ಐಐಟಿ, ಎನ್‌ಐಟಿಗಳಲ್ಲಿ ಮೀಸಲಾತಿ ಸೀಟು ನಷ್ಟದ ಬಗ್ಗೆ ಕ್ರಮಕೈಗೊಳ್ಳಿ: ಎಸ್‌ಎಫ್‌ಐ

ನವದೆಹಲಿ: ಕೇಂದ್ರ ಸರಕಾರದ ಅಡಿಯಲ್ಲಿರುವ ನಮ್ಮ ದೇಶದ ಪ್ರಮುಖ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಾದ ಐಐಟಿ, ಎನ್‌ಐಟಿ, ಐಐಐಟಿ, ಐಐಎಸ್‌ಇಆರ್, ಐಐಎಸ್‌ಸಿ ಮತ್ತಿತರ ಸಂಸ್ಥೆಗಳಲ್ಲಿ ಪದವಿ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುವ(ಅಡ್ಮಿಷನ್) ಮತ್ತು ಮಧ್ಯದಲ್ಲೇ ಬಿಟ್ಟುಹೋಗುವ(ಡ್ರಾಪೌಟ್) ಅಂಚಿಗೆ ಸರಿಸಲ್ಪಟ್ಟ ಮತ್ತು ಹಿಂದುಳಿದ ಗುಂಪುಗಳಿಂದ ಬರುವ ವಿದ್ಯಾರ್ಥಿಗಳ ಅಂಕಿ-ಅಂಶಗಳನ್ನು ಸಂಸತ್ತಿಗೆ ಇತ್ತೀಚೆಗೆ ಸಲ್ಲಿಸಲಾಯಿತು. ಇದರ ಪ್ರಕಾರ 2016-20ರ ಅವಧಿಯಲ್ಲಿ ಕನಿಷ್ಟ 683 ಪರಿಶಿಷ್ಟ ಜಾತಿ, 831 ಪರಿಶಿಷ್ಟ ಬುಡಕಟ್ಟುಗಳು ಮತ್ತು 591 ಒಬಿಸಿ ಸೀಟುಗಳು ಖಾಲಿ ಉಳಿದವು ಮತ್ತು ಪ್ರವೇಶ ಪಡೆದವರಲ್ಲಿ ಮಧ್ಯದಲ್ಲೇ ಬಿಟ್ಟುಹೋದವರ ಸಂಖ್ಯೆ ಅನುಕ್ರಮವಾಗಿ 619, 365 ಮತ್ತು 847. ಅಂದರೆ ಒಟ್ಟು 3936 ಮೀಸಲಾತಿ ಸೀಟುಗಳ ನಷ್ಟವಾಗಿದೆ. ಇದನ್ನು ತಡೆಯಲು ಭಾರತ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಕೇಂದ್ರೀಯ ಶಿಕ್ಷಣ ಸಂಸ್ಥೆಗಳು(ಪ್ರವೇಶದಲ್ಲಿ ಮೀಸಲಾತಿ)ಕಾಯ್ದೆ, 2006ರ ಅನುಷ್ಠಾನ ಸರಿಯಾಗಿ ಆಗಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಆಗ್ರಹಿಸಿದೆ. ಈ ವಿಭಾಗಗಳಿಂದ ಬರುವ ವಿದ್ಯಾರ್ಥಿಗಳ ಕಲ್ಯಾಣಕ್ಕೆ ವಿಶೇಷ ಸೆಲ್‌ಗಳನ್ನು ರಚಿಸಬೇಕು ಎಂದೂ ಅದು ಆಗ್ರಹಪಡಿಸಿದೆ.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸಂಸದ್ ಸದಸ್ಯರಾದ ಕೆ.ಸೋಮಪ್ರಸಾದ್ ಮತ್ತು ಡಾ.ವಿ.ಶಿವದಾಸನ್ ಸಂಸತ್ತಿನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರವಾಗಿ ಪಡೆದ ಮಾಹಿತಿಗಳನ್ನು ವಿವರವಾಗಿ ವಿಶ್ಲೇಷಿಸಿದಾಗ, ದೇಶದ ಈ ಪ್ರಮುಖ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಾಪೌಟ್‌ಗಳಲ್ಲಿ ಹೆಚ್ಚು ಈ ವಿಭಾಗಗಳದ್ದೇ ಎಂದು ಕಂಡುಬಂದಿದೆ (ಉದಾ: ಏಳು ಐಐಟಿಗಳಲ್ಲಿ ಡ್ರಾಪೌಟ್‌ಗಳಲ್ಲಿ ಈ ವಿಭಾಗಗಳ ವಿದ್ಯಾರ್ಥಿಗಳ ಪ್ರಮಾಣ 63%. ಇದರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಒಟ್ಟು ಪ್ರಮಾಣವೇ 40%). ಈ ಹಿನ್ನೆಲೆಯಲ್ಲಿ ಎಸ್‌ಎಫ್‌ಐ ಈ ಆಗ್ರಹವನ್ನು ಭಾರತ ಸರಕಾರದ ಮುಂದಿಟ್ಟಿದೆ.

ಈ ಮೊದಲು ಈ ಕೇಂದ್ರೀಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಪಿಹೆಚ್‌ಡಿ ಮತ್ತು ಎಂಎಸ್ ಪ್ರವೇಶದಲ್ಲಿ ಮೀಸಲಾತಿಯ ನಗ್ನ ಉಲ್ಲಂಘನೆಯ ಪ್ರಶ್ನೆಯನ್ನು ಎಸ್‌ಎಫ್‌ಐ ಎತ್ತಿದ್ದು, ಅದೀಗ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕಲ್ಯಾಣ ಕುರಿತ ಸಂಸದೀಯ ಸ್ಥಾಯೀ ಸಮಿತಿಯ ಪರಿಶೀಲನೆಯಲ್ಲಿದೆ.

“ನಾವು ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ವಿಭಾಗಗಳಿಗೆ ಸಾಮಾಜಿಕ ನ್ಯಾಯ ಪಡೆಯಲು ಮುಂದೆಯೂ ಸತತವಾಗಿ ಮಧ್ಯಪ್ರವೇಶ ಮಾಡುತ್ತೇವೆ” ಎಂದು ಎಸ್‌ಎಫ್ಐ ಅಧ್ಯಕ್ಷ ವಿ.ಪಿ.ಸಾನು ಮತ್ತು ಪ್ರಧಾನ ಕಾರ್ಯದರ್ಶಿ ಮಯೂಖ್ ಬಿಸ್ವಾಸ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *