ಕರ್ನಾಟಕದ ಕೃಷಿ, ಆಹಾರ ಭದ್ರತೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು

“ಕರ್ನಾಟಕದ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ” ಎಂಬ ವಿಷಯ ಕುರಿತು ಪರಿಸರ ಅರಿವು ಸಮಾವೇಶವನ್ನು EMPRI ಸಹಯೋಗದೊಂದಿಗೆ ಜನ ಶಿಕ್ಷಣ ಟ್ರಸ್ಟ್, ಡಿಸೆಂಬರ್ 20, 2024ರಂದು ಬೆಂಗಳೂರಿನ ಸೌಹಾರ್ದ ಸಭಾಂಗಣದಲ್ಲಿ, ಆಯೋಜಿಸಿತ್ತು. ಡಾ.ಮಧುರಾ ಸ್ವಾಮಿನಾಥನ್ ಆಶಯ ಭಾಷಣ ಮಾಡಿದರು. EMPRI ಯ ಟಿ.ಮಹೇಶ ಮತ್ತು ಡಾ. ಸರಿತಾ ಕರ್ನಾಟಕ ಕಾರ್ಯಯೋಜನೆಯನ್ನು ಮಂಡಿಸಿದರು. ಜಿ.ಎನ್.ನಾಗರಾಜ್ ಅಧ್ಯಕ್ಷತೆಯಲ್ಲಿ ಸಂವಾದವೂ ನಡೆಯಿತು. ಸಮಾವೇಶದಲ್ಲಿ .ಎಸ್ ರವಿಕುಮಾರ್ ಅವರು ಬರೆದ ಮತ್ತು ಬಾರತ ಜ್ಞಾನ ವಿಜ್ಞಾನ ಸಮಿತಿ  ಪ್ರಕಟಿಸಿದ “ಹವಾಮಾನ ಬದಲಾವಣೆ : ಬೇಕೆ ಈ  ದಿನಗಳು” ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಸಮಾವೇಶದ ಕುರಿತ ಒಂದು ವರದಿ. ಕರ್ನಾಟಕ

-ಸಿ. ಸಿದ್ದಯ್ಯ

ಹವಾಮಾನ ಬದಲಾವಣೆಯು ಕೃಷಿ, ಪಶುಸಂಗೋಪನೆ ಸೇರಿದಂತೆ ಎಲ್ಲಾ ವಲಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೃಷಿ ಉತ್ಪಾದನೆಯ ಮೇಲೆ ಹವಾಮಾನ ಬದಲಾವಣೆಯಿಂದಾದ ಆಗುವ ಆರ್ಥಿಕ ಪರಿಣಾಮವು ವರ್ಗ (ಸಣ್ಣ ರೈತರು, ಶ್ರೀಮಂತ ರೈತರು, ಜಮೀಂದಾರರು) ಮತ್ತು ಲಿಂಗಕ್ಕೆ ಅನುಸಾರವಾಗಿ ವಿಭಿನ್ನವಾಗಿರುತ್ತದೆ. ಎಂದು ಅರ್ಥಶಾಸ್ತ್ರಜ್ಞರು, ಮತ್ತು ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಸಂಶೋಧನೆ ಕೈಗೊಂಡಿರುವ  ಬೆಂಗಳೂರಿನ ಐ.ಎಸ್.ಐ ಸಂಸ್ಥೆಯ ಪ್ರೊಫೆಸರ್  ಮದುರಾ ಸ್ವಾಮಿನಾಥನ್ ಅವರು ಹೇಳಿದರು. ಕರ್ನಾಟಕ

ಡಿಸೆಂಬರ್ 20, 2024ರಂದು ಬೆಂಗಳೂರಿನ ಸೌಹಾರ್ದ ಸಭಾಂಗಣದಲ್ಲಿ, EMPRI ಸಹಯೋಗದೊಂದಿಗೆ ಜನ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಪರಿಸರ ಅರಿವು ಸಮಾವೇಶದಲ್ಲಿ “ಕರ್ನಾಟಕದ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ” ಎಂಬ ವಿಷಯ ಕುರಿತು ಆಶಯ ಭಾಷಣದಲ್ಲಿ ಈ ರೀತಿ ಹೇಳಿದರು.

ಇದನ್ನೂ ಓದಿ: 5,000 ರೂ.ಗಳ ನೋಟುಗಳು ನಿಜಕ್ಕೂ ಚಲಾವಣೆಗೆ ಬರಲಿವೆಯೇ? ಇಲ್ಲಿದೆ ಆರ್‌ಬಿಐ ನೀಡಿರುವ ಸ್ಪಷ್ಟನೆ

ಜಾಗತಿಕ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆ ಎರಡೂ – ಒಟ್ಟಾರೆ ಮತ್ತು ತಲಾವಾರು – ಸತತವಾಗಿ ಏರುತ್ತಲೇ ಇವೆ. ಪ್ರಸ್ತುತ ತಂತ್ರಜ್ಞಾನದೊಂದಿಗೆ ಉತ್ಪಾದಕತೆಯ ಇಂದಿನ ದರಗಳು ಗಮನಾರ್ಹ ಸುಧಾರಣೆಗೆ ಸಮರ್ಥವಾಗಿವೆ. ಅದೇ ರೀತಿ ಪ್ರದೇಶಗಳು ಮತ್ತು ಬೆಳೆಗಳಾದ್ಯಂತ ಗಮನಾರ್ಹ ಇಳುವರಿ ಅಂತರವು ದೊಡ್ಡ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ. ಜಾಗತಿಕ ಉತ್ಪಾದಕತೆಯ ಅಂಕಿಅಂಶಗಳಿಗೆ ಹೋಲಿಸಿದರೆ, ಭಾರತವು ಗಮನಾರ್ಹವಾಗಿ ಹಿಂದುಳಿದಿದೆ ಎಂಬುದೂ ಇನ್ನೊಂದು ವಾಸ್ತವ. ಭಾರತದ ಅವಶ್ಯಕತೆಗಳನ್ನು ಗಮನಿಸಿದರೆ, ಇಳುವರಿ ಮಟ್ಟಗಳು ಹೆಚ್ಚಾಗಬೇಕು. ಕಡಿಮೆ ಉತ್ಪಾದಕತೆಯ ಸವಾಲನ್ನು ಹೊಸ ತಳಿಗಳಿಂದ ಮತ್ತು ಸಂಬಂಧಿತ ನಿರ್ವಹಣಾ ಸುಧಾರಣೆಗಳಿಂದ ಪರಿಹರಿಸಬಹುದು ಎಂದು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿರೂಪಿಸುವ ಮೊದಲು ಇಂದಿನ ಕೃಷಿ ಪರಿಸ್ಥಿತಿಯ ಸಾರವನ್ನು ಡಾ. ಮದುರಾ ಅವರು ತಿಳಿಸಿದರು. ಕರ್ನಾಟಕ

ಕೃಷಿಗೆ ಜಾಗತಿಕ ತಾಪಮಾನದ ಒಟ್ಟಾರೆ ಬೆದರಿಕೆ ಸುಸ್ಥಾಪಿತವಾಗಿದೆ. IPCC ಆರನೇ ಮೌಲ್ಯಮಾಪನ ವರದಿ ಇದನ್ನು ಖಚಿತಪಡಿಸುತ್ತದೆ. ಬೆಳೆ ಉತ್ಪಾದನೆಯ ಮೇಲೆ ತಾಪಮಾನ ಮತ್ತು ಮಳೆಯಲ್ಲಿನ ವಿಪರೀತಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ರಾಬಿ ಬೆಳೆಗಳಿಗೆ ತಾಪಮಾನದಲ್ಲಿನ ವ್ಯತ್ಯಾಸವು ಅತ್ಯಂತ ಮಹತ್ವದ್ದಾಗಿದೆ. ಖಾರಿಫ್ ಬೆಳೆಗಳಿಗೆ ಮಳೆಯಲ್ಲಿನ ವ್ಯತ್ಯಾಸವು ಅತ್ಯಂತ ಮಹತ್ವದ್ದಾಗಿದೆ. ಆದರೆ, ವಿಪರೀತಗಳ ಪ್ರಾದೇಶಿಕ ವೈವಿಧ್ಯತೆಯು ಒಟ್ಟಾರೆ ಉತ್ಪಾದಕತೆ ಮತ್ತು ಉತ್ಪಾದನೆಯು ಯಾವುದೇ ಪರಿಣಾಮವನ್ನು ತೋರಿಸುವುದಿಲ್ಲ. ಕರ್ನಾಟಕದಲ್ಲಿ ಕೈಗೊಂಡ ಅಧ್ಯಯನವು ಖಾರಿಫ್ ಮತ್ತು ರಬಿ ಋತುಗಳಲ್ಲಿ ಅಕ್ಕಿ, ರಾಗಿ, ಜೋಳ ಮತ್ತು ತೊಗರಿಗಳಲ್ಲಿ ಇಳುವರಿ ಮೇಲೆ ತೀವ್ರ ದಿನಗಳ ಋಣಾತ್ಮಕ ಪರಿಣಾಮವನ್ನು ದಾಖಲಿಸುತ್ತದೆ. ಅಂದರೆ, ದೈನಂದಿನ ತಾಪಮಾನವು ನಿರ್ಣಾಯಕ ತಾಪಮಾನವನ್ನು ಮೀರಿದರೆ ಬೆಳವಣಿಗೆ ಮತ್ತು ಇಳುವರಿ ಕಡಿಮೆಯಾಗುತ್ತದೆ. ಇದು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ, ಎಂದು ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿರೂಪಿಸಿದರು.

ಹವಾಮಾನ ಬದಲಾವಣೆಯಿಂದಾಗಿ ಇಳುವರಿ ಕುಸಿತ ಉಂಟಾಗುತ್ತದೆ. ಇದರಿಂದಾಗಿ ಕೃಷಿ ಉತ್ಪಾದನೆಯ ಅಸ್ಥಿರತೆ ಉಂಟಾಗುತ್ತದೆ. ಬರೀ ಇಳುವರಿ ಮಾತ್ರವಲ್ಲ, ಸಣ್ಣ ಮತ್ತು ಅತಿ ಸಣ್ಣ ರೈತರ ಸಾಮಾಜಿಕ-ಆರ್ಥಿಕ ದುರ್ಭರ ಸ್ಥಿತಿಯು ಅವರಿಗೆ ಹವಾಮಾನ ಬದಲಾವಣೆಯ ಅಪಾಯವನ್ನು ಹೆಚ್ಚಿಸುತ್ತದೆ. ದೊಡ್ಡ ರೈತರೂ ನಷ್ಟ ಅನುಭವಿಸುತ್ತಾರೆ ಆದರೆ ಅವರು ಚೇತರಿಸಿಕೊಳ್ಳಬಲ್ಲರು. ಹವಾಮಾನ ಬದಲಾವಣೆಯು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸಂಪೂರ್ಣ ಅಭಾವದ ಪರಿಸ್ಥಿತಿಗೆ ಅಥವಾ ಇನ್ನೂ ಆಳದ ಅಭಾವಕ್ಕೆ ತಳ್ಳುತ್ತದೆ. ಅದೇ ರೀತಿಯಲ್ಲಿ ಅರ್ಧಕ್ಕಿಂತ ಹೆಚ್ಚು ಕೃಷಿ ಕೆಲಸದಲ್ಲಿ ತೊಡಗಿರುವ, ಆದರೆ ತೀರಾ ಕಡಿಮೆ ಭೂಒಡೆತನ
ಇರುವ ಮಹಿಳೆಯರೂ ತೀವ್ರ ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ. ಹೆಚ್ಚಿನ ಮಟ್ಟದ ಆದಾಯ ಮತ್ತು ಆಸ್ತಿ ಅಸಮಾನತೆ ಒತ್ತಡಗಳು ಮತ್ತು ಆಘಾತಗಳಿಗೆ ಸ್ಥಿತಿಸ್ಥಾಪಕತ್ವವು ಗಣನೀಯವಾಗಿ ಬದಲಾಗುತ್ತದೆ, ಎಂದು ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಆಗುವ ಸಾಮಾಜಿಕ-ಆರ್ಥಿಕ ಪರಿಣಾಮಗಳತ್ತ ಡಾ. ಮಧುರಾ ಗಮನ ಸೆಳೆದರು.

ಕೊನೆಗೆ ಹವಾಮಾನ ಬದಲಾವಣೆಗೆ ಕಾರಣವಾದ ಹಿಂದಿನ ಮತ್ತು ಪ್ರಸ್ತುತ ಸಂಚಿತ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯ ಸಿಂಹಪಾಲು (1850-1990 ಅವಧಿಯಲ್ಲಿ 18% ಜನಸಂಖ್ಯೆ 71% ಹೊರಸೂಸುವಿಕೆ) ಹೊಂದಿರುವ  ಪಾಶ್ಚಿಮಾತ್ಯ ಶ್ರೀಮಂತ ದೇಶಗಳದ್ದು. ಅವು ಉಪಶಮನ ಮತ್ತು ಹೊಂದಾಣಿಕೆಯನ್ನು ಸಾಧಿಸಲು ಹಣ ಮತ್ತು ತಂತ್ರಜ್ಞಾನದ ಸಿಂಹಪಾಲು ಹೊರಬೇಕೆಂಬ ಜಾಗತಿಕ ಸಮಾನತೆಯ ನೀತಿಯ ಜಾರಿಯಲ್ಲಿ ವಿಳಂಬ, ನಿರ್ಲಕ್ಷದತ್ತವೂ ಡಾ.ಮಧುರಾ ಗಮನ ಸೆಳೆದರು.  ಈ ಚೌಕಾಶಿಯಲ್ಲಿ ಮೂರನೇ ಜಗತ್ತಿನ ಬಡ ದೇಶಗಳ ಆಹಾರ ಭದ್ರತೆಯಂತಹ ಬೆಳವಣಿಗೆಯ ಅಗತ್ಯಗಳನ್ನೂ ನಿರ್ಲಕ್ಷಿಸಲಾಗುತ್ತಿದೆ. ಶೂನ್ಯ ಹಸಿವು, ಶೂನ್ಯ ಅಪೌಷ್ಟಿಕತೆ ಸಾಧಿಸದ ಜಗತ್ತು ಶೂನ್ಯ ಹೊರಸೂಸುವಿಕೆ ಸಾಧಿಸಲು ಸಾಧ್ಯವಿಲ್ಲ ಎಂದು ಡಾ. ಮದುರಾ ಮಾರ್ಮಿಕ ಮಾತುಗಳೊಂದಿಗೆ ತಮ್ಮ ಆಶಯ ಭಾಷಣ ಕೊನೆಗೊಳಿಸಿದರು.

EMPRI ತಯಾರಿಸಿದ ಕರ್ನಾಟಕ ಕಾರ್ಯ ಯೋಜನೆ

‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI), ಬೆಂಗಳೂರು’ ತಯಾರಿಸಿದ ಹವಾಮಾನ ಬದಲಾವಣೆಯ ಕುರಿತು ಕರ್ನಾಟಕ ಕಾರ್ಯ ಯೋಜನೆಯಲ್ಲಿನ ಕೃಷಿ ಸಂಬಂಧಿತ ಭಾಗವನ್ನು ಅದೇ ಸಂಸ್ಥೆಯ ನಿರ್ದೇಶಕ (ಸಂಶೋಧನೆ) ಟಿ.ಮಹೇಶ್ ಮತ್ತು ಹಿರಿಯ ಸಮಾಲೋಚಕರಾದ ಡಾ.ಸರಿತಾ ಅವರು ಪ್ರಸ್ತುತ ಪಡಿಸಿದರು. ಕರ್ನಾಟಕದ ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಉಪಶಮನ ಮಾಡಲು, ಮತ್ತು ತಾಳಿಕೊಳ್ಳಲು ಕಾರ್ಯಯೋಜನೆಯ ಮುಖ್ಯ ಅಂಶಗಳನ್ನು ಅವರು ಮಂಡಿಸಿದರು. EMPRI ಕರ್ನಾಟಕ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯಡಿ ಸ್ಥಾಪಿಸಿದ ಸಂಶೋಧನಾ ಸಂಸ್ಥೆಯಾಗಿದ್ದು ಈ ನಿಟ್ಟಿನಲ್ಲಿ ನಡೆಸಿದ ನಿರ್ದಿಷ್ಟ ಸಂಶೋಧನೆ, ಮಾಹಿತಿ ಮತ್ತು ಅದರ ಫಲಿತವಾಗಿ ರೂಪಿಸಿದ ನೀತಿ, ಯೋಜನೆ, ಉಪಕ್ರಮಗಳನ್ನು ನಿರೂಪಿಸಿದರು.

ಹವಾಮಾನ ನಿಯತಾಂಕಗಳಲ್ಲಿನ ವ್ಯತ್ಯಯಗಳು ಕೃಷಿ ಕಾರ್ಯಾಚರಣೆಗಳು, ಬೆಳೆಗಳ ಬೆಳವಣಿಗೆಯ ಪ್ರತಿಕ್ರಿಯೆ ಮತ್ತು ಅದರ ಪ್ರದರ್ಶನದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆ. ಮಳೆಗಾಲದ ಮಳೆಯ ಪ್ರಮಾಣದಲ್ಲಿ ವ್ಯತ್ಯಯಗಳು ಕೃಷಿ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದು. ಇದು ಅನಿಶ್ಚಿತತೆ ಸೃಷ್ಟಿಸುತ್ತದೆ ಮತ್ತು ನೀರಿನ ಲಭ್ಯತೆ ಮತ್ತು ಬೆಳೆ ಉತ್ಪಾದನೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹೆಚ್ಚಿನ ತೀವ್ರತೆ ಮಳೆ ಪ್ರವಾಹ, ಭೂಕುಸಿತ ಮತ್ತು ಬೆಳೆ ಹಾನಿಗೆ ಕಾರಣವಾಗುತ್ತವೆ. ಮತ್ತೊಂದೆಡೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ತಾಪಮಾನದಲ್ಲಿ ಹೆಚ್ಚಳವೊಂದರಿಂದಲೇ ಬೆಳೆ ಇಳುವರಿಯ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಅದು ಬಾಷ್ಪೀಕರಣವನ್ನು ಹೆಚ್ಚಿಸಬಹುದು, ತೇವಾಂಶದ ಒತ್ತಡ, ಅಂತಿಮವಾಗಿ ಕೃಷಿಗೆ ನೀರಿನ ಬೇಡಿಕೆ ಮತ್ತು ನೀರಾವರಿ ಅಗತ್ಯತೆಗಳನ್ನು ಹೆಚ್ಚಿಸಬಹುದು. ವಿಪರೀತ ಸಂದರ್ಭಗಳಲ್ಲಿ, ಹೆಚ್ಚಿನ ತಾಪಮಾನವು ಶಾಖದ ಒತ್ತಡಕ್ಕೆ ಕಾರಣವಾಗಬಹುದು, ಮತ್ತು ಮನುಷ್ಯರು ಮತ್ತು ಪ್ರಾಣಿಗಳಿಗೆ ಹಾನಿ ಮಾಡಬಹುದು ಎಂದು ಅವರು ಹೇಳಿದರು.

ಕರ್ನಾಟಕದ ಕೃಷಿಯ ಮೇಲೆ ನಿರೀಕ್ಷಿತ ಹವಾಮಾನ ಬದಲಾವಣೆಯ ಪರಿಣಾಮಗಳು

ಕೃಷಿಯ ಮೇಲೆ ನಿರೀಕ್ಷಿತ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅಂದಾಜು ಮಾಡಲು, ಹವಾಮಾನ ಬದಲಾವಣೆ ಮಾದರಿಗಳಲ್ಲದೆ, ಕೃಷಿಯ ಉತ್ಪಾದಕತೆಯ ಮೇಲೆ ಹವಾಮಾನ ನಿಯತಾಂಕಗಳ ಮತ್ತು ಇತರ ಅಂಶಗಳ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ. 2030ರ ವರೆಗೆ ವಿವಿಧ ಬೆಳೆಗಳ ಉತ್ಪಾದಕತೆಯ ಮತ್ತು ಹವಾಮಾನ ಬದಲಾವಣೆಯ ವಿವಿಧ ಗಣಿತಶಾಸ್ತ್ರೀಯ ಮತ್ತು ಸಂಖ್ಯಾಶಾಸ್ತ್ರೀಯ ಮಾದರಿಗಳನ್ನು ಬಳಸಿ ಅಧ್ಯಯನ ಮಾಡಲಾಗಿದೆ. ಇಂತಹ ಮಾದರಿಗಳನ್ನು ಕೃಷಿ ವಿವಿಯಲ್ಲಿ ಬಟಾಣಿ, ಜೋಳ, ಭತ್ತ, ಮೆಕ್ಕೆಜೋಳೆ, ತೊಗರಿ, ಹತ್ತಿ, ಸೋಯಾ, ರಾಗಿ, ಕಬ್ಬು ಮತ್ತು ಶೇಂಗಾ ಈ ಬೆಳೆಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಅಧ್ಯಯನಗಳು ಬಟಾಣಿ (13.5%), ಹತ್ತಿ (55.6%), ಮೆಕ್ಕೆಜೋಳ (24.5%) ಮತ್ತು ಕಬ್ಬು (6.1%) ಉತ್ಪಾದಕತೆ ಹೆಚ್ಚಾಗುತ್ತವೆ ಎಂದು ತೋರಿಸಿವೆ. ಭತ್ತ (5.6%), ಜೋಳ (20.3%), ಸೋಯಾ (28.9%), ತೊಗರಿ (19.2%), ಗೋಧಿ (0.6%) ರಾಗಿ (12%), ಶೇಂಗಾ (9.6%) – ಈ ಬೆಳೆಗಳಲ್ಲಿ ಉತ್ಪಾದಕತೆ ಕಡಿಮೆಯಾಗುತ್ತದೆ. ಹವಾಮಾನ ಬದಲಾವಣೆಯ ಹೊಂದಾಣಿಕೆಯ ನಂತರವೂ 2 ರಿಂದ 3.5 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಹೆಚ್ಚಳಕ್ಕೆಒಟ್ಟು ಕೃಷಿ ಬೆಳೆಗಳ ಮೌಲ್ಯದಲ್ಲಿ 9ರಿಂದ 25% ರಷ್ಟು ಕಡಿಮೆಯಾಗಬಹುದು ಎಂದು ಕುಮಾರ್ ಮತ್ತು ಪಾರಿಖ್ (1998) ಅಧ್ಯಯನ ತಿಳಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಜನಸಂಖ್ಯೆಯ ದೊಡ್ಡ ಭಾಗಕ್ಕ್ಡೆ ಕೃಷಿಯು ಪ್ರಾಥಮಿಕ ಜೀವನೋಪಾಯವಾಗಿದೆ ಮತ್ತು ಈ ವಲಯದ ದೌರ್ಬಲ್ಯವನ್ನು ನಿರ್ಣಯಿಸಲಾಗಿದೆ. ಬೆಳೆಯ ತೀವ್ರತೆ, ಒಟ್ಟು ನೀರಾವರಿ ಪ್ರದೇಶ ಮತ್ತು ವಾಣಿಜ್ಯ ಬೆಳೆ ಪ್ರದೇಶವು ಕರ್ನಾಟಕದ ಜಿಲ್ಲೆಗಳ ದುರ್ಬಲತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಚಾಲಕ ಅಂಶಗಳಾಗಿವೆ. ಬೀದರ್, ಗುಲ್ಬರ್ಗ, ಬಿಜಾಪುರ, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ಯಾದಗಿರಿಯಂತಹ ಜಿಲ್ಲೆಗಳು ಹವಾಮಾನ ಬದಲಾವಣೆಗೆ ಒಳಗಾಗುವ ಅಪಾಯ ಹೆಚ್ಚಿವೆ. ರಾಜ್ಯದ ಹದಿನಾರು ಜಿಲ್ಲೆಗಳು ಸರಾಸರಿ ಸಂಯೋಜಿತ ದುರ್ಬಲತೆ ಸೂಚ್ಯಂಕ ಮಟ್ಟಕ್ಕಿಂತ ಹೆಚ್ಚಿವೆ ಎಂದು ವರದಿಯಾಗಿದೆ. ಬೀದರ್, ಕೋಲಾರ ಮತ್ತು ಯಾದಗಿರಿ ಜಿಲ್ಲೆಗಳು ಹೆಚ್ಚು ದುರ್ಬಲವಾಗಿದ್ದು, ಶಿವಮೊಗ್ಗ, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳು ಬದಲಾಗುತ್ತಿರುವ ಹವಾಮಾನಕ್ಕೆ ಕಡಿಮೆ ದುರ್ಬಲತೆಯನ್ನು ಪ್ರದರ್ಶಿಸುತ್ತವೆ. ರಾಜ್ಯದ 50%ಕ್ಕಿಂತ ಹೆಚ್ಚಿನ ಪ್ರದೇಶವು 100 ಮಿಮಿಗಿಂತ ಕಡಿಮೆ ಮಣ್ಣಿನ ನೀರಿನ ಲಭ್ಯತೆಯ ಸಾಮರ್ಥ್ಯವನ್ನು ಹೊಂದಿದೆ (NBSS & LUP1999),ಇದು ಹವಾಮಾನ ಬದಲಾವಣೆಗೆ ಅದರ ದೌರ್ಬಲ್ಯವನ್ನು ಹೆಚ್ಚಿಸುತ್ತದೆಂದೂ ಅವರು ತಿಳಿಸಿದರು.

ಉಪಶಮನ ಮತ್ತು ಹೊಂದಾಣಿಕೆಯ ಪ್ರಸ್ತಾವಿತ ಕಾರ್ಯವ್ಯೂಹದ  ಅಂಶಗಳು

ಕೊನೆಯದಾಗಿ, ಕಾರ್ಯಯೋಜನೆಯಲ್ಲಿ ಉಪಶಮನ ಮತ್ತು ಹೊಂದಾಣಿಕೆಯ ಈ ಕೆಳಗಿನ ಪ್ರಸ್ತಾವಿತ ಕಾರ್ಯವ್ಯೂಹದ  ಅಂಶಗಳನ್ನು ಅವರು ಮಂಡಿಸಿದರು.

ಹವಾಮಾನ ಆಧಾರಿತ ಬೆಳೆ ಪದ್ಧತಿ: ಲಭ್ಯವಿರುವ ಮಳೆನೀರಿನ ಪ್ರಮಾಣ, ಮಣ್ಣಿನ ಗುಣಲಕ್ಷಣಗಳು, ಆವಿಯಾಗುವಿಕೆ ಮತ್ತು ಬೆಳವಣಿಗೆಯ ಅವಧಿಯನ್ನು ಆಧರಿಸಿ, ಹವಾಮಾನ ಬದಲಾವಣೆಯ ನಿರೀಕ್ಷೆಗಳನ್ನು ಪರಿಗಣಿಸಿ ಪ್ರತಿ ಜಿಲ್ಲೆಗೆ ಸೂಕ್ತವಾದ ಬೆಳೆಗಳನ್ನು ಗುರುತಿಸಬೇಕು.

ಅಗ್ರೋಮೆಟ್ (ಕೃಷಿ-ಹವಾಮಾನ) ಸಲಹಾ ಸೇವೆಗಳನ್ನು ಬಲಪಡಿಸುವುದು: ಆಗ್ರೋಮೆಟ್ ಸಲಹಾ ಸೇವೆಗಳು ಹಿಂದಿನ ಹವಾಮಾನ ಮಾದರಿಗಳು ಮತ್ತು ಭವಿಷ್ಯದ ಬೆಳೆ ಕೃಷಿ ಪ್ರಕ್ರಿಯೆಗಳಿಗೆ ಶಿಫಾರಸುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತವೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಗೆ ರೈತರ ಹೊಂದಾಣಿಕೆಯನ್ನು ಹೆಚ್ಚಿಸಲು ಹವಾಮಾನ ಆಧಾರಿತ ಕೃಷಿ ಸಲಹಾ ಸೇವೆಗಳನ್ನು ಒದಗಿಸಬೇಕು.

ಸೌರ ಕೃಷಿ ಪಂಪುಗಳ ಅಳವಡಿಕೆ

ನೆರೆ ಹೊಂದಾಣಿಕೆಯ ತಂತ್ರಗಳು (ದೀರ್ಘ ಕಾಲೀನ): ಹೆಚ್ಚುವರಿ ನೆರೆ ನೀರನ್ನು ತಿರುಗಿಸಲು ಮತ್ತು ವ್ಯವಸ್ಥೆಯ ಮೇಲೆ ನೀರಿನ ಪ್ರಮಾಣ ಮತ್ತು ಬಲವನ್ನು ಕಡಿಮೆ ಮಾಡಲು ಪ್ರಯತ್ನಗಳು ಆಗಬೇಕಾಗಿದೆ. ನದಿಗಳ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಒಳಚರಂಡಿ/ನೀರಾವರಿ ಕಾಲುವೆಗಳನ್ನು ಮತ್ತು ಕಾಲುವೆಗಳ ಜೊತೆಗೆ ಸಮುದಾಯ ಟ್ಯಾಂಕ್‌ಗಳನ್ನು ಒದಗಿಸುವುದು ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೇಗುಲಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ಧತಿ ಕೈಬಿಡಲು ಚಿಂತನೆ: ಸಿಎಂ ಪಿಣರಾಯಿ ವಿಜಯನ್

ಸಾವಯವ ಕೃಷಿ ಪದ್ದತಿ: ಸಾಂಪ್ರದಾಯಿಕ ಉತ್ಪಾದನೆಯಲ್ಲಿ ಬಳಸಲಾಗುವ ಶೇಕಡಾ 46 ರಷ್ಟು ಶಕ್ತಿಯನ್ನು ಉಳಿಸಲು. ಬಾಹ್ಯ ಒಳಹರಿವಿನ ಕಡಿಮೆ ಬಳಕೆ. ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಆದ್ದರಿಂದ ಕೃಷಿ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತದೆ.

ಮಣ್ಣಿನ ಆರೋಗ್ಯ: ಸುಧಾರಿತ ಮಣ್ಣಿನ ಆರೋಗ್ಯವು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಚಟುವಟಿಕೆಗಳನ್ನು ಸುಧಾರಿಸುತ್ತದೆ. ಮಣ್ಣಿನ ಆರೋಗ್ಯ ಕಾರ್ಡ್ ಪುನಶ್ಚೇತನದ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಣ್ಣಿನ ಪರೀಕ್ಷೆಯ ಬೆಳೆ ಪ್ರತಿಕ್ರಿಯೆಯ ಆಧಾರದ ಮೇಲೆ ಸೈಟ್ ನಿರ್ದಿಷ್ಟ ಪೋಷಕಾಂಶ ನಿರ್ವಹಣೆ ಮತ್ತು ರಸಗೊಬ್ಬರ ಶಿಫಾರಸುಗಳು, ರಸಗೊಬ್ಬರಗಳ ವಿವೇಚನಾರಹಿತ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆನೀರಿನ ನಿರ್ವಹಣೆ: ಅಲ್ಪಾವಧಿಯಲ್ಲಿ ಇದನ್ನು ಸ್ಥಳೀಯ (ಇನ್ ಸಿಟು) ಮತ್ತು ಹೊರಗಿನ (ಎಕ್ಸ್ಸಿಟು) ಹಸಿರು ಗೊಬ್ಬರ, ಬೇಸಿಗೆ ಉಳುಮೆ, ಕಲ್ಲು ಮತ್ತು ಸಸ್ಯಕ ಗದ್ದೆ ಬಂಡ್‌ಗಳು ಇತ್ಯಾದಿಗಳ ಮೂಲಕ ಸಾಧಿಸಬಹುದು.

ದೀರ್ಘಾವಧಿಯಲ್ಲಿ ಕೃಷಿ ಹೊಂಡಗಳು, ಚೆಕ್‌ಡ್ಯಾಮ್‌ಗಳು, ನಾಲಾ ಮೂಲಕ ನೀರು ಸಂಗ್ರಹಣೆಯಲ್ಲಿ -ಬಂಡ್‌ಗಳು ಮತ್ತು ಅಂತರ್ಜಲ ಮರುಪೂರಣ ರಚನೆಗಳು ಸಹಾಯ ಮಾಡಬಲ್ಲವು. EMPRI ವರದಿಯಲ್ಲಿನ ಅಂಶಗಳನ್ನು ಟಿ.ಮಹೇಶ್ ಮತ್ತು ಡಾ. ಸರಿತಾ ಸಮಾವೇಶದ ಗಮನಕ್ಕೆ ತಂದರು. ಈ ಕಾರ್ಯಯೋಜನೆಯ ಆಧಾರದ ಮೇಲೆ ಪ್ರತಿ ಸರಕಾರದ ವಿಭಾಗ (ಕೃಷಿ ಇತ್ಯಾದಿ) ವಿವರವಾದ ಯೋಜನೆಗಳನ್ನು ತಯಾರಿಸಿ ಜಾರಿ ಮಾಡುತ್ತದೆ ಎಂದರು.

ಕಾರ್ಯ ಯೋಜನೆಯ ಮೇಲೆ ಸಂವಾದ

ನಂತರ ಸಂವಾದ ಗೋಷ್ಠಿ ನಡೆಯಿತು. ಇದರ ಅಧ್ಯಕ್ಷತೆಯನ್ನು ವಹಿಸಿ ಸಂವಾದಕ್ಕೆ ಚಾಲನೆ ಕೊಡುತ್ತಾ, ಮಾತನಾಡಿದ ಕೃಷಿ ವಿಜ್ಞಾನಿ ಮತ್ತು ಲೇಖಕರಾದ ಜಿ.ಎನ್.ನಾಗರಾಜ್ ಅವರು, ಹವಾಮಾನ ವೈಪರಿತ್ಯ ಕೃಷಿಯ ಮೇಲೆ ಯಾಕೆ ಪರಿಣಾಮ ಬೀರುತ್ತದೆ ಎಂಬುದರ ಹಿಂದಿರುವ ವಿಜ್ಞಾನದ ಅಂಶವನ್ನು ವಿವರಿಸಿದರು.

ಕಾರ್ಯಯೋಜನೆಯ ಅಂಶಗಳನ್ನು ಜಾರಿ ಮಾಡುವುದರ ವೆಚ್ಚಕ್ಕೆ ಸರಕಾರ ಬಜೆಟ್ ಮಾಡಿದೆಯೆ? ಸೌರ ಪಂಪಿನ ವೆಚ್ಚ ಯಾರು ಹೊರುತ್ತಾರೆ ? ಹವಾಮಾನ ವೈಪರೀತ್ಯಗಳಿಂದ ಉಂಟಾಗಬಹುದಾದ ಆಹಾರಧಾನ್ಯ ಕೊರತೆ ನೀಗಿಸಲು ಹೆಚ್ಚಿನ ಆಹಾರ ದಾಸ್ತಾನು ಯೋಜಿಸಿದೆಯೆ? ಹವಾಮಾನ ವೈಪರೀತ್ಯ ತಾಳಿಕೊಳ್ಳುವ ತಳಿಗಳ ಸಂಶೋಧನೆಗೆ ಯೋಜನೆಯಿದೆಯೆ ಮುಂತಾದ ಪ್ರಶ್ನೆಗಳನ್ನು ನಾಗರಾಜ್ ಅವರು ಎತ್ತಿದರು. ಸಂವಾದದಲ್ಲಿ ರೈತ ಸಂಘಟನೆಯ ಯಶವಂತ ಮತ್ತು ಕೃಷಿ ಕೂಲಿಕಾರರ ಸಂಘಟನೆಯ ಚಂದ್ರಪ್ಪ ಹೊಸ್ಕೇರ ಭಾಗವಹಿಸಿದರು.

ಈ ಸಂದರ್ಭದಲ್ಲಿ ಹವಾಮಾನದ ಮೇಲೆ ಕೆ.ಎಸ್ ರವಿಕುಮಾರ್ ಅವರು ಬರೆದ ಮತ್ತು ಬಾರತ ಜ್ಞಾನ ವಿಜ್ಞಾನ ಸಮಿತಿ  ಪ್ರಕಟಿಸಿದ “ಹವಾಮಾನ ಬದಲಾವಣೆ : ಬೇಕೆ ಈ ದಿನಗಳು”ಪುಸ್ತಕ ಬಿಡುಗಡೆ ಮಾಡಲಾಯಿತು. ಪುಸ್ತಕ ಕುರಿತು ಮಾತನಾಡುತ್ತಾ ರವಿಕುಮಾರ್ ಅವರು, ಬೆಂಗಳೂರಿನ ಜನ ಮಳೆಗೆ ಈಗ ಬೆದರುತ್ತಾರೆಯೆಂದರೆ ಹವಾಮಾನ ಬದಲಾವಣೆ ಆಗುತ್ತಿದೆಯೆಂದೇ ಅರ್ಥವೆಂದರು. ಬಿಸಿಲಿನ ತಾಪದಿಂದ ಕೆಲಸದ ಅವಧಿ ಕಡಿಮೆಯಾಗುತ್ತದೆ. ಇದರಿಂದ ರೈತರು ಹಾಗೂ ಕೂಲಿಕಾರರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದರು. ಪ್ರೊ. ಕಮಲ್ ಲೊದಾಯ್ ಅವರು ಕೆ.ಎಸ್ ರವಿಕುಮಾರ್ ಅವರನ್ನು ಪರಿಚಯಿಸಿದರು.

ನಾಡಿನ ಪ್ರಮುಖ ರೈತ ಸಂಘಟನೆಗಳು, ಕೃಷಿ ಕೂಲಿಕಾರರ ಸಂಘಟನೆಗಳು, ಜನ ವಿಜ್ಞಾನ ಸಂಘಟನೆಗಳು, ಪರಿಸರ ಮತ್ತು ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆಗಳ ನಾಯಕರು ಮತ್ತು ಕಾರ್ಯಕರ್ತರು ಸಮಾವೇಸದಲ್ಲಿ ಭಾಗಿಯಾಗಿದ್ದರು. ಕೃಷಿ ಮತ್ತು ಪರಿಸರ ವಿಜ್ಞಾನದ ಮತ್ತು ಸಂಬಂಧಿತ ಸಮಾಜ ವಿಜ್ಞಾನಗಳ ವಿಶ್ವವಿದ್ಯಾಲಯ, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳ ಪ್ರಾಧ್ಯಾಪಕರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕ-ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಈ ವಿಷಯದಲ್ಲಿ ಇತರ ಆಸಕ್ತರೂ ಸಹ ಭಾಗಿಯಾಗಿಯಾಗಿದ್ದರು.

ಸುಬ್ರಮಣ್ಯ ಗುಡ್ಗೆ ಅವರು ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಸಂತರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುರಾಜ್ ದೇಸಾಯಿ ವಂದನಾರ್ಪಣೆ ಮಾಡಿದರು.

ಇದನ್ನೂ ನೋಡಿ: ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ

Donate Janashakthi Media

Leave a Reply

Your email address will not be published. Required fields are marked *