ಮಿಲಿಟರಿ ಮೈತ್ರಿಕೂಟದತ್ತ ಜಾರುತ್ತಿರುವ ಭಾರತ

ಪ್ರಕಾಶ್ ಕಾರತ್

ಜಗತ್ತಿನಲ್ಲಿ ಬಹುಪಕ್ಷೀಯತೆ ಹೆಚ್ಚುತ್ತಿರುವಾಗ ಮತ್ತು ಅಮೆರಿಕದ ಮಿತ್ರರಾಗಿರುವ ಮಧ್ಯಮ ಪ್ರಮಾಣದ ಬಲಿಷ್ಠ ದೇಶಗಳು ಕೂಡ ತಮ್ಮ ಮಿಲಿಟರಿ ಕಾರ್ಯತಂತ್ರದ ಸ್ವಾಯತ್ತೆಯನ್ನು ಪ್ರತಿಪಾದಿಸಲು ಬಯಸುತ್ತಿರುವಾಗ, ಅಮೆರಿಕ ನೇತೃತ್ವದ ಕಾರ್ಯತಂತ್ರಾತ್ಮಕ ಮತ್ತು ಭದ್ರತಾ ಗುಂಪುಗಳಲ್ಲಿ ಭಾರತ ಸಿಕ್ಕಿ ಹಾಕಿಕೊಳ್ಳುವುದು ದೂರದೃಷ್ಟಿಯ ಕೊರತೆಯ ಪ್ರತೀಕವಾಗಿದೆ.

ಅಮೆರಿಕ, ಜಪಾನ್, ಆಸ್ಟೆಲಿಯಾ ಮತ್ತು ಭಾರತ-ಹೀಗೆ ನಾಲ್ಕು ದೇಶಗಳನ್ನು ಒಳಗೊಂಡ ಕೂಟ ಕ್ವಾಡ್, ನಿಧಾನಕ್ಕೆ ಒಂದು ಭದ್ರತಾ ಮೈತ್ರಿಕೂಟವಾಗಿ ರೂಪುಗೊಳ್ಳುತ್ತಿದೆ. ವಾಸ್ತವವಾಗಿ ಕೂಟದ ಮೂಲ ಹೆಸರು ಚತುಷ್ಪಕ್ಷೀಯ ಭದ್ರತಾ ಮಾತುಕತೆ (ಕ್ವಾಡ್ರಿಲೇಟರಲ್ ಸೆಕ್ಯುರಿಟಿ ಡೈಲಾಗ್) ಎಂದಾಗಿದ್ದು ಮೂಲ ಹೆಸರಿಗೆ ತಕ್ಕಂತೆ ಭದ್ರತಾ ಮೈತ್ರಿಕೂಟವಾಗಿ ರೂಪುಗೊಳ್ಳುವತ್ತ ಸಾಗಿದೆ. ನಾಲ್ಕು ಕ್ವಾಡ್ ಸದಸ್ಯ ದೇಶಗಳ ಮಿಲಿಟರಿ ಮುಖ್ಯಸ್ಥರ ಸಭೆ ಕ್ಯಾಲಿಫೋರ್ನಿಯಾದ ಸನ್ನಿಲ್ಯಾಂಡ್ಸ್ನಲ್ಲಿ ಮೇ ೧೫ರಿಂದ ೧೭ರ ವರೆಗೆ ನಡೆದಿದ್ದು ಭದ್ರತಾ ಆಯಾಮಕ್ಕೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಭಾರತದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಸಭೆಯಲ್ಲಿ ಭಾಗವಹಿಸಿದ್ದರು. ಇಂಡೋ-ಪೆಸಿಫಿಕ್ ಕಮಾಂಡ್‌ನ ಕಮಾಂಡರ್, ಅಡ್ಮಿರಲ್ ಜಾನ್ ಸಿ ಅಕ್ವಿಲಿನೋ ಅಮೆರಿಕವನ್ನು ಪ್ರತಿನಿಧಿಸಿದ್ದರು.

ಜಪಾನ್‌ನ ಹಿರೋಷಿಮಾದಲ್ಲಿ ನಡೆಯಲಿರುವ ಜಿ-೭ ಶೃಂಗಸಭೆಯ ಸಂದರ್ಭದಲ್ಲಿ ಮಿಲಿಟರಿ ಮುಖ್ಯಸ್ಥರ ಈ ಮೊದಲ ಸಭೆ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಸ್ಟೆಲಿಯಾ ಪ್ರವಾಸವನ್ನು ರದ್ದುಪಡಿಸಿದ್ದರಿಂದ, ಮೇ ೨೪ರಂದು ಆಸ್ಟೆಲಿಯಾದಲ್ಲಿ ನಡೆಯಬೇಕಿದ್ದ ಕ್ವಾಡ್ ಶೃಂಗಸಭೆಯನ್ನು ರದ್ದುಪಡಿಸಲಾಗಿದೆ. ಜಿ-೭ ಶೃಂಗದ ಸಂದರ್ಭದಲ್ಲೇ ಕ್ವಾಡ್ ಶೃಂಗವನ್ನೂ ನಡೆಸಲು ಯೋಜಿಸಲಾಗಿದ್ದು ಇದು ನಾಲ್ಕೂ ದೇಶಗಳ ನಾಯಕರ ಮೂರನೇ ಮುಖಾಮುಖಿ ಸಭೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅದರಲ್ಲಿ ಭಾಗವಹಿಸಲಿದ್ದಾರೆ.ಅಮೆರಿಕದ ಬಗ್ಗೆ ಹೇಳುವುದಾದರೆ, ಕ್ವಾಡ್ ಕೂಟ ಚೀನಾದ ವಿರುದ್ಧ ನಿರ್ದೇಶಿತ ಭದ್ರತಾ ಮೈತ್ರಿಕೂಟ ಆಗಬೇಕೆಂಬ ಬಯಕೆಯನ್ನು ಆರಂಭದಿಂದಲೇ ಹೊಂದಿದೆ. ಭಾರತ ಕ್ವಾಡ್ ಸೇರುವಾಗ, `ಸ್ವತಂತ್ರ ಹಾಗೂ ಮುಕ್ತ ಇಂಡೋ-ಪೆಸಿಫಿಕ್’ (ಹಿಂದೂ ಮಹಾಸಾಗರ-ಶಾಂತಸಾಗರ), ಸಾಗರಯಾನ ಭದ್ರತೆ ಮತ್ತು ಮಾನವೀಯ ಹಾಗೂ ದುರಂತ ಪರಿಹಾರಗಳ ಕಾರ್ಯಾಚರಣೆ’ ಮುಂತಾದ ಸಾರ್ವತ್ರಿಕ ಸೂತ್ರಗಳ ಮರೆಯನ್ನು ಬಳಸಿಕೊಂಡಿತ್ತು.

೨೦೨೨ರ ಫೆಬ್ರವರಿಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್, `ಕ್ವಾಡ್ ಯಾವುದೋ ಒಂದು ಉದ್ದೇಶಕ್ಕಾಗಿದೆಯೇ ಹೊರತು ಯಾರ ವಿರುದ್ಧವೂ ಅಲ್ಲ’ ಎಂದು ಹೇಳಿದ್ದರು. ಇದು ಕೇವಲ ನಿಷ್ಪಲ ಮಾತಷ್ಟೇ ಆಗಿದೆ. ಚೀನಾವನ್ನು ಎದುರಿಸಲು ಹಾಗೂ ಪ್ರತ್ಯೇಕಿಸುವ ಅಮೆರಿಕದ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕೆ ಭಾರತ ಬಲಿಯಾಗಿದೆ ಎನ್ನುವುದು ವಾಸ್ತವ ಸಂಗತಿಯಾಗಿದೆ. ಮಿಲಿಟರಿ ಸಹಕಾರದ ಇನ್ನೊಂದು ವಿಸ್ತರಣೆಯಾಗಿ ಈ ವರ್ಷ ಆಗಸ್ಟ್ನಲ್ಲಿ ನಡೆಯುವ ಮಲಬಾರ್ ನೇವಿ ಸಮರ ಕಸರತ್ತಿನಲ್ಲಿ ಆಸ್ಟೆಲಿಯಾವನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.
ಕ್ಯಾಲಿಫೋರ್ನಿಯಾ ಸಭೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಬಗ್ಗೆ ಮಾಧ್ಯಮದವರಿಗೆ ವಿವರಿಸಿದ ಭಾರತದ ಭದ್ರತಾ ವ್ಯವಸ್ಥೆಯ ಅನಾಮಿಕ ಅಧಿಕಾರಿಯೊಬ್ಬರು, ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನಡೆ ಹಾಗೂ ಗಡಿ ವಿವಾದವನ್ನು ದ್ವಿಪಕ್ಷೀಯವಾಗಿ ಬಗೆಹರಿಸಲು ಮನಸ್ಸು ಮಾಡದಿರುವುದನ್ನು ಗಮನಿಸಿದರೆ ಭೂಮಿ ಹಾಗೂ ಇಂಡೋ-ಪೆಸಿಫಿಕ್‌ನಲ್ಲಿ ಪಿಎಲ್‌ಎದ ಆಕ್ರಮಣವನ್ನು ನಿಯಂತ್ರಿಸಲು `ಭಾರತ ಕ್ವಾಡ್‌ನಂಥ ಬಹುಪಕ್ಷೀಯ ವೇದಿಕೆಗಳ ನೆರವನ್ನು ಪಡೆಯಲು ನಿರ್ಧರಿಸಬೇಕು’ ಎಂದು ಹೇಳಿದ್ದರು. ಇಂಡೋ-ಪೆಸಿಫಿಕ್ ವಲಯದಲ್ಲಿ ಅಮೆರಿಕ ಮತ್ತದರ ಮಿತ್ರ ದೇಶಗಳೊಂದಿಗೆ ಮಿಲಿಟರಿ ಸಹಕಾರ ಮಾಡಿಕೊಳ್ಳಲು ಇದನ್ನೊಂದು ಸಮರ್ಥನೆಯಾಗಿ ಬಳಸಿಕೊಳ್ಳಲಾಗುತ್ತಿದೆ.

ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಭಾರತವನ್ನು ಸೇರಿಸಿಕೊಳ್ಳುವುದು ಯಾಕೆ ಎನ್ನುವ ಬಗ್ಗೆ ಮತ್ತು ಅದರಲ್ಲಿ ಭಾರತ ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಅಮೆರಿಕ ಯಾವುದೇ ತಕರಾರು ಮಾಡಿಲ್ಲ. ಮೋದಿ ಸರ್ಕಾರ ಅಮೆರಿಕದೊಂದಿಗೆ ಕೈಜೋಡಿಸಿರುವುದು ಇಂಡೋ-ಪೆಸಿಫಿಕ್ ವಲಯದಲ್ಲಿ ಮಾತ್ರವೇ ಅಲ್ಲ; ಪಶ್ಚಿಮ ಏಷ್ಯಾದಲ್ಲಿ ಕೂಡ ಅದು ಚತುಷ್ಪಕ್ಷೀಯ ವ್ಯವಸ್ಥೆಯನ್ನು ಸೇರಿದೆ. ಅದುವೇ ಭಾರತ, ಇಸ್ರೇಲ್ ಮತ್ತು ಇಸ್ರೇಲ್ ಒಳಗೊಂಡ ತಥಾಕಥಿತ ಐ೨-ಯೂ೨ ವ್ಯವಸ್ಥೆ.
ಅಮೆರಿಕದ ಆಶ್ರಯದಲ್ಲಿ ಮೇ ೭ರಂದು ಸೌದಿ ಅರೇಬಿಯಾದಲ್ಲಿ ಸಭೆಯೊಂದು ನಡೆಯಿತು. ಆ ಸಭೆಯಲ್ಲಿ ಸೌದಿ ಪ್ರಧಾನಿ ಮಹಮದ್ ಬಿನ್ ಸಲ್ಮಾನ್ ಅಮೆರಿಕ, ಯುಎಇ ಮತ್ತು ಭಾರತದ ರಾಷ್ಟಿಯ ಭದ್ರತಾ ಸಲಹೆಗಾರರನ್ನು ಭೇಟಿಯಾದರು. ಭಾರತವನ್ನು ಜೋಡಿಸುವ ವಲಯದಲ್ಲಿ ಸಹಕಾರವನ್ನು ಬಲಪಡಿಸುವುದು ಮತ್ತು ಮೂಲಸೌಕರ್ಯವನ್ನು ನಿರ್ಮಿಸುವುದು ಸಭೆಯ ಕಾರ್ಯಸೂಚಿಯಾಗಿತ್ತು. ಚೀನಾದ ಹೆಚ್ಚುತ್ತಿರುವ ಪ್ರಭಾವದಿಂದ ಅಮೆರಿಕಕ್ಕೆ ಚಿಂತೆ ಉಂಟಾಗಿರುವುದು ಮತ್ತು ಚೀನಾದ ರಾಜತಾಂತ್ರಿಕ.

ಮಧ್ಯಪ್ರವೇಶದಿಂದಾಗಿ ಸೌದಿ ಅರೇಬಿಯಾ ಹಾಗೂ ಇರಾನ್ ನಡುವೆ ರಾಜತಾತ್ರಿಕ ಸಂಬಂಧಗಳು ಹಾಗೂ ಬಾಂಧವ್ಯ ಮರುಸ್ಥಾಪನೆಯಾಗಿದ್ದು ಕೂಡ ಅಮೆರಿಕಕ್ಕೆ ತಲೆಬಿಸಿ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ನೋಡಬೇಕಾಗಿದೆ. ಚೀನಾದ ವಿರುದ್ಧ ಅಮೆರಿಕದ ಆಕ್ರಮಣಕಾರಿ ತಂತ್ರಗಳಲ್ಲಿ ಭಾರತವನ್ನು ಸೇರಿಸಿಕೊಳ್ಳುವ ಬೆಳವಣಿಗೆಯನ್ನು ಕಾರ್ಪೊರೇಟ್ ಮಾಧ್ಯಮ ಮತ್ತು ರಕ್ಷಣಾ ವಿಶ್ಲೇಷಕರು ಕೊಂಡಾಡುತ್ತಿದ್ದಾರೆ. ಭಾರತ-ಅಮೆರಿಕ ಮೈತ್ರಿಯಿಂದ ದೇಶಕ್ಕೆ ಲಾಭವಾಗುತ್ತದೆ ಎಂಬ ಹಳಸಲು ಮಾತುಗಳ ಪ್ರತಿಪಾದನೆಗೆ ವಿರುದ್ಧವಾಗಿ ಪರ್ಯಾಯವಾದ ಚರ್ಚೆಗೆ ಸಾರ್ವಜನಿಕ ವಲಯದಲ್ಲಿ ಯಾವುದೇ ಸ್ಥಾನ ಸಿಗುತ್ತಿಲ್ಲ. ಇಂಡೋ-ಪೆಸಿಫಿಕ್ ವಲಯದಲ್ಲಿ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದೊಂದೇ ಅಮೆರಿಕದ ಆಸಕ್ತಿಯಾಗಿದ್ದು ಅದನ್ನು ಬಲವಾಗುತ್ತಿರುವ ಚೀನಾ ವಿರೋಧಿಸುತ್ತಿದೆ ಎಂಬ ವಿಚಾರವನ್ನು ಜನರು ಮನವರಿಕೆ ಮಾಡಿಕೊಳ್ಳುವುದು ಅಗತ್ಯ. ಜಗತ್ತಿನಲ್ಲಿ ಬಹುಪಕ್ಷೀಯತೆ ಹೆಚ್ಚುತ್ತಿರುವಾಗ ಮತ್ತು ಅಮೆರಿಕದ ಮಿತ್ರರಾಗಿರುವ ಮಧ್ಯಮ ಪ್ರಮಾಣದ ಬಲಿಷ್ಠ ದೇಶಗಳು ಕೂಡ ತಮ್ಮ ಮಿಲಿಟರಿ ಕಾರ್ಯತಂತ್ರದ ಸ್ವಾಯತ್ತೆಯನ್ನು ಪ್ರತಿಪಾದಿಸಲು ಬಯಸುತ್ತಿರುವಾಗ, ಅಮೆರಿಕ ನೇತೃತ್ವದ ಕಾರ್ಯತಂತ್ರಾತ್ಮಕ ಮತ್ತು ಭದ್ರತಾ ಗುಂಪುಗಳಲ್ಲಿ ಭಾರತ ಸಿಕ್ಕಿ ಹಾಕಿಕೊಳ್ಳುವುದು ದೂರದೃಷ್ಟಿಯ ಕೊರತೆಯ ಪ್ರತೀಕವಾಗಿದೆ. ಚೀನಾದೊಂದಿಗೆ ಭಾರತದ ಸಮಸ್ಯೆಯಿರುವುದು ಮೂಲಭೂತವಾಗಿ ಗಡಿ ವಿಚಾರದಲ್ಲಿ. ಹಾಗೂ ಚೀನಾದ ಇತ್ತೀಚಿನ ಕ್ರಮಗಳಿದಾಗಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಸೌಹಾರ್ದ ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದೆ. ಇವು ಉಭಯ ದೇಶಗಳು ಮಾತುಕತೆ ನಡೆಸಿ ಪರಸ್ಪರ ಬಗೆಹರಿಸಿಕೊಳ್ಳಬೇಕಾದ ವಿಚಾರಗಳಾಗಿವೆ. ಅದನ್ನು ತಾಳ್ಮೆ ಮತ್ತು ದೃಢ ಸಂಕಲ್ಪದಿಂದ ಸಾಧಿಸಬೇಕಾಗುತ್ತದೆ.

ಚೀನಾದೊಂದಿಗೆ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳನ್ನು ದುರ್ಬಲಗೊಳಿಸುವುದರಿಂದ ಭಾರತಕ್ಕೆ ಯಾವುದೇ ಲಾಭವಾಗುವುದಿಲ್ಲ. ಜಾಗತಿಕ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳಲ್ಲಿ ಚೀನಾ ಒಂದು ಪ್ರಮುಖ ಪಾತ್ರಧಾರಿ ಎನ್ನುವುದನ್ನು ಗಮನಿಸಿದಾಗ ಇದು ನಿಜವಾಗಿದೆ. ಗಲ್ವಾನ್ ಕಣಿವೆ ಘರ್ಷಣೆಗಳ ನಂತರ, ಸಂಬಂಧದಲ್ಲಿ ಉಂಟಾದ ವ್ಯತ್ಯಯದ ನಂತರವೂ ದ್ವಿಪಕ್ಷೀಯ ವಾಣಿಜ್ಯ ಹೆಚ್ಚಾಗಿದೆ. ಅದು ೨೦೨೨ರಲ್ಲಿ ೧೩೫.೯೮ ಶತಕೋಟಿ ಡಾಲರ್ ಆಗಿತ್ತು. ಸ್ವತಃ ಅಮೆರಿಕವೇ ಚೀನಾದ ಆರ್ಥಿಕತೆಯಿಂದ `ಡಿಕಪ್ಲಿಂಗ್’ (ಬಾಂಧವ್ಯ ಕಡಿತ) ಕುರಿತು ಮಾತನಾಡುವುದನ್ನು ನಿಲ್ಲಿಸಿದೆ. ಅದರ ಬದಲು ಆರ್ಥಿಕ ಸಂಬಂಧಗಳನ್ನು `ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸುವ’ ವಿಚಾರದ ಬಗ್ಗೆ ಮಾತನಾಡುತ್ತಿದೆ. ಚೀನಾದೊಂದಿಗೆ ಆರ್ಥಿಕ ಸಂಬಂಧ ಕಡಿದುಕೊಳ್ಳಬೇಕೆಂಬ ಭಾರತದ ಆಡಳಿತ ವ್ಯವಸ್ಥೆಯ ಕೆಲವು ವಿಭಾಗಗಳ ಚಿಂತನೆ ನಿಶ್ಚಯವಾಗಿಯೂ ಸ್ವಯಂ-ಹಾನಿಗೆ ಕಾರಣವಾಗಲಿದೆ. ಅಪಾರ ಆರ್ಥಿಕ ಅವಕಾಶಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ದೊಡ್ಡ ದೇಶವಾಗಿ ಭಾರತ, ಇತರ ಎಲ್ಲ ಪ್ರಮುಖ ದೇಶಗಳು ಮತ್ತು ವಲಯಗಳೊಂದಿಗೆ ಫಲಪ್ರದ ಸಂಬಂಧವನ್ನು ಬೆಳೆಸಿಕೊಂಡು ಬಹುಧ್ರುವೀಯ ಅಭಿವೃದ್ಧಿಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ಸ್ಥಾನದಲ್ಲಿದೆ. ತನ್ನದೇ ಹಿತಾಸಕ್ತಿಗಳ ಮುನ್ನಡೆಗೆ ಇದು ಅಗತ್ಯವಾಗಿದೆ. ಅಮೆರಿಕದ ರಥಕ್ಕೆ ಕಟ್ಟಿಕೊಳ್ಳುವುದು ಖಂಡಿತವಾಗಗಿಯೂ ಮುನ್ನಡೆ ಸಾಧಿಸುವ ಮಾರ್ಗ ಅಲ್ಲ.

Donate Janashakthi Media

Leave a Reply

Your email address will not be published. Required fields are marked *