ಪ್ರೊ. ಪ್ರಬಾತ್ ಪಟ್ನಾಯಕ್
ಸಾಂಕ್ರಾಮಿಕ-ಪ್ರೇರಿತ ಬಿಕ್ಕಟ್ಟಿನಿಂದ ಭಾರತದ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಎಲ್ಲ ಸಚಿವರೂ ಹೇಳುತ್ತಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು -8.6% ಆಗಬಹುದೆಂದು ಅಂದಾಜು ಮಾಡಿದ್ದ ರಿಸರ್ವ್ ಬ್ಯಾಂಕ್ ಸಹ, ಚೇತರಿಕೆಯ ಲಕ್ಷಣಗಳನ್ನು ಅಕ್ಟೋಬರ್‌ನಲ್ಲಿ ಕಂಡಿದೆ.
ಲಾಕ್‌ಡೌನ್ ಅರ್ಥವ್ಯವಸ್ಥೆಯನ್ನು ಪಾತಾಳಕ್ಕೆ ತಳ್ಳಿತ್ತು. ಕೆಳಗೆ ಬಿದ್ದವರು ಮೇಲೆ ಏಳುವ ಹಾಗೆ, ಲಾಕ್‌ಡೌನ್ ಕೊನೆಗೊಂಡ ನಂತರ ಅರ್ಥವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿದೆ. ಈ ಚೇತರಿಕೆಯ ಹಿಂದೆ ಸರ್ಕಾರದ ಯಾವ ಮಹತ್ಕಾರ್ಯವೂ ಇರಲಿಲ್ಲ. ಅರ್ಥವ್ಯವಸ್ಥೆಯು ತನ್ನ ಪಾಡಿಗೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಿಂದಿನ ವರ್ಷದ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿಯಲ್ಲಿ -8.6% ಕುಸಿತವಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯ -23.9% ಅಗಾಧ ಕುಸಿತದ ಹಿನ್ನೆಲೆಯಲ್ಲಿ, ಎರಡನೇ ತ್ರೈಮಾಸಿಕದ -8.6% ಕುಸಿತವನ್ನು ಸಹಜ ಸ್ಥಿತಿಗೆ ಮರಳುತ್ತಿರುವ ಲಕ್ಷಣ ಎಂದೇ ಹೇಳಬಹುದು.
ಆದರೆ, ಪಾತಾಳದಿಂದ ಮೇಲೇರುತ್ತಿರುವ ಅರ್ಥವ್ಯವಸ್ಥೆಯು ಎಷ್ಟು ಏರುತ್ತದೆ ಎಂಬುದು ಅದರ ಸ್ವರೂಪ-ಸಾಮರ್ಥ್ಯಗಳನ್ನು ಅವಲಂಬಿಸುತ್ತದೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲಾರದ ಒಂದು ಪರಿಸ್ಥಿತಿ ಅಥವಾ ಒಂದು ವಿದ್ಯಮಾನ ಎಂದರೆ, ಅರ್ಥವ್ಯವಸ್ಥೆಯ ಈ ಚೇತರಿಕೆಯ ಸನ್ನಿವೇಶದಲ್ಲಿ, ಶ್ರಮಿಕರ ಪಲ್ಲಟ ಮತ್ತು ಅವರ ಕೂಲಿಯ ಕಡಿತವು ಗಮನಾರ್ಹವಾಗಿರುತ್ತದೆ. (ಅಂದರೆ, ಶ್ರಮಿಕರ ಪ್ರತಿ ಶ್ರಮ-ಗಂಟೆಯ ವೇತನದ ಹಿಂಡುವಿಕೆ). ಕೂಲಿಯ ಕಡಿತದಿಂದಾಗಿ ಉಂಟಾಗುವ ಮಿಗುತಾಯ ಮೌಲ್ಯದ ಏರಿಕೆಯು ಈ ಚೇತರಿಕೆಯನ್ನೇ ನಿಷ್ಫಲಗೊಳಿಸುತ್ತದೆ.
2020-21ರ ಎರಡನೇ ತ್ರೈಮಾಸಿಕದ ಜಿಡಿಪಿಯಲ್ಲಿ ಶೇ.8.6ರಷ್ಟು ಕುಸಿತವಾಗಲಿದೆ ಎಂಬುದಾಗಿ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಮಾಹಿತಿಯು ಅರ್ಥಿಕಮಾಪನವನ್ನು (ಅಂದರೆ, ಅಳತೆಯ ಅಂಕಿ-ಅಂಶಗಳನ್ನು) ಆಧರಿಸಿದೆ. ರಿಸರ್ವ್ ಬ್ಯಾಂಕಿನ ಈ ಅಂದಾಜಿಗೂ ಮತ್ತು ಭಾರತ ಸರ್ಕಾರದ ಅಂಕಿ-ಅಂಶಗಳ ಕಚೇರಿಯು (ಎನ್.ಎಸ್.ಒ.) ಹೊರತರುವ ಅಂದಾಜಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಕೆಲವು ಸೀಮಿತ ದತ್ತಾಂಶಗಳನ್ನು ಆಧರಿಸಿ ಒಂದು ಮಾಡೆಲಿಂಗ್ ಮೂಲಕ ರಿಸರ್ವ್ ಬ್ಯಾಂಕ್ ಇಂತಹ ಅಂದಾಜು ಮಾಡುತ್ತದೆ.
ಐ.ಎಲ್.ಓ. ಮಾಡಿರುವ ಇದೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್ 2020) ಅಂದಾಜಿನಲ್ಲಿ (ಈ ಅಂದಾಜಿನಲ್ಲಿ ಭಾರತವು ಹೆಚ್ಚು ತೂಕ ಪಡೆದಿದೆ), ದಕ್ಷಿಣ ಏಷ್ಯಾದಲ್ಲಿ, 2019ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಕೆಲಸದ ಗಂಟೆಗಳಲ್ಲಿ 18.2% ಕುಸಿತವಾಗಿದೆ. 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಜುಲೈ-ಸೆಪ್ಟೆಂಬರ್ 2020 ತ್ರೈಮಾಸಿಕದಲ್ಲೂ ಸರಿಸುಮಾರು ಇದೇ ರೀತಿಯ ಕುಸಿತವನ್ನು ನಿರೀಕ್ಷಿಸಬಹುದು. ಆದ್ದರಿಂದ, ಜುಲೈ-ಸೆಪ್ಟೆಂಬರ್ 2019 ರಿಂದ ಜುಲೈ-ಸೆಪ್ಟೆಂಬರ್ 2020ರ ಅವಧಿಯಲ್ಲಿ ಜಿಡಿಪಿಯ ಕುಸಿತವು, ಈ ಜಿಡಿಪಿಯನ್ನು ಉತ್ಪಾದಿಸಲು ಬೇಕಾಗುವ ಶ್ರಮ-ಗಂಟೆಗಳ ಕುಸಿತಕ್ಕಿಂತ ಕಡಿಮೆ ಎಂದು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ಅಥವಾ, ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪಾತಾಳಕ್ಕೆ ಇಳಿದಿದ್ದ ಅರ್ಥವ್ಯವಸ್ಥೆಯ ಚೇತರಿಕೆಯ ಜೊತೆಯಲ್ಲೇ ಪ್ರತಿ ಯೂನಿಟ್ ಜಿಡಿಪಿಯಲ್ಲಿ ಶ್ರಮ ಒಳಸುರಿ (labour input) ಗಣನೀಯವಾಗಿ ಇಳಿದಿದೆ.
ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯು -23.9% ಅಗಾಧ ಕುಸಿತದ ಹಿನ್ನೆಲೆಯಲ್ಲಿ, ಎರಡನೇ ತ್ರೈಮಾಸಿಕವು -8.6% ಕುಸಿತವನ್ನು ಚೇತರಿಕೆ ಎನ್ನಬಹುದೇನೋ. ಆದರೆ ಇಂತಹ ‘ಚೇತರಿಕೆ’ಯ ಸಮಯದಲ್ಲೂ ಒಂದೆಡೆಯಲ್ಲಿ ಕಾರ್ಪೊರೇಟ್ ವಲಯ ಗಳಿಸುವ ಲಾಭದಲ್ಲಿ ತೀವ್ರ ಏರಿಕೆಯಾಗಿದೆ. ಇನ್ನೊಂದೆಡೆಯಲ್ಲಿ ಗ್ರಾಮೀಣ ಉದ್ಯೋಗ ಯೋಜನೆ ಅಡಿಯಲ್ಲಿ ದಾಖಲಾದ ಅರ್ಜಿದಾರರ ಸಂಖ್ಯೆಯೂ ತೀವ್ರವಾಗಿ ಏರಿದೆ. ಅಂದರೆ ನಾವೀಗ ಕಾಣುತ್ತಿರುವುದು ಒಂದು ಸೀಮಿತ ಚೇತರಿಕೆಯ ಜೊತೆಯಲ್ಲಿ ಮಿಗುತಾಯ ಮೌಲ್ಯದ ಹೆಚ್ಚಳ. ಅಂದರೆ ಶ್ರಮಜೀವಿಗಳ ಶೋಷಣೆಯ ಹೆಚ್ಚಳ – ಶ್ರಮಜೀವಿಗಳು ಇನ್ನಷ್ಟು ದುರವಸ್ಥೆಗೆ ತಳ್ಳಲ್ಪಡುತ್ತಿದ್ದಾರೆ.
ಈ ಶ್ರಮ ಒಳಸುರಿ ಇಳಿಕೆಯು ಶ್ರಮ-ಉಳಿತಾಯದ ತಾಂತ್ರಿಕ ಪ್ರಗತಿಯ ಕಾರಣದಿಂದ ಆಗಿಲ್ಲ ಎಂಬುದು ನಿಸ್ಸಂಶಯವಾಗಿದೆ. ಏಕೆಂದರೆ, ಅಂಥಹ ಶ್ರಮ-ಉಳಿತಾಯದ ತಾಂತ್ರಿಕ ಪ್ರಗತಿಗೆ ಬೇಕಾಗುವುದಕ್ಕಿಂತಲೂ ಬಲು ಕಡಿಮೆ ಅವಧಿ/ಕಾಲಮಾನದ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿದ್ದೇವೆ. ಆದ್ದರಿಂದ, ಇಂತಹ ಒಂದು ವಿದ್ಯಮಾನಕ್ಕೆ ಎರಡು ಸಂಭವನೀಯ ವಿವರಣೆಗಳನ್ನು ಮಾತ್ರ ಕೊಡಬಹುದು. ವ್ಯಯಿಸಿದ ಶ್ರಮ-ಗಂಟೆಗಳ ಚೇತರಿಕೆ ಮತ್ತು ಜಿಡಿಪಿಯು ಅದಕ್ಕಿಂತಲೂ ಹೆಚ್ಚು ಚೇತರಿಕೆಯಾಗಿರುವುದು.
ಮೊದಲನೆಯ ವಿವರಣೆಯು, “ನಿರ್ದಿಷ್ಟವಲ್ಲದ ವ್ಯವಹಾರ”ಗಳಿಗೆ ಸಂಬಂಧಿಸಿದ ಹುದ್ದೆಗಳೆಂದು ಕೆಲವು ಹುದ್ದೆಗಳನ್ನು ಗುರುತಿಸಿ ಆ ಹುದ್ದೆಗಳಲ್ಲಿದ್ದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಕ್ಕೆ ಸಂಬಂಧಿಸುತ್ತದೆ. ನೇರವಾಗಿ ಅಳೆಯಬಹುದಾದ ಉತ್ಪಾದನೆಯಲ್ಲಿ ತೊಡಗಿರದ ಉದ್ಯೋಗಿಗಳನ್ನು ಗುತ್ತಿಗೆ ಕಾರ್ಮಿಕರ ರೀತಿಯಲ್ಲಿ ಪರಿಗಣಿಸಿ ಅವರನ್ನು ಉತ್ಪತ್ತಿ ಕಡಿಮೆಯಾದಾಗ ಕೆಲಸದಿಂದ ತೆಗೆದುಹಾಕಲಾಗುತ್ತದೆ.
ಹೆಚ್ಚಿದ ಉತ್ಪಾದನೆಯೊಂದಿಗೆ ಅದರ ಪ್ರತಿ ಯೂನಿಟ್ ಉತ್ಪಾದನೆಗೆ ಶ್ರಮ ಒಳಸುರಿ (labour input) ಕಡಿತಗೊಳಿಸುವ ಎರಡನೆಯ ವಿವರಣೆ ಎಂದರೆ, ಚೇತರಿಕೆಯು ಕಡಿಮೆ ಶ್ರಮ ಒಳಸುರಿ ಇರುವ ವಲಯಗಳಲ್ಲಿ ಕೇಂದ್ರೀಕೃತವಾಗಿದ್ದರೆ, ಹೆಚ್ಚು ಶ್ರಮವನ್ನು ಅಥವಾ ಕಾರ್ಮಿಕರನ್ನು ಹೆಚ್ಚಾಗಿ ಬಳಸುವ ವಲಯಗಳ(labour-intensive) ಚೇತರಿಕೆಯು ಕುಂಠಿತಗೊಳ್ಳುತ್ತಿದೆ. ಕೃಷಿಯನ್ನು ಹೊರತುಪಡಿಸಿದ, ಕಾರ್ಮಿಕರನ್ನು ಹೆಚ್ಚಾಗಿ ಬಳಸುವ ಮತ್ತು ಲಾಕ್‌ಡೌನ್ ಹೊಡೆತವು ಬಲವಾಗಿದ್ದ ಅನೌಪಚಾರಿಕ ವಲಯವು ಇನ್ನೂ ಚೇತರಿಕೆಯಾಗದೆ ಉಳಿದಿರುವುದರಲ್ಲಿ ಈ ಅಂಶವು ಪ್ರಮುಖ ಪಾತ್ರ ವಹಿಸಿರಬಹುದು. ಅರ್ಥವ್ಯವಸ್ಥೆಯ ಅಷ್ಟೊ ಇಷ್ಟೊ ಚೇತರಿಕೆಯು ಮುಖ್ಯವಾಗಿ ಕಡಿಮೆ ಶ್ರಮ ಒಳಸುರಿ ಇರುವ ಕಾರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತಗೊಂಡಿದೆ.
ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಏಕೈಕ ಸಾಧ್ಯತೆಯೆಂದರೆ, ಬೇಡಿಕೆಯನ್ನು ಅದರಲ್ಲೂ ವಿಶೇಷವಾಗಿ ಗ್ರಾಹಕರ ಬೇಡಿಕೆಯನ್ನು ದೇಶದಲ್ಲಿ ಹೆಚ್ಚಿಸುವುದು. ಇದು, ಸಾಂಕ್ರಾಮಿಕಕ್ಕೆ ಸಿಲುಕಿ ಆರ್ಥಿಕ ತೊಂದರೆಗೊಳಗಾದವರಿಗೂ ಮತ್ತು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೂ ಬಹಳ ಮುಖ್ಯವಾಗುತ್ತದೆ. ಆದರೆ, ದೇಶದಲ್ಲಿ ಬೇಡಿಕೆಯನ್ನು ಈ ರೀತಿಯಲ್ಲಿ ಹೆಚ್ಚಿಸುವ ಯಾವ ಕ್ರಮವನ್ನೂ ಸರ್ಕಾರ ಮೂರನೇ ಪ್ಯಾಕೇಜಿನಲ್ಲೂ ಕೈಗೊಳ್ಳಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಸೀಮಿತ ಚೇತರಿಕೆಯ ಜೊತೆಯಲ್ಲಿ ಮಿಗುತಾಯ ಮೌಲ್ಯದ ಹೆಚ್ಚಳ. ಈ ವಿದ್ಯಮಾನವು ಚೇತರಿಕೆಯನ್ನು ತಡೆಹಿಡಿಯುತ್ತದೆ.
ಜಿಡಿಪಿಯ ಪ್ರತಿ ಯೂನಿಟ್‌ನಲ್ಲಿ ಶ್ರಮ ಒಳಸುರಿಯ ಜೊತೆಗೆ, ಕೂಲಿಯ ದರವೂ ಇಳಿದಿದೆ. ಆರ್‌ಬಿಐ ವರದಿಯೇ ಹೇಳಿರುವಂತೆ ಕಾರ್ಪೊರೇಟ್ ವಲಯದ ವೆಚ್ಚಗಳು ಕಡಿತಗೊಂಡಿವೆ. ಇಂತಹ ವೆಚ್ಚ-ಇಳಿಕೆಯ ಒಂದು ಪ್ರಮುಖ ಅಂಶವೆಂದರೆ, ಕೂಲಿ-ವೆಚ್ಚದ ಇಳಿಕೆಯೇ. ಈ ಇಳಿಕೆಯನ್ನು ಪ್ರತಿ ಯೂನಿಟ್ ಉತ್ಪಾದನೆಗೆ ತೊಡಗುವ ಸಮಯದಲ್ಲಿ ಮತ್ತು ಪ್ರತಿ ಕಾರ್ಮಿಕ-ಗಂಟೆಗೆ ಕೊಡುವ ಕೂಲಿಯಲ್ಲಿ ಇಳಿಕೆ ಮಾಡುವ ಮೂಲಕ ಸಾಧಿಸಲಾಗಿದೆ. ಇಂತಹ ಕಡಿತಗಳ ಕಾರಣದಿಂದಾಗಿ ವೆಚ್ಚಗಳು ಇಳಿಕೆಯಾಗಿರುವುದರಿಂದ ಈ ವಲಯವು ಹಲವು ತಿಂಗಳ ಬಳಿಕ ಮೊದಲ ಬಾರಿಗೆ ನಿವ್ವಳ ಲಾಭ ಗಳಿಸಿದೆ. ಇದು ಸಾಧ್ಯವಾಗಲು ಎರಡು ಕಾರಣಗಳಿವೆ. ಲಾಕ್‌ಡೌನ್ ಅವಧಿಗೆ ಹೋಲಿಸಿದರೆ, ಮಾರಾಟ ಹೆಚ್ಚಿದೆ ಮತ್ತು ಖರ್ಚು-ವೆಚ್ಚಗಳು ಇಳಿದಿವೆ.
ಈ ಸನ್ನಿವೇಶದಲ್ಲಿ, ಅನೌಪಚಾರಿಕ ವಲಯದ ದುಃಸ್ಥಿತಿ ಮುಂದುವರೆದರೆ, ಉದ್ಯೋಗಗಳು ಗಣನೀಯವಾಗಿ ನಶಿಸುತ್ತವೆ. ಅದೇ ರೀತಿಯಲ್ಲಿ, ವೇತನ ಪಡೆಯುತ್ತಿರುವ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದರೆ ಅಥವಾ ಇಡೀ ಕಾರ್ಮಿಕ ಸಮುದಾಯದ ಮೇಲೆ ಒಂದು ವೇತನ ಕಡಿತವನ್ನು ಹೇರಿದರೆ, ಅವರು ನೀಲಿ ಕಾಲರ್ ಕಾರ್ಮಿಕರೇ ಇರಲಿ ಅಥವಾ ಬಿಳಿ ಕಾಲರ್ ನೌಕರರೇ ಆಗಿರಲಿ, ಅವರ ಪ್ರತಿ ಕಾರ್ಮಿಕ-ಗಂಟೆಯ ಆದಾಯದ ನಷ್ಟವಾಗುತ್ತದೆ ಎಂದರ್ಥ. ಈ ಎರಡೂ ವಿಧಾನಗಳು ಪ್ರತಿ ಯೂನಿಟ್ ಜಿಡಿಪಿಯಲ್ಲಿ ಕಾರ್ಮಿಕರ ಆದಾಯವನ್ನು ಕಡಿಮೆ ಮಾಡುತ್ತವೆ. ಅಂದರೆ, ಲಾಕ್‌ಡೌನ್‌ನಿಂದಾಗಿ ಪಾತಾಳಕ್ಕೆ ಇಳಿದ ಜಿಡಿಪಿಯ ಚೇತರಿಕೆಯ ಪ್ರಕ್ರಿಯೆಯಲ್ಲಿ ಕಾರ್ಮಿಕರನ್ನು ಸಂಪೂರ್ಣ ದುಃಸ್ಥಿತಿಗೆ ತಳ್ಳಿದಂತಾಗುತ್ತದೆ. ಜಿಡಿಪಿ ಚೇತರಿಕೆಯು ಇನ್ನೂ ಸಾಂಕ್ರಾಮಿಕ ಪೂರ್ವಕ್ಕಿಂತಲೂ ಕೆಳ ಮಟ್ಟದಲ್ಲಿದ್ದರೂ, ದುಡಿಯುವ ಜನರ ಸರಾಸರಿ ಜೀವನ ಮಟ್ಟವು ಸಾಂಕ್ರಾಮಿಕ ಪೂರ್ವಕ್ಕಿಂತ ಕೆಳ ಮಟ್ಟದಲ್ಲಿಯೇ ಇದೆ. ಆದ್ದರಿಂದ, ಈ ಚೇತರಿಕೆಯ ಪ್ರಕ್ರಿಯೆಯಲ್ಲಿ ಮಿಗುತಾಯ ಮೌಲ್ಯದ ದರ ಹೆಚ್ಚುತ್ತಿದೆ.
ಎರಡು ತುಣುಕು ಸಾಕ್ಷ್ಯಗಳು ಈ ಪರಿಸ್ಥಿತಿಯನ್ನು ದೃಢೀಕರಿಸುತ್ತವೆ. ಮೊದಲನೆಯದು, ಈಗಾಗಲೇ ಹೇಳಿದಂತೆ, ಕಾರ್ಪೊರೇಟ್ ವಲಯವು ಗಳಿಸುವ ಲಾಭದಲ್ಲಿ ತೀವ್ರ ಏರಿಕೆ. ಈ ಅಂಶವನ್ನು, ಶೇರು ಮಾರುಕಟ್ಟೆ(ಸ್ಟಾಕ್ ಎಕ್ಸ್ ಚೇಂಜ್) ಪಟ್ಟಿಯಲ್ಲಿರುವ ಎಲ್ಲಾ ಹಣಕಾಸೇತರ ಕಂಪನಿಗಳ ಒಟ್ಟು ಬಂಡವಾಳದಲ್ಲಿ 80% ಪಾಲು ಹೊಂದಿರುವ 887 ಹಣಕಾಸೇತರ ಕಂಪನಿಗಳ ವಹಿವಾಟು ವರದಿಗಳು ತಿಳಿಸುತ್ತವೆ. ಈ ಬಗ್ಗೆ, ಆರ್‌ಬಿಐ ಮಾಸಿಕ ಬುಲೆಟಿನ್ ಹೀಗೆ ಹೇಳುತ್ತದೆ: “…ಸೆಪ್ಟೆಂಬರ್ 2020ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಈ ಕಂಪನಿಗಳ ಖರ್ಚುವೆಚ್ಚಗಳು ಅವುಗಳ ಮಾರಾಟಕ್ಕಿಂತ ವೇಗವಾಗಿ ಕುಸಿದವು, … ಸತತ ಎರಡು ತ್ರೈಮಾಸಿಕಗಳಲ್ಲಿ ಕುಗ್ಗಿದ ನಂತರ ಅವುಗಳ ಕಾರ್ಯಾಚರಣಾ ಲಾಭದಲ್ಲಿ ತೀವ್ರ ಏರಿಕೆಯಾಗಿದೆ”.
ಎರಡನೆಯದು, ಗ್ರಾಮೀಣ ಉದ್ಯೋಗ ಯೋಜನೆ ಅಡಿಯಲ್ಲಿ ದಾಖಲಾದ ಅರ್ಜಿದಾರರ ತೀವ್ರ ಏರಿಕೆ. ಅಕ್ಟೋಬರ್‌ನಲ್ಲಿ ಅರ್ಜಿದಾರರ ಸಂಖ್ಯೆಯು 91.3% ಏರಿಕೆಯಾದ ಅಂಶವು ಅವರಿಗೆ ಬೇರೆ ಕಡೆ ಉದ್ಯೋಗ ಸಿಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಪಟ್ಟಣಗಳಿಂದ ಕೆಲಸಗಾರರು ತಮ್ಮ ತಮ್ಮ ಊರುಗಳಿಗೆ ತೆರಳಿದ ಹಿಮ್ಮುಖ ವಲಸೆಯ ಕಾರಣದಿಂದಾಗಿ ಅಲ್ಲಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿತ್ತು. ಆದರೆ, ದೇಶದ ಅರ್ಥವ್ಯವಸ್ಥೆಯಲ್ಲಿ ಕಂಡುಬಂದ ಚೇತರಿಕೆಯು, ಹಿಮ್ಮುಖ ವಲಸೆಯ ಕಾರಣದಿಂದ ಉಂಟಾದ ಸಂಕಷ್ಟಗಳನ್ನು ಸ್ವಲ್ಪವೂ ಪರಿಹರಿಸಲಿಲ್ಲ. ಜೊತೆಗೆ, ಈ ಅಂಶವು, ನಗರ ಅನೌಪಚಾರಿಕ ವಲಯವು ಇನ್ನೂ ಚೇತರಿಸಿಕೊಂಡಿಲ್ಲ ಎಂಬುದನ್ನು ತಿಳಿಸುತ್ತದೆ.
ಜಿಡಿಪಿಯ ಮಟ್ಟಕ್ಕೆ ಹೋಲಿಸಿದರೆ ದುಡಿಯುವ ಜನರ ಸ್ಥಿತಿ-ಗತಿಗಳು ಸಂಪೂರ್ಣವಾಗಿ ಹದಗೆಟ್ಟಿದ್ದರೂ ಸಹ ಅರ್ಥವ್ಯವಸ್ಥೆಯಲ್ಲಿ ಚೇತರಿಕೆಯಾಗುತ್ತಿದೆ ಎಂದಾದರೆ, ಅದು ಅನುಭೋಗದ ಬೇಡಿಕೆಯು ಎರವಲಿನ ಮೇಲೆ ನಿಂತಿದೆ ಎಂದಾಗುತ್ತದೆ ಅಥವಾ ಇದ್ದ ಬದ್ದ ನಗದು ಹಣವನ್ನೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎಂದಾಗುತ್ತದೆ. ಈ ಪರಿಸ್ಥಿತಿಯು ಹೆಚ್ಚು ಕಾಲ ಮುಂದುವರೆಯುವುದು ಶಕ್ಯವಿಲ್ಲ. ನಿರುದ್ಯೋಗದಿಂದಾಗಿ ಕಡಿಮೆಯಾಗುವ ಕಾರ್ಮಿಕರ ಆದಾಯವು ಅವರ ಸ್ಥಿತಿ-ಗತಿಗಳನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಇದು ಶೀಘ್ರವಾಗಿ ಬಳಕೆ-ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಒಟ್ಟಾರೆ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹಂತದಲ್ಲಿ ಚೇತರಿಕೆಯು ಕೊನೆಗೊಳ್ಳುತ್ತದೆ.
ಅರ್ಥಶಾಸ್ತ್ರಜ್ಞರು, ನಾಗರಿಕ ಸಮಾಜ-ಪರ ಗುಂಪುಗಳು, ಹಲವು ರಾಜಕೀಯ ಪಕ್ಷಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಎಡಪಕ್ಷಗಳು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸಹ, ಮೋದಿ ಸರ್ಕಾರವು ಮಿಸುಕಾಡಿಲ್ಲ. ಜನರ ಕೊಳ್ಳುವ ಶಕ್ತಿಯು ಹೆಚ್ಚದಿದ್ದರೆ ಚೇತರಿಕೆಯನ್ನು ಆರಂಭದಲ್ಲೇ ಚಿವುಟಿಹಾಕಿದಂತಾಗುತ್ತದೆ ಎಂಬ ಅವರ ಎಚ್ಚರಿಕೆಯೂ ಕಿವುಡನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಸರಕಾರವು ಕಾಲಕಾಲಕ್ಕೆ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳಲ್ಲಿ ಬಹುತೇಕ ಕ್ರಮಗಳು, ಇವುಗಳಲ್ಲಿ ಇತ್ತೀಚಿನದೂ ಸೇರಿದಂತೆ, ಸಂಪೂರ್ಣವಾಗಿ ಅಸಮರ್ಪಕವಾಗಿರುವುದರ ಹೊರತಾಗಿ, ಬಂಡವಾಳಗಾರರ ಜೀವನವನ್ನು ಸುಗಮಗೊಳಿಸುವಲ್ಲಿ ಪರಿಣಮಿಸಿವೆ, ಅಷ್ಟೇ. ಆದರೆ, ಅವರ ಜೀವನ ಸುಗಮವಾಗಿದ್ದರೂ, ಭಾರತದ “ಸುಗಮ-ವ್ಯವಹಾರ” ಸೂಚ್ಯಂಕದಲ್ಲಿ ಪ್ರಗತಿಯಾಗಿದ್ದರೂ, ಒಟ್ಟಾರೆ ಬೇಡಿಕೆಯಲ್ಲಿ ಹೆಚ್ಚಳವಾಗದ ಹೊರತು ಬಂಡವಾಳಗಾರರು ಈ ದೇಶದಲ್ಲಿ ಬಂಡವಾಳ ಹೂಡುವುದಿಲ್ಲ ಎಂಬುದಂತೂ ಸ್ಪಷ್ಟ.
ಹೋದೆಯಾ ಪಿಶಾಚಿ ಎಂದರೆ ಬಂದೇ ಗವಾಕ್ಷೀಲಿ ಎನ್ನುವಂತೆ, ಇನ್ನೇನು ಪೀಡೆ ತೊಲಗಿತು ಎಂದುಕೊಂಡ ಸ್ಥಳಗಳಲ್ಲೂ ಕೊರೊನಾ ವೈರಸ್ ಮತ್ತೆ ಕಾಣಿಸಿಕೊಳ್ಳತೊಡಗಿರುವ ಮತ್ತು ಯುಎಸ್‌ಎ ಮತ್ತಿತರ ದೇಶಗಳಲ್ಲಿ ತಾತ್ಕಾಲಿಕವಾಗಿಯೂ ಕಣ್ಮರೆಯಾಗದಿರುವ ಅಂಶಗಳು, ರಫ್ತು ಹೆಚ್ಚಳದ ಮೂಲಕ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತದೆ ಎಂಬ ನಂಬಿಕೆಯನ್ನು ಅಲುಗಾಡಿಸಿವೆ.
ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಏಕೈಕ ಸಾಧ್ಯತೆಯೆಂದರೆ, ಬೇಡಿಕೆಯನ್ನು ಅದರಲ್ಲೂ ವಿಶೇಷವಾಗಿ ಗ್ರಾಹಕರ ಬೇಡಿಕೆಯನ್ನು ದೇಶದಲ್ಲಿ ಹೆಚ್ಚಿಸುವುದು. ಇದು, ಸಾಂಕ್ರಾಮಿಕಕ್ಕೆ ಸಿಲುಕಿ ಆರ್ಥಿಕ ತೊಂದರೆಗೊಳಗಾದವರಿಗೂ ಮತ್ತು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೂ ಬಹಳ ಮುಖ್ಯವಾಗುತ್ತದೆ. ಆದರೆ, ದೇಶದಲ್ಲಿ ಬೇಡಿಕೆಯನ್ನು ಈ ರೀತಿಯಲ್ಲಿ ಹೆಚ್ಚಿಸುವ ಯಾವ ಕ್ರಮವನ್ನೂ ಸರ್ಕಾರ ಕೈಗೊಳ್ಳಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಕಾಣುವುದು ಏನೆಂದರೆ, ಒಂದು ಸೀಮಿತ ಚೇತರಿಕೆಯ ಜೊತೆಯಲ್ಲಿ ಮಿಗುತಾಯ ಮೌಲ್ಯದ ಹೆಚ್ಚಳ. ಈ ವಿದ್ಯಮಾನವು ಚೇತರಿಕೆಯನ್ನು ತಡೆಹಿಡಿಯುತ್ತದೆ.
ಅನು: ಕೆ.ಎಂ.ನಾಗರಾಜ್