ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಯುವಲ್ಲಿ ಅತಿ ಹೆಚ್ಚಿನ ಪರಿಣಾಮಕಾರಿ ಎನ್ನಲಾಗಿರುವ ಲಸಿಕೆ ವಿತರಣೆಯಲ್ಲಿ ಭಾರತ ದಾಖಲೆಯ ಸಾಧನೆ ಮಾಡಿದೆ. ಲಸಿಕಾ ಅಭಿಯಾನದ 9 ತಿಂಗಳಿನಲ್ಲಿ 100 ಕೋಟಿ ಡೋಸ್‌ಗಳ ವಿತರಣೆಯನ್ನು ಪೂರ್ಣಗೊಳಿಸಿದೆ. ಭಾರತದ ಈ ಮಹತ್ವದ ಸಾಧನೆಗೆ ಹಲವು ಅಭಿನಂದನೆಗಳ ಮಹಾಪೋರ ಹರಿದುಬರುತ್ತಿದೆ.
ಭಾರತದ ಜನರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಎಲ್ಲೆಡೆಯಿಂದ ಅಭಿನಂದನೆಗಳನ್ನು ಹರಿದುಬರುತ್ತಿದೆ. ದೇಶದಲ್ಲಿ 70.83 ಕೋಟಿ ಹೆಚ್ಚು ಮೊದಲ ಡೋಸ್ ಲಸಿಕೆ ನೀಡಲಾಗಿದ್ದರೆ, 29.18 ಕೋಟಿ ಜನರಿಗೆ ಎರಡನೆಯ ಡೋಸ್ ಲಸಿಕೆ ನೀಡಲಾಗಿದೆ.
ಇದನ್ನು ಓದಿ: ಕೋವಿಡ್ ಲಸಿಕೆ ಕೇವಲ ಒಂದು ರಾಷ್ಟ್ರಕ್ಕೆ ಸೀಮಿತವಲ್ಲ: ಆಂಟೋನಿಯೊ ಗುಟೆರೆಸ್
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ, ಈ ಸಾಧನೆ ಮಾಡಿರುವುದಕ್ಕೆ ದೇಶವನ್ನು ಅಭಿನಂದಿಸಿದ್ದಾರೆ. ಎಲ್ಲ ಅರ್ಹರು ವಿಳಂಬ ಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿರುವ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು, ಈ ಮೂಲಕ ಭಾರತದ ಐತಿಹಾಸಿಕ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.
“ನಾವು 130 ಕೋಟಿ ಭಾರತೀಯರ ಭಾರತೀಯ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯವನ್ನು ನೋಡುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ.ಪೌಲ್ ‘ಕೋವಿಡ್ ಲಸಿಕೆ ಅಭಿಯಾನ ಶುರುವಾಗಿ ಕೇವಲ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಿಸಿರುವುದು ಯಾವುದೇ ರಾಷ್ಟ್ರಕ್ಕೇ ಆದರೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಲಸಿಕೆ ಅಭಿಯಾನವು ಸ್ಥಿರವಾಗಿ ಮುಂದುವರಿಯುವುದು ಮುಖ್ಯವಾಗಿದೆ. ದೇಶದ ಶೇಕಡ 75ರಷ್ಟು ವಯಸ್ಕರಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದ್ದು, ಶೇಕಡ 25ರಷ್ಟು ವಯಸ್ಕರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಉಚಿತ ಲಸಿಕೆ ಪಡೆಯಲು ಅರ್ಹರಾಗಿದ್ದರೂ ಅವರು ದೂರ ಉಳಿದಿದ್ದಾರೆ. ದೇಶದ ಶೇಕಡ 30ರಷ್ಟು ಜನರು ಮಾತ್ರವೇ ಕೋವಿಡ್–19 ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದಿರುವ ಸುಮಾರು 10 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆಯಬೇಕಿದೆ. ಅವರಿಗೆ 2ನೇ ಡೋಸ್ ಹಾಕಿಸಿಕೊಳ್ಳುವಂತೆ ನೆನಪಿಸುವ ಸಂದೇಶಗಳನ್ನು ಕಳುಹಿಸಬೇಕಿದೆ ‘ ಎಂದು ಹೇಳಿದ್ದಾರೆ.
ಇದನ್ನು ಓದಿ: ಲಸಿಕೆ ಪಡೆದ ಶೇಕಡಾ 78ರಷ್ಟು ಜನ ಕೋವಿಡ್ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ
ಲಸಿಕೆ ಅಭಿಯಾನ ಆರಂಭವಾಗಿ 85 ದಿನಗಳಲ್ಲಿ 10 ಕೋಟಿ ಡೋಸ್ ಲಸಿಕೆ ನೀಡಿದ್ದ ದೇಶದಲ್ಲಿ 45 ದಿನಗಳಲ್ಲಿ 20 ಕೋಟಿ ಗೂ ಅಧಿಕ ಮತ್ತು 29 ದಿನಗಳಲ್ಲಿ 30 ಕೋಟಿ ಗೂ ಅಧಿಕ ಡೋಸ್ ಲಸಿಕೆ ನೀಡಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ನಂತರದ 24 ದಿನಗಳಲ್ಲಿ 30 ರಿಂದ 40 ಕೋಟಿ, ತದನಂತರದ 20 ದಿನಗಳಲ್ಲಿ ಆಗಸ್ಟ್ 6 ರಂದು 50 ಕೋಟಿ ಡೋಸ್ ಲಸಿಕೆ ನೀಡಿಕೆಯ ಸಾಧನೆ ಮಾಡಲಾಗಿತ್ತು. ನಂತರದ 76 ದಿನಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದರೊಂದಿಗೆ ಜನವರಿ 16 ರಿಂದ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಫೆಬ್ರವರಿ 2 ರಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 45 ವರ್ಷಕ್ಕೂ ಮೇಲ್ಪಟ್ಟ ದುರ್ಬಲ ವರ್ಗದವರಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು. ಏಪ್ರಿಲ್ 1 ರಿಂದ 45 ವರ್ಷದೊಳಗಿನ ಎಲ್ಲಾ ಜನರಿಗೂ ದೇಶಾದ್ಯಂತ ಲಸಿಕೆ ನೀಡಿಕೆ ಪ್ರಾರಂಭವಾಗಿತ್ತು. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಿಕೆಯನ್ನು ವಿಸ್ತರಿಸಲಾಯಿತು.
ಅಧಿಕೃತ ಮೂಲಗಳ ಪ್ರಕಾರ ದೇಶದ ಶೇಕಡ 75 ರಷ್ಟು ವಯಸ್ಕರು ಮೊದಲ ಡೋಸ್ ಪಡೆದಿದ್ದರೆ, ಶೇಕಡ 35 ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ.
ಇದನ್ನು ಓದಿ: ಕೋವಿಡ್ ಲಸಿಕೆ : ಬಿಗಿಯಾಗುತ್ತಿರುವ ಪೇಟೆಂಟ್ ಎಂಬ ನೇಣಿನ ಕುಣಿಕೆ
ಭಾರತಕ್ಕಿಂತ ಮುನ್ನ ಲಸಿಕೆ ವಿತರಣೆಯಲ್ಲಿ ದೊಡ್ಡ ಸಾಧನೆ ಮಾಡಿರುವ ದೇಶವೆಂದರೆ ಚೀನಾ. ಅಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿರುವ ಸಾಧನೆ ಮಾಡಿದೆ. ಭಾರತವಲ್ಲದೆ ನೂರು ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಏಕಮಾತ್ರ ದೇಶವಾದ ಚೀನಾ, ಜೂನ್ ತಿಂಗಳಲ್ಲಿ ನೂರು ಕೋಟಿ ಡೋಸ್ ಕ್ರಮಿಸಿತ್ತು. ಅದರ ನಂತರ ಈ ಮೈಲಿಗಲ್ಲು ದಾಟಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಚೀನಾದಲ್ಲಿ 144 ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಭಾರತದಲ್ಲಿ 139 ಕೋಟಿ ಜನಸಂಖ್ಯೆ ಇರುವ ವಿಶ್ವದ ಎರಡು ದೊಡ್ಡ ರಾಷ್ಟ್ರಗಳಾಗಿವೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಮುಖ್ಯವಾಗಿದ್ದು, ನವೆಂಬರ್ ತಿಂಗಳಿನಿಂದ 2 ರಿಂದ 18 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ. ಮಕ್ಕಳಿಗಾಗಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ.