ಭಾರತದಲ್ಲಿ ಕೈಗಾರಿಕಾ ಜಡತೆ ಏಕೆ?

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಭಾರತದ ಅರ್ಥವ್ಯವಸ್ಥೆಯಲ್ಲಿ ಬೆಳವಣಿಗೆಯ ದರ ನವಉದಾರವಾದಿ ಘಟ್ಟದಲ್ಲಿ ಹೆಚ್ಚಿದೆ ಎಂಬ ಪ್ರಚಾರಕ್ಕೆ ವ್ಯತಿರಿಕ್ತವಾಗಿ ವಾಸ್ತವದಲ್ಲಿ, ವಿಶೇಷವಾಗಿ, 2011-12ರಿಂದ 2019-20ರ ಅವಧಿಯಲ್ಲಿ ಇದು ಗಣನೀಯವಾಗಿ ಇಳಿದಿದೆ ಎಂಬುದು ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಕಾಣ ಬರುತ್ತದೆ. ಈ ಜಡತೆಯು ಈಗ ನಮ್ಮ ಅರ್ಥವ್ಯವಸ್ಥೆಯ ಒಂದು ಸಾಮಾನ್ಯ ಸ್ಥಿತಿಯೇ ಆಗಿಬಿಟ್ಟಿದೆ ಎಂದು ತೋರುತ್ತದೆ. ಏಕೆಂದರೆ, ಕೊವಿಡ್ ಮೊದಲಿದ್ದ ಜಡತೆಯೇ ಕೊವಿಡ್ ನಂತರವೂ ಮುಂದುವರಿಯುತ್ತಿದೆ ಮತ್ತು ತೀವ್ರಗೊಂಡಿದೆ ಕೂಡ. ಆದ್ದರಿಂದ, ಭಾರತದ ಕೈಗಾರಿಕಾ ಅರ್ಥವ್ಯವಸ್ಥೆಯು ಏಕೆ ಜಡವಾಗಿದೆ ಎಂಬ ಪ್ರಶ್ನೆ ಏಳುತ್ತದೆ.

ಅಕ್ಟೋಬರ್ 2021ಕ್ಕೆ ಹೋಲಿಸಿದರೆ, ಅಕ್ಟೋಬರ್ 2022ರಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಶೇ. 4ರಷ್ಟು ಇಳಿಕೆಯಾಗಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗಳು ಸಾಕಷ್ಟು ನಡೆದಿವೆ. ಈ ಚರ್ಚೆಗಳ ಅವಶ್ಯಕತೆಯೂ ಇತ್ತು. ಏಕೆಂದರೆ, ಈ ಕುಸಿತವನ್ನು ವಿವರಿಸಲು ಕೋವಿಡ್-ಪ್ರೇರಿತ ಲಾಕ್‌ಡೌನ್ ಆಗಲಿ ಅಥವಾ ಲಾಕ್‌ಡೌನ್‌ನ ಉಳಿಕೆಯ ದೀರ್ಘಕಾಲೀನ ಪರಿಣಾಮಗಳಾಗಲಿ ಕಾರಣವೆಂದು ಹೇಳಲು ಬರುವುದಿಲ್ಲ. ಹೇಳಿ ಕೇಳಿ ಕೋವಿಡ್ ಒಂದು ಆಗಿ ಹೋದ ವಿಷಯ. ಹಾಗಾಗಿ, ಅಕ್ಟೋಬರ್‌ನ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಕಂಡು ಬಂದ ತೀಕ್ಷ್ಣ ಕುಸಿತವು ಭಾರತದ ಅರ್ಥವ್ಯವಸ್ಥೆಯಲ್ಲಿ ಒಂದು ಒಳಬೇನೆ ಬೇರೂರಿದೆ ಎಂಬುದನ್ನು ಪ್ರಧಾನವಾಗಿ ಸೂಚಿಸುತ್ತದೆ.

ಕೈಗಾರಿಕಾ ಉತ್ಪಾದನೆಯ ತತ್‌ಕ್ಷಣದ ಕುಸಿತದ ಬಗ್ಗೆ ಗಮನ ಹರಿಸುವುದೇನೊ ಸರಿ. ಆದರೆ, ಭಾರತದ ಕೈಗಾರಿಕಾ ಅರ್ಥವ್ಯವಸ್ಥೆಯಲ್ಲಿ ಈಗಾಗಲೆ ನೆಲೆಸಿರುವ ಜಡತೆಯ ಬಗ್ಗೆ ಸಾಕಷ್ಟು ಗಮನ ಹರಿಸಿಯೇ ಇಲ್ಲ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಮೂಲ ವರ್ಷವನ್ನು ಸರ್ಕಾರವು ಕಾಲಕಾಲಕ್ಕೆ ಬದಲಾಯಿಸುತ್ತಿದೆ. ಹಾಗಾಗಿ, ಈ ಸೂಚ್ಯಂಕಗಳನ್ನು ಆಧರಿಸಿ ಮಾಡುವ ಹೋಲಿಕೆಗಳು ಅಸಮರ್ಪಕವಾಗುತ್ತವೆ. ಆದ್ದರಿಂದ, ನಾವು 2011-12 ಮೂಲ ವರ್ಷಾಧಾರಿತ ಸೂಚ್ಯಂಕವನ್ನೇ ಪರಿಗಣನೆಗೆ ತೆಗೆದುಕೊಳ್ಳೋಣ. ಈ ಸೂಚ್ಯಂಕವು ಇತ್ತೀಚಿನದು ಮತ್ತು ಅದರ ಪ್ರಕಾರವಾಗಿ ಕೈಗಾರಿಕಾ ಉತ್ಪಾದನೆ ಹೇಗಿದೆ ಎಂಬುದನ್ನು ಪರಿಶೀಲಿಸೋಣ.

ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ

ಒಂದು ವೇಳೆ ನಾವು ಪೂರ್ಣವಾಗಿ ಸಾಂಕ್ರಾಮಿಕದ ಹಿಂದಿನ ಅವಧಿಯ ಮೇಲೆ ಗಮನ ಹರಿಸಿದರೂ ಸಹ, 2011-12 ಮತ್ತು 2019-20ರ ನಡುವೆ ಕೈಗಾರಿಕಾ ಉತ್ಪಾದನೆಯಲ್ಲಿನ ಒಟ್ಟು ಹೆಚ್ಚಳವು ಕೇವಲ ಶೇ. 29ರಷ್ಟಿತ್ತು ಎಂಬುದನ್ನು ಅಂದರೆ ಸರಾಸರಿ ವಾರ್ಷಿಕ ಶೇ. 3.2ರಷ್ಟು ಹೆಚ್ಚಳವನ್ನು ಕಾಣಬಹುದು. ಇದು ಅತ್ಯಂತ ಕಡಿಮೆ ಎಂಬುದು ಮಾತ್ರವಲ್ಲದೆ ಅದನ್ನು ಹಿಂದಿನ ಯಾವುದೇ ಅವಧಿಗೆ ಹೋಲಿಸಿದರೂ ಸಹ ಆ ಅವಧಿಯ ಸರಾಸರಿ ವಾರ್ಷಿಕ ಕೈಗಾರಿಕಾ ಬೆಳವಣಿಗೆಯ ದರಕ್ಕಿಂತಲೂ ಕಡಿಮೆ ಇದೆ ಎಂಬುದನ್ನು ಗಮನಿಸಬಹುದು. 1951 ಮತ್ತು 1965ರ ನಡುವಿನ ನಿಯಂತ್ರಣಗಳ ನೀತಿಯ ವರ್ಷಗಳಲ್ಲಿ, ದೇಶದ ಅರ್ಥವ್ಯವಸ್ಥೆಯನ್ನು ಕೆಳ ಮಟ್ಟದ ಜಿಡಿಪಿ ಬೆಳವಣಿಗೆಗೆ ತಳುಕು ಹಾಕಲಾಗಿತ್ತು ಎಂಬುದಾಗಿ ನವ-ಉದಾರವಾದಿ ಅರ್ಥಶಾಸ್ತ್ರಜ್ಞರು ಹೀನಾಯವಾಗಿ ಅಪಹಾಸ್ಯ ಮಾಡುವ (“ಬೆಳವಣಿಗೆಯ ದರ”ದ ಬದಲಾಗದ ಗುಣದಿಂದಾಗಿ ಆಗಿನ ಬೆಳವಣಿಗೆಯ ದರವನ್ನು ಕೆಲವೊಮ್ಮೆ “ಹಿಂದೂ ದರ” ಎಂದು ಕುಚೋದ್ಯದಿಂದ ಕರೆಯಲಾಗುತ್ತಿದ್ದ) ವರ್ಷಗಳಲ್ಲಿ, 1956 ಮೂಲ ವರ್ಷಾಧಾರಿತ ಸೂಚ್ಯಂಕದ ಪ್ರಕಾರ, ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯ ದರವು ವಾರ್ಷಿಕ ಶೇ. 7ಕ್ಕಿಂತಲೂ ಹೆಚ್ಚಿಗೆ ಇತ್ತು. 2004-05 ಮೂಲ ವರ್ಷಾಧಾರಿತ ಸೂಚ್ಯಂಕವನ್ನು ನಾವು ಪರಿಗಣನೆಗೆ ತೆಗೆದುಕೊಂಡು ಲೆಕ್ಕಹಾಕಿದರೂ ಸಹ, 2004-05 ರಿಂದ ಹಿಡಿದು 2014-15ರ ವರೆಗಿನ ಒಂದು ದಶಕದ ಕೈಗಾರಿಕಾ ಉತ್ಪಾದನೆಯ ಸರಾಸರಿ ವಾರ್ಷಿಕ ಬೆಳವಣಿಗೆ ದರವು ಶೇ. 5.87ರಷ್ಟಿತ್ತು.

ನವಉದಾರವಾದಿ ಅವಧಿಯಲ್ಲೇ ನಿಧಾನಗತಿ

ಸಂಕ್ಷಿಪ್ತವಾಗಿ ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ಬೆಳವಣಿಗೆಯ ದರವು ತೀವ್ರವಾಗಿ ನಿಧಾನಗೊಂಡಿದೆ. ಇದು ನವ-ಉದಾರವಾದಿ ವ್ಯವಸ್ಥೆಯು ಅರ್ಥವ್ಯವಸ್ಥೆಯ ಬೆಳವಣಿಗೆಯ ದರವನ್ನು ವೇಗಗೊಳಿಸಿದೆ ಎಂಬುದಾಗಿ ನವ-ಉದಾರವಾದಿ ಅರ್ಥಶಾಸ್ತ್ರಜ್ಞರು ನಿರಂತರವಾಗಿ ಬಿಂಬಿಸುತ್ತಿರುವುದಕ್ಕೆ ವ್ಯತಿರಿಕ್ತವಾಗಿದೆ. ಒಟ್ಟಾರೆಯಾಗಿ ನವ-ಉದಾರವಾದಿ ಅವಧಿಯಲ್ಲಿ, ಅದರ ಹಿಂದಿನ ಸ್ವಾತಂತ್ರ‍್ಯಾನಂತರದ ವರ್ಷಗಳ ಸರಾಸರಿಗೆ ಹೋಲಿಸಿದರೆ, ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಬೆಳವಣಿಗೆಯ ದರವು ನಿಧಾನಗೊಂಡಿದೆ. ಅದಕ್ಕಿಂತಲೂ ಮಿಗಿಲಾಗಿ, ನವ-ಉದಾರವಾದಿ ಅವಧಿಯಲ್ಲೇ ಇತ್ತೀಚಿನ ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯನ್ನು ನಾವು ಕಾಣುತ್ತೇವೆ. ಅದೂ ಅಲ್ಲದೆ, ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಸಣ್ಣ ಕೈಗಾರಿಕಾ ಘಟಕಗಳಿಗೆ ಮತ್ತು ಕಿರು ಉತ್ಪಾದನಾ ಘಟಕಗಳಿಗೆ ಕೊಟ್ಟಿರುವ ಪ್ರಾತಿನಿಧ್ಯವು ಅಸಮರ್ಪಕವಾಗಿದೆ. ನವ-ಉದಾರವಾದಿ ನೀತಿಯ ಭಾಗವಾಗಿ ಸರ್ಕಾರವು ಈ ವಲಯಕ್ಕೆ ಒದಗಿಸುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಂಡದ್ದು ಮಾತ್ರವಲ್ಲದೆ, ನೋಟು ರದ್ದತಿ ಮಾಡಿದ ಮತ್ತು ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿದ ಮೋದಿ ಸರ್ಕಾರದ ನಿರ್ದಿಷ್ಟ ಕೃತ್ಯಗಳ ಕಾರಣದಿಂದಾಗಿ ಈ ಘಟಕಗಳು ಇತ್ತೀಚಿನ ಅವಧಿಯಲ್ಲಿ ಎದುರಿಸುತ್ತಿರುವ ತೀವ್ರ ಬಿಕ್ಕಟ್ಟಿನ ಅಂಶವನ್ನು ಪರಿಗಣಿಸಿದರೆ, ಔದ್ಯಮಿಕ ಉತ್ಪಾದನೆಯ ವಾಸ್ತವಿಕ ನಿಧಾನಗತಿಯು ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ತೋರಿಸುವುದಕ್ಕಿಂತಲೂ ಹೆಚ್ಚೇ ಇದ್ದಿರಬೇಕು ಎನಿಸುತ್ತದೆ.

ಇದನ್ನು ಓದಿ: ದಾರಿಗಾಣದಾಗಿರುವ ನವ-ಉದಾರವಾದದ ಆಳ್ವಿಕೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತಿದೆ ದುಡಿಯುವ ವರ್ಗದ ಪ್ರತಿರೋಧ

ಇಂತಹ ಒಂದು ಸನ್ನಿವೇಶದಲ್ಲಿ ಕೋವಿಡ್ ನಂತರದ ಸತ್ವಹೀನ-ಚೇತರಿಕೆಯು ಪ್ರಾಮುಖ್ಯತೆ ಪಡೆಯುತ್ತದೆ. ಸಾಮಾನ್ಯವಾಗಿ, ಸರಕುಗಳ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಬೇಡಿಕೆಯು ಮುಂದೂಡಲ್ಪಡುತ್ತದೆ. ಈ ಅಡಚಣೆಗಳನ್ನು ನಿವಾರಿಸಿದಾಗ ವಾಸ್ತವವಾಗಿ ಒಂದು ಭರಾಟೆಯು ಅದನ್ನು ಅನುಸರಿಸುತ್ತದೆ, ಏಕೆಂದರೆ, ಅದುಮಿಟ್ಟ ಬೇಡಿಕೆಯ ಕೆಲ ಅಂಶವು ಆನಂತರದಲ್ಲಿ ಉಂಟಾಗುವ ಬೇಡಿಕೆಯ ಜೊತೆಗೆ ಕೂಡಿಕೊಳ್ಳುತ್ತದೆ. ಆದ್ದರಿಂದಲೇ ಸಾಮಾನ್ಯವಾಗಿ ಯುದ್ಧಾನಂತರ-ತಕ್ಷಣದ ಅವಧಿಯಲ್ಲಿ ಒಂದು ಭರಾಟೆಯು ಯುದ್ಧ ಕಾಲದ ವರ್ಷಗಳನ್ನು ಅನುಸರಿಸುತ್ತದೆ. ಇದನ್ನು “ಪರಿಣಾಮದ ಭರಾಟೆ” ಎಂದು ಕರೆಯಲಾಗಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಉಂಟಾದ ಅಡಚಣೆಯ ಹೊರತಾಗಿಯೂ, ಕೋವಿಡ್ ನಂತರದ ಅವಧಿಯು ಅಂತಹ ಯಾವುದೇ ಭರಾಟೆಯನ್ನು ಕಾಣಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಹಿಂದಿನ ಜಡತೆಯೇ ಮುಂದುವರಿಯುತ್ತಿದೆ ಮತ್ತು ತೀವ್ರಗೊಂಡಿದೆ ಕೂಡ. ಈ ಜಡತೆಯು ಈಗ ಅರ್ಥವ್ಯವಸ್ಥೆಯ ಒಂದು ಸಾಮಾನ್ಯ ಸ್ಥಿತಿಯೇ ಆಗಿಬಿಟ್ಟಿದೆ ಎಂದು ತೋರುತ್ತದೆ. ಆದ್ದರಿಂದ, ಭಾರತದ ಕೈಗಾರಿಕಾ ಅರ್ಥವ್ಯವಸ್ಥೆಯು ಏಕೆ ಜಡವಾಗಿದೆ ಎಂಬ ಪ್ರಶ್ನೆ ಏಳುತ್ತದೆ.

ಆದಾಯಗಳ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮತೆ

ಇಲ್ಲಿ ಮಹತ್ವದ ಎರಡು ಅಂಶಗಳಿವೆ. ಮೊದಲನೆಯದು, ಆದಾಯಗಳ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮತೆಯಿಂದಾಗಿ ಕೈಗಾರಿಕಾ ಸರಕುಗಳ ಮೇಲಿನ ಬೇಡಿಕೆಯು ಕ್ರಮೇಣ ಕುಗ್ಗುತ್ತಲೇ ಹೋಗುತ್ತದೆ. ನವ-ಉದಾರವಾದದ ಅಡಿಯಲ್ಲಿ ಸಂಭವಿಸುತ್ತಿರುವ ಆದಾಯಗಳ ಅಸಮತೆಯ ಭಾರಿ ಹೆಚ್ಚಳದಿಂದಾಗಿ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯು ವಾಸ್ತವವಾಗಿ ಕೆಳ ಮಟ್ಟದಲ್ಲಿದೆ ಮಾತ್ರವಲ್ಲ, ಹೋಲಿಸಿ ನೋಡಿದಾಗ ಕುಗ್ಗಿರುವುದೇ ಕಾಣುತ್ತದೆ. 1982ರಲ್ಲಿ ಶೇ.6ಕ್ಕೆ ಇಳಿದಿದ್ದ ಶೇ.ಒಂದರಷ್ಟು ಜನಸಂಖ್ಯೆಯು ರಾಷ್ಟ್ರೀಯ ಆದಾಯದಲ್ಲಿ ಹೊಂದಿದ್ದ ಪಾಲು 2013-14ರ ವೇಳೆಗೆ ಶೇ.22ಕ್ಕೆ ಏರಿಕೆಯಾಗಿತ್ತು ಎಂಬುದನ್ನು ಪತ್ತೆಹಚ್ಚಿದ್ದ ಪಿಕೆಟ್ಟಿ ಮತ್ತು ಚಾನ್ಸೆಲ್ ತಂಡವು ಈ ಪ್ರವೃತ್ತಿಯು ವೇಗವಾಗಿ ಬೆಳೆಯುತ್ತಿದೆ ಎಂಬ ಅಂಶವನ್ನು ಒತ್ತಿಹೇಳಿದೆ. 2014-15ರ ನಂತರವೂ ಜನರ ಕೊಳ್ಳುವ ಶಕ್ತಿ ಕುಗ್ಗುತ್ತಿರುವ ಪ್ರವೃತ್ತಿಯು ಮುಂದುವರಿದಿದೆ ಎಂಬುದು ನಿಸ್ಸಂಶಯವೇ. ವಾಸ್ತವವಾಗಿ, ಪತ್ರಿಕೆಗಳಿಗೆ ಸೋರಿಕೆಯಾದ 2017-18ನೇ ಸಾಲಿನ ಎನ್‌ಎಸ್‌ಎಸ್(ರಾಷ್ಟ್ರೀಯ ಸ್ಯಾಂಪಲ್ ಸರ್ವೆ)ನ ಬಳಕೆಯ ವೆಚ್ಚದ ಪಂಚವಾರ್ಷಿಕ ದೊಡ್ಡ ಮಾದರಿ ಸಮೀಕ್ಷೆಯ ವರದಿಯ ಪ್ರಕಾರ (ಸಮೀಕ್ಷೆಯ ಫಲಿತಾಂಶಗಳನ್ನು ಸರ್ಕಾರವೇ ಬಚ್ಚಿಟ್ಟಿತ್ತು), 2011-12 ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ ತಲಾ ನೈಜ ವೆಚ್ಚವು ಶೇ. 9ರಷ್ಟು ಇಳಿಕೆಯಾಗಿತ್ತು ಎಂಬುದು ಕಂಡುಬಂದಿತ್ತು. ಗ್ರಾಮೀಣ ಮೇಲ್ವರ್ಗದ ಗ್ರಾಹಕರ (ಅಂದರೆ, ಭೂಮಾಲೀಕರ ಮತ್ತು ಗ್ರಾಮೀಣ ಬಂಡವಾಳಗಾರರ) ಆದಾಯಗಳು ಕುಗ್ಗಿರುವ ಸಾಧ್ಯತೆ ಇಲ್ಲವಾದ್ದರಿಂದ, ದುಡಿಯುವ ಜನರ ತಲಾ ನೈಜ ವೆಚ್ಚದ ಈ ಕುಸಿತವು ಶೇ. 9ಕ್ಕಿಂತಲೂ ಹೆಚ್ಚಿಗೆ ಇದ್ದಿರಲೇಬೇಕು. ಗ್ರಾಮೀಣ ಭಾರತದ ನೈಜ ವೆಚ್ಚದ ಈ ಪರಿಯ ಕುಸಿತವು ಕೈಗಾರಿಕಾ ಸರಕುಗಳ ಬೇಡಿಕೆಯ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರಿಯೇ ತೀರುತ್ತದೆ.

ನವ-ಉದಾರವಾದದ ಒಂದು ಪ್ರಮುಖ ಲಕ್ಷಣವೆಂದರೆ ನಗರ ಪ್ರದೇಶದ ದುಡಿಯುವ ಜನರ ಆದಾಯವು ಅವರ ಗ್ರಾಮೀಣ ಸಹಚರರ ಆದಾಯದೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಗರ ಪ್ರದೇಶದ ಹಾಗೂ ಗ್ರಾಮೀಣದ ದುಡಿಯುವ ಜನರ ಆದಾಯಗಳು ಸಮಕಾಲಿಕವಾಗಿ ಚಲಿಸುತ್ತವೆ. ಏಕೆಂದರೆ, ಗ್ರಾಮೀಣ ಸಂಕಷ್ಟದ ಸಮಯದಲ್ಲಿ ಬಹಳ ಮಂದಿ ನಗರಗಳಿಗೆ ವಲಸೆ ಹೋಗುತ್ತಾರೆ. ಈ ವಲಸೆಯು ನಂತರದ ದಿನಗಳಲ್ಲಿ ಕಾರ್ಮಿಕರ ಮೀಸಲು ಪಡೆಯ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ನಗರಗಳ ದುಡಿಯುವ ಜನರ ಆದಾಯವನ್ನು ಕುಗ್ಗಿಸುತ್ತದೆ. ಆದ್ದರಿಂದ ಗ್ರಾಮೀಣ ಕಾರ್ಮಿಕರ ಕೊಳ್ಳುವ ಶಕ್ತಿಯ ಕುಸಿತದೊಂದಿಗೆ ನಗರ ಕಾರ್ಮಿಕರ ಕೊಳ್ಳುವ ಶಕ್ತಿಯ ಕುಸಿತವೂ ಸೇರಿಕೊಂಡಿರಲೇಬೇಕು. ಹಾಗಾಗಿ, ಒಟ್ಟಾರೆಯಾಗಿ ದುಡಿಯುವ ಜನರಿಂದ ಹೊಮ್ಮುವ ಕೈಗಾರಿಕಾ ಸರಕುಗಳ ಮೇಲಿನ ಬೇಡಿಕೆಯು ಈ ಕಾರಣದಿಂದಾಗಿ ಕುಗ್ಗಿರಲೇಬೇಕು.

ಇದನ್ನು ಓದಿ: ಅರ್ಥಶಾಸ್ತ್ರವನ್ನು ಅಪ್ರಾಮಾಣಿಕತೆಯ ಮಟ್ಟಕ್ಕೆ ಇಳಿಸಿರುವ ನವ-ಉದಾರವಾದ

ಬೆಳೆಯುತ್ತಿರುವ ವರಮಾನಗಳ ಅಸಮತೆಗೆ ಈ ಹಿಂದೆ ಪ್ರಸ್ತಾಪಿಸಿದ ಸಣ್ಣ ಪ್ರಮಾಣದ ಮತ್ತು ಕಿರು ಉತ್ಪಾದನಾ ವಲಯಗಳ ಕತ್ತು ಹಿಸುಕುತ್ತಿರುವುದೂ ತನ್ನ ಕೊಡುಗೆಯನ್ನು ಕೊಟ್ಟೇ ಇರುತ್ತದೆ. ಈ ಕಾರಣದಿಂದಲೂ ಬೇಡಿಕೆ ಕುಗ್ಗುತ್ತದೆ. ನವ-ಉದಾರವಾದಿ ಆಡಳಿತದ ಸಾಮಾನ್ಯ ಕಾರ್ಯಾಚರಣೆಯಿಂದಾಗಿ ಮತ್ತು ಅದರ ಮೇಲೆ ಹೇರಲ್ಪಟ್ಟ ಪ್ರಸ್ತುತ ಸರ್ಕಾರದ ನಿರ್ದಿಷ್ಟ ಅವಿವೇಕತನಗಳ ಪರಿಣಾಮವಾಗಿ ಕೈಗಾರಿಕೆಗಳು ಜಡತೆಯ ಪರಿಸ್ಥಿತಿಯಲ್ಲಿವೆ. ಕತ್ತು ಹಿಸುಕಲ್ಪಟ್ಟ ವಲಯಗಳ ಉತ್ಪನ್ನಗಳಿಗೆ ಬದಲಾಗಿ ದೊಡ್ಡ ಪ್ರಮಾಣದ ಉತ್ಪಾದನಾ ವಲಯದ ಉತ್ಪನ್ನಗಳನ್ನು ಖರೀದಿಸುವಂತೆ ನವ-ಉದಾರವಾದವು ಒತ್ತಡ ಹಾಕುತ್ತದೆ. ಆದರೆ, ಈ ಬದಲಿಕೆಯ ಪ್ರಕ್ರಿಯೆಯೇ ಬೇಡಿಕೆಯನ್ನು ನಿರ್ಬಂದಿಸಲು ಕಾರಣವಾಗುತ್ತದೆ. ಏಕೆಂದರೆ, ಬದಲಿಸಿದ ವಲಯಗಳ ಪ್ರತಿ ಯೂನಿಟ್ ಉತ್ಪತ್ತಿಯು (ಅದರಿಂದಾಗಿ ಆದಾಯದ ಪ್ರತಿ ಯೂನಿಟ್) ಹೊಮ್ಮಿಸುವ ಬಳಕೆಯು, ಬದಲಿ ವಲಯದ ಉತ್ಪತ್ತಿಗಳಿಗೆ ಹೋಲಿಸಿದರೆ, ಹೆಚ್ಚಿಗೆ ಇರುತ್ತದೆ.

ಬೇರುಗಳು ನವಉದಾರವಾದಿ ಆಡಳಿತದ ಸ್ವರೂಪದಲ್ಲೇ

ಅದೇನೊ ಸರಿಯೇ, ಆದರೆ, ಆದಾಯಗಳ ಅಸಮ-ಹಂಚಿಕೆಯ ಫಲಾನುಭವಿಗಳಾದ ಮಿಗುತಾಯ ಗಳಿಸುವ ಮಂದಿಯಿಂದ ಬರುವ ಕೈಗಾರಿಕಾ ಸರಕುಗಳ ಮೇಲಿನ ಬೇಡಿಕೆಯ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಲಾಗುತ್ತದೆ. ನವ-ಉದಾರವಾದದ ಆರಂಭಿಕ ವರ್ಷಗಳಲ್ಲಿ ಕೈಗಾರಿಕಾ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ, ಅಲ್ಲಿಯವರೆಗೂ ದೇಶೀಯವಾಗಿ ಲಭ್ಯವಿಲ್ಲದ ಒಂದು ಇಡೀ ಶ್ರೇಣಿಯ ಕೈಗಾರಿಕಾ ಸರಕುಗಳಿಗಾಗಿ ಮಿಗುತಾಯ ಗಳಿಕೆಯ ಮಂದಿಯ ಅದುಮಿಟ್ಟ ಬೇಡಿಕೆಯು ಒಂದು ದೊಡ್ಡ ಅಂಶವಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಸುಲಭವಾಗಿ ಉತ್ಪಾದಿಸಬಹುದಾದ ಸರಕುಗಳನ್ನು ದೇಶೀಯವಾಗಿ ಉತ್ಪಾದಿಸಲು ಆರಂಭಿಸಿದ ನಂತರ, ಅಗ್ಗದ ಆಮದುಗಳ ಸುಲಭ ಲಭ್ಯತೆಯ ಅಂಶವೇ ಆಮದು ಬದಲಿಕೆಯ ಉತ್ಪನ್ನಗಳಿಗೆ ಒಂದು ಅಡ್ಡಿಯ ಅಂಶವಾಗಿ ಪರಿಣಮಿಸುತ್ತದೆ. ಆ ಘಟ್ಟದ ನಂತರ ಮಿಗುತಾಯದ ಹೆಚ್ಚಳದಿಂದಾಗಿ ಸೃಷ್ಟಿಯಾದ ಬೇಡಿಕೆಯು ಆಮದುಗಳಿಗೆ ಸೋರಿಕೆಯಾಗುತ್ತದೆ. ಈ ವಿದ್ಯಮಾನವು ಇದೇ ರೀತಿಯಲ್ಲೇ ಘಟಿಸುತ್ತಿದೆ ಎಂದು ತೋರುತ್ತದೆ: ಕೈಗಾರಿಕಾ ಉತ್ಪಾದನೆಯನ್ನು ವಲಯಗಳಾಗಿ ವಿಭಜಿಸಿದಾಗ, ಕಡಿಮೆ ಬೆಳವಣಿಗೆಯನ್ನು ತೋರಿಸುವ ಎರಡು ವಲಯಗಳೆಂದರೆ ಬಂಡವಾಳ ಸರಕುಗಳು ಮತ್ತು ಗೃಹ ಬಾಳಿಕೆಯ ವಸ್ತುಗಳು. ಉದಾಹರಣೆಗೆ, ಅಕ್ಟೋಬರ್ 2022ರಲ್ಲಿ ಗೃಹ ಬಾಳಿಕೆಯ ವಸ್ತುಗಳ ಸೂಚ್ಯಂಕವು 2011-12ರ ಸರಾಸರಿಗಿಂತಲೂ ಕೆಳ ಮಟ್ಟದಲ್ಲಿದ್ದ ಮತ್ತು ಬಂಡವಾಳ ಸರಕುಗಳ ಸೂಚ್ಯಂಕವು ಸ್ವಲ್ಪ ಹೆಚ್ಚಿನ ಮಟ್ಟದಲ್ಲಿದ್ದ ಅಂಶವು ಗಮನಾರ್ಹವಾಗಿದೆ. ಈ ಎರಡೂ ಸಂದರ್ಭಗಳಲ್ಲೂ ಕೆಳ ಮಟ್ಟದ ಬೆಳವಣಿಗೆಗೆ ಸ್ಪಷ್ಟವಾದ ಕಾರಣವೆಂದರೆ ಆಮದುಗಳೇ. ಬಂಡವಾಳ ಸರಕುಗಳು ಮತ್ತು ಗೃಹ ಬಾಳಿಕೆ ವಸ್ತುಗಳ ವಲಯದಲ್ಲಿ ಆಮದುಗಳು ದೇಶೀಯ ಉತ್ಪಾದನೆಯ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿವೆ.

ಕೈಗಾರಿಕಾ ಜಡತೆಯ ಬೇರುಗಳು ನವ-ಉದಾರವಾದಿ ಆಡಳಿತದ ಸ್ವರೂಪದಲ್ಲೇ ಇವೆ: ಕೊಳ್ಳುವ ಶಕ್ತಿಯ ಕೊರತೆಯನ್ನು ದುಡಿಯುವ ಜನರು ಹೆಚ್ಚು ಅನುಭವಿಸುತ್ತಾರೆ. ಆದರೆ ವೃದ್ಧಿಯಾಗುತ್ತಿರುವ ಕೊಳ್ಳುವ ಶಕ್ತಿಯನ್ನು ಹೊಂದಿರುವ ಮಿಗುತಾಯ ಗಳಿಕೆಯ ಮಂದಿಯು ತಮ್ಮ ವರಮಾನದ ಒಂದು ಭಾಗವನ್ನು ಮಾತ್ರ ಖರ್ಚು ಮಾಡುತ್ತಾರೆ ಮತ್ತು ಅಂತಹ ಖರ್ಚುಗಳಲ್ಲೂ ಒಂದು ಅಧಿಕ ಪ್ರಮಾಣವನ್ನು ಆಮದು ಸರಕುಗಳ ಮೇಲೆ ಮಾಡುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆದಾಯ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮತೆಯಿಂದ ಉಂಟಾಗುವ ಅತಿಯಾದ ಉತ್ಪಾದನೆಯ ಪ್ರವೃತ್ತಿಯ ಜೊತೆಗೆ, ಮಿಗುತಾಯ ಗಳಿಸುವ ಮಂದಿಯು ಗೃಹ ಬಾಳಿಕೆ ವಸ್ತುಗಳನ್ನು ಮತ್ತು ಬಂಡವಾಳ ಸರಕುಗಳನ್ನು ಆಮದು ಮಾಡಿಕೊಳ್ಳುವ ಪ್ರವೃತ್ತಿಯು ಹೆಚ್ಚುತ್ತಿರುವುದರಿಂದ ಉಂಟಾಗುವ ಒಂದು ಹೆಚ್ಚುವರಿ ಅಂಶವೂ ಸೇರಿಕೊಳ್ಳುತ್ತದೆ.

ಇದನ್ನು ಓದಿ: ಹಣದುಬ್ಬರ ನಿಯಂತ್ರಣಕ್ಕೆ ದುಡಿಮೆಗಾರರನ್ನೇ ಬಲಿ ಮಾಡುವುದೇಕೆ?

ಹೆಚ್ಚುತ್ತಿರುವ ಕೈಗಾರಿಕಾ ಜಡತೆಯ ಪ್ರವೃತ್ತಿಯನ್ನು ಹತ್ತಿಕ್ಕಲು ಈಗಿರುವ ಸರ್ಕಾರವು ಕೈಗೊಂಡಿದೆ ಎಂದು ಹೇಳಬಹುದಾದ ಮಧ್ಯಪ್ರವೇಶದ ಒಂದೇ ಒಂದು ಕ್ರಮವೆಂದರೆ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಖಾಸಗಿ ಸಂಸ್ಥೆಗಳಿಗೆ ಬೇಕಾಗುವ ಸಾಲಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಏರ್ಪಡಿಸುವ ಮೂಲಕ ಹೆಚ್ಚಿನ ಖಾಸಗಿ ವೆಚ್ಚವನ್ನು ಉತ್ತೇಜಿಸಿದೆ ಎಂಬುದು. ಈ ಕ್ರಮವು ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಬಯಕೆಯಿಂದ ಪ್ರೇರಿತವಾಗಿದೆಯೇ ಅಥವಾ ಸಂಪೂರ್ಣವಾಗಿ ಬಂಟ ಬಂಡವಾಳಶಾಹಿಗಳಿಂದ (ಸ್ಪಷ್ಟ ರೀತಿಯಲ್ಲಿ) ಪ್ರೇರಿತವಾಗಿದೆಯೇ ಎಂಬುದು ಸಂದೇಹಾಸ್ಪದವೇ ಸರಿ. ಈ ಮಧ್ಯಪ್ರವೇಶವು ಶೋಚನೀಯವೆನಿಸುವಷ್ಟು ಅಸಮರ್ಪಕವಾಗಿದೆ, ಆದರೆ ಇದು ಸಾರ್ವಜನಿಕ ವಲಯದ ಬ್ಯಾಂಕುಗಳು ಹೊಂದಿರುವ ಹೆಚ್ಚಿನ ಅಪಾಯಗಳಿಗೆ ಈಡಾಗುವ ಸ್ವತ್ತುಗಳ ಪ್ರಮಾಣವನ್ನು ಅಪಾರವಾಗಿ ಹೆಚ್ಚಿಸಿದೆ. ಮೂಲಸೌಕರ್ಯ ಯೋಜನೆಗಳು ಫಲ ನೀಡಲು ಒಂದು ಅಸಾಧಾರಣ ದೀರ್ಘಾವದಿ ಬೇಕಾಗುತ್ತದೆ ಮತ್ತು ಲಾಭವೂ ಇಲ್ಲದ ಮತ್ತು ನಷ್ಟವೂ ಇಲ್ಲದ ಸಮಸ್ಥಿತಿಯನ್ನು ತಲುಪಲು ಕೂಡ ಬಹಳ ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಈ ಮೂಲಸೌಕರ್ಯ ಯೋಜನೆಗಳಿಗೆ ದೀರ್ಘಾವಧಿಯ ಸಾಲಗಳನ್ನು ಒದಗಿಸುವ ಜವಾಬ್ದಾರಿಯನ್ನು ವಿಶೇಷ ಪರಿಣಿತಿ ಹೊಂದಿದ ಹಣಕಾಸು ಸಂಸ್ಥೆಗಳು ನಿರ್ವಹಿಸಬೇಕಾಗುತ್ತದೆ. ಆದರೆ, ಸಾರ್ವಜನಿಕರ ಠೇವಣಿಗಳ ಮೂಲಕ ತಮ್ಮ ಸಂಪನ್ಮೂಲಗಳನ್ನು ಒದಗಿಸಿಕೊಳ್ಳುವ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮೂಲಸೌಕರ್ಯಗಳಿಗಾಗಿ ಹಣ ಒದಗಿಸುವ ಜವಾಬ್ದಾರಿಯನ್ನು ಹೊರಿಸುವ ಮೂಲಕ, ಮೋದಿ ಸರ್ಕಾರವು ಬ್ಯಾಂಕುಗಳನ್ನು ಗಂಭೀರ ಆರ್ಥಿಕ ಒತ್ತಡಗಳಿಗೆ ಸಿಲುಕಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *