1947ರಲ್ಲಿ ಸ್ವಾತಂತ್ರ್ಯ ಬಂದ ದಿನದಿಂದಲೂ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಭಾಯಿಸಿರುವ ಪ್ರಾತಿನಿಧಿಕ ಚುನಾಯಿತ ಸರ್ಕಾರಗಳ ನಡುವೆ ಒಂದು ಸಮಾನ ಎಳೆಯನ್ನು ಗುರುತಿಸಬಹುದಾದರೆ, ಅದು ಶಿಕ್ಷಣ ಕ್ಷೇತ್ರದ, ವಿಶೇಷವಾಗಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ನಿರ್ಲಕ್ಷ್ಯ. 1950ರಲ್ಲಿ ಭಾರತದ ಗಣತಂತ್ರ ಸಂವಿಧಾನವನ್ನು ಅಳವಡಿಸಿಕೊಂಡ ಕ್ಷಣದಿಂದ ಇತ್ತೀಚಿನವರೆಗಿನ ನಡಿಗೆಯನ್ನು ಗಮನಿಸಿದಾಗ, ಒಮ್ಮೆಯೂ ಸಹ, ಶಿಕ್ಷಣ ಕ್ಷೇತ್ರಕ್ಕೆ ವಾರ್ಷಿಕ ಬಜೆಟ್‌ಗಳಲ್ಲಿ ಅಪೇಕ್ಷಿತ ಶೇಕಡಾ 6ರಷ್ಟು ಹಣವನ್ನು ನಿಗದಿಪಡಿಸಲಾಗಿಲ್ಲ. ಹಣದ ಮೊತ್ತ ಹೆಚ್ಚಾಗಿರುವುದನ್ನು ಗುರುತಿಸಬಹುದಾದರೆ, ಸಮಾನಾಂತರವಾಗಿ ಜಿಡಿಪಿಯ ಒಂದು ಅಂಶವಾಗಿ ಶಿಕ್ಷಣಕ್ಕೆ ನೀಡಲಾಗಿರುವ ಮೊತ್ತ ಅತ್ಯಲ್ಪವೇ ಆಗಿದೆ. ಕೆಲವೊಮ್ಮೆ ಕಡಿಮೆಯಾಗಿರುವುದನ್ನೂ ಗುರುತಿಸಬಹುದು. ಮಾರುಕಟ್ಟೆ
-ನಾ ದಿವಾಕರ
ಉದಾಹರಣೆಗೆ 1951ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇಕಡಾ 7.8ರಷ್ಟು ಅನುದಾನವನ್ನು ನಿಗದಿಪಡಿಸಲಾಗಿತ್ತು. ಆದರೆ 1985ರ ವೇಳೆಗೆ ಇದು ಶೇಕಡಾ 3.5ಕ್ಕೆ ಕುಸಿದಿತ್ತು. 1964-66ರಲ್ಲಿ ರಚಿಸಿದ ಕೊಥಾರಿ ಆಯೋಗವು ದೇಶದ ಪ್ರಪ್ರಥಮ ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸಿತ್ತು. ಈ ಆಯೋಗದ ಶಿಫಾರಸುಗಳ ಅನುಸಾರ ಸರ್ಕಾರಗಳು ವಾರ್ಷಿಕ ಬಜೆಟ್‌ಗಳಲ್ಲಿ ಜಿಡಿಪಿಯ ಕನಿಷ್ಠ ಶೇಕಡಾ 6ರಷ್ಟನ್ನು ಶಿಕ್ಷಣಕ್ಕಾಗಿ ಮೀಸಲಿಡಬೇಕಿತ್ತು. ಆದರೆ ಇದು ಕೇವಳ ಹಾಳೆಗಳಲ್ಲೇ ಉಳಿದಿರುವ ಒಂದು ಸಲಹೆಯಾಗಿದೆ. ವಿಕಸಿತ ಭಾರತವಾಗುವ ದಿಕ್ಕಿನಲ್ಲಿ ಸಾಗುತ್ತಿರುವ ಹೊತ್ತಿನಲ್ಲಿ ನವ ಭಾರತದ ಇತ್ತೀಚಿನ 2020ರ ಹೊಸ ಶಿಕ್ಷಣ ನೀತಿಯಲ್ಲೂ ಕೊಥಾರಿ ಆಯೋಗದ ಶಿಫಾರಸುಗಳನ್ನು ಪುನರುಚ್ಛರಿಸಲಾಗಿದೆ. ಆದರೆ ಬಜೆಟ್ ಅನುದಾನದ ಪ್ರಮಾಣ ಶೇಕಡಾ 2 ರಿಂದ 4 ನಡುವೆ ಸೀಮಿತವಾಗಿದೆ. ಮಾರುಕಟ್ಟೆ
2025-26ರ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಕಳೆದ ವರ್ಷಕ್ಕಿಂತಲೂ ಶೇಕಡಾ 6.22ರಷ್ಟು ಅನುದಾನವನ್ನು ಹೆಚ್ಚಿಸಲಾಗಿದೆಯಾದರೂ ಶೇಕಡಾವಾರು ನೆಲೆಯಲ್ಲಿ ನೋಡಿದಾಗ ಜಿಡಿಪಿಯ ಶೇಕಡಾ 3ಕ್ಕಿಂತಲೂ ಕಡಿಮೆ ಇದೆ, 1951 ರಿಂದ 2020ರವರೆಗಿನ ಬಜೆಟ್‌ಗಳನ್ನು ಅವಲೋಕಿಸಿದಾಗ ಕಾಣುವ ವಾಸ್ತವ ಎಂದರೆ, ಜಿಡಿಪಿಯ ಒಂದು ಭಾಗವಾಗಿ ಶಿಕ್ಷಣಕ್ಕಾಗಿ ಮೀಸಲಿಡುವ ನಿಧಿಯ ಪ್ರಮಾಣ ಶೇಕಡಾ 0.51ರಿಂದ ಶೇಕಡಾ 3.1ಕ್ಕೆ ಹೆಚ್ಚಾಗಿದೆ. ಹಿಂದಿನ ಬಜೆಟ್‌ಗಳಿಗೆ ಹೋಲಿಸಿ ನೋಡಿದಾಗ ಶಿಕ್ಷಣ ವಲಯಕ್ಕೆ ಹೆಚ್ಚಿನ ಹಣಕಾಸು ಒದಗಿಸಿರುವುದನ್ನು ಗುರುತಿಸಬಹುದಾದರೂ, ಒಟ್ಟು ಜಿಡಿಪಿ ಪಾಲು ಹೆಚ್ಚಾಗದಿರುವುದು, ಭಾರತದ ಆಳುವ ವರ್ಗಗಳಲ್ಲಿ ಶಿಕ್ಷಣದ ಬಗ್ಗೆ ಇರುವ ಮೂಲ ಧೋರಣೆಯನ್ನು ಬಿಂಬಿಸುತ್ತದೆ.
ಇದನ್ನೂ ಓದಿ: ನವದೆಹಲಿ| 4 ಅಂತಸ್ತಿನ ಕಟ್ಟಡ ಕುಸಿತ; ನಾಲ್ವರು ಸಾವು
ಸಾಂಪ್ರದಾಯಿಕತೆಯ ಛಾಯೆಯಲ್ಲಿ
ಈ ಧೋರಣೆಯ ಮೂಲವನ್ನು ಭಾರತದ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ ಮತ್ತು ಪಾರಂಪರಿಕ ಸಂಸ್ಕೃತಿಯಲ್ಲೇ ಗುರುತಿಸಬಹುದು. ತಳಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಏಳು ದಶಕಗಳ ಅವಧಿಯಲ್ಲಿ ಸಾಕಷ್ಟು ಏರುಗತಿಯನ್ನು ಗುರುತಿಸಬಹುದಾದರೂ, ಮೂಲಭೂತವಾಗಿ ಅವಕಾಶ ವಂಚಿತ, ಅನಕ್ಷರಸ್ಥ ಹಾಗೂ ನಗರೀಕರಣದಿಂದ ದೂರ ಇರುವ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಜನಸಮೂಹಗಳಿಗೆ ಶಿಕ್ಷಣವನ್ನು ಬದುಕು ಕಟ್ಟಿಕೊಳ್ಳುವ ಒಂದು ಆಕರವಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಸೋತಿವೆ, ಸೋಲುತ್ತಲೇ ಇವೆ. ಏಕೆಂದರೆ ಮೂಲತಃ ಭಾರತದಲ್ಲಿ ಶಾಲಾ ಶಿಕ್ಷಣವನ್ನು ಮಕ್ಕಳ ಜ್ಞಾನ ವೃದ್ಧಿಗಿಂತಲೂ ಹೆಚ್ಚಾಗಿ, ಕಲಿತ ಮಕ್ಕಳು ಮುಂದಿನ ಹಂತಕ್ಕೆ ಸಾಗಲು ನೆರವಾಗುವ ಬೌದ್ಧಿಕ ಸೇತುವೆ ಆಗಿ ಕಾಣಲಾಗುತ್ತದೆ.
ಅಂಕ ಆಧಾರಿತ ಪರೀಕ್ಷೆಗಳು, ಓದಿರುವುದನ್ನೇ ನೆನಪಿಟ್ಟುಕೊಂಡು ಬರೆಯುವ ವಿಧಾನ ಮತ್ತು ವಾರ್ಷಿಕ ಪರೀಕ್ಷೆಗಳನ್ನು ಮಕ್ಕಳ ಬುದ್ಧಿಶಕ್ತಿಯನ್ನು ಅಳೆಯುವ ಒಂದು ಮಾನದಂಡವಾಗಿ ಪರಿಗಣಿಸುವುದು ವೈಜ್ಞಾನಿಕ ನೆಲೆಯಲ್ಲಿ ಈ ವ್ಯವಸ್ಥೆಯ ಲೋಪಗಳಾಗಿ ಗುರುತಿಸಹುದು. ಮಕ್ಕಳಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಮತ್ತು ಅತಿ ಹೆಚ್ಚು ಅಂಕ ಗಳಿಸುವುದು ಪ್ರಧಾನ ಮಾಪಕವಾಗಿ ಗುರುತಿಸುವುದರಿಂದ, ನೂರಕ್ಕೆ ನೂರು ಅಥವಾ 95ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸುವವರನ್ನು ಸಾರ್ವಜನಿಕವಾಗಿ ಮೆರೆಸುವ ಒಂದು ವಿಧಾನವನ್ನೂ ನಮ್ಮ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಂಡಿದೆ. ಹಾಗಾಗಿಯೇ ವಾರ್ಷಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣವಾಗುವುದು ಕಳಂಕಪ್ರಾಯವಾಗಿ ಅಥವಾ ಅಪಮಾನಕರವಾಗಿ ಪರಿಣಮಿಸಿದೆ. ತತ್ಪರಿಣಾಮವಾಗಿ ಉತ್ತಮ ಅಂಕ ಗಳಿಸಲಾಗದ ಮಕ್ಕಳು ಅಥವಾ ತೇರ್ಗಡೆಯಾಗದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವ, ಖಿನ್ನತೆಗೊಳಗಾಗುವ (Depressioņ)̧ ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರಸಂಗಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಇಲ್ಲಿ ಮಕ್ಕಳ ಯಶಸ್ಸು ಅಥವಾ ಸಾಧನೆಯ ಶ್ರೇಯವನ್ನು ಆ ಮಕ್ಕಳಿಗೇ ಅರ್ಪಿಸುವ ಮುನ್ನವೇ, ಶಿಕ್ಷಣ ಸಂಸ್ಥೆಗಳು ತಮ್ಮ ಸಾಂಸ್ಥಿಕ ಹಿರಿಮೆಯನ್ನು ಸಾರ್ವಜನಿಕವಾಗಿ ಟಾಂಟಾಂ ಮಾಡುವ ಒಂದು ಪರಂಪರೆಯನ್ನೂ ಗುರುತಿಸಬಹುದು. ಏಕೆಂದರೆ ಪ್ರತಿವರ್ಷ ನಡೆಯುವ ಪರೀಕ್ಷೆಗಳ ಫಲಿತಾಂಶಗಳು, ಶಿಕ್ಷಣಾರ್ಥಿಗಳ ಅರ್ಹತೆಯನ್ನು ಅಳೆಯುವ ಮಾಪಕಗಳಾಗಿರುವಂತೆಯೇ, ಶಾಲೆಗಳ ಅಥವಾ ಶಿಕ್ಷಣ ಇಲಾಖೆಯ ಕಾರ್ಯಕ್ಷಮತೆಯನ್ನು ನಿರ್ಧರಿಸುವ ಮಾಪಕಗಳಾಗಿ ಕಾಣುತ್ತವೆ. ಈ ಬಾರಿ ಕರ್ನಾಟಕದ ಪದವಿ ಪೂರ್ವ ಪರೀಕ್ಷೆಗಳಲ್ಲಿ ನೂರಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವುದನ್ನು ಗಮನಿಸಿದಾಗ, ಶೈಕ್ಷಣಿಕ ವ್ಯವಸ್ಥೆಯ ನಿರ್ವಹಣೆಯಲ್ಲಿನ ಅಸಮತೋಲನ ಮತ್ತು ಅಸಮಾನತೆಗಳನ್ನೂ ಗುರುತಿಸಬಹುದು. ಈ ಕಳಪೆ ಸಾಧನೆಗೆ ವ್ಯಕ್ತಿಗತ ಸಾಂಸ್ಥಿಕ ಕಾರಣಗಳು ಇರಬಹುದಾದರೂ, ಅಂತಹ ಶಾಲೆಗಳಲ್ಲಿನ ಬೋಧನಾ ಮಾದರಿ, ಕಲಿಕಾ ವಿಧಾನ ಮತ್ತು ಮೂಲ ಸೌಕರ್ಯಗಳತ್ತ ಗಮನಹರಿಸುವುದು ನಮ್ಮ ಆದ್ಯತೆಯಾಗಬೇಕಾಗುತ್ತದೆ.
ನವ ಭಾರತದ ಶೈಕ್ಷಣಿಕ ವಾಣಿಜ್ಯೀಕರಣ
ಆದರೆ ಬದಲಾದ ವರ್ತಮಾನ ಭಾರತದಲ್ಲಿ ಶಿಕ್ಷಣ ಮತ್ತು ಶೈಕ್ಷಣಿಕ ಕ್ಷೇತ್ರ ಹೆಚ್ಚು ಹೆಚ್ಚು, ವಾಣಿಜ್ಯೀಕರಣಕ್ಕೊಳಗಾಗುತ್ತಿರುವುದು, ಇಡೀ ಶಿಕ್ಷಣ ವ್ಯವಸ್ಥೆಯನ್ನೇ ರೂಪಾಂತರಗೊಳಿಸಿದೆ. ಸರ್ಕಾರಗಳು ಸಾರ್ವತ್ರಿಕ ಶಿಕ್ಷಣವನ್ನು ತಳಮಟ್ಟದವರೆಗೂ ತಲುಪಿಸುವ ತಮ್ಮ ಜವಾಬ್ದಾರಿಯನ್ನು, ಕಾರ್ಪೋರೇಟ್ ಮಾರುಕಟ್ಟೆಗೆ ಪರಭಾರೆ ಮಾಡುತ್ತಿರುವುದರಿಂದ, ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಖಾಸಗಿ ಶಾಲೆ-ಕಾಲೇಜು-ಕೋಚಿಂಗ್ ಕೇಂದ್ರಗಳು, ಇಡೀ ವ್ಯವಸ್ಥೆಯ ವಾರಸುದಾರಿಕೆಯನ್ನು ವಹಿಸಿಕೊಂಡಿವೆ. ಈ ಶಾಲೆಗಳಿಗೆ ಮಕ್ಕಳ ಸಾಧನೆ ಅಥವಾ ವೈಫಲ್ಯ ಎರಡೂ ಸಹ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಪ್ರಕ್ರಿಯೆಗಳಾಗಿ ಮಾತ್ರ ಕಾಣುತ್ತವೆ. ಹಾಗಾಗಿ ತಮ್ಮ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಸಕಲ ಮಾರ್ಗಗಳನ್ನೂ ಅನುಸರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಅಂಕ ಗಳಿಸುವ ಪ್ರತಿಯೊಬ್ಬ ಶಿಕ್ಷಣಾರ್ಥಿಯೂ, ಮುಂಬರುವ ವರ್ಷಕ್ಕೆ ಪ್ರವೇಶಾಕಾಂಕ್ಷಿಗಳ ಹೆಚ್ಚಳಕ್ಕೆ ಸಹಾಯ ಮಾಡುವ ಸರಕಿನಂತೆ ಕಾಣುತ್ತಿರುವುದು ಈ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿ. ಹಾಗೆಯೇ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹೊರೆಯಾಗಿ ಕಂಡುಬರುತ್ತಾರೆ.
ಇಲ್ಲಿ ಪ್ರಜ್ಞಾವಂತ ಸಮಾಜ ಗಮನಿಸಬೇಕಿರುವುದು, ಹತ್ತನೆಯ ತರಗತಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶಗಳ ನಂತರ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು. ತಮ್ಮ ಶಾಲೆಯ ಸಾಧಕ ಮಕ್ಕಳ ಚಹರೆಗಳನ್ನು ಇಡೀ ಪುಟ ಆವರಿಸುವಂತೆ ತುಂಬಿಸಿ, ಆ ಮಕ್ಕಳ ಸಾಧನೆಯ ಹಿಂದೆ, ಅವರ ವೈಯ್ಯುಕ್ತಿಕ ಪರಿಶ್ರಮದೊಂದಿಗೇ ತಮ್ಮ ಸಂಸ್ಥೆಯ ಕೊಡುಗೆಯೂ ಇದೆ ಎಂದು ಬಿಂಬಿಸಿಕೊಳ್ಳುವ ಈ ವಾಣಿಜ್ಯ ಪ್ರಕ್ರಿಯೆ , ಒಂದು ರೀತಿಯಲ್ಲಿ ಗ್ರಾಹಕ ವಸ್ತುಗಳ ಬಳಕೆಯನ್ನು ಸೆಲೆಬ್ರಿಟಿಗಳ ಮೂಲಕ ಸಾಮಾನ್ಯೀಕರಿಸುವ ಮಾರುಕಟ್ಟೆ ತಂತ್ರದಂತೆಯೇ ಕಾಣುತ್ತದೆ. ಈ ಜಾಹೀರಾತುಗಳು ಯಶಸ್ವಿ ಶಿಕ್ಷಣಾರ್ಥಿಗಳ ದೃಷ್ಟಿಯಿಂದ ಅಪ್ಯಾಯಮಾನ ಎನಿಸುವುದಾದರೂ, ಇದಕ್ಕಾಗಿ ಸಂಸ್ಥೆಗಳು ಹೂಡುವ ಬಂಡವಾಳದ ದೃಷ್ಟಿಯಲ್ಲಿ, ಈ ನಗುಮೊಗಗಳೆಲ್ಲವೂ, ಭವಿಷ್ಯದ ಸಾಂಸ್ಥಿಕ ಲಾಭಗಳಿಕೆಯ ಕಚ್ಚಾವಸ್ತುಗಳಾಗಿಬಿಡುತ್ತವೆ. ಸಂಸ್ಥೆಯ ಸಾಧನೆಯನ್ನು ಬಿಂಬಿಸುವುದು ತಪ್ಪಲ್ಲ ಆದರೆ ಅದನ್ನು ಪ್ರಚಾರದ ಸರಕಿನಂತೆ ಬಳಸುವುದು ಬೌದ್ಧಿಕ ಅಪ್ರಮಾಣಿಕತೆ.
ಈ ಸಂತೆಯ ವಾತಾವರಣದಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗಳು ಸಾರ್ವಜನಿಕರ ನಡುವೆ ಹಾಗೂ ಮಕ್ಕಳ ಪೋಷಕರ ನಡುವೆ ಸೃಷ್ಟಿಸುವಂತಹ ಹರುಷ ಮತ್ತು ವಿಷಾದ ಎರಡನ್ನೂ ಸಮಚಿತ್ತದಿಂದ ಅವಲೋಕಿಸಿದಾಗ , ಅಲ್ಲಿ ಅನುತ್ತೀರ್ಣರಾದ ಮಕ್ಕಳ ಪೋಷಕರ ಮೇಲೆ ಉಂಟಾಗುವ ಋಣಾತ್ಮಕ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಪ್ರಶಂಸಿಸುವುದು ವ್ಯಕ್ತಿಗತ ನೆಲೆಯಲ್ಲಿ, ಆ ಮಕ್ಕಳ ದೃಷ್ಟಿಯಿಂದ ಉತ್ತೇಜನಪೂರ್ಣವಾಗಿರುವುದು ಸಹಜ. ಅಂತಹ ಮಕ್ಕಳ ಭವಿಷ್ಯದ ಹೆಚ್ಚಿನ ಸಾಧನೆಗೆ ಇದು ನೆರವಾಗುತ್ತದೆ. ಆದರೆ ಈ ಪ್ರಶಂಸೆಗಳು ವ್ಯಕ್ತಿಗತ ಕೌಟುಂಬಿಕ ನೆಲೆಗಳಿಂದ ವಿಶಾಲ ಸಮಾಜದ ಸಾರ್ವಜನಿಕ ವಲಯದಲ್ಲಿ ಬಿಂಬಿಸಲ್ಪಡುವುದು ಅತಿರೇಕವಷ್ಟೇ ಅಲ್ಲ ಅಸೂಕ್ಷ್ಮವಾಗಿಯೂ ಕಾಣುತ್ತದೆ. ಏಕೆಂದರೆ ಈ ರೀತಿ ಬಿಂಬಿಸುವ ಪ್ರಕ್ರಿಯೆಯಲ್ಲಿ ʼ ಸಾಧಕ ಮಕ್ಕಳನ್ನು ʼ ಪ್ರತ್ಯೇಕಿಸಿ ನೋಡುವ ಒಂದು ವಕ್ರನೋಟವೂ ಇರುತ್ತದೆ.
ಸಾಧನೆ ವೈಫಲ್ಯಗಳ ಸಂಕೀರ್ಣತೆಗಳು
ಅಂದರೆ ಸಾಧನೆ ಮಾಡಲು ಸಾಧ್ಯವಾಗದ ಮಕ್ಕಳಿಗಿಂತಲೂ, ಸಾಧನೆಗೈದ ಮಕ್ಕಳ ಬುದ್ಧಿಶಕ್ತಿ, ಕೌಶಲ ಹೆಚ್ಚಾಗಿದೆ ಎಂದು ಬಿಂಬಿಸುವ ಒಂದು ಮನೋವೃತ್ತಿ ಇಲ್ಲಿ ಕಾಣುತ್ತದೆ. ಮನಶ್ಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ, ಈ ರೀತಿಯ ಸಾಮಾಜಿಕ ಸಾಮಾನ್ಯೀಕರಣವು (Social Generalisation) ಹಲವು ಕಾರಣಗಳಿಗಾಗಿ ಇತರ ಉನ್ನತ ಶ್ರೇಣಿಯ ಮಕ್ಕಳೊಂದಿಗೆ ಸ್ಪರ್ಧಿಸಲಾಗದ ಮಕ್ಕಳಲ್ಲಿ ʼತಾವು ಹಿಂದುಳಿದಿದ್ದೇವೆ ʼ ಎಂಬ ಖೇದವನ್ನು ಉಂಟುಮಾಡುತ್ತದೆ. ಈ ಮಕ್ಕಳ ಪರೀಕ್ಷಾ ಫಲಿತಾಂಶ ಅಥವಾ ಅಂಕಗಳಿಕೆಯನ್ನೇ ಅವರ ಬುದ್ಧಿಶಕ್ತಿಯ ಮಾನದಂಡವಾಗಿ ಬಳಸುವ ಮಾರುಕಟ್ಟೆ ತಂತ್ರವು, ಅಂತಹ ಮಕ್ಕಳಲ್ಲಿ ಕೀಳರಿಮೆಯನ್ನುಂಟುಮಾಡುವ ಸಾಧ್ಯತೆಗಳಿರುತ್ತವೆ. ಪರೀಕ್ಷೆಗಳಲ್ಲಿ ಅನುತ್ತೀರ್ಣವಾಗುವುದೇ ಅಪಮಾನಕರ ಎಂದು ಭಾವಿಸುವ ಸಮಾಜದಲ್ಲಿ, ಹಲವು ಕಾರಣಗಳಿಗಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಶಿಕ್ಷಣಾರ್ಥಿಗಳ ಮನಸ್ಥಿತಿ ಮತ್ತು ಅವರ ಅಂತರಾಳದ ನೋವು ಇಲ್ಲಿ ಗಣನೆಗೇ ಬರುವುದಿಲ್ಲ ಯಶಸ್ಸು ಗಳಿಸಲಾಗದ ಶಿಕ್ಷಣಾರ್ಥಿಗಳು ಮನನೊಂದು ಆತ್ಮಹತ್ಯೆಗೆ ಮುಂದಾಗುವುದು ಪ್ರತಿ ವರ್ಷ ನಾವು ಕಾಣುತ್ತಿರುವ ವಿದ್ಯಮಾನ.
ನೂರಾರು ಚಹರೆಗಳನ್ನೊಳಗೊಂಡ ಪುಟಗಟ್ಟಲೆ ಪ್ರಕಟವಾಗುವ ಯಶಸ್ವಿ ಸಾಧನೆಯ ಯಾವುದೇ ಶಾಲಾ ಜಾಹೀರಾತಿನಲ್ಲೂ, ಅನುತ್ತೀರ್ಣರಾದ ಶಿಕ್ಷಣಾರ್ಥಿಗಳಿಗೆ ಸಾಂತ್ವನ ಹೇಳುವ ಒಂದು ಸಾಲು ಸಹ ಇಲ್ಲದಿರುವುದು, ಶೈಕ್ಷಣಿಕ ಮಾರುಕಟ್ಟೆಯ ಬೌದ್ಧಿಕ ಕ್ರೌರ್ಯದ ಸಂಕೇತ ಎಂದೇ ಹೇಳಬೇಕಾಗಿದೆ. ಮಕ್ಕಳ ವೈಯುಕ್ತಿಕ ಸಾಧನೆಗೂ ಹಿಂದೆ ತಮ್ಮ ಸಂಸ್ಥೆಯ ದಕ್ಷತೆ, ಬೌದ್ಧಿಕ ಗುಣಮಟ್ಟ, ಬೋಧಕ ವಿಧಾನಗಳೇ ಕಾರಣ ಎಂದು ಬಿಂಬಿಸಿಕೊಳ್ಳುವ ಶಿಕ್ಷಣದ ಮಾರುಕಟ್ಟೆ ಪ್ರಕ್ರಿಯೆಯಲ್ಲಿ, ಅನುತ್ತೀರ್ಣರಾದ ಅಥವಾ ಕಡಿಮೆ ಸಾಧನೆ ಮಾಡಿರುವ ಮಕ್ಕಳು ಅನಾಥರಾಗಿಬಿಡುತ್ತಾರೆ. ಈ ಮಕ್ಕಳನ್ನು ಒಂದೆಡೆ ಕೂರಿಸಿ, ಸಾಂತ್ವನ ಹೇಳುವ, ಆತ್ಮಸ್ಥೈರ್ಯವನ್ನು ನೀಡುವ ಅಥವಾ ಮುಂದಿನ ಹೆಜ್ಜೆಗೆ ಅವಶ್ಯವಾದ ಮಾರ್ಗದರ್ಶನ ನೀಡುವ ಕ್ರಮವನ್ನು ಎಲ್ಲಿಯೂ ಕಾಣಲಾಗುವುದಿಲ್ಲ. ಇದು ಅನುತ್ತೀರ್ಣರಾದ ಶಿಕ್ಷಣಾರ್ಥಿಗಳ ಮನಸ್ಸಿನಲ್ಲಿ ಕಳಂಕಿತ ಅಥವಾ ಅಪಮಾನಿತ ಮನೋಭಾವವನ್ನು ಉಂಟುಮಾಡುತ್ತದೆ. ಮಕ್ಕಳ ಆತ್ಮಹತ್ಯೆಗಳಿಗೆ ಇದೂ ಒಂದು ಕಾರಣ ಎನ್ನುವುದನ್ನು ಮನಶ್ಶಾಸ್ತ್ರೀಯ ನೆಲೆಯಲ್ಲಿ, ಸಮಾಜಶಾಸ್ತ್ರೀಯ ನೆಲೆಗಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕಿದೆ.
ಸಾಮುದಾಯಿಕ ಪ್ರಜ್ಞೆಯ ನೆಲೆಯಲ್ಲಿ
ಮತ್ತೊಂದು ಸಾಮಾಜಿಕ ನೆಲೆಯಲ್ಲಿ, ನಮ್ಮ ಜಾತಿ ವ್ಯವಸ್ಥೆಯ ಛಾಯೆಯಲ್ಲೇ ನಡೆಯುವ ಪ್ರತಿಭಾ ಪುರಸ್ಕಾರಗಳನ್ನೂ ಸಹ ಒರೆ ಹಚ್ಚಿ ನೋಡಬೇಕಿದೆ. ಭಾರತದಲ್ಲಿ ನಮ್ಮ ಮನಸ್ಥಿತಿ ಮತ್ತು ಮನೋವೃತ್ತಿಯನ್ನು ರೂಪಿಸಿ ನಿರ್ದೇಶಿಸುವುದು ವಿಶಾಲ ಸಮಾಜ ಅಲ್ಲ ಬದಲಾಗಿ ಆಯಾ ಸಮಾಜದೊಳಗಿನ ಸಮುದಾಯಗಳು (Communities). ಈ ಸಾಮುದಾಯಿಕ ನೆಲೆಯಲ್ಲಿ ಪ್ರತಿಯೊಂದು ಜಾತಿ, ಉಪಜಾತಿಯೂ ಸಹ ತನ್ನೊಳಗಿನ ʼಪ್ರತಿಭಾವಂತ ́ ಶಿಕ್ಷಣಾರ್ಥಿಗಳನ್ನು, ಪರೀಕ್ಷಾ ಫಲಿತಾಂಶದ ಮಸೂರದ ಮೂಲಕವೇ ನೋಡಿ ಸಾರ್ವಜನಿಕವಾಗಿ ಸನ್ಮಾನಿಸುವ ಒಂದು ಪರಂಪರೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ಸಾಧನೆಗೈದ ಮಕ್ಕಳ ದೃಷ್ಟಿಯಿಂದ ಅಪ್ಯಾಯಮಾನ ಎನಿಸಿದರೂ, ವಿಕಸನದ ವಯಸ್ಸಿನಲ್ಲಿ ಅವರೊಳಗೆ ಸಾಮುದಾಯಿಕ ಪ್ರಜ್ಞೆ (Community Consciousness) ಬಿತ್ತುವ ಪ್ರಕ್ರಿಯೆಯಾಗಿಯೂ ಕಾಣುತ್ತದೆ.
ಇಲ್ಲಿ ಸಾಧನೆ ಮಾಡಲಾಗದ ಅಥವಾ ಅನುತ್ತೀರ್ಣರಾದ ಮಕ್ಕಳು ಸಮುದಾಯದ ಒಳಗೇ ಅನಾಥರಾಗಿಬಿಡುತ್ತಾರೆ. ಇಂತಹ ಮಕ್ಕಳನ್ನು ಒಂದೆಡೆ ಸೇರಿಸಿ, ಅವರ ವೈಫಲ್ಯ ಅಥವಾ ಹಿನ್ನಡೆಗೆ ಕಾರಣಗಳನ್ನು ತಿಳಿದುಕೊಂಡು, ಶೈಕ್ಷಣಿಕವಾಗಿ ಅವರ ಮುನ್ನಡೆಗೆ ಅಗತ್ಯವಾದ ಉಪಕ್ರಮಗಳನ್ನು ಕೈಗೊಳ್ಳುವ ಪ್ರಯತ್ನವನ್ನು ಎಷ್ಟು ಜಾತಿ-ಸಮುದಾಯದ ಗುಂಪುಗಳು ಮಾಡುತ್ತಿವೆ ? ಅವಕಾಶಗಳಿಲ್ಲದೆ, ಹಣಕಾಸಿನ ನೆರವಿಲ್ಲದೆ, ಕೌಟುಂಬಿಕ ಸಂಕಷ್ಟಗಳಿಂದ ಅಥವಾ ಸಾಮಾಜಿಕ ಪರಿಸರದ ಕಾರಣಗಳಿಂದ ಹಿಂದುಳಿಯುವ ಇಂತಹ ಮಕ್ಕಳಿಗೆ ಸಾಂತ್ವನ ಹೇಳುವ, ಆತ್ಮಸ್ಥೈರ್ಯ ತುಂಬುವ ಜವಾಬ್ದಾರಿ ಸಮುದಾಯಗಳ ಮೇಲಿರುತ್ತದೆ. ಆಗ ಅಂತಹ ಮಕ್ಕಳಲ್ಲಿರುವ ಕೀಳರಿಮೆಯನ್ನು, ಖಿನ್ನತೆಯನ್ನು ಹೋಗಲಾಡಿಸಲು ಸಾಧ್ಯ. ದುರದೃಷ್ಟವಶಾತ್ ಈ ಪ್ರಯತ್ನಗಳನ್ನು ಶಾಲೆಗಳೂ ಮಾಡುವುದಿಲ್ಲ, ಸಮುದಾಯಗಳೂ ಮಾಡುವುದಿಲ್ಲ.
ಈ ವಾತಾವರಣದಲ್ಲಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ಮಕ್ಕಳು ಶೈಕ್ಷಣಿಕ ಮಾರುಕಟ್ಟೆಯ ದೃಷ್ಟಿಯಲ್ಲಿ ಅನಗತ್ಯ ಹೊರೆಯಾಗಿ ಕಾಣತೊಡಗುತ್ತಾರೆ. ಮೈಸೂರಿನಲ್ಲೆ ಕೆಲವು ಖಾಸಗಿ ಶಾಲೆಗಳಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯಡಿ (RTE) ಪ್ರವೇಶ ಪಡೆಯುವ ಮಕ್ಕಳು ಒಂಬತ್ತನೆ ತರಗತಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದರೆ, ಅಂತಹ ಶಿಕ್ಷಣಾರ್ಥಿಗಳಿಗೆ ಹತ್ತನೆ ತರಗತಿಯ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇದು ಆಳವಾಗಿ ಪರಿಶೋಧನೆಗೊಳಗಾಗಬೇಕಾದ ವಿಚಾರ. ಶಾಲೆಗಳು ಹತ್ತನೆ ತರಗತಿಯ ಫಲಿತಾಂಶಗಳನ್ನು ವೃದ್ಧಿಸಿಕೊಳ್ಳಲು ಹೀಗೆ ಹಿಂದುಳಿದಿರುವ ಮಕ್ಕಳನ್ನು ಹೊರದೂಡುವ ಕ್ರೂರ ಪ್ರಕ್ರಿಯೆಯನ್ನು ಶೋಧಿಸಬೇಕಿದೆ. ಇಂತಹ ಮಕ್ಕಳು ಮಾರುಕಟ್ಟೆಗೆ ಬೇಡವಾಗುತ್ತಾರೆ ಆದರೆ ಅವರೊಳಗಿನ ಪಠ್ಯೇತರ ಕೌಶಲಗಳನ್ನು ಸಮ್ಮಾನಿಸುವವರು ಯಾರು ? ಇದು ಇಡೀ ಸಮಾಜವೇ ಯೋಚಿಸಬೇಕಾದ ವಿಚಾರ.
ಶಿಕ್ಷಣ ವ್ಯವಸ್ಥೆ ವಾಣಿಜ್ಯೀಕರಣಕ್ಕೊಳಗಾಗಿ, ಖಾಸಗಿ ಸಾಂಸ್ಥಿಕ ಸಾಮ್ರಾಜ್ಯಗಳ ನಡುವೆ, ಕಾರ್ಪೋರೇಟೀಕರಣ ಪ್ರಕ್ರಿಯೆಗೆ ತೆರೆದುಕೊಂಡಂತೆಲ್ಲಾ, ಶಾಲಾ ಮಕ್ಕಳು, ಶಿಕ್ಷಣಾರ್ಥಿಗಳು ಮಾರುಕಟ್ಟೆಯ ಸರಕುಗಳಾಗಿ ಕಾಣತೊಡಗುತ್ತಾರೆ. ಈ ಅಪಾಯವನ್ನು ತಡೆಗಟ್ಟದೆ ಹೋದರೆ, ಸಮಾಜ ಬೌದ್ಧಿಕ ಅವನತಿಯತ್ತ ಸಾಗುತ್ತದೆ. ಶಾಲೆ ಅಥವಾ ಕಾಲೇಜು ಎನ್ನುವುದು ಕೇವಲ ಮನುಷ್ಯ ಜೀವಗಳ ಗೋದಾಮುಗಳಲ್ಲ. ಅಲ್ಲಿರುವ ಪ್ರತಿಯೊಂದು ಜೀವವೂ ಅಮೂಲ್ಯವಾದುದು, ಭವಿಷ್ಯದ ಆಸ್ತಿಯೇ ಆಗಿರುತ್ತದೆ. ಪರೀಕ್ಷಾ ಫಲಿತಾಂಶಗಳ ಮೂಲಕ ಶಿಕ್ಷಣಾರ್ಥಿಗಳ ಅರ್ಹತೆಯನ್ನು ಅಳೆಯುವ ಪ್ರಕ್ರಿಯೆ ಈ ಔದಾತ್ಯವನ್ನು ಭಂಗಗೊಳಿಸುತ್ತದೆ. ಶಿಕ್ಷಣ ತಜ್ಞರು, ಸರ್ಕಾರ ಮತ್ತು ಶಿಕ್ಷಣ ಸಚಿವರು, ಫಲಿತಾಂಶಗಳನ್ನು ಉತ್ತಮಪಡಿಸುವ ಆಲೋಚನೆಯೊಂದಿಗೆ, ಈ ನಿಟ್ಟಿನಲ್ಲೂ ಯೋಚನೆ ಮಾಡುವುದು, ಭವಿಷ್ಯದ ವಿಕಸಿತ ಭಾರತಕ್ಕೆ ಆಶಾದಾಯಕವಾಗಿ ಕಾಣಬಹುದು.
ಇದನ್ನೂ ನೋಡಿ: ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು – ಅಶ್ವಿನಿ ಒಬುಳೇಶ್ Janashakthi Media