ನವದೆಹಲಿ: ಭಾರತೀಯ ರೈಲುಗಳ “ಆಗಮನ ಮತ್ತು ನಿರ್ಗಮನ ಹಾಗೂ ಯಾವ ಮಾರ್ಗದಲ್ಲಿ ಚಲಿಸುತ್ತಿದೆʼʼ ಎಂಬ ನಿಖರವಾದ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಲು ರಿಯಲ್-ಟೈಮ್ ರೈಲು ಮಾಹಿತಿ ವ್ಯವಸ್ಥೆಯು(ಆರ್‌ಟಿಐಎಸ್) ಆ್ಯಪ್ ಸಿದ್ದಪಡಿಸಲಾಗಿದೆ. ಇದು ಪ್ರತಿ 30 ಸೆಕೆಂಡ್‌ಗಳಿಗೆ ಒಮ್ಮೆ ರೈಲು ಚಲನೆಯ ಮಾಹಿತಿಯನ್ನು ಒದಗಿಸಲಿದೆ.
ಈ ಬಗ್ಗೆ ರೈಲ್ವೇ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಭಾರತೀಯ ರೈಲ್ವೇಯು ರಿಯಲ್-ಟೈಮ್ ರೈಲು ಮಾಹಿತಿ ವ್ಯವಸ್ಥೆಯನ್ನು ತಂದಿದೆ.! ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದೊಂದಿಗೆ, ರೈಲುಗಳ ಚಲನೆಯ ಸಮಯವನ್ನು ನಿಖರವಾಗಿ ತಿಳಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದ್ದು, ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ವಿಳಂಬದ ಮಾಹಿತಿ ತೊಂದರೆಯಿಂದ ಮುಕ್ತವಾಗಬಹುದು ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
ಕೋಟ್ಯಾಂತರ ದೇಶ ನಿವಾಸಿಗಳು ದೂರದ ಊರುಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣವನ್ನು ಅವಲಂಬಿಸಿದ್ದಾರೆ. ಆದರೆ, ಎಷ್ಟೋ ಸಂದರ್ಭಗಳಲ್ಲಿ ರೈಲುಗಳು ತಡವಾಗಿ ಬರುವುದು ಮತ್ತು ಪ್ರಯಾಣಿಕರಿಗೆ ಈ ಬಗ್ಗೆ ನಿಖರವಾಗಿ ಮಾಹಿತಿ ಸಿಗದಿರುವ ಕಾರಣದಿಂದಾಗಿ ಬಹುತೇಕ ಸಂದರ್ಭಗಳಲ್ಲಿ ರೈಲ್ವೇ ಪ್ರಯಾಣ ಸಾಧ್ಯವಾಗದ ಪರಿಸ್ಥಿತಿಯೂ ಎದುರಾಗಿದೆ. ಸುಧಾರಿತ ಆಧುನೀಕ ಆ್ಯಪ್ ರೈಲ್ವೇ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮತ್ತು ಪ್ರಯಾಣದ ಬಗ್ಗೆ ನಿರ್ದಿಷ್ಟವಾಗಿ ಸಮಯವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ರೈಲಿನ ಇಂಜಿನ್‌ಗಳಲ್ಲಿ ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ರಿಯಲ್-ಟೈಮ್ ರೈಲು ಮಾಹಿತಿ ವ್ಯವಸ್ಥೆಯು ಪ್ರತಿ 30 ಸೆಕೆಂಡ್‌ಗಳಿಗೆ ಒಮ್ಮೆ ರೈಲು ಚಲನೆಯ ಮಾಹಿತಿಯನ್ನು ಒದಗಿಸಲಿದೆ. ಇದನ್ನು ನಿರ್ದಿಷ್ಟ ವ್ಯಕ್ತ ನಿರ್ವಹಣೆಗೆ ಅವಲಂಬಿಸದೇ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿದೆ. ರೈಲುಗಳ ಸ್ಥಳ ಮತ್ತು ವೇಗವನ್ನು ದಾಖಲಿಸಿಕೊಳ್ಳಲಿದೆ. ಇದರಿಂದ ಪ್ರಯಾಣದ ರೈಲು ಎಲ್ಲಿದೆ ಮತ್ತು ಎಷ್ಟು ಸಮಯಕ್ಕೆ ರೈಲ್ವೆ ನಿಲ್ದಾಣವನ್ನು ತಲುಪಲಿದೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಇದರ ಆಧಾರದಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗಲಿದೆ.
ಇಸ್ರೋ ಸಹಾಯದೊಂದಿಗೆ, 21 ಎಲೆಕ್ಟ್ರಿಕ್ ಲೋಕೋ ಶೆಡ್‌ಗಳಲ್ಲಿ 2,700 ಇಂಜಿನ್‌ಗಳಿಗೆ ರೈಲು ಮಾಹಿತಿ ವ್ಯವಸ್ಥೆ ಸಾಧನಗಳನ್ನು ಅಳವಡಿಸಲಾಗಿದೆ. ಎರಡನೇ ಹಂತದಲ್ಲಿ 50 ಲೋಕೋ ಶೆಡ್‌ಗಳಲ್ಲಿ 6,000 ಕ್ಕೂ ಹೆಚ್ಚು ಇಂಜಿನ್‌ಗಳಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಸುಮಾರು 6,500 ಲೋಕೋ ಮೊಟಿವ್ ಗಳಿಂದ ಜಿಪಿಎಸ್ ಫೀಡ್ ಅನ್ನು ನೇರವಾಗಿ ಕಂಟ್ರೋಲ್ ಆಫೀಸ್ ಅಪ್ಲಿಕೇಶನ್‌ಗೆ ದಾಖಲಿಸಲಿದೆ. ಪ್ರತಿ 30 ಸೆಕೆಂಡ್‌ಗಳಿಗೆ ಅಪ್‌ಡೇಟ್ ಆಗುವ ಈ ಮಾಹಿತಿಯನ್ನು ಐಆರ್‌ಸಿಟಿಸಿ ನಲ್ಲಿ ಮತ್ತು ಇನ್ನಿತರ ಫ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ರೈಲ್ವೆ ಪ್ರಯಾಣಿಕರು ಮೊಬೈಲ್‌ನಲ್ಲೇ ಕ್ಷಣ ಕ್ಷಣದ ಅಪ್‌ಡೇಟ್‌ಗಳನ್ನು ಪಡೆಯಬಹುದು.