– ನಾ ದಿವಾಕರ
ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣದಲ್ಲಿ ಸಂಸ್ಕೃತಿಯೂ ಬಳಕೆಯ ವಸ್ತುವಾಗುತ್ತದೆ
ಇಡೀ ದೇಶವನ್ನು ಉನ್ಮಾದದ ಭ್ರಮಾಲೋಕದಲ್ಲಿ ತೇಲಿಸಿದ ಅಯೋಧ್ಯೆಯ ರಾಮಮಂದಿರ ಕೊನೆಗೂ ಸಾಕಾರಗೊಂಡಿದೆ. ಹಿಂದುತ್ವ ರಾಜಕಾರಣದ ಪ್ರಧಾನ ಕೆಂದ್ರಬಿಂದು ಆಗಿರುವ ಮಿಲೆನಿಯಂ ಜನಸಂಖ್ಯೆ, ಅಂದರೆ 1990-2000 ದಶಕದ ನಂತರ ಜನಿಸಿದ ಒಂದು ಬೃಹತ್ ಜನಸಮೂಹವನ್ನು ಈ ಉನ್ಮಾದ ಖಚಿತ ದಿಕ್ಕಿನಲ್ಲಿ ಕರೆದೊಯ್ಯುವ ಸಾಧ್ಯತೆಗಳಿವೆ. ಏಕೆಂದರೆ ನವಭಾರತದಲ್ಲಿ ಶೇ 40ರಷ್ಟಿರುವ ಈ ಜನಸಂಖ್ಯೆಗೆ 1992 ನೆನಪಿರುವುದಿಲ್ಲ. ಇದರ ಹಿಂದಿನ ಪೀಳಿಗೆಗೆ ಅಂದರೆ 1960-70ರ ತಲೆಮಾರಿನ ಹಿತವಲಯದ ವಯಸ್ಕರಿಗೆ 1992 ಉದ್ದೇಶಪೂರ್ವಕವಾಗಿ ವಿಸ್ಮೃತಿಗೆ ಜಾರಬಹುದಾದ ಒಂದು ವರ್ಷ. ಬದಲಾಗುತ್ತಿರುವ ಭಾರತ ಮತ್ತು ಜಗತ್ತಿನ ಅಗ್ರಮಾನ್ಯ ದೇಶವಾಗಲು ಸಜ್ಜಾಗುತ್ತಿರುವ ಅಮೃತ ಕಾಲದ ಭಾರತಕ್ಕೆ ಸಾಕ್ಷೀಭೂತರಾಗಿ ನಿಲ್ಲುವ ಈ ನವಪೀಳಿಗೆಯ ಬಹುಸಂಖ್ಯೆಯ ಜನತೆಗೆ ಅಯೋಧ್ಯೆಯಲ್ಲಿ ಭವಿಷ್ಯದ ಭಾರತ ಕಾಣುತ್ತದೆ, ವರ್ತಮಾನದ ವೈರುಧ್ಯಗಳಾಗಲೀ, ಭೂತಕಾಲದ ದುರಂತಗಳಾಗಲೀ ಗಣನೆಗೆ ಬರುವುದಿಲ್ಲ. ರಾಮರಾಜ್ಯ
1990ರಲ್ಲಿ ಅಧಿಕೃತವಾಗಿ, ಅಧಿಕಾರಯುತವಾಗಿ ಭಾರತವನ್ನು ಪ್ರವೇಶಿಸಿದ ನವ ಉದಾರವಾದಿ ಜಾಗತೀಕರಣದ ಆರ್ಥಿಕತೆ ಭಾರತೀಯ ಸಮಾಜದಲ್ಲಿದ್ದ ಪ್ರಜಾಸತ್ತಾತ್ಮಕ ಸೂಕ್ಷ್ಮತೆಯ ಪಳೆಯುಳಿಕೆಗಳನ್ನೂ ಹಂತಹಂತವಾಗಿ ಕೊನೆಗಾಣಿಸಲಾರಂಭಿಸಿದ್ದನ್ನು, ಹಿಂದುತ್ವ ರಾಜಕಾರಣದ ಉಗಮ ಮತ್ತು ಬೆಳವಣಿಗೆಗಳಲ್ಲಿ ಕಾಣಬಹುದು. 1992ರ ಬಾಬ್ರಿ ಮಸೀದಿಯ ಧ್ವಂಸ ಈ ಬೆಳವಣಿಗೆಯ ಫ್ಲ್ಯಾಶ್ ಪಾಯಿಂಟ್ ಎಂದು ಹೇಳಬಹುದು. ಚರಿತ್ರೆಯಲ್ಲಿ ಸಂಭವಿಸಿರಬಹುದಾದ ಪ್ರಮಾದಗಳನ್ನು ವರ್ತಮಾನದಲ್ಲಿ ಸರಿಪಡಿಸುವ ಒಂದು ಚಿಂತನಾವಾಹಿನಿಗೆ ಪುಷ್ಟಿ ನೀಡಿದ್ದು 1989-92ರ ನಡುವಿನ ಘಟನಾವಳಿಗಳು. ಈ ಬೆಳವಣಿಗೆಗಳ ನೇರ ಫಲಾನುಭವಿಯಾಗಿ ಬಿಜೆಪಿ ತನ್ನ ಕನಸಿನ ರಾಮಮಂದಿರವನ್ನು ನಿರ್ಮಿಸಿ, ವರ್ತಮಾನದ ಭಾರತಕ್ಕೆ ಹೊಸ ದಿಕ್ಸೂಚಿಯನ್ನು ನೀಡಲು ಸಜ್ಜಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಂದಿಗೂ ಇಂದಿಗೂ ವಿರೋಧ ಕಾಣುವುದು ವಸ್ತುಶಃ ರಾಮಮಂದಿರ ನಿರ್ಮಾಣಕ್ಕೆ ಅಲ್ಲ ಬದಲಾಗಿ ಕೆಡವಿದ ಮಸೀದಿಯೊಂದರ ಮೇಲೆ ನಿರ್ಮಿಸಲಾಗುವ ಮಂದಿರಕ್ಕೆ. ರಾಮರಾಜ್ಯ
ಜಾತ್ಯತೀತತೆಯ ವೈರುಧ್ಯಗಳು
ಮೂಲತಃ ಇಲ್ಲಿ ಗಮನಿಸಬೇಕಾಗಿರುವುದು ಬದಲಾದ ಭಾರತದ ಹೊಸ ರಾಜಕೀಯ ವಾತಾವರಣ ಮತ್ತು ಸ್ವಾತಂತ್ರ್ಯಪೂರ್ವದಲ್ಲೇ ನಿರ್ವಚಿಸಲ್ಪಟ್ಟಿದ್ದ ಭಾರತೀಯ ಪ್ರಜಾಪ್ರಭುತ್ವದ ಸಾಂವಿಧಾನಿಕ ಆಶಯಗಳ ವಸ್ತುಸ್ಥಿತಿ. ಸ್ವಾತಂತ್ರ್ಯಾನಂತರ ಭಾರತದ ಆಳುವ ವ್ಯವಸ್ಥೆ ಅನುಸರಿಸಿಕೊಂಡು ಬಂದಿದ್ದ ಜಾತ್ಯತೀತತೆ ಇಂದು ಸಾಮಾಜಿಕ ಪರಿಶೋಧನೆಗೊಳಗಾಗಿದೆ. ಮತ ನಿರಪೇಕ್ಷತೆ ಅಥವಾ ಸರ್ವ ಧರ್ಮ ಸಮಭಾವ ಎಂಬ ಎರಡು ನೆಲೆಗಳಲ್ಲಿ ನಿರ್ವಚಿಸಲ್ಪಟ್ಟಿರುವ ಭಾರತದ ಸೆಕ್ಯುಲರಿಸಂ ವರ್ತಮಾನ ಭಾರತದಲ್ಲಿ ನಗೆಪಾಟಲಿಗೀಡಾಗುವಷ್ಟು ಅಪಭ್ರಂಶಗಳನ್ನು ಹೊತ್ತುಕೊಂಡಿದೆ. ಸರ್ಕಾರದ ನೇತೃತ್ವ ವಹಿಸುವ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಧಾರ್ಮಿಕ ಆಚರಣೆ/ವಿಧಿವಿಧಾನಗಳಿಂದ ಅಂತರ ಕಾಯ್ದುಕೊಳ್ಳುವ ಉನ್ನತಾದರ್ಶಗಳು ಇಂದು ಸಂಪೂರ್ಣವಾಗಿ ಭಗ್ನಗೊಂಡಿರುವುದನ್ನು ಅಯೋಧ್ಯೆಯಲ್ಲೂ ಕಂಡಿದ್ದೇವೆ, ಕರ್ನಾಟಕದಲ್ಲೂ ಕಂಡಿದ್ದೇವೆ. ರಾಮಮಂದಿರ ವಿವಾದ ಸೃಷ್ಟಿಸಿದ ಪರ-ವಿರೋಧದ ಧ್ವನಿಗಳು ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ರಾಜಕೀಯವಾಗಿ ಅಯೋಧ್ಯೆಯ ರಾಮ ಇಂದು, ಎಡಪಕ್ಷಗಳನ್ನು ಹೊರತುಪಡಿಸಿ, ಎಲ್ಲ ಪಕ್ಷಗಳಿಗೂ ಆಪ್ತನಾಗಿದ್ದಾನೆ. ರಾಮರಾಜ್ಯ
ಈ ನಡುವೆಯೇ ಬಿಜೆಪಿ ಮತ್ತು ಸಂಘಪರಿವಾರದ ದಶಕಗಳ ಕನಸು, ರಾಮಮಂದಿರ ನಿರ್ಮಾಣ, ಸಾಕಾರಗೊಂಡಿರುವುದು ಹಿಂದುತ್ವ ರಾಜಕಾರಣಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ. ಭಾರತದ ಉದ್ದಗಲಕ್ಕೂ ಜನಮಾನಸದಲ್ಲಿ ಒಂದು ರೂಪಕವಾಗಿ ನೆಲೆಗೊಂಡಿದ್ದ ವಾಲ್ಮೀಕಿಯ ರಾಮ ಇಂದಿಗೂ ಸಹ ಹಳ್ಳಿಗಾಡುಗಳಿಂದ ಮೆಟ್ರೋಪಾಲಿಟನ್ ನಗರಗಳವರೆಗೂ ತನ್ನ ಮೂಲ ಅಸ್ತಿತ್ವ ಉಳಿಸಿಕೊಂಡೇ ಬಂದಿದ್ದಾನೆ. ಭಾರತದ ಕಾವ್ಯಗಳಲ್ಲಿ, ರಂಗಭೂಮಿಕೆಗಳಲ್ಲಿ, ಸಾಹಿತ್ಯಕ ಅಭಿವ್ಯಕ್ತಿಯಲ್ಲಿ, ನೃತ್ಯಕಲೆ-ಚಿತ್ರಕಲೆಯಲ್ಲಿ ವಾಲ್ಮೀಕಿಯ ರಾಮ ಕಲಾತ್ಮಕ, ಕ್ರಿಯಾಶೀಲ, ಸೃಜನಶೀಲ ಅಭಿವ್ಯಕ್ತಿಗಳಿಗೆ ಒಂದು ರೂಪಕವಾಗಿ ಉಳಿದುಕೊಂಡು ಬಂದಿದ್ದಾನೆ. ದೇವನೂರು ಮಹದೇವ ಅವರ ಭಾಷೆಯಲ್ಲಿ ಹೇಳುವುದಾದರೆ ಯಾರ ಜಪ್ತಿಗೂ ಸಿಗದಂತೆ ವಾಲ್ಮೀಕಿಯ ರಾಮ ಭಾರತೀಯ ಸಮಾಜದಲ್ಲಿ ತನ್ನದೇ ಆದ ಕಾವ್ಯಾತ್ಮಕ ಸ್ವರೂಪದಲ್ಲಿ ರೂಪಕವಾಗಿ ಜೀವಂತವಾಗಿದ್ದಾನೆ. ರಾಮರಾಜ್ಯ
ಆದರೆ ಅಯೋಧ್ಯೆ ಮತ್ತು ರಾಮಮಂದಿರ ಈಗ ವಾಲ್ಮೀಕಿಯ ರಾಮನನ್ನು ಹೊರತಂದು ಅಧಿಕಾರ ರಾಜಕಾರಣದ ಕಣದಲ್ಲಿ ನಿಲ್ಲಿಸಿದೆ. ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡಂತೆ ಎಲ್ಲ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳೂ ರಾಮಮಂದಿರಕ್ಕೆ ನಿಷ್ಠೆ ತೋರುವ ಮೂಲಕ ಹಿಂದೂ ಮತಬ್ಯಾಂಕುಗಳನ್ನು ದೃಢಪಡಿಸಿಕೊಳ್ಳಲು ಸಜ್ಜಾಗಿವೆ. ಜನಮಾನಸದ ನಂಬಿಕೆಯ ವಸ್ತುವಾಗಿರುವ ವಾಲ್ಮೀಕಿಯ ರಾಮ ಇಂದಿಗೂ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ಗಟ್ಟಿಯಾಗಿರುವಂತೆಯೇ, ಬಿಜೆಪಿ-ಸಂಘಪರಿವಾರದ ಅಯೋಧ್ಯೆಯ ರಾಮಮಂದಿರ ಅಧಿಕಾರ ರಾಜಕಾರಣಕ್ಕೆ ಚುನಾವಣೆಯಲ್ಲಿ ಬಳಸಿಕೊಳ್ಳಬಹುದಾದ ವಸ್ತುವಾಗಿರುವುದು ವಾಸ್ತವ. ಬಿಜೆಪಿ ಈ ನಿಟ್ಟಿನಲ್ಲಿ ಬಹುತೇಕ ನಾಲ್ಕು ದಶಕಗಳ ಕಾರ್ಯಯೋಜನೆಯನ್ನು ಸಾಕಾರಗೊಳಿಸಿದ್ದು 2024ರ ಚುನಾವಣೆಯಲ್ಲಿ ಲಾಭವನ್ನೂ ಗಳಿಸಲಿದೆ. ಈ ಲಾಭದ ಒಂದು ಪಾಲನ್ನಾದರೂ ಗಿಟ್ಟಿಸಿಕೊಳ್ಳಲು ಇತರ ಮುಖ್ಯವಾಹಿನಿ ಪಕ್ಷಗಳೂ ಸಿದ್ಧತೆ ನಡೆಸಿವೆ. ರಾಮರಾಜ್ಯ
ಇದನ್ನು ಓದಿ :ಪುಣೆ | ‘ಜೈ ಶ್ರೀ ರಾಮ್’ ಕೂಗುತ್ತಾ ಎಫ್‌ಟಿಐಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಹಿಂದುತ್ವದ ಗುಂಪು
ಬಂಡವಾಳದ ಸಾಂಸ್ಕೃತಿಕ ವ್ಯಾಪ್ತಿ
1992ರಲ್ಲಿ ಅಯೋಧ್ಯೆ-ಮಂಡಲ್ ವರದಿ ವಿವಾದದ ಹಿನ್ನೆಲೆಯಲ್ಲೇ ಭಾರತದಲ್ಲಿ ರಾಜಕೀಯ ಪಲ್ಲಟಗಳನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನವ ಉದಾರವಾದಿ ಆರ್ಥಿಕ ನೀತಿಗಳು ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣವನ್ನು ನಿರ್ದೇಶಿಸಿರುವ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಹಜವಾಗಿಯೇ ಸಮಾಜದ ಎಲ್ಲ ಸ್ತರಗಳಲ್ಲೂ ವ್ಯಾಪಿಸುವಂತಹ ಎಲ್ಲ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ವಿದ್ಯಮಾನಗಳನ್ನೂ ಮಾರುಕಟ್ಟೆಯ ಸರಕುಗಳಂತೆ ಪರಿವರ್ತಿಸಲಾಗುತ್ತದೆ. Commodification ಅಥವಾ ಸರಕೀಕರಣ ಪ್ರಕ್ರಿಯೆಯಲ್ಲಿ ಜನಬಳಕೆಯ ವಸ್ತುಗಳಂತೆಯೇ ಜನಸಾಮಾನ್ಯರ ನಿತ್ಯ ಜೀವನದಲ್ಲಿ ಬೇಕಾಗುವ ಮನರಂಜನೆಯ ವಸ್ತುಗಳನ್ನೂ, ಕಲೆ-ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ, ಬೌದ್ಧಿಕ ಚಟುವಟಿಕೆಗಳನ್ನೂ, ತಳಮಟ್ಟದಲ್ಲೂ ಆಚರಿಸಲಾಗುವ ಧಾರ್ಮಿಕ ವಿಧಿವಿಧಾನಗಳನ್ನೂ, ಇವುಗಳಿಗೆ ನೆಲೆ ನೀಡುವ ಶ್ರದ್ಧಾನಂಬಿಕೆಗಳನ್ನೂ ಸಹ ಒಳಗೊಳ್ಳಲಾಗುತ್ತದೆ. ಹಾಗಾಗಿಯೇ ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ಕೊಡಲ್ಪಡುವ ಚಲನಚಿತ್ರ, ರಂಗಭೂಮಿ, ದೃಶ್ಯಕಲೆ ಮತ್ತು ಗ್ರಾಂಥಿಕ ಸಾಹಿತ್ಯಗಳೂ ಸಹ ಸರಕೀಕರಣಕ್ಕೊಳಗಾಗುತ್ತವೆ. ರಾಮರಾಜ್ಯ
ಕಳೆದ ಎರಡು ಮೂರು ದಶಕಗಳಲ್ಲಿ ವಿವಿಧ ಭಾಷೆಯ ಚಲನಚಿತ್ರಗಳು ಪ್ಯಾನ್ ಇಂಡಿಯಾ ಸ್ವರೂಪವನ್ನು ಗಳಿಸಿರುವುದು ಹಾಗೂ ಮೊದಲಿನಿಂದಲೂ ಪ್ಯಾನ್ ಇಂಡಿಯಾ ವ್ಯಾಪ್ತಿ ಹೊಂದಿದ್ದ ಬಾಲಿವುಡ್ ಚಿತ್ರರಂಗ ಅಂತಾರಾಷ್ಟ್ರೀಯ ಹರವು ಪಡೆದುಕೊಂಡಿರುವುದನ್ನು ಈ ಹಿನ್ನೆಲೆಯಲ್ಲೇ ಗಮನಿಸಬೇಕಿದೆ. 1970-2000ದ ಅವಧಿಯಲ್ಲಿ ತಯಾರಾದಂತಹ ಸೃಜನಾತ್ಮಕ ಚಲನಚಿತ್ರಗಳ ಪರಂಪರೆಗೆ ಇತಿಶ್ರೀ ಹಾಡಿರುವ ಚಿತ್ರರಂಗ ಕಳೆದ ಎರಡು ದಶಕಗಳಲ್ಲಿ ಹೆಚ್ಚು ಹೆಚ್ಚಾಗಿ ದೇಶದ ರಾಜಕೀಯ ವಿದ್ಯಮಾನಗಳಿಗೆ ಪೂರಕವಾಗಿ, ಸಾಂಸ್ಕೃತಿಕ ರಾಜಕಾರಣದ ದೃಶ್ಯ-ರಾಯಭಾರಿಗಳಾಗಿ ಪರಿವರ್ತನೆ ಹೊಂದಿರುವುದನ್ನು ಗಮನಿಸಬೇಕಿದೆ. ಮಾಜಿ-ಹಾಲಿ ಪ್ರಧಾನಿಗಳ ಬಯೋಪಿಕ್‌ಗಳು, ಪುರಾಣ ಮತ್ತು ಇತಿಹಾಸದಿಂದ ಹೆಕ್ಕಿ ತೆಗೆದ ನಿರ್ದಿಷ್ಟ ಕಥನಗಳು ಬೆಳ್ಳಿ ಪರದೆಯನ್ನು ಆಕ್ರಮಿಸಿರುವುದೇ ಅಲ್ಲದೆ, ಆಳುವ ಪಕ್ಷಗಳ, ವಿಶೇಷವಾಗಿ ಬಿಜೆಪಿಯ ತಾತ್ವಿಕ ನೆಲೆಗಳನ್ನು ತಳಮಟ್ಟದ ಸಮಾಜಕ್ಕೆ ತಲುಪಿಸಲು ಸಮಕಾಲೀನ ಹಾಗೂ ಗತ ಇತಿಹಾಸ-ಪುರಾಣಗಳ ಚೌಕಟ್ಟಿನಲ್ಲಿ ಚಲನಚಿತ್ರ ಮಾಧ್ಯಮವನ್ನು ಬಳಸಿಕೊಳ್ಳಲಾಗಿದೆ. ಸಹಜವಾಗಿಯೇ ಬಿಜೆಪಿ ಇದರ ಪ್ರಧಾನ ಫಲಾನುಭವಿಯಾಗಿದೆ. ರಾಮರಾಜ್ಯ
ತಂತ್ರಜ್ಞಾನ ಯುಗದ ಕ್ರಾಂತಿಕಾರಿ ಮುನ್ನಡೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಅತಿವೇಗದ ಪ್ರಸರಣ ಸಂವಹನ ಸಾಧನಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿರುವುದರಿಂದ, ದೃಶ್ಯ ಮಾಧ್ಯಮಗಳಷ್ಟೇ ಪರಿಣಾಮಕಾರಿಯಾಗಿ ಶ್ರವ್ಯ ಮಾಧ್ಯಮಗಳನ್ನೂ ಬಳಸಿಕೊಳ್ಳಲಾಗಿದೆ. ತಿರುಚಿದ ಇತಿಹಾಸ, ವಿಕೃತಗೊಳಿಸಿದ ಪುರಾಣ ಕಥನಗಳು ಹಾಗೂ ಬೌದ್ಧಿಕವಾಗಿ ಖಾಸಗಿವಲಯದಲ್ಲಿ ಉತ್ಖನನವಾಗುವ ಮಾನವ ಚರಿತ್ರೆಯ ಮಾಹಿತಿ-ದತ್ತಾಂಶಗಳನ್ನು ಪುಂಖಾನುಪುಂಖವಾಗಿ ಸಾಮಾನ್ಯ ಜನರ ಮುಂದಿರಿಸಲು ಆಂಡ್ರಾಯ್ಡ್ ತಂತ್ರಜ್ಞಾನ ನೆರವಾಗಿದೆ. ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವ ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು ಆಕ್ರಮಿಸಿರುವ ಹೊಸ ತಂತ್ರಜ್ಞಾನಾಧಾರಿತ ಬೌದ್ಧಿಕತೆ ಅಲ್ಲಿನ ತಳಸಮುದಾಯಗಳನ್ನೂ ಆಕರ್ಷಿಸಿದ್ದು, ಮೂಲ ಜನಸಂಸ್ಕೃತಿಗಳೂ ವೈದಿಕೀಕರಣಕ್ಕೊಳಗಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಜನಸಂಸ್ಕೃತಿಯನ್ನು ಪ್ರತಿನಿಧಿಸುವ ತಳಸಮುದಾಯಗಳೂ ಸಹ ಈ ಮನ್ವಂತರವನ್ನು ಒಪ್ಪಿಕೊಳ್ಳುವಂತೆ ಮಾಡಲು ಹಿಂದೂ ಅಸ್ಮಿತೆಯನ್ನು ಮುಂದಿಡಲಾಗುತ್ತಿದೆ. ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರತಿಷ್ಠಾಪನೆಯ ಸುತ್ತ ನಡೆದ ವಿಧಿವಿಧಾನಗಳು ಹಾಗೂ ಆಚರಣೆಗಳು ಇದನ್ನೇ ಬಿಂಬಿಸುತ್ತವೆ.
ಸಾಂಸ್ಕೃತಿಕ ನಿರೂಪಣೆಗಳ ನಡುವೆ
ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳಶಾಹಿ ಔದ್ಯಮಿಕ ವಲಯವು ಈ ಸಾಂಸ್ಕೃತಿಕ ಪಲ್ಲಟಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಆಳ್ವಿಕೆಯಲ್ಲಿ ತನ್ನ ಮಧ್ಯಸ್ಥಿಕೆಯನ್ನು ಉಳಿಸಿಕೊಳ್ಳುವುದೇ ಅಲ್ಲದೆ, ಆಡಳಿತ ನಿರ್ವಹಣೆಯಲ್ಲಿ ತನ್ನ ವಿಸ್ತರಣೆಯನ್ನು ಕಾಪಾಡಿಕೊಳ್ಳಲು ಯತ್ನಿಸುತ್ತದೆ. ಹಾಗಾಗಿಯೇ ಭಾರತದ ಬಹುಪಾಲು ದೃಶ್ಯ, ಮುದ್ರಣ ಮಾಧ್ಯಮಗಳು ಕಾರ್ಪೋರೇಟ್ ನಿಯಂತ್ರಣಕ್ಕೊಳಗಾಗಿದ್ದು, ತಮ್ಮ ವೃತ್ತಿಪರ ನೈತಿಕತೆಯನ್ನು ವರ್ಜಿಸಿ ಆಧಿಪತ್ಯ ರಾಜಕಾರಣದ ಮುಖವಾಣಿಗಳಾಗಿ ವರ್ತಿಸುತ್ತಿವೆ. ಮಾರುಕಟ್ಟೆ ವಾಣಿಜ್ಯದಲ್ಲಿ ಆತ್ಮಾವಲೋಕನ ಅಥವಾ ಆತ್ಮವಿಮರ್ಶೆಗೆ ಅವಕಾಶ ಇರುವುದಿಲ್ಲ ಆದ್ದರಿಂದಲೇ ಅಯೋಧ್ಯೆಯ ವೈಭವವನ್ನು ಮತ್ತಷ್ಟು ರಂಜನೀಯವಾಗಿ ಬಿತ್ತರಿಸುವ ಸಂದರ್ಭದಲ್ಲಿ 1989-92ರ ಅವಧಿಯಲ್ಲಿ ಸಂಭವಿಸಿದ ಅಮಾಯಕರ ಸಾವುನೋವುಗಳಾಗಲೀ, ತದನಂತರದಲ್ಲಿ ದೇಶದಲ್ಲಿ ಉಂಟಾಗಿರುವ ಮತೀಯವಾದದ ಉಲ್ಬಣವಾಗಲೀ, ಮತಾಂಧ ಶಕ್ತಿಗಳ ಹೆಚ್ಚುತ್ತಿರುವ ದಾಳಿಗಳಾಗಲೀ ಪರಾಮರ್ಶೆಗೊಳಗಾಗಿಲ್ಲ. ಇಲ್ಲಿ ಮಾರುಕಟ್ಟೆ ಬಂಡವಾಳವು ತಳಸಮಾಜದ ಸಾಮಾನ್ಯ ಜನತೆಯ ಹಿತಾಸಕ್ತಿ-ಆಶಯಗಳನ್ನೂ ಸರಕುಗಳನ್ನಾಗಿಸಿ, ಆಧುನಿಕ ಸಂವಹನ ಸಾಧನಗಳ ಮೂಲಕ ಉತ್ಪಾದಿಸುವ ಮೇಲ್ವರ್ಗದ ಅಭಿಪ್ರಾಯಗಳನ್ನೇ ಸಾರ್ವಜನಿಕ ನಿರೂಪಣೆಗಳಾಗಿ (Narratives) ಸಮಾಜದ ಮುಂದಿರಿಸುತ್ತವೆ. ರಾಮರಾಜ್ಯ
ಈ ನಿರೂಪಣೆಯ ಫಲವನ್ನು ಬಿಜೆಪಿ-ಸಂಘಪರಿವಾರ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತದೆ. ರಾಮಮಂದಿರದ ನಿರ್ಮಾಣವನ್ನು ಹಿಂದೂ ಧರ್ಮದ ಪುನರುತ್ಥಾನ ಎಂದು ಬಣ್ಣಿಸುತ್ತಿದ್ದವರು ಈಗ ಭಾರತದ ಪುನರುತ್ಥಾನ ಎಂದು ವ್ಯಾಖ್ಯಾನಿಸಲಾರಂಭಿಸಿರುವುದು ಈ ಬದಲಾದ ಸನ್ನಿವೇಶವನ್ನು ಬಿಂಬಿಸುತ್ತದೆ. ಹಿಂದುತ್ವವನ್ನು ವಿಶಾಲ ಹಿಂದೂ ಧರ್ಮದೊಡನೆ ಸಮೀಕರಿಸುವ ಮೂಲಕ ಬಿಜೆಪಿ ತಳಸಮುದಾಯಗಳ ಹಾಗೂ ಬುಡಕಟ್ಟು ಸಮುದಾಯಗಳ ನಡುವೆಯೂ ತನ್ನ ಪ್ರಭಾವವನ್ನು ವಿಸ್ತರಿಸುವುದರಲ್ಲಿ ಯಶಸ್ವಿಯಾಗಿದೆ. ಹಾಗಾಗಿಯೇ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಆರಾಧಿಸುವ ದಲಿತ ಸಮುದಾಯದ ಬೃಹತ್ ಸಮೂಹವೂ ಇಂದು ಹಿಂದುತ್ವ ರಾಜಕಾರಣದ ಸಹಭಾಗಿಯಾಗಿದೆ. ಮಂಡಲ್ ರಾಜಕೀಯದಿಂದ ಬಹುದೂರ ಬಂದಿರುವ ಒಬಿಸಿ-ಶೂದ್ರ ಸಮುದಾಯಗಳು ಇಂದು ಅಧಿಕಾರ ರಾಜಕಾರಣದ ಫಲಾನುಭವಿಗಳಾಗಲು ಕಾತರಿಸುತ್ತಿದ್ದು, ಹಿಂದುತ್ವವೂ ಸಹ ಒಂದು ಸ್ವೀಕೃತ ರಾಜಕೀಯ ನೆಲೆಯಾಗಿ ಕಾಣತೊಡಗಿದೆ.
ಇಲ್ಲಿ ಹಿಂದುತ್ವದ ರಾಜಕೀಯ ವ್ಯಾಪ್ತಿ ತಳಮಟ್ಟದವರೆಗೂ ವಿಸ್ತರಿಸುತ್ತಾ ಎಲ್ಲ ಜಾತಿ-ವರ್ಗ-ಸಮುದಾಯಗಳನ್ನೂ ಆವರಿಸುತ್ತಿರುವ ಹೊಸ ವಿದ್ಯಮಾನವನ್ನು ಪರಾಮರ್ಶಿಸಬೇಕಿದೆ. ಹಾಗೆಯೇ ನವ ಉದಾರವಾದದ ಬಾಹುಗಳಲ್ಲಿ ಸಿಲುಕಿರುವ ಭಾರತದ ರಾಜಕೀಯ ವ್ಯವಸ್ಥೆ ಆಪ್ತ ಬಂಡವಾಳಶಾಹಿ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಆಡಳಿತ ನೀತಿಗಳನ್ನೂ ರೂಪಿಸಲು ಸಜ್ಜಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ದೇಶದಲ್ಲಿ ಹಸಿವು, ಬಡತನ, ದಾರಿದ್ರ್ಯ, ಅಪೌಷ್ಟಿಕತೆ, ಸಾಮಾಜಿಕ ಅಸ್ಥಿರತೆ, ಆರ್ಥಿಕ ಅಸಮಾನತೆ ಮತ್ತು ಇದರಿಂದ ಉಲ್ಬಣಿಸುವ ತಾರತಮ್ಯ ದೌರ್ಜನ್ಯಗಳಿಗೆ ಮೂಲ ಕಾರಣವಾಗಿರುವ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ಎಡಪಕ್ಷಗಳನ್ನು ಹೊರತುಪಡಿಸಿ ಇತರ ಯಾವುದೇ ಪಕ್ಷಗಳೂ ಉಸಿರೆತ್ತದಿರುವುದನ್ನು ನೋಡಿದಾಗ, ಬಲಪಂಥೀಯ ರಾಜಕಾರಣ ಹಾಗೂ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ನಡುವಿನ ಸೂಕ್ಷ್ಮ ಸಂಬಂಧಗಳೂ ಅರ್ಥವಾಗುತ್ತವೆ. ರಾಮರಾಜ್ಯ
ಈ ಎಲ್ಲ ಜಟಿಲ ಸಮಸ್ಯೆಗಳಿಗೂ ಚರಿತ್ರೆಯಲ್ಲಿ ಆಗಿಹೋದ ಸಾಮ್ರಾಜ್ಯಗಳನ್ನೋ ಅಥವಾ ಸ್ವತಂತ್ರ ಭಾರತದ ಆರಂಭಿಕ ಆಳ್ವಿಕೆಯನ್ನೋ ದೂಷಿಸುತ್ತಾ, ಜನಾಂಗೀಯ ನೆಲೆಯಲ್ಲಿ ಶತ್ರುಗಳನ್ನು ಸೃಷ್ಟಿಸುವ ಸಾಂಸ್ಕೃತಿಕ ರಾಜಕಾರಣವು, ಮಾರುಕಟ್ಟೆ ಉಂಟುಮಾಡುತ್ತಿರುವ ವ್ಯತ್ಯಯಗಳನ್ನು ಮರೆಮಾಚಲೆಂದೇ ಧಾರ್ಮಿಕ ವಿಚಾರಗಳನ್ನು, ವಿವಾದಗಳನ್ನು ಮುನ್ನೆಲೆಗೆ ತಂದಿರಿಸುತ್ತಿದೆ. ವ್ಯಾಪಕ ಚರ್ಚೆಗೊಳಗಾಗಿರುವ 21ನೆಯ ಶತಮಾನದ ಡಿಜಿಟಲ್ ಯುಗದಲ್ಲಿ ʼರಾಮರಾಜ್ಯʼದ ಸುತ್ತ ನಡೆಯುತ್ತಿರುವ ಸಂಕಥನಗಳನ್ನೂ ಈ ದೃಷ್ಟಿಯಿಂದಲೇ ಪರಾಮರ್ಶಿಸಬೇಕಿದೆ. ಹಸಿವೆ, ಬಡತನ ಹೆಚ್ಚಾಗುತ್ತಾ, ಬಡವ ಶ್ರೀಮಂತರ ನಡುವಿನ ಕಂದರ ಇನ್ನೂ ಆಳವಾಗುತ್ತಿರುವ ಹೊತ್ತಿನಲ್ಲೇ ಭಾರತದ ಶ್ರೀ ಸಾಮಾನ್ಯನ ಮುಂದಿಡಲಾಗುತ್ತಿರುವ ರಾಮರಾಜ್ಯವನ್ನು ನಿರ್ದೇಶಿಸುವ ಶಕ್ತಿಗಳಾದರೂ ಯಾವುದು ? ಈ ಸಂಭಾವ್ಯ ಸುಖೀ ರಾಜ್ಯದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುವುದೇ ? ಸಂವಿಧಾನದ ಆಶಯಗಳು ಈಡೇರುತ್ತವೆಯೇ ? ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವ ಕರಾಳ ಶಾಸನಗಳು ಇಲ್ಲವಾಗುವುದೇ ? ಮನುಷ್ಯರ ನಡುವೆ ಭಿನ್ನಭೇದಗಳನ್ನು ಹಿಗ್ಗಿಸುವ ಜಾತಿ-ಮತ-ಪಂಥ-ಭಾಷೆಯ ತಾರತಮ್ಯದ ಗೋಡೆಗಳು ಕುಸಿಯುತ್ತವೆಯೇ ? ಅಸ್ಪೃಶ್ಯತೆ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರದಂತಹ ಹೀನಕೃತ್ಯಗಳು ಕೊನೆಗೊಂಡು ಮಹಿಳೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುವುದೇ ?
ಸಾಂಸ್ಕೃತಿಕ ರಾಜಕಾರಣ ಮತ್ತು ಬಂಡವಾಳ
ಬದಲಾಗಿ ಧಾರ್ಮಿಕ, ಜಾತೀಯ ಅಥವಾ ಸಾಂಸ್ಕೃತಿಕ ಅಸ್ಮಿತೆಗಳು ಭಾವನಾತ್ಮಕ ನೆಲೆಯಲ್ಲಿ ಗಟ್ಟಿಯಾಗುತ್ತಾ ಹೋಗುತ್ತವೆ. ಮಾರುಕಟ್ಟೆ ನಿಯಂತ್ರಿತ ಸಂವಹನ ಮಾಧ್ಯಮಗಳು ಈ ಅಸ್ಮಿತೆಗಳ ಚೌಕಟ್ಟುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಮೆ/ಸ್ಥಾವರಗಳ ಸುತ್ತ ನಡೆಯುವ ರಾಜಕಾರಣಕ್ಕೆ ಪುಷ್ಟಿ ನೀಡುತ್ತವೆ. ನೂತನ ಅಯೋಧ್ಯೆ ನಗರವೂ ಸಹ ಇನ್ನು ಮುಂದೆ ಜನಸಾಮಾನ್ಯರ ಶ್ರದ್ಧಾಭಕ್ತಿ ಕೇಂದ್ರಿತ ಯಾತ್ರಾಸ್ಥಳವಾಗಿ ಇರುವುದಕ್ಕಿಂತಲೂ ಹೆಚ್ಚಾಗಿ ಕಾರ್ಪೋರೇಟ್ ಮಾರುಕಟ್ಟೆಯ ಬಂಡವಾಳವನ್ನು ವೃದ್ಧಿಸುವ ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪುಗೊಳ್ಳುತ್ತದೆ. “ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ” ನಿರ್ಮಿಸುವ ಒಂದು ಗೀಳು ಸಾಂಘಿಕವಾಗಿ ಎಲ್ಲ ವಲಯದಲ್ಲೂ ವ್ಯಾಪಿಸಿರುವುದರಿಂದ, ಪ್ರತಿಮಾ ರಾಜಕಾರಣವು ಉಳಿದೆಲ್ಲಾ ವೈರುಧ್ಯಗಳನ್ನೂ, ವ್ಯತ್ಯಯಗಳನ್ನೂ ಮರೆಮಾಚಲು ನೆರವಾಗುತ್ತವೆ. ಮತ್ತೊಂದೆಡೆ ಪ್ರತಿಮೆಗಳೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಭಾವನೆಗಳ ಮೂಲ ಸ್ಥಾಯಿಯಾಗಿ ಪರಿಣಮಿಸುತ್ತವೆ. ಈ ಮನ್ವಂತರ ಫಲವಾಗಿಯೇ ಪ್ರತಿಮಾ ಭಂಜಕ, ಸ್ಥಾವರ ಭಂಜಕ ದಾರ್ಶನಿಕರೂ ನಮ್ಮ ನಡುವೆ ಪ್ರತಿಮೆಗಳಾಗಿ ನಿಲ್ಲುತ್ತಿದ್ದಾರೆ. ಈ ದಾರ್ಶನಿಕರ ಚಿಂತನೆಗಳು ಶಿಥಿಲವಾಗುವುದರ ವಿರುದ್ಧ ವ್ಯಕ್ತವಾಗದ ಪ್ರತಿರೋಧ, ಪ್ರತಿಮೆಯ ಭಗ್ನವಾದಾಗ ವ್ಯಕ್ತವಾಗುತ್ತದೆ. ರಾಮರಾಜ್ಯ
ಸಾಮಾನ್ಯ ಜನರ ನಂಬಿಕೆ ಶ್ರದ್ಧೆಗಳ ಹಾಗೆಯೇ ಭಾವನೆಗಳನ್ನೂ ಸರಕೀಕರಣಕ್ಕೊಳಪಡಿಸುವ ಬಂಡವಾಳಶಾಹಿ ಆರ್ಥಿಕತೆ ತನ್ನ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಲು ಬಲಪಂಥೀಯ ರಾಜಕಾರಣವನ್ನೇ ಆಶ್ರಯಿಸುವುದಕ್ಕೆ ಇದೂ ಒಂದು ಕಾರಣವಾಗಿದೆ. ಬಿಕರಿಯಾಗುವ ಭಾವನೆಗಳು, ವಿನಿಮಯವಾಗುವ ಶ್ರದ್ಧಾನಂಬಿಕೆಗಳು ರಾಜಕೀಯ ಪಕ್ಷಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗುತ್ತವೆ. ಈ ಭಾವನಾತ್ಮಕತೆಯನ್ನು ಸಂರಕ್ಷಿಸುತ್ತಲೇ ಅನ್ಯಾಯ/ತಾರತಮ್ಯ/ದೌರ್ಜನ್ಯಗಳ ವಿರುದ್ಧ ಸಹಜವಾಗಿಯೇ ವಿಶಾಲ ಸಮಾಜದಲ್ಲಿ ಮೂಡುವ ಪ್ರತಿರೋಧದ ಧ್ವನಿಗಳನ್ನು ಹದ್ದುಬಸ್ತಿನಲ್ಲಿಡುವುದು ಬಂಡವಾಳ ಮತ್ತು ಮಾರುಕಟ್ಟೆಯ ಪ್ರಥಮ ಆದ್ಯತೆಯಾಗಿರುತ್ತದೆ. ಹಾಗಾಗಿಯೇ ಬಲಪಂಥೀಯ ರಾಜಕೀಯ ಆಳ್ವಿಕೆಯಲ್ಲಿ ಜನತೆಯ ವಿರೋಧಿ ಧ್ವನಿಗಳನ್ನು ಹತ್ತಿಕ್ಕುವ ಕರಾಳ ಶಾಸನಗಳು, ಕಠಿಣ ಕಾಯ್ದೆಗಳು, ಕಟ್ಟುಪಾಡುಗಳು ಮುಖ್ಯವಾಹಿನಿಯ ಬಂಡವಾಳಿಗ ಪಕ್ಷಗಳಿಗೆ ಅಪ್ಯಾಯಮಾನವಾಗಿ ಕಾಣುತ್ತವೆ. ಸ್ವೀಕೃತವೂ ಆಗುತ್ತದೆ. ರಾಮರಾಜ್ಯ
ವರ್ತಮಾನದ ಭಾರತ ಈ ದ್ವಂದ್ವವನ್ನು ಎದುರಿಸುತ್ತಲೇ ದೇಶದ ಒಂದು ವರ್ಗದ ಜನತೆ ಸಂಭಾವ್ಯ ರಾಮರಾಜ್ಯದ ಕನಸು ಕಾಣುತ್ತಿದ್ದಾರೆ. ತಳಸಮುದಾಯದ ಮತ್ತೊಂದು ವರ್ಗ ಭೀಮರಾಜ್ಯವನ್ನು ಬಯಸುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಮಾನವೀಯತೆಯ ನೆಲೆಯುಳ್ಳ, ಸೌಹಾರ್ದಯುತ, ಸಮನ್ವಯದ, ಭ್ರಾತೃತ್ವವನ್ನು ಅಪ್ಪಿಕೊಳ್ಳುವ , ಜಾತ್ಯತೀತ ಭಾರತವನ್ನು ರೂಪಿಸುವ ಸಂವಿಧಾನವನ್ನು ನಮ್ಮ ಕೈಗೆ ಕೊಟ್ಟುಹೋಗಿದ್ದಾರೆ. ಭ್ರಾತೃತ್ವದ ಅರ್ಥವನ್ನೂ ಸಂಕುಚಿತಗೊಳಿಸುತ್ತಾ ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸಲಾಗುತ್ತಿರುವ ಹೊತ್ತಿನಲ್ಲಿ ಭಾರತ ಒಂದು ಹೊಸ ಯುಗಕ್ಕೆ ತೆರೆದುಕೊಳ್ಳುತ್ತಿದೆ. ಪಿರಮಿಡ್ಡಿನ ಆಕಾರದ ಭಾರತೀಯ ಸಮಾಜವು ತುತ್ತತುದಿಯಲ್ಲಿರುವವರನ್ನು ತಳಪಾಯದಲ್ಲಿರುವವರೊಡನೆ ಸಂಧಿಸುವ ರೀತಿಯಲ್ಲಿ ಸಮಾನ ಅವಕಾಶಗಳ ಸಮನ್ವಯತೆಯನ್ನು ಸಾಧಿಸಬೇಕಾದರೆ ಭವಿಷ್ಯದ ಭಾರತವನ್ನು ಸಂವಿಧಾನದ ತಳಹದಿಯ ಮೇಲೆಯೇ ನಿರ್ಮಿಸಬೇಕಿದೆ. ಇದು ನಮ್ಮ ಮುಂದಿರುವ ಸವಾಲು. ರಾಮರಾಜ್ಯ
ಇದನ್ನು ನೋಡಿ : ಸಂಸದರ ಕಛೇರಿ ಮುಂದೆ ಕಾರ್ಮಿಕರ ಪ್ರತಿಭಟನೆ : ಅಸಂಘಟಿತ ಕಾರ್ಮಿಕರಿಗೆ ಅಚ್ಚೆದಿನ್ ಯಾವಾಗ?