ಎಪ್ರಿಲ್ 28ರಂದು ನಡೆದ ಕೇಂದ್ರೀಯ ಕಾರ್ಮಿಕ ಸಂಘಟನೆಗಳು, ಜಂಟಿ ವೇದಿಕೆ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಜಂಟಿ ಸಭೆ ಕೇಂದ್ರ ಸರಕಾರದ ಜನ-ವಿರೋದಿ, ರೈತ-ವಿರೋಧಿ ಮತ್ತು ಕಾರ್ಮಿಕ-ವಿರೋಧಿ ವಿನಾಶಕಾರೀ ಧೋರಣೆಗಳ ವಿರುದ್ಧ ಜಂಟಿ ಹೋರಾಟವನ್ನು ಮುಂದೊಯ್ಯಲು ಮತ್ತು ತೀವ್ರಗೊಳಿಸಲು ನಿರ್ಧರಿಸಿದೆ.
ಇದನ್ನು ಓದಿ: ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಸಿಎಂಗೆ 20 ಅಂಶದ ಪತ್ರ ಬರೆದ ಸಿದ್ದರಾಮಯ್ಯ
ರೈತ ಕೃಷಿಯನ್ನು ಮತ್ತು ರಾಷ್ಟ್ರೀಯ ಅರ್ಥವ್ಯವಸ್ಥೆಯ ದೇಶೀ ತಯಾರಕ ಸಾಮರ್ಥ್ಯವನ್ನು ಧ್ವಂಸಗೊಳಿಸುವ ವಿನಾಶಕಾರೀ ಧೋರಣೆಗಳ ವಿರುದ್ಧ ಹೋರಾಟಗಳಲ್ಲಿ ದೇಶದ ಎರಡು ಪ್ರಧಾನ ಉತ್ಪಾದಕ ಶಕ್ತಿಗಳಾದ ರೈತರು ಮತ್ತು ಕಾರ್ಮಿಕರ ನಡುವೆ ಸೌಹಾರ್ದದ ಬಂಧಗಳು ಗಟ್ಟಿಗೊಂಡಿವೆ ಎಂದು ಸಭೆ ಗಮನಿಸಿತು. ಮೂರು ಪ್ರತಿಗಾಮಿ ಕೃಷಿ ಕಾಯ್ದೆಗಳು ಮತ್ತು ಎಲ್ಲ ಉದ್ದಿಮೆಗಳು, ಸೇವೇಗಳ ಮತ್ತು ದೇಶದ ಸಂಪನ್ಮೂಲಗಳ ಮಾತ್ರವಲ್ಲ, ಶಿಕ್ಷಣ ಮತ್ತು ಆರೋಗ್ಯ ವಲಯದ ವಿಚಾರಶೂನ್ಯ ಖಾಸಗೀಕರಣದ ಧಾವಂತದಲ್ಲಿದೆ ಈ ಸರಕಾರ. ಅದೇ ವೇಳೆಗೆ ಕಾರ್ಮಿಕ ಸಂಹಿತೆಗಳ ಮೂಲಕ, ವಿಚಾರ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಇತರ ಪ್ರಜಾಪ್ರಭುತ್ವ ಹಕ್ಕುಗಳ ದಮನದ ಮೂಲಕ ಗುಲಾಮಗಿರಿಯ ಪರಿಸ್ಥಿತಿಗಳನ್ನು ಹೇರಲಾಗುತ್ತಿದೆ, ದೇಶ ಫ್ಯಾಸಿಸ್ಟ್ ಆಶಯದ ಸರ್ವಾಧಿಕಾಶಾಹೀ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸಭೆ ಖಂಡಿಸಿತು.
ಇಂತಹ ಬರ್ಬರ ಮತ್ತು ವಿನಾಶಕಾರೀ ನಿಲುವುಗಳು ಕೊವಿಡ್ ಮಹಾಸೋಂಕಿನ ಎರಡನೇ ಅಲೆಯನ್ನು ನಿಭಯಿಸುವಲ್ಲಿಯೂ ಬಿಂಬಿತವಾಗುತ್ತಿದೆ. ಇದರಿಂದ ತಪ್ಪಿಸಬಹುದಾಗಿದ್ದ ಸಾವು-ನೋವುಗಳು ಇಡೀ ದೇಶವನ್ನು ಆವರಿಸಿಕೊಳ್ಳುವಂತಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಳಚಿ ಹಾಕಿದ ಪರಿಣಾಮವಾಗಿ ಉಂಟಾಗಿರುವ ಅಗಣಿತ ಸಮಸ್ಯೆಗಳು ಒಂದು ಕಡೆಯಾದರೆ, ಈ ಸರಕಾರ ಪ್ರಕಟಿಸಿರುವ ಪ್ರತಿಗಾಮಿ ಲಸಿಕೆ ಧೋರಣೆ ಕೂಡ ಜನಗಳನ್ನು ಬಲಿಗೊಡುವ ಲಾಭಕೋರತನಕ್ಕೆ ಉತ್ತೇಜನೆ ಕೊಡುತ್ತಿದೆ ಎಂದಿರುವ ಸಭೆ ಮೋದಿ ಸರಕಾರದ ಇಂತಹ ಬರ್ಬರ ಧೋರಣೆಗಳನ್ನು ಕಾಮಿಕರು ಮತ್ತು ರೈತರು ಬಲವಾಗಿ ಖಂಡಿಸುವದಾಗಿ ಹೇಳಿದೆ.
ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು
ಮೇದಿನವನ್ನು ರೈತರು ಮತ್ತು ಕಾರ್ಮಿಕರು ಜಂಟಿಯಾಗಿ ಆಚರಿಸಬೇಕು ಎಂದು ಸಭೆ ಕರೆ ನೀಡಿದೆ. ಸಾಧ್ಯವಾದಷ್ಟು ಹೆಚ್ಚು ಸ್ಥಳಗಳಲ್ಲಿ ಕಾರ್ಮಿಕರ, ರೈತರ ಮತ್ತು ಜನಗಳ ಹಕ್ಕುಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಮೇ ದಿನಾಚರಣೆ ನಡೆಸಲಾಗುವುದು ಎಂದಿರುವ ಸಭೆ ಈ ಕೆಳಗಿನ ಬೇಡಿಕೆಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದಿದೆ:
- ಕಾರ್ಮಿಕ ಸಂಹಿತೆಗಳು, ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ರದ್ದಾಗಬೇಕು.
- ವಿನಾಶಕಾರೀ ಲಸಿಕೆ ಧೋರಣೆ ರದ್ದಾಗಬೇಕು, ಎಲ್ಲರಿಗೂ ಉಚಿತ, ಸಾರ್ವತ್ರಿಕ, ಸಾಮೂಹಿಕ ಲಸಿಕೀಕರಣವನ್ನು ಖಾತ್ರಿಪಡಿಸಬೇಕು
- ಎಲ್ಲ ಕೃಷಿ ಉತ್ಪನ್ನಗಳಿಗೆ ಸಿ2+50% ದರದಲ್ಲಿ ಕನಿಷ್ಟ ಬೆಂಬಲ ಬೆಲೆಗಳ ಮತ್ತು ಆ ಬೆಲೆಗಳಲ್ಲಿ ಖರೀದಿಯ ಖಾತ್ರಿ.
- ಖಾಸಗೀಕರಣ/ಶೇರು ಹಿಂಪಡಿಕೆ ಮತ್ತು ಕಾರ್ಪೊರೇಟೀಕರಣದ ನಡೆ ನಿಲ್ಲಬೇಕು.
ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಮತ್ತೆ ಮೇ ಮಧ್ಯಭಾಗದಲ್ಲಿ ಸಭೆ ಸೇರಿ ಜಂಟಿ ಕಾಯಾಚರಣೆಗಳ ಮುಂದಿನ ದಾರಿಯನ್ನು ಮೂರ್ತಗೊಳಿಸುತ್ತಾರೆ ಎಂದು ಈ ಸಭೆಯ ನಂತರ ನೀಡಿರುವ ಪತ್ರಿಕಾ ಹೇಳಿಕೆ ತಿಳಿಸಿದೆ.
ಐಎನ್‌ಟಿಯುಸಿ, ಎಐಟಿಯುಸಿ, ಹೆಚ್‌ಎಂಎಸ್ , ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಈ ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ.