ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತುಗಳನ್ನು ಇತ್ತೀಚೆಗೆ ನಿಷೇಧಿಸಲಾಗಿದ್ದು, ಈರುಳ್ಳಿ ರಫ್ತಿನ ಮೇಲೆ 40% ಸುಂಕವನ್ನು ವಿಧಿಸಲಾಗಿದೆ ಸಕ್ಕರೆ
ನವದೆಹಲಿ: ಮಳೆ ಕೊರತೆಯಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಇದರ ಪರಿಣಾಮ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ಮುಂದಿನ ಋತುವಿನಲ್ಲಿ ಭಾರತವು ಸಕ್ಕರೆ ರಫ್ತುಗಳನ್ನು ನಿಷೇಧಿಸುವ ಸಾಧ್ಯತೆಯಿದೆ ಎಂದು ಮೂರು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕಬ್ಬು ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಸರಾಸರಿಗಿಂತ 50%ಕ್ಕಿಂತ ಕಡಿಮೆಯಾಗಿದೆ.
ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತವು ಸಕ್ಕರೆ ರಫ್ತಿನ ಮೇಲಿನ ನಿಷೇಧ ಮಾಡಲಿದೆ. ಪರಿಣಾಮವಾಗಿ ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಾಗುವ ಸಂಭವವಿದೆ. ಯಾಕೆಂದರೆ, ವಿಶ್ವದಲ್ಲೆ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಅಲ್ಲದೆ, ವಿಶ್ವದಲ್ಲೆ ಅತೀ ಹೆಚ್ಚು ಸಕ್ಕರೆ ರಫ್ತು ಮಾಡುವ 2ನೇ ಅತೀ ದೊಡ್ಡ ದೇಶವಾಗಿದೆ.
ಇದನ್ನೂ ಓದಿ: ಲಾಂಗ್ ಹಿಡಿದುಕೊಂಡು ಬಂದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ ವಿದ್ಯಾರ್ಥಿ!
ಮುಂಬರುವ 2023/24 ಋತುವಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು 31.7 ಮಿಲಿಯನ್ ಟನ್‌ಗಳಿಂದ 3.3% ದಷ್ಟು ಇಳಿಕೆ ಕಾಣಲಿದೆ ಎನ್ನಲಾಗಿದೆ. ಭಾರತವು ಪ್ರಸಕ್ತ ಋತುವಿನಲ್ಲಿ ಕೇವಲ 6.1 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಗಿರಣಿಗಳಿಗೆ ಅನುಮತಿ ನೀಡಿದೆ. ಈ ಹಿಂದಿನ ಋತುವಿನಲ್ಲಿ 11.1 ಮಿಲಿಯನ್ ಟನ್‌ಗಳನ್ನು ರಫ್ತು ಮಾಡಲು ಅನುಮತಿ ನೀಡಲಾಗಿತ್ತು.
ಈ ಬೆಳವಣಿಗೆಗಳ ಮಧ್ಯೆ, ಭಾರತೀಯ ಅಧಿಕಾರಿಗಳು ಸ್ಥಳೀಯವಾಗಿ ಅಗತ್ಯವಿರುವ ಸಕ್ಕರೆ ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ಆಹಾರ ಹಣದುಬ್ಬರ ಉಂಟಾಗುವ ಸಂಭವವಿದ್ದು, ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ದೇಶದೊಳಗೆ ಸಾಕಷ್ಟು ಸರಬರಾಜು ಮತ್ತು ಸ್ಥಿರ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.
“ನಮ್ಮ ಪ್ರಾಥಮಿಕ ಗಮನವು ಸ್ಥಳೀಯವಾಗಿ ಅಗತ್ಯವಿರುವ ಸಕ್ಕರೆಯನ್ನು ಪೂರೈಸುವುದು ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಅನ್ನು ಉತ್ಪಾದಿಸುವುದು. ಮುಂಬರುವ ಋತುವಿನಲ್ಲಿ ರಫ್ತು ಕೋಟಾಗಳಿಗೆ ಸಾಕಷ್ಟು ಸಕ್ಕರೆ ಹಂಚಿಕೆ ಮಾಡಿರುವುದಿಲ್ಲ” ಎಂದು ಸರ್ಕಾರಿ ಮೂಲವು ಸುದ್ದಿ ಸಂಸ್ಥೆಗೆ ತಿಳಿಸಿದೆ.
ಇದನ್ನೂ ಓದಿ: ದೇಶದ ನಂಬರ್ 1 ಭಷ್ಟ್ರಾಚಾರಿ ಇಲಾಖೆಯಾಗಿ ಹೊರಹೊಮ್ಮಿದ ಕೇಂದ್ರ ಗೃಹ ಸಚಿವಾಲಯ!
ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತುಗಳನ್ನು ಇತ್ತೀಚೆಗೆ ನಿಷೇಧಿಸಲಾಗಿತ್ತು. ಜೊತೆಗೆ ಈರುಳ್ಳಿ ರಫ್ತಿನ ಮೇಲೆ 40% ಸುಂಕವನ್ನು ವಿಧಿಸಲಾಗಿತ್ತು. ಇದೀಗ ದೇಶದಿಂದ ಸಕ್ಕರೆ ರಫ್ತುಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯ ಬಗ್ಗೆ ವರದಿಯಾಗುತ್ತಿದೆ. ಮುಂಬರುವ ರಾಜ್ಯ ಚುನಾವಣೆಗಳ ಹಿನ್ನಲೆಯಲ್ಲಿ ಆಹಾರ ವಸ್ತುಗಳ ಬೆಲೆಗಳನ್ನು ನಿರ್ವಹಿಸುವ ಪ್ರಯತ್ನಗಳ ಭಾಗವಾಗಿ ಸರ್ಕಾರದ ರಫ್ತು ನಿಷೇಧ ಕೈಗೊಂಡಿದೆ ಎಂದು ಕೂಡಾ ಹೇಳಲಾಗುತ್ತಿದೆ.
ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, “ಯಾವುದೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದರೆ ಇಲ್ಲಿ ಅವುಗಳ ಕೊರೆತೆಯಾಗಿ ಸಹಜವಾಗಿ ಬೆಲೆ ಹೆಚ್ಚಳವಾಗುತ್ತದೆ. ಈ ಬೆಲೆಯೇರಿಕೆ ತಡೆಯಲು ರಫ್ತನ್ನು ನಿಲ್ಲಿಸಲಾಗುತ್ತದೆ. ಸಕ್ಕರೆ ರಫ್ತು ನಿಷೇಧವಾಗುತ್ತಿರುವುದರ ಹಿಂದೆ ಬೆಲೆಯೇರಿಕೆ ತಡೆಯುವ ಉದ್ದೇಶವಿದೆ. ಅದರ ಹಿಂದೆ ಚುನಾವಣೆಯ ನೆರಳಿದೆ. ಸಕ್ಕರೆ ರಫ್ತು ನಿಂತರೆ ನೇರ ಹೊಡೆತ ಬೀಳುವುದು ರೈತರ ಮೇಲೆಯಾಗಿದೆ” ಎಂದು ಹೇಳಿದರು.
ವಿಡಿಯೊ ನೋಡಿ: ಸೌಜನ್ಯ ಸಾವಿನ ರಹಸ್ಯ : ಭಾಗ 3 – ಸಂತೋಷ್ ರಾವ್ ಮೈ ಮೇಲಿನ ಗಾಯಗಳು ಹಾಗೂ ಬಣ್ಣ ಬಣ್ಣದ ಕಥೆಗಳುJanashakthi Media