ಗುರುರಾಜ ದೇಸಾಯಿ
ಪೆಟ್ರೋಲ್,ಡಿಸೇಲ್ ದರ ಹೆಚ್ಚಳಕ್ಕೆ ತೆರಿಗೆ ದರ ಕಾರಣವೇ? ಎಂಬ ಪ್ರಶ್ನೆ ಈಗ ಜೋರಾಗಿ ಚರ್ಚೆಯಾಗುತ್ತಿದೆ. ಹೌದು ಎನ್ನುವಂತೆ ಹಲವಾರು ಅಂಕಿಅಂಶಗಳು ಈಗ ಸಾಕ್ಷಿಯಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಂತೂ ಪೆಟ್ರೋಲ್ ದರ ಹೆಚ್ಚಿಸಿದ್ದರ ಪರಿಣಾಮ ಕೇಂದ್ರ ಸರಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಫುಲ್ ಟ್ಯಾಂಕ್ ಮಾಡಿಸಬೇಕಾದರೆ 1341 ರೂ ಕೊಡಬೇಕಿದೆ. ಕಳೆದ ವರ್ಷ ಫುಲ್ ಟ್ಯಾಂಕ್ ಮಾಡಿಸಬೇಕಂದರೆ 864 ರೂ ಕೊಟ್ಟರೆ ಸಾಕಾಗುತ್ತಿತ್ತು. ಈಗ 432 ರೂ ಹೆಚ್ಚುವರಿ ಕೊಡಬೇಕಿದೆ. ಇನ್ನೂ ಹೀಗೆ ಇದ್ದರೆ ನಮ್ಮ ರಕ್ತ ಹೀರುತ್ತಾರೆ ಅಷ್ಟೆ, ಅಚ್ಚೆ ದಿನ್ ಅಂದ್ರೆ ಇದೇ ಅಲ್ವಾ? ಎಂದು ಟ್ರೋಲ್ ಮಾಡಲಾಗುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ವಿಪರೀತವಾಗಿ ಏರಿಕೆಯಾಗಿವೆ. ಗಗನಕ್ಕೇರಿರುವ ಇಂಧನ ಬೆಲೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇತ್ತೀಚಿನ ದರ ಏರಿಕೆಯ ನಂತರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 109.53 ಗಳಾದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100.37 ಗಳಾಗಿದೆ. ಇದೇ ವೇಳೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.111 ರ ಗಡಿ ದಾಟಿದೆ. ರಾಜಸ್ಥಾನದ ಶ್ರೀ ಗಂಗಾನಗರ ಅತ್ಯಂತ ದುಬಾರಿ ಆಟೋ ಇಂಧನ ಹೊಂದಿದ್ದು, ಪೆಟ್ರೋಲ್ ಬೆಲೆ ರೂ 117.86 ಮತ್ತು ಡೀಸೆಲ್ ರೂ 105.95 ಆಗಿದೆ. ಕರ್ನಾಟಕದಲ್ಲೂ ಇದೇ ರೀತಿ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ವಿಮಾನ ಇಂಧನಕ್ಕಿಂತ ಪೆಟ್ರೋಲ್ ಬೆಲೆ ದುಬಾರಿ! : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಳೆದ ಭಾನುವಾರ ತಲಾ 35 ಪೈಸೆಯಷ್ಟು ಏರಿಕೆ ಮಾಡಿವೆ. ತನ್ಮೂಲಕ ವಿಮಾನಗಳ( ಇಂಧನವಾದ ಏವಿಯೇಷನ್ ಟರ್ಬೈನ್ ಇಂಧನ) ಇಂಧನಕ್ಕಿಂತಲೂ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಪೆಟ್ರೋಲ್‌ಗೆ ಶೇ.33ರಷ್ಟು ಹೆಚ್ಚು ದರ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.
ವಿಮಾನದ ಇಂಧನ ಎಟಿಎಫ್‌ಗೆ(ATF) ಒಂದು ಲೀಟರ್ಗೆ 79 ರು. ಇದ್ದರೆ, ದೇಶಾದ್ಯಂತ ಪೆಟ್ರೋಲ್ ದರ 110 ರು. ಆಸುಪಾಸಿನಲ್ಲಿದೆ. ಅಂದರೆ ಪೆಟ್ರೋಲ್ ದರವು ವೈಮಾನಿಕ ಇಂಧನಕ್ಕಿಂತತ ಶೇ.33ರಷ್ಟು ಹೆಚ್ಚು ದುಬಾರಿ. “ಆಕಾಶದಲ್ಲಿ ಹಾರಾಡುವ ವಾಹನಕ್ಕೆ ಇಂಧನ ದರ ಕಡಿಮೆ, ರಸ್ತೆಯ ಮೇಲೆ ಓಡಾಡುವ ವಾಹನಕ್ಕೆ ದುಪ್ಪಟ್ಟು ಹಣ” ಅಚ್ಚೇ ದಿನ್ ಅಂದ್ರೆ ಇದೆ ಅಲ್ವಾ ಅಂತಾ ಸಾಮಾಜಿಕ ಜಾಲತಣಾದಲ್ಲಿ ತೂಲ ಬೆಲೆ ಹೆಚ್ಚಳದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ತೆರೆಗೆ ಹೆಚ್ಚಳ ಮಾಡಿದ್ದೆ ಕಾರಣ : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರೆಗೆ ಹೆಚ್ಚಿಸಿದ್ದರ ಪರಿಣಾಮ ಇವತ್ತು ದರ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಒಂದು ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವಾಗದೇ 2014ರ ತೆರಿಗೆ ದರವೇ ಇಂದೂ ಜಾರಿಯಲ್ಲಿದ್ದರೆ, ಈಗ ಪೆಟ್ರೋಲ್ ದರವು 66 ರೂ ಮತ್ತು ಡೀಸೆಲ್ ಬೆಲೆ 55 ರೂ ಇರುತ್ತಿತ್ತು ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
2014ರ ಜೂನ್‌ನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಅನ್ನು ಲೀ.ಗೆ 49 ರೂ.ನಂತೆ ಡೀಲರ್‌ಗಳಿಗೆ ಮಾರಾಟ ಮಾಡುತ್ತಿದ್ದವು. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಹಾಗೂ ಡೀಲರ್‌ಗಳ ಕಮಿಷನ್ ಸೇರಿಸಿ ಲೀ. ಪೆಟ್ರೋಲ್ ಬೆಲೆ 74 ರು. ತಲುಪುತ್ತಿತ್ತು. ಇದರಲ್ಲಿ ತೈಲ ಮಾರುಕಟ್ಟೆಕಂಪನಿಗಳು ಶೇ.66ರಷ್ಟು ಹಾಗೂ ಉಳಿದ ಶೇ.34ರಲ್ಲಿ ಡೀಲರ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಲು ಪಡೆಯುತ್ತಿದ್ದವು.
ಆದರೆ ಇದೀಗ ತೈಲ ಕಂಪನಿಗಳ ಪಾಲು ಶೇ.42ರಷ್ಟುಇಳಿಕೆಯಾಗಿದ್ದು, ಕೇಂದ್ರ, ರಾಜ್ಯಗಳ ತೆರಿಗೆ ಮತ್ತು ಡೀಲರ್‌ಗಳ ಕಮಿಷನ್ ಪಾಲು ಶೇ.58ಕ್ಕೆ ಏರಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರದ ತೆರಿಗೆ ಶೇ.14ರಿಂದ 32ಕ್ಕೆ ಜಿಗಿದಿದ್ದರೆ, ರಾಜ್ಯಗಳ ತೆರಿಗೆ ಪಾಲು ಶೇ.17ರಿಂದ ಶೇ.23ಕ್ಕೆ ಏರಿಕೆಯಾಗಿದೆ.
ಕೇಂದ್ರ, ರಾಜ್ಯ ಸರಕಾರಗಳಿಗೆ ಬಂಪರ್: ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆಗಳು ಏರಿಕೆ ಕಂಡಿದ್ದರ ಪರಿಣಾಮವಾಗಿ ಸರಕಾರದ ಆದಾಯ ಮೂರು ಪಟ್ಟು ಹೆಚ್ಚಳವಾಗಿದೆ. ಸರ್ಕಾರವು ಈ ಎರಡೂ ಇಂಧನಗಳನ್ನು ಅಗತ್ಯವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ. ಈ ಇಂಧನಗಳು ದೇಶದ ಆರ್ಥಿಕತೆಯ ಚಾಲಕ ಶಕ್ತಿಗಳೂ ಆಗಿವೆ. ಸರ್ಕಾರಕ್ಕೆ ಇದರಿಂದ ಬರುವ ಆದಾಯದ ಪ್ರಮಾಣವೂ ಹೆಚ್ಚಾಗಿದೆ ಹಾಗಾಗಿ ತೈಲದ ಮೇಲಿನ ತೆರಿಗೆಯನ್ನು ವಾಪಸ್ ಪಡೆಯುತ್ತಿಲ್ಲ. ಕೇಂದ್ರ ಸರ್ಕಾರವು 2014 ಮತ್ತು 15 ನೇ ಆರ್ಥಿಕ ವರ್ಷದಲ್ಲಿ 1.7 ಲಕ್ಷ ಕೋಟಿ ರೂ ನಷ್ಟು ಇದ್ದರೆ. ರಾಜ್ಯದ ಆದಾಯ 1.6 ಲಕ್ಷ ಕೋಟಿಯಷ್ಟು ಇತ್ತು. 2020-21 ನೇ ಸಾಲಿನ ಆರ್ಥಿಕ ವರ್ಷದ ಆದಾಯವನ್ನು ಗಮನಿಸಿದರೆ ಕೇಂದ್ರ ಸರಕಾರ ಪೆಟ್ರೋಲಿಯಂನಿಂದ 4. 6 ಲಕ್ಷ ಕೋಟಿ ರೂ ಸಂಗ್ರಹಿಸಿದೆ. ರಾಜ್ಯ ಸರಕಾರ 2.2 ಕೋಟಿಯಷ್ಟು ತೆರಿಗೆ ಸಂಗ್ರಹಿಸಿದೆ. ಇದು 164 ಶೇಕಡಾ ಹೆಚ್ಚಳವಾಗಿದೆ. ಆದಾಗ್ಯೂ, ರಾಜ್ಯಗಳಿಗೆ ಪೆಟ್ರೋಲಿಯಂನಿಂದ ತೆರಿಗೆ ಸಂಗ್ರಹವು ಕಳೆದ ನಾಲ್ಕು ವರ್ಷಗಳಿಂದ ಸುಮಾರು 2 ಲಕ್ಷ ಕೋಟಿ ರೂ. ಆಗಿದೆ. ಲಾಕ್ ಡೌನ್ ಸಮಯದಲ್ಲಿ ತೈಲ ಬಳಕೆ ಶೇ.10.6 ರಷ್ಟು ಕುಸಿತ ಕಂಡರೂ ಸರ್ಕಾರಕ್ಕೆ ತೈಲ ತೆರಿಗೆ ಏರಿಕೆಯಿಂದ ಬಂದಿರುವ ಆದಾಯ ಹೆಚ್ಚಾಗಿದೆ.
ಕಳೆದ ಎರಡು ವರ್ಷಗಳಿಂದ ಇಂಧನದ ಮೇಲಿನ ಅಬಕಾರಿ ಸುಂಕ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸಹ ಇಂಧನಗಳ ಬೆಲೆ ನಿರಂತರ ಏರಿಕೆಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಪ್ರಸ್ತುತ ಕಚ್ಚಾ ತೈಲದರ ಪ್ರತಿ ಬ್ಯಾರೆಲ್ಗೆ 84.8 ಡಾಲರ್ (ಕಳೆದ ತಿಂಗಳು 73.51 ಡಾಲರ್ ಇತ್ತು) ಇದೆ. 2014ರಲ್ಲೂ ಕಚ್ಚಾ ತೈಲದರ 74 ಡಾಲರ್ ಆಸುಪಾಸಿನಲ್ಲೇ ಇತ್ತು. ಇನ್ನು, 1975 ರಿಂದ 2010ರ ತನಕ ಪೆಟ್ರೋಲ್ ದರ ನಿಯಂತ್ರಿತವಾಗಿತ್ತು. 2014ರ ಅಕ್ಟೋಬರ್ ನಲ್ಲಿ ಬೆಲೆ ನಿಯಂತ್ರಣವನ್ನು ಸಡಿಲಗೊಳಿಸಿದ ನಂತರದಲ್ಲಿ ವಿಪರೀತ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ಅದನ್ನು ವಿಶೇಷವಾಗಿ ದರ ಇಳಿದಾಗ, ತೆರಿಗೆ ಏರಿದ ಪರಿಣಾಮ ಅದರ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆ ಆಗಲಿಲ್ಲ ಎಂಬುದು ಗಮನಾರ್ಹ ಸಂಗತಿ.
ಸೆಪ್ಟೆಂಬರ್ 28ರಿಂದೀಚೆಗೆ ಪೆಟ್ರೋಲ್ ದರ ಲೀಟರಿಗೆ 4.65 ರೂಪಾಯಿ, ಸೆಪ್ಟೆಂಬರ್ 24 ರಿಂದೀಚೆಗೆ ಡೀಸೆಲ್ ದರ ಲೀಟರಿಗೆ 5.95 ರೂಪಾಯಿ ಹೆಚ್ಚಳವಾಗಿದೆ. ಇದಕ್ಕೂ ಮುನ್ನ, ಮೇ 4 -ಜುಲೈ 17ರ ನಡುವೆ ಪೆಟ್ರೋಲ್ ದರ ಲೀಟರಿಗೆ 11.44 ರೂಪಾಯಿ, ಡೀಸೆಲ್ ದರ ಲೀಟರಿಗೆ 9.14 ರೂಪಾಯಿ ಏರಿತ್ತು.
8 ವರ್ಷಗಳ ಹಿಂದೆ ಒಳ್ಳೆಯ ದಿನಗಳು ಬರಲಿವೆ ಎಂದು ನಿರೀಕ್ಷೆ ಉಟ್ಟಿಸಿದ್ದು ಸುಳ್ಳು ಎಂಬುದು ಈಗ ಸಾಬೀತಾಗುತ್ತಿದೆ. ಎರಡನೇ ಅವಧಿಗೆ ಪ್ರಧಾನಿಯಾದಾಗ ಕಡಿಮೆ ದರದಲ್ಲಿ ತೈಲ ಸಿಗಲಿದೆ ಎಂದೆಲ್ಲ ಪ್ರಚಾರ ಮಾಡಲಾಗಿತ್ತು. ಪ್ರಚಾರ ಮಾಡಿದ್ದವರು ಈಗ ನಾಪತ್ತೆಯಾಗಿದ್ದಾರೆ. ಮೂಗಿಗೆ ತುಪ್ಪ ಸವರಿ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ. ದಿನ ನಿತ್ಯ ಬೈದು ಕೊಳ್ಳುತ್ತಲೆ ಪೆಟ್ರೋಲ್ ಬಂಕ್‌ನತ್ತ ಸಾಗುತ್ತಿರುವ ಜನತೆ ಜಾಗೃತವಾಗಬೇಕಿದೆ. ತೈಲ ತೆರಿಗೆಯಲ್ಲಿ ಲಾಭದ ಊಟ ಮಾಡುತ್ತಿರುವ ಸರಕಾರಕ್ಕೆ ಮೂಗುದಾರ ಹಾಕಬೇಕಿದೆ.