ಇಸ್ಲಾಮಾಬಾದ್: ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಲವಂತವಾಗಿ, ವಶಕ್ಕೆ ಪಡೆಯಲಾಗಿದೆ. ಇಮ್ರಾನ್ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇನಾ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ, ವಾಯುಪಡೆ ಸ್ಮಾರಕ ಧ್ವಂಸಪಡಿಸಿದ್ದಾರೆ.
ವಿವಿಧೆಡೆ ನಿಷೇಧಾಜ್ಞೆ ಹೇರಲಾಗಿದೆ. ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಇನ್ನೊಂದೆಡೆ ಇಮ್ರಾನ್ ಖಾನ್ ಅವರ ಲೀಗಲ್ ಟೀಂನವರಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು. ಇದಾದ ಬಳಿಕ ಪ್ರತಿಭಟನಾಕಾರರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸ ಮತ್ತು ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯ ಆವರಣವನ್ನು ಪ್ರವೇಶಿಸಿದರು. ಇದರಿಂದಾಗಿ ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.
Imran Khan supporters have broken into the Corps Commander’s home in Lahore. pic.twitter.com/7x66oYuKrP
— Dr. Ayesha Ray (@DrAyeshaRay) May 9, 2023
ಪಾಕಿಸ್ತಾನ ಸೇನೆಯ ರಾವಲ್ಪಿಂಡಿ ಪ್ರಧಾನ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಕಾರ್ಪ್ಸ್ ಕಮಾಂಡರ್ ಮನೆಗೆ ಇಮ್ರಾನ್ ಖಾನ್ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಅಲ್ಲದೆ ಪಾಕ್ ಸೇನೆಯು ಪ್ರತಿಭಟನಾಕಾರರಿಗೆ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ನೀಡಿದೆ. ಇಮ್ರಾನ್ ಖಾನ್ ಬೆಂಬಲಿಗರು ಲಾಹೋರ್ ಕ್ಯಾಂಟ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ ಮನೆ ಮೇಲೆ ದಾಳಿ ನಡೆಸಿದರು. ಸರ್ಗೋಧಾ, ಪೇಶಾವರ, ಲಾಹೋರ್ ಮತ್ತು ಮರ್ದಾನ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ ಹೆಡ್‌ಕ್ವಾರ್ಟರ್ಸ್ ಮೇಲೆ ಪ್ರಮುಖ ದಾಳಿಗಳು ನಡೆದಿವೆ.
ಇಸ್ಲಾಮಾಬಾದ್ ಹೈಕೋರ್ಟ್ ಬಳಿ ಇಮ್ರಾನ್ ಖಾನ್ ಬಂಧನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಅವರು ಈ ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ಅವರು 15 ನಿಮಿಷಗಳಲ್ಲಿ ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥ ಮತ್ತು ಗೃಹ ಕಾರ್ಯದರ್ಶಿಯನ್ನು ಕರೆದರು. ಇಮ್ರಾನ್ ಖಾನ್ ಬಂಧನಕ್ಕೂ ಮುನ್ನ, ಮಂಗಳವಾರ, ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಅನುಮೋದಿಸಿತ್ತು. ಖಾನ್ ಪ್ರಸ್ತುತ ದೇಶಾದ್ಯಂತ 121 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ದೇಶದ್ರೋಹ, ಭಯೋತ್ಪಾದನೆ, ಧರ್ಮನಿಂದನೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಆರೋಪಗಳು ಸೇರಿವೆ.