– ಜಿ.ಎಸ್.ಮಣಿ
ಒಬ್ಬ ಹಿರಿಯ ರೈಲು ಅಧಿಕಾರಿ ಹೇಳಿದ್ದು “ ಈ ಅಫಘಾತ ನೂರಕ್ಕೆ ನೂರರಷ್ಟು ರೈಲ್ವೇಯ ಸಿಗ್ನಲ್ ವ್ಯವಸ್ಥೆಯ ಖಾಸಗೀಕರಣದಿಂದಾಗಿಯೇ ಆಗಿರುವುದು. ನನ್ನ ಅನುಭವದ ಪ್ರಕಾರ ಈ ವ್ಯವಸ್ಥೆಯಲ್ಲಿ ಸಣ್ಣ ಸಣ್ಣ ದೋಷಗಳಿದ್ದರೂ ಅದನ್ನು ಸರಿಪಡಿಸಲು ನಾವು ಖಾಸಗಿಯವರ ಮೇಲೆ ಅವಲಂಬಿಸ ಬೇಕಾಗುತ್ತದೆ. ಆದ್ದರಿಂದ ಈ ಈ ಉಪಕರಣಗಳನ್ನು ಅಳವಡಿಸಿ ನಿರ್ವಹಿಸುತ್ತಿರುವ ಖಾಸಗಿಯವರ ಬರುವಿಕೆಗಾಗಿ ನಾವು ಕಾಯಬೇಕಾಗುತ್ತದೆ….”
ಎರಡು ದಶಕಗಳ ಅವಧಿಯಲ್ಲಿ ಅತಿ ಭೀಕರ ಅಫಘಾತ
ಒರಿಸ್ಸಾದ ಬಾಲೇಶ್ವರದಲ್ಲಿ ಇದೇ ಜೂನ್ 2 ರಂದು ಸಂಭವಿಸಿದ ಭಯಂಕರ ರೈಲು ಅಫಘಾತ ನೂರಾರು ಜೀವಗಳನ್ನು ಹೊಸಕಿ ಹಾಕಿದೆ. ಸಾವಿರಾರು ಜೀವನಗಳು ಅಧಹಪತನಕ್ಕೊಳಗಾಗಿವೆ. ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣದ ಸುರಕ್ಷತೆಯ ಬಗೆಗೆ ಹಲವು ಪ್ರಶ್ನೆಗಳೆದ್ದಿವೆ. ರೈಲು ಇಲಾಖೆಯ ಖಾಸಗೀಕರಣ, ಅದರ ವಾಣಿಜ್ಯೀಕರಣ ಮತ್ತು ಐಷಾರಮೀಕರಣಗಳು ರೈಲು ಪ್ರಯಾಣವನ್ನು ಎತ್ತ ಕೊಂಡೊಯ್ಯುತ್ತಿವೆ ಎಂಬ ಪ್ರಶ್ನೆಗಳೂ ಜೊತೆ ಜೊತೆಗೇ ಎದ್ದಿವೆ. ಕೇಂದ್ರ ಸರ್ಕಾರ ರೈಲು ಇಲಾಖೆ ಮತ್ತು ಅದರ ಸೇವೆಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಿ ದೊಡ್ಡ ಸಾಧನೆ ಮಾಡಿರುವ ಪ್ರಚಾರ ಮಾಡುತ್ತಿರುವಾಗಲೇ ರೈಲು ಪ್ರಯಾಣ ಸುರಕ್ಷಿತವಲ್ಲ ಎಂಬ ಸಂದೇಶವೂ ಇಂತಹ ಅಫಘಾತಗಳಿಂದ ಹೋಗುತ್ತಿದೆ. ರೈಲುಗಳು ಡಿಕ್ಕಿಯಾಗಬಾರದೆಂದು ‘ಕವಚ’ ಎಂಬ ತಾತ್ರಿಕ ಯೋಜನೆ ತಂದಿದ್ದೇವೆ ಎಂದು ಹೇಳಿಕೊಳ್ಳುತ್ತಿರುವಾಗಲೇ ಈ ಯೋಜನೆಯ ಅನುಷ್ಠಾನ ಬಹಳ ಮಂದಗತಿಯಲ್ಲಿ ನಡೆದಿದೆ ಎಂಬುದು ಮುನ್ನೆಲೆಗೆ ಬರುತ್ತಿದೆ.
ರೈಲು ಕಾರ್ಯಾಚರಣೆಯಲ್ಲಿ ಸಿಗ್ನಲ್ ಪದ್ದತಿ ಅತಿ ಮುಖ್ಯವಾದುದು. ಆದರೆ ಈ ಸಿಗ್ನಲ್ ಪದ್ದತಿಯ ಅನುಷ್ಟಾನಗೊಳಿಸುವಲ್ಲಿ ಸಿಬ್ಬಂಧಿಯ ಕೊರತೆ ಅತ್ಯಂತ ದೊಡ್ಡ ಪ್ರಮಾಣದ್ದು ಎಂಬುದು ಗೊತ್ತಾಗುತ್ತಿದೆ. ರೈಲು ಮಂತ್ರಿಗಳು ರಾಜ್ಯಸಭೆಯಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರವೇ ಸಿಗ್ನಲ್ ಮತ್ತು ಪ್ರಯಾಣ ವ್ಯವಸ್ಥೆಯ ನೋಡಿಕೊಳ್ಳುವ ವಿಭಾಗದಲ್ಲಿ 77,000 ಹುದ್ದೆಗಳು ಖಾಲಿಯಿವೆ. ಇಷ್ಟೊಂದು ಹುದ್ದೆಗಳು ಖಾಲಿ ಇರುವಾಗ ಇರುವ ಸಿಬ್ಬಂದಿ ಕೆಲಸದ ಒತ್ತಡದ ಪರಮಾವಧಿಯನ್ನು ಅನುಭವಿಸುತ್ತಾರೆ. ಮನುಷ್ಯ ತಪ್ಪುಗಳು ಆಗುವ ಪರಿಸ್ಥಿತಿ ಇದರಿಂದ ನಿರ್ಮಾಣವಾಗಿದೆ. ರೈಲ್ವೇಯ ಒಟ್ಟು(ಗೆಜೆಟ್ಟೆಡ್ ಅಲ್ಲದ) ಸಿಬ್ಬಂದಿ ಕೊರತೆ 3 ಲಕ್ಷಕ್ಕೂ ಹೆಚ್ಚು. ಅಂದರೆ ಇರುವ ಸಿಬ್ಬಂದಿಯ ಒತ್ತಡವನ್ನು ಊಹಿಸಿಕೊಳ್ಳಬಹುದು. ಇಷ್ಟೇ ಅಲ್ಲ, ಸರ್ಕಾರ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಇರುವ ಹಳಿಗಳ ಮೇಲೆ ಹೆಚ್ಚು ರೈಲುಗಳು ಸಾಗುವಾಗ, ಹಳಿಗಳ ಸುವ್ಯವಸ್ಥೆ ನೋಡಿಕೊಳ್ಳುವ ಸಿಬ್ಬಂದಿ ಕಡಿಮೆಯಾದರೆ ಅನಾಹುತಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ. ಇದಲ್ಲದೆ ಹಳಿಗಳ ನಿರ್ವಹಣೆಯೂ ಕಷ್ಟವಾಗುತ್ತದೆ.
ಖಾಸಗೀಕರಣ ಮತ್ತು ವಾಣಿಜ್ಯೀಕರಣ
ಹೆಸರು ಹೇಳ ಬಯಸದ ಒಬ್ಬ ಹಿರಿಯ ರೈಲು ಅಧಿಕಾರಿ ಹೇಳಿದ್ದು “ ಈ ಅಫಘಾತ ನೂರಕ್ಕೆ ನೂರರಷ್ಟು ರೈಲ್ವೇಯ ಸಿಗ್ನಲ್ ವ್ಯವಸ್ಥೆಯ ಖಾಸಗೀಕರಣದಿಂದಾಗಿಯೇ ಆಗಿರುವುದು. ನನ್ನ ಅನುಭವದ ಪ್ರಕಾರ ಈ ವ್ಯವಸ್ಥೆಯಲ್ಲಿ ಸಣ್ಣ ಸಣ್ಣ ದೋಷಗಳಿದ್ದರೂ ಅದನ್ನು ಸರಿಪಡಿಸಲು ನಾವು ಖಾಸಗಿಯವರ ಮೇಲೆ ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಈ ಈ ಉಪಕರಣಗಳನ್ನು ಅಳವಡಿಸಿ ನಿರ್ವಹಿಸುತ್ತಿರುವ ಖಾಸಗಿಯವರ ಬರುವಿಕೆಗಾಗಿ ನಾವು ಕಾಯಬೇಕಾಗುತ್ತದೆ….” (ಫ್ರಂಟ್ ಲೈನ್ ನಿಂದ)
ಇನ್ನೊಬ್ಬ ಹಿರಿಯ ಅಧಿಕಾರಿಯ ಪ್ರಕಾರ ಖಾಸಗೀಕರಣ ಬೇಡವೇ ಬೇಡ ಎಂದು ಹೇಳಿದರೂ ನಡೆಯುವುದಿಲ್ಲ. ಉದಾಹರಣೆಗೆ ಕಂಬಳಿಗಳ ಪೂರೈಕೆ, ಆಹಾರ ಸರಬರಾಜು, ವಸತಿ ಒದಗಿಸುವುದು ಇತ್ಯಾದಿಗಳು ಖಾಸಗೀಕಣಕ್ಕೆ ಹೊಂದಿಕೊಳ್ಳುತ್ತವೆ. ಮುಖ್ಯವಾಗಿ ಯಾವುದನ್ನು ಖಾಸಗಿಯವರಿಗೆ ವಹಿಸಬಹುದು ಎಂಬ ಬಗ್ಗೆ ವಿವೇಚನೆ ಇರಬೇಕು.(ಫ್ರಂಟ್ ಲೈನ್ ನಿಂದ)
ಇದಲ್ಲದೆ ರೈಲ್ವೇಯ ಸಂಚಾರ ಸಾಗಣೆಯಲ್ಲಿ ಡೇಟಾ ಲೋಗ್ಗರ್ ಎಂಬ ಸಿಗ್ನಲ್ಲುಗಳಿಗೆ ಸಂಬಂದಿಸಿದ ಒಂದು ವಿಭಾಗವಿದೆ. ಇದು ಬೀಗದೊಳಗೆ ಇರಬೇಕಾದದ್ದು ಮತ್ತು ಇದನ್ನು ಎಲ್ಲರೂ ಪ್ರವೇಶಿಸುವಂತೆ ಇಡುವುದು ಸರಿಯಲ್ಲ. ಇದು ಅಪಾಯಕಾರಿ.(ಫ್ರಂಟ್ ಲೈನ್ ನಿಂದ)
ಖಾಸಗೀಕರಣದ ವಿಷಯ ಬಂದರೆರೈಲು ಮಂತ್ರಾಲಯ ಹೇಳುವುದು “ಖಾಸಗಿಯವರ ಭಾಗವಿಸುವಿಕೆಯಿಂದ ಅಪಾರ ಪ್ರಮಾಣದ ಹಣಕಾಸು ಹರಿದು ಬರುತ್ತದೆ. ಇಂತಹ ದಾರಿಯಿಂದ ಸುಮಾರು 30,000 ಕೋಟಿ ರೂಪಾಯಿಗಳು ಬರಬಹುದು. ಹೀಗೆ ಬರುವ ಹಣದಿಂದ ರೈಲ್ವೇಯ ಆಧುನೀಕರಣ ಮಾಡಬಹುದು ಮತ್ತು ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ.. ಈ ವಾದಕ್ಕೆ ವಿರುದ್ದವಾಗಿ ರೈಲು ನೌಕರರ ಸಂಘಟನೆ ಹೇಳುವುದು “ಇದು ರೈಲ್ವೇಯ ನಷ್ಟಕ್ಕೆ ತನ್ನ ಕೊಡುಗೆ ಕೊಡುತ್ತದೆ” ಎಂದು. ಅಂದರೆ, ಇಲ್ಲಿ ಲಾಭಕ್ಕಿಂತ ನಷ್ಟವೆ ಹೆಚ್ಚು.
ಸಿ ಐ ಟಿ ಯು ಪ್ರತಿಭಟನೆ
ಸಿ ಐ ಟಿ ಯು ಖಾಸಗೀಕರಣದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಪ್ರತಿಬಟನೆ ನಡೆಸಿತು.ಮುಖ್ಯವಾಗಿ 109 ಜೋಡಿ ನಿಲ್ದಾಣಗಳಿಂದ ರೈಲು ಓಡಿಸುವ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟಿದ್ದನ್ನು ಅದು ಪ್ರತಿರೋಧಿಸಿತು. ಹಲವು ವಿರೋಧಪಕ್ಷಗಳೂ ಈ ಖಾಸಗೀಕರಣವನ್ನು ವಿರೋಧಿಸಿದವು. ಅವುಗಳಲ್ಲಿ ಕಾಂಗ್ರೆಸ್, ಸಿ ಪಿ ಐ ಎಂ , ಸಿ ಪಿ ಐ ಮತ್ತು ಇತರ ಎಡ ಪಕ್ಷಗಳು, ತೃಣಮೂಲ ಕಾಂಗ್ರೆಸ್, ಡಿ ಎಂ ಕೆ ಮುಖ್ಯವಾದವು.
ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ನ ಅಖಿಲ್ ಭಾರತ ಕಾರ್ಯದರ್ಶಿ ತಪನ್ ಸೇನ್ ಹೇಳುವುದು “30,000 ಕೋಟಿ ರೂಪಾಯಿಗಳು ಬರುತ್ತವೆ ಎನ್ನುವುದು ಅರ್ಥಹೀನ. ಯಾಕೆಂದರೆ ಹೆಚ್ಚು ಆದಾಯ ಬರುವ ಮಾರ್ಗಗಳಲ್ಲಿ ಈ ಖಾಸಗೀಕರಣವಾದಾಗ ಆದಾಯ ಸೋರಿಕೆಯೆ ಹೆಚ್ಚಾಗಿ ನಷ್ಟವೆ ಹೆಚ್ಚಾಗುತ್ತದೆ. ಈ ಮಾರ್ಗಗಳಲ್ಲಿ ಅತೀ ವೇಗದ ಗಾಡಿಗಳನ್ನು ನಡೆಸುವುದರಿಂದ ಬರುವ ಹೆಚ್ಚಿನ ಆದಾಯ ಪೂರ್ತಿ ಖರ್ಚಾಗಿ ಹೋಗುತ್ತದೆ”
ಹೆಚ್ಚು ಹಾನಿಯ ಅಫಘಾತಗಳು
ರೈಲು ಇಲಾಖೆಯ ಅಂಕಿ ಸಂಕಿಗಳ ಪ್ರಕಾರ 2022-23 ನೇ ಸಾಲಿನಲ್ಲಿ 48 ಹೆಚ್ಚು ಪರಿಣಾಮಗಳ(ಹಾನಿಯ) ಅಫಘಾತಗಳಾಗಿದ್ದರೆ ಹಿಂದಿನ ಸಾಲಿನಲ್ಲಿ 35 ಅಂತಹ ಅಫಘಾತಗಳಾಗಿವೆ.
ಕಡಿಮೆ ಪರಿಣಾಮಗಳ ಅಫಘಾತಗಳನ್ನು ತೆಗೆದುಕೊಂಡರೆ 2022-23 ರಲ್ಲಿ 165 ಇಂತಹ ಅಫಘಾತಗಳಾಗಿವೆ. ಇವುಗಳಲ್ಲಿ 35 ಅಪಾಯಕಾರಿ ಸ್ಥಿತಿಯಲ್ಲಿ ಸಿಗ್ನಲ್ಲುಗಳನ್ನು ದಾಟಿರುವ ಪ್ರಕರಣಗಳು. ರೈಲು ಚಾಲಕರು ಅತೀ ಹೆಚ್ಚು ಸಮಯ ಸತತ ಕೆಲಸ ಮಾಡಬೇಕಾಗಿ ಬಂದಂತಹ ಸ್ಥಿತಿ ಯಿಂದಾಗಿ ಆದಂತಹವುಗಳು.ನೌಕರರ ಕೊರತೆಯಿಂದಾಗಿ ಉಂಟಾಗಿರುವ ಪರಿಸ್ಥಿತಿ ಇಂತಹ ಅಫಘಾತಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದು ವಾಸ್ತವ-ಅಪಾಯಕಾರಿ ಸ್ಥಿತಿಯಲ್ಲಿ ಸಿಗ್ನಲ್ಲುಗಳನ್ನು ದಾಟಿರುವ ಪ್ರಕರಣಗಳು ಈ ತರಹದ್ದು. ಇದಲ್ಲದೆ ಬೇರೆ ಕಾರಣಗಳೂ ಇದ್ದವು ಎಂದು ಒಪ್ಪಿದರೂ ಇದು ಬಹುಮುಖ್ಯ ಕಾರಣ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ.
ಓಡಿಸ್ಸಾದಲ್ಲಿ ಜೂನ್ 2 ರಂದು ಸಂಭವಿಸಿದ ಅಫಘಾತ ಇಂತಹ ಸ್ಥಿತಿಯಲ್ಲಿ ಆಗಿರಬಹುದು ಎಂಬ ಗುಮಾನಿಯೂ ಇದೆ. ತನಿಖೆಯಿಂದ ಸ್ಪಷ್ಟತೆ ಸಿಗಬಹುದು.
ರೈಲು ಇಲಾಖೆಯಲ್ಲಿ ಜನಸಂಪನ್ಮೂಲದ ಕೊರತೆ
ದಿ ಹಿಂದೂ ಪತ್ರಿಕೆಯ ಇತ್ತೀಚಿನ ಒಂದು ವರದಿಯ ಪ್ರಕಾರ ರೈಲ್ವೇಯ ವಲಯಗಳ ಮಹಾ ಪ್ರಭಂದಕರುಗಳ ಉನ್ನತ ಸಭೆಯಲ್ಲಿ ರೈಲ್ವೇಯ ಬೋರ್ಡಿನ ಆದ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೇಳಿರುವುದೇನೆಂದರೆ, ಹೆಚ್ಚು ಪರಿಣಾಮದ ಅಫಘಾತಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದು ನಿಜಕ್ಕೂ ಆತಂಕಕಾರಿ.ಆದ್ದರಿಂದ ಸುರಕ್ಷತಾ ವ್ಯವಸ್ಥೆ ಇನ್ನೂ ಹೆಚ್ಚು ಚುರುಕಾಗಿರುವ ಅವಶ್ಯಕತೆಯಿದೆ. ಇದಲ್ಲದೆ ರೈಲ್ವೇಯ ಬೋರ್ಡು ತಗೆದುಕೊಂಡಿರುವ ಇನ್ನೊಂದು ನಿರ್ಧಾರ ಯಾವುದೇ ಕಾರಣಕ್ಕೂ ಒಬ್ಬ ಚಾಲಕ 12 ತಾಸುಗಳಿಗಿಂತ ಹೆಚ್ಚು ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಬೇಕಾಗುವ ಒತ್ತಡ ಇರಬಾರದು.
ರೈಲ್ವೇಯ ಆಂತರಿಕ ವರದಿಯ ಪ್ರಕಾರ ನಿಜದಲ್ಲಿ ರೈಲು ಚಾಲಕರು ಅತಿ ಕೆಲಸದಿಂದ ಬಸವಳಿದಿದ್ದಾರೆ ಎನ್ನಲಾಗಿದೆ. ಅವರ ಈ ಅತೀ ಕೆಲಸದ ದಣಿವಿನಿಂದ ಏಕಾಗ್ರತೆ ಸಾಲದೆ ಹಲವು ರೈಲು ಅಫಘಾತಗಳು ಆಗಿವೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಇರುವ ಖಾಲಿ ಹುದ್ದೆಗಳನ್ನು ಕೂಡಲೇ ಭರಿಸಬೇಕೆಂಬ ಬೇಡಿಕೆ ಇಡಲಾಗಿದೆ.
” —- ಜನಸಂಪನ್ಮೂಲದ ಕೊರತೆಯಿಂದಾಗಿ ವಿವಿಧ ರೈಲ್ವೆ ವಲಯಗಳು ಚಾಲಕರನ್ನು ಅವರ ಕೆಲಸದ ಅವಧಿಗಿಂತ ಹೆಚ್ಚಾಗಿ ಕೆಲಸ ಮಾಡುವಂತೆ ಹೇಳುತ್ತಿವೆ. ಒಂದು ಉದಾಹರಣೆ ನೋಡುವುದಾದರೆ ದಕ್ಷಿಣ ಪೂರ್ವ ಮಧ್ಯ ರೈಲ್ವೇಯಲ್ಲಿ ಕಳೆದ ಮಾರ್ಚಿ, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ 12 ತಾಸಿಗಿಂತ ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹೆರಿದ ಪ್ರಮಾಣ ಅನುಕ್ರಮವಾಗಿ ಶೇ 35.99, 34.53 ಮತ್ತು 33.26 ರಷ್ಟಿತ್ತೆಂದು ವರದಿಯಾಗಿದೆ!!
ಅಖಿಲ ಭಾರತ ಚಾಲಕರ ಸಂಘ ತಮಗೆ ದಿನಕ್ಕೆ 8 ಗಂಟೆಗಳ ಕರ್ತವ್ಯ ಮಾತ್ರ ನೀಡಬೇಕು, ಮತ್ತು ಉತ್ತಮ ಕೆಲಸದ ಪರಿಸ್ಥಿತಿ ಇತ್ಯಾದಿಗಳನ್ನು ಕೇಳಿ ಪ್ರತಿಭಟನೆ ನಡೆಸಿದೆ. ಅಲ್ಲದೆ ಅದು 392 ಚಾಲಕರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಕೂಡಲೇ ಭರಿಸಬೇಕು ಎಂದು ಒತ್ತಾಯ ಮಾಡಿದೆ!!
ಮಹಿಳೆಯರೂ ಇರುವ ಈ ಚಾಲಕರ ಸಂಘ ತಮಗೆ ಹಕ್ಕಿನ ರಜೆ, ವಿಶ್ರಾಂತಿ ಮತ್ತು ಕೋವಿಡ್ ಮಾರಿಯಿಂದ ಸುಧಾರಿಸಿಕೊಳ್ಳಲೂ ಅವಕಾಶ ನೀಡಿಲ್ಲವೆಂದು ಹೇಳಿ ಇಂತಹ ಧೋರಣೆಯ ವಿರುದ್ದ ಪ್ರತಿಬಟಿಸಿದೆ.
“ಇಂತಹ ಧೋರಣೆಯಿಂದಾಗಿ ತಮ್ಮ ಒತ್ತಡ ತೀವ್ರ ಹೆಚ್ಚಾಗಿದ್ದು ಇದರ ಪರಿಣಾಮ ರೈಲು ಸುರಕ್ಷತೆಯ ಮೇಲೆ ಆಗೇ ಆಗುತ್ತದೆಂದು” ಸಂಘ ಹಿಂದೂ ಪತ್ರಿಕೆಗೆ ಹೇಳಿದೆ.
ಸಿಎಜಿ ವರದಿ
ಇತ್ತೀಚೆಗೆ ನಡೆದ ಇಲಾಖೆಯ ಕಾರ್ಯಾಚರಣೆಯ ತಪಾಸಣೆಯಲ್ಲಿ ಬಹಳ ಆತಂಕಕಾರಿ ವಿಷಯ ಗಮನಕ್ಕೆ ಬಂದಿದೆ. 2017-2021 ರ ಅವಧಿಯಲ್ಲಿ ಹಳಿ ತಪ್ಪಿದ ರೈಲುಗಳ ವಿಚಾರದ ಕಂಟ್ರೋಲ್ಲರ್ ಮತ್ತು ಆಡಿಟರ್ ಜನರಲ್ (ಸಿಎಜಿ )ಅವರ ವರದಿಯಲ್ಲಿ ಹೇಳಿರುವಂತೆ ಹಳಿ ನಿರೀಕ್ಷಣೆ ಮಾಡುವ ವಾಹನಗಳು ಶೇ 30-100 ರಷ್ಟು ಕಡಿಮೆ ನಿರೀಕ್ಷಣೆ ಮಾಡುತ್ತಿವೆ. 1129 ರೈಲು ಹಳಿ ತಪ್ಪಿದ ಪ್ರಕರಣಗಳಲ್ಲಿ 422 ಯಾಂತ್ರಿಕ ದೋಷದಿಂದಾಗಿ ಆದಂತಹವು (ಇದರಲ್ಲಿ ಹಳಿಯ ನಿರ್ವಹಣೆಯೂ ಸೇರಿದೆ-171 ಪ್ರಕರಣಗಳು), 156 ಪ್ರಕರಣಗಳಲ್ಲಿ ಹಳಿಯ ಮಾನದಂಡಗಳನ್ನು ಮೇರೆ ಮೀರಿ ಮೀರಿದ್ದು ಮತ್ತು 181 ಪ್ರಕರಣಗಳಲ್ಲಿ ಚಕ್ರಗಳಲ್ಲಿನ ನ್ಯೂನತೆ,275 ಪ್ರಕರಣಗಳು ತಪ್ಪಾಗಿ ಬಿಂದುಗಳನ್ನು ಗುರುತಿಸಿದ್ದು ಮತ್ತು ಶಂಟಿಂಗ್ ತಪ್ಪುಗಳಾಗಿದ್ದವು.
ಬಹುಮುಖ್ಯವಾಗಿ,ಸಿಎಜಿ ಹೇಳುವಂತೆ 2017-18 ರಿಂದ ರೈಲು ಸುರಕ್ಷತೆಗೆ ಸಂಬಂಧಪಟ್ಟ ಎಲ್ಲ ಜವಾಬ್ದಾರಿಗಳನ್ನು ರಾಷ್ಟ್ರೀಯ ರೈಲು ಸಂರಕ್ಷ ಕೋಶ (RRSK) ಗೆ ವರ್ಗಾಯಿಸಲಾಗಿದ್ದು , ಹಿಂದೆ ಈ ಕೋಶಕ್ಕೆ ಸವಕಳಿ ನಿಧಿಯ ಬೆಂಬಲವಿತ್ತು. ಒಂದು ಲಕ್ಷ ಕೋಟಿ ರೂಪಾಯಿಗಳ ವ್ಯಯವಿರುವ ಈ ಕೋಶಕ್ಕೆ ಬೇಕಾಗುವ ಹಣಕಾಸನ್ನು ಆಂತರಿಕ ಮೂಲಗಳಿಂದ ಸಂಗ್ರಹಿಸಿಕೊಳ್ಳಬೇಕು ಎಂಬ ನಿಬಂದನೆ ಹೇರಿರುವುದರಿಂದ ಹಣಕಾಸಿನ ತೊಂದರೆ ಅದಕ್ಕೆ ಆಗಿದೆ. ಇದು ಈ ಕೇಂದ್ರ ಸರ್ಕಾರದ ವಿಶಿಷ್ಟ ಶೈಲಿ- ತನ್ನ ಸ್ವಾಮ್ಯದ ಪ್ರತೀ ಸಂಸ್ಥೆಗೂ ಅನುದಾನ ಕಡಿತಗೊಳಿಸಿ ನಿಮ್ಮ ಆಂತರಿಕ ಸಂಪನ್ಮೂಲ ರೂಢಿಸಿಕೊಳ್ಳಿ ಎಂದು ಹೇಳುವುದು!! ರೈಲು ಸಂರಕ್ಷ ಕೋಶಕ್ಕೆ ಹಣಕಾಸಿನ ತೊಂದರೆ ಆಗಿರುವುದರಿಂದ ಶೇ 80 ರಷ್ಟು ಸಂಪನ್ಮೂಲ ಸಂಗ್ರಹಿಸುವುದು ಸಾಧ್ಯವಾಗದೆ ಈ ಬಾಬತ್ತು ಖರ್ಚು ಮಾಡಲು ಸಾಧ್ಯವಾಗಿಲ್ಲ. ಮುಖ್ಯವಾಗಿ ಹಳಿ ತಪ್ಪುವುದನ್ನು ತಡೆಯಲು ಮತ್ತು ಲೆವೆಲ್ ಕ್ರೋಸ್ಸಿಂಗ್ ಸುಧಾರಿಸಲು ಹಣದ ಕೊರತೆಯಾಗುತ್ತಿದೆ. ರೈಲು ಖಾಸಗೀಕರಣದ ದುಷ್ಪರಿಣಾಮ ಬಾಲೇಶ್ವರದ ಘೋರ ಅಫಘಾತದಲ್ಲಿ ಮೈದಳೆದು ಬಂದಿದೆ ಎಂದು ಹೇಳಬಹುದು. (ಪಿ ಡಿ ಮುಖ್ಯ ಲೇಖನದಿಂದ)
ಕಳೆದೆರಡು ದಶಕಗಳ ಅವಧಿಯಲ್ಲಿಯೇ ಅತ್ಯಂತ ಭೀಕರ ಅಫಘಾತ ಇದಾಗಿದ್ದು ರೈಲು ಮಂತ್ರಿ ರಾಜೀನಾಮೆ ನೀಡುವ ಮೂಲಕ ಜವಾಬುದಾರಿತ್ವ ಮೇರೆಯಬೇಕಾಗಿತ್ತು. ಮೋದಿ ಮತ್ತು ಅವರ ರೈಲು ಮಂತ್ರಿಗೆ ಅಂತಹ ಜವಾಬುದಾರಿತ್ವದ ಅವಶ್ಯಕತೆ ಕಂಡಿಲ್ಲ ಎಂದರೆ ಏನು ಹೇಳೋಣ?
ರೈಲು ಪ್ರಯಾಣವನ್ನು ಬಡವರಿಗೂ ಅನುಕೂಲವಾಗುವಂತೆ ಮಾಡುವುದು ಅವಶ್ಯ
ಭಾರತದಲ್ಲಿ ರೈಲು ಹಳಿಗಳ ಜಾಲ ಬಹಳ ದೊಡ್ಡದಿದೆ. ಸರ್ಕಾರಿ ಸ್ವಾಮ್ಯದಲ್ಲಿ ಬೆಳೆದ ಈ ಜಾಲ ದೇಶದ ಪ್ರಗತಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದೆ/ನೀಡುತ್ತಿದೆ. ಜನ ಪ್ರಯಾಣವಷ್ಟೆ ಅಲ್ಲ ಸರಕು ಸಾಗಣೆಗೂ ಅದು ಉಪಯುಕ್ತ. ದೇಶದ ಆರ್ಥಿಕತೆ ದೊಡ್ಡ ಪ್ರಮಾಣದಲ್ಲಿ ರೈಲು ಜಾಲದ ಮೇಲೆ ಅವಲಂಬಿತವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
ಭಾರತದಲ್ಲಿ ರೈಲು ಪ್ರಯಾಣ ಅತ್ಯಂತ ಸಾಮಾನ್ಯ ಸಾರಿಗೆ ವ್ಯವಸ್ಥೆ ಮತ್ತು ಅದು ಸುಲಭ ಬೆಲೆಯದ್ದು. ಆದರಿಂದಲೇ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ರೈಲು ಪ್ರಯಾಣವನ್ನು ಅವಲಂಬಿಸುತ್ತಾರೆ. ದೇಶದ ಕಾರ್ಮಿಕರಿಗೆ ಕೆಲಸ ಸಿಗುವ ಕಡೆಗೆ ಹೋಗಿ ಹೊಟ್ಟೆ ಹೊರೆದುಕೊಳ್ಳಲು ರೈಲು ಪ್ರಯಾಣ ಸಹಕಾರಿ. ಇದರಿಂದಾಗಿ ಲಕ್ಷ ಲಕ್ಷ ಜನ ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ಅದೂ ಒಂದೆರಡು ಕಿಲೋಮೀಟರುಗಳಲ್ಲ ಸಾವಿರಾರು ಕಿಲೋಮೀಟರುಗಳಷ್ಟು ದೂರ. ಬಡ ಜನ ಆಸನ ಕಾಯ್ದಿರಿಸಿ ಪ್ರಯಾಣ ಮಾಡುವಷ್ಟು ಅನುಕೂಲಸ್ಥರಲ್ಲ ಆದ್ದರಿಂದ ಸೀಟು ಕಾಯ್ದಿರಿಸದೆಯು ಪ್ರಯಾಣಿಸುತ್ತಾರೆ. ಹೀಗಿರುವಾಗ ರೈಲು ಪ್ರಯಾಣ ಸುರಕ್ಷಿತವಾಗಿದ್ದರೆ ಇವರ ಪ್ರಯಾಣ ಪೂರ್ಣಗೊಳ್ಳುತ್ತದೆ. ಇಲ್ಲವಾದರೆ ಇವರು ಅನಾಹುತಗಳಿಗೆ ಒಳಗಾಗಿ ಜೀವನ ಹಾಳಾಗುತ್ತದೆ.
ಕೇಂದ್ರದ ಸರ್ಕಾರ “ವಂದೇ ಭಾರತ್” ಎಂಬ ಐಷಾರಾಮಿ ರೈಲುಗಳನ್ನ ದೊಡ್ಡ ಸಂಖ್ಯೆಯಲ್ಲಿ ಉದ್ಘಾಟಿಸುತ್ತಿದೆ. ಇದಲ್ಲದೆ ಅಮೃತ ರೈಲು ನಿಲ್ದಾಣಗಳ ಉದ್ಘಾಟನೆಯೂ ಆಗುತ್ತಿದೆ. ಎಲ್ಲ ಪ್ರಧಾನ ಮಂತ್ರಿಗಳ ಹಸ್ತದಿಂದ. ಹಾಗಾದರೆ, ರೈಲು ಸುರಕ್ಷತೆ ಮತ್ತು ಬಡ ಜನಸಾಮಾನ್ಯರ ಪ್ರಯಾಣದ ಅನುಕೂಲಗಳ ಕಡೆಗೆ ಯಾರು ಗಮನ ಹರಿಸಬೇಕು? ಶ್ರೀಮಂತರ ಮತ್ತು ಮದ್ಯಮ ವರ್ಗದವರ
ಐಷಾರಾಮಿ ಪ್ರಯಾಣಕ್ಕೆ ಪ್ರಾಮುಖ್ಯತೆ ನೀಡಿದಷ್ಟೇ ಬಡ ಜನಸಾಮಾನ್ಯರ ಹೊಟ್ಟೆಪಾಡಿಗಾಗಿನ ಸುರಕ್ಷಿತ ಪ್ರಯಾಣಕ್ಕೆ ಗಮನ ಕೊಡಬಾರದೇ ಎಂಬುದು ಪ್ರಶ್ನೆ. ಸರ್ಕಾರದ ಶ್ರೀಮಂತರ ಪರವಾದ ಧೋರಣೆ ಈ ನಡೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ.