ಸೂಕ್ಷ್ಮ ಸಂವೇದನೆ ಇಲ್ಲದ ಒಂದು ನಾಗರಿಕತೆಯಲ್ಲಿ

ನಮ್ಮ ಸಮಾಜದಲ್ಲಿ ಅತಿ ಅಗ್ಗವಾದ ಯಾವುದಾದರೂ ವಸ್ತು ಇದ್ದರೆ ಅದು ಬಡವರ ಜೀವ ಮಾತ್ರ

-ನಾ ದಿವಾಕರ

ಭಾರತದ ಔದ್ಯೋಗಿಕ-ಆರ್ಥಿಕ ರಾಜಧಾನಿ, ಹಿತವಲಯದ ಸ್ವರ್ಗ, ಸಿರಿವಂತರ ಬೀಡು, ಉದ್ಯಮಿಗಳ ನಾಡು ಎಂದೇ ಹೆಸರಾಗಿರುವ ಮುಂಬೈ ನಗರವು ಜನಜೀವನದ ಮತ್ತೊಂದು ಕರಾಳ ಮುಖವನ್ನೂ ಹೊತ್ತಿದೆ ಎನ್ನುವುದು ವಾಸ್ತವ. ಬಂಡವಾಳಶಾಹಿ ಸಮಾಜದಲ್ಲಿ ಸ್ವಾಭಾವಿಕವಾಗಿ ಕಾಣಲಾಗುವ ಬಡತನ, ದಾರಿದ್ರ್ಯ, ಹಸಿವು, ನಿರ್ಗತಿಕತೆಯ ನಡುವೆಯೇ ಮುಗಿಲೆತ್ತರದ ಗಗನ ಚುಂಬಿ ಕಟ್ಟಡಗಳು, ಅತ್ಯಾಧುನಿಕ ಸಂಚಾರಿ ವಾಹನಗಳು ಮತ್ತು ಆಡಂಬರದ ಜೀವನ ಶೈಲಿಯನ್ನು ಎಲ್ಲಿಯಾದರೂ ಕಾಣಬೇಕೆಂದರೆ ಅದು ಮುಂಬೈ ನಗರಿಯಲ್ಲಿ. ಸೂಕ್ಷ್ಮ

ಹಾಗೆಯೇ ಭಾರತದ ಬಂಡವಾಳಶಾಹಿ ಅಭಿವೃದ್ಧಿಯ ಪ್ರಧಾನ ಫಲಾನುಭವಿಗಳಾಗಿ ಹಿತವಲಯದಲ್ಲಿರುವ ಸಿರಿವಂತರು ಮತ್ತು ಈ ವರ್ಗದ ಮೇಲರಿಮೆಯನ್ನು ಕಾಣಬೇಕೆಂದರೂ ಇಲ್ಲಿಯೇ ಸಾಧ್ಯ. ಇಂದಿಗೂ ʼ ಧಾರವಿ ʼ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಮಹಲುಗಳು ಮತ್ತು ಕೊಳೆಗೇರಿಗಳ ನಡುವೆ ಇರುವ ಅಸಮಾನತೆಯ ಸೂಕ್ಷ್ಮ ಎಳೆಗಳಲ್ಲಿ ಮನುಜ ಸಂವೇದನೆಯನ್ನು ಗುರುತಿಸುವ ಕೆಲಸವನ್ನು ರಾಜ್‌ಕಪೂರ್‌ ತಮ್ಮ ಸಿನೆಮಾಗಳಲ್ಲಿ ಮಾಡಿದ್ದಾರೆ. (ಬೂಟ್‌ ಪಾಲಿಶ್‌, ಜಾಗ್ತೆರಹೋ, ಆವಾರಾ, ಶ್ರೀ 420 ಇತ್ಯಾದಿ). ಸೂಕ್ಷ್ಮ 

1954ರಲ್ಲಿ ಗುರುದತ್‌ ನಿರ್ದೇಶನದಲ್ಲಿ ಬಂದ ಸಿಐಡಿ ಚಿತ್ರದ ಒಂದು ಹಾಡಿನಲ್ಲಿ ಕವಿ ಮಜರೂಹ್‌ ಸುಲ್ತಾನ್‌ಪುರಿ ಮುಂಬೈ ನಗರವನ್ನು ಬಣ್ಣಿಸುತ್ತಾರೆ. “ ಏ ದಿಲ್‌ ಹೈ ಮುಷ್ಕಿಲ್‌ ಜೀನಾ ಯಹ್ಞಾ ,,,,” ಪಲ್ಲವಿಯೊಂದಿಗೆ ಆರಂಭವಾಗುವ ಈ ಹಾಡಿನ ಒಂದು ಸಾಲಿನಲ್ಲಿ ಮಜರೂಹ್‌ “ ಮಿಲ್ತಾ ಹೈ ಯಹ್ಞಾ ಸಬ್‌ ಕುಚ್‌ ಇಕ್‌ ಮಿಲ್ತಾ ನಹ್ಞೀ ದಿಲ್‌,,,,,,,” ಎಂದು ಹೇಳುವುದು 75 ವರ್ಷಗಳ ನಂತರವೂ ಸತ್ಯ ಎಂದೇ ತೋರುತ್ತದೆ. ಹಾಗೆಂದ ಮಾತ್ರಕ್ಕೆ ಮುಂಬೈ ಹೃದಯಹೀನ ನಗರಿ ಎನ್ನುವುದು ತಪ್ಪಾಗುತ್ತದೆ. ಸೂಕ್ಷ್ಮ 

ಇದನ್ನೂ ಓದಿ: ಕುತ್ತಿಗೆಗೆ ನೇಣು ಬಿಗಿದುಕೊಂಡು ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ 7ನೇ ತರಗತಿ ವಿದ್ಯಾರ್ಥಿ

ಆ ಸಿರಿವಂತಿಕೆಯ ಒಡಲಲ್ಲೇ ಮನುಜ ಸಂವೇದನೆಯನ್ನು ಪ್ರವಹಿಸುವ ಬೌದ್ಧಿಕ ಚಿಂತನೆಗಳಿಗೆ ಮುಂಬೈ ಆವಾಸಸ್ಥಾನವಾಗಿರುವುದು ವಾಸ್ತವ. ಆದರೆ ಸಿರಿವಂತಿಕೆ ಎನ್ನುವುದು ಆಸ್ತಿ, ಅಂತಸ್ತು ಮತ್ತು ಅಪಾರ ಸಂಪತ್ತಿನ ಆಡಂಬರಕ್ಕೊಳಗಾದಾಗ ಅಲ್ಲಿ ಮನುಷ್ಯ ಜೀವವೇ ನಿಕೃಷ್ಟವಾಗಿಬಿಡುತ್ತದೆ. ಅದೂ ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಹುಟ್ಟಿನಿಂದಲೇ ಮೇಲು-ಕೀಳುಗಳ ನಿಷ್ಕರ್ಷೆಯಾಗುವುದರಿಂದ, ಕೆಲವು ಜೀವಗಳು ಶಾಶ್ವತವಾಗಿ ನಿಕೃಷ್ಟತೆಗೊಳಗಾಗಿಬಿಡುತ್ತವೆ.

ಸಿರಿವಂತಿಕೆಯ ಕಾಲ್ತುಳಿತಕ್ಕೆ ಸಿಲುಕಿ

70 ವರ್ಷಗಳು ಕಳೆದು, 2024ರ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿದ ಹಾಡನ್ನು ಗುನುಗುನಿಸಿದಾಗ ನಮ್ಮ ಕಣ್ಣೆದುರು ಬಂದು ನಿಲ್ಲುವುದು ʼ ಕಾವೇರಿ ʼ ಎಂಬ ಅಸಹಾಯಕ ಬಡ ಮಹಿಳೆ. ತನ್ನದಲ್ಲದ ತಪ್ಪಿಗೆ ಎನ್ನುವುದಕ್ಕಿಂತಲೂ  ಯಾರೋ ಮಾಡಿದ ತಪ್ಪಿಗೆ ತನ್ನ ಪ್ರಾಣತೆತ್ತ ಈ ಮಹಿಳೆಯ ಚಿಂತಾಜನಕ ಕತೆ ವಿಕಸಿತ ಭಾರತದಲ್ಲಿ ಕೆಳಸ್ತರದ ಸಮಾಜ ಎದುರಿಸುತ್ತಿರುವ ಸಂಕಟಗಳ ಅನಾವರಣದಂತೆಯೂ ಕಾಣುತ್ತದೆ. ಇತ್ತೀಚಿನ ಹಾತ್ರಸ್‌ ದುರಂತದಲ್ಲಿ ಮಡಿದ 120ಕ್ಕೂ ಹೆಚ್ಚು ಅಮಾಯಕರ ಬಗ್ಗೆ, ಸತ್ಸಂಗ ಕಾರ್ಯಕ್ರಮದ ರೂವಾರಿ ಭೋಲೆ ಬಾಬಾ “ ವಿಧಿಯನ್ನು ಯಾರು ತಪ್ಪಿಸಲು ಸಾಧ್ಯ, ?  ಹುಟ್ಟಿದವರೆಲ್ಲರೂ ಸಾಯಲೇಬೇಕು ” ಎಂದು ಹೇಳುವ ಮೂಲಕ ಭಾರತೀಯ ಸಮಾಜದಲ್ಲಿ ಇಂದಿಗೂ ಇರುವ ಬೌದ್ಧಿಕ ಕ್ರೌರ್ಯವನ್ನು ಸೂಚಿಸಿದ್ದಾರೆ. ಬಹುಶಃ ಕಾವೇರಿ ಎಂಬ ಮಹಿಳೆಯ ಸಾವಿಗೂ ನಮ್ಮ ಸಮಾಜ ಭಿನ್ನವಾಗೇನೂ ಪ್ರತಿಕ್ರಯಿಸಲಾರದು. ಸೂಕ್ಷ್ಮ 

ಕಾಲ್ತುಳಿತವೋ, ಸಿರಿವಂತರ ವಾಹನಗಳ ಚಕ್ರದಡಿ ಸಿಲುಕಿಯೋ, ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತದಿಂತಲೋ, ಗಣಿಗಾರಿಕೆಯಲ್ಲಿ ಭೂತಳದ ಕುಸಿತದಿಂದಲೋ ಅಥವಾ ಸೇತುವೆ-ಸುರಂಗ-ರಸ್ತೆಗಳ ಕುಸಿತದಿಂದಲೋ ತಮ್ಮ ಪ್ರಾಣ ಕಳೆದುಕೊಳ್ಳುವ ಎಲ್ಲ ಜೀವಗಳೂ ಭೋಲೆ ಬಾಬಾ ಹೇಳಿದಂತೆ ವಿಧಿಯೊಡಲು ಸೇರುವ ಬೆಲೆಯಿಲ್ಲದ ಜೀವಗಳೇ ಹೌದು. ಏಕೆಂದರೆ ಅಪಘಾತ ಎನ್ನುವುದೇ ನಿರ್ವಚಿಸಲಾಗದ ಒಂದು ಕ್ರಿಯೆ. ಇವುಗಳಿಗೆ ಕಾರಣರಾದವರು ಮನುಷ್ಯರೇ ಆದರೂ ಅದನ್ನು ಒಪ್ಪಿಕೊಳ್ಳುವ ಔದಾತ್ಯ ಇಲ್ಲದ ಒಂದು ಸಮಾಜದಲ್ಲಿ ಎಲ್ಲ ಅಪಘಾತ-ಅವಘಡಗಳೂ ವಿಧಿಯ ಕೈವಾಡವಾಗಿಯೇ ಕಾಣುತ್ತವೆ. ಶ್ರೀಮಂತ ಉದ್ಯಮಿಯೊಬ್ಬನ ಕಾರು ಕಾವೇರಿ ಎಂಬ ಮಹಿಳೆಯ ಜೀವಬಲಿ ಪಡೆದುಕೊಂಡಿದ್ದರೆ ಅಲ್ಲಿ ಹತಳಾದ ಮಹಿಳೆಗೆ ಪರಿಹಾರ ಧನದ ಮೂಲಕ ಸಾಂತ್ವನ ಹೇಳುವ ಸರ್ಕಾರ-ಸಮಾಜ, ಅಪರಾಧಿಯನ್ನೂ ರಕ್ಷಿಸುವುದಕ್ಕೇ ಹೆಚ್ಚು ಒಲವು ತೋರುತ್ತದೆ. ಇಂತಹ ಒಂದು ದಾರುಣ ಕತೆಯ ದುರಂತ ನಾಯಕಿ ಕಾವೇರಿ. ಸೂಕ್ಷ್ಮ 

ಕ್ಷಣಮಾತ್ರದಿ ಬತ್ತಿಹೋದ ಕಾವೇರಿ

ಆಕೆಯ ಹೆಸರು ಕಾವೇರಿ ನಖ್ವಾ . ತನ್ನ  45ನೆಯ ಹುಟ್ಟುಹಬ್ಬವನ್ನು ಇನ್ನು ಕೆಲವೇ ದಿನಗಳಲ್ಲಿ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದ ಆಕೆಯ ಕುಟುಂಬ ಎಂದರೆ 50 ವರ್ಷದ ಪತಿ ಪ್ರದೀಪ್‌ ಲೀಲಾಧರ್‌ ನಖ್ವಾ , 21 ವರ್ಷದ ಮಗ ಯಶ್‌, 24 ವರ್ಷದ ಮಗಳು ಅಮೃತ.  400 ಚದರಡಿಯ ( 20 X 20) ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ ಕಾವೇರಿಯ ತಂದೆ 77 ವರ್ಷದ ಕೇಸರಿನಾಥ್‌ ವಾಧ್ಕರ್ ಮತ್ತು   67 ವರ್ಷದ ತಾಯಿ ಭಾರತಿ ವಾಧ್ಕರ್‌ ವಿಸ್ತೃತ ಕುಟುಂಬದ ಸಂಗಾತಿಗಳು. ಆಗಸ್ಟ್‌ 19ರಂದು ಅಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧವಾಗುತ್ತಿದ್ದ ಆ ಮಕ್ಕಳಿಗೆ ಬರಸಿಡಿಲಿನಂತೆ ಬಂದೆರಗಿದ ಸುದ್ದಿ, ತಾಯಿಯ ಅಕಾಲಿಕ ಸಾವು. ಕಾವೇರಿ ತನ್ನ ಬದುಕಿನ ಪಯಣ ಮುಗಿಸಿ ಅಂತಿಮ ವಿದಾಯ ಹೇಳುವಂತೆ ಮಾಡಿದ್ದು ಆಕೆಯ ವಿಧಿ ಅಲ್ಲ, ನಮ್ಮ ನಡುವೆಯೇ ಇರುವಂತಹ ಒಂದು ಕ್ರೂರ ಸಮಾಜ ಮತ್ತು ಅದನ್ನು ಪ್ರತಿನಿಧಿಸುವ ಸಿರಿವಂತ ವರ್ಗ. ಸೂಕ್ಷ್ಮ 

ಮುಂಬೈನ ವರ್ಲಿ ಕೋಳಿವಾಡಾ ಬಳಿ ಇರುವ ತಾರೇ ಗಲ್ಲಿಯ ನಿವಾಸಿ ಕಾವೇರಿ ಮತ್ತು ಆಕೆಯ ಪತಿ ತಮ್ಮ ಬದುಕನ್ನು ಮೀನುಗಾರಿಕೆಯ ಮೂಲಕ ಕಟ್ಟಿಕೊಳ್ಳುತ್ತಿದ್ದವರು. ಆಕೆಯ ನೆರೆಹೊರೆಯವರ ಮಾತುಗಳಲ್ಲೇ ಹೇಳುವುದಾದರೆ ಕಾವೇರಿ ಬಹಳ ಔದಾರ್ಯ ಮತ್ತು ಸಹಾನುಭೂತಿ ಇದ್ದಂತಹ ಮಹಿಳೆ. ಕಠಿಣ ಪರಿಶ್ರಮದೊಂದಿಗೆ ತನ್ನ ಗಂಡನೊಂದಿಗೆ ಮೀನು ಮಾರಾಟದ ಮೂಲಕ ಬದುಕು ಸವೆಸುತ್ತಿದ್ದ ಕೆಳಸ್ತರದ ಮೀನುಗಾರ ಕುಟಂಬದ ಹೆಣ್ಣು. ದಿನವೂ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲೇ, ನಾಲ್ಕು ಗಂಟೆಯ ವೇಳೆಗೇ ತನ್ನ ಪತಿಯೊಡನೆ ಕ್ರಾಫೋರ್ಡ್‌ ಮಾರುಕಟ್ಟೆಗೆ ಹೋಗಿ, ಫ್ರೆಷ್‌ ಆಗಿರುವ ಮೀನು ತಂದು ಮಾರಾಟ ಮಾಡಿ  ನಿತ್ಯ ಬದುಕು ಸಾಗಿಸುತ್ತಿದ್ದ ಶ್ರಮಿಕ ಮಹಿಳೆ. ಯಾವುದೇ ನೌಕರಿ ಪಡೆಯಲಾಗದೆ ಅಲೆಯುತ್ತಿದ್ದ ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತಿದ್ದ ಹೆತ್ತೊಡಲು.

ಜುಲೈ 7ರ ಮುಂಜಾನೆ 4.30ರ ವೇಳೆಗೆ ಮಾರುಕಟ್ಟೆಯಿಂದ ಮೀನು ತರುತ್ತಿದ್ದ ದಂಪತಿಗಳ ದ್ವಿಚಕ್ರವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿದೆ. ಅತಿವೇಗದ ರಭಸದಿಂದ ಇಬ್ಬರೂ ಕಾರಿನ ಬಾನೆಟ್‌ ಮೇಲೆ ಎಗರಿ ಬಿದ್ದಿದ್ದಾರೆ.  ಪತಿ ಪ್ರದೀಪ್‌ ರಸ್ತೆಗೆ ಜಾರಿದ್ದಾರೆ ಆದರೆ ಕಾವೇರಿ ಮುಂಭಾಗದಲ್ಲಿ ಬಿದ್ದಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಕಾರು ಕಾವೇರಿಯ ದೇಹವನ್ನು ಸಾಕಷ್ಟು ದೂರ ಎಳೆದುಕೊಂಡು ಹೋಗಿದೆ.  ಅದರ ಹಿಂದೆಯೇ ಟ್ಯಾಕ್ಸಿ ಒಂದನ್ನು ಹಿಡಿದು ಹಿಂಬಾಲಿಸಿದ ಪ್ರದೀಪ್‌ಗೆ ಆಕೆಯ ಸುಳಿವೇ ದೊರೆತಿಲ್ಲ. ತಾನು ಕಾವೇರಿಯ ದೇಹವನ್ನು ಒಂದೂವರೆ ಕಿಲೋಮೀಟರ್‌ವರೆಗೂ ಎಳೆದೊಯ್ದಿದ್ದಾಗಿ ಕಾರು ಚಾಲನೆ ಮಾಡುತ್ತಿದ್ದ ಮಿಹಿರ್‌ ಶಾ ಒಪ್ಪಿಕೊಂಡಿದ್ದಾನೆ. ಅಪಘಾತ ಸಂಭವಿಸಿದ ಕೂಡಲೇ ತಾನು ಡ್ರೈವ್‌ ಮಾಡುತ್ತಿದ್ದ ಕಾರನ್ನು ಪಕ್ಕದಲ್ಲೇ ಇದ್ದ ಚಾಲಕ ಬಿದಾವತ್‌ ಎಂಬಾತನಿಗೆ ಒಪ್ಪಿಸಿ, ಆಟೋ ಮಾಡಿಕೊಂಡು ಗೊರೆಗಾಂವ್‌ನಲ್ಲಿರುವ ಸ್ನೇಹಿತನ ಮನೆಗೆ ಹೋಗಿದ್ದಾನೆ. ಇದು ಪೊಲೀಸ್‌ ತನಿಖೆಯಲ್ಲಿ ಹೊರಬಿದ್ದಿರುವ ಸತ್ಯ.

ಪ್ರಭಾವಿ ವಲಯದ ಅಪರಾಧಗಳು

ಆರೋಪಿ ಮಿಹಿರ್‌ ಶಾ ತಂದೆ ರಾಜೇಶ್‌ ಶಾ ಶಿವಸೇನಾ ಪಕ್ಷದ ನಾಯಕರಾಗಿದ್ದು ಪಕ್ಷದ ಅಧ್ಯಕ್ಷ ಏಕನಾಥ್‌ ಶಿಂಧೆ ಅವರ ಸಹಾಯಕರಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಕಾರಿನ ನಂಬರ್‌ ಪ್ಲೇಟ್‌ ಮತ್ತು ರಾಜಕೀಯ ಪಕ್ಷದ ಸ್ಟಿಕರ್‌ಗಳನ್ನು ತೆಗೆದುಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ತದನಂತರ ತಮ್ಮ ರಾಜೇಶ್‌ ಶಾ ಅವರ ಇಡೀ ಕುಟುಂಬ ಥಾನೆ ಜಿಲ್ಲೆಯ ಶಹಾಪುರದ ರೆಸಾರ್ಟ್‌ ಒಂದಕ್ಕೆ ತೆರಳಿದ್ದು, ಆರೋಪಿ ಮಿಹಿರ್‌ ಶಾ ಯಾರಿಗೂ ಗುರುತುಸಿಗದ ಹಾಗೆ ತನ್ನ ಗಡ್ಡ ಬೋಳಿಸಿಕೊಂಡು, ತಲೆಗೂದಲು ತೆಗೆಸಿಕೊಂಡು, ರೆಸಾರ್ಟ್‌ಗೆ ತಲುಪಿದ್ದಾನೆ. ಈ ಸ್ಥಳವನ್ನು ಪತ್ತೆ ಹಚ್ಚಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಾಕಷ್ಟು ಶೋಧ ನಡೆಸಿದ ನಂತರ ಕಾವೇರಿಯ ಮೃತ ದೇಹವನ್ನು ಗುರುತಿಸಲಾಗಿದ್ದು, ಆಕೆಯನ್ನು ಎಳೆದುಕೊಂಡು ಹೋದ ರಭಸಕ್ಕೆ ದೇಹದ ಮೇಲಿನ ಒಡವೆ ವಸ್ತ್ರಗಳೂ ಸಹ ಚೆಲ್ಲಾಪಿಲ್ಲಿಯಾಗಿದ್ದವು ಎಂದು ಪತಿ ಪ್ರದೀಪ್‌ ಹೇಳುತ್ತಾರೆ. ಸೂಕ್ಷ್ಮ 

ಅತಿ ನವಿರಾದ ದೊಡ್ಡ ರಸ್ತೆಗಳು ಮತ್ತು ಅದಕ್ಕೆ ತಕ್ಕಂತೆ ತಯಾರಿಸಲಾಗುವ ಅತಿವೇಗದ ಕಾರುಗಳು ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಮಾರಕವಾಗಿ ಪರಿಣಮಿಸುತ್ತಿವೆ. ಇಂತಹ ಅಪಘಾತಗಳು ಸಂಭವಿಸಲು ಮೂಲ ಕಾರಣ ಮದ್ಯ ಸೇವನೆ ಮಾಡಿ ಡ್ರೈವ್‌ ಮಾಡುವುದು ಮತ್ತು ಅತಿವೇಗದ ಚಾಲನೆ, ಇವೆರಡಕ್ಕೂ ಇತಿ ಮಿತಿ ಇಲ್ಲದಿರುವುದು ನಮ್ಮ ಆಡಳಿತ ವ್ಯವಸ್ಥೆಯ ಅಸೂಕ್ಷ್ಮತೆಯನ್ನು ಬಿಂಬಿಸುತ್ತದೆ. ಇದಕ್ಕಿಂತಲೂ ಯಾವುದೇ ಸೂಕ್ಷ್ಮ ಸಮಾಜವನ್ನು ಕಾಡುವ ಪ್ರಶ್ನೆ ಎಂದರೆ, ಒಬ್ಬ ಕಾರು ಚಾಲಕ ತನ್ನಿಂದ ಒಬ್ಬ ವ್ಯಕ್ತಿಯ ಹತ್ಯೆಯಾಗಿದೆ ಎಂದು ತಿಳಿದಿದ್ದರೂ, ಸಾವು ಬದುಕಿನ ನಡುವೆ ಸೆಣಸಾಡುವ ಮನುಷ್ಯ ದೇಹವನ್ನು ಕಿಲೋಮೀಟರ್‌ಗಳಷ್ಟು ದೂರ ಎಳೆದೊಯ್ಯುವುದನ್ನು ಹೇಗೆ ಅರ್ಥೈಸುವುದು ? ತನ್ನ ವಾಹನಕ್ಕೆ ಸಿಲುಕಿದ ವ್ಯಕ್ತಿ ಸತ್ತಿರುವುದನ್ನೂ ಲೆಕ್ಕಿಸದೆ ತಾನು ಕಾನೂನಿನಿಂದ ರಕ್ಷಿಸಲು ಪ್ರಯತ್ನಿಸುವುದನ್ನು ಹೇಗೆ ವ್ಯಾಖ್ಯಾನಿಸುವುದು ? ಈ ಕ್ರೌರ್ಯವನ್ನು ಯಾವ ಕಾನೂನು ಪುಸ್ತಕದಲ್ಲೂ ನಿರ್ವಚಿಸಲಾಗುವುದಿಲ್ಲ. ಇದು ಮನುಷ್ಯ ಸಹಜ ಗುಣವೂ ಅಲ್ಲ. ಸಾಮಾಜಿಕ ಅಂತಸ್ತು, ಆರ್ಥಿಕ ಬಲ, ಅಧಿಕಾರ ವ್ಯಾಪ್ತಿ ಮತ್ತು ರಾಜಕೀಯ ಪ್ರಾಬಲ್ಯ ಇವುಗಳು ಈ ಕ್ರೌರ್ಯದ ಮೂಲ. ದಿವಂಗತ ಶಂಕರ್‌ನಾಗ್‌ 1984ರಲ್ಲಿ ನಿರ್ಮಿಸಿದ ಆಕ್ಸಿಡೆಂಟ್‌ ಚಿತ್ರ ನೆನಪಾಗುವುದಲ್ಲವೇ ? ಸೂಕ್ಷ್ಮ 

ಈ ಪ್ರಕರಣ ತಾರ್ಕಿಕ ಅಂತ್ಯ ತಲುಪುವುದರೊಳಗೆ ರಾಜಕೀಯ ಪ್ರಭಾವ, ಹಣದ ಮದ, ಸಿರಿವಂತಿಕೆಯ ದರ್ಪ ಮತ್ತು ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯಗಳಿಂದ ಕಾವೇರಿ ನೆನಪಿನಿಂದ ಮರೆಯಾಗಿರುತ್ತಾಳೆ. “ ಎಲ್ಲ ರಾಜಕಾರಣಿಗಳೂ ನಮ್ಮನ್ನು ಭೇಟಿಯಾಗುತ್ತಿದ್ದಾರೆ, ಎಲ್ಲರೂ ಹಣ ಮತ್ತು ವಕೀಲರ ನೆರವನ್ನು ನೀಡಲು ಮುಂದೆ ಬಂದಿದ್ದಾರೆ.  ನನಗೇಕೆ ಬೇಕು ಈ ನೆರವಿನ ಹಸ್ತಗಳು ? ಅವರೆಲ್ಲಾ ಸಾಕ್ಷ್ಯ ನಾಶಪಡಿಸುವುದಿಲ್ಲ ಎಂಬ ಖಾತರಿಯೇನು ? ನಾನು ನನ್ನ ಮನೆ ಮಾರಾಟ ಮಾಡಿ ಬೀದಿಯಲ್ಲಿ ವಾಸಿಸುತ್ತೇನೆ, ನನ್ನ ಹೆಂಡತಿಗೆ ನ್ಯಾಯ ದೊರಕಿಸುವವರೆಗೂ ಹೋರಾಡುತ್ತೇನೆ ” ಎಂಬ ಮಾತುಗಳ ಮೂಲಕ ಹೆಂಡತಿಯನ್ನು ಕಳೆದುಕೊಂಡ ಪ್ರದೀಪ್‌ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಘಟನೆ ನಡೆದ ಕೂಡಲೇ 10 ಲಕ್ಷ ರೂ ಪರಿಹಾರ ಘೋಷಿಸಿರುವ ಮಹಾರಾಷ್ಟ್ರ ಸರ್ಕಾರ ಪ್ರಭಾವಿ ವಲಯದ ಅಪರಾಧಿಯನ್ನು ಶಿಕ್ಷೆಗೊಳಪಡಿಸುವುದೇ ಕಾದು ನೋಡಬೇಕಿದೆ. ಸಿರಿವಂತರನ್ನೊಳಗೊಂಡ ಇಂತಹ ಪ್ರಕರಣಗಳಲ್ಲಿ ಅಮಾಯಕ ಚಾಲಕರನ್ನು ಮುಂದಿಟ್ಟು ತಪ್ಪಿಸಿಕೊಳ್ಳುವ ಚಾಣಾಕ್ಷತೆಗೂ ನಮ್ಮಲ್ಲೇನೂ ಕೊರತೆ ಇಲ್ಲ.

ಜೀವಪರ ಕಾಳಜಿಯ ಕೊರತೆ !!!

ಇಲ್ಲಿ ಪ್ರಶ್ನೆ ಇರುವುದು ತನ್ನ ಸುಖೀ ಕುಟುಂಬವನ್ನು ತೊರೆದು ದುರಂತ ಸಾವಿಗೀಡಾದ  ಕಾವೇರಿ ಎಂಬ ಮಹಿಳೆಗೆ ನ್ಯಾಯ ದೊರಕಿಸುವುದು ಎಂದರೇನು ? 400 ಚದರಡಿ ಮನೆಯಲ್ಲಿ ತನ್ನ ನಿರುದ್ಯೋಗಿ ಮಕ್ಕಳೊಡನೆ ಮೀನು ಮಾರುತ್ತಾ ಸಂಸಾರ ಸಾಗಿಸುತ್ತಿದ್ದ ಕಾವೇರಿಯ ಜೀವ ಮರಳಿ ಬರುವುದೇ ? ಅಥವಾ ಆಕೆಯ ಮಕ್ಕಳಿಗೆ ಅಮ್ಮ ಮತ್ತೊಮ್ಮೆ ಸಿಗುತ್ತಾಳೆಯೇ ?  ತನ್ನ ಮನೆಯ ಅಂಗಳದಲ್ಲಿ ದಿನಾಲೂ ಕನಿಷ್ಠ 70 ಹಕ್ಕಿಗಳಿಗಾದರೂ ಜೋಳದ ಕಾಳುಗಳನ್ನು ಹಾಕಿ ಜೀವ ಪ್ರೀತಿ ಮೆರೆಯುತ್ತಿದ್ದ ಕಾವೇರಿ ಏಕೆ ಸಾಯಬೇಕಿತ್ತು ? ಈ ಭಾವುಕ ಪ್ರಶ್ನೆಗಳೊಂದಿಗೇ ನಮ್ಮನ್ನು ಗಾಢವಾಗಿ ಕಾಡಬೇಕಿರುವ ಜಿಜ್ಞಾಸೆ ಎಂದರೆ, ಸಿರಿವಂತರ ಭೋಗ ಜೀವನದ ಐಷಾರಾಮಕ್ಕೆ ಬಡ ಜನತೆಯೇ ಏಕೆ ಬಲಿಯಾಗುತ್ತಾರೆ. 2002ರಲ್ಲಿ ಸಿನಿಮಾ ನಟ ಸಲ್ಮಾನ್‌ ಖಾನ್‌ ಫುಟ್‌ಪಾತ್‌ನಲ್ಲಿ ಮಲಗಿದ್ದ ಐವರ ಮೇಲೆ ವಾಹನ ಚಲಾಯಿಸಿದ ನೆನಪು ಇನ್ನೂ ಹಸಿರಾಗಿದೆ. ಸಾಕ್ಷ್ಯಾಧಾರಗಳಿಲ್ಲದೆ ಸಲ್ಮಾನ್‌ ಮುಕ್ತರಾಗಿಬಿಟ್ಟರು. ಇಂತಹ ಘಟನೆಗಳು ಸಂಭವಿಸುತ್ತಲೇ ಇವೆ.

ಜೀವನವಿಡೀ ಸಾವು ಬದುಕಿನ ಸಂಘರ್ಷದಲ್ಲೇ ಬದುಕು ಸವೆಸುವ ಕಾವೇರಿಯಂತಹ ಕೆಳಸ್ತರದ ಅಮಾಯಕರ ಅಸಹಜ-ಅಕಾಲಿಕ-ಅನ್ಯಾಯದ ಸಾವು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕದಡುವುದೇ ಇಲ್ಲವೇಕೆ ? ಸಿರಿವಂತರಿಗಾಗಿಯೇ ನಿರ್ಮಿಸಲಾಗುವ ರಸ್ತೆ-ಸೇತುವೆಗಳು, ತಯಾರಿಸಲಾಗುವ ವಾಹನಗಳು ಎಷ್ಟೋ ನಗರಗಳಲ್ಲಿ ಶ್ರೀಸಾಮಾನ್ಯರು ಬಳಸುವ ಫುಟ್‌ಪಾತ್‌ಗಳನ್ನೇ ನುಂಗಿಹಾಕಿವೆ. ದಶಪಥ-ಷಟ್ಪಥ ಎಕ್ಸ್‌ಪ್ರೆಸ್ ವೇ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳನ್ನೂ ನಿಷೇಧಿಸಲಾಗುತ್ತದೆ. ಅಂದರೆ ಅತಿವೇಗವಾಗಿ ಮೇಲ್ಮುಖವಾಗಿ ಚಲಿಸುತ್ತಿರುವ ಒಂದು ನಾಗರಿಕತೆ ಮತ್ತು ಹಿತವಲಯದ ಸಮಾಜವು ಈ ವೇಗಕ್ಕೆ ಸರಿಹೊಂದದ ಬಹುಸಂಖ್ಯಾತ ಜನತೆಯನ್ನು ಹೊರಗಿಡುವುದನ್ನು ಸಹಜ ಪ್ರಕ್ರಿಯೆ ಎಂಬಂತೆ ಸ್ವೀಕರಿಸಿಬಿಟ್ಟಿದೆ. ಹಾಗಾಗಿಯೇ ಕಾವೇರಿಯಂತಹ ಮಹಿಳೆ ಅನಾಥಳಾಗಿಬಿಡುತ್ತಾಳೆ. ಹಾತ್ರಸ್‌ ಸಂತ್ರಸ್ತೆಯರು ವಿಧಿಯ ಬಲಿಪಶುಗಳಾಗಿಬಿಡುತ್ತಾರೆ.

ನ್ಯಾಯ ಎನ್ನುವುದು ಒಂದು ಫಿಲಾಸಫಿಕಲ್‌ (ತತ್ವಶಾಸ್ತ್ರೀಯ) ಪದ. ಕಾನೂನು ಆಡಳಿತಾತ್ಮಕ ಪದ. ಕಾನೂನು ವ್ಯವಸ್ಥೆಯು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕಾದರೆ ಸಾಕ್ಷ್ಯಾಧಾರಗಳನ್ನು ಅವಲಂಬಿಸುತ್ತದೆ. ಸಾಕ್ಷಿಗಳಿಲ್ಲದೆಡೆ ಇವರು ನ್ಯಾಯ ವಂಚಿತರಾಗುತ್ತಾರೆ. ಕಾವೇರಿ ಆಗಲೀ ಹಾತ್ರಸ್‌ ಸಂತ್ರಸ್ತೆಯರಾಗಲೀ, ಕರ್ನಾಟಕದ ಸೌಜನ್ಯ ಆಗಲೀ, ದೆಹಲಿಯ ನಿರ್ಭಯ ಆಗಲೀ ಇವರಿಗೆ ನ್ಯಾಯ ದೊರಕಿಸುವುದು ಎಂದರೆ ಏನರ್ಥ ? ಸಮಾಜವು ತನ್ನನ್ನು ತಾನು ಸಾಂತ್ವನಪಡಿಸಿಕೊಂಡು, ಅನ್ಯಾಯಗಳ ನಡುವೆಯೇ, ಅಪರಾಧಿಗಳ ನಡುವೆಯೇ ಬದುಕುಲು ಕಲಿಯುವುದು ಎಂದರ್ಥವೇ ? ಈ ಪ್ರಶ್ನೆಗೆ ಉತ್ತರ ಕೊಂಚ ಕಷ್ಟವೇ ಎನಿಸಬಹುದು. ಆದರೆ ಸಾಮಾಜಿಕ ಪ್ರಜ್ಞೆ, ಮನುಜ ಸೂಕ್ಷ್ಮತೆ ಮತ್ತು ಸಂವೇದನೆ ಜೀವಂತವಾಗಿರುವ ಒಂದು ಸಮಾಜ ಹೀಗೆ ಯೋಚಿಸಲೇಬೇಕಲ್ಲವೇ ?

ಮುಂಬೈ ಘಟನೆಯ ನಂತರ ಮೃತ ಅಮಾಯಕಳ ಪತಿ ಪ್ರದೀಪ್‌ ಹೇಳಿದಂತೆ ” ಕಾವೇರಿ ಯಾರ ತಾಯಿಯಾದರೂ ಆಗಬಹುದು ”. ಎಷ್ಟು ಸತ್ಯ ಅಲ್ಲವೇ ನಮ್ಮ ದೇಶ ಎಷ್ಟೊಂದು ಕಾವೇರಿಗಳಿಗೆ, ಸೌಜನ್ಯಗಳಿಗೆ , ಹಾತ್ರಸ್‌ಗಳಿಗೆ, ನಿರ್ಭಯಗಳಿಗೆ ಮೌನ ಸಾಕ್ಷಿಯಾಗುತ್ತಿದೆ. !!!!!!

( ಈ ಲೇಖನಕ್ಕೆ ಪ್ರೇರಣೆ ಮತ್ತು ಆಧಾರ : ದ ಹಿಂದೂ ಪತ್ರಿಕೆಯಲ್ಲಿ (20 ಜುಲೈ 2024) ಪ್ರಕಟವಾದ Kaveri could have been anyoneʼs mother – ಪೂರ್ಣಿಮಾ ಸಾಹ್‌ )

ಇದನ್ನೂ ನೋಡಿ: ತ್ರಿವರ್ಣ ಧ್ವಜ ಬಣ್ಣದಿಂದ ಕಂಗೊಳಿಸುತ್ತಿರುವ ಹೇಮಾವತಿ ಡ್ಯಾಂ|Janashakthi Media

Donate Janashakthi Media

One thought on “ಸೂಕ್ಷ್ಮ ಸಂವೇದನೆ ಇಲ್ಲದ ಒಂದು ನಾಗರಿಕತೆಯಲ್ಲಿ

  1. ಜನಶಕ್ತಿ ಯಲ್ಲಿ ಪ್ರಕಟವಾದ ಬರೆಹಗಾರ ಶ್ರೀ ನಾ.ದಿವಾಕರ ರವರ ಕನ್ನಡ ಅನುವಾದ ನಿಜಕ್ಕೂ ಶ್ಲಾಘನೀಯ ಇಂತಹ ಇಂಗ್ಲಿಷ್ ಅನುವಾದಗಳು ಹೆಚ್ಚಿನವು ಪರಕಟವಾಗಲಿ

Leave a Reply

Your email address will not be published. Required fields are marked *