ಗಡೀಪಾರಾದ ಭಾರತೀಯರ ಕೈ-ಕಾಲುಗಳಿಗೆ ಯುಎಸ್‍ ಕೋಳ

ಮುಂದಾದರೂ ಮಾನವೀಯವಾಗಿಘನತೆಯಿಂದ ನಡೆಸಿಕೊಳ್ಳುವಂತೆ

ಖಚಿತ ಪಡಿಸಿ”- ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹ

ನವದೆಹಲಿ: ಯುಎಸ್‍ ನ ಟ್ರಂಪ್‍ ಸರಕಾರ ತಮ್ಮ ದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಗಡಿಪಾರು ಮಾಡಿದ ಭಾರತೀಯ ಪ್ರಜೆಗಳ ಮೊದಲ ಕಂತಿನಲ್ಲಿ 104 ಮಂದಿ ಭಾರತಕ್ಕೆ ಬಂದಿಳಿದ ನಂತರ ಅವರನ್ನು ಈ ಪ್ರಯಾಣದಲ್ಲಿ ಅಮಾನವೀಯವಾಗಿ ನಡೆಸಿಕೊಂಡ ಸುದ್ದಿಗಳು ವರದಿಯಾಗಿವೆ. ಅಲ್ಲದೆ ಅಮೆರಿಕಾದ ಮಿಲಿಟರಿ ವಿಮಾನದೊಳಕ್ಕೆ ಅವರ ಕೈಗಳಿಗೆ ಕೋಳ ಮತ್ತು ಕಾಲುಗಳಿಗೆ ಹಗ್ಗ ಕಟ್ಟಿ ಒಯ್ಯುವ ವೀಡಿಯೋವನ್ನು  ಸ್ವತಃ ಅಲ್ಲಿನ ಗಡಿ ರಕ್ಷಣಾ ಪಡೆಯೇ ಪ್ರಕಟಿಸಿದೆ. ತಾವು “ಕಾನೂನುಬಾಹಿರ ಪರಕೀಯರನ್ನು ಭಾರತಕ್ಕೆ ಯಶಸ್ವಿಯಾಗಿ ಹಿಂದಿರುಗಿಸಿದ್ದೇವೆ, ಮಿಲಿಟರಿ ಸಾಗಾಟವನ್ನು ಬಳಸಿದ ದುವರೆಗಿನ ಅತೀ ದೂರದ ಗಡಿಪಾರು ಹಾರಾಟವಿದು” ಎಂಬ ಹೆಗ್ಗಳಿಕೆ ಗಟ್ಟಿಯಾದ ಮತ್ತು ಅಶುಭಕಾರೀ ಸಂಗೀತದ ಹಿನ್ನೆಲೆಯಲ್ಲಿ ಈ ವೀಡಿಯೋದಲ್ಲಿ ಕೇಳಬರುತ್ತಿದೆ ಎಂದೂ ವರದಿಯಾಗಿದೆ.

ಈ ಬಗ್ಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪ್ರಶ್ನಿಸಿದಾಗ ವಿದೇಶಾಂಗ ಮಂತ್ರಿಗಳು ಹೇಳಿಕೆ ನೀಡಿ ಯುಎಸ್‍ ಸಿಬ್ಬಂದಿ ಗಡಿಪಾರಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಅನುಸರಿಸುವ ವಿಧಾನಗಳನ್ನು ಅನುಸರಿಸಿದ್ದಾರೆ, ಊಟ-ತಿಂಡಿಯ ವೇಳೆಯಲ್ಲಿ ಮತ್ತು ಶೌಚಾಲಯಕ್ಕೆ ಹೋಗುವ ಸಂದರ್ಭದಲ್ಲಿ ಬೇಡಿಗಳನ್ನು ತೆಗೆಯುತ್ತಾರೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ‘ನಿರ್ಬಂಧ’ಗಳು ಇರುವುದಿಲ್ಲ  ಎಂದು ಟ್ರಂಪ್‍ ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುವ ದನಿಯ ಹೇಳಿಕೆ ನೀಡಿದಾಗ ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಾಸ್ತವವಾಗಿ, ಊಟ-ತಿಂಡಿ ಮತ್ತು ಶೌಚಾಲಯ ಕ್ಕೆ ಹೋಗುವಾಗಲೂ ಕೋಳಗಳನ್ನು ತೆಗೆಯಲಿಲ್ಲ, ಮತ್ತು ಮಹಿಳೆಯರು ಮತ್ತು ಮಕ್ಕಳಿಗೂ ಕೋಳಗಳಿಂದ ವಿನಾಯ್ತಿ ನೀಡಿರಲಿಲ್ಲ ಎಂದು ಅಮೃತಸರದಲ್ಲಿ ಬಂದಿಳಿದು ತಂತಮ್ಮ ಊರುಗಳಿಗೆ ಮರಳಿದವರಲ್ಲಿ ಹಲವರು ತಾವು ಪಟ್ಟ ಪಾಡನ್ನು ಹೇಳುತ್ತ ತಿಳಿಸಿದ್ದಾರೆ ಎಂಬ ವರದಿಗಳು  ಪ್ರಕಟವಾಗಿವೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

ಇನ್ನೂ ಗಮನಾರ್ಹ ಸಂಗತಿಯೆಂದರೆ ಬ್ರೆಝಿಲ್ ,ಕೊಲಂಬಿಯಾ ಮತ್ತು ಮೆಕ್ಸಿಕೊ ತಮ್ಮ ಪ್ರಜೆಗಳನ್ನು ಈ ರೀತಿ ಮಿಲಿಟರಿ ವಿಮಾನದಲ್ಲಿ ಕಳಿಸುವುದನ್ನು ಪ್ರತಿಭಟಿಸಿದ್ದಾರೆ ಎಂಬ ಸುದ್ದಿಗಳೂ ಬಂದಿವೆ. ಇನ್ನೊಂದು ವರದಿಯ ಪ್ರಕಾರ ಕಳೆದ ಎರಡು ವಾರಗಳಲ್ಲಿ ಗಡೀಪಾರಾದ ವಿದೇಶಿ ಪ್ರಜೆಗಳನ್ನು ವಾಪಾಸು ಕಳಿಸಲು ಮಿಲಿಟರಿ  ವಿಮಾನಗಳನ್ನು ಬಳಸಿದ್ದು ಆರು ಬಾರಿ ಮಾತ್ರ. ಅವನ್ನು ಕಳಿಸಿದ್ದು ಹೊಂಡುರಾಸ್, ಗ್ವಾಟೆಮಾಲ, ಇಕ್ವೆಡೋರ್‍ ಮತ್ತು ಪೆರು ಗೆ. ಪೆರು ಕೂಡ ಇದು ಒಂದು ‘ಅಪವಾದದ ಪ್ರಕರಣ’ ಎಂದು ಹೇಳಿ ಇದನ್ನು ಸ್ವೀಕರಿಸಿತು. ವಿಶ್ವಗುರು ಎಂದು ಹೇಳಿಕೊಳ್ಳುವ ಭಾರತ ಈಗ ಈ  ವಿಷಯದಲ್ಲಿ ಸಣ್ಣ ದೇಶಗಳ ಸಾಲಿಗೆ ಸೇರಿದಂತಾಗಿದೆ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಭಾರತ ಸರಕಾರದ ನಡೆಯನ್ನು ಖಂಡಿಸಿವೆ.

ನಮ್ಮಪ್ರಧಾನಿಗಳು ಯುಎಸ್‍ ಅಧ್ಯಕ್ಷರೊಡನೆ ಕಳೆದ ವಾರ ಟೆಲಿಫೋನ್‍ ಸಂವಾದ ನಡೆಸಿದಾಗ ಎರಡೂ ಕಡೆಗಳ ಕಲ್ಯಾಣವನ್ನು ಚರ್ಚಿಸಬೇಕು ಎಂದಿದ್ದರು ಮತ್ತು ಫೆಬ್ರುವರಿ 12ರಂದು ಯುಎಸ್‍ಗೆ ಭೇಟಿ ನೀಡುವವರಿದ್ದರು. ಆದರೆ ಈ ನಡುವೆಯೇ ಭಾರತದ ಅಕ್ರಮ ವಲಸಿಗರು ಎಂಬವರನ್ನು ವಾಪಾಸು ಕಳಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಲು ಭಾರತೀಯ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದೂ ವರದಿಯಾಗಿದೆ.

ಮೋದಿ ಸರಕಾರದ ಅಂಜುಬುರುಕ  ನಿಲುವು-ಸಿಪಿಐ(ಎಂ)

ಯುಎಸ್‍ಗೆ  ಅಕ್ರಮವಾಗಿ ಪ್ರವೇಶಿಸಿದ್ದ 104 ಭಾರತೀಯರನ್ನು ಯುಎಸ್‍ ಅಧಿಕಾರಿಗಳು ಗಡೀಪಾರು ಮಾಡಿದ ರೀತಿ ,ಈ ಜನರನ್ನು ಅಮೆರಿಕದ ಮಿಲಿಟರಿ ವಿಮಾನದಲ್ಲಿ ಒಂದು ದೀರ್ಘ ಪ್ರಯಾಣದಲ್ಲಿ  ಕೈಕೋಳ ಹಾಕಿ ಅವರ ಚಲನವಲನವನ್ನು ಸೀಮಿತಗೊಳಿಸಿದ್ದು ಶೋಚನೀಯ ಮತ್ತು ಸ್ವೀಕಾರಾರ್ಹವಲ್ಲ   ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.

ತನ್ನ ನಾಗರಿಕರ ಮೇಲಿನ ಇಂತಹ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸದೆ, ಈ ಮೂಲಕ ಮೋದಿ ಸರ್ಕಾರವು ಒಂದು ಅಂಜುಬುರುಕ ನಿಲುವನ್ನು ತೋರಿಸಿದೆ  ಎಂದಿರುವ ಪೊಲಿಟ್‍ಬ್ಯುರೊ,  ಭಾರತೀಯರ ಇನ್ನೂ ಹೆಚ್ಚಿನ ತಂಡಗಳನ್ನು ಗಡೀಪಾರು ಮಾಡುವ ನಿರೀಕ್ಷೆ ಇರುವುದರಿಂದ,  ಅವರನ್ನು ಮಾನವೀಯವಾಗಿ ಮತ್ತು ಘನತೆಯಿಂದ ನಡೆಸಿಕೊಳ್ಳುವಂತೆ ಸರ್ಕಾರ ಖಚಿತಪಡಿಸಬೇಕು ಎಂದು ಆಗ್ರಹಿಸಿದೆ.

ಇದನ್ನೂ ನೋಡಿ: ಸಾಮಾಜಿಕ ನ್ಯಾಯವನ್ನು ಜಾರಿ ಮಾಡಬೇಕಿರುವ ಸಂಸತ್ತು ಮಾಡುತ್ತಿರುವುದೇನು? ದಿನೇಶ್‌ ಅಮಿನ್‌ ಮಟ್ಟು Janashakthi Media

Donate Janashakthi Media

Leave a Reply

Your email address will not be published. Required fields are marked *