ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹತೋಟಿಯ ಪ್ರಯತ್ನದಲ್ಲಿ ಸಾಮ್ರಾಜ್ಯಶಾಹಿಗೆ ಪೀಕಲಾಟ

ಪ್ರೊ.ಪ್ರಭಾತ್ ಪಟ್ನಾಯಕ್
ಅನು : ಕೆ.ಎಂ. ನಾಗರಾಜ್

ಸಾಮ್ರಾಜ್ಯಶಾಹಿಯ ಹಿಂದಿನ ಹಂತದಲ್ಲಿ ವಸಾಹತುಶಾಹಿಯು ಮುಂದುವರೆದ ಬಂಡವಾಳಶಾಹಿ ದೇಶಗಳು ಉತ್ಪಾದಿಸಲು ಸಾಧ್ಯವಾಗದ ಮತ್ತು ತಮಗೆ ಅಗತ್ಯವಿರುವ ಸರಕುಗಳು, ಸಂಪನ್ಮೂಲಗಳು “ಹೊರಗಿನಿಂದ” ಕಡಿಮೆ (ಅಥವಾ ಶೂನ್ಯ) ಬೆಲೆಗಳಲ್ಲಿ ಸುಗಮವಾಗಿ ಈ ದೇಶಗಳಿಗೆ ಹರಿಯುವಂತೆ ಮಾಡಿತ್ತು.ಅದೇ ರೀತಿಯಲ್ಲಿ ಇಂದು ಸಾಮ್ರಾಜ್ಯಶಾಹಿಯು ಈಗಲೂ ಅದನ್ನು  ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ “ಹೊರಗಿನ” ದೇಶಗಳಲ್ಲಿ ಮುಂದುವರೆದ ಬಂಡವಾಳಶಾಹಿ ದೇಶಗಳಿಗೆ ವಿಧೇಯವಾಗಿರುವ ಆಳ್ವಿಕೆಗಳನ್ನು ಸ್ಥಾಪಿಸುವುದು, ‘ಅವಿಧೆಯ’ರೆಂದು ಕಾಣುವ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುವುದು ಅಂತಹ ಒಂದು ಮಾರ್ಗವಾಗಿದೆ. ಆದರೆ ಹೀಗೆ ಸಾಮ್ರಾಜ್ಯಶಾಹಿಯ ನಿರ್ಬಂಧಗಳಿಗೆ ಗುರಿಯಾಗುತ್ತಿರುವ ದೇಶಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರೊಂದಿಗೆ, ಅದರ ವಿರುದ್ಧ ಪ್ರತಿರೋಧಗಳೂ ಹೆಚ್ಚುತ್ತಿರುವುದು ಕಾಣುತ್ತಿದೆ. ಏಕೆಂದರೆ, ನಿರ್ಬಂಧಗಳಿಂದ ಅವುಗಳಿಗೆ ಗುರಿಯಾದ ದೇಶಗಳ ಜನರಷ್ಟೇ ಅಲ್ಲ, ನಿರ್ಬಂಧಗಳನ್ನು ವಿಧಿಸಿದ ದೇಶಗಳ ದುಡಿಯುವ ಜನರೂ ಸಹ ಬಳಲುತ್ತಿದ್ದಾರೆ. ಇದು ಯುರೋಪಿನಾದ್ಯಂತ ಸಾವಿರಗಟ್ಟಲೆ ಕಾರ್ಮಿಕರನ್ನು ಯುದ್ಧ-ವಿರೋಧಿ, ಹಣದುಬ್ಬರ-ವಿರೋಧಿ ಪ್ರದರ್ಶನಗಳ ಮೂಲಕ ಬೀದಿಗೆ ಇಳಿಯುವಂತೆ ಮಾಡಿದೆ. ಈ ಪ್ರತಿರೋಧಗಳು ಮರ್ಮಾಘಾತಗಳ ರೀತಿಯಲ್ಲಿ ಸಾಮ್ರಾಜ್ಯಶಾಹಿಯನ್ನು ತಾಗುತ್ತಿವೆ.

ದೇಶ ದೇಶಗಳು ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳಿಗೂ ಮತ್ತು ಅವು ಸಾಧಿಸಿದ “ಅಭಿವೃದ್ಧಿ” ಯ ಮಟ್ಟಕ್ಕೂ ಒಂದು ತಾಳ-ಮೇಳವೇ ಇಲ್ಲ ಎನ್ನಬಹುದು. ಈ ಸಂಬಂಧವಾಗಿ ಅತ್ಯಂತ ಮುಂದುವರಿದ ದೇಶಗಳಾದ ಯುಎಸ್, ಯುಕೆ, ಜರ್ಮನಿ, ಫ್ರಾನ್ಸ್, ಇಟಲಿ, ಜಪಾನ್ ಮತ್ತು ಕೆನಡಾವನ್ನು ಒಳಗೊಂಡ ಜಿ -7 ಗುಂಪಿನ ಪರಿಸ್ಥಿತಿಯನ್ನು ನೋಡೋಣ. ವಿಶ್ವದ ಜನಸಂಖ್ಯೆಯ ಕೇವಲ ಶೇ. 10ರಷ್ಟನ್ನು ಹೊಂದಿದ್ದರೂ, ಈ ಗುಂಪು, 2020ರ ವೇಳೆಗೆ ಜಾಗತಿಕ ನಿವ್ವಳ ಸಂಪತ್ತಿನ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ಹೊಂದಿತ್ತು ಮತ್ತು ವಿಶ್ವ ಜಿಡಿಪಿಯ ಸರಿಸುಮಾರು ಶೇ. 40ರಷ್ಟನ್ನು ಭಾಗವನ್ನು ಹೊಂದಿತ್ತು (ಅನುಕೂಲಕ್ಕಾಗಿ ಶೇ. 32ರಿಂದ ಶೇ. 46ರ ವರೆಗಿನ ಅಂದಾಜುಗಳ ನಡುವಿನ ಸಂಖ್ಯೆಯನ್ನು ತೆಗೆದುಕೊಳ್ಳಲಾಗಿದೆ). ಆರ್ಥಿಕ ದೃಷ್ಟಿಯಲ್ಲಿ ಹೇಳುವುದಾದರೆ, ಈ ಗುಂಪು ಹೊಂದಿರುವ ಬಲ ಅಗಾಧವೇ. ಆದರೆ, ನೈಸರ್ಗಿಕ ಸಂಪನ್ಮೂಲಗಳ ದೃಷ್ಟಿಯಲ್ಲಿ ಹೇಳುವುದಾದರೆ, ಈ ಗುಂಪು ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳ ನಿಕ್ಷೇಪಗಳು ಕಡಿಮೆಯೇ.

ನೈಸರ್ಗಿಕ ಸಂಪನ್ಮೂಲಗಳ ಪೈಕಿ ಇಂದಿನ ದಿನಮಾನಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ತೈಲದ ಮತ್ತು ನೈಸರ್ಗಿಕ ಅನಿಲದ ಪರಿಸ್ಥಿತಿಯನ್ನು ಪರಿಗಣಿಸೋಣ. ತೈಲದ ಮತ್ತು ಅನಿಲದ ವಿಶ್ವ-ನಿಕ್ಷೇಪಗಳ ಅಂದಾಜುಗಳಲ್ಲಿ ಎಷ್ಟು ವ್ಯತ್ಯಾಸಗಳಿವೆಯೋ ಅಷ್ಟೇ ವ್ಯತ್ಯಾಸಗಳು ಅವುಗಳ ದೇಶಗಳಾದ್ಯಂತ ಹರಡಿಕೆಯ ಸಂಬಂಧದ ಅಂದಾಜುಗಳಲ್ಲಿಯೂ ಇವೆ. ಆದರೂ ಕೆಲವು ಅಂಶಗಳು ಎಷ್ಟು ಸ್ಪಷ್ಟವಾಗಿವೆ ಎಂದರೆ, ಅಂದಾಜುಗಳಲ್ಲಿನ ವ್ಯತ್ಯಾಸಗಳು ಅವುಗಳ ನಿಖರತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅಮೆರಿಕದ ಎನರ್ಜಿ ಇನ್ಫಾರ್ಮೇಶನ್ ಅಡ್ಮಿನಿಸ್ಟ್ರೇಷನ್ (ಇಐಎ) ಪ್ರಕಾರ, ವಿಶ್ವದ ಒಟ್ಟು ಪ್ರಮಾಣಿಸಲ್ಪಟ್ಟ ತೈಲ ನಿಕ್ಷೇಪಗಳಲ್ಲಿ, ಜಿ-7 ದೇಶಗಳು ಶೇ. 13ರಷ್ಟನ್ನು ಹೊಂದಿದ್ದವು (ಕೆನಡಾ ಮಾತ್ರವೇ ವಿಶ್ವದ ತೈಲ ನಿಕ್ಷೇಪಗಳ ಸುಮಾರು ಶೇ. 10ರಷ್ಟನ್ನು ಹೊಂದಿದೆ). ಇತ್ತೀಚೆಗೆ ಅಮೆರಿಕಾ ಶೇಲ್ ತೈಲದತ್ತ ಹೊರಳುತ್ತಿದ್ದು ಅದರ ಉತ್ಪಾದನೆಯ ಪ್ರಮಾಣವನ್ನು ಈ ಲೆಕ್ಕಾಚಾರದಲ್ಲಿ ಸೇರಿಸಿಲ್ಲ. ಏಕೆಂದರೆ, ಹೆಚ್ಚಿನ ದೇಶಗಳ ಶೇಲ್ ತೈಲ ನಿಕ್ಷೇಪಗಳ ಗಾತ್ರ ಎಷ್ಟು ಎಂಬುದು ಇನ್ನೂ ತಿಳಿದಿಲ್ಲ. ಒಂದು ವೇಳೆ ಶೇಲ್ ತೈಲದ ಉತ್ಪಾದನೆಯ ಪ್ರಮಾಣವನ್ನು ಈ ಲೆಕ್ಕಾಚಾರದಲ್ಲಿ ಸೇರಿಸಿದರೂ ಸಹ ಈ ಅಂಕಿಅಂಶಗಳಲ್ಲಿ ಹೆಚ್ಚು ವ್ಯತ್ಯಾಸ ಇರುವುದಿಲ್ಲ. ಏಕೆಂದರೆ, ವಿಶ್ವದ ತೈಲ ನಿಕ್ಷೇಪಗಳ ಬಹು ದೊಡ್ಡ ಪಾಲು ಈ ಗುಂಪಿನ ದೇಶಗಳ ಆಚೆಯೇ ಇದೆ.

ಇದನ್ನು ಓದಿ: ಡಾಲರ್‌ ಪಾರಮ್ಯದ ಅಂತ್ಯ?

ಮುಂದುವರೆದ ದೇಶಗಳು:ಲಭ್ಯತೆ ಅಲ್ಪ-ಅವಲಂಬನೆ ಗಣನೀಯ

ನೈಸರ್ಗಿಕ ಅನಿಲದ ನಿಕ್ಷೇಪಗಳು ಈಗ ಎಷ್ಟಿವೆ ಎಂಬುದನ್ನು ನೋಡೋಣ. ನೈಸರ್ಗಿಕ ಅನಿಲದ ನಿಕ್ಷೇಪಗಳು ಮತ್ತು ದೇಶಗಳಾದ್ಯಂತ ಅವುಗಳ ಹರಡಿಕೆಯ ಅಂದಾಜುಗಳ ಬಗ್ಗೆಯೂ ಗಮನಾರ್ಹ ವ್ಯತ್ಯಾಸಗಳಿವೆ. 2020ರ ಅಂತ್ಯದ ಅವಧಿಗೆ ಜಿ-7 ದೇಶಗಳಿಗೆ ಸಂಬಂಧಿಸಿದ ಇಐಎ ಅಂದಾಜನ್ನು ತೆಗೆದುಕೊಂಡು ಮತ್ತು ಅದನ್ನು ವಿಶ್ವದ ಒಟ್ಟು ಅಂದಾಜು 188 ಟ್ರಿಲಿಯನ್ ಘನ ಮೀಟರ್ ಅನಿಲ ನಿಕ್ಷೇಪದಿಂದ ಭಾಗಿಸಿದಾಗ, ವಿಶ್ವ ನಿಕ್ಷೇಪಗಳಲ್ಲಿ ಜಿ-7 ದೇಶಗಳ ಪಾಲು ಕೇವಲ ಶೇ. 8ಕ್ಕಿಂತ ತುಸು ಹೆಚ್ಚು ಎಂಬುದು ಕಂಡುಬರುತ್ತದೆ. ಈ ಅಂದಾಜುಗಳಿಂದಲೂ ಸಹ ಶೇಲ್ ಅನಿಲದ ಉತ್ಪಾದನೆಯ ಪ್ರಮಾಣವನ್ನು ಹೊರಗಿಡಲಾಗಿದೆ. ಅದೇನೇ ಇರಲಿ, ವಿಶ್ವದ ಅನಿಲ ನಿಕ್ಷೇಪಗಳ ಬಹುಪಾಲು ಈ ಗುಂಪಿನ ದೇಶಗಳ ಹೊರಗೇ ಇದೆ ಎಂಬುದಂತೂ ನಿಸ್ಸಂದೇಹವಾಗಿದೆ. ಆದಾಗ್ಯೂ, ತೈಲ ಮತ್ತು ಅನಿಲದ ಮೇಲೆ ಈ ದೇಶಗಳ ಅವಲಂಬನೆಯಂತೂ ಅಗಾಧವೇ. ಪರಿಸರ ಮಾಲಿನ್ಯದ ಕಾರಣದ ಮೇಲೆ, ಈ ಇಂಧನಗಳಿಂದ ದೂರ ಸರಿಯಲು ಈ ಗುಂಪಿನ ಕೆಲವು ದೇಶಗಳು ಪ್ರಯತ್ನಿಸುತ್ತಿವೆ, ನಿಜ. ಫ್ರಾನ್ಸ್ ದೇಶವು ಪರಮಾಣು ಶಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹವಾಮಾನ ಬದಲಾವಣೆಯ ಭೀತಿಯು ಇಂಧನದ ವೈವಿಧ್ಯೀಕರಣವನ್ನು ಸ್ವಲ್ಪಮಟ್ಟಿಗೆ ತ್ವರಿತಗೊಳಿಸಿದೆ. ಆದರೂ, ಈ ದೇಶಗಳ ಗಡಿಯೊಳಗೆ ತೈಲ ಮತ್ತು ಅನಿಲದ ಲಭ್ಯತೆಯು ಅಲ್ಪವಾಗಿದ್ದರೂ, ಈ ಸಂಪನ್ಮೂಲಗಳ ಮೇಲೆ ಅವುಗಳ ಅವಲಂಬನೆಯು ಗಣನೀಯವೇ.

ನಾವು ಈಗ ಕೃಷಿ ಸರಕುಗಳ ಬಗ್ಗೆ ಗಮನ ಹರಿಸೋಣ. ಕೆಲವು ಭೌಗೋಳಿಕ ಪರಿಗಣನೆಗಳಿಂದಾಗಿ ಮುಂದುವರಿದ ದೇಶಗಳ ಕೃಷಿ ಸರಕುಗಳ ಉತ್ಪಾದನಾ ಸಾಮರ್ಥ್ಯವು ಸೀಮಿತವಾಗಿದೆ. ಹತ್ತಿ ಬಟ್ಟೆಯ ಉದ್ಯಮವು ಬ್ರಿಟನ್‌ನಲ್ಲಿ ಕೈಗಾರಿಕಾ ಕ್ರಾಂತಿಗೆ ಮತ್ತು ಆ ಮೂಲಕ ಕೈಗಾರಿಕಾ ಬಂಡವಾಳಶಾಹಿಯ ಉಗಮಕ್ಕೆ ಮುನ್ನುಡಿ ಬರೆಯಿತು ಎಂಬುದು ನಿಜವಿದ್ದರೂ, ಬ್ರಿಟನ್ ಹತ್ತಿಯನ್ನು ಬೆಳೆಯುವುದು ಸಾಧ್ಯವಿರಲಿಲ್ಲ. ಅದು ಕಚ್ಚಾ ಹತ್ತಿಯನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿತ್ತು. ಅಂತೆಯೇ, ವಿಶ್ವದ ಸಮಶೀತೋಷ್ಣ ಪ್ರದೇಶಗಳಲ್ಲಿರುವ ಬಂಡವಾಳಶಾಹಿ ದೇಶಗಳು ಎಲ್ಲ ಬೆಳೆಗಳನ್ನು ಬೆಳೆಯುವುದು ಸಾಧ್ಯವಿಲ್ಲ. ಅಥವಾ ಅವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅಥವಾ ವರ್ಷಪೂರ್ತಿ ಬೆಳೆಯುವುದು ಸಾಧ್ಯವಿಲ್ಲ. ಮತ್ತೊಂದೆಡೆಯಲ್ಲಿ, ಉಷ್ಣವಲಯದ ಮತ್ತು ಉಪೋಷ್ಣವಲಯದ ದೇಶಗಳು ಎಲ್ಲ ಬೆಳೆಗಳನ್ನು ಬೆಳೆಯಬಹುದು ಮಾತ್ರವಲ್ಲ, ಅವುಗಳನ್ನು ಸಮಶೀತೋಷ್ಣ ಪ್ರದೇಶಗಳಲ್ಲಿರುವ ಬಂಡವಾಳಶಾಹಿ ದೇಶಗಳಿಗೆ ಪೂರೈಸುತ್ತಿರುವುದೂ ಹೌದು. ಹಾಗಾಗಿ, ಈ ಬಂಡವಾಳಶಾಹಿ ದೇಶಗಳು ತಮಗೆ ಬೇಕಾಗುವ ಪಾನೀಯಗಳಿಂದ ಹಿಡಿದು ನೂಲುಗಳ ವರೆಗೆ ಮತ್ತು ಆಹಾರ ಪದಾರ್ಥಗಳ ವರ್ಷಪೂರ್ತಿಯ ಪೂರೈಕೆಗಾಗಿ ಉಷ್ಣವಲಯದ ಮತ್ತು ಉಪ-ಉಷ್ಣವಲಯದ ದೇಶಗಳನ್ನು ಅವಲಂಬಿಸಿವೆ. ಇತ್ತೀಚಿನ ವರ್ಷಗಳಲ್ಲಿ ಮುಂದುವರಿದ ಈ ದೇಶಗಳು ಆಹಾರ ಧಾನ್ಯಗಳನ್ನು ಹೆಚ್ಚುವರಿಯಾಗಿ ಉತ್ಪಾದಿಸಲು ಪ್ರಾರಂಭಿಸಿವೆ ಎಂಬುದು ನಿಜವಿದ್ದರೂ ಸಹ, ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಪ್ರದೇಶಗಳ ಮೇಲಿನ ಅವರ ಭಾರಿ ಅವಲಂಬನೆಯೇನೂ ಬದಲಾಗುವುದಿಲ್ಲ. ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ಅವರ ಧಾನ್ಯಗಳ ಹೆಚ್ಚುವರಿ ಬೆಳೆಯ ಅಂಶವನ್ನು ಮುಖ್ಯವಾಗಿ ಅವರು ವಿಶ್ವದ ಉಷ್ಣವಲಯದ ಮತ್ತು ಉಪೋಷ್ಣವಲಯದ ಮೂರನೇ ವಿಶ್ವದ ದೇಶಗಳು ಆಹಾರ ಧಾನ್ಯಗಳ ತಮ್ಮ ಉತ್ಪಾದನೆಯನ್ನು ತ್ಯಜಿಸುವಂತೆ ಮಾಡಿ ಅವರು ಬಯಸುವ ಬೆಳೆಗಳ ಉತ್ಪಾದನೆಯತ್ತ ಹೊರಳುವಂತೆ ಒತ್ತಾಯಿಸುವ ತಂತ್ರವಾಗಿ ಬಳಸುತ್ತಿದ್ದಾರೆ.

ಇದನ್ನು ಓದಿ: ಸಂಘಟಿತ ಕಾರ್ಮಿಕರ ದೃಷ್ಟಿಕೋನ ಬದಲಾಗಬೇಕಿದೆ

ಆದ್ದರಿಂದ, ವಿಶ್ವದ ಹೆಚ್ಚು ಮುಂದುವರಿದ ದೇಶಗಳು ತಮಗೆ ಅಗತ್ಯವಿರುವ ಖನಿಜ ಸಂಪನ್ಮೂಲಗಳಿಗಾಗಿ ಮತ್ತು ಕೃಷಿ ಸರಕುಗಳೂ ಸೇರಿದಂತೆ ಎಲ್ಲ ಪ್ರಾಥಮಿಕ ಸರಕುಗಳಿಗಾಗಿ “ಹೊರಗಿನ” ಪ್ರಪಂಚವನ್ನು ಅತಿಯಾಗಿ ಅವಲಂಬಿಸಿವೆ ಎಂಬ ಅಂಶವು ನಿಸ್ಸಂದೇಹವಾಗಿದೆ. ಅವರು ಈ ಸರಕುಗಳ ಸ್ಥಿರ ಪೂರೈಕೆಯನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಬಯಸುತ್ತಾರೆ. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಅವರು ಗಣನೀಯ ಪ್ರಮಾಣದ ಈ ಎಲ್ಲ ಸರಕುಗಳನ್ನು ಯಾವುದೇ ಪಾವತಿಯಿಲ್ಲದೆ, ಅಂದರೆ ಉಚಿತವಾಗಿ, ವಸಾಹತುಗಳಿಂದ ಮತ್ತು ಅರೆ-ವಸಾಹತುಗಳಿಂದ “ಮಿಗುತಾಯದ ಹರಿವಿನ” ಭೌತಿಕ ರೂಪವಾಗಿ ಪಡೆಯುತ್ತಿದ್ದರು. ಈಗ ವಸಾಹತುಗಳನ್ನು ಅವರು ಹೊಂದಿದ್ದಾರೊ ಅಥವಾ ಇಲ್ಲವೊ ಎಂಬುದು ಬೇರೆ ಮಾತು, ಇಂತಹ ಸರಕುಗಳ ಸರಬರಾಜಿನ ಅಗತ್ಯವಂತೂ ಅವರಿಗೆ ಇನ್ನೂ ಮುಖ್ಯವೇ.

ಸಂಪನ್ಮೂಲಗಳಿಗಾಗಿ ಸಾಮ್ರಾಜ್ಯಶಾಹಿ ಹೇರಿಕೆ

ಮುಂದುವರೆದ ಬಂಡವಾಳಶಾಹಿ ದೇಶಗಳು ಉತ್ಪಾದಿಸಲು ಸಾಧ್ಯವಾಗದ ಮತ್ತು ತಮಗೆ ಅಗತ್ಯವಿರುವ ಇಂತಹ ಸರಕುಗಳನ್ನು “ಹೊರಗಿನಿಂದ” ಕಡಿಮೆ (ಅಥವಾ ಶೂನ್ಯ) ಬೆಲೆಗಳಲ್ಲಿ ಸುಗಮವಾಗಿ ಈ ದೇಶಗಳಿಗೆ ಹರಿಯುವಂತೆ ಸಾಮ್ರಾಜ್ಯಶಾಹಿಯು ತನ್ನ ಹಿಂದಿನ ಭಾಗವಾಗಿದ್ದ ವಸಾಹತುಶಾಹಿ ಹಂತದಲ್ಲಿ ನೋಡಿಕೊಳ್ಳುತ್ತಿದ್ದ ರೀತಿಯಲ್ಲಿ ಖಚಿತಪಡಿಸಿಕೊಳ್ಳುತ್ತದೆ. ತೈಲ ಉತ್ಪಾದಿಸುವ ದೇಶಗಳೂ ಸೇರಿದಂತೆ ಮೂರನೇ ಜಗತ್ತಿನ ದೇಶಗಳಲ್ಲಿ ಮುಂದುವರೆದ ಬಂಡವಾಳಶಾಹಿ ದೇಶಗಳು ಹೇಳಿದಂತೆ ಕೇಳುವ ಆಳ್ವಿಕೆಗಳನ್ನು/ಸರ್ಕಾರಗಳನ್ನು ಸ್ಥಾಪಿಸುವುದು ಸಾಮ್ರಾಜ್ಯಶಾಹಿಯ ಇಚ್ಛೆಯನ್ನು ಹೇರುವ ಒಂದು ಮಾರ್ಗವಾಗಿದೆ. ಈ ಉದ್ದೇಶಕ್ಕಾಗಿ ದೇಶ ದೇಶಗಳನ್ನು ನವ ಉದಾರವಾದಿ ವಿಶ್ವ ವ್ಯವಸ್ಥೆಯೊಳಗೆ ಸಿಲುಕಿಸುವುದು ಒಂದು ಹೆಚ್ಚು ಸಾಮಾನ್ಯವಾಗಿ ಅನುಸರಿಸುವ ತಂತ್ರವಾಗಿದೆ. ಈ ನವ ಉದಾರ ವ್ಯವಸ್ಥೆಗೆ ಸಿಲುಕಿದ ದೇಶಗಳು ತಮ್ಮ ಆಂತರಿಕ ಅರ್ಥವ್ಯವಸ್ಥೆಗಳಿಗೆ ಒದಗಿಸುತ್ತಿದ್ದ ಯಾವುದೇ ರೀತಿಯ ರಕ್ಷಣೆಯನ್ನು ತ್ಯಜಿಸುವ ಒತ್ತಾಯಕ್ಕೆ ಮತ್ತು ಆಮದು-ಅವಲಂಬಿತರಾಗುವ ಒತ್ತಾಯಕ್ಕೆ ಒಳಪಡುತ್ತವೆ.

ಸಾಮ್ರಾಜ್ಯಶಾಹಿಯ ಮಾತು ಕೇಳದ ಮೂರನೇ ಜಗತ್ತಿನ “ಅವಿಧೇಯ” ಸರ್ಕಾರಗಳನ್ನು ಅಧಿಕಾರದಿಂದ ಕಿತ್ತುಹಾಕಲು ನಾನಾ ವಿಧಾನಗಳನ್ನು ಬಳಸಲಾಗುತ್ತದೆ. ಈ ಉದ್ದೇಶಕ್ಕಾಗಿ, ಸಿಐಎ ಪ್ರಾಯೋಜಿತ ದಂಗೆಗಳಿಂದ ಹಿಡಿದು ನಿರ್ಬಂಧಗಳನ್ನು ಹೇರುವ ವರೆಗಿನ ಹಲವು ಹತ್ತು ವಿಧಾನಗಳನ್ನು ಬಳಸಲಾಗುತ್ತದೆ. ಸಾಮ್ರಾಜ್ಯಶಾಹಿಯ ನಿರ್ಬಂಧಗಳಿಗೆ ಗುರಿಯಾಗುತ್ತಿರುವ ದೇಶಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸಂಗತಿಯು ಅದರ ವಿರುದ್ಧ ಹೆಚ್ಚುತ್ತಿರುವ ಪ್ರತಿರೋಧದ ಲಕ್ಷಣವೂ ಹೌದು ಮತ್ತು ಈ ಪ್ರತಿರೋಧಗಳು ಮರ್ಮಾಘಾತಗಳ ರೀತಿಯಲ್ಲಿ ಸಾಮ್ರಾಜ್ಯಶಾಹಿಯನ್ನು ತಾಗುತ್ತಿವೆ.

ಇದನ್ನು ಓದಿ: 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಮುಂದಾದ ಕೇಂದ್ರ ಸರಕಾರ

ಕೇವಲ ಒಂದು ಅಥವಾ ಎರಡು ದೇಶಗಳ ಮೇಲೆ ನಿರ್ಬಂಧಗಳನ್ನು ಹೇರಿದಾಗ ಮಾತ್ರ ಅವು ಸಾಮ್ರಾಜ್ಯಶಾಹಿಯು ಬಯಸಿದ ಪರಿಣಾಮಗಳನ್ನು ಉಂಟುಮಾಡಬಲ್ಲವು. ಆದರೆ, ನಿರ್ಬಂಧಗಳಿಗೆ ಒಳಗಾದ ದೇಶಗಳ ಸಂಖ್ಯೆಯು ಒಂದು ವೇಳೆ ದೊಡ್ಡದಿದ್ದರೆ ಅದು ಸಾಮ್ರಾಜ್ಯಶಾಹಿ-ವಿಶ್ವ-ವ್ಯವಸ್ಥೆಗೆ ಭಯ ಹುಟ್ಟಿಸುತ್ತದೆ. ಅಂದರೆ, ನಿರ್ಬಂಧಗಳಿಗೆ ಗುರಿಯಾದ ದೇಶಗಳು ತಮ್ಮ ಮೇಲೆ ಬೀಳುವ ನಿರ್ಬಂಧಗಳ ಪ್ರತಿಕೂಲ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಒಗ್ಗೂಡುತ್ತವೆ. ಮತ್ತು, ಮುಂದುವರೆದ ಬಂಡವಾಳಶಾಹಿ ಗುಂಪಿಗೆ ಸೇರದ ಅಥವಾ ನಿರ್ಬಂಧ ಪೀಡಿತ ದೇಶಗಳ ಪಟ್ಟಿಗೆ ಸೇರದ ಇತರ ದೇಶಗಳೂ ಸಹ ತಮ್ಮ ತಮ್ಮ ಅರ್ಥವ್ಯವಸ್ಥೆಗಳಿಗೆ ತಟ್ಟಬಹುದಾದ ಹಾನಿಕಾರಕ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ನಿರ್ಬಂಧಗಳನ್ನು ನಿರ್ಲಕ್ಷಿಸುವ ಉಪ-ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಅಂತೆಯೇ, ನಿರ್ಬಂಧಗಳಿಗೆ ಒಳಗಾದ ದೇಶವು ದೊಡ್ಡದಿದ್ದರೆ ಮತ್ತು ಸಾಕಷ್ಟು ವೈವಿಧ್ಯಮಯವಾಗಿದ್ದರೆ, ಅದರ ವಿರುದ್ಧ ಹೇರಿದ ನಿರ್ಬಂಧಗಳು ಸಾಮ್ರಾಜ್ಯಶಾಹಿಗೇ ತಿರುಗುಬಾಣವಾಗುತ್ತವೆ. ಇದು ರಷ್ಯಾದ ಮೇಲೆ ಹೇರಿದ ನಿರ್ಬಂಧಗಳ ಪ್ರಕರಣದಲ್ಲಿ ಇತ್ತೀಚೆಗೆ ಸಂಭವಿಸಿದೆ.

ಉಕ್ರೇನ್‌ಯುದ್ಧ-ದಶಕಗಳ  ಮೂಲಭೂತ ತಿಕ್ಕಾಟಗಳ ಪರಿಣಾಮ

ಪಾಶ್ಚ್ಯಾತ್ಯ ಮಾಧ್ಯಮಗಳು ಉಕ್ರೇನ್ ಯುದ್ಧವನ್ನು ಅದು ಕೇವಲ ಒಂದು ವರ್ಷದ ಹಿಂದೆ ಪ್ರಾರಂಭವಾಯಿತು ಎಂಬಂತೆ ಮತ್ತು ಈ ಯುದ್ಧವನ್ನು ಒಂದು ದೊಡ್ಡ ಶಕ್ತಿಶಾಲಿ ದೇಶವು ತನ್ನ ನೆರೆಯ ಪುಟ್ಟ ದೇಶದೊಂದಿಗೆ ವರ್ತಿಸಿದ ಆಕ್ರಮಣಕಾರಿ ನಡವಳಿಕೆಯ ಪರಿಣಾಮ ಎಂಬಂತೆ ಪ್ರಸ್ತುತಪಡಿಸುತ್ತವೆ. ವಾಸ್ತವವಾಗಿ, ರಷ್ಯಾ-ಉಕ್ರೇನ್ ಸಂಘರ್ಷವು ಸುಮಾರು ಒಂದು ದಶಕದ ಹಿಂದೆ ಉಕ್ರೇನ್‌ನ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ರೀತಿ-ನೀತಿಗಳಿಗನುಗುಣವಾಗಿ ಆಯ್ಕೆಯಾದ ವಿಕ್ಟರ್ ಯಾನುಕೋವಿಚ್ ಅವರನ್ನು ಅಮೆರಿಕದ ನವ-ಸಂಪ್ರದಾಯಶರಣರಿಂದ ಯೋಜಿಸಲ್ಪಟ್ಟ, ಸಿಐಎ ನೆರವಿನ ಕಾರ್ಯಾಚರಣೆಯ ಮೂಲಕ ಪದಚ್ಯುತಗೊಳಿಸಿದಾಗ ಪ್ರಾರಂಭವಾಯಿತು. ಆದ್ದರಿಂದ ಪ್ರಸ್ತುತ ಸಂಘರ್ಷದ ತಳದಲ್ಲಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ಮತ್ತು ರಷ್ಯಾದ ನಡುವೆ ನಡೆಯುತ್ತಿದ್ದ ಒಂದು ಮೂಲಭೂತ ತಿಕ್ಕಾಟವಿದೆ. ಈ ತಿಕ್ಕಾಟವು ರಷ್ಯಾದ ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸುತ್ತದೆ. ರಷ್ಯಾ, ನೈಸರ್ಗಿಕ ಅನಿಲದ ಅಪಾರ ನಿಕ್ಷೇಪಗಳನ್ನು ಹೊಂದಿದೆ. ಇದು ವಿಶ್ವದ ಒಟ್ಟು ನಿಕ್ಷೇಪಗಳ ಶೇ. 20ರಷ್ಟಿದೆ ಮತ್ತು ಎಲ್ಲಾ ದೇಶಗಳಿಗಿಂತಲೂ ದೊಡ್ಡದಿದೆ. ಜೊತೆಗೆ, ವಿಶ್ವದ ಸುಮಾರು ಶೇ. 5ರಷ್ಟು ತೈಲ ನಿಕ್ಷೇಪಗಳನ್ನೂ ಸಹ ರಷ್ಯಾ ಹೊಂದಿದೆ.

ಉಕ್ರೇನ್ ಯುದ್ಧವನ್ನು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ಮತ್ತು ರಷ್ಯಾದ ನಡುವಿನ ಸಂಘರ್ಷದೊಳಗೇ ಗುರುತಿಸುವ ಅಂತಾರಾಷ್ಟ್ರೀಯ ವ್ಯವಹಾರಗಳ ವ್ಯಾಖ್ಯಾನಕಾರರೂ ಸಹ, ಈ ಸಂಘರ್ಷವನ್ನು ಸಂಪೂರ್ಣವಾಗಿ ಏಕ-ಧ್ರುವೀಯತೆಯಿಂದ ಬಹು-ಧ್ರುವೀಯತೆಯತ್ತ ಹೊರಳುವ ಪರಿವರ್ತನೆಯ ಪ್ರಯತ್ನವೆಂದು ನೋಡುತ್ತಾರೆ. ಇಂತಹ ಚರ್ಚೆಗಳಲ್ಲಿ, ರಷ್ಯಾದ ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ನಿಯಂತ್ರಿಸುವ ಪಾಶ್ಚ್ಯಾತ್ಯ ಬಯಕೆಯು ವ್ಯಕ್ತವಾಗುವುದೇ ಇಲ್ಲ. ಆದರೆ ಈ ಅದಮ್ಯ ಬಯಕೆಯ ಬಲವನ್ನು ಕೀಳಂದಾಜು ಮಾಡುವಂತಿಲ್ಲ. ಬೋರಿಸ್ ಯೆಲ್ಟ್ಸಿನ್ ಅವರನ್ನು ನಿಯಂತ್ರಿಸುವಲ್ಲಿ ಸಾಮ್ರಾಜ್ಯಶಾಹಿಯು ಯಶಸ್ವಿಯಾಗಿತ್ತು. ಅವರನ್ನು ಸಿಐಎ ಸಿಬ್ಬಂದಿಯು ಹಗಲಿರುಳೂ ಕಣ್ಗಾವಲಿನಲ್ಲಿಟ್ಟಿತ್ತು ಎಂದು ಹೇಳಲಾಗಿದೆ. ಆದರೆ, ಪುಟಿನ್ ಅಧಿಕಾರ ಹಿಡಿದ ನಂತರ, ಅವರ ತಪ್ಪುಗಳು ಏನೇ ಇರಲಿ, ರಷ್ಯಾದ ವ್ಯವಹಾರಗಳ ಮೇಲೆ ಇದ್ದ ಪಾಶ್ಚ್ಯಾತ್ಯ ಹತೋಟಿಯು ಕೊನೆಗೊಂಡಿದೆ. ಉಕ್ರೇನ್ ಯುದ್ಧದಲ್ಲಿ ಅಮೆರಿಕದ ಉದ್ದೇಶವು ರಷ್ಯಾದಲ್ಲಿ ಆಳ್ವಿಕೆಯ ಬದಲಾವಣೆಯೇ (ಅಂದರೆ, ಬಂಡವಾಳಶಾಹಿ ದೇಶಗಳಿಗೆ “ವಿಧೇಯ”ವಾಗಿ ಉಳಿಯುವ ಒಂದು ಆಳ್ವಿಕೆಯನ್ನು ಸ್ಥಾಪಿಸುವುದು) ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಮೊನ್ನೆ ಒದರಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಇದನ್ನು ಓದಿ: ದುಸ್ಥಿತಿಯೆಂದು ದೇಶದ ಸಾರ್ವಜನಿಕ ಆಸ್ತಿಯ ಮಾರಾಟ ಯೋಜನೆ ಎನ್‌ಎಂಪಿ : ಪ್ರೊ. ಎಂ ಚಂದ್ರ ಪೂಜಾರಿ

ಆದರೆ, ರಷ್ಯಾದಂತಹ ದೊಡ್ಡ ದೇಶವೂ ಸೇರಿದಂತೆ ಅನೇಕ ದೇಶಗಳ ಮೇಲೆ ಏಕಕಾಲದಲ್ಲಿ ನಿರ್ಬಂಧಗಳನ್ನು ವಿಧಿಸಿರುವ ಕ್ರಮವು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಗೂ ನಷ್ಟ ಉಂಟುಮಾಡಿದೆ. ನಿರ್ಬಂಧಗಳಿಗೆ ಗುರಿಯಾದ ದೇಶಗಳ ಜನರಷ್ಟೇ ಅವುಗಳ ಪರಿಣಾಮಗಳಿಂದ ಬಳಲುತ್ತಿಲ್ಲ. ನಿರ್ಬಂಧಗಳನ್ನು ವಿಧಿಸಿದ ದೇಶಗಳ ದುಡಿಯುವ ಜನರೂ ಸಹ ಬಳಲುತ್ತಿದ್ದಾರೆ. ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳಲಾಗದ ಪರಿಸ್ಥಿತಿಯಿಂದಾಗಿ ಉದ್ಭವಿಸಿರುವ ಸಂಕಷ್ಟಗಳು ಯುರೋಪಿನಾದ್ಯಂತ ಸಾವಿರಗಟ್ಟಲೆ ಕಾರ್ಮಿಕರನ್ನು ಯುದ್ಧ-ವಿರೋಧಿ, ಹಣದುಬ್ಬರ-ವಿರೋಧಿ ಪ್ರದರ್ಶನಗಳ ಮೂಲಕ ಬೀದಿಗೆ ಇಳಿಯುವಂತೆ ಮಾಡಿವೆ. 1970ರ ದಶಕದ ನಂತರ ಎಂದೂ ಕಾಣದಿದ್ದ ಪ್ರಮಾಣದಲ್ಲಿ ಈ ಪ್ರದರ್ಶನಗಳು ನಡೆಯುತ್ತಿವೆ. ನಿರ್ಬಂಧಗಳನ್ನು ವಿಧಿಸಿದಾಗ ಇದ್ದ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಅಂದರೆ, ರಷ್ಯಾದ ಕರೆನ್ಸಿಯ ಅಪಮೌಲ್ಯ ಮತ್ತು ಅಲ್ಲಿ ಹಣದುಬ್ಬರದ ತೀವ್ರಗೊಳ್ಳುವ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಡಾಲರ್‌ಗೆ ಹೋಲಿಸಿದರೆ ರಷ್ಯಾದ ರೂಬಲ್‌ನ ಮೌಲ್ಯವು ಮೇಲೇರಿದೆ. ಅದೇ ಸಮಯದಲ್ಲಿ ನಿರ್ಬಂಧಗಳನ್ನು ವಿಧಿಸಿದ ದೇಶಗಳು ಹಣದುಬ್ಬರದಿಂದಾಗಿ ಬಲವಾದ ಹೊಡೆತ ತಿನ್ನುತ್ತಿವೆ. ಒಟ್ಟಿನಲ್ಲಿ, ಸಾಮ್ರಾಜ್ಯಶಾಹಿಯು ಕಷ್ಟದ ಕಾಲವನ್ನು ಪ್ರವೇಶಿಸಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *