ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 146 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ವಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದ ನಾಯಕರು ಶುಕ್ರವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಡಿಸೆಂಬರ್ 13 ರಂದು ಸಂಭವಿಸಿದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿವರವಾದ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ವಿಪಕ್ಷದ ಸಂಸದರನ್ನು ಸರ್ಕಾರ ಅಮಾನತು ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅಮಾನತುಗೊಂಡಿರುವ ಎಲ್ಲಾ ಸಂಸದರು, ಸಿಪಿಐನ ಡಿ.ರಾಜಾ, ಸಿಪಿಎಂನ ಸೀತಾರಾಂ ಯೆಚೂರಿ ಸೇರಿದಂತೆ ಹಲವಾರು ನಾಯಕರು ಜಂತರ್ ಮಂತರ್ ಬಳಿ ಜಮಾಯಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಭದ್ರತಾ ವೈಫಲ್ಯ | ರಾಜ್ಯದ ಮತ್ತೊಬ್ಬ ವಶಕ್ಕೆ; ಸಂಸತ್ತಿನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಸಿಐಎಸ್ಎಫ್
ಸರಕಾರವನ್ನು ಗುರಿಯಾಗಿಸಿ ಮಾತನಾಡಿದ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಪ್ರಸ್ತುತ ಅಧಿಕಾರದಲ್ಲಿರುವವರಿಂದ ನಾವು ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ, ಸಂಸತ್ತಿನಲ್ಲಿ ಭದ್ರತಾ ಲೋಪದ ಘಟನೆಗೆ ಬಿಜೆಪಿ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಮಾತನಾಡಿ, “ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಎಂದಾದರೂ ಅಮಾನತುಗೊಳಿಸಲಾಗಿದೆಯೇ? ನಾವು ಗೃಹ ಸಚಿವರಿಂದ ಹೇಳಿಕೆಗೆ ಮಾತ್ರ ಬೇಡಿಕೆ ಇಟ್ಟಿದ್ದೇವೆ” ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್, ”ಸಂಸತ್ತು ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾಗಿದೆ. ಅಲ್ಲಿಗೆ 700ಕ್ಕೂ ಹೆಚ್ಚು ಸಂಸದರು ನೇರವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾಗಿದ್ದಾರೆ. ಸಂಸದರನ್ನು ಅಮಾನ ತುಗೊಳಿಸಿ ಸದನ ನಡೆಸುವ ಹಕ್ಕು ಸರಕಾರಕ್ಕೆ ಇಲ್ಲ. ಈ ಸರಕಾರ ಸಂಪೂರ್ಣ ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 13 ರಂದು, ಶೂನ್ಯ ವೇಳೆಯ ಕಲಾಪದಲ್ಲಿ ಇಬ್ಬರು ಜನರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸಂಸತ್ತಿನಲ್ಲಿ ಹಳದಿ ಬಣ್ಣದ ಹೊಗೆ ಬಾಂಬ್ ಅನ್ನು ಎಸೆದಿದ್ದರು. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಸಂಸತ್ತಿನ ಈ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರಿಂದ ವಿವರವಾದ ಹೇಳಿಕೆಗಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದ ಕನಿಷ್ಠ 146 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ವಿಡಿಯೊ ನೋಡಿ: ಪೂಜಾ ಸ್ಥಳ ಕಾಯ್ದೆ ಜಾರಿಯಾಗಿದ್ದರೂ ಸಹ ಗ್ಯಾನವಾಪಿ,ಶಾಹಿ ಮಸೀದಿಯ ಸಮೀಕ್ಷೆಗೆ ಅನುಮತಿ ಕೊಟ್ಟಿದ್ದು ನ್ಯಾಯಬದ್ಧವೇ?