ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ಆತಂಕ ಹೆಚ್ಚಿದೆ. ದೇಶದಲ್ಲಿ ಪ್ರತಿನಿತ್ಯ ಒಂದು ಲಕ್ಷಕ್ಕಿಂತ ಅಧಿಕ ಕೊವಿಡ್-19 ಪ್ರಕರಣಗಳು ವರದಿಯಾಗುತ್ತಿರುವುದರ ನಡುವೆ ಇಂದಿನಿಂದ ಬೂಸ್ಟರ್ ಡೋಸ್ ಲಸಿಕೆ ವಿತರಣೆ ಆರಂಭವಾಗಿದೆ.
ದೇಶದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೊವಿಡ್-19 ಬೂಸ್ಟರ್ ಡೋಸ್ ನೀಡುವುದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ.
ಡಿಸೆಂಬರ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವಲಯದ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಘೋಷಿಸಿದ್ದರು. ಬೂಸ್ಟರ್ ಡೋಸ್ ಲಸಿಕೆ ವಿತರಣೆ ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಹೀಗಿವೆ.
” ಕೋವಿಡ್ ಲಸಿಕೆಗಳು, ಅವು ಭಾರತ, ಇಸ್ರೇಲ್, ಯುಎಸ್, ಯುರೋಪ್, ಯುಕೆ ಅಥವಾ ಚೀನಾದಿಂದ ಬಂದಿವೆ. ಪ್ರಾಥಮಿಕವಾಗಿ ಈ ಲಸಿಕೆಗಳು ರೋಗವನ್ನು ಮಾರ್ಪಾಡು ಮಾಡುತ್ತವೆಯೇ ವಿನಃ ಸೋಂಕನ್ನು ತಡೆಯುವುದಿಲ್ಲ. ಮುನ್ನೆಚ್ಚರಿಕೆಯ ಡೋಸ್ ಪ್ರಾಥಮಿಕವಾಗಿ ಸೋಂಕಿನ ತೀವ್ರತೆಯನ್ನು ತಗ್ಗಿಸಲು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯನ್ನು ತಗ್ಗಿಸುತ್ತದೆ” ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ.
ಬೂಸ್ಟರ್ ಡೋಸ್ ಕುರಿತು ಕೆಲವು ಅಂಶಗಳು:
ವೈದ್ಯಕೀಯ ಸಿಬ್ಬಂದಿ ಮತ್ತು ಮುಂಚೂಣಿಯ ಕಾರ್ಯಕರ್ತರಲ್ಲದೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಂತಹ ಸಹ-ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯ ಮೇರೆಗೆ “ಮುನ್ನೆಚ್ಚರಿಕೆ ಡೋಸ್” ಅನ್ನು ಪಡೆಯಬಹುದು.
ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಅರ್ಹ ಫಲಾನುಭವಿಗಳು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು.
ಮೊದಲು ಎರಡು ಡೋಸ್ ಪಡೆದುಕೊಂಡ ಕೋವಿಡ್-19 ಲಸಿಕೆಯನ್ನೇ ಫಲಾನುಭವಿಗಳು ಮೂರನೇ ಡೋಸ್ ಆಗಿ ಪಡೆದುಕೊಳ್ಳಬೇಕು. ಇಲ್ಲಿ ಮಿಕ್ಸ್ ಅಂಡ್ ಮ್ಯಾಚ್ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸೀರಂ ಇನ್‌ಸ್ಟಿಟ್ಯೂಟ್‌ನ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ವ್ಯಕ್ತಿಗಳು ಮೂರನೇ ಬಾರಿಯೂ ಅದೇ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್ ಆಗಿ ಪಡೆದುಕೊಳ್ಳಬೇಕು. ಅದೇ ರೀತಿ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಯನ್ನು ಪಡೆದವರಿಗೆ ಅದರ ಮೂರನೇ ಡೋಸ್ ಅನ್ನು ನೀಡಲಾಗುತ್ತದೆ.
ಕೋವಿಡ್-19 ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಳ್ಳುವುದಕ್ಕಾಗಿ ಮೊದಲೇ ಹೆಸರು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ನೇರವಾಗಿ ಲಸಿಕೆ ಕೇಂದ್ರಕ್ಕೆ ತೆರಳಿ ಸಮಯವನ್ನು ನಿಗದಿಗೊಳಿಸಿ ಅರ್ಹ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳಬಹುದು. ಎಲ್ಲ ವಯಸ್ಕರಿಗೆ ಮುನ್ನೆಚ್ಚರಿಕೆ ಲಸಿಕೆ ನೀಡುವ ಬಗ್ಗೆ ಈವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ದೇಶದಲ್ಲಿ ಈಗಾಗಲೇ ಬಹುತೇಕ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಓಮಿಕ್ರಾನ್ ಸೋಂಕಿನಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಹಾನಗರಗಳಲ್ಲಿ ಹೆಚ್ಚಾಗಿ ಮುಂಚೂಣಿ ಕಾರ್ಮಿಕರಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಮೂರನೇ ಡೋಸ್ ಲಸಿಕೆಯು ಒಮಿಕ್ರಾನ್ ರೂಪಾಂತರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯನ್ನು ಶೇಕಡಾ 88ರಷ್ಟು ಕಡಿತಗೊಳಿಸುತ್ತದೆ ಎಂದು ಯುನೈಟೆಡ್ ಕಿಂಗ್ ಡಮ್ ಅಧ್ಯಯನದಿಂದ ತಿಳಿದು ಬಂದಿದೆ.