ಕರ್ನಾಟಕದ ಮೇಲೂ ತೀವ್ರ ಪರಿಣಾಮ
ಡೊನಾಲ್ಡ್ ಟ್ರಂಪ್ ಆಗಸ್ಟ್ 1 ರಿಂದ ಭಾರತದ ರಫ್ತಿನ ಮೇಲೆ ಶೇ. 25 ರಷ್ಟು ಹೆಚ್ಚುವರಿ ಆಮದು ಸುಂಕವನ್ನು ವಿಧಿಸಿದ್ದಾರೆ. ಈ ಸುಂಕ ಹೆಚ್ಚಳದ ಪರಿಣಾಮವು ಕರ್ನಾಟಕದ ಐಟಿ ಬಿಟಿ ಉದ್ಯಮ, ಔಷಧೀಯ ಉದ್ಯಮ, ವಾಹನ ತಯ್ಯಾರಿಕಾ ಉದ್ಯಮ, ಸೋಲಾರ್ ವಿದ್ಯುತ್ ಉದ್ಯಮಗಳ ಮೇಲೆ ಬೀರುತ್ತದೆ. ಸಿದ್ದುಉಡುಪು ಕಾರ್ಖಾನೆಗಳು ಮತ್ತು ಹತ್ತಿ ಬೆಳೆಯುವ ರೈತರ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗ ಕಡಿತ ಹೆಚ್ಚಾಗುತ್ತದೆ, ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಮೋದಿಯವರಾಗಲಿ, ಮೋದಿಯವರನ್ನು ನಿತ್ಯವೂ ಜಪಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರಾಗಲೀ ನಮ್ಮ ದೇಶದ ಆರ್ಥಿಕತೆ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸುಂಕ ಹೆಚ್ಚಳದ ಕುರಿತು ಮಾತನಾಡುತ್ತಿಲ್ಲ.
-ಸಿ. ಸಿದ್ದಯ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 1 ರಿಂದ ಭಾರತದ ರಫ್ತಿನ ಮೇಲೆ ಶೇ. 25 ರಷ್ಟು ಹೆಚ್ಚುವರಿ ಆಮದು ಸುಂಕವನ್ನು ವಿಧಿಸಿದ್ದಾರೆ. ದಂಡವನ್ನೂ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ತಮ್ಮ ಹಸ್ತಕ್ಷೇಪದಿಂದ ಕದನ ವಿರಾಮ ಸಾಧ್ಯವಾಯಿತು ಎಂದು ಪದೇ ಪದೇ ಹೇಳಿದ ಟ್ರಂಪ್, ಈಗ ರಷ್ಯಾದಿಂದ ಭಾರತವು ಕಚ್ಚಾ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂದು ತನಗೆ ಹೇಳಿತ್ತು ಎಂಬಂತೆ ಹೇಳಿಕೊಳ್ಳುತ್ತಿದ್ದಾರೆ.
ಭಾರತದ ಸಾರ್ವಭೌಮತ್ವವನ್ನು ಅಮೆರಿಕದ ಅಧ್ಯಕ್ಷರು ಅಗೌರವಿಸುತ್ತಿದ್ದರೆ, ದೇಶಭಕ್ತಿ ತನ್ನ ಪೇಟೆಂಟ್ ಎಂಬಂತೆ ಹೇಳಿಕೊಳ್ಳುವ ಕೇಂದ್ರ ಸರ್ಕಾರ, ಅವರ ಅನುಯಾಯಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಗುಂಪುಗಳು ಮೌನ ಜಪ ಮಾಡುತ್ತಿವೆ. ಆರು ವರ್ಷಗಳ ಹಿಂದೆ ಅಮೆರಿಕದ ಹೂಸ್ಟನ್ ನಲ್ಲಿರುವ ಎನ್ ಆರ್ ಜಿ ಸ್ಟೇಡಿಯಂನಲ್ಲಿ 50 ಸಾವಿರ ಅನಿವಾಸಿ ಭಾರತೀಯರ ಸಮ್ಮುಖದಲ್ಲಿ ‘ಮೈ ಫ್ರೆಂಡ್ ಡೊನಾಲ್ಡ್’ ಎಂದು ಗಾಂಭೀರ್ಯದಿಂದ ಘೋಷಿಸಿದ್ದ ಮೋದಿಯವರು ಈಗ ಬಾಯಿ ತೆರೆಯುತ್ತಿಲ್ಲ. ಪ್ರಧಾನಿ ಮೋದಿಯವರಾಗಲಿ, ಮೋದಿಯವರನ್ನು ನಿತ್ಯವೂ ಜಪಿಸುತ್ತಿರುವ ನಮ್ಮ ರಾಜ್ಯದ ವಿರೋಧ ಪಕ್ಷದ ನಾಯಕರಾಗಲೀ ನಮ್ಮ ದೇಶದ ಆರ್ಥಿಕತೆ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸುಂಕ ಹೆಚ್ಚಳದ ಕುರಿತು ಮಾತನಾಡುತ್ತಿಲ್ಲ.
ಇಡೀ ಪ್ರಪಂಚದ ಮೇಲೆ ಪರಿಣಾಮ
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಾಗಿನಿಂದ, ಟ್ರಂಪ್ ತೆಗೆದುಕೊಂಡ ನಿರ್ಧಾರಗಳು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿವೆ. ವಿದ್ಯಾರ್ಥಿಗಳ ವೀಸಾದಿಂದ ಆರಂಭಗೊಂಡು, ದೇಶಗಳ ನಡುವಿನ ಯುದ್ಧಗಳನ್ನು ಕೊನೆಗೊಳಿಸುವ, ಕದನ ವಿರಾಮದವರೆಗೆ ಎಲ್ಲವನ್ನೂ ತಾನೇ ಮಾಡುತ್ತಿದ್ದೇನೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಸಮಾಜವಾದಿ ವ್ಯವಸ್ಥೆಯು ಹಿನ್ನಡೆಯನ್ನು ಅನುಭವಿಸಿದ ನಂತರ, ಜಗತ್ತಿನಲ್ಲಿ ತನ್ನ ಪ್ರಾಬಲ್ಯಕ್ಕೆ ಸವಾಲೇ ಇಲ್ಲ ಎಂದು ಅಮೆರಿಕ ಭಾವಿಸಿದೆ. ಆದರೆ, ಯಾವುದೇ ದೇಶವಾದರೂ ತನ್ನ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ.
ಇದನ್ನೂ ಓದಿ: ದರ್ಮಸ್ಥಳ| ಪದ್ಮಲತಾ ಮನೆಗೆ ಸಿಪಿಐಎಂ ನಿಯೋಗ ಭೆಟಿ
ಅದಕ್ಕಾಗಿಯೇ ಕಳೆದ ಕೆಲವು ವರ್ಷಗಳಲ್ಲಿ ಅನೇಕ ದೇಶಗಳು ವಿವಿಧ ಕೂಟಗಳನ್ನು ರಚಿಸಿಕೊಂಡು, ಅಮೆರಿಕದ ಹಸ್ತಕ್ಷೇಪವಿಲ್ಲದೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ಈ ಬೆಳವಣಿಗೆಗಳು ಅಮೆರಿಕದ ಆಡಳಿತಗಾರರು ಮತ್ತು ಕಾರ್ಪೊರೇಟ್ ಶಕ್ತಿಗಳಿಗೆ ಸಹಿಸಲಾಗುತ್ತಿಲ್ಲ. ‘ಎಲ್ಲದರಲ್ಲೂ ಅಮೆರಿಕ ಮೊದಲು’ ಎಂಬ ಯುಗವನ್ನು ತರುತ್ತೇನೆಂದು ಚುನಾವಣೆಯಲ್ಲಿ ಭರವಸೆ ಕೊಟ್ಟು ಗೆದ್ದ ಟ್ರಂಪ್, ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ನಿಲುವನ್ನು ಚೀನಾ ಸೇರಿದಂತೆ ಅಮೆರಿಕದ ನೆರೆಹೊರೆಯ ದೇಶಗಳಾದ ಕೆನಡಾ ಮತ್ತು ಅನೇಕ ಸಣ್ಣ ದೇಶಗಳು ಕೂಡಾ ಪ್ರಶ್ನಿಸುತ್ತಿವೆ ಮತ್ತು ಪ್ರತಿಭಟಿಸುತ್ತಿವೆ. ನಮ್ಮ ದೇಶದ ಆಡಳಿತಗಾರರು ಮಾತ್ರ ದೇಶದ ಪ್ರತಿಷ್ಠೆಯನ್ನು, ಆರ್ಥಿಕ ವ್ಯವಸ್ಥೆಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.
‘ಮೈ ಫ್ರೆಂಡ್ ಡೊನಾಲ್ಡ್’ಕೆಲಸ ಮಾಡಲಿಲ್ಲ
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನಮ್ಮ ದೇಶದ ಆಡಳಿತಗಾರರು ಮತ್ತು ಅಧಿಕಾರಿಗಳು ಸುಮಾರು ನಾಲ್ಕು ತಿಂಗಳುಗಳಿಂದ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಟ್ರಂಪ್ ಜೊತೆಗೆ ಮೋದಿಯವರಿಗೆ ಇರುವ ಸ್ನೇಹದಿಂದಾಗಿ ಭಾರತಕ್ಕೆ ಅನುಕೂಲಕರವಾದ ವ್ಯಾಪಾರ ಒಪ್ಪಂದ ಏರ್ಪಡುತ್ತದೆ ಎಂದು ಜುಲೈ 29 ರವರೆಗೆ ವಿವಿಧ ರೀತಿಯ ಪ್ರಚಾರಗಳನ್ನು ಮಾಡಿದರು. ಟ್ರಂಪ್ ಕೂಡ ಅದೇ ಅನಿಸಿಕೆ ವ್ಯಕ್ತಪಡಿಸಿದರು. ಆದರೆ, ಜುಲೈ 30 ರಂದು ಭಾರತದ ರಫ್ತಿನ ಮೇಲೆ ಶೇಕಡಾ 25 ಸುಂಕವನ್ನು ಹೆಚ್ಚಿಸುವ ಮೂಲಕ ಟ್ರಂಪ್ ಒಂದು ಸಂಚಲನಕಾರಿ ಘೋಷಣೆ ಮಾಡಿದರು.

ಹಲವು ದಶಕಗಳ ಕಾಲದಿಂದ ಪ್ರಪಂಚದಾದ್ಯಂತದ ಪರಿಣಿತರನ್ನು ಸೇರಿಸಿ, ವೈಜ್ಞಾನಿಕ ಜ್ಞಾನದ ಮೂಲಕ ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ಉತ್ಪಾದಿಸಿ, ಪ್ರಪಂಚದಾದ್ಯಂತ ಮಾರಾಟ ಮಾಡಿಕೊಂಡು ಬಂದ ಅಮೆರಿಕನ್ ಕಂಪನಿಗಳ ಎದರು, ನೂರಾರು ವರ್ಷಗಳ ವಸಾಹತುಶಾಹಿ ದಬ್ಬಾಳಿಕೆಯಿಂದ ಮುಕ್ತವಾದ ದೇಶಗಳ ಕಂಪನಿಗಳ ಉತ್ಪನ್ನಗಳು ಉಳಿಯಬಹುದೇ? ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ದೇಶೀಯ ಕಂಪನಿಗಳನ್ನು ರಕ್ಷಿಸಿಕೊಳ್ಳಲು ಅನೇಕ ಕಾನೂನುಗಳನ್ನು ಜಾರಿಗೆ ತಂದು ಸುಂಕಗಳ ವ್ಯತ್ಯಾಸಗಳನ್ನು ಅನುಸರಿಸುತ್ತಿವೆ.
ಜಾಗತೀಕರಣದ ಸುಳ್ಳು ಘೋಷಣೆಯೊಂದಿಗೆ ಈ ದೇಶಗಳಿಗೆ ನುಸುಳಿರುವ ಸೂಪರ್ ಪವರ್ ಕಂಪನಿಗಳು ಈಗ ತೆರಿಗೆ ಸಮಾನತೆಯ ಬಗ್ಗೆ ಮಾತನಾಡುತ್ತಿವೆ. ವಿದೇಶಗಳಿಂದ ನಮ್ಮ ದೇಶಕ್ಕೆ ಬರುವ ಸರಕುಗಳ ಮೇಲೆ ಸರ್ಕಾರ ಸರಾಸರಿ ಶೇಕಡಾ 17 ರಷ್ಟು ಆಮದು ಸುಂಕವನ್ನು ವಿಧಿಸುತ್ತಿದೆ. ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳುವವರೆಗೆ, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಿದೇಶಿ ಸರಕುಗಳ ಮೇಲೆ ಸರಾಸರಿ ಶೇಕಡಾ 3.3 ರಷ್ಟು ಆಮದು ಸುಂಕ ವಿಧಿಸುತ್ತಿತ್ತು. ನಮ್ಮ ಮೇಲೆ ನೀವು ಎಷ್ಟು ತೆರಿಗೆ ವಿಧಿಸುತ್ತೀರೋ ನಾವೂ ಅಷ್ಟೇ ತೆರಿಗೆ ವಿಧಿಸುತ್ತೇವೆ ಎಂದು ಟ್ರಂಪ್ ಈಗ ಹೇಳುತ್ತಿದ್ದಾರೆ. ಇದರ ನಿಜವಾದ ಉದ್ದೇಶ ನಮ್ಮ ಕೃಷಿ ವಲಯವನ್ನು ಕಬಳಿಸುವುದಾಗಿದೆ.
ಯಾವುದಕ್ಕೆಲ್ಲಾ ಸುಂಕ ಹೆಚ್ಚಳ?
ನಮ್ಮ ದೇಶದ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲೆ ಪ್ರಸ್ತುತ ಅಮೆರಿಕಾ ಶೇ. 15 ರಷ್ಟು ಆಮದು ಸುಂಕವನ್ನು ವಿಧಿಸುತ್ತಿದೆ. ಇದು ಸರಾಸರಿ ಶೇ. 30 ಕ್ಕೆ ಹೆಚ್ಚಾಗುತ್ತದೆ. ಭಾರತದ ಉಡುಪುಗಳ ಮೇಲೆ ಶೇ. 12 ರಿಂದ ಶೇ. 37 ಕ್ಕೆ, ಡೈರಿ ಉತ್ಪನ್ನಗಳ ಮೇಲೆ ಶೇ. 188, ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಶೇ. 132 ಹೆಚ್ಚಾಗುತ್ತದೆ. ಕಾಫಿ, ಚಹಾ ಮತ್ತು ಸುಗಂಧ ದ್ರವ್ಯಗಳ ಮೇಲೆ ಶೇ. 53, ಸಿರಿಧಾನ್ಯಗಳ ಮೇಲೆ ಶೇ. 193, ಎಣ್ಣೆಬೀಜಗಳು ಮತ್ತು ಎಣ್ಣೆಗಳ ಮೇಲೆ ಶೇ. 164, ಆಲ್ಕೋಹಾಲ್ ಮತ್ತು ತಂಬಾಕಿನ ಮೇಲೆ ಶೇ. 150, ಖನಿಜಗಳು ಮತ್ತು ಲೋಹಗಳ ಮೇಲೆ ಶೇ. 187 ಮತ್ತು ರಾಸಾಯನಿಕಗಳ ಮೇಲೆ ಶೇ. 56 ರಷ್ಟು ಸುಂಕವನ್ನು ಅಮೆರಿಕ ಈಗಾಗಲೇ ವಿಧಿಸುತ್ತಿದೆ.
ಕೃಷಿ ಮತ್ತು ಡೈರಿ ಕ್ಷೇತ್ರಗಳಲ್ಲಿ ನುಸುಳಲು ಪ್ರಯತ್ನ
ಕಳೆದ ಎರಡು ತಿಂಗಳುಗಳಲ್ಲಿ, ಅಮೆರಿಕಾ ನಮ್ಮ ದೇಶದೊಂದಿಗೆ 5 ಸುತ್ತಿನ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳನ್ನು ನಡೆಸಿದೆ. ಈ ಚರ್ಚೆಗಳಲ್ಲಿ ಭಾರತದ ಕೃಷಿ ಮತ್ತು ಡೈರಿ ಕ್ಷೇತ್ರಗಳಲ್ಲಿ ತನ್ನ ಕಂಪನಿಗಳಿಗೆ ಬಾಗಿಲು ತೆರೆಯಬೇಕೆಂಬ ಅಮೆರಿಕದ ಬೇಡಿಕೆಯು ಪ್ರಮುಖ ವಿಷಯವಾಗಿದೆ. ನಮ್ಮ ಆಡಳಿತಗಾರರಿಗೂ ಸಹಾ ರೈತರ ಕೃಷಿಯನ್ನು ರಕ್ಷಿಸುವ ಪ್ರಾಮಾಣಿಕತೆ ಇಲ್ಲವಾದ್ದರಿಂದ ಈ ಹಿಂದೆ ಮೂರು ಕೃಷಿ ಕರಾಳ ಕಾನೂನನ್ನು ತಂದಿದ್ದರು. ಕೃಷಿಯನ್ನು ತನ್ನ ದೇಶೀಯ ಕಾರ್ಪೊರೇಟ್ ಗಳಿಗೆ ಹಸ್ತಾಂತರಿಸಲು ಅಮೆರಿಕವು ಬಯಸಿದ್ದರಿಂದ ಆಡಳಿತಗಾರರು ಸಂದಿಗ್ಧ ಸ್ಥಿತಿಯಲ್ಲಿದ್ದರು. ಕೋಟಿಗಟ್ಟಲೆ ಜನರ ಜೀವನಾಧಾರವಾಗಿರುವ ಈ ಕ್ಷೇತ್ರಗಳಿಗೆ ಅಮೆರಿಕದ ಕಂಪನಿಗಳಿಗೆ ನೇರವಾಗಿ ಪ್ರವೇಶ ನೀಡಿದರೆ ರಾಜ್ಯಾಧಿಕಾರಕ್ಕೆ ಧಕ್ಕೆ ಬರಲಿದೆ ಎಂಬ ಆತಂಕ ಬಿಜೆಪಿ ನಾಯಕರಲ್ಲಿದೆ.
ಸುಂಕ ಏರಿಕೆಯ ಪರಿಣಾಮಗಳು:
ಹತ್ತಿ ಕೃಷಿಯ ಮೇಲೆ
ಭಾರತದ ಉಡುಪು ರಫ್ತಿನ ಶೇಕಡಾ 28 ರಷ್ಟು ಅಮೆರಿಕಕ್ಕೆ ಹೋಗುತ್ತದೆ. ಅಮೆರಿಕದ ಸುಂಕ ಹೆಚ್ಚಳವು ಈ ರಫ್ತುಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಹತ್ತಿ ಬೆಲೆ ಕಡಿಮೆಯಾಗುತ್ತದೆ. ಹತ್ತಿ ಬೆಳೆಯುವ ರೈತರು ಈಗಾಗಲೇ ಲಾಭದಾಯಕ ಬೆಲೆಗಳಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಸುಂಕ ಹೆಚ್ಚಳವು ಹತ್ತಿ ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮತ್ತು ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ಒದಗಿಸುತ್ತಿರುವ ಗಾರ್ಮೆಂಟ್ ಕಾರ್ಖಾನೆಗಳ ಮೇಲೆ ಪರಿಣಾಮ ಬೀರುತ್ತದೆ.
ರಾಜ್ಯದ ಔಷಧೀಯ ಉದ್ಯಮದ ಮೇಲೆ
ಭಾರತದ ಔಷಧ ರಫ್ತಿನಲ್ಲಿ ಶೇ. 40 ರಷ್ಟು ಅಮೆರಿಕಾದ್ದೆ. ಕರ್ನಾಟಕವು ಉತ್ಕರ್ಷದ ಐಟಿ ವಲಯ ಮತ್ತು ಬಲವಾದ ಔಷಧೀಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ರಾಜ್ಯವು 280 ಕ್ಕೂ ಹೆಚ್ಚು ಫಾರ್ಮಾ ಮತ್ತು ಬಯೋಟೆಕ್ ಕಂಪನಿಗಳಿಗೆ ನೆಲೆಯಾಗಿದ್ದು, ಇದು ಭಾರತದ ಉನ್ನತ ಆರೋಗ್ಯ ಕೇಂದ್ರಗಳಲ್ಲಿ ಒಂದಾಗಿದೆ. ಇದರ ರಾಜಧಾನಿಯಾದ ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ ಮಾತ್ರವಲ್ಲದೆ ಔಷಧೀಯ ಸಂಶೋಧನೆ ಮತ್ತು ನಾವೀನ್ಯತೆಗಳ ಕೇಂದ್ರವೂ ಆಗಿದೆ. ಕರ್ನಾಟಕವು ಭಾರತದ ಶೇ. 60ಕ್ಕಿಂತ ಹೆಚ್ಚು ಬಯೋಟೆಕ್ ಕಂಪನಿಗಳಿಗೆ ನೆಲೆಯಾಗಿದೆ ಮತ್ತು ಔಷಧ ಉತ್ಪಾದನೆ ಮತ್ತು ರಫ್ತಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಈ ತೆರಿಗೆ ಏರಿಕೆಯಿಂದಾಗಿ, ಈ ಕೈಗಾರಿಕೆಗಳು ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಔಷಧ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಲುಕುತ್ತವೆ. ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ.
ವಾಹನ ಉದ್ಯಮದ ಮೇಲೆ
ಭಾರತದಲ್ಲಿ ತಯಾರಾಗುತ್ತಿರುವ ವಾಹನ ಭಾಗಗಳಲ್ಲಿ, 2024 ರಲ್ಲಿ ಶೇ. 29.1ರಷ್ಟನ್ನು, ಅಂದರೆ, ರೂ. 19 ಸಾವಿರ ಕೋಟಿ ಮೌಲ್ಯದ ವಾಹನ ಬಿಡಿ ಭಾಗಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಯಿತು. ಪ್ರಸ್ತುತ ಸುಂಕ ಹೆಚ್ಚಳವು ಈ ಸರಕುಗಳ ರಫ್ತು ವೆಚ್ಚವನ್ನು ಬಹಳಷ್ಟು ಹೆಚ್ಚಿಸುತ್ತದೆ. ಇದರಿಂದ ನಮ್ಮ ದೇಶದಲ್ಲಿ ವಾಹನ ಬಿಡಿ ಭಾಗಗಳು, ಉಕ್ಕು ಮತ್ತು ಅಲ್ಯೂಮಿನಿಯಂ ಕಂಪನಿಗಳ ಮುಚ್ಚುವಿಕೆ, ವೇತನ ಕಡಿತ ಮತ್ತು ಕೆಲಸದ ಸಮಯವನ್ನು ಹೆಚ್ಚಿಸುವಂತಹ ಕಾರ್ಮಿಕ ವಿರೋಧಿ ಕ್ರಮಗಳಿಗೆ ಕಾರಣವಾಗುವ ಸಾಧ್ಯತೆಯಿದೆ.
ಸೋಲಾರ್ ಕಂಪನಿಗಳಿಗೆ ಲೀಸ್ ಗೆ ಭೂಮಿ ಕೊಟ್ಟಿರುವ ರೈತರ ಪರಿಸ್ಥಿತಿ
ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಇದಕ್ಕಾಗಿ ಸಾವಿರಾರು ರೈತರು ತಮ್ಮ ಭೂಮಿಯನ್ನು ಸೋಲಾರ್ ಕಂಪನಿಗಳಿಗೆ ಗುತ್ತಿಗೆಗೆ ನೀಡಿದ್ದಾರೆ. ನಮ್ಮ ರಾಜ್ಯ ಸರಕಾರವೂ ಗ್ರೀನ್ ಎನರ್ಜಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸೋಲಾರ್ ಕಂಪನಿಗಳಿಗೆ ಹಸ್ತಾಂತರಿಸುತ್ತಿದೆ. ಅಮೆರಿಕದ ತೆರಿಗೆ ಹೆಚ್ಚಳದಿಂದ ಈ ಕಂಪನಿಗಳು ಉತ್ಪಾದಿಸುವ ವಿದ್ಯುತ್ ಗೆ ಬೇಡಿಕೆ ಕಡಿಮೆಯಾದರೆ, ಲೀಸ್ ಗೆ ಭೂಮಿ ನೀಡಿದ ರಾಜ್ಯದ ರೈತರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಯೋಚಿಸಬೇಕು.
ಐಟಿ ವಲಯದ ಮೇಲೆ ಪರಿಣಾಮ
2024 ರ ಆರ್ಥಿಕ ವರ್ಷದಲ್ಲಿ, ಭಾರತದಿಂದ ಐಟಿ (ಸಾಫ್ಟ್‌ವೇರ್) ಸೇವೆಗಳ ರಫ್ತಿನಲ್ಲಿ ಶೇ. 54ರಷ್ಟು ಅಮೆರಿಕಾದ್ದೆ. ಇನ್ಫೋಸಿಸ್, ಟಿಸಿಎಸ್, ವಿಪ್ರೋದಂತಹ ದೈತ್ಯ ಕಂಪನಿಗಳ ಜೊತೆಗೆ, ಸಾವಿರಾರು ಸಣ್ಣ ಕಂಪನಿಗಳು ಅಮೆರಿಕಕ್ಕೆ ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸುತ್ತಿವೆ. ಈಗಾಗಲೇ ಈ ವಲಯದಲ್ಲಿ ವೇತನ ಕಡಿತ, ಕೆಲಸದಿಂದ ವಜಾದಂತಹ ಕ್ರಮಗಳು ನಡೆಯುತ್ತಿವೆ. ಕರ್ನಾಟದಲ್ಲಿ ಈ ವಲಯದಲ್ಲಿ ಕೆಲಸದ ಸಮಯ ಹೆಚ್ಚಳ ಮಾಡುವ ಪ್ರಯತ್ನವೂ ನಡೆಯಿತು. ಅಮೆರಿಕದ ಐಟಿ ಕಂಪನಿಗಳಲ್ಲಿ ಭಾರತೀಯರಿಗೆ ಉದ್ಯೋಗಳನ್ನು ನೀಡುವುದಿಲ್ಲ ಎಂದು ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಭಾರತದ ಐಟಿ ಕೇಂದ್ರವಾಗಿದೆ. ಇದು ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರನಾಗಿದ್ದು, ಭಾರತದ IT ಮತ್ತು ITeS ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಟ್ರಂಪ್ ರ ಸುಂಕ ಹೆಚ್ಚಳದ ಪ್ರಭಾವ ಈ ವಲಯದ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಇದೆಲ್ಲವೂ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವನ್ನು ಕಡಿಮೆ ಮಾಡುತ್ತದೆ. ಹಿಂದೆ ಮಾಡಿದ ಅಂದಾಜುಗಳಿಗೆ ಭಿನ್ನವಾಗಿ, ಈ ವರ್ಷ ಶೇ. 6.2 ರಷ್ಟು ಮಾತ್ರವೇ ಬೆಳವಣಿಗೆ ಇರಲಿದೆ ಎಂದು ತಜ್ಞರು ಘೋಷಿಸುತ್ತಿದ್ದಾರೆ. ಈಗ ನಿರುದ್ಯೋಗ ಮತ್ತಷ್ಟು ಹೆಚ್ಚಾಗುತ್ತದೆ. ಜನರ ಖರೀದಿ ಶಕ್ತಿ ಕಡಿಮೆಯಾಗುತ್ತದೆ.
ತೈಲದ ಮೇಲಿನ ಪ್ರಾಬಲ್ಯಕ್ಕಾಗಿ
ಇರಾನ್ ಜೊತೆ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ವ್ಯವಹಾರದಲ್ಲಿ ನಮ್ಮ ದೇಶವು ಭಾಗಿಯಾಗಿದೆ ಎಂಬ ಆರೋಪದ ಮೇಲೆ, ಭಾರತದ ಆರು ಪ್ರಮುಖ ಕಂಪನಿಗಳ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ವಿಶ್ವದಾದ್ಯಂತ 20 ತೈಲ ಕಂಪನಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ, ಅದರಲ್ಲಿ ಆರು ನಮ್ಮ ದೇಶದಲ್ಲಿವೆ. ಇರಾನ್‌ನ ತೈಲ ವ್ಯವಹಾರವನ್ನು ತಡೆಯಲು ‘ಗರಿಷ್ಠ ಒತ್ತಡ ಅಭಿಯಾನ’ವನ್ನು ಅಮೆರಿಕ ಕೈಗೊಂಡಿದೆ. ಇರಾನ್ ಮತ್ತು ಭಾರತದ ನಡುವೆ ಐತಿಹಾಸಿಕ ವಾಣಿಜ್ಯ ಸಂಬಂಧಗಳಿವೆ. 2019 ರವರೆಗೆ ಇರಾನ್‌ನಿಂದ ಭಾರತವು ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು.
ಆದರೆ, ಆ ವರ್ಷ ಇರಾನ್ ಮೇಲೆ ಅಮೆರಿಕ ವಾಣಿಜ್ಯ ನಿರ್ಬಂಧಗಳನ್ನು ವಿಧಿಸಿತು. ಅಮೆರಿಕದ ಒತ್ತಡಕ್ಕೆ ಮಣಿದು ನಾವು ಇರಾನ್ ನಿಂದ ತೈಲ ಆಮದನ್ನು ಗಣನೀಯವಾಗಿ ಕಡಿಮೆ ಮಾಡಿದ್ದೇವೆ. ಇರಾನ್ ನಲ್ಲಿನ ತೈಲ ಅಗ್ಗದ ದರದಲ್ಲಿ ದೊರಕುತ್ತದೆ. ಈಗ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳಬಾರದು ಎಂದು ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೂ ನಮ್ಮ ದೇಶದ ಆಡಳಿತಗಾರರು ಒಪ್ಪಿದ್ದಾರೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರೂ, ನಮ್ಮ ಆಡಳಿತಗಾರರಿಂದ ಯಾವುದೇ ಬಲವಾದ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ : ಅಧಿಕಾರ ದರ್ಪ, ಹಣದ ಅಹಂಕಾರ ಕೊನೆಯಾಗಲಿ Janashakthi Media
