ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟ ಟವಾದ ಇಂಡಿಯಾ ಬ್ಲಾಕ್‌ನ ಇತ್ತೀಚಿನ ಸಭೆಯಲ್ಲಿ, 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆಯನ್ನು ಶೀಘ್ರವಾಗಿ ಅಂತಿಮಗೊಳಿಸಬೇಕೆಂದು ನಿರ್ಧರಿಸಲಾಯಿತು. ದೆಹಲಿಯಲ್ಲಿ ನಡೆದ ಸಭೆಯು ಸೀಟು ಹಂಚಿಕೆಯಲ್ಲಿ ಒಮ್ಮತವನ್ನು ತಲುಪುವುದು ಪ್ರಮುಖ ವಿಚಾರವಾಗಿದೆ ಎಂದು ಪ್ರತಿಪಾದಿಸಲಾಗಿದೆ. ಆದರೆ ಈ ವಿಚಾರ ಕಾಂಗ್ರೆಸ್‌ಗೆ ಕಠಿಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಲೋಕಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಹೇಳಿದೆ. ಅದರ ಜೊತೆಗೆ ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಏಕಾಂಗಿಯಾಗಿ ಸ್ಪರ್ಧಸುವ ಬಗ್ಗೆ ಪ್ರತಿಪಾದಿಸುತ್ತಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆ (ಯುಬಿಟಿ) 23 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಚರ್ಚೆಗಳನ್ನು ಮುನ್ನಲೆಗೆ ತಂದಿದೆ.
ಇದನ್ನೂ ಓದಿ: ರಾಯರೆಡ್ಡಿ, ಬಿ.ಆರ್.ಪಾಟೀಲ್, ದೇಶಪಾಂಡೆಗೆ ‘ಸಂಪುಟ ದರ್ಜೆ ಸ್ಥಾನಮಾನ’
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಏಕಾಂಗಿ ಹೋರಾಟ
2024 ರ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಟಿಎಂಸಿ ಏಕಾಂಗಿಯಾಗಿ ಹೋರಾಡಲಿದೆ ಎಂದು ಮಮತಾ ಬ್ಯಾನರ್ಜಿ ಗುರುವಾರ ಘೋಷಿಸಿದ್ದು, ಆದರೆ ಪಕ್ಷವು ಇಂಡಿಯಾ ಒಕ್ಕೂಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಇರಲಿದೆ ಎಂದಿದ್ದಾರೆ. ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, “ಇಂಡಿಯಾ ಒಕ್ಕೂಟ ದೇಶಾದ್ಯಂತ ಇರುತ್ತದೆ, ಬಂಗಾಳದಲ್ಲಿ ಟಿಎಂಸಿ ಬಿಜೆಪಿಯನ್ನು ಸೋಲಿಸುತ್ತದೆ. ನೆನಪಿಡಿ, ಬಂಗಾಳದಲ್ಲಿ ಟಿಎಂಸಿ ಮಾತ್ರ ಬಿಜೆಪಿಗೆ ಪಾಠ ಕಲಿಸುತ್ತದೆ ವಿನಃ ಬೇರೆ ಯಾವುದೆ ಪಕ್ಷವಲ್ಲ” ಎಂದು ಅವರು ಹೇಳಿದ್ದಾರೆ.
ಅವರ ಈ ಹೇಳಿಕೆಗಳು ರಾಜ್ಯದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಯಾವುದೇ ಮೈತ್ರಿ ಅಥವಾ ಕಾಂಗ್ರೆಸ್ ಅಥವಾ ಎಡರಂಗದೊಂದಿಗೆ ಸೀಟು ಹಂಚಿಕೆ ಇರುವುದಿಲ್ಲ ಎಂಬ ಸ್ಪಷ್ಟ ಚಿತ್ರಣವನ್ನು ನೀಡಿದೆ.
ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್ 2019 ರ ಲೋಕಸಭೆಗೆ ಏಕಾಂಗಿಯಾಗಿ ಸ್ಪರ್ಧಿಸಿತ್ತು, ಆದರೆ ನಂತರ ಹೆಚ್ಚಿನ ಕಾಂಗ್ರೆಸ್ ನಾಯಕರು ಸಿಪಿಐ(ಎಂ) ನೊಂದಿಗೆ ಸೀಟು ಹಂಚಿಕೆಗೆ ಬಗ್ಗೆ ಮಾತನಾಡಿದ್ದರು. ಅದಾಗ್ಯೂ ಕಾಂಗ್ರೆಸ್ ಕೇಂದ್ರ ನಾಯಕತ್ವವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತ್ತು. ಇದರ ನಂತರ 42 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ 23 ಸ್ಥಾನಗಳಿಗೆ ಬೇಡಿಕೆ
2024 ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರವು ಕಾಂಗ್ರೆಸ್‌ಗೆ ಮಾತ್ರವಲ್ಲದೆ ಇಡೀ ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಾದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಕ್ಕೂ ಪ್ರಮುಖ ರಾಜ್ಯವಾಗಿದೆ. ಈ ನಡುವೆ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಹಲವು ತಂತ್ರಗಳನ್ನು ರೂಪಿಸುತ್ತಿದೆ.
ಮಣಿಪುರದಿಂದ ಪ್ರಾರಂಭವಾಗುವ ಪಕ್ಷದ ಮುಂಬರುವ ಭಾರತ್ ನ್ಯಾಯ್ ಯಾತ್ರೆಯು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲದೆ, ಗುರುವಾರ, ನಾಗ್ಪುರದಲ್ಲಿ ಕಾಂಗ್ರೆಸ್ ತನ್ನ 139 ನೇ ಸಂಸ್ಥಾಪನಾ ದಿನವನ್ನು ರಾಜ್ಯದಲ್ಲಿ ಶಕ್ತಿ ಪ್ರದರ್ಶನದ ಮೂಲಕ ಆಚರಿಸಿತು. ಆದಾಗ್ಯೂ, ಶಿವಸೇನೆ (ಯುಬಿಟಿ), ಲೋಕಸಭಾ ಸ್ಥಾನಗಳಲ್ಲಿ ಪ್ರಮುಖ ಪಾಲು ಹೊಂದಿದ್ದು, ಪಕ್ಷವು 23 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. ಆದರೆ ಈ ಬೇಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಈ ಬೇಡಿಕೆಯನ್ನು “ಅತಿ” ಎಂದು ಬಣ್ಣಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಪಕ್ಷಗಳ ನಡುವೆ ಹೊಂದಾಣಿಕೆಯ ಅಗತ್ಯವಿದೆ ಎಂದು ಹೇಳಿದ್ದಾರೆ. “ಪ್ರತಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿರುವಾಗ, ಶಿವಸೇನೆಯ 23 ಸ್ಥಾನಗಳ ಬೇಡಿಕೆ ಪ್ರಸ್ತುತ ಪರಿಸ್ಥಿತಿಗಳನ್ನು ಗಮನಿಸಿದರೆ ವಿಪರೀತವಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ತಪ್ಪಿತಸ್ಥ: ಕೋರ್ಟ್ ಆದೇಶ
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಒಟ್ಟಾಗಿ ಸ್ಪರ್ಧಿಸಿದ್ದವು. 48 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ 1 ಸ್ಥಾನವನ್ನು ಗೆದ್ದರೆ, ಎನ್‌ಸಿಪಿ 4 ಸ್ಥಾನಗಳನ್ನು ಇಲ್ಲಿ ಗೆದ್ದಿದೆ. 2019ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಸ್ಪರ್ಧಿಸಿದ್ದವು. ಬಿಜೆಪಿ 23 ಮತ್ತು ಶಿವಸೇನೆ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
AAP ಪಂಜಾಬ್‌ನಲ್ಲಿ ಏಕಾಂಗಿ ಹೋರಾಟ
ಪಂಜಾಬ್‌ನಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಬೇಕೆಂದು ಎಎಪಿ ರಾಜ್ಯ ನಾಯಕರು ಈ ಹಿಂದೆ ಸಾರ್ವಜನಿಕವಾಗಿ ಹೇಳಿದ್ದಾರೆ. ಜೊತೆಗೆ ಡಿಸೆಂಬರ್ 26 ರಂದು ಪಂಜಾಬ್ ಕಾಂಗ್ರೆಸ್‌ನ ಉನ್ನತ ನಾಯಕರೊಂದಿಗೆ ಪಕ್ಷದ ಕೇಂದ್ರ ನಾಯಕತ್ವದ ಸಭೆಯಲ್ಲೂ ಇದೇ ವಿಚಾರವನ್ನು ಪ್ರತಿಪಾದಿಸಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, 13 ಲೋಕಸಭಾ ಸ್ಥಾನಗಳಲ್ಲಿ, ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಎಎಪಿ ಕೇವಲ ಒಂದು ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಮತ್ತೊಂದೆಡೆ, ಡಿಸೆಂಬರ್ 17 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನ ಬಟಿಂಡಾದಲ್ಲಿ ರ‍್ಯಾಲಿ ನಡೆಸಿದ್ದರು. ಈ ವೇಳೆ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಆಡಳಿತಾರೂಢ ಎಎಪಿಗೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. ಈ ಮೂಲಕ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆಗೆ ಯಾವುದೇ ಅವಕಾಶವಿಲ್ಲ ಎಂದು ಸುಳಿವು ನೀಡಿದ್ದರು.
ಇಷ್ಟೆ ಅಲ್ಲದೆ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಂತಹ ಇತರ ರಾಜ್ಯಗಳಲ್ಲಿ ಕೂಡಾ ಕಾಂಗ್ರೆಸ್‌ಗೆ ಇದೇ ರೀತಿಯ ಸೀಟು ಹಂಚಿಕೆ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.
ವಿಡಿಯೊ ನೋಡಿ: ಸಂಸದರನ್ನು ಅಮಾನತು ಮಾಡಿ ಕರಾಳ ಶಾಸನಕ್ಕೆ ಅನುಮೋದನೆ: ನವ ವಸಾಹತೀಕರಣದ ಮತ್ತೊಂದು ರೂಪ!? Janashakthi Media