ಸಂಪನ್ಮೂಲ ಸ್ವತ್ತುಗಳ ನಿಯಂತ್ರಣ: ಬೆಂಬಿಡದ ಸಾಮ್ರಾಜ್ಯಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್

ವಸಾಹತುಶಾಹಿ ಕೊನೆಗೊಂಡ ಬಳಿಕ ಕ್ಷಿಪ್ರಕ್ರಾಂತಿಗಳಿಂದ ಹಿಡಿದು ಸಶಸ್ತ್ರ ಹಸ್ತಕ್ಷೇಪಗಳವರೆಗೆ ಎಲ್ಲ ವಿಧಾನಗಳ ಮೂಲಕ ಏನನ್ನು ಸಾಧಿಸಲು ಮುಂದುವರೆದ ಪಾಶ್ಚಿಮಾತ್ಯ ಬಂಡವಾಳಶಾಹಿ  ಶಕ್ತಿಗಳು ಉದ್ದೇಶಿಸಿದ್ದವೋ ಅದನ್ನು, ಅಂದರೆ, ಮೂರನೇ ಜಗತ್ತಿನ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಒಡೆತನದಲ್ಲಿ, ಭೂ-ಬಳಕೆಯಲ್ಲಿ ಮತ್ತು ಅವುಗಳ ಬೆಲೆಗಳಲ್ಲಿ ತೀವ್ರ ಬದಲಾವಣೆಯನ್ನು ಸಾಮ್ರಾಜ್ಯಶಾಹಿಯ ಹಿತಾಸಕ್ತಿಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ಸಂಸ್ಥೆಗಳು ಈಗ ಮೂರನೇ ಜಗತ್ತಿನ ದೇಶಗಳ ಮೇಲೆ “ಶಾಂತಿಯುತ” ವಿಧಾನಗಳ ಮೂಲಕ ಹೇರುತ್ತಿವೆ. ನವ-ವಸಾಹತುಶಾಹಿಯ ಕಾಲದ  ಬಲಪ್ರಯೋಗದ ವಿದ್ಯಮಾನಗಳು ಈಗ ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ಸಾಮ್ರಾಜ್ಯಶಾಹಿಯೆಂಬುದು ಈಗ ಇಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ. ನವ-ಉದಾರವಾದಿ ಜಾಗತೀಕರಣವು ಮೂರನೇ ಜಗತ್ತಿನ ಸಂಪನ್ಮೂಲಗಳ ಮತ್ತು ಸ್ವತ್ತುಗಳ ಮೇಲಿನ ನಿಯಂತ್ರಣವನ್ನು ನಿರಾಯಾಸವಾಗಿ ಮುಂದುವರೆದ ದೇಶಗಳ ಬಂಡವಾಳಗಾರರಿಗೆ ಮರಳಿಸುವ ಉದ್ದೇಶ ಹೊಂದಿದೆ.

ರಾಜಕೀಯ ನಿರ್ವಸಾಹತೀಕರಣವು ಕೊನೆಗೊಂಡ ಬಳಿಕ ಮೆಟ್ರೋಪಾಲಿಟನ್ ಶಕ್ತಿಗಳು(ಮುಂದುವರೆದ ಬಂಡವಾಳಶಾಹಿ ದೇಶಗಳು) ತಮ್ಮ ಹಿಂದಿನ ವಸಾಹತುಗಳು ಹೊಂದಿದ್ದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ, ಆಗತಾನೇ ಸ್ವತಂತ್ರಗೊಂಡ ಸರ್ಕಾರಗಳ ವಿರುದ್ಧ ಕ್ಷಿಪ್ರಕ್ರಾಂತಿಗಳಿಂದ ಹಿಡಿದು ಸಶಸ್ತ್ರ ಹಸ್ತಕ್ಷೇಪಗಳವರೆಗೆ ಎಲ್ಲಾ ರೀತಿಯ ಆಯುಧಗಳನ್ನು ಬಳಸಿದವು. ಆದರೆ, ಇಂತಹ ಪ್ರಯತ್ನಗಳು ಸ್ವಲ್ಪ ಸಮಯದ ನಂತರ ಕೊನೆಗೊಂಡವು ಎಂಬ ಒಂದು ತಪ್ಪು ಕಲ್ಪನೆ ಸಾಮಾನ್ಯವಾಗಿದೆ. ವಸಾಹತುಗಳು ಹೊಂದಿರುವ ರಾಜಕೀಯ ಸ್ವಾತಂತ್ರ‍್ಯದ ವಾಸ್ತವವನ್ನು ಮೆಟ್ರೋಪಾಲಿಟನ್ ಶಕ್ತಿಗಳು ಈಗ ಒಪ್ಪಿಕೊಂಡಿವೆ ಮತ್ತು ದೇಶ ದೇಶಗಳ ನಡುವಿನ ಪ್ರಸಕ್ತ ಅಂತರರಾಷ್ಟ್ರೀಯ ಏರ್ಪಾಟನ್ನು ಅವು ಇಚ್ಛಾಪೂರ್ವಕವಾಗಿ ಮಾಡಿಕೊಂಡಿವೆ ಎಂದು ಭಾವಿಸಲಾಗುತ್ತಿದೆ.

ವಸಾಹತುಶಾಹಿ ಏರ್ಪಾಟನ್ನು ಶಾಶ್ವತಗೊಳಿಸುವ ಮೆಟ್ರೋಪೊಲಿಸ್(ಮುಂದುವರೆದ ಬಂಡವಾಳಶಾಹಿ ಕೇಂದ್ರಗಳ) ಪ್ರಯತ್ನವನ್ನು ಪ್ರತಿನಿಧಿಸುವ ಐವತ್ತರ ಮತ್ತು ಅರವತ್ತರ ದಶಕದ ಕಾಲಕ್ಕೆ ನವ-ವಸಾಹತುಶಾಹಿಯೆಂಬ ಪರಿಕಲ್ಪನೆ ಸೂಕ್ತವಾಗಿದ್ದರೂ, ನಂತರದ ವರ್ಷಗಳು ಸಾಕಷ್ಟು ಭಿನ್ನವಾಗಿವೆ,  ನವ-ವಸಾಹತುಶಾಹಿ ಅವಧಿಯನ್ನು ಸಾಮ್ರಾಜ್ಯಶಾಹಿ ಯುಗದ ಭಾಗವಾಗಿ ಪರಿಗಣಿಸಬೇಕಿದ್ದರೂ ಸಹ, ಇತ್ತೀಚಿನ ವರ್ಷಗಳನ್ನು ಸಾಮ್ರಾಜ್ಯಶಾಹಿ ಪರಿಕಲ್ಪನೆಯಡಿಯಲ್ಲಿ ಪ್ರಸ್ತಾಪಿಸಲಾಗದು ಎಂದು ವಾದಿಸಲಾಗುತ್ತಿದೆ. ಅಂದರೆ, ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮ್ರಾಜ್ಯಶಾಹಿ ಎಂಬ ಪದವು, ವಸಾಹತುಶಾಹಿ ಮತ್ತು ನವ-ವಸಾಹತುಶಾಹಿಯ ಅವಧಿಯನ್ನು ಒಳಗೊಳ್ಳುತ್ತದೆ ಎಂದು ವ್ಯಾಖ್ಯಾನಿಸಬಹುದಾದರೂ, ಈಗ ಪ್ರಸ್ತುತವಲ್ಲ ಎಂಬುದು ಈ ವಾದದ ತರ್ಕಸರಣಿ.

ಇದನ್ನು ಓದಿ: ಎರಡು ಸಮಾಜ ವ್ಯವಸ್ಥೆಗಳ ನಡುವೆ ಊಹೆಗೂ ನಿಲುಕದ ವ್ಯತ್ಯಾಸ

ಇದು ತಪ್ಪು ತಿಳುವಳಿಕೆಯಾಗುತ್ತದೆ. ಏಕೆಂದರೆ, ಈ ತಿಳುವಳಿಕೆಯು ಮೆಟ್ರೋಪೊಲಿಸ್ ಮತ್ತು ಸಣ್ಣ ಪುಟ್ಟ ದೇಶಗಳ (ಅಂಚಿನ ದೇಶಗಳ) ನಡುವಿನ ಸಂಬಂಧದ ಸ್ವರೂಪ ಎಂಥದ್ದು ಎಂದು ಗುರುತಿಸುವುದರ ಬದಲಾಗಿ, ಸಾಮ್ರಾಜ್ಯಶಾಹಿಯನ್ನು ಕೇವಲ ಹಿಂಸಾತ್ಮಕ ಬಲ ಪ್ರಯೋಗದೊಂದಿಗೆ ಮಾತ್ರ ಗುರುತಿಸುತ್ತದೆ. ಈ ಕ್ರಮವು “ರೂಪ”ವನ್ನೇ “ಗುಣ” ಎಂದು ತಪ್ಪಾಗಿ ಗ್ರಹಿಸಿ, ಅದರ “ಗುಣ”ದ ಬದಲಾಗಿ ಅದರ “ರೂಪ”ದ ಮೂಲಕವೇ ಸಾಮ್ರಾಜ್ಯಶಾಹಿಯನ್ನು ವ್ಯಾಖ್ಯಾನಿಸುತ್ತದೆ. ಸಾಮ್ರಾಜ್ಯಶಾಹಿಯನ್ನು ನಿರೂಪಿಸುವ ಸಂಬಂಧದ ಸಾರವು ಹಿಂಸೆಯಿಂದ ಅಥವಾ ಬಲಾತ್ಕಾರದಿಂದ ಕೂಡಿಲ್ಲ ಮತ್ತು ಸಂಬಂಧಗಳು ಇಚ್ಛಾಪೂರ್ವಕವಾಗಿ ಉಂಟಾಗಿವೆ ಎಂದು ತೋರಿಸಿಕೊಂಡಾಕ್ಷಣ ಈ ಸಂಬಂಧದಲ್ಲಿ ಹಿಂಸೆ ಅಥವಾ ಬಲಾತ್ಕಾರ ಅಂತರ್ಗತವಾಗಿರುವ ಸಂಗತಿಯಿಂದ ನಾವು ಎಳ್ಳಷ್ಟೂ ವಿಚಲಿತರಾಗಬಾರದು. ಈ ಅಂಶವೇ ಮುಖ್ಯವಾದದ್ದು.

ಸಾಮ್ರಾಜ್ಯಶಾಹಿ ಸಂಬಂಧದ ಸಾರ ಅಡಗಿರುವುದು ಎಲ್ಲಿ ಎಂದರೆ, ಭೂ-ಬಳಕೆಯೂ ಸೇರಿದಂತೆ ವಿಶ್ವದ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮೆಟ್ರೋಪಾಲಿಟನ್ ಶಕ್ತಿಗಳು ಹೊಂದುವಲ್ಲಿ. ಹಿಂದಿನ ವಸಾಹತುಗಳು ತಮ್ಮ ದೀರ್ಘ ಹೋರಾಟದ ನಂತರ ತಮ್ಮ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ನವ ವಸಾಹತುಶಾಹಿ ಎಂದು ವರ್ಣಿಸಲಾದ ಅವಧಿಯಲ್ಲೇ ಪಡೆದುಕೊಂಡಿದ್ದವು. ವಾಸ್ತವವಾಗಿ, ನವ-ವಸಾಹತುಶಾಹಿ ಎಂದರೆ ಏನೆಂಬುದನ್ನು ವ್ಯಾಖ್ಯಾನಿಸಿದ್ದು ಈ ಹೋರಾಟವೇ. ಆದರೆ, ನವ-ಉದಾರವಾದಿ ಜಾಗತೀಕರಣವು ಈ ಮೂರನೇ ಜಗತ್ತಿನ ಸಂಪನ್ಮೂಲಗಳ ಮತ್ತು ಸ್ವತ್ತುಗಳ ಮೇಲಿನ ನಿಯಂತ್ರಣವನ್ನು ನಿರಾಯಾಸವಾಗಿ (ಹೋರಾಟದ ಅಗತ್ಯವಿಲ್ಲದೆ) ಮೆಟ್ರೋಪಾಲಿಟನ್ ಬಂಡವಾಳಗಾರರಿಗೆ ಮರಳಿಸುವ ಉದ್ದೇಶ ಹೊಂದಿದೆ.

ಭಾರತದಲ್ಲಿ ಜರುಗಿರುವುದೂ ಇದೇ. ನೈಸರ್ಗಿಕ ಸಂಪನ್ಮೂಲಗಳು ಪ್ರಭುತ್ವದ ಒಡೆತನದಲ್ಲಿರಬೇಕು ಮತ್ತು ಅವುಗಳನ್ನು ಪ್ರಭುತ್ವವೇ ಅಭಿವೃದ್ಧಿಪಡಿಸಬೇಕು ಎಂಬ ಪರಿಕಲ್ಪನೆಯನ್ನು 1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ನಿರ್ಣಯದಲ್ಲಿ ಅಂಗೀಕರಿಸಲಾಗಿತ್ತು. ಸ್ವತಂತ್ರ ಭಾರತ ಹೇಗಿರುತ್ತದೆ ಎಂಬುದರ ರೂಪುರೇಷೆಯನ್ನು ಮೊದಲ ಬಾರಿಗೆ ಒದಗಿಸಿದ್ದು ಈ ಪರಿಕಲ್ಪನೆಯೇ. ಕರಾಚಿ ಅಧಿವೇಶನದ ಈ ನಿರ್ಣಯವು, “ಉದಾರೀಕರಣ”ದ ಆಗಮನದ ವರೆಗೂ ಭಾರತದ ಅಧಿಕೃತ ನೀತಿಯಾಗಿತ್ತು. ಆದರೆ, ನವ-ಉದಾರವಾದಿ ಆಳ್ವಿಕೆಯಲ್ಲಿ, ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ವಿದೇಶಿ ಬಂಡವಾಳವನ್ನು ಮತ್ತೊಮ್ಮೆ ಆಹ್ವಾನಿಸಲಾಯಿತು (ದೇಶೀಯ ಏಕಸ್ವಾಮ್ಯಗಳ ಜೊತೆಗೆ).

ಮೆಟ್ರೋಪಾಲಿಟನ್ ಬಂಡವಾಳದ ಬಗ್ಗೆ ತಿರುಗುಮುರುಗಾದ ಈ ಅಭಿಪ್ರಾಯವು ಪ್ರಕಟಗೊಂಡದ್ದು ಭಾರತದಲ್ಲಿ ಮಾತ್ರವಲ್ಲ, ಮೂರನೇ ಜಗತ್ತಿನ ಹಲವಾರು ದೇಶಗಳಲ್ಲೂ ಪ್ರಕಟಗೊಂಡಿತು. ಈ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳುವಂತೆ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಅಣತಿಯ ಮೇರೆಗೆ ಕೆಲಸ ಮಾಡುವ ಮೂರು ಅಂತರರಾಷ್ಟ್ರೀಯ ಸಂಸ್ಥೆಗಳು- ಐಎಂಎಫ್, ವಿಶ್ವ ಬ್ಯಾಂಕ್ ಮತ್ತು ಡಬ್ಲ್ಯುಟಿಒ – ಈ ದೇಶಗಳ ಮೇಲೆ ಒತ್ತಡ ಹೇರಿದವು. ಈ ಪ್ರಕ್ರಿಯೆಯಲ್ಲಿ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ನಿರ್ವಹಿಸಿದ ಪಾತ್ರ ಎಲ್ಲರಿಗೂ ಗೊತ್ತಿದೆ. ಆದರೆ, ಡಬ್ಲ್ಯುಟಿಓ(ವಿಶ್ವ ವ್ಯಾಪಾರ ಸಂಸ್ಥೆ) ನಿರ್ವಹಿಸಿದ ಪಾತ್ರದ ಬಗ್ಗೆ ತಿಳಿದಿರುವುದು ಸ್ವಲ್ಪ ಮಾತ್ರ. “ಮುಕ್ತ” ವ್ಯಾಪಾರ ನೀತಿಯ ವಿನಾಶಕಾರಿ, ಅಪ-ಕೈಗಾರಿಕೀಕರಣದ ಪರಿಣಾಮಗಳನ್ನು ವಸಾಹತುಶಾಹಿ ಆಳ್ವಿಕೆಯ ದೀರ್ಘ ಅನುಭವವು ಸ್ಪಷ್ಟವಾಗಿ ತೋರಿಸಿದ್ದರೂ ಸಹ, ವ್ಯಾಪಾರದ ಎಲ್ಲ ಪಾಲುದಾರರಿಗೂ “ಮುಕ್ತ” ವ್ಯಾಪಾರವು ಪ್ರಯೋಜನಕಾರಿಯಾಗಿದೆ ಎಂಬ ಒಂದು ಪೂರ್ಣ ಕುಖ್ಯಾತ ಸಿದ್ಧಾಂತವನ್ನು ಬಳಸಿಕೊಂಡ ಡಬ್ಲ್ಯುಟಿಒ, ಮೂರನೇ ಜಗತ್ತಿನ ದೇಶಗಳ ಮೇಲೆ ಒಂದು “ಮುಕ್ತ” ವ್ಯಾಪಾರ ವ್ಯವಸ್ಥೆಯನ್ನು ಹೇರಿತು. ಈ ವ್ಯಾಪಾರ ವ್ಯವಸ್ಥೆಯು ಪೂರ್ಣವಾಗಿ ಮೆಟ್ರೋಪಾಲಿಟನ್ ದೇಶಗಳಿಗೆ ಅನುಕೂಲಕರವಾಗಿತ್ತು. ಅದರ ಒಂದು ಪರಿಣಾಮವೆಂದರೆ, ಸಣ್ಣ ಪುಟ್ಟ ದೇಶಗಳ ಆಹಾರ ಧಾನ್ಯಗಳ ಸ್ವಾವಲಂಬನೆಯ ನಾಶ. ನಾವು ಇಲ್ಲಿ ಈ ಒಂದು ವಿಷಯವನ್ನಷ್ಟೇ ನೋಡೋಣ.

ಸ್ವಾವಲಂಬನೆ ನಾಶಗೊಂಡಿದ್ದರಿಂದಾಗಿ ಈ ದೇಶಗಳು ಮೆಟ್ರೋಪಾಲಿಟನ್ ದೇಶಗಳಲ್ಲಿ ಬೆಳೆದ ಹೆಚ್ಚುವರಿ ಆಹಾರ ಧಾನ್ಯಗಳಿಗೆ ಗಿರಾಕಿಗಳಾಗುತ್ತವೆ, ಅವಕ್ಕೆ ಮಾರುಕಟ್ಟೆ ಒದಗಿಸುತ್ತವೆ. ಅದೇ ಸಮಯದಲ್ಲಿ, ಈ ದೇಶಗಳು ತಮ್ಮ ದೇಶಗಳಲ್ಲಿ ಭೂ-ಬಳಕೆಯನ್ನು ಮೆಟ್ರೋಪಾಲಿಟನ್ ದೇಶಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲದ ಸೊಪ್ಪು ಮತ್ತು ತರಕಾರಿಗಳಿಂದ ಹಿಡಿದು ಹಣ್ಣು ಮತ್ತು ಹೂವುಗಳವರೆಗೆ, ಬೇರೆ ಬೇರೆ ಬೆಳೆಗಳ ಉತ್ಪಾದನೆಯ ಕಡೆಗೆ ತಿರುಗಿಸುತ್ತವೆ. ಈ ರೀತಿಯಲ್ಲಿ ಧಾನ್ಯಗಳ ಸ್ವಾವಲಂಬನೆಯ ನಾಶವು, ಆಫ್ರಿಕನ್ ದೇಶಗಳಲ್ಲಿ ಆಗಿದ್ದಂತೆ, ಮೂರನೇ ಜಗತ್ತಿನ ದೇಶಗಳನ್ನು ಒಂದು ಕಡೆ ಕ್ಷಾಮಕ್ಕೆ ಗುರಿಯಾಗುವಂತೆ ಮಾಡುತ್ತದೆ ಮತ್ತು ಮತ್ತೊಂದೆಡೆ ಸಾಮ್ರಾಜ್ಯಶಾಹಿಯು ಅವುಗಳ ತೋಳು ತಿರುಚುತ್ತದೆ.

ಮೂರನೆಯ ಜಗತ್ತಿನ ದೇಶಗಳಲ್ಲಿ ಆಹಾರ ಧಾನ್ಯಗಳ ಸ್ವಾವಲಂಬನೆಯ ನಾಶವು ಅಪಾಯಕಾರಿಯಾಗಿದ್ದರೆ, ಈ ಉದ್ದೇಶಕ್ಕಾಗಿ ಬಳಸುವ ಸಾಧನವು ನಂಬಲಾರದಷ್ಟು ಅತಾರ್ಕಿಕವಾಗಿದೆ. ಈ ಅತಾರ್ಕಿಕತೆಯ ಮೊದಲ ಅಂಶವೆಂದರೆ, ಸರ್ಕಾರವು ರೈತರಿಗೆ ಮಾಡುವ ವರ್ಗಾವಣೆಗಳನ್ನು ಡಬ್ಲ್ಯೂಟಿಒ, “ಅನುಮತಿಸಬಹುದಾದ” ಮತ್ತು “ನಿಷಿದ್ಧ/ಅನುಮತಿಸಲಾಗದ” ಎಂಬುದಾಗಿ ವರ್ಗೀಕರಿಸುವ ಕ್ರಮ. ಡಬ್ಲ್ಯೂಟಿಒ ಪ್ರಕಾರ, ಸರ್ಕಾರವು ರೈತರಿಗೆ ಮಾಡುವ ನೇರ ನಗದು ವರ್ಗಾವಣೆಗಳನ್ನು “ಅನುಮತಿಸಬಹುದು” ಮತ್ತು ಬೆಲೆ-ಬೆಂಬಲದ ಸಲುವಾಗಿ ಮಾಡುವ ವರ್ಗಾವಣೆಗಳು “ನಿಷಿದ್ಧ”. ಒಟ್ಟು ಜನಸಂಖ್ಯೆಯ ಶೇಕಡಾವಾರಿನಲ್ಲಿ ಒಂದು ಅತಿ ಸಣ್ಣ ಸಂಖ್ಯೆಯ ರೈತರಿರುವ ಅಮೆರಿಕಾದಂತಹ ದೇಶದಲ್ಲಿ, ನೇರ ನಗದು ವರ್ಗಾವಣೆಗಳನ್ನು ಮಾಡುವುದು ಸುಲಭ. ಆದರೆ ಕೋಟಿ ಕೋಟಿ ರೈತರು ಇರುವ ಭಾರತದಂತಹ ದೇಶದಲ್ಲಿ, ಅವರಿಗೆ ಬೆಂಬಲ ನೀಡಬಹುದಾದ ಏಕೈಕ ಕಾರ್ಯಸಾಧ್ಯ ಮಾರ್ಗವೆಂದರೆ ಬೆಲೆ-ಬೆಂಬಲದ ಮೂಲಕವೇ. ಆದ್ದರಿಂದ, ಪಕ್ಷಪಾತವನ್ನು ಅಂತರ್ಗತವಾಗಿಸಿಕೊಂಡಿರುವ ಮತ್ತು ಪೂರ್ಣವಾಗಿ ಸರಿಯಲ್ಲದ ಒಂದು ಆರ್ಥಿಕ ಸಿದ್ಧಾಂತದ ಮೂಲಕ ಸಮರ್ಥಿಸಲ್ಪಟ್ಟ “ಅನುಮತಿಸಬಹುದಾದ” ಮತ್ತು “ನಿಷಿದ್ಧ” ವರ್ಗಾವಣೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕ್ರಮವು ಭಾರತದಂತಹ ದೇಶಗಳಲ್ಲಿನ ರೈತರ ವಿರುದ್ಧವಾಗಿದೆ.

ಇದನ್ನು ಓದಿ: ಬಂಡವಾಳಶಾಹಿ ಸರ್ಕಾರಗಳು ನಿರುದ್ಯೋಗಕ್ಕಿಂತ ಹಣದುಬ್ಬರದ ಬಗ್ಗೆಯೇ ಏಕೆ ತಲೆಕೆಡಿಸಿಕೊಳ್ಳುತ್ತವೆ?

ಅತಾರ್ಕಿಕತೆಯ ಎರಡನೆಯ ಅಂಶವು “ನಿಷಿದ್ಧ” ವರ್ಗಾವಣೆಗಳ ಪ್ರಮಾಣವನ್ನು ಲೆಕ್ಕಹಾಕುವ ವಿಧಾನದಿಂದ ಉದ್ಭವಿಸುತ್ತದೆ. ಈ ಅಂಶವನ್ನು ವಿವರಿಸಲು ನಾವು ಭಾರತದ ವಿರುದ್ಧ ಅಮೆರಿಕವು ಡಬ್ಲ್ಯುಟಿಓಗೆ ನೀಡಿದ ಒಂದು ನಿರ್ದಿಷ್ಟ ದೂರನ್ನು ತೆಗೆದುಕೊಳ್ಳೋಣ. 1986-88 ರ ಸರಾಸರಿಯ ಮೂಲ ವರ್ಷದಲ್ಲಿ, ಅಕ್ಕಿ ಮತ್ತು ಗೋಧಿಗೆ ಒಂದು ನಿರ್ದಿಷ್ಟ ಅಂತಾರಾಷ್ಟ್ರೀಯ ಡಾಲರ್ ಬೆಲೆ ಇತ್ತು. ಈ ಡಾಲರ್ ಬೆಲೆಗಳನ್ನು ರೂಪಾಯಿಯ ಮೂಲ ವರ್ಷದ ವಿನಿಮಯ ದರದಿಂದ ಗುಣಿಸಲ್ಪಟ್ಟಾಗ ಈ ಬೆಳೆಗಳ ಮೂಲ ವರ್ಷದ ಬೆಂಚ್‌ಮಾರ್ಕ್(ಗುರುತು ಮಟ್ಟದ) ರೂಪಾಯಿ ಬೆಲೆಗಳು ನಮಗೆ ಸಿಗುತ್ತವೆ. ಅಮೆರಿಕಾದ ಪ್ರಕಾರ, ಈ ಬೆಳೆಗಳಿಗೆ ಭಾರತ ಸರ್ಕಾರವು ಘೋಷಿಸಿದ ಪ್ರಸಕ್ತ ವರ್ಷದ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಈ ಮಾನದಂಡದ ಬೆಲೆಗಳಿಗಿಂತ ಅಧಿಕವಾದ ಅಂಶವನ್ನು ಈ ಬೆಳೆಗಳ ಪೂರ್ಣ ಉತ್ಪಾದನೆಯೊಂದಿಗೆ ಗುಣಿಸಿದಾಗ ಬರುವ ಗುಣಲಬ್ಧವು ಸಬ್ಸಿಡಿಯ ಮೊತ್ತವಾಗುತ್ತದೆ ಮತ್ತು ಅದು ಈ ಬೆಳೆಗಳ ಒಂದು ನಿರ್ದಿಷ್ಟ ಪ್ರಮಾಣದ ಮೌಲ್ಯವನ್ನು ಮೀರಿದರೆ, ಅದನ್ನು ಡಬ್ಲ್ಯೂಟಿಓ ನಿಯಮಗಳಿಗೆ ವಿರುದ್ಧವಾದದ್ದು ಎಂದು ಭಾವಿಸಲಾಗುತ್ತದೆ. ಈ ರೀತಿಯ ಲೆಕ್ಕಾಚಾರದಲ್ಲಿ, 2013-14 ರಲ್ಲಿ, ಭಾರತದಲ್ಲಿ ನಿಗದಿಪಡಿಸಿದ ಪ್ರತಿ ಕ್ವಿಂಟಾಲ್ ಗೋಧಿಯ ಎಂಎಸ್‌ಪಿ ರೂ.1390ಕ್ಕೆ ಹೋಲಿಸಿದರೆ, ಅದರ ಬೆಂಚ್ ಮಾರ್ಕ್ ಬೆಲೆಯು ಪ್ರತಿ ಕ್ವಿಂಟಾಲ್‌ಗೆ ರೂ.360 ಇರಬೇಕು ಎಂದು ಅಮೆರಿಕಾ ಹೇಳುತ್ತದೆ.

ಅಮೆರಿಕಾದ ದೂರಿನ ಔಚಿತ್ಯವನ್ನು ಇಲ್ಲಿ ನಾವು ಚರ್ಚಿಸಬಯಸುವುದಿಲ್ಲ, ಅಥವಾ ಡಬ್ಲ್ಯುಟಿಒ ನಿಜವಾಗಿಯೂ ಹೇಳಿದ್ದು ಇದನ್ನೇ ಎಂದು ಸೂಚಿಸಬಯಸುವುದೂ ಇಲ್ಲ. ವಿಷಯ ನ್ಯಾಯಾಲಯದಲ್ಲಿರುವುದರಿಂದ ಅದನ್ನು ಸೂಕ್ತ ಸಮಯದಲ್ಲಿ ಚರ್ಚಿಸೋಣ. ಆದರೆ, ಅಮೆರಿಕಾ ದೂರು ನೀಡಿದ ಈ ಒಂದು ರೀತಿಯೇ ಡಬ್ಲ್ಯೂಟಿಒ ನಿಯಮಗಳಲ್ಲಿ, ಎರಡು ವಿಷಯಗಳ ಬಗ್ಗೆ ಲೋಪವಿದೆ ಎಂಬುದನ್ನು ಸೂಚಿಸುತ್ತದೆ. ಮೊದಲನೆಯದು, ವಾಸ್ತವವಾಗಿ ಉತ್ಪಾದನೆಯ ಒಂದು ಸಣ್ಣ ಭಾಗವನ್ನು ಮಾತ್ರ ಖರೀದಿಸುತ್ತಿರುವಾಗ, ಇಡೀ ಉತ್ಪಾದನೆಯನ್ನು ಎಂಎಸ್‌ಪಿಯಲ್ಲಿ ಖರೀದಿಸಲಾಗಿದೆ ಎಂದು ಪರಿಗಣಿಸುವುದಾದರೂ ಹೇಗೆ ಮತ್ತು ಅದನ್ನೇ ಆಧಾರವಾಗಿಟ್ಟುಕೊಂಡು “ಸಬ್ಸಿಡಿ”ಯನ್ನು ಲೆಕ್ಕಹಾಕಬಹುದೇ? ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರೈತರು ಉತ್ಪಾದಿಸಿದ ಆಹಾರ ಧಾನ್ಯಗಳ ಹೆಚ್ಚಿನ ಪಾಲು ಅವರ ಸ್ವಂತಕ್ಕೆ ಬಳಕೆಯಾಗುತ್ತವೆ ಎಂಬ ಅಂಶವನ್ನು ಡಬ್ಲ್ಯುಟಿಒ ಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಅಂದರೆ, ಡಬ್ಲ್ಯುಟಿಓ ನಿಯಮಗಳಲ್ಲಿ, ಭಾರತದಂತಹ ದೇಶದ ಆಹಾರ ಧಾನ್ಯ ಸಂಬಂಧಿತ ಅರ್ಥವ್ಯವಸ್ಥೆಯ ನಿಷ್ಕೃಷ್ಟತೆಯ ಬಗ್ಗೆ ಏನನ್ನೂ ಹೇಳಿಲ್ಲ. ಎರಡನೆಯದು, ಹಣದುಬ್ಬರದಿಂದ ಬೇರ್ಪಡಿಸಿದ ಯಾವುದೇ ಮೂಲ “ಬೆಂಚ್ ಮಾರ್ಕ್” ಬೆಲೆಯ ಕಲ್ಪನೆಯೇ (ಅಥವಾ, “ಮಾನದಂಡ”ವೇ), ಅದು ಧಾನ್ಯಗಳ ಮೂಲ ಡಾಲರ್ ಬೆಲೆಯೇ ಇರಲಿ ಅಥವಾ ಮೂಲ ವಿನಿಮಯ ದರವೇ ಇರಲಿ, ಸಂಪೂರ್ಣವಾಗಿ ಅವಾಸ್ತವಿಕ (ವಾಸ್ತವಿಕವಾಗಿ ಅದು ಎರಡನ್ನೂ ಹೆಚ್ಚಿಸುತ್ತದೆ). ಹಾಗಾಗಿ, “ಬೆಂಚ್ ಮಾರ್ಕ್” ಬೆಲೆ ಕ್ರಮವು ಮೆಟ್ರೋಪಾಲಿಟನ್ ದೇಶಗಳು ಬಯಸಿದ ದಿಕ್ಕಿನಲ್ಲಿ ಭೂ-ಬಳಕೆಯ ಬದಲಾವಣೆಯನ್ನು ಉತ್ತೇಜಿಸುತ್ತದೆ ಮತ್ತು ಡಬ್ಲ್ಯುಟಿಓ ನಿಯಮಗಳು ಮೂರನೇ ಜಗತ್ತಿನಲ್ಲಿ ಸ್ವಾವಲಂಬನಾ ಆಹಾರ ಉತ್ಪಾದನೆಯ ವಿರುದ್ಧವಾಗಿ ಪಕ್ಷಪಾತಿಯಾಗುತ್ತವೆ.

ಮೂರನೇ ಜಗತ್ತಿನ ದೇಶಗಳು “ಮುಕ್ತ ವ್ಯಾಪಾರ”ವನ್ನು ಆಯ್ಕೆ ಮಾಡಿಕೊಳ್ಳುವಂತೆ ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಉತ್ತೇಜಿಸುತ್ತವೆ ಮತ್ತು “ಮುಕ್ತ ವ್ಯಾಪಾರ” ನೀತಿಗಳನ್ನು ಅಳವಡಿಸಿಕೊಂಡ ನಂತರ ಈ ದೇಶಗಳಲ್ಲಿ ಉದ್ಭವಿಸುವ ಪಾವತಿ ಶೇಷ (ವಿದೇಶ ವ್ಯಾಪಾರದ ಕೊರತೆಯ ಸಮಸ್ಯೆ) ತೊಂದರೆಗಳನ್ನು ನಿವಾರಿಸಿಕೊಳ್ಳಲು “ಮಿತವ್ಯಯ” ನೀತಿಗಳನ್ನು ಪಾಲಿಸುವಂತೆ ಒತ್ತಾಯಿಸುತ್ತವೆ. ಅವುಗಳ ಈ ಕಾರ್ಯತಂತ್ರವು ಮೆಟ್ರೋಪಾಲಿಟನ್ ಬಳಕೆಗಾಗಿ ಮೂರನೇ ಜಗತ್ತಿನ ದೇಶಗಳ ಪ್ರಾಥಮಿಕ ಸರಕುಗಳನ್ನು (ನೈಸರ್ಗಿಕ ಸಂಪನ್ಮೂಲಗಳನ್ನು) ನಿಗದಿತ ಕೆಳ-ಮಟ್ಟದ ಬೆಲೆಗಳಲ್ಲಿ ಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಲ್ಲಿ ಸಾಮ್ರಾಜ್ಯಶಾಹಿಯ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸವನ್ನು ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಮಾತ್ರವಲ್ಲ, ಡಬ್ಲ್ಯೂಟಿಓ ಕೂಡ ಮೂರನೇ ಜಗತ್ತಿನ ಭೂ-ಬಳಕೆಯನ್ನು ಆಹಾರೇತರ ಧಾನ್ಯಗಳ ಕಡೆಗೆ ಬದಲಾಯಿಸುವ ಮೂಲಕ ಪೂರೈಸುತ್ತದೆ.

ವಸಾಹತುಶಾಹಿ ಕೊನೆಗೊಂಡ ಬಳಿಕ ಕ್ಷಿಪ್ರಕ್ರಾಂತಿಗಳಿಂದ ಹಿಡಿದು ಸಶಸ್ತ್ರ ಹಸ್ತಕ್ಷೇಪಗಳವರೆಗೆ ಎಲ್ಲ ವಿಧಾನಗಳ ಮೂಲಕ ಏನನ್ನು ಸಾಧಿಸಲು ಮೆಟ್ರೋಪಾಲಿಟನ್ ಶಕ್ತಿಗಳು ಉದ್ದೇಶಿಸಿದ್ದವೋ ಅದನ್ನು, ಅಂದರೆ, ಮೂರನೇ ಜಗತ್ತಿನ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಒಡೆತನದಲ್ಲಿ, ಭೂ-ಬಳಕೆಯಲ್ಲಿ ಮತ್ತು ಅವುಗಳ ಬೆಲೆಗಳಲ್ಲಿ ತೀವ್ರ ಬದಲಾವಣೆಯನ್ನು ಸಾಮ್ರಾಜ್ಯಶಾಹಿಯ ಹಿತಾಸಕ್ತಿಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ಸಂಸ್ಥೆಗಳು ಈಗ ಮೂರನೇ ಜಗತ್ತಿನ ದೇಶಗಳ ಮೇಲೆ “ಶಾಂತಿಯುತ” ವಿಧಾನಗಳ ಮೂಲಕ ಹೇರುತ್ತಿವೆ. ಹಿಂದಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ, ಹಿಂಸಾತ್ಮಕ ಬಲ ಪ್ರಯೋಗದೊಂದಿಗೆ ಗುರುತಿಸಲ್ಪಡುವ ನವ-ವಸಾಹತುಶಾಹಿಯ ಅವಧಿಯನ್ನು ವಸಾಹತುಶಾಹಿಯ ನೇರ ಆಡಳಿತದ ಸ್ಥಾನದಲ್ಲಿ ಸೂಕ್ತ ಸಂಸ್ಥೆಗಳನ್ನು ರೂಪಿಸುವ ಮೊದಲಿನ ಒಂದು ಸಂಕ್ರಮಣ ಹಂತವೆಂದು ಭಾವಿಸಬಹುದು. ಈ ಸಂಸ್ಥೆಗಳಿರುವುದರಿಂದ ಈಗ ಸಶಸ್ತ್ರ ಹಸ್ತಕ್ಷೇಪದ ಅಗತ್ಯವಿಲ್ಲ; ನವ-ವಸಾಹತುಶಾಹಿಯು ಅಭಿವ್ಯಕ್ತಗೊಳ್ಳುತ್ತಿಲ್ಲ ಮತ್ತು ಈ ವಿದ್ಯಮಾನಗಳು ಕಾಣಿಸಿಕೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಸಾಮ್ರಾಜ್ಯಶಾಹಿಯೂ ಇಲ್ಲ ಎಂದು ಭಾವಿಸುವುದು ವಿಷಯದ ಸಂಪೂರ್ಣ ಅರ್ಥಾಂತರವಾಗುತ್ತದೆ.

ಅನುವಾದ: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *