ನವದೆಹಲಿ: ಮುಸ್ಲಿಮರ ಮೇಲಿನ ಗುಂಪು ಹಿಂಸಾಚಾರ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ನ ತುರ್ತು ಮಧ್ಯಸ್ಥಿಕೆಯನ್ನು ಕೋರಿ ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟ (NFIW) ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (PIL) ದಾಖಲಿಸಿದೆ. ಇದನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಆರು ರಾಜ್ಯ ಸರ್ಕಾರಗಳಿಂದ ಶುಕ್ರವಾರ ಪ್ರತಿಕ್ರಿಯೆಗಳನ್ನು ಕೇಳಿದೆ.
ತೆಹ್ಸೀನ್ ಎಸ್. ಪೂನವಾಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರ ಪ್ರಕರಣದಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ನೀಡಿದ್ದರೂ ಸಹ, ದೇಶದಲ್ಲಿ ಮುಸ್ಲಿಮರ ವಿರುದ್ಧ ಗುಂಪು ಹಿಂಸಾಚಾರ ಮತ್ತು ಗುಂಪು ಹಿಂಸಾಚಾರದ ಪ್ರಕರಣಗಳ ಆತಂಕಕಾರಿ ಏರಿಕೆಯಾಗಿದೆ ಎಂದು ಎನ್ಎಫ್ಐಡಬ್ಲ್ಯೂ ತನ್ನ ಅರ್ಜಿಯಲ್ಲಿ ಹೇಳಿದೆ.
ಇದನ್ನೂ ಓದಿ: ಹರಿಯಾಣ | ಮಸೀದಿಗೆ ಬೆಂಕಿ ಹಚ್ಚಿ, ಇಮಾಂ ಅನ್ನು ಗುಂಡಿಕ್ಕಿ ಕೊಂದ ಹಿಂದುತ್ವ ಗುಂಪು
ತೆಹ್ಸೀನ್ ಎಸ್. ಪೂನಾವಲ್ಲ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರ ಪ್ರಕರಣವು ಪ್ರಾಥಮಿಕವಾಗಿ “ಗೋವು ರಕ್ಷಣೆಯ ವಿಷಯದ ಬಗ್ಗೆ ಹೇಳುತ್ತದೆ. ಪ್ರಕರಣದ ತೀರ್ಪಿನಲ್ಲಿ, ನ್ಯಾಯಾಲಯವು ಕಾನೂನು ಕೈಗೆತ್ತಿಕೊಳ್ಳುವ ಅಂಶಗಳು, ಹತ್ಯೆ ಮತ್ತು ಅಪರಾಧಿಗಳಿಂದ ನಾಗರಿಕರನ್ನು ರಕ್ಷಿಸುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಒತ್ತಿಹೇಳಿತ್ತು.
ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆಯ ಘಟನೆಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಹತ್ಯೆಯ ಘಟನೆ ವರದಿಯಾದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಸೇರಿದಂತೆ ಸರ್ಕಾರಕ್ಕೆ ನ್ಯಾಯಾಲಯವು ಮಾರ್ಗಸೂಚಿಗಳನ್ನು ಈ ಪ್ರಕರಣದಲ್ಲಿ ನೀಡಿತ್ತು.
ಎನ್ಎಫ್ಐಡಬ್ಲ್ಯು ತನ್ನ ಅರ್ಜಿಯಲ್ಲಿ, ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಗುಂಪು ಹಿಂಸಾಚಾರ ಪ್ರಕರಣಗಳಲ್ಲಿ ಅಪಾಯಕಾರಿಯಾಗಿ ಏರಿಕೆಯಾಗಿದೆ ಎಂದು ಎತ್ತಿ ತೋರಿಸಿದೆ. “ಈ ಅಪಾಯವನ್ನು ನಿಗ್ರಹಿಸಲು, ತಡೆಗಟ್ಟುವ ಮತ್ತು ತತ್ಪರಿಣಾಮ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯ ಯಂತ್ರದ ನಿರಂತರವಾಗಿ ವಿಫಲಗೊಂಡಿದೆ” ಎಂಬುದನ್ನು ಉಲ್ಲೇಖಿಸಿ ಈ ಸಮಸ್ಯೆಗೆ ತಕ್ಷಣವೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದೆ.
ಇದನ್ನೂ ಓದಿ: ನೂಹ್ನಿಂದ ಗುರುಗ್ರಾಮ್ ವರೆಗೆ ಕೋಮುದಳ್ಳುರಿ –“ಕೋಮು ಧ್ರುವೀಕರಣದ ಸಂಘಟಿತ ಪ್ರಯತ್ನ”
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಜೆ.ಬಿ. ಪಾರ್ದಿವಾಲಾ ಅವರ ಪೀಠವು ಕೇಂದ್ರ ಸರ್ಕಾರ, ಹರಿಯಾಣ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ವಕೀಲೆ ಸುಮಿತಾ ಹಜಾರಿಕಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಇತ್ತೀಚಿಗೆ ನಡೆದ ಐದು ಗುಂಪು ಹತ್ಯೆ ಘಟನೆಗಳನ್ನು ಪಟ್ಟಿಮಾಡಲಾಗಿದ್ದು, ಇವುಗಳು ಕೆಲವು ಉದಾಹರಣೆಗಳಷ್ಟೇ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಹೊರತಾಗಿಯೂ ಸರ್ಕಾರ ಸಮರ್ಪಕ ಕ್ರಮ ಕೈಗೊಳ್ಳದಿರುವುದು ಇಂತಹ ಘಟನೆಗಳು ಹೆಚ್ಚಲು ಕಾರಣ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಘಟನೆಗಳು, ದ್ವೇಷದ ಭಾಷಣಗಳು, ಸಾಮಾಜಿಕ ಮಾಧ್ಯಮಗಳು, ಸುದ್ದಿವಾಹಿನಿಗಳು ಮತ್ತು ಚಲನಚಿತ್ರಗಳ ಮೂಲಕ ಸುಳ್ಳು ಪ್ರಚಾರದ ಮೂಲಕ ಕೋಮು ದ್ವೇಷ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಬಹಿಷ್ಕರಿಸುವುದು ಸಾಮಾನ್ಯವಾಗಿ ನಡೆಯುತ್ತಿದೆ NFIW ಒತ್ತಿಹೇಳಿದೆ.
ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಅನುಸಾರವಾಗಿ ಹತ್ಯೆ ಮತ್ತು ಗುಂಪು ಹಿಂಸಾಚಾರ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯು ಕೋರಿದ್ದು, ಅಧಿಕಾರಿಗಳು ನಿರ್ಧರಿಸಿದ ಮೊತ್ತದ ಜೊತೆಗೆ ಸಂತ್ರಸ್ತರಿಗೆ ಅಥವಾ ಅವರ ಕುಟುಂಬಗಳಿಗೆ ನೀಡಬೇಕಾದ ಕನಿಷ್ಠ ಏಕರೂಪದ ಪರಿಹಾರವನ್ನು ನ್ಯಾಯಾಲಯವು ನಿರ್ಧರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿಡಿಯೊ ನೋಡಿ: ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ – ವಿಶ್ಲೇಷಣೆ : ಅರುಣ್ ಜೋಳದ ಕೂಡ್ಲಿಗಿ Janashakthi Media