ಪುರುಷಾಧಿಪತ್ಯದ ಮತ್ತೊಂದು ಚುನಾವಣೆಯ ನಡುವೆ

ನಾ ದಿವಾಕರ 

ಶಾಸನಬದ್ಧ ಕಾಯ್ದೆ ಇಲ್ಲದೆಯೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಆಡ್ಡಿ ಏನಿದೆ ?

ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಒಂದು ಬೃಹತ್‌ ಸಮೂಹ, ಜಗತ್ತಿನ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸುವ, ನಿರ್ವಹಿಸುವ ಮತ್ತು ಆದೇಶಿಸುವ ಆಡಳಿತ ವ್ಯವಸ್ಥೆಯಲ್ಲೂ ಸಹ ಅರ್ಧದಷ್ಟು ಪ್ರಾತಿನಿಧ್ಯ ಹೊಂದಿರಬೇಕು ಎಂದು ಆಶಿಸುವುದು ಸಹಜವೇ ಆಗಿದೆ. ಈ ಬೃಹತ್‌ ಸಮೂಹ, ಅಂದರೆ ಮಹಿಳಾ ಸಂಕುಲ ತನ್ನ ಪ್ರಾತಿನಿಧ್ಯಕ್ಕಾಗಿ ಸಂವಿಧಾನ, ಕಾನೂನು, ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯ ನಿಯಂತ್ರಕ ಕೇಂದ್ರಗಳಿಗೆ ಮೊರೆಹೋಗಬೇಕಿರುವುದು ಸ್ವತಂತ್ರ ಭಾರತದ ದುರಂತಗಳಲ್ಲೊಂದು. ಮೇ 10ರಂದು ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳ ಹಾಗೂ ಸುದ್ದಿಮನೆಗಳ ಹರಟೆ ಕಟ್ಟೆಗಳಲ್ಲಿ, ಸಾಮಾಜಿಕ ತಾಣಗಳ ನೂರಾರು ಖಾಸಗಿ ಯುಟ್ಯೂಬ್‌ ವಾಹಿನಿಗಳಲ್ಲಿ ಈ ವಿಷಯವೇ ಪ್ರಮುಖವಾಗಿ ಚರ್ಚೆಯಾಗಬೇಕಿತ್ತು. ಆದರೆ ಆಗುತ್ತಿಲ್ಲ ಎನ್ನುವುದು ಸೋಜಿಗದ ಸಂಗತಿ. ಈ ಮಾಧ್ಯಮ ನೆಲೆಗಳೂ ಪುರುಷಕೇಂದ್ರಿತವಾಗಿರುವುದೂ ಒಂದು ಕಾರಣ.

ರಾಜಕೀಯ-ಸಾರ್ವಜನಿಕ ವಲಯದ ಚರ್ಚೆ-ಸಂವಾದಗಳ ನಡುವೆ 2010ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆ ಅಥವಾ ಸಂವಿಧಾನ (108ನೇ ತಿದ್ದುಪಡಿ) ಮಸೂದೆಯ ಇರುವಿಕೆಯನ್ನೇ ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯವೂ ಸಹ ಮರೆತಿವೆ. ಮಹಿಳೆಯರಿಗೆ ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವ ಒಂದು ಉದಾತ್ತ ಕಲ್ಪನೆಯನ್ನು ಶಾಸನಬದ್ಧವಾಗಿ ಸಾಕಾರಗೊಳಿಸುವ ಪ್ರಯತ್ನವನ್ನು ಈ ಮಸೂದೆಯಲ್ಲಿ ಕಾಣಬಹುದು. ಇಲ್ಲಿಯೂ ಸಹ ಸಮಾನ ಅವಕಾಶ
ಎನ್ನುವುದು ಒಂದು ಅಪವ್ಯಾಖ್ಯಾನದಂತೆ ಕಾಣುತ್ತದೆ. ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ,ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೆ ಒಂದರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಈ ಮಸೂದೆ, ಮೂರನೆ ಒಂದರಷ್ಟು ಪಾಲನ್ನೇ ಸಮಾನತೆಯ ಸಂಕೇತ ಎಂದು ಭಾವಿಸುತ್ತದೆ.

ಚುನಾವಣಾ ರಾಜಕಾರಣದಲ್ಲಿ : ಈ ಪ್ರಮಾಣದ ಮೀಸಲಾತಿಯನ್ನೂ ಸಂಸತ್ತಿನಲ್ಲಿ ಅಂಗೀಕರಿಸಲು ಸಾಧ್ಯವಾಗಲಿಲ್ಲ. ರಾಜ್ಯಸಭೆಯಲ್ಲಿ ಅನುಮೋದನೆ ಪಡೆದರೂ ಸಹ ಲೋಕಸಭೆಯಲ್ಲಿ ಈ ಮಸೂದೆಯ ಮೇಲೆ ಮತ  ಚಲಾಯಿಸಲಿಲ್ಲ. ಪ್ರತಿಯೊಂದು ಚುನಾವಣೆಗಳಲ್ಲೂ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಮಹಿಳಾ ಪ್ರಾತಿನಿಧ್ಯದ ಬಗ್ಗೆ ಪ್ರಸ್ತಾಪಿಸುತ್ತಿದ್ದರೂ, ವಾಸ್ತವವಾಗಿ ಟಿಕೆಟ್‌ ಹಂಚಿಕೆಯ ಪ್ರಶ್ನೆ ಎದುರಾದಾಗ ಮಹಿಳಾ ಅಭ್ಯರ್ಥಿಗಳ ಸುಳಿವೇ ಕಾಣುವುದಿಲ್ಲ. ಈ ಮಸೂದೆಯನ್ನು ಮಂಡಿಸಿದ ನಂತರ ಎರಡು ಲೋಕಸಭಾ ಚುನಾವಣೆಗಳು ನಡೆದಿವೆ, ಬಹುತೇಕ ಎಲ್ಲ ರಾಜ್ಯಗಳಲ್ಲೂ ಎರಡು ಬಾರಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಕರ್ನಾಟಕದಲ್ಲಿ ಮೂರನೆಯ ಚುನಾವಣೆ ನಡೆಯಲಿದೆ. ಆದರೆ ಯಾವ ಚುನಾವಣೆಗಳಲ್ಲೂ ಮಹಿಳಾ ಪ್ರಾತಿನಿಧ್ಯವಾಗಲೀ, ಮಹಿಳಾ ಮೀಸಲಾತಿ ಮಸೂದೆಯಾಗಲೀ ಒಂದು ಸಾರ್ವಜನಿಕ ಚರ್ಚೆಯ ವಿಷಯವಾಗಿಲ್ಲ. ಇದು ನಮ್ಮ ಇಡೀ ಸಮಾಜದ ಪುರುಷಾಧಿಪತ್ಯದ ಮನೋಭಾವದ ಸಂಕೇತ ಎಂದೇ ಹೇಳಬಹುದು.

ಈ ನಡುವೆಯೂ ಒಂದು ಆಶಾದಾಯಕ ಬೆಳವಣಿಗೆ ಎಂದರೆ ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ ನಾಯಕ ಹೆಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿಗಳಿಗೆ ಖುದ್ದಾಗಿ ಪತ್ರ ಬರೆದಿದ್ದು, ಮಹಿಳಾ ಮೀಸಲಾತಿ ಮಸೂದೆಯನ್ನು 2024ರ ಲೋಕಸಭಾ ಚುನಾವಣೆಗಳಿಗೂ ಮುನ್ನ ಸಂಸತ್ತಿನಲ್ಲಿ ಮಂಡಿಸಿ ಜಾರಿಗೊಳಿಸುವಂತೆ ಆಗ್ರಹಿಸಿರುವುದು. ಮೋದಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಈ ಮಸೂದೆಯನ್ನು ಅಂಗೀಕರಿಸುವುದು ಸುಲಭವಾಗಬಹುದು ಎಂದು ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ ಚುನಾವಣಾ ಆಯೋಗವು ಕರ್ನಾಟಕದ ಮತದಾರರ ಸಂಖ್ಯೆಯನ್ನು ಘೋಷಿಸಿದಾಗ ಅದರಲ್ಲಿ ಶೇ 50ರಷ್ಟು ಮಹಿಳೆಯರೇ ಇರುವುದು ಅಚ್ಚರಿಯೇನೂ ಮೂಡಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನನ್ನ ಗಮನಹರಿದಿದೆ ” ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಹೇಳಿದಾರೆ.

ದೇವೇಗೌಡರ ಈ ಮಹಿಳಾಪರ ಕಾಳಜಿಯನ್ನು ಮೆಚ್ಚಬೇಕಾದ್ದೇ. ಆದರೆ ಮಹಿಳೆಯರಿಗೆ ಶಾಸನಬದ್ಧ ಮೀಸಲಾತಿ ನೀಡಲು ಮಸೂದೆ ಅವಶ್ಯವೇ ಹೊರತು, ಪ್ರಸಕ್ತ ಚುನಾವಣೆಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಲು ಯಾವುದೇ ಮಸೂದೆಯ ಅಗತ್ಯವಿಲ್ಲ ಅಲ್ಲವೇ ? ಕನಿಷ್ಠ ಒಬ್ಬ ರಾಜಕೀಯ ನಾಯಕರಾದರೂ ಈ ಬಗ್ಗೆ ಪ್ರಸ್ತಾಪಿಸಿರುವುದು ಸಮಾಧಾನಕರ ಅಂಶ ಎಂದು ಭಾವಿಸಿದರೂ, ಪ್ರಸ್ತುತ ಚುನಾವಣೆಯ ಟಿಕೆಟ್‌ ಹಂಚಿಕೆಯ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಕಣ್ಣಿಗೆ ಕಾಣದ ಮಹಿಳಾ ಅಭ್ಯರ್ಥಿಗಳು ಮಸೂದೆ ಜಾರಿಯಾದ ಕೂಡಲೇ ಹೇಗೆ ಕಾಣಲು ಸಾಧ್ಯ ? ಹಾಗೊಮ್ಮೆ ತಮ್ಮ ಪಕ್ಷಗಳಲ್ಲಿ ಮೂರನೆ ಒಂದು ಪ್ರಮಾಣದಷ್ಟು ಮಹಿಳಾ ಅಭ್ಯರ್ಥಿಗಳು ಅರ್ಹರಾಗಿದ್ದಾರೆ ಎಂದು ಸ್ಪಷ್ಟವಾಗಿದ್ದರೆ ಈ ಚುನಾವಣೆಗಳಲ್ಲೇ ಏಕೆ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬಾರದಿತ್ತು ? ದೇವೇಗೌಡರ ಪಕ್ಷವೂ ಈ ಬಗ್ಗೆ ಯೋಚಿಸಿಲ್ಲ.ಈ ಪ್ರಶ್ನೆಗಳು ಬಹುಶಃ ಗಾಳಿಯಲ್ಲಿ ತೇಲಿ ಹೋಗುತ್ತವೆ.

ಮೇ 10ರ ಚುನಾವಣೆಗಳಲ್ಲಿ ಬಿಜೆಪಿ 224 ಸ್ಥಾನಗಳ ಪೈಕಿ 11ರಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ 223ರ ಪೈಕಿ 12ರಲ್ಲೂ, ಜಾತ್ಯತೀತ ಜನತಾ ದಳ 208ರಲ್ಲಿ 13ರಲ್ಲೂ ಮಹಿಳೆಯರಿಗೆ ಅವಕಾಶ ನೀಡಿವೆ. ಆಮ್‌ ಆದ್ಮಿ ಪಕ್ಷವು ಕೊಂಚ ಭಿನ್ನವಾಗಿ 209 ಸ್ಥಾನಗಳ ಪೈಕಿ 20 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಮೈಸೂರು ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮೂರೂ ಪ್ರಧಾನ ಪಕ್ಷಗಳು ಸ್ಪರ್ಧಿಸುತ್ತಿದ್ದು , ಮಹಿಳಾ ಪ್ರಾತಿನಿಧ್ಯದ ಸುಳಿವೇ ಇಲ್ಲದಂತಾಗಿದೆ. ಇದು ಏನನ್ನು ಸೂಚಿಸುತ್ತದೆ ? ರಾಜಕೀಯ ಕ್ಷಮತೆ, ದಕ್ಷತೆ ಮತ್ತು ಅಧಿಕಾರ ರಾಜಕಾರಣಕ್ಕೆ ಅಗತ್ಯವಾದ ಅರ್ಹತೆ ಇರುವ ಮಹಿಳೆಯರು ಇಲ್ಲವೆಂದೇ ಅಥವಾ ತಮ್ಮ ಪಕ್ಷಗಳ ಒಳಗೇ ಇರುವ ಅಂತಹ ಅಸಂಖ್ಯಾತ ಮಹಿಳೆಯರನ್ನು ಪಕ್ಷದ ಪುರುಷ ನಾಯಕತ್ವವು ಕಡೆಗಣಿಸಿವೆ, ಗುರುತಿಸಲು ವಿಫಲವಾಗಿವೆ ಎಂದೇ ? ಚುನಾವಣಾ ಕಣದಲ್ಲಿ ಒಟ್ಟು 184 ಮಹಿಳೆಯರು ಸ್ಪರ್ಧಿಸುತ್ತಿರುವುದನ್ನು ಗಮನಿಸಿದಾಗ, ಮುಖ್ಯವಾಹಿನಿ ಪಕ್ಷಗಳನ್ನು ಹೊರತುಪಡಿಸಿ 128 ಮಹಿಳೆಯರು ಕಣದಲ್ಲಿದ್ದಾರೆ. ಅಂದರೆ ಇಲ್ಲಿ ಮಹಿಳಾ ಅಭ್ಯರ್ಥಿಗಳ ಕೊರತೆಗಿಂತಲೂ ಢಾಳಾಗಿ ಕಾಣುವುದು ಪುರುಷಪ್ರಧಾನ ಪಕ್ಷಗಳಲ್ಲಿರುವ ಸ್ತ್ರೀ ಸಂವೇದನೆಯ ಕೊರತೆ ಅಲ್ಲವೇ ?

ಇದನ್ನೂ ಓದಿ : ಚುನಾವಣಾ ಪ್ರಣಾಳಿಕೆಗಳಂತಾಗುತ್ತಿರುವ ಮುಂಗಡ ಪತ್ರಗಳು

ಕುಟುಂಬ-ರಾಜಕಾರಣ-ಪಿತೃಪ್ರಧಾನತೆ : ಏಕೆ ಹೀಗೆ ? ಪ್ರಸ್ತುತ ಚುನಾವಣೆಗಳಲ್ಲಿ ಮತ್ತು ಇನ್ನಿತರ ರಾಜಕೀಯ ಸಂಕಥನಗಳಲ್ಲೂ ಇಂದು ಪ್ರಧಾನವಸ್ತುವಾಗಿ ಚರ್ಚೆಯಾಗುತ್ತಿರುವುದು ಕುಟುಂಬ ರಾಜಕಾರಣ ಅಥವಾ ವಂಶಾಡಳಿತದ ಪ್ರಶ್ನೆ. ಚುನಾವಣೆ ಹಾಗೂ ಅಧಿಕಾರ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯ ಕ್ಷೀಣಿಸುತ್ತಿರುವುದಕ್ಕೂ, ನಮ್ಮ ಸಮಾಜದ ಪಿತೃಪ್ರಧಾನತೆಯು ಪೋಷಿಸುತ್ತಿರುವ ಕುಟುಂಬ ರಾಜಕಾರಣಕ್ಕೂ ನೇರ ಸಂಬಂಧ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಮೂಲತಃ ಭಾರತೀಯ ಸಮಾಜದಲ್ಲಿ ಕುಟುಂಬ ಎಂದರೆ ಯಜಮಾನಿಕೆಯ ಒಂದು ಸ್ಥಾವರ. ಪುರುಷಾಧಿಪತ್ಯದ ಮೂಲ ನೆಲೆ. ಹಾಗಾಗಿಯೇ ಪಂಚಾಯತ್‌ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಿ, ಸಾವಿರಾರು ಮಹಿಳೆಯರು ಗ್ರಾಮ/ಮಂಡಲ/ತಾಲ್ಲೂಕು/ಜಿಲ್ಲಾ ಪಂಚಾಯತ್‌ಗಳಲ್ಲಿ, ಸ್ಥಳೀಯ ಪುರಸಭೆ ನಗರಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಗಳಿಸಿದ್ದರೂ ಇವರಲ್ಲಿ ಬಹುತೇಕರು ತಮ್ಮ ಕುಟುಂಬದ ಪುರುಷರ ನೆರಳಿನಲ್ಲೇ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣಬಹುದು. ಅನೇಕ ಪ್ರಸಂಗಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಯ ಸ್ಥಾನದಲ್ಲಿ ಆಕೆಯ ಪತಿಯೇ ನಿರ್ಧಾರಗಳನ್ನು ಕೈಗೊಳ್ಳುವುದನ್ನೂ ಗುರುತಿಸಲಾಗಿದೆ. ಭಾರತದ ಪ್ರಧಾನ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳೂ ಈ ಪಿತೃಪ್ರಧಾನ ಧೋರಣೆಯಿಂದ ಮುಕ್ತವಾಗಿಲ್ಲ ಎನ್ನುವುದು ಟಿಕೆಟ್‌ ಹಂಚಿಕೆಯಲ್ಲೇ ಸ್ಪಷ್ಟವಾಗುತ್ತದೆ. ಈ ಪಕ್ಷಗಳಲ್ಲಿ ಅವಕಾಶ ಪಡೆಯುವ ಮಹಿಳೆಯರೂ ಕುಟುಂಬದ ಸದಸ್ಯರೇ ಆಗಿರುತ್ತಾರೆ ಅಥವಾ ನಿಕಟ ಸಂಬಂಧಿಗಳಾಗಿರುತ್ತಾರೆ. ಅಥವಾ ಕುಟುಂಬದ ಮಹಿಳಾ ಸದಸ್ಯರು ಪುರುಷರಿಗಾಗಿ ತ್ಯಾಗ ಮಾಡುವವರಾಗಿರುತ್ತಾರೆ. ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಆಸ್ತಿ ಒಡೆತನ, ಹಂಚಿಕೆ ಮತ್ತು ಯಜಮಾನಿಕೆಗಳೇ ಕುಟುಂಬದ ಸಂರಚನೆಯನ್ನು ನಿರ್ಧರಿಸುವುದರಿಂದ, ಯಜಮಾನಿಕೆಯ ಪ್ರಶ್ನೆ ಎದುರಾದಾಗಲೆಲ್ಲಾ ಪುರುಷಾಧಿಪತ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತದೆ. ಆಸ್ತಿಯ ಒಡೆತನಕ್ಕೂ ಸಮಾಜವನ್ನು ಅಥವಾ ಸಮಾಜದ ಸದಸ್ಯರನ್ನು ನಿಯಂತ್ರಣಕ್ಕೆ ಒಳಪಡಿಸುವುದಕ್ಕೂ ಇರುವ ಸಂಬಂಧವೇ ಭಾರತದ ಅಧಿಕಾರ ರಾಜಕಾರಣಕ್ಕೂ ವ್ಯಾಪಿಸಿದ್ದು ಇದು ಗ್ರಾಮ ಪಂಚಾಯತ್‌ನಿಂದ ಲೋಕಸಭೆಯವರೆಗೂ ವಿಸ್ತರಿಸಿರುವುದನ್ನು ಗಮನಿಸಬಹುದು. ಊಳಿಗಮಾನ್ಯ ಧೋರಣೆಯ ಯಜಮಾನ ಸಂಸ್ಕೃತಿ ಮತ್ತು ಬಂಡವಾಳಶಾಹಿ ಸಮಾಜದ ಒಡೆತನದ ಸಂಸ್ಕೃತಿಯ ಸಮ್ಮಿಲನವನ್ನು ಈ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಕಾಣಲು ಸಾಧ್ಯ. ಇದೇ ಊಳಿಗಮಾನ್ಯ ಪರಂಪರೆ ಮತ್ತು ಪಿತೃಪ್ರಧಾನ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಲು ಬಯಸುವ ಪುರುಷಾಧಿಪತ್ಯದ ನೆಲೆಗಳೇ ಭಾರತದ ಬಹುತೇಕ ಒಬಿಸಿ ಪಕ್ಷಗಳನ್ನು, ಪ್ರಾದೇಶಿಕ ಪಕ್ಷಗಳನ್ನು ನಿಯಂತ್ರಿಸುತ್ತಿವೆ. ಮಹಿಳಾ ಮೀಸಲಾತಿ ಮಸೂದೆಗೆ ಅತಿ ಹೆಚ್ಚು ವಿರೋಧ ವ್ಯಕ್ತವಾಗಿದ್ದು ಈ ಪಕ್ಷಗಳಿಂದಲೇ ಮತ್ತು ಕಾಂಗ್ರೆಸ್‌—ಬಿಜೆಪಿಯಲ್ಲಿರುವ ಇದೇ ಮನಸ್ಥಿತಿಯ ಸಂಸದರಿಂದ.

ಮಹಿಳಾ ರಾಜಕಾರಣದ ನೆಲೆಗಳು : ಮುಖ್ಯವಾಹಿನಿಯ ಎಲ್ಲ ಪಕ್ಷಗಳಲ್ಲೂ ಮಹಿಳಾ ವಿಭಾಗಗಳು, ಮೋರ್ಚಾಗಳು ಪ್ರಧಾನವಾಗಿ ಕಾಣುತ್ತವೆ. ತಳಮಟ್ಟದಿಂದಲೇ ಮಹಿಳಾ ಕಾರ್ಯಕರ್ತರನ್ನು ಬೆಳೆಸುವ ಒಂದು ಪ್ರಕ್ರಿಯೆಯನ್ನೂ ಎಲ್ಲ ಪಕ್ಷಗಳಲ್ಲಿ ಗುರುತಿಸಬಹುದು. ಹಿರಿಯ ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರು ಸಾರ್ವಜನಿಕ ಸಭೆಗಳಿಗೆ ಬರುವಾಗ ಇದೇ ಮಹಿಳೆಯರೇ ಪೂರ್ಣಕುಂಭ ಸ್ವಾಗತ ಕೋರಲು ಸಜ್ಜಾಗಿ ಸಾಲುಗಟ್ಟಿ ನಿಲ್ಲುವುದೂ ಉಂಟು. ಸಂಸ್ಕೃತಿ-ಪರಂಪರೆಯ ದ್ಯೋತಕವಾಗಿ ಮಹಿಳಾ ಸಮೂಹವನ್ನು ಸ್ವಾಗತಕಾರಿಣಿಯರನ್ನಾಗಿ ಬಳಸಿಕೊಳ್ಳುವ ಒಂದು ಪರಿಪಾಠ ನಮ್ಮ ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಆಳವಾಗಿ ಬೇರೂರಿದೆ. ರಾಜಕಾರಣವೂ ಇದಕ್ಕೆ ಹೊರತಾದುದಲ್ಲ. ಆದರೆ ಸಾಂಸ್ಥಿಕ ಚೌಕಟ್ಟಿನ ಅಧಿಕಾರ ಕೇಂದ್ರಗಳಲ್ಲಿ ಮಹಿಳೆಯರಿಗೆ ಒಂದು ಉನ್ನತ ಸ್ಥಾನ ಕಲ್ಪಿಸುವಾಗ ಪುರುಷಾಧಿಪತ್ಯ ಅಡ್ಡಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ನಮ್ಮ ಮುಂದಿರುವ ಪ್ರತ್ಯಕ್ಷ ಸಾಕ್ಷಿ.

ರಾಜಕೀಯ ಅಧಿಕಾರ ಹಂಚಿಕೆಯ ಪ್ರಶ್ನೆ ಮುಖ್ಯವಾಗುವುದು ಇಲ್ಲಿಯೇ ? “ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ” (ಬೇಟಿ ಬಚಾವೋ ಬೇಟಿ ಪಢಾವೋ)ಎಂಬ ಉದಾತ್ತತೆಯ ಘೋಷಣೆಯೊಂದಿಗೆ ಭಾರತ ಅಮೃತ ಕಾಲದತ್ತ ಧಾವಿಸುತ್ತಿದೆ. ಈ ಘೋಷಣೆಗೆ “ ರಾಜನೀತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ” ಎಂಬ ಮತ್ತೊಂದು ಸಾಲನ್ನು ಏಕೆ ಸೇರಿಸಲಾಗುವುದಿಲ್ಲ ? ಇದು ಸಾಧ್ಯವಾಗುತ್ತಿಲ್ಲ. ಪುನಃ ಪುರುಷಾಧಿಪತ್ಯದ ನೆಲೆಗಳು ಅಡ್ಡಿಯಾಗುತ್ತವೆ. ಕಳೆದ ಎರಡು ದಶಕಗಳಲ್ಲಿ ಮಹಿಳಾ ಹೋರಾಟ, ಚಳುವಳಿಗಳು, ಸಂಘಟನೆಗಳು ಮಹಿಳಾ ಮೀಸಲಾತಿಯ ಬಗ್ಗೆ ದನಿ ಎತ್ತುತ್ತಲೇ ಬಂದಿವೆ. ಆದರೆ ಚುನಾವಣೆಗಳ ಸಂದರ್ಭದಲ್ಲಿ ಈ ಒಕ್ಕೊರಲ ಆಗ್ರಹ, ರಾಜಕೀಯೇತರ ಸಂಘಟನೆಗಳಿಂದಲೂ ಕೇಳಿಬರುವುದಿಲ್ಲ. ಪಕ್ಷಗಳಲ್ಲಿ ಆಂತರಿಕವಾಗಿಯೂ ಮಹಿಳಾ ಸದಸ್ಯರು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುತ್ತಿಲ್ಲ ಎನ್ನುವುದು ವಿಷಾದಕರ ಸತ್ಯ.

ಅಧಿಕಾರ ರಾಜಕಾರಣದ ಆವರಣ ಇಂದು ಸಾಕಷ್ಟು ಬದಲಾಗಿದೆ. ಹಿಂಸೆ, ದ್ವೇಷ, ಮೇಲರಿಮೆ, ದಬ್ಬಾಳಿಕೆ, ದರ್ಪ ಮತ್ತು ನಿರಂಕುಶಾಧಿಕಾರದ ಲಕ್ಷಣಗಳು ಎಲ್ಲ ಪಕ್ಷಗಳಲ್ಲೂ (ಕೊಂಚಮಟ್ಟಿಗೆ ಎಡಪಕ್ಷಗಳನ್ನು ಹೊರತುಪಡಿಸಿ) ಯಾವುದೋ ಒಂದು ನೆಲೆಯಲ್ಲಿ ಬೇರೂರಿವೆ. ರಾಜಕೀಯ ಪ್ರವೇಶ ಎಂದರೆ ಬಲಾಢ್ಯರಿಗೆ ಮಾತ್ರವೇ ಸಾಧ್ಯ ಎನ್ನುವ ಭಾವನೆ ದಟ್ಟವಾಗಿದೆ. ಈ ಬಲಾಢ್ಯತೆ ಆರ್ಥಿಕ-ಸಾಮಾಜಿಕ- ಸಾಂಸ್ಕೃತಿಕ ನೆಲೆಯಲ್ಲಿ ಸಮಾನವಾಗಿ ವ್ಯಕ್ತವಾಗುತ್ತದೆ. ಮಾರುಕಟ್ಟೆ ಆರ್ಥಿಕತೆಯ ಶಕ್ತಿಗಳು ಇದನ್ನೇ ಪೋಷಿಸುತ್ತಾ ಬಂದಿವೆ. ಈ ಸಂದರ್ಭದಲ್ಲಿ ಮಹಿಳೆಯನ್ನು ಈ ಅಖಾಡಕ್ಕೆ ಇಳಿಸಿ ಮುನ್ನಡೆಯುವಂತೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಹಿಳಾ ಸಂಘಟನೆಗಳೂ ಮಾಡಬೇಕಿದೆ. ಖ್ಯಾತ ಚಿಂತಕಿ, ಸಾಹಿತಿ ಹೋರಾಟಗಾರ್ತಿ ವಿಜಯಾ ಅವರು ಇತ್ತೀಚಿನ ಖಾಸಗಿ ಸಂಭಾಷಣೆಯಲ್ಲಿ “ಮಹಿಳೆಯರನ್ನು ನಾವಿನ್ನೂ ಸಿದ್ಧಮಾಡಿಲ್ಲ, ಅಖಾಡಕ್ಕಿಳಿಸಲು, ನಿಭಾಯಿಸಲು ಕೆಲಮಟ್ಟಿನ ಸ್ಥೈರ್ಯ ತುಂಬಬೇಕಿದೆ ಅಂಥ ಪ್ರಯತ್ನಗಳನ್ನು ಕನಿಷ್ಠ ಮಹಿಳಾ
ಸಂಘಟನೆಗಳಾದರೂ ಕೈಗೆತ್ತಿಕೊಳ್ಳಬೇಕಿತ್ತು, ಅವರ ಹೋರಾಟಗಳೆಲ್ಲಾ ಕ್ಲೀಷೆ ಆಗುತ್ತಿವೆ ” ಎಂದು ಹೇಳಿದಾಗ ಇದು ವಾಸ್ತವಕ್ಕೆ ಎಷ್ಟು ಹತ್ತಿರವಾದ ಮಾತುಗಳು ಎನಿಸಿತು. ಆಧುನಿಕೋತ್ತರ ಚಿಂತನಾ ಕ್ರಮವೂ ಇದಕ್ಕೆ ಒಂದು ಕಾರಣವಾಗಿದೆ. ಮಹಿಳೆಯರು ಹಕ್ಕಿನ ಮೇಲೆ ಪಡೆಯಬೇಕಾದ ರಾಜಕೀಯ ಅವಕಾಶಗಳು, ಟಿಕೆಟ್‌ ಹಂಚಿಕೆಯಲ್ಲಿ ಅನಿವಾರ್ಯ ಒತ್ತಡಗಳನ್ನು ಹೇರಬೇಕು ಎನ್ನುವ ವಿಜಯ ಅವರ ಅಭಿಪ್ರಾಯ ಇಂದು ಹೆಚ್ಚು ಪ್ರಸ್ತುತ. ಈ ಮಾತುಗಳ ಹಿಂದೆ ಕಾಣುವ ಹತಾಶೆ ಮತ್ತು ವಿಷಾದ ಮಹಿಳಾ ಸಂಘಟನೆಗಳನ್ನೂ ಪ್ರಚೋದಿಸಬೇಕಿದೆ.

ಮುಂದಿನ ಹಾದಿ !!! ಗ್ರಾಮಮಟ್ಟದಿಂದಲೂ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದರೊಂದಿಗೆ ಸಂವಿಧಾನದ ಅಡಿ ಮಹಿಳೆಯರಿಗೆ ಇರುವ ಸಮಾನ ಹಕ್ಕುಗಳ ಬಗ್ಗೆಯೂ ಅರಿವು ಮೂಡಿಸಬೇಕಿದೆ. ಪುರುಷಾಧಿಪತ್ಯದ ರಾಜಕೀಯ ಅಧಿಕಾರ ಕೇಂದ್ರಗಳನ್ನು ಹಿಂಬಾಲಿಸುವ ಬೆಂಗಾವಲು ಪಡೆಯಾಗದೆ ಅಥವಾ ಸ್ವಾಗತಕಾರಿಣಿಯರಾಗದೆ, ಮಹಿಳಾ ಸಂಕುಲ ಅಧಿಕಾರಯುತ ಸ್ಥಾನಗಳಲ್ಲಿ ಸಮಾನ ಸ್ಥಾನಮಾನಗಳಿಗಾಗಿ ಹೋರಾಡಬೇಕಿದೆ. ಪಕ್ಷ ರಾಜಕಾರಣವನ್ನು ಆವರಿಸಿರುವ ಮತ್ತು ನಿಯಂತ್ರಿಸುವ ಪಿತೃಪ್ರಧಾನತೆ ಹಾಗೂ ಪುರುಷಾಧಿಪತ್ಯದ ನೆಲೆಗಳನ್ನು ಧಿಕ್ಕರಿಸುವ ಮೂಲಕ ಮಹಿಳಾ ಸಮೂಹವು ತಮ್ಮ ಸಾಂವಿಧಾನಿಕ ಹಕ್ಕೊತ್ತಾಯಗಳನ್ನು ಮುನ್ನೆಲೆಗೆ ತರುವ ಸಂದರ್ಭ ಇಂದು ಎದುರಾಗಿದೆ. ಮೇ 10ರ ರಾಜ್ಯ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಗಳು ಈ ದಿಕ್ಕಿನಲ್ಲಿ ಗಂಭೀರವಾಗಿ ಆಲೋಚನೆ ಮಾಡುವ ಅವಕಾಶವನ್ನೂ ಕಲ್ಪಿಸಿದೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಅಸಮಾನತೆ ಮತ್ತು ಅಭದ್ರತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ತುತ್ತಾಗುತ್ತಿರುವುದನ್ನು ಗಮನಿಸಿದಾಗ, ಮಹಿಳಾ ರಾಜಕಾರಣದ ನೆಲೆಗಳು ಇನ್ನೂ ಆಳಕ್ಕಿಳಿಯಬೇಕಾದ ಅನಿವಾರ್ಯತೆಯನ್ನೂಮನಗಾಣಬಹುದು.

ಪುರುಷಾಧಿಪತ್ಯದ ಭದ್ರಕೋಟೆಯನ್ನು ಭೇದಿಸುವುದು ಸುಲಭದ ಮಾತೇನಲ್ಲ. ಏಕೆಂದರೆ ಪಿತೃಪ್ರಧಾನತೆಯ ಶ್ರೀರಕ್ಷೆಯಲ್ಲಿ ಈ ಕೋಟೆಯನ್ನು ಸಂರಕ್ಷಿಸಲು ದೇಶದ ಇಡೀ ರಾಜಕೀಯ ವ್ಯವಸ್ಥೆಯೇ ಸಜ್ಜಾಗಿ ನಿಂತಿದೆ. ಇದರೊಂದಿಗೆ ಕಾರ್ಪೋರೇಟ್‌ ಮಾರುಕಟ್ಟೆ ಹಾಗೂ ಬೃಹದಾರ್ಥಿಕ ನೆಲೆಗಳೂ ಕಾವಲು ಕಾಯುತ್ತವೆ. ಯಜಮಾನಿಕೆಯ ಸಂಸ್ಕೃತಿಯನ್ನು ಧಿಕ್ಕರಿಸುವ ಮೂಲಕವೇ ಪ್ರತಿಯೊಂದು ಪಕ್ಷದಲ್ಲೂ ಮಹಿಳಾ ಸದಸ್ಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹೋರಾಡಬೇಕಿದೆ. ಬಾಹ್ಯ ಸಮಾಜದ ಮಹಿಳಾ ಸಂಘಟನೆಗಳೂ ಈ ನಿಟ್ಟಿನಲ್ಲಿ ಸಕ್ರಿಯವಾಗಬೇಕಿದೆ. ಈ ಪ್ರಕ್ರಿಯೆಗೆ ಸಾಮಾಜಿಕ-ಸಾಂಸ್ಕೃತಿಕ ಸ್ವರೂಪ ನೀಡಿದರೆ ಮಾತ್ರ ಮಹಿಳಾ ಮೀಸಲಾತಿ ಮಸೂದೆ ಮರುಜೀವ ಪಡೆಯಲು ಸಾಧ್ಯ.

Donate Janashakthi Media

Leave a Reply

Your email address will not be published. Required fields are marked *