ಹೊಸ ರೂಪದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭ – ಸಿದ್ದರಾಮಯ್ಯ

ಬೆಂಗಳೂರು: ಶೀಘ್ರವೇ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರೀ-ಲಾಂಚ್ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜೂ. 12ರಂದು ವಿಧಾನಸೌಧದಲ್ಲಿ ಇಂದಿರಾ ಕ್ಯಾಂಟೀನ್ ಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದು, ಮುಚ್ಚಿ ಹೋಗಿರುವ ಕ್ಯಾಂಟೀನ್ ಗಳನ್ನು ಪುನಃ ಆರಂಭಿಸುವುದು ಇತ್ಯಾದಿಗಳನ್ನು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂದಿರಾ ಕ್ಯಾಂಟೀನ್ ಗಳನ್ನು ಪುನರಾರಂಭಿಸುವ ಪ್ರಕ್ರಿಯೆಗಳನ್ನು ಶುರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದಕ್ಕೆ ಮತ್ತೊಮ್ಮೆ ಟೆಂಡರ್ ಕರೆಯಲಾಗುತ್ತದೆ. ಇದಾದ ಬಳಿಕ ಇಂದಿರಾ ಕ್ಯಾಂಟೀನ್ ರೀ ಲಾಂಚ್ ಮಾಡುತ್ತೇವೆ’’ ಎಂದು ಅವರು ಹೇಳಿದರು. ಬೆಂಗಳೂರು ನಗರದಲ್ಲಿ 250 ಇಂದಿರಾ ಕ್ಯಾಂಟೀನ್ ಆರಂಭ ಮಾಡಲಾಗುವುದು. ಪ್ರತಿ ವಾರ್ಡ್ ಗೆ ಒಂದರಂತೆ ಕ್ಯಾಂಟೀನ್ ಶುರು ಮಾಡುವ ಆಲೋಚನೆಯಿದೆ. ರಾಜ್ಯದಲ್ಲಿ ಹೊಸದಾಗಿ ಎಲ್ಲಿಲ್ಲಿ ಇಂದಿರಾ ಕ್ಯಾಂಟೀನ್ ಅಗತ್ಯತೆ ಇದೆ ಅನ್ನುವುದನ್ನು ಪರಿಶೀಲಿಸಿ, ಅದರ ಪಟ್ಟಿಯೊಂದನ್ನು ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೆನು ಬದಲು ಆದರೆ ದರ ಹೆಚ್ಚಳವಿಲ್ಲ: ಇದೇ ವೇಳೆ, ಅಷ್ಟೇ ಅಲ್ಲದೆ ಈಗಿರುವ ಮೆನು ಬದಲಾವಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಮೆನು ಬದಲಾದರೂ ಆಹಾರದ ದರವನ್ನು ಹೆಚ್ಚಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು. “ಇಂದಿರಾ ಕ್ಯಾಂಟೀನ್ ನಲ್ಲಿ ನೀಡಲಾಗುವ ಆಹಾರದ ದರವನ್ನು ಹೆಚ್ಚಿಸುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಕ್ಯಾಂಟೀನ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗಬೇಕು, ರುಚಿ ಇರಬೇಕು ಹಾಗೂ ಕ್ಯಾಂಟೀನ್ ಗಳು ಹಾಗೂ ಶುಚಿಯಾಗಿರಬೇಕು. ಇಷ್ಟನ್ನು ಎಲ್ಲಾ ಕ್ಯಾಂಟೀನ್ ಗಳಲ್ಲಿಯೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ’’ ಎಂದು ಹೇಳಿದರು.

ಇದನ್ನೂ ಓದಿ :ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್ ಜನಕೀಯ, ಅಮ್ಮಾ ಮಾದರಿಯಲ್ಲಿ ಬಲಗೊಳ್ಳಲಿ

ನಿರ್ವಹಣಾ ವೆಚ್ಚದ ಶೇರಿಂಗ್ : ಇದುವರೆಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಗೆ ಆಗುವ ವೆಚ್ಚವನ್ನು ಬೆಂಗಳೂರು ಮಹಾನಗರ ಪಾಲಿಕೆ 70 % ಹಾಗೂ ರಾಜ್ಯ ಸರ್ಕಾರದ ವತಿಯಿಂದ 30 % ಅನುದಾನ ನೀಡಲಾಗುತ್ತಿತ್ತು. ಇನ್ಮುಂದೆ ರಾಜ್ಯ ಸರ್ಕಾರ ಮತ್ತು ಪಾಲಿಕೆಯಿಂದ ತಲಾ 50 % ಶೇರ್ ಇರಲಿದೆ ಎಂದು ತಿಳಿಸಿದರು. ಇನ್ನು, ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಇಂದಿರಾ ಕ್ಯಾಂಟೀನ್ ಗಳ ಖರ್ಚುವೆಚ್ಚದ ಶೇ. 70ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಅಲ್ಲಿನ ಸ್ಥಳೀಯ ಜಿಲ್ಲಾಡಳಿತ ಶೇ. 30ರಷ್ಟು ಖರ್ಚನ್ನು ನಿಭಾಯಿಸಲಿವೆ ಎಂದು ಅವರು ವಿವರಿಸಿದರು.

Donate Janashakthi Media

Leave a Reply

Your email address will not be published. Required fields are marked *