ಸ್ವಾತಂತ್ರ್ಯದ ದಾರಿ ತಲುಪಬೇಕಿರುವ ಗುರಿ     

 

ಕೆ.ಎಸ್.ರವಿಕುಮಾರ್, ಹಾಸನ

ನಮಗೆ ಸ್ವಾತಂತ್ರ್ಯ ಲಭಿಸಿ ದಶಕಗಳೇ ಸಂದುಹೋಗುತ್ತಿವೆ. ಯಾವುದೇ ಐತಿಹಾಸಿಕವೆನ್ನಬಹುದಾದ ಘಟನೆ ನೀಡುವ ಸ್ಫೂರ್ತಿಯ ಸಂಚಲನ ಕಾಲಕ್ರಮೇಣ ತನ್ನ ಕಾವನ್ನು ಕಳೆದುಕೊಳ್ಳುತ್ತ ಸಾಗುತ್ತದೆ. ನಮ್ಮ ಸ್ವಾತಂತ್ರ್ಯ ಚಳವಳಿಯ ಮಟ್ಟಿಗೂ ಈ ಹೇಳಿಕೆ ನಿಜ. ಆದರೆ ಈ ಚಳವಳಿಯಲ್ಲಿ ಅಂತರ್ಗತವಾಗಿರುವ ಮಹತ್ತರ ಸಾರ್ವಕಾಲಿಕ ಮೌಲ್ಯಗಳಲ್ಲಿ ಸೌಹಾರ್ದತೆಯೂ ಒಂದು. ಅದನ್ನು ಎಲ್ಲ ಆಯಾಮಗಳಿಂದಲೂ ಗ್ರಹಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ದೇಶದ ಪ್ರತೀ ಪೀಳಿಗೆಯ ಮೇಲೂ ಇದೆ.

1947ನೇ ಇಸವಿಯ ಆಗಸ್ಟ್ 15ರಂದು ನಮ್ಮ ಭಾರತ ಸ್ವಯಮಾಧಿಕಾರದ ಸ್ವಾತಂತ್ರ್ಯದೆಡೆಗೆ ಚಲಿಸಿತು. ಗುಲಾಮಗಿರಿಯ ಸಂಕೋಲೆಗಳನ್ನು ಚರಿತ್ರೆಯ ಗೋದಾಮಿಗೆ ಒಗೆದು ಭಾರತೀಯರು ಹೊಸ ದಿಕ್ಕಿನೆಡೆಗೆ ಮುಖ ಮಾಡಿದರು.

ಘೋರ ವಿಪರ್ಯಾಸವೆಂದರೆ ಸ್ವಾತಂತ್ರ್ಯ ತಂದ ನಿರೀಕ್ಷೆಗಳ ನಡುವಲ್ಲೇ ಭಾರತ ವಿಭಜನೆಗೆ ತುತ್ತಾಯಿತು. ವಿಭಜಿಸಿದವರ ಕುಟಿಲತೆಯಷ್ಟೆ ಮುಖ್ಯವಾದದ್ದು ವಿಭಜಿಸಲ್ಪಟ್ಟವರ ಮತೀಯ ಸಂಕುಚಿತತೆ. ಯಾವ ಸ್ವಾತಂತ್ರ್ಯಕ್ಕಾಗಿ ದಶಕಗಳ ಕಾಲ ಹಿಂದೂ, ಮುಸ್ಲಿಮ್, ಸಿಖ್ಖರೆಲ್ಲ ‘ನಾವೆಲ್ಲ ಭಾರತೀಯರು’ ಎಂದು ಒಂದೇ ಮುಷ್ಟಿಯಾಗಿ ಹೋರಾಡಿದ್ದರೋ ಅವರೀಗ ಸ್ವಾತಂತ್ರ್ಯದ ಸಂತೋಷವನ್ನು ಒಟ್ಟಾಗಿ ಅನುಭವಿಸುವ ಮನಸ್ಥಿತಿಯಲ್ಲಿರಲಿಲ್ಲ. ಪ್ರಾಯಶಃ ಜಗತ್ತಿನ ಯಾವ ದೇಶವೂ ವಸಾಹತುಶಾಹಿಯಿಂದ ಬಿಡುಗಡೆ ಹೊಂದುವಾಗ ಕೋಮುವಾದಿ ವಿಭಜನೆಯಂತಹ ದುರಂತಮಯ ಘಟ್ಟವನ್ನು ಹಾದುಹೋಗಿರಲಿಲ್ಲವೆಂದು ಕಾಣುತ್ತದೆ. ಆದರೆ ಮುಕ್ತ ಭಾರತ ರಕ್ತ, ಕಣ್ಣೀರು, ನಿಟ್ಟುಸಿರುಗಳಿಂದಲೇ ಭವಿಷ್ಯಕ್ಕೆ ಮುನ್ನುಡಿ ಬರೆಯುವಂತಾದದು ಚರಿತ್ರೆಯ ಪೈಶಾಚಿಕ ಅಣಕವೇ ಸರಿ.

ಬ್ರಿಟಿಷರು ತಮ್ಮ ಆಳ್ವಿಕೆಯ ಕೊನೆಕೊನೆಯಲ್ಲಿ ಭಾರತೀಯರ ಸ್ವಾತಂತ್ರ್ಯದ ಬಯಕೆಯನ್ನು ಅರ್ಥಮಾಡಿಕೊಂಡು ಕೊಂಚ ವಿವೇಕದಿಂದ ವರ್ತಿಸಿದರೂ ಸ್ವತಂತ್ರ ಭಾರತಕ್ಕೆ ಒಡೆದು ಆಳುವ ದುರ್ನೀತಿಯನ್ನು ನಿರ್ಲಜ್ಜ ರಾಜನೈತಿಕ ಉಡುಗೊರೆಯಾಗಿ ನೀಡಿ ಹೋಗಿದ್ದರು. ದೇಶ ಒಡೆದಂತೆ ಮನಸುಗಳೂ ಒಡೆದಿದ್ದವು. ಹೊಸ ಭಾರತಕ್ಕೆ ಅವಶ್ಯವಿದ್ದ ಕನಸು, ಆಶಯಗಳೆಲ್ಲ ಮೂಲೆಗುಂಪಾಗಿದ್ದವು. 1946ರ ಆಗಸ್ಟ್ 16ರಂದು ಜ್ವಲಿಸಿದ ಕೋಮುಗಲಭೆಯ ಮೊದಲ ಜ್ವಾಲೆ 1948ರ ಜನವರಿ 12ರಂದು ಮಹಾತ್ಮ ಗಾಂಧೀ ತಮ್ಮ 79ರ ಇಳಿವಯಸ್ಸಿನಲ್ಲಿ ತಮ್ಮ ಜೀವನದ ಕೊನೆಯ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವವರೆಗೂ ಹುಚ್ಚು ಪ್ರವಾಹವಾಗಿ ಹರಿಯಿತು.

ಗಾಂಧೀಯದು ಇದು ಹದಿನಾರನೇ ಉಪವಾಸ ಸತ್ಯಾಗ್ರಹವಾಗಿತ್ತು. ಈ ಹಿಂದಿನ ಹದಿನೈದು ಉಪವಾಸ ಸತ್ಯಾಗ್ರಹಗಳನ್ನು ಬ್ರಿಟಿಷರ ವಿರುದ್ದವೋ, ಮತ್ತಾವುದೊ ಕಾರಣಕ್ಕೋ (ಇದರಲ್ಲಿ ಪೂನಾ ಒಪ್ಪಂದಕ್ಕೆ ಕಾರಣವಾದ ಸತ್ಯಾಗ್ರಹವೂ ಇದೆ) ಕೈಗೊಂಡಿದ್ದರು. ಆದರೆ ಈ ಬಾರಿಯದು ವಿಭಜನೆಯ ಹಿಂಸಾಚಾರದ ವಿರುದ್ಧವಾಗಿ, ಹೊಸ ಭಾರತದ ಭವಿಷ್ಯಕ್ಕಾಗಿ, ಮತೀಯ ಉನ್ಮಾದವನ್ನು ತಹಬಂದಿಗೆ ತರುವುದಕ್ಕಾಗಿ, ಕೋಮುಸಾಮರಸ್ಯದ ಮರುಸ್ಥಾಪನೆಗಾಗಿ ಕೈಗೊಂಡ ಪ್ರಯತ್ನವಾಗಿತ್ತು. ಉಪವಾಸ ಆರಂಭಿಸುವ ಮುನ್ನ ಅವರು ನೀಡಿದ ಚೀಟಿಯಲ್ಲಿ (‘Fasting is the last resort in place of sword’) ಎಂದು ಮಗುವಿನ ಕಾಳಜಿಯಲ್ಲಿ ಬರೆದಿದ್ದರು. ಕಡೆಗೂ ಅವರ ಈ ಉಪವಾಸ ಸತ್ಯಾಗ್ರಹ ಕೋಮು ಬೆಂಕಿಯನ್ನು ಆರಿಸಿತು. ಮನದೊಳಗೆ ಸೋತೆವೆಂಬ ಆಕ್ರೋಶವಿದ್ದರೂ ಮತಾಂಧರು ಬಹಿರಂಗದಲ್ಲಿ ತಪ್ಪಾಯಿತೆಂದು ಕೈಜೋಡಿಸಿದರು. ಗಾಂಧೀಜಿ ತಮ್ಮನ್ನೇ ದಂಡಿಸಿಕೊಳ್ಳುವ ಮೂಲಕ ತಮ್ಮ ಅಸಾಧಾರಣ ನೈತಿಕ ಸ್ಥೆöÊರ್ಯದೆದುರು ಮತೀಯ ದ್ವೇಷದ ಮೃಗೀಯತೆಯನ್ನು ತಾತ್ಕಾಲಿಕವಾಗಿಯಾದರೂ ಪಳಗಿಸಿದರು.

ವಸಾಹತುಶಾಹಿಯಷ್ಟೆ ಅಪಾಯಕಾರಿಯಾದುದು

ಮಹಾತ್ಮ ಗಾಂಧೀ ತಮ್ಮ ಈ ಐತಿಹಾಸಿಕ ಉಪವಾಸವನ್ನು ಕೈಗೊಳ್ಳುವ ಸಾಕಷ್ಟು ಮುನ್ನವೇ ಚಿಂತನಾ ಕ್ರಮದಲ್ಲಿ ತನ್ನ ಕಾಲಕ್ಕಿಂತ ಬಹಳ ಮುಂದಿದ್ದ ಕ್ರಾಂತಿಕಾರಿ ಭಗತ್‌ಸಿಂಗ್ ‘ಮತೀಯ ಕೋಮುವಾದವು ಭಾರತಕ್ಕೆ (ಬ್ರಿಟಿಷ್) ವಸಾಹತುಶಾಹಿಯಷ್ಟೆ ಅಪಾಯಕಾರಿಯಾದುದು. ನಮ್ಮ ಚಳವಳಿಯ ಗುರಿ ಕೇವಲ ಸ್ವಾತಂತ್ರ್ಯವಲ್ಲ. ಸಾಮರಸ್ಯ, ಸೌಹಾರ್ದತೆಗಳನ್ನು ಸಾಧಿಸದ ಸಮಾಜಕ್ಕೆ ಸ್ವಾತಂತ್ರ್ಯ ಅರ್ಥಹೀನ ಅನುಭವವಾಗಿರುತ್ತದೆ’ ಎಂದಿದ್ದನು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂ ಮತ್ತು ಮುಸಲ್ಮಾನ ಸಿಪಾಯಿಗಳು ಹಾಗೂ ಆಳರಸರು ಜತೆಗೂಡಿ ಬ್ರಿಟಿಷರನ್ನು ಕಂಗೆಡಿಸಿದ್ದು ವಸಾಹತು ಇತಿಹಾಸದ ರೋಚಕ ಘಟ್ಟವಾಗಿದೆ. ರಾಣಿ ಲಕ್ಷ್ಮಿಬಾಯಿ ಮತ್ತು ಹಜರತ್ ಬೇಗಮ್ ಮಹಲ್ ಈ ಸಂದರ್ಭದಲ್ಲಿ ಬ್ರಿಟಿಷರೊಡನೆ ಸೆಣೆಸಾಡಿ ಕ್ರಮವಾಗಿ ತಮ್ಮ ಪ್ರಾಣ ಮತ್ತು ಪ್ರಾಂತ್ಯಗಳನ್ನು ಕಳೆದುಕೊಂಡಿದ್ದನ್ನು ಮರೆಯಲಾದೀತೆ. 1905ರಲ್ಲಿ ವೈಸರಾಯ್ ಕರ್ಜನ್ ರಾಷ್ಟಿçÃಯ ವಿಮೋಚನಾ ಚಳವಳಿಯ ಕೇಂದ್ರಬಿಂದುವಾಗಿದ್ದ ಬಂಗಾಳವನ್ನು ಹಿಂದೂ ಹಾಗೂ ಮುಸ್ಲಿಮ್ ಬಾಹುಳ್ಯದ ಆಧಾರದಲ್ಲಿ ವಿಭಜಿಸಿದಾಗ ಎರಡೂ ಧರ್ಮೀಯರು ಒಗ್ಗಟ್ಟು ಮೆರೆದು ಸ್ವದೇಶಿ ಚಳವಳಿಯನ್ನು ತೀವ್ರಗೊಳಿಸುವ ಮೂಲಕ ಬ್ರಿಟಿಷರನ್ನು ಎದುರಿಸಿದ್ದರು. 1919ರ ಜಲಿಯನ್‌ವಾಲಾ ಬಾಗ್ ದುರಂತದಲ್ಲಿ ಹಿಂದೂ, ಮುಸ್ಲಿಮ್, ಸಿಖ್ ಎಂಬ ಭೇದವಿಲ್ಲದೆ ಸಾವಿರಾರು ಮಂದಿ ಬ್ರಿಟಿಷರ ಬುಲೆಟ್ಟಿಗೆ ಬಲಿಯಾದರು. ಈ ದುರಂತಕ್ಕೆ ಮುನ್ನ ಅಮೃತಸರದಲ್ಲಿ ರೌಲತ್ ಕಾಯಿದೆ (ವಿಚಾರಣೆಯಿಲ್ಲದೆ ಶಿಕ್ಷಿಸುವ ಪರಮಾಧಿಕಾರದ ಕಾಯಿದೆ) ವಿರುದ್ಧ ತೀವ್ರತರವಾಗಿ ಸಂಘಟಿತಗೊಂಡ ಪ್ರತಿಭಟನೆಗಳಿಗೆ ಗಾಂಧೀಜಿಯಿಂದ ಹುರುಪು ಪಡೆದು ಡಾ.ಸೈಫುದ್ದಿನ್ ಕಿಚಲೂ ಮತ್ತು ಡಾ.ಸತ್ಯಪಾಲ್ ಅವರ ಜಂಟಿ ನಾಯಕತ್ವ ಹಿಂದೂ-ಮುಸ್ಲಿಮ್ ಏಕತೆಯನ್ನು ಉತ್ತುಂಗಕ್ಕೆ ಒಯ್ದಿತ್ತು. 1921ರಲ್ಲಿ ವೇಲ್ಸ್ ರಾಜಕುಮಾರ ಕಲ್ಕತ್ತಾಕ್ಕೆ ಭೇಟಿಕೊಟ್ಟ. ಅವನ ಭೇಟಿಗೆ ವಿರೋಧವಿತ್ತು. ಅವನಿಗೆ ಭವ್ಯ ಸ್ವಾಗತ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ ನಡೆದದ್ದೇನು? ಅವನನ್ನು ಬರಮಾಡಿಕೊಳ್ಳಲು ಹಿಡಿಮಂದಿ ಬ್ರಿಟಿಷ್ ಅಧಿಕಾರಿಗಳು ಮತ್ತು ಪೋಲಿಸರ ಹೊರತಾಗಿ ಜನರೇ ಇರಲಿಲ್ಲ. ಇಡೀ ನಗರ ಬಾಗಿಲು ಮುಚ್ಚಿಕೊಂಡು ಸ್ಥಬ್ಧವಾಗಿತ್ತು. ಮಸಣಕಳೆ ಎಲ್ಲೆಲ್ಲೋ ರಾರಾಜಿಸುತ್ತಿತ್ತು. ರಾಜಕುಮಾರನಿಗೆ ಔತಣಕೂಟ ಏರ್ಪಡಿಸಲು ಒಂದು ತುಣುಕು ಮಾಂಸವೂ ಸಿಕ್ಕದಂತೆ ಬಂದ್ ಯಶಸ್ವಿಯಾಗಿತ್ತು. ಇಂತಹ ಅಭೂತಪೂರ್ವ ‘ಸ್ವಾಗತ’ದ ಮೂಲಕ ಭಾರತೀಯರನ್ನು ಎಚ್ಚರಿಸಿದವರು ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಮತ್ತು ಅವರ ಗೆಳೆಯ ಚಿತ್ತರಂಜನ ದಾಸ್. ಇವರಿಬ್ಬರ ಜಂಟಿ ಕಾರ್ಯಾಚರಣೆಗೆ ಕಲ್ಕತ್ತಾದ ಜನತೆ ಅಪೂರ್ವ ರೀತಿಯಲ್ಲಿ ಸ್ಪಂದಿಸಿದ್ದರು. ಬ್ರಿಟಿಷರ ಅಹಮ್ಮಿನ ಕೋಟೆ ಛಿದ್ರಗೊಂಡಿತ್ತು. ಈ ಬಗೆಯ ಸೃಜನಶೀಲ ಸಂಘರ್ಷಗಳಲ್ಲಿ ಮತನಂಬಿಕೆ ಗೆಳೆತನಕ್ಕೆ ಅಡ್ಡಿ ಬಂದಿರಲಿಲ್ಲ. ಹೋರಾಟಕ್ಕೆ ಗೋಡೆಯಾಗಿರಲಿಲ್ಲ. 1946ರಲ್ಲಿ ಇಡೀ ಬಂಗಾಳ ಪ್ರಾಂತ್ಯವನ್ನು ಕೋಮುಹಿಂಸೆ ಬಿಗಿದಪ್ಪಿಕೊಂಡಿದ್ದಾಗ ತೇಭಾಗದಲ್ಲಿ ಮಾತ್ರ 5 ಲಕ್ಷ ಹಿಂದೂ ಮತ್ತು ಮುಸ್ಲಿಮ್ ಗೇಣಿದಾರರು ನೆನೆಗುದಿಗೆ ಬಿದ್ದಿದ್ದ ಭೂಸುಧಾರಣೆಯ ಜಾರಿಗಾಗಿ ಒಟ್ಟಾಗಿ ಒತ್ತಾಯಿಸಿ ಬಂಗಾಳ ಪ್ರಾಂತೀಯ ಕೃಷಿಕ್ ಸಭಾದ ನೇತೃತ್ವದಲ್ಲಿ ಚಳವಳಿ ನಡೆಸಿದ್ದರು. ಇಲ್ಲಿ ಮತೀಯ ಸಂಘರ್ಷದ ಮಾತೇ ಇರಲಿಲ್ಲ. ಬದಲಾಗಿ ‘ಇಂಕ್ವಿಲಾಬ್ ಜಿಂದಾಬಾದ್’, ‘ನಿಮ್ಮ ಬೆಳೆಯನ್ನು ನಿಮ್ಮ ಕಣಕ್ಕೇ ಒಯ್ಯಿರಿ’ ಎಂಬ ಘೋಷಣೆಗಳು ಮುಗಿಲನ್ನು ಚುಂಬಿಸುತ್ತಿದ್ದವು. ಬೆಳೆಯ ಬೇರುಗಳಿಗೆ ಸೊಕ್ಕಿ ಬೆಳೆಯಲು ಕಸುವು ನೀಡುತ್ತಿದ್ದವು. ಇಂತಹ ಸಂಘಟಿತ ಶಕ್ತಿಯೆದುರು ಯಾವ ಸೈತಾನನೂ ನಿಲ್ಲಲಾರ ಎಂಬ ಗಟ್ಟಿಸತ್ಯವನ್ನು ಹಿಂದೂ-ಮುಸ್ಲಿಮ್ ಒಗ್ಗಟ್ಟು ನಿಜ ಮಾಡಿ ತೋರಿಸಿತ್ತು. ಹಲವು ವೇಳೆ ಈ ಒಗ್ಗಟ್ಟೇ ಬ್ರಿಟಿಷರ ಟೊಳ್ಳುತನ ಮತ್ತು ವೈಫಲ್ಯಗಳನ್ನು ಹೊರಜಗತ್ತಿಗೆ ತೋರಿಸುವ ನಿರ್ಣಾಯಕ ಮಾನದಂಡವಾಗಿ ಕೆಲಸ ಮಾಡಿತ್ತು.

ನಮಗೆ ಸ್ವಾತಂತ್ರ್ಯ ಲಭಿಸಿ ದಶಕಗಳೇ ಸಂದುಹೋಗುತ್ತಿವೆ. ಯಾವುದೇ ಐತಿಹಾಸಿಕವೆನ್ನಬಹುದಾದ ಘಟನೆ ನೀಡುವ ಸ್ಫೂರ್ತಿಯ ಸಂಚಲನ ಕಾಲಕ್ರಮೇಣ ತನ್ನ ಕಾವನ್ನು ಕಳೆದುಕೊಳ್ಳುತ್ತ ಸಾಗುತ್ತದೆ. ನಮ್ಮ ಸ್ವಾತಂತ್ರ್ಯ ಚಳವಳಿಯ ಮಟ್ಟಿಗೂ ಈ ಹೇಳಿಕೆ ನಿಜ. ಆದರೆ ಈ ಚಳವಳಿಯಲ್ಲಿ ಅಂತರ್ಗತವಾಗಿರುವ ಮಹತ್ತರ ಸಾರ್ವಕಾಲಿಕ ಮೌಲ್ಯಗಳಲ್ಲಿ ಸೌಹಾರ್ದತೆಯೂ ಒಂದು. ಅದನ್ನು ಎಲ್ಲ ಆಯಾಮಗಳಿಂದಲೂ ಗ್ರಹಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ದೇಶದ ಪ್ರತೀ ಪೀಳಿಗೆಯ ಮೇಲೂ ಇದೆ. ಭಗತ್‌ಸಿಂಗ್ ಹೇಳುವಂತೆ ಸಾಮರಸ್ಯವಿಲ್ಲದ ಸಮಾಜದಲ್ಲಿ ಸ್ವಾತಂತ್ರ್ಯಕ್ಕೆ ಹುರುಳಿಲ್ಲ ಎನಿಸಬಹುದು, ಅದೊಂದು ಸ್ವಚ್ಛಂದ ಪ್ರವೃತ್ತಿ ಎಂದು ಅರ್ಥೈಸಲ್ಪಡಬಹುದು. ಹೀಗಾಗದಿರಲು ಸೌಹಾರ್ದತೆ ಭಾರತದ ರಾಷ್ಟಿçÃಯ ಆದರ್ಶವಾಗಬೇಕು. ನಮ್ಮ ಸಂವಿಧಾನ ಕೂಡ ಸೌಹಾರ್ದತೆಗೆ ಒತ್ತಾಸೆಯಾಗಿದೆ. ನಾವಿರುವ ಈ ಕಾಲಘಟ್ಟದಲ್ಲಿ ಅದಮ್ಯ ಉತ್ಸಾಹದ ಯುವಪೀಳಿಗೆಯಿದೆ. ಸ್ವಾತಂತ್ರ್ಯ ಚಳವಳಿಯ ಕುರಿತು ಯಾವುದೇ ಪೂರ್ವಗ್ರಹ ಮತ್ತು ಸಿನಿಕತನ ಇರಲು ಸಾಧ್ಯವಿಲ್ಲದ ಈ ಪೀಳಿಗೆಯೇ ಸೌಹಾರ್ದದ ಆದರ್ಶಕ್ಕೆ ರಾಷ್ಟಿçÃಯ ನಿರ್ಮಾಣದ ಭಾವನೆಯನ್ನು ಕಸಿಮಾಡುವುದು ಹೆಚ್ಚು ಕ್ಷೇಮಕರ. ಯುವಕರ ನಿಷ್ಕಲ್ಮಶ ಮನಸುಗಳಿಗೆ ಕೆಡುಕಿನ ಮಾಹಿತಿಗಳನ್ನು ತುಂಬುವ ಬದಲು ಅವರ ಖಾಲಿ ಕೈಗಳಿಗೆ ಸುಭದ್ರ ಕೆಲಸ ಕೊಡುವುದು ಅಷ್ಟೇ ಕ್ಷೇಮಕರ. ಎಲ್ಲಿ ಉದ್ಯೋಗದ ಖಾತ್ರಿ ಇರುವುದೋ ಅಲ್ಲಿ ಸಮಾಜಘಾತುಕ ಚಟುವಟಿಕೆಗಳಿಗೆ ಆಸ್ಪದವಿರುವುದಿಲ್ಲ. ಭಾರತದ ಆರೋಗ್ಯಕ್ಕೆ ಸೌಹಾರ್ದತೆಯೆ ಜೀವಸತ್ವ.

 

Donate Janashakthi Media

Leave a Reply

Your email address will not be published. Required fields are marked *