನೇರ ಸಂಪರ್ಕದಲ್ಲಿರುವ ಎಷ್ಟು ಜನ ಹೀಗೆ ಮಾಡುತ್ತಾರೆ? ಇನ್ನು ರೈತರ ಮಟ್ಟದಲ್ಲಂತೂ ರೋಗ-ಕೀಟನಾಶಕಗಳ ಅದಲಿ-ಬದಲಿ ಸಿಂಪಡಣೆಯ ಸಾವಿರಾರು ಉದಾಹರಣೆಗಳು ಸಿಗುತ್ತವೆ.

ಅಲ್ಲದೆ ನಾವು 1 ಮಿಲಿ – 1 ಗ್ರಾಂ ಹೇಳಿದರೆ ಹೆಚ್ಚಿನ ರೈತರು 2-3 ಮಿಲಿ – ಗ್ರಾಂ ಹಾಕುವುದು ಸರ್ವೇಸಾಮಾನ್ಯ. ಸಿಂಪಡಣೆ ಹೆಚ್ಚು ಸ್ಟ್ರಾಂಗ್ – ಪರಿಣಾಮಕಾರಿಯಾಗಿರಲಿ ಎಂಬ ಮನೋಭಾವ. ಅಸಮರ್ಪಕ ರಾಸಾಯನಿಕ ಮತ್ತು ಪ್ರಮಾಣದ ಬಳಕೆಯಿಂದ ಬೆಳೆಗೆ ಹಾನಿಯಾಗಬಹುದು; ಪರಿಸರ ಪ್ರದೂಷಣೆ; ಹಣದ ಅಪವ್ಯಯ; ಮತ್ತೆ ಕೊನೆಯಲ್ಲಿ ಕೀಟ-ರೋಗಾಣುಗಳಲ್ಲಿ ನಿರೋಧಕ ಶಕ್ತಿ ವರ್ಧನೆ. ಅನಗತ್ಯವಾಗಿ ಕಂಡ ಕಂಡದ್ದಕ್ಕೆಲ್ಲ, ಶಿಫಾರಸ್ಸಿಗೆ ವಿರುದ್ಧವಾಗಿ ಅಂತರ್ವ್ಯಾಪಿ ರಾಸಾಯನಿಕಗಳನ್ನು ಬಳಸಿದರೆ ಈ ಎಲ್ಲ ಸಾಧ್ಯತೆಗಳು ಹೆಚ್ಚುತ್ತವೆ – ಶೀಘ್ರವಾಗುತ್ತವೆ.

ಅಡ್ನಾಡಿ ಕೃಷಿ ಸಲಹಾಕಾರರು

ಅಗತ್ಯವಿರಲಿ ಬಿಡಲಿ, ಹೆಚ್ಚು ಹೆಚ್ಚು ಔಷಧ – ರಾಸಾಯನಿಕ ಬರೆದುಕೊಟ್ಟವ ದೊಡ್ಡ ಡಾಕ್ಟರ್ – ಭಾರಿ ತಜ್ಞ ಎಂಬ ಪರಿಸ್ಥಿತಿ ಇದೆ. ಅಡಕೆ ಹಿಡಿಮುಂಡಿಗೆಗೆ ಕಾಲುವೆ ತೆಗೆಯಿರಿ, ತಿಪ್ಪೆ ಗೊಬ್ಬರ ಸಾಕಷ್ಟು ಹಾಕಿ ಎಂದರೆ ಒಪ್ಪಲು – ಅನುಸರಿಸಲು ಬಹುತೇಕ ರೈತರಿಗೆ ಮನಸ್ಸಿಲ್ಲ; ಏನಾದರೂ ಔಷಧ ಸೂಚಿಸಬೇಕು! ಅಡಕೆ – ದಾಳಿಂಬೆ – ಶುಂಠಿ ಮತ್ತಿತರ ಬೆಳೆಗಳಲ್ಲಿ ರೈತರಿಗೆ ಸಲಹೆ ಕೊಡುವ ಹೆಚ್ಚಿನವರು ಕೃಷಿ ವಿಜ್ಞಾನದ ಗಂಧಗಾಳಿ ಗೊತ್ತಿಲ್ಲದ ’ಡಾಕ್ಟರ್’ ಗಳು! ಇನ್ನು ರಾಸಾಯನಿಕ ಕಂಪನಿಗಳ ಕ್ಷೇತ್ರ ಪ್ರತಿನಿಧಿಗಳು (ಫೀಲ್ಡ್ ಹುಡುಗರು) ಅನಾಹುತಕಾರಿ ಸಲಹೆ ಕೊಡುತ್ತಾರೆ.

ಅವರಿಗೆ ಮಾರಾಟದ ಟಾರ್ಗೆಟ್ ಮುಟ್ಟಬೇಕು, ರೈತರಿಗೆ ಸುಲಭವಾಗಿ ಅತಿ ಹೆಚ್ಚು ಆದಾಯ ಬರಬೇಕು. ಹೆಚ್ಚಿನ ಖಾಸಗಿ (ಕೆಲ ಸರ್ಕಾರಿ) ಕೃಷಿ ಸಲಹಾಕಾರರಿಗೆ ಅವರು ಮಾಡಿಸಿದ ವ್ಯಾಪಾರದ ಮೇಲೆ ಕಮಿಷನ್ ಇರುತ್ತದೆ. ಇನ್ನು ಹಲವು ಸರ್ಕಾರಿ ಕೃಷಿ ವಿಜ್ಞಾನಿಗಳು ಕಾಲಕಾಲಕ್ಕೆ ಜ್ಞಾನ ನವೀಕರಣ (ಅಪ್ಡೇಟ್) ಮಾಡಿಕೊಳ್ಳದೆ ಅಡ್ನಾಡಿ ಸಲಹೆಗಳನ್ನು ಕೊಡುವ ಪ್ರಕರಣ ದಿನವೂ ನಮ್ಮ ನೇರ ಪ್ರಸಾರದಲ್ಲಿ ಕಾಣಸಿಗುತ್ತದೆ.

ಸೂಕ್ಷ್ಮ ಪೋಷಕಾಂಶ (ಮೈಕ್ರೋನ್ಯೂಟ್ರಿಯೆಂಟ್) ಲಾಬಿ

ಮುಖ್ಯ ಪೋಷಕಾಂಶಗಳನ್ನು (ಎನ್.ಪಿ.ಕೆ.) ತಯಾರಿಸಿದವರಿಗೆ ಮತ್ತು ಮಾರಾಟ ಮಾಡಿದವರಿಗೆ ಹೆಚ್ಚಿನ ಲಾಭಾಂಶವಿಲ್ಲ. ಅವುಗಳ ಬೆಲೆಯ ಮೇಲೆ ಸರ್ಕಾರದ ನಿಯಂತ್ರಣವಿದೆ. ಉತ್ಪಾದನಾ ಘಟಕ ಸ್ಥಾಪಿಸಲು ಕೋಟ್ಯಾಂತರ ರೂಪಾಯಿ ಬೇಕು. ಹಾಗಾಗಿ ನಿಯಂತ್ರಣವಿಲ್ಲದ ಸೂಕ್ಷ್ಮ ಪೋಷಕಾಂಶಗಳನ್ನು ಮಿಶ್ರ ಮಾಡುವ – ಮಾರಾಟ ಮಾಡುವ ಅಸಂಖ್ಯ ಘಟಕ – ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಪಿಪಿಎಂ ಪ್ರಮಾಣದಲ್ಲಿ ಬೇಕಾಗುವ ಸೂಕ್ಷ್ಮ ಪೋಷಕಾಂಶಗಳು ನೀವು ಕೊಡುವ ತಿಪ್ಪೆ ಗೊಬ್ಬರದಲ್ಲೇ ಗಿಡಕ್ಕೆ ಲಭ್ಯವಾಗುತ್ತದೆ. ಇನ್ನು ಕ್ಯಾಲ್ಸಿಯಂ, ಗಂಧಕ ಇತ್ಯಾದಿ ದ್ವಿತೀಯ ಪೋಷಕಾಂಶಗಳು ಮಣ್ಣು-ಗೊಬ್ಬರ, ಮುಖ್ಯ ರಸಗೊಬ್ಬರಗಳಿಂದಲೇ ಸಿಗುತ್ತವೆ.

ಆದರೆ ಕಂಡ ಕಂಡ ಗಿಡ-ಬೆಳೆಗಳಿಗೆ ಮೈಕ್ರೋನ್ಯೂಟ್ರಿಯೆಂಟ್ ಶಿಫಾರಸ್ಸು ಮಾಡುವ, ಗಂಧಕವಿದೆ, ಬೋರಾನು ಇದೆ ಎಂದು ಹೇಳುತ್ತಾ ಚಿತ್ರ ವಿಚಿತ್ರ ಗ್ರೇಡ್ ಗಳ ರಸಗೊಬ್ಬರ ಶಿಫಾರಸ್ಸು ಮಾಡುವ ಚಾಳಿ-ಲಾಬಿ ಕಳೆದ ಹತ್ತೆಂಟು ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ರಾಣೆಬೆನ್ನೂರಿನ ಯಲ್ಲಾರೆಡ್ಡಿಯವರ ಅಡಕೆ ತೋಟಕ್ಕೆ ಒಂದು ಕಂಪನಿ 5.5 ಕ್ವಿಂಟಲ್ ಸೂಕ್ಷ್ಮ ಪೋಷಕಾಂಶ ಮಿಶ್ರಣ ಮಾರಾಟ ಮಾಡಿದ್ದು ನೋಡಿ ನಾನು ದಂಗಾದೆ. ಈ ಲಾಬಿಯ ಮೇಲೆ ಯಾರ ನಿಯಂತ್ರಣವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ, ತಿಪ್ಪೆ ಗೊಬ್ಬರ – ಮುಖ್ಯ ರಸಗೊಬ್ಬರ ಕೊಡದಿದ್ದರೂ, ಮೈಕ್ರೋನ್ಯೂಟ್ರಿಯೆಂಟ್ ಪ್ರತಿವರ್ಷ ಕೊಡುವುದು ಕಡ್ಡಾಯ ಎಂದು ರೈತರ ಬ್ರೈನ್ ವಾಶ್ ಮಾಡಲಾಗಿದೆ.

ಖಾಸಗಿ ರಸಗೊಬ್ಬರ ಲಾಬಿ

ಕೆಲ ದೊಡ್ಡ ಖಾಸಗಿ ರಸಗೊಬ್ಬರ ತಯಾರಕರು ಚಿತ್ರ ವಿಚಿತ್ರ ಗ್ರೇಟ್ ಗಳ ರಸಗೊಬ್ಬರ ತಯಾರಿಸಿ, ಅದರಲ್ಲಿ ಝಿಂಕು, ಬೋರಾನು, ಸಲ್ಫರ್ ಇತ್ಯಾದಿ ಸೇರಿಸಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವೆಲ್ಲ ಸರ್ಕಾರಿ ದರ ನಿಯಂತ್ರಣದಡಿಯಲ್ಲಿ ಬರುವುದಿಲ್ಲ. 08:21:21, 09:24:24 ಇತ್ಯಾದಿಗಳನ್ನು ಬಾಳೆಯಂಥ ಬೆಳೆಗಳಿಗೆ ಹಾಕಿಸಿ ತೋಟ ಹಾಳು ಮಾಡುತ್ತಿದ್ದಾರೆ.

ಅದಕ್ಕೆ ಯೂರಿಯಾ ಸೇರಿಸಬೇಕು ಎಂದು ಹೇಳುವುದೇ ಇಲ್ಲ. ’ಅತ್ಯುತ್ತಮ ಹೊಸ ಗೊಬ್ಬರ’ ಎಂದು ದುಬಾರಿ ಬೆಲೆಗೆ ರೈತರಿಗೆ ಕಟ್ಟುತ್ತಾರೆ. ಇನ್ನು ಮಣ್ಣಿಗೆ ರಸಗೊಬ್ಬರ ಕೊಡುವ ಬದಲಿಗೆ ಎಲ್ಲ ಬೆಳೆಗಳಿಗೂ ಸಂಪೂರ್ಣ ನೀರಿನಲ್ಲಿ ಕರಗುವ (ವಾಟರ್ ಸಾಲಿಬಲ್) ರಸಗೊಬ್ಬರವನ್ನು 3-4 ಪಟ್ಟು ಬೆಲೆಗೆ ಮಾರುತ್ತಾರೆ. ಸರ್ಕಾರದ ದರ ನಿಯಂತ್ರಣ ವ್ಯಾಪ್ತಿಗೆ ಬರದಿರುವುದರಿಂದ ಅಂಗಡಿಯವರಿಗೂ ಭರಪೂರ ಲಾಭ ಸಿಗುತ್ತದೆ. ರೈತ ಬಕರಾ ಆಗುತ್ತಾನೆ.

ಕನಿಷ್ಠ ತರಬೇತಿಯೂ ಇಲ್ಲ

ಹೀಗೆ ನೋಡಿದರೆ ವರ್ಷ ಪೂರ್ತಿ ರೈತ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ರಸಗೊಬ್ಬರದ ಗ್ರೇಡ್ ಗಳು, ಅವುಗಳನ್ನ ಯಾವೆಲ್ಲ ಬೆಳೆಗೆ – ಯಾವೆಲ್ಲ ಹಂತದಲ್ಲಿ ಬಳಸಬೇಕು, ಕೀಟ-ರೋಗ-ಕಲೆನಾಶಕಗಳ ವಿಧ ಮತ್ತು ಬಳಕೆಯಂತ ಮೂಲಭೂತ ಜ್ಞಾನವನ್ನು ಯಾವ ತರಬೇತಿಯಲ್ಲೂ ಕೊಡುತ್ತಿಲ್ಲ. ರೈತರೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.

ದಿನಬೆಳಗಾದರೆ ಸಮಗ್ರ ಕೃಷಿ, ಅಣಬೆ ಬೇಸಾಯದಂತ ತೌಡು ಕುಟ್ಟುವ ತರಬೇತಿಗಳು. 65% ರಸಗೊಬ್ಬರ ಮಾರುವ ಇಫ್ಕೋ ಕಂಪನಿಯ ಕರ್ನಾಟಕದ ಮುಖ್ಯಸ್ಥರನ್ನು ಕೇಳಿದರೂ ಉತ್ತರವಿಲ್ಲ. ಎಲ್ಲ ಕಂಪನಿಗಳೂ ಟಾರ್ಗೆಟ್ ಮಾಡುವುದರಲ್ಲಿ ಬ್ಯುಸಿ. ರೈತರಿಗೆ ಜ್ಞಾನ ಕೊಡುವುದು ಅವರ ಆದ್ಯತೆ ಪಟ್ಟಿಯಲ್ಲಿ ಇಲ್ಲ.
ಈಗ ಹೇಳಿ, ಈ ಕೃಷಿ ರಾಸಾಯನಿಕಗಳ ವಿವೇಚನಾ ರಹಿತ ಬಳಕೆ – ದುರ್ಬಳಕೆಗೆ ಯಾರೆಲ್ಲ ಕಾರಣ, ಯಾರ್ಯಾರ ಪಾಲು ಎಷ್ಟು?

ಕೊನೆಯ ಮಾತು

ನಮಗೆ ಸ್ವರ್ಗ ಕಾಣಬೇಕೆಂದರೆ ನಾವೇ ಹೋಗಬೇಕು. ಇಂದಿನ ಮಾಹಿತಿ ಯುಗದಲ್ಲಿ ಆಸಕ್ತಿ ಇದ್ದರೆ ಪ್ರಾಮಾಣಿಕ ಜ್ಞಾನ ಮೂಲಗಳ ಕೊರತೆ ಇಲ್ಲ. ರೈತರು ತಮ್ಮ ಜೀವನಕ್ಕೆ ನೇರವಾಗಿ ಸಂಬಂಧಿಸಿದ – ಬಾಧಿಸುವ ಕೃಷಿಯ ಮೂಲಭೂತ ಜ್ಞಾನವನ್ನು ಮಾಡಿಕೊಳ್ಳಬೇಕು.

ಕೇವಲ ರೈತಾನುಭವ ಎಂದು ತೌಡು ಕುಟ್ಟುವ ಬದಲಿಗೆ ಕೃಷಿಯ ವೈಜ್ಞಾನಿಕ ಸತ್ಯಗಳನ್ನು ರೈತರಿಗೆ ಅರ್ಥ ಮಾಡಿಸಲು ಹೆಣಗಬೇಕಿದೆ. ತಲುಪಬೇಕಿರುವ ದೂರ ಇನ್ನೂ ಬಹಳಷ್ಟಿದೆ. ರೈತ ಜ್ಞಾನ ಸಂಪಾದಿಸಿಕೊಂಡಾಗ ಮಾತ್ರ ಏಳಿಗೆ ಸಾಧ್ಯ. ಅಲ್ಲಿಯವರೆಗೆ ಎಲ್ಲರೂ ಅವನನ್ನು ದಾರಿ ತಪ್ಪಿಸುತ್ತಿರುತ್ತಾರೆ. ಟೋಪಿ ಹಾಕಿಸಿಕೊಳ್ಳುವವರಿರುವವರೆಗೆ ಹಾಕುವವರು ಇದ್ದೇ ಇರುತ್ತಾರೆ.

ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋJanashakthi Media

Donate Janashakthi Media

Leave a Reply

Your email address will not be published. Required fields are marked *