ಆಗಸ್ಟ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ: ಆಹಾರ ಪದಾರ್ಥಗಳು ಬಲು ದುಬಾರಿ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳು ಚಿಲ್ಲರೆ ಹಣದುಬ್ಬರ ಏರುಮುಖವಾಗಿತ್ತು, ಜೂನ್‍ನಲ್ಲಿ ಈ ದರ ಶೇ. 7.01ರಷ್ಟು ಇದ್ದರೆ, ಜುಲೈನಲ್ಲಿ ಶೇ. 6.71ರಷ್ಟು ಇದ್ದವು. ಆಗಸ್ಟ್ ತಿಂಗಳಿನಲ್ಲಿ ಈ ದರ ಶೇ. 7ಕ್ಕೆ ಏರಿಕೆ ಕಂಡಿದ್ದು, ಬೆಲೆಗಳು ಬಲು ದುಬಾರಿಯಾಗಿದೆ.

ಭಾರತೀಯ ಚಿಲ್ಲರೆ ಹಣದುಬ್ಬರ ಪ್ರಸಕ್ತ 2022ರ ಸಾಲಿನ ಕಳೆದ 8 ತಿಂಗಳು ದರ ಪ್ರಮಾಣ ಶೇ. 6ರಕ್ಕಿಂತಲೂ ಅಧಿಕ ಮಟ್ಟದಲ್ಲಿ ಮುಂದುವರಿದಿದೆ ಎಂದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಲ್ಲರೆ ಹಣದುಬ್ಬರಕ್ಕೆ ಶೇ.6ರ ಮಿತಿ ನಿಗದಿಪಡಿಸಿದೆ.

ಆಹಾರ ಪದಾರ್ಥಗಳ ಹಣದುಬ್ಬರ ದರ ಆಗಸ್ಟ್‌ನಲ್ಲಿ ಶೇ. 7.62ಕ್ಕೆ ಹೆಚ್ಚಳವಾಗಿದೆ. ಈ ದರವು ಜುಲೈನಲ್ಲಿ ಶೇ. 6.75ಕ್ಕೆ ಇಳಿಕೆಯಾಗಿತ್ತು. ಮಳೆ ಹಾಗೂ ಬೆಳೆ ಹಾನಿಯ ಕಾರಣಗಳಿಂದ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿದೆ. ತರಕಾರಿಗಳ ಹಣದುಬ್ಬರ ಆಗಸ್ಟ್‌ನಲ್ಲಿ ಶೇ 13.23ಕ್ಕೆ ತಲುಪಿದೆ ಎಂದು ವರದಿಯಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ಹಣದುಬ್ಬರವು ತೀವ್ರ ಏರಿಕೆ ಕಂಡಿದ್ದು, ಗ್ರಾಮೀಣ ಭಾಗದ ಹಣದುಬ್ಬರವು ಹಿಂದಿನ ಶೇ.6.8ರಿಂದ ಶೇ.7.15ಕ್ಕೆ ಹೆಚ್ಚಳವಾಗಿದೆ. ನಗರದ ಹಣದುಬ್ಬರ  ಶೇ.6.72ರಷ್ಟಿದೆ.

ವಾರ್ಷಿಕ ಆಧಾರದ ಮೇಲೆ ತರಕಾರಿಗಳು, ಸಾಂಬಾರ್ ಪದಾರ್ಥಗಳು, ಪಾದರಕ್ಷೆಗಳು ಮತ್ತು ‘ಇಂಧನ ಮತ್ತು ಲೈಟ್’ ಬೆಲೆ ಏರಿಕೆಯ ದರವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಇದರೊಂದಿಗೆ, ಮೊಟ್ಟೆಯ ಮೇಲೆ ಹಣದುಬ್ಬರ ಅಲ್ಪ ಪ್ರಮಾಣದಲ್ಲಿ ಕಡಿತವಾಗಿರುವುದು ಕಂಡುಬಂದಿದೆ. ‘ಮಾಂಸ ಮತ್ತು ಮೀನು’ಗಳ ದರ ಬಹುತೇಕ ಸಮತಟ್ಟಾಗಿದೆ ಎಂದು ವರದಿಯಾಗಿದೆ.

ಜನಸಾಮಾನ್ಯರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯೊಂದಿಗೆ ಇದೀಗ ಅಕ್ಕಿ ದರ ಹೆಚ್ಚಳದಿಂದಾಗಿ ಮತ್ತೆ ಸಂಕಷ್ಟ ಎದುರಾಗಿದೆ. ಸಾಮಾನ್ಯವಾಗಿ ಕೆಜಿಗೆ 1 ಅಥವಾ 2 ರೂ. ಏರಿಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಕಳೆದ ಎರಡು ತಿಂಗಳಲ್ಲಿ ಕೆಜಿಗೆ 8-10 ರೂ.ವರೆಗೆ ಏರಿಕೆಯಾಗಿದೆ. ಜುಲೈ ಕೊನೆ ವಾರದಲ್ಲಿ ಇದ್ದ ಅಕ್ಕಿ ದರಕ್ಕೂ, ಈಗಿನ ದರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಅಸಹಜ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ.

ಸತತ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ ಹಣದುಬ್ಬರ ಶೇ. 2ರಿಂದ 6ರ ಮಿತಿಯನ್ನು ದಾಟಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಗೃಹ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಬ್ಯಾಂಕ್‍ಗಳು ಮತ್ತೆ ಏರಿಕೆ ಮಾಡುತ್ತವೆ.

ಜುಲೈನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇ. 2.4 ರಷ್ಟು ಏರಿಕೆಯಾಗಿದೆ. 2021ರ ಜುಲೈನಲ್ಲಿ ಐಐಪಿ ಶೇ.11.5% ರಷ್ಟು ಬೆಳೆದಿದೆ. ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‍ಎಸ್‍ಒ) ಬಿಡುಗಡೆ ಮಾಡಿದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, ಉತ್ಪಾದನಾ ವಲಯದಲ್ಲಿನ ಉತ್ಪಾದನೆಯು 2022ರ ಜುಲೈನಲ್ಲಿ ಶೇ. 3.2 ರಷ್ಟು ಮುಟ್ಟಿದೆ. ಏಪ್ರಿಲ್ 2020ರಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ವಿಧಿಸಲಾಗಿದ್ದ ಲಾಕ್‍ಡೌನ್ ಹಿನ್ನೆಲೆ ಆರ್ಥಿಕ ಚಟುವಟಿಕೆಗಳಲ್ಲಿನ ಕುಸಿತದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇ. 57.3 ರಷ್ಟು ಕುಸಿದಿದೆ.

Donate Janashakthi Media

Leave a Reply

Your email address will not be published. Required fields are marked *