ಚನ್ನರಾಯಪಟ್ಟಣ : ಶುಕ್ರವಾರ ಚನ್ನರಾಯಪಟ್ಟಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮಿನಿಂದ ಅಕ್ರಮವಾಗಿ ಗೋಧಿಯನ್ನು ಸಾಗಣಿಕೆ ಮಾಡುವ ವೇಳೆ ಪೊಲೀಸರು ದಾಳಿ ಮಾಡಿ, ಪಡಿತರ ತುಂಬಿದ ಲಾರಿ ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಟ್ಟಣದ ಮೈಸೂರು ರಸ್ತೆಯಲ್ಲಿನ ಅಂಬೇಡ್ಕರ್ ವೃತ್ತದ ಬಳಿಯಿರುವ ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮದ ಗೋದಾಮಿನಲ್ಲಿ ಮಂಡ್ಯಕ್ಕೆ ಸೇರಿದ ಲಾರಿಯೊಂದಕ್ಕೆ ಆಕ್ರಮವಾಗಿ ರಾತ್ರಿ ವೇಳೆ ಗೋಧಿ ತುಂಬುವ ವೇಳೆ ಪೊಲೀಸರಿಗೆ ಅಪರಿಚಿತರೊಬ್ಬರು ಕರೆ ಮಾಡಿ ತಿಳಿಸಿದ ಹಿನ್ನಲೆಯಲ್ಲಿ, ಖಚಿತ ಮಾಹಿತಿ ಪಡೆದ ಪೊಲೀಸ್‌ರು, ರಾತ್ರಿ 3 ಘಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಲಾರಿಗೆ ತುಂಬುತ್ತಿದ್ದ ಕಾರ್ಮಿಕರು ಮತ್ತು ಚಾಲಕ ಸೇರಿ ಎಲ್ಲರೂ ಲಾರಿಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಲಾರಿಗಾಗಲೇ 300ಕ್ಕೂ ಹೆಚ್ಚು ಇಲ್ಲ ಚೀಲ ಗೋಧಿಯನ್ನು ತುಂಬಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ:ಶವ ಹೂಳಲು ಜಾಗವಿಲ್ಲದೆ ಮನೆಯ ಮುಂದೆಯೇ ಶವಸಂಸ್ಕಾರಕ್ಕೆ ಯತ್ನ
ಅಕ್ರಮ ಗೋಧಿ ಸಾಗಾಣೆಯಲ್ಲಿ ಗೋಡಾನ್ ಮ್ಯಾನೇಜರ್ ಲಿಂಗರಾಜು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಅಕ್ರಮವಾಗಿ ಗೋಧಿ ಸಾಗಾಣೆ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಈ ಬಗ್ಗೆ ಮಾಹಿತಿಯೇ ಇಲ್ಲಾ ಎನ್ನುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಆಹಾರ ಶಿರಸ್ತೆದಾರ್ ವಾಸುರವರು ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಹೊತ್ತಿರುವ ಗೋದಾಮು ಮ್ಯಾನೇಜರ್ ಲಿಂಗರಾಜು, ಕಳೆದ ಏಳು ತಿಂಗಳ ಹಿಂದೆ ಅಕ್ರಮ ಪಡಿತರ ಸಾಗಾಣೆ ವಿಚಾರದಲ್ಲಿ ಸಸ್ಪೆಂಡ್ ಆಗಿದ್ದು, ನಂತರ ಆತನನ್ನು ಬೇಲೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಲಿಂಗರಾಜು ಶಿವಮೊಗ್ಗದಿಂದ ಚನ್ನರಾಯಪಟ್ಟಣಕ್ಕೆ ವರ್ಗಾವಣೆಗೊಂಡಿದ್ದರು. ಇದೀಗ ಅಕ್ರಮ ಪಡಿತರ ಸಾಗಾಣೆ ಮಾಡುವಾಗ ಪೊಲೀಸರು ದಾಳಿ ಮಾಡಿದ್ದು ಇದರಲ್ಲಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸ್‌ರು ನಿಸ್ಪಕ್ಷ ತನಿಖೆ ನಡೆಸಿ ತಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಬೇಕೆಂದರು.