“ಅವರು” ಸೃಷ್ಟಿಸಿದ ಹಾಗೂ “ಇವರು” ಪಾಲಿಸಿದ ಜಾತಿಯ ಅಮಲಿಗೆ ಬಲಿ ಆಗುತ್ತಿರುವವರು ಮಾತ್ರ ಹೊಲಮಾದಿಗರು… ಏಕೆ..?
ಮೊದಲಿಗೆ ಹೇಳಿಬಿಡುತ್ತೇನೆ.. “ಬ್ರಾಹ್ಮಣರಿಗೆ ತಮ್ಮ ಬ್ರಾಹ್ಮಣತನ ಹಾಗೂ ಬ್ರಾಹ್ಮಣ್ಯವನ್ನು ಕಾಲಕಾಲಕ್ಕೆ ಬದಲಾವಣೆ ಮಾಡಿಕೊಳ್ಳುವ ಲಕ್ಷಣ ಇದೆ. ಇದಕ್ಕೆ ಶತಶತಮಾನಗುದ್ದಕ್ಕೂ ನೂರಾರು ಜೀವಂತ ಸಾಕ್ಷಾಧಾರಗಳು ಇವೆ. ಆದರೆ ಶೂದ್ರರಿಗೆ ಮಾತ್ರ ಯಾವುದೇ ಕಾರಣಕ್ಕೂ ತಮ್ಮ “ಸ್ಪೃಶ್ಯತೆ” ಯ ಅಹಂ ಅನ್ನು ಬದಲಾವಣೆ ಮಾಡಿಕೊಂಡ, ಮಾಡಿಕೊಳ್ಳಲು ಮುಂದಾಗುವುದಕ್ಕೂ ಸಾಧ್ಯವೇ ಆಗಿಲ್ಲ. ಅದು ಆಗುವುದೂ ಇಲ್ಲ ” ಎಂಬ ವಾಸ್ತವದ ಮಾತುಗಳನ್ನು ಹೇಳಿ ಆರಂಭಿಸುತ್ತೇನೆ.
-ಎನ್. ಚಿನ್ನಸ್ವಾಮಿ ಸೋಸಲೆ
ಬ್ರಾಹ್ಮಣರು ತಮ್ಮ ಬ್ರಾಹ್ಮಣ್ಯದ ಮೂಲಕ ಶ್ರೇಷ್ಠತೆಯಿಂದ ತಾವು ಬದುಕಲು – ತಮ್ಮ ಕಾಲ್ಕೆಳಗಿನ ಇನ್ನೊಂದು ಜಾತಿಯನ್ನು ಕನಿಷ್ಠವಾಗಿ ಇಟ್ಟುಕೊಳ್ಳಲು ಅಂದು ಜಾತಿಯನ್ನು ಸೃಷ್ಟಿ ಮಾಡಿದರು ಅಂದಿನ ರಾಜಪ್ರಭುತ್ವದ ಕಾಲದಲ್ಲಿ. ಅಂದರೆ ಅವರಿಗೆ ಪ್ರಭುತ್ತವೆ ಅವರ ಅಂಗೈನ ದಾಳವಾಗಿತ್ತು. ಇವರ ಸಂವಿಧಾನವೇ ಅಂದಿನ ಪ್ರಭುತ್ವದ ಆಳ್ವಿಕೆಯ ನೀತಿಯು ಆಗಿತ್ತು. ಇಂತಹ ಪ್ರಭುತ್ವವನ್ನೇ ತಮ್ಮ ತೋಳ್ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಕಾರಣಕ್ಕಾಗಿ ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣದಿಂದ ಮೆರೆದರು. ಸೃಷ್ಟಿ
ಇಂದು ಪ್ರಜಾಪ್ರಭುತ್ವ ಭಾರತದಲ್ಲಿ ಇವರ ಅಂಗೈನ ಸಂವಿಧಾನ ಕಳಚಿದ ಕಾರಣಕ್ಕಾಗಿ, ಪ್ರಜಾಪ್ರಭುತ್ವದಲ್ಲಿಯೂ ತಮ್ಮ ಮೇಲಿರ ಮೇಲು ಸಾಧಿಸುವ ಕಾರಣಕ್ಕಾಗಿ, ಈ ಸಂದರ್ಭದಲ್ಲಿಯೂ ಧಾರ್ಮಿಕ ಹಾಗೂ ಸಾಮಾಜಿಕ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಸೌಖ್ಯವಾಗಿ ಬದುಕಲು ತಾವೇ ರೂಪಿಸಿಕೊಂಡಿರುವ ಪಾರಂಪರಿಕ ಹಿನ್ನೆಲೆಯ ಸಮಯ ಸಾಧಕರಾದ ಬದಲಾವಣೆಯಿಂದಾಗಿ ಸಮಯಕ್ಕೆ ತಕ್ಕಂತೆ ಇಂದು ಹೆಚ್ಚಿನ ಪ್ರಮಾಣದಲ್ಲಿ ಜಾತೀಯತೆ ಮಾಡುತ್ತಿಲ್ಲ. ಸೃಷ್ಟಿ
ಮುಂದುವರೆದು, ಶತಶತಮಾನಗಳಿಂದ ನೀವು ಅಸ್ಪೃಶ್ಯರು ಎಂದು ದೂರ ತಳ್ಳಿದ ಜನ ವರ್ಗದವರಿಗೆ ( ದಲಿತರಿಗೆ – ಹೊಲಮಾದಿಗರಿಗೆ ) ಬ್ರಾಹ್ಮಣರ ಹೆಣ್ಣು ಮಕ್ಕಳನ್ನು ಸ್ವ-ಇಚ್ಛೆಯಿಂದಲೇ ಮದುವೆ ಮಾಡಿ ತಮ್ಮ ಜಾತಿ ಹಾಗೂ ಧರ್ಮದ ಉದಾರತೆಯನ್ನು ಹಾಗೂ ಔದಾರತೇಯನ್ನು ತೂರ್ಪಡಿಸಿಕೊಂಡು ನಾವು ಎಂತಹ ಜನತಾ ಪ್ರೇಮಿಗಳು ಎಂದು – ಧರ್ಮ ಪ್ರೇಮಿಗಳು- ರಾಷ್ಟ್ರ ಪ್ರೇಮಿಗಳು ಎಂದು ಹೇಳಿಕೊಂಡು ಎಂದಿಗೂ ಜನರ ಮುಂದೆ ದೊಡ್ಡವರಾಗಿಯೇ ಮೆರೆಯುತ್ತಿದ್ದಾರೆ . ಒಂದು ಪಕ್ಷ ತಮಗೆ ಇಷ್ಟವಿಲ್ಲದಿದ್ದರೂ ಸಹ ಯಾರು ಸಹ ದರ್ಪದ ಅಹಂನಿಂದಾಗಿ ಅವರು ಹೆತ್ತ ಮಕ್ಕಳನ್ನೇ ಅವರೇ ಮರ್ಯಾದೆ ಹತ್ಯೆ ಮಾಡುತ್ತಿಲ್ಲ. ಆದರೆ ಜಾತಿಯನ್ನು ಕಾಪಾಡಿಕೊಳ್ಳುತ್ತಿರುವ ಶೂದ್ರರೂ ಮಾಡುವ ಈ ಪೈಶ್ಚಾಚಿಕ ಕೃತ್ಯಕ್ಕೆ ಪ್ರಬಲವಾದ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಸೃಷ್ಟಿ
ಇದನ್ನೂ ಓದಿ: ಜೂನ್ 25 ರಂದು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗ್ತಿನಿ: ಬಿ. ಆರ್ ಪಾಟೀಲ್
ಇದೆ ಅಲ್ಲವೇ ಕಾಲಕ್ಕೆ ತಕ್ಕಂತೆ – ಸಮಯಕ್ಕೆ ತಕ್ಕಂತೆ ತನ್ನ ಮರ್ಯಾದೆಯನ್ನು ಕಾಪಾಡಿಕೊಳ್ಳುತ್ತಾ- ಸಂವಿಧಾನ ಭಾರತದಲ್ಲಿಯೂ ಸಂವಿಧಾನಾತ್ಮಕವಾಗಿಯೇ ಎಲ್ಲವನ್ನು ಪಡೆದುಕೊಳ್ಳುತ್ತಾ – ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಬದುಕುವ ಬುದ್ಧಿ. ಇಂತಹ ಬುದ್ಧಿ ಶೂದ್ರರಿಗೆ ಹಾಗೂ ದಲಿತರಿಗೆ ಖಂಡಿತ ಬರಲೇ ಇಲ್ಲ. ಇದು ಬರುವುದು ಇಲ್ಲ ಏಕೆಂದರೆ ಇವರು ಈ ನೆಲದ ಮೂಲ ನಿವಾಸಿಗಳು ಅದಕ್ಕಾಗಿ. ಊರಲ್ಲಿ ಒಂದು ಗಾದೆ ಇದೆ ” ಊರ ಒಕ್ಕಲಿದವರಿಗಿಂತ – ಸೇರ್ ಒಕ್ಕಲಿನವರು ಹೆಚ್ಚು ಹೆಚ್ಚು ಊರನ್ನು ಆಳ್ವಿಕೆ ಮಾಡುತ್ತಾರಂತೆ ಹಾಗೂ ತಮ್ಮ ಮಾಂತ್ರಿಕ ಮಾತಿನ ಮೂಲಕ ಊರಿನ ಜನರನ್ನೇ ಮರಳು ಮಾಡುತ್ತಾರಂತೆ ” ಎಂಬ ಮಾತು ಭಾರತಕ್ಕೆ ಆಗಮಿಸಿದ ಆರ್ಯರಿಗೆ ಅನ್ವಯವಾಗುತ್ತದೆ. ಆದರೆ ಈ ನೆಲದ ಮೂಲ ನಿವಾಸಿಗಳ ಕಥೆ ಮೇಲೆ ಹೇಳಿದಂತೆಯೇ ಆಗಿದೆ. ಸೃಷ್ಟಿ
ಆದರೆ, ಶೂದ್ರ ಹಾಗೂ ಶೂದ್ರಾದಿ ಶೂದ್ರರು ಜಾತಿಯನ್ನು ಸೃಷ್ಟಿ ಮಾಡಿದವರಲ್ಲ. ಆದರೆ ಸೃಷ್ಟಿ ಮಾಡಿದವರು ನಾಚಿಕೊಳ್ಳುವ ಹಾಗೆ ಹೆಚ್ಚು ಹೆಚ್ಚು ಕಟ್ಟುನಿಟ್ಟಾಗಿ ಜಾತಿಯತೆ ಪಾಲಿಸುತ್ತಾರೆ – ಹಾಗೂ ಕಾಪಾಡಿಕೊಂಡಿದ್ದಾರೆ . ಇವರ ಈ ಜಾತೀಯತೆಗೆ ಪಾಲನೆಯಲ್ಲಿ ಎಂದಿಗೂ ಯಾವ ಕ್ಷಣದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ಜಾತಿಯ ಶ್ರೇಷ್ಠತೆಯ ವಿಷಯಕ್ಕೆ ಕುಂದು ಬಂದಾಗ ಇದಕ್ಕೆ ಕುಂದು ತರಲು ಅಪೇಕ್ಷೆ ಪಟ್ಟ ಅಸ್ಪೃಶ್ಯ ಜನ ವರ್ಗದ ಪಾರಂಪರಿಕವಾಗಿ ಅವಿನಾಭಾವ ಸಂಬಂಧವನ್ನು ಹೊಂದಿರುವ ತನ್ನೂರಿನವರೇ ಆದ ಕೇರಿಯ ಜನರ ಮನೆ ಹಾಗೂ ಮನಗಳಿಗೆ ಬೆಂಕಿ ಸಂಪೂರ್ಣವಾಗಿ ಸುಟ್ಟು ಕೇಕೆ ಹಾಕುವುದಕ್ಕೂ ಯೇಸುವುದಿಲ್ಲ.
ಧರ್ಮಗಳು ಉದಯಿಸಿದವು , ಮೆರೆದು ನಾಶವಾದವು , ಕಾಲದ ಒತ್ತಡಕ್ಕೆ ಸಿಲುಕಿ ನಾಶವು ಆದವು. ಎಷ್ಟೋ ಧರ್ಮಗಳು ಕಾಲಕಾಲಕ್ಕೆ ವಿದೇಶದಿಂದ ಭಾರತಕ್ಕೆ ಬಂದು ನೆಲೆ ನಿಂತವು ಹಾಗೂ ಮೆರೆದವು . ಇಂದಿಗೂ ಅವು ಮೆರೆಯುತ್ತಲೇ ಇದೆ. ರಾಜ ಮಹಾರಾಜರು ಸಾಮ್ರಾಜ್ಯಗಳನ್ನು ಕಟ್ಟಿ ಮೆರೆದು ಅಳಿದು ಹೋದರು. ಆದರೆ ಇಷ್ಟೆಲ್ಲ ಸಾಂಸ್ಕೃತಿಕ ಬಹುದೊಡ್ಡ ಬದಲಾವಣೆಗಳ ನಡುವೆಯೂ ಶಾಶ್ವತವಾಗಿ ಉಳಿದಿರುವುದು ಮಾತ್ರ ನಾನು ” ಸ್ಪೃಶ್ಯ ” ಎಂಬ ಅಹಂಮಿನ ಮೇಲಿರಿಮೆ. ಇವರ ಮೇಲಿರಿಮಿಗೆ ಪ್ರಮುಖ ಕಾರಣ ಅವರ ಮೇಲೆ ಇರುವ ಬ್ರಾಹ್ಮಣರೆಲ್ಲ ಬದಲಿಗೆ – ಅವರ ಕೆಳಗೆ ಇರುವ ಅಸ್ಪೃಶ್ಯ ಜನ ವರ್ಗ. ಅಸ್ಪೃಶ್ಯರಿಗೆ ನಾವು ಶತಶತಮಾನಗಳಿಂದ ಇವರ ಗುಲಾಮರು ಹಾಗೂ ನಾವು ” ಅಸ್ಪೃಶ್ಯರು” ಎಂಬ ಶಾಶ್ವತ ಕಿಳಿರಿಮೆ .
ಶೂದ್ರ ಜನಾಂಗದವರು ಜಾತೀಯತೆಯನ್ನು ಮಾಡುವುದು ನಮ್ಮ ಪಾರಂಪರಿಕ ಆಸ್ತಿಯೆಂದು ಪಾರಂಪರಿಕವಾಗಿ ಅಜ್ಞಾನದಿಂದ ನಂಬಿದ್ದಾರೆ. (ಇದೇ ನಮ್ಮ ಪಿತ್ರಾರ್ಜಿತ ಆಸ್ತಿ ಎಂದು). ಈ ಹಿನ್ನೆಲೆಯೇ ನಮ್ಮ ಶ್ರೇಷ್ಠತೆಯ ದರ್ಪದ ಕರ್ತವ್ಯ ಎಂದು ಪಾಲಿಸುತ್ತಾರೆ ಇವರು. ಈ ವಿಷಯದಲ್ಲಿ ಮಾತ್ರ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ಭಾರತದ ಹಿನ್ನೆಲೆಯ ಸಂವಿಧಾನದ ಆದರದಲ್ಲಿ ಇವರು ಇವರ ಕೆಳಗಿನ ಜಾತಿಗಳೊಂದಿಗೆ ಸಂಧಾನ ಮಾಡಿಕೊಂಡರೆ ಇವರ ಅಸಂವಿಧಾನದ ನೀತಿ ಎಗ್ಗಿಲ್ಲದೆ ಪ್ರಶ್ನೆ ಮಾಡುತ್ತದೆ. ಈ ವಿಷಯದಲ್ಲಿ ಮಾತ್ರ ಇವರಿಗೆ ಪ್ರಜಾಪ್ರಭುತ್ವ ಭಾರತ ಹಾಗೂ ಸಮ ಸಂಸ್ಕೃತಿಯ ಭಾರತದ ದೇಶವೇ ಗೊತ್ತಿಲ್ಲ. ಇದನ್ನು ಗೊತ್ತು ಮಾಡಿಕೊಳ್ಳುವುದಕ್ಕೂ ಹೋಗುವುದಿಲ್ಲ.
ಇವರಿಗೆ ತಿಳಿದಿರುವುದು ಒಂದೇ ಅವರ ಜಾತಿ ಹಾಗೂ ಆ ಜಾತಿಯ ಶ್ರೇಷ್ಠತೆ ಮಾತ್ರ. ಮುಂದುವರೆದು ಇವರಿಗೆ ತಮ್ಮ ಜಾತಿ ಗೊತ್ತೇ ಹೊರತು ಆ ಜಾತಿ ಕಾಲಕಾಲಕ್ಕೆ ಸೇರಿಕೊಳ್ಳುತ್ತಿರುವ ಧರ್ಮವೇ ಗೊತ್ತಿಲ್ಲ. ಈ ಜಾತಿ ಜನರಿಗೆ ಧರ್ಮದ ದಾರಿಯನ್ನು ನಾನು ಮೇಲೆ ಹೇಳಿದ ಜಾತಿ ಸೃಷ್ಟಿಕರ್ತರೆ ತೋರಿಸಬೇಕು. ಧರ್ಮದ ತೀರ್ಥ ಅವರ ಕೈಯಿಂದ ಬಿದ್ದಾಗ ಮಾತ್ರ ಇವರು ಅದನ್ನು ಸೇವಿಸುತ್ತಾರೆ. ಆದರೆ ಜಾತಿ- ಜಾತಿಯವರು ಎಂದಿಗೂ ಸಹ ಧರ್ಮದ ತೂಪತಿಗೆ ಸೀರಲು ಅಪೇಕ್ಷೆ ಪಟ್ಟವರೇ ಅಲ್ಲ. ಇವರು ಅಪೇಕ್ಷೆ ಪಟ್ಟರೂ ಸಹ ಧರ್ಮದ ವಾರಸುದಾರರು ಇವರನ್ನು ಸೇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ವಿಷಯದಲ್ಲಿ ಮತ್ತೆ ಬಸವಣ್ಣನಂತ ವ್ಯಕ್ತಿ ಉದಯಿಸಿ ಇವರಿಗಾಗಿ ಹೊಸ ಧರ್ಮವನ್ನೇ ಸ್ಥಾಪಿಸಬೇಕು ಅಷ್ಟೇ. ಈಗ ಸ್ಥಾಪನೆಗೊಂಡ ಹೊಸ ಧರ್ಮವನ್ನು ಸಹ ಬ್ರಾಹ್ಮಣರು ಜಾತಿಯನ್ನಾಗಿಸುವುದರಲ್ಲಿ ನಿಶ್ಚಿಮರು. ಜಾತಿಗಳು ಇದ್ದರೆ ತಾನೆ ಬ್ರಾಹ್ಮಣನ ಉಳಿವು. ಶೂದ್ರರಿಗೂ ಸಹ ತಮ್ಮ ದರ್ಪವನ್ನು ಗುರುತಿಸಿಕೊಳ್ಳಲು ಜಾತಿಯೇ ಕಾರಣ.
ಈಗ ಶೂದ್ರರು ಹಾಗೂ ದಲಿತರು ಅವಲಂಬಿಸಿಕೊಳ್ಳುತ್ತಿರುವುದು ಅವರ ಧರ್ಮವೇ ಅಲ್ಲ. ಇಂದು ಇವರು ಬ್ರಾಹ್ಮಣರ ಬ್ರಾಹ್ಮಣ್ಯದೊಂದಿಗೆ ಗುರುತಿಸಿಕೊಳ್ಳಲು ಹಂಬಲಿಸಿದಾಗ ಜಾತಿಯ ಶ್ರೇಷ್ಠತೆಯ ಅಜ್ಞಾನದ ಅಮಲಿನಲ್ಲಿ ಧರ್ಮದ ಚೌಕಟ್ಟಿಗೆ ಒಳಪಡುತ್ತಿದ್ದಾರೆಯೇ ಹೊರತು, ಧರ್ಮದ ಚೌಕಟ್ಟಿನ ಹಿನ್ನೆಲೆಯಿಂದ ಸರ್ವ ಜನಾಂಗವನ್ನು ಸಮನಾಗಿ ಕಾಣುವ – ಜನಾಂಗ ಜನಾಂಗದ ನಡುವೆ ಸೌಹಾರ್ಧತೆ ಹಾಗೂ ಶಾಂತಿಯುತವಾದ ವೃತ್ತಿ ಆಧಾರಿತ ಧರ್ಮದ ಚೌಕಟ್ಟಿಗೆ ಇವರು ಎಂದಿಗೂ ಸಹ ಒಳಪಡುತ್ತಿಲ್ಲ. ಈ ಹಂತದಲ್ಲಿ ಮಾತ್ರ ಇವರಿಗೆ ಧರ್ಮಗಿಂತಲೂ ಜಾತಿಯೇ ಮುಖ್ಯ. ಇಂತಹ ಜಾತಿಗಳನ್ನು ಧರ್ಮದೊಳಗೆ ಸೇರಿಸಿಕೊಂಡು ಧರ್ಮವನ್ನು ಪ್ರತಿಪಾದನೆ ಮಾಡುತ್ತೇವೆ ಎಂದು ಹೇಳಿಕೊಳ್ಳುವುದೇ ಮೂರ್ಖತನ. ಈ ಇಕ್ಕಟ್ಟಿಗೆ ಸಿಲುಕಿರುವುದರಲ್ಲಿ ಭಾರತದ ಸಂವಿಧಾನವು ಸಹ ಹೊರತಾದುದಲ್ಲ .
ದಲಿತರನ್ನು (ಹೊಲ-ಮಾದಿಗರು) ಶೂದ್ರ ಹಾಗೂ ಶೂದ್ರಾದಿ ಶೂದ್ರರ ಹೆಣ್ಣು ಮಗಳು ಪ್ರೀತಿಸುತ್ತಿರುವುದನ್ನು ಕಂಡು ಬಂದರೆ, ತಾವೇ ಹೆತ್ತು- ಸಾಕಿ- ಸುಲುಗಿ ಮುದ್ದಾಗಿ ಬೆಳೆಸಿದ ತಮ್ಮ ಕರುಳು ಬಳ್ಳಿಯ ಮಗಳನ್ನು ತಮ್ಮ ಪಾರಂಪರಿಕ ಜಾತಿಯ ಶ್ರೇಷ್ಠತೆಯ ಕಾರಣಕ್ಕಾಗಿ ಸಾಯಿಸಿ ಅದಕ್ಕೆ “ಮರ್ಯಾದೆ ಹತ್ಯೆ” ಎಂಬ ತಮ್ಮದೇ ಜಾತಿಯ ಅಹಂಕಾರದಿಂದ ಅಜ್ಞಾನದ ಬಿರುದುಗಳನ್ನು ಕೊಟ್ಟಿಕೊಳ್ಳುತ್ತಾರೆ. ಇಷ್ಟಕ್ಕೆ ತೃಪ್ತರಾಗದೆ ತಮ್ಮ ಜಾತಿಯ ಹಿನ್ನೆಲೆಯಿಂದ ನಾನು ಮಾಡಿಕೊಂಡಿರುವ ಅಮಾನವೀಯ ಕಾರ್ಯವನ್ನು ಸಮರ್ಥಿಸಿಕೊಂಡು ತಮ್ಮ ಬೆನ್ನನ್ನು ತಾವೇ ತೊಟ್ಟಿಕೊಂಡು ತಮ್ಮದೇ ಮನಸ್ಥಿತಿಯ ಜಾತಿ ಸಂಕೋಲೆಯ ಜನರ ನಡುವೆ ಮೆರೆಯುತ್ತಾರೆ.

ತಮ್ಮದೇ ಊರಿನಲ್ಲಿ- ಕೇರಿಯಲ್ಲಿ ಶತಶತಮಾನಗಳಿಂದ ಒಂದಾಗಿಯೇ ಜೀವಿಸುತ್ತಿದ್ದರು ಸಹ ನೀವು ಅಸ್ಪೃಶ್ಯ ಜಾತಿಯವರು ಎಂಬ ಕಾರಣಕ್ಕಾಗಿ ” ಹೇರ್ಕಟ್ ಮಾಡುವುದಿಲ್ಲ – ಕಾಫಿ ಕುಡಿಯಲು ಹೋಟೆಲ್ಗೆ ಬಂದರೆ ಸೇರಿಸುವುದಿಲ್ಲ – ದಣಿವಾರಿಸಿಕೊಳ್ಳುವ ಕಾರಣಕ್ಕಾಗಿ ಕುಡಿಯುವ ನೀರಿಗಾಗಿ ಬೋರ್ವೆಲ್ ಮುಟ್ಟಿಸುವುದಿಲ್ಲ – ಕೆರೆ ಬಾವಿಗಳನ್ನು ಮುಟ್ಟಿಸುವುದಿಲ್ಲ – ಪ್ರಜಾಪ್ರಭುತ್ವದ ಹಿನ್ನೆಲೆಯಿಂದ ಬದುಕಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಪಡೆದು ನಾಗರಿಕರಾಗಿ ಬದುಕಲು ಬಿಡುವುದಿಲ್ಲ. ಮುಂದುವರೆದು ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳ ಚಳುವಳಿ ಹಾಗೂ ಸಮಾರಂಭಗಳನ್ನು ಮಾಡುವಂತಿಲ್ಲ. ಇವೆಲ್ಲವನ್ನೂ ಮಾಡುವುದಾದರೆ ಊರಿನ ಶೂದ್ರ ಜಾತಿಯವರ ಕಟ್ಟುನಿಟ್ಟಿನ ಒಪ್ಪಿಗೆಯನ್ನು ಪಡೆಯಬೇಕು. ಇದ್ಯಾವ ಗೋಜಲೀಗೂ ಸಹ ಸಹ ಬ್ರಾಹ್ಮಣರು ಕೈ ಹಾಕುವುದಿಲ್ಲ.
ಅಸ್ಪೃಶ್ಯರು ಇವರ ಈ ನಿಯಮಗಳನ್ನು ಮೀರಿ ಸಂವಿಧಾನ ಬದ್ಧವಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಮುಂದಾದರೆ – ಇವರ ಮೇಲೆ ಶೂದ್ರ ಅಲಿಖಿತ ಸಂವಿಧಾನ ವಿಕೃತವಾಗಿ ಜಾರಿಗೊಳ್ಳುತ್ತದೆ. ಪ್ರಜಾಪ್ರಭುತ್ವದ ಸಂವಿಧಾನಕ್ಕೆ ರೀತಿ ನೀತಿಗಳು ಇವೆ. ಆದರೆ ಶೂದ್ರದ ಪಾರಂಪರಿಕ ಸಂವಿಧಾನಕ್ಕೆ ರೀತಿ ನೀತಿಗಳ ಪ್ರಶ್ನೆಯೇ ಇಲ್ಲ.
ಇಂತಹ ಅಮಾನವೀಯ ಜಾತಿ ಪದ್ಧತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಜಾತಿಯನ್ನು ಸೃಷ್ಟಿ ಮಾಡಿದವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಂತ ಅವರು ಶ್ರೇಷ್ಠರು ಎಂದು ಹೇಳುತ್ತಿಲ್ಲ. ಇಂತಹ ವಿಷಯದಲ್ಲಿ ಮಾತ್ರ ಜಾತಿಯನ್ನು ಸೃಷ್ಟಿ ಮಾಡಿದವರು ಎಂದೆಂದಿಗೂ ಮೊದಲ ಅಪರಾಧಿಗಳೇ.
ಆ ಜಾತಿಗೆ ಕಟ್ಟುನಿಟ್ಟಿನ ಅಮಾನವೀಯ ಪಾಲಿಸಿಯನ್ನು ತಂದು ದರ್ಪದಿಂದ ಸೃಷ್ಟಿ ಮಾಡಿದವರಿಗಿಂತಲೂ – ಈ ಅಮಾನವೀಯ ಕಟ್ಟುಪಾಡುಗಳನ್ನು ಪಾಲಿಸುತ್ತಿರುವ – ಶಾಶ್ವತವಾಗಿ ಅಪೇಕ್ಷಿಸುತ್ತಿರುವವರು ಇನ್ನೂ ಬಹುದೊಡ್ಡ ಅಪರಾಧಿಗಳೇ. ಇವರಿಬ್ಬರ ಅಪರಾಧಿಗಳ ನಡುವೆ ನಿರಪರಾಧಿಗಳಾದರೂ ಸಹ ಅಸ್ಪೃಶ್ಯರು ತಮ್ಮ ಅಸ್ಪೃಶ್ಯತೆಯ ಸಂಕೋಲಿಯಿಂದಲೇ ಬಹುದೊಡ್ಡ ” ಸೂಚಿತ ” ಅಪರಾಧಿಗಳಾಗಿದ್ದಾರೆ.
ಆದರೆ ಶತಶತಮಾನಗಳಿಂದ ಇಂತಹ ಅಪರಾಧವನ್ನು ಮಾಡಿಕೊಂಡು ಬಂದವರಿಗೆ ಭಾರತದಲ್ಲಿ ಮಾತ್ರ ದೇವರು ಹಾಗೂ ಧರ್ಮದ ಹೆಸರಿನ ಹಿನ್ನೆಲೆಯಿಂದಾಗಿ ಯಾವ ಶಿಕ್ಷೆಯು ಆಗಿಲ್ಲ. ಆದರೆ ಇವರೆಲ್ಲರ ಕರ್ಮದ ಶಿಕ್ಷೆಯನ್ನು ಅನುಭವಿಸುತ್ತಿರುವವರು ಮಾತ್ರ ಅವರೇ ಸೃಷ್ಟಿ ಮಾಡಿದ ಅಸ್ಪೃಶ್ಯರು. ಈ ಹಿನ್ನೆಲೆಯಿಂದ ಅಸ್ಪೃಶ್ಯರು ನಿಜಕ್ಕೂ ಅಪರಾಧಿಗಳಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಇದು ಬುದ್ಧ ಬಸವ ಭೀಮರ ವಾಣಿ.
ಇಂಥ ಶಾಶ್ವತ ಅಬೌದ್ಧಿಕ ಅಪರಾಧಿಗಳು “ನೀವು ಅಸ್ಪೃಶ್ಯರು ” ಎಂಬ ಮಾನವ ಮಾನವರನ್ನು ಮುಟ್ಟಿಸಿಕೊಳ್ಳದ – ಮಾನವನಿಗೆ ಬದುಕಲು ಬೇಕಾದ ಮೂಲಭೂತ ಹಕ್ಕುಗಳ ಹಿನ್ನೆಲೆಯಿಂದ ಬೇಕಾಗುವ ಮೂಲಭೂತ ಹಕ್ಕುಗಳಿಂದಲೂ ವಂಚನೆ ಮಾಡಿದ – ಇವರೇ ಸೃಷ್ಟಿ ಮಾಡಿದ ದೇವರು ಹಾಗೂ ದೇವರ ಲೇಪಿತ ಧರ್ಮದ ಹಿನ್ನೆಲೆಯಿಂದ ಇವರಿಂದ ಅನೇಕ ಅಮಾನವೀಯ ಆಚರಣೆಗಳನ್ನು ಬಯಸಿದ ಮೆರೆದ ಹಾಗೂ ಇವುಗಳನ್ನು ಕಾಲಕಾಲಕ್ಕೆ ಜಾರಿಗೊಳಿಸಲು ಅನಿಕಿತ ಕಾನೂನುಗಳನ್ನು ಪಾಲಿಸಿದ ಕಾರಣಕ್ಕಾಗಿ ತಮ್ಮನ್ನು ತಾವೇ “ನಾವು ಸ್ಪೃಶ್ಯರು” ಎಂದು ಕರೆದುಕೊಂಡವರಿಗೆ ಭಾರತ ದೇಶದಲ್ಲಿ ಇವೆ ಎನ್ನಲಾದ ಮುಕ್ಕೋಟಿ ದೇವರುಗಳು ನೀವು ಪಾರಂಪರಿಕವಾಗಿ ಮಾಡುತ್ತಿರುವುದು ಅನ್ಯಾಯ ಎಂದು ಖಂಡಿಸಿ ತಮಗೆ ದತ್ತವಾಗಿ ದೊರಕಿರುವ ಹಿನ್ನೆಲೆಯಿಂದ ಇವರ ಕಣ್ಣುಗಳನ್ನು ಕಿತ್ತಿಕೊಳ್ಳಲೇ ಇಲ್ಲ. ಇವರ ಕಾಲು ಕೈಗಳಿಗೆ ಲಕ್ವ ವಡಿಸಲೇ ಇಲ್ಲ. ಇವರ ವಂಶವನ್ನು ಸರ್ವನಾಶ ಮಾಡಲೇ ಇಲ್ಲ.
ಆದರೆ ಅಸ್ಪೃಶ್ಯರು ಮಾತ್ರ.. ನಾವು ದೇವರ ನೀತಿಗೆ ವಿರುದ್ಧವಾಗಿ ನಡೆದುಕೊಂಡರೆ “ದೇವರು ನಮ್ಮ ಕಣ್ಣನ್ನು ಕಿತ್ತಿಕೊಳ್ಳುತ್ತಾನೆ – ನಮ್ಮ ವಂಶವನ್ನು ನಿರ್ವಂಶವನ್ನಾಗಿ ಮಾಡುತ್ತಾನೆ – ನಮಗೆ ಕೊಡಬಾರದ ಕಷ್ಟವನ್ನು ಕೊಡುತ್ತಾನೆ – ನಮ್ಮ ಕೈ ಕಾಲುಗಳ ಸ್ವಾಧೀನವನ್ನು ಕಿತ್ತುಕೊಳ್ಳುತ್ತಾನೆ ” ಎಂಬ ಇತ್ಯಾದಿ ಮನೋಭಾವನೆಯಿಂದಾಗಿ ದೇವರ ಹೆಸರಿನ ಮೂಲಕ ಇವರನ್ನು ಪ್ರಶ್ನೆ ಮಾಡಲೇ ಇಲ್ಲ. ಇದನ್ನು ಬಂಡವಾಳ ಮಾಡಿಕೊಂಡ ಶೂದ್ರರು ಬ್ರಾಹ್ಮಣ ಹಾಗೂ ಅವರ ಬ್ರಾಹ್ಮಣ್ಯವೂ ಸೃಷ್ಟಿ ಮಾಡಿದ ಜಾತಿಗಿಂತಲೂ, ಸೃಷ್ಟಿಯಾದ ಜಾತಿಯಲ್ಲಿಯೇ ತಮ್ಮ ತಮ್ಮ ಶ್ರೇಷ್ಠತೆಯನ್ನು ಬಯಸಿ ಅದನ್ನು ಕಾಪಾಡಿಕೊಳ್ಳಲು ಜಾತಿಯ ಕಟ್ಟುನಿಟ್ಟಿನ ಪಾಲನೆಯಲ್ಲಿಯೇ ಅಜ್ಞಾನದಿಂದ ಮುಳುಗಿದರು. ಇವರ ಮುಂದೆ ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯವೂ ಸಹ ಸೋತನು – ಸೋತಿತು .
ಜಾತಿಯನ್ನು ಸೃಷ್ಟಿ ಮಾಡಿದವರು ಯಾವುದೇ ವಿಚಾರಣೆಗೆ ಒಳಪಡದೆ ಎರಡುವರೆ ಸಾವಿರ ವರ್ಷಗಳ ಪ್ರಭುತ್ವದ ಆಳ್ವಿಕೆಯಿಂದ ಇಂದಿನ 75 ವರ್ಷಗಳ ಪ್ರಜಾಪ್ರಭುತ್ವದ ಭಾರತದ ವರೆಗೂ ಸಹ ಯಾವುದೇ ವಿಚಾರಣೆಗೆ ಒಳಪಡದೆ – ಕೇವಲ ದೇವರು ಹಾಗೂ ದೇವರ ನಿರ್ಮಿತ ಧರ್ಮದ “ನಿರಪರಾಧಿ”ಗಳಾಗಿ ನಾವು ಶ್ರೇಷ್ಠರು ಎಂದು ಹೇಳಿಕೊಂಡು ಮೆರೆಯುತ್ತಿದ್ದರೆ. ನಮ್ಮದು ಶ್ರೇಷ್ಠ ಜಾತಿ – ನಾವು ಸಾಮಾಜಿಕವಾಗಿ ಮೇಲ್ಜಾತಿಯವರು ಎಂಬ ಅಹಂನ್ನು ಕಾಪಾಡಿಕೊಳ್ಳುಲು ದಲಿತರನ್ನು ಅಸ್ಪೃಶ್ಯತೆ ಹಿನ್ನೆಲೆಯಿಂದ ಹೀನ ಸ್ಥಿತಿಯಲ್ಲಿ ನೋಡುತ್ತಿರುವವರು ‘ ಇದು ನಮ್ಮ ಪಾರಂಪರಿಕ ಜಾತಿ ಶ್ರೇಷ್ಠತೆಯ ಕರ್ತವ್ಯ ‘ ಇಂದು ಅಜ್ಞಾನದಿಂದ ಹೇಳಿಕೊಂಡು – ನಂಬಿಕೊಂಡು ನಾವು ಈ ಕಾರ್ಯದಿಂದಾಗಿ ಎಂದಿಗೂ ಸಹ ” ಅಪರಾಧಿಗಳೇ ಅಲ್ಲ” ಇಂದು ದರ್ಪದಿಂದಲೇ ಬಿಂಬಿಸಿಕೊಳ್ಳುತ್ತಿದ್ದಾರೆ . ಈ ವಿಷಯದಲ್ಲಿ ಮಾತ್ರ ಇವರಿಬ್ಬರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದ ಸಂವಿಧಾನ ಜಾರಿಗೆ ಬಂದಿಲ್ಲ. ಸದ್ಯಕ್ಕೆ ಬರುವುದೂ ಇಲ್ಲ. ಇಂತಹ ಅಜ್ಞಾನಿಗಳ ಸ್ವಯಂ ಘೋಷಿತ ಸ್ವಾತಂತ್ರ್ಯದ ವಿರುದ್ಧವೇ ಅಂಬೇಡ್ಕರ್ ರವರು ನಿಜ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು. ಈಗ ನೀವೇ ಹೇಳಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆಯೇ? ಎಂದು.
ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಅದಕ್ಕೆ ಸ್ಪಷ್ಟವಾದ ಕಾರಣಗಳು ಇದ್ದವು. ಆದರೆ ಧರ್ಮ ಹಾಗೂ ದೇವರ ಲೇಪಿತ ಧರ್ಮದ ಹಿನ್ನೆಲೆಯಿಂದ ಜಾತಿಗಳನ್ನು ಸೃಷ್ಟಿ ಮಾಡಿ, ಈ ಹಿನ್ನಲೆಗಿಂತಲೆ ಅಸ್ಪೃಶ್ಯತೆ ಎಂಬ ಕಳಂಕದಲ್ಲಿ ಇರುವವರ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಷ್ಟವಾದ ನಿದರ್ಶನಗಳಿದ್ದರೂ ಸಹ ಅದನ್ನು ಚಿಗುರುವ ಮೊಳಕೆಯಲ್ಲಿಯೇ ಜಾತಿ ಹಾಗೂ ಜಾತೀಯತೆಯ ಹಿನ್ನೆಲೆಯಿಂದ ಸರ್ವನಾಶ ಮಾಡುತ್ತಿರುವುದು ಈ ಶೂದ್ರರೆ.
ಈ ನೆಲದಲ್ಲಿ ನೀವು ಹೊಲಮಾದಿಗರಾಗಿ, ಅಂದರೆ ಅಸ್ಪೃಶ್ಯರಾಗಿ ಹುಟ್ಟಿರುವುದೇ ನಿಮ್ಮ ಅಪರಾಧ ಎಂದು ಹೇಳಿಕೊಳ್ಳುವ ರೀತಿಯಲ್ಲಿ ಜೀವಿಸಿದ್ದು ಹಾಗೂ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ಬಯಸುತ್ತಿರುವುದು ಯಾರ ಮೂರ್ಖತನ ಎಂಬುದನ್ನು ಪ್ರಜ್ಞಾವಂತರಾದ ನೀವೇ ನಿರ್ಧರಿಸಿ . ಹೀಗೆ ಬಯಸುವ ಮೂರ್ಖರೇ ನಿಜವಾದ ಈ ನೆಲದ ಪಾರಂಪರಿಕ ರಾಷ್ಟ್ರ ದ್ರೋಹಿಗಳು.
ಈ ಕೆಟ್ಟ ಮನೋಭಾವನೆಯೆ ಭಾರತದದ ಸಾಮಾಜಿಕ ಹಾಗೂ ಧಾರ್ಮಿಕ ಚರಿತ್ರೆಯ ಜೀವಂತ ಇರುವ ನಿಜವಾದ ಜೀವಾಳ ಹಾಗೂ ದುರಂತ. ಇಂತಹ ಜೀವಾಳದ ಅಂಶವನ್ನು ವಸ್ತುನಿಷ್ಠವಾಗಿ ಬರೆಯದೆ – ಮತ್ತದೇ ಧರ್ಮ ಹಾಗೂ ದೇವರ ಹೆಸರಿನಲ್ಲಿ ನಾವೆಲ್ಲರೂ ಸಮಾನರು – ನಾವೆಲ್ಲರೂ ಭಾರತದ ಸತ್ಪ್ರಜೆಗಳು – ಭಾರತದ ನಾವೆಲ್ಲರೂ ವಸುದೇವ ಕುಟುಂಬಕಂ ಎಂಬ ತತ್ವಕ್ಕೆ ಒಳಗಾದವರು – ನಾವೆಲ್ಲರೂ ಅಣ್ಣತಮ್ಮಂದಿರು ಅಕ್ಕತಂಗಿಯರು – ಇಷ್ಟೆಲ್ಲದ ನಡುವೆ ನಾವೆಲ್ಲರೂ ” ಹಿಂದುಗಳು “, “ಹಿಂದೂಗಳೆಂದರೆ ಇಂಡಿಯಾ”, “ಇದರ ರಕ್ಷಣೆಗೆ ಭಾರತದ ರಕ್ಷಣೆ” ಎಂದು ಭಾವನಾತ್ಮಕವಾಗಿ ಹೇಳಿಕೊಂಡು ಅಸ್ಪೃಶ್ಯರನ್ನು ಅಸ್ಪೃಶ್ಯರಾನಗಿ ನೋಡಿದ್ದು ಮಾತ್ರ ಇವರೇ ಆದದ್ದು ಭಾರತ ಹಾಗೂ ಭಾರತೀಯತೆಯ ಬಹುದೊಡ್ಡ ದುರಂತ.
ಇಷ್ಟೆಲ್ಲದರ ನಡುವೆ ಇದನ್ನು ಹೇಳಬೇಕು
ಹೀಗೆ ಜಾತೀಯತೆ ಪಾಲಿಸುವುದರಲ್ಲಿ ದಲಿತರೇನು ಹಿಂದೆ ಬಿದ್ದಿಲ್ಲ. ಇಂದು ದಲಿತ ಸಮುದಾಯ ಎಂದು ಗುರುತಿಸಿಕೊಳ್ಳುವ ಹೊಲೆಯ- ಮಾದಿಗ- ವಡ್ಡ- ಭೋವಿ- ಲಂಬಾಣಿ- ವಾಲ್ಮೀಕಿ- ಮ್ಯಾಸಬೇಡ – ಊರುಬೇಡ – ಊರುಗೊಲ್ಲ – ಕಾಡುಗೊಲ್ಲ – ಚನ್ನ ದಾಸ- ದೊಂಬಿ ದಾಸ ಇನ್ನಿತರೆ ಅನೇಕ ಸಮುದಾಯಗಳಲ್ಲಿಯೂ ಸಹ ನಮ್ಮದು ಮಾತ್ರ ಶ್ರೇಷ್ಠ ಜಾತಿ ಹಾಗೂ ಉತ್ತಮ ಕುಲ ಎಂದು ಹೇಳಿಕೊಳ್ಳುವ ತಮ್ಮ ತಮ್ಮಲ್ಲಿ ಶ್ರೇಷ್ಠತೆ ಬಯಸುವ ಜಾತೀಯತೆಯ ಅಮಲು ಹೆಚ್ಚಾಗಿಯೇ ಇದೆ.
ಇವರ ಜಾತೀಯತೆಯ ಬ್ರಾಹ್ಮಣ್ಯ ಜಾತಿ ಸೃಷ್ಟಿ ಮಾಡಿದ ಬ್ರಾಹ್ಮಣರನ್ನು ಮೀರಿಸುವಂತದ್ದೆ ಆಗಿದೆ. ಇಂತಹ ಅಜ್ಞಾನದ ನೀತಿ ಪಾಲಕರಾದ ಇವರನ್ನು ಶೂದ್ರಗಿಂತ ಬ್ರಾಹ್ಮಣರೇ ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ. ಇವರ ಉಪಯೋಗವೇ ಬ್ರಾಹ್ಮಣರ ಸದ್ಗತಿಗೆ ಪೂರಕವಾದುದು. ಬ್ರಾಹ್ಮಣರು ತಮ್ಮ ಸ್ವಾರ್ಥಕ್ಕಾಗಿ ಸ್ಥಾಪಿಸಿರುವ ಜಾತಿ ಹಾಗೂ ಧರ್ಮವನ್ನು ಉಳಿಸಿಕೊಳ್ಳಲು ಇವರ ಹಣೆಗಳಿಗೆ ಕುಂಕುಮವನ್ನು ಹಾಕಲೇಬೇಕು ಹಾಗೂ ಹೆಗಲಿಗೆ ಕೇಸರಿ ಟವಾಲನ್ನು ಹಾಕುವಂತೆ ನೋಡಿಕೊಳ್ಳಬೇಕು. ಇವರಿಗೆ ದತ್ತಮಾಲಾ ಹನುಮಮಾಲಾ ಅಯ್ಯಪ್ಪನ ಮಾಲೆಯನ್ನು ಕಾಲಕಾಲಕ್ಕೆ ಹಾಕುವಂತೆ ನೋಡಿಕೊಳ್ಳಬೇಕು.
ಶೂದ್ರರ ಅಸ್ಪೃಶ್ಯತೆಯ ಕಠೋರತೆ
ಬ್ರಾಹ್ಮಣರ ಕುತಂತ್ರದ ಬಗ್ಗೆ ಮೇಲೆ ಬರೆದಿರುವ ಮಾದರಿಯಲ್ಲಿ ಇಂದು ನಗರಗಳಲ್ಲಿ ಒಂದೆರಡು ಪ್ರಶ್ನೆಗಳನ್ನು ಕೇಳಿ ಅವರಿಗೆ ಸರಿಕಂಡರೆ ಬ್ರಾಹ್ಮಣರು ತಮ್ಮ ಬ್ರಾಹ್ಮಣ್ಯವನ್ನು ಬದಿಗೆ ಹೆಸರಿಸಿ ದಲಿತರಿಗೆ ಬಾಡಿಗೆ ಮನೆಯನ್ನು ಕೊಡುವುದನ್ನು ನಾನು ನೋಡಿದ್ದೇನೆ ಹಾಗೂ ಸ್ವತಃ ಪಡೆದುಕೊಂಡಿದ್ದೇನೆ.
ಆದರೆ ನಾನು ಮೇಲೆ ಉಲ್ಲೇಖಿಸಿರುವ ಶೂದ್ರ ಜಾತಿಯ ಜನ ವರ್ಗದವರು (ಹೊಲಮಾದಿಗರಿಗೆ) ಯಾವ ಜಾತಿ ಎಂಬ ಒಂದೇ ಒಂದು ಪ್ರಶ್ನೆಯನ್ನು ಕೇಳಿ ಜಾತಿ ತಿಳಿದ ತಕ್ಷಣವೇ ತಮ್ಮ ಜಾತಿಯ ಅಂಧಕಾರದ ಅಜ್ಞಾನದ ಮೂಟೆಯನ್ನು ಒತ್ತಿಕೊಂಡ ಬಾರದಲ್ಲಿ ಕೆಟ್ಟದಾಗಿ ನೋಡಿ – ಅಸಹ್ಯವಾಗಿ ವರ್ತಿಸಿ – ಅರ್ಧ ಬಾಗಿಲನ್ನು ಮುಚ್ಚಿಕೊಂಡು ಇನ್ ಅರ್ಧದಲ್ಲಿ ಹೇಳುವ ಮಾತೇ ಮನೆಯನ್ನು ಕೊಡುವುದಿಲ್ಲ ಎಂಬುದು . ಇವರು ಆರ್ಥಿಕವಾಗ ಬಡವರಾಗಿದ್ದರೂ ಸಹ ತಿಂಗಳಿಗೆ ಬರುವ ಬಾಡಿಗೆ ಮುಖ್ಯ ಅಲ್ಲ. ಜಾತಿ ಮುಖ್ಯ. ಬದಲಿಗೆ ಯಾವ ಜಾತಿಯವನಿಗೆ ಕೊಡಬೇಕು ಎಂಬುದು ಮುಖ್ಯ.
ಬಸವಣ್ಣನ ತತ್ವವನ್ನು ಪಾಲಿಸುತ್ತೇವೆ ಎಂದು ಪುಂಖಾನು ಪುಂಖವಾಗಿ ಹೇಳಿಕೊಳ್ಳುವ ಲಿಂಗಾಯಿತರು ಹಾಗೂ ವೀರಶೈವರು ಸಂಪೂರ್ಣ ಬಸವಣ್ಣನ ವಿರೋಧಿಯಾಗಿ ಈ ವಿಷಯದಲ್ಲಿ ಅಪ್ರಜ್ಞಾವಂತರಾಗಿ ನಡೆದುಕೊಳ್ಳುತ್ತಾರೆ. ಇನ್ನು ಮುಸ್ಲಿಮರು ದೊಡ್ಡ ಮನೆ ಹಾಗೂ ಬಂಗಲೆಗಳನ್ನು ಕಟ್ಟಿಕೊಂಡು ಒಬ್ಬರೇ ಇರುತ್ತಾರೆ. ಮುಸ್ಲಿಮರು ಬಾಡಿಗೆಗಾಗಿ ಕಟ್ಟಿಕೊಂಡಿರುವ ಏರಿಯಾಗಳಲ್ಲಿ ತಾವು ಬಾಡಿಗೆಗೆ ಹೋಗಲು ಬಹು ಕಷ್ಟ. ಮನೆ, ಮನೆಯ ಸುತ್ತಲಿನ ಜನ ದಟ್ಟನೆ ಇತ್ಯಾದಿ ಇತ್ಯಾದಿ ಕಾರಣಗಳು ಇರಬಹುದು. ಶೂದ್ರ ಜಾತಿಯವರಾದ ಒಕ್ಕಲಿಗರು – ಲಿಂಗಾಯಿತರು – ವೀರಶೈವರು – ಹಿಂದುಳಿದ – ಅಲ್ಪಸಂಖ್ಯಾತ ಹಾಗೂ ಕೆಲವು ಮೂಲಭೂತ ದಲಿತರು ( ಬೋವಿ- ವಡ್ಡ.. ಲಂಬಾಣಿ.. ಇತ್ಯಾದಿ ) ಸಹ ಹೊಲ ಮಾದಿಗರಿಗೆ ಯಾವುದೇ ಕಾರಣಕ್ಕೂ ಮನೆ ಕೊಡುವುದಿಲ್ಲ.

ಇವರಲ್ಲಿ ಬ್ರಾಹ್ಮಣರ ಬ್ರಾಹ್ಮಣ್ಯವನ್ನು ಮೀರಿ ಜಾತಿಯ ಅಮಲು ತುಂಬಿರುತ್ತದೆ. ವೇದಿಕೆಯಲ್ಲಿ ಮಾತ್ರ ಜಾತಿ ನಿರ್ಮೂಲನೆಯ ಮಾತುಗಳನ್ನು ತಮ್ಮದೇ ಹಾವಭಾವಗಳಿಂದ ವರ್ಣಿಸುತ್ತಾರೆ. ಅವರ ಬಾಯಿಗೆ ಬಿಟ್ಟಿರುವ ಬಸವಣ್ಣ ಹಾಗೂ ವಚನಕಾರರ ಮಾತುಗಳನ್ನು ಪುಂಖಾನು ಪುಂಖವಾಗಿ ಹೇಳುತ್ತಾರೆ. ಚಪ್ಪಾಳೆ ಹೊಡೆಸಿಕೊಂಡು ಮನೆಗೆ ಹೋಗುತ್ತಾರೆ. ಮನೆಯ ಹೊಸ್ತಲಿಗೆ ಹೋದ ತಕ್ಷಣವೇ ತಮ್ಮ ಜಾತಿಯ ಪೆಡಂಭೂತವನ್ನು ಕಟ್ಟಿಕೊಂಡು ಶಾಶ್ವತವಾದ ಅಜ್ಞಾನದಲ್ಲಿ ಕುಳಿತುಬಿಡುತ್ತಾರೆ.
ಜಾತೀಯತೆಯನ್ನು ಪಾಲಿಸುವವರ ದೃಷ್ಟಿಯಿಂದ ಹಣ್ಣನ್ನು ತಿನ್ನುವವರು ಹಾಗೂ ತಿನ್ನಿಸುವವರು ಯಾರು..? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತರು ತಮ್ಮ ಮನದೊಳಗೆ ಹಾಕಿಕೊಳ್ಳಬೇಕು. ಸಿಪ್ಪೆಯನ್ನು ತಿಂದು ಹಣ್ಣನ್ನು ತಿಂದಿದ್ದೇವೆ ಎಂದು ಹೇಳಿಕೊಳ್ಳುವವರು ಯಾರು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಪ್ರಜ್ಞಾಪೂರ್ವಕವಾಗಿ ಮೂಡಬೇಕು.
ಈ ಪ್ರಶ್ನೆಗೆ ಉತ್ತರ ಅಣ್ಣನ್ನು ( ಜಾತಿ ವ್ಯವಸ್ಥೆ) ಸಂತೃಪ್ತಿಯಾಗಿ ತಿಂದವರು ಹಾಗೂ ಇಂದಿಗೂ ಶಾಶ್ವತವಾಗಿ ತಿನ್ನುತ್ತಿರುವವರು ಮಾತ್ರ ಕಾಲಕಾಲಕ್ಕೆ ತಮ್ಮ ಬ್ರಾಹ್ಮಣ್ಯವನ್ನು ಬದಲಾವಣೆ ಮಾಡಿಕೊಳ್ಳುವ ಬ್ರಾಹ್ಮಣರೆ. ಆದರೆ, ನಾವು ಅಣ್ಣನ್ನು ತಿಂದಿದ್ದೇವೆ ಎಂದು ಅವರು ಎಂದಿಗೂ ಹೇಳಿಕೊಳ್ಳುವುದೇ ಇಲ್ಲ.
ಬದಲಿಗೆ ಅವರು ತಮ್ಮ ಸ್ವಾರ್ಥಕ್ಕಾಗಿ ಸೃಷ್ಟಿ ಮಾಡಿದ ನಾಲ್ಕನೇ ವರ್ಣ ಶೂದ್ರರು ಗಟ್ಟಿ ಕಣ್ಣನ್ನು ಈ ವಿಷಯದಲ್ಲಿ ತಿಂದವರೇ ಆಗಿರುತ್ತಾರೆ. ಆದರೆ ಇವರೆಲ್ಲರೂ ಸೇರಿ ತಮ್ಮ ಶಾಶ್ವತ ದರ್ಪದ ಬದುಕಿಗಾಗಿ ಅಥವಾ ತಮ್ಮ ಶಾಶ್ವತ ಸಕಲ ಅನುಕುಲಕ್ಕಾಗಿ ಸೃಷ್ಟಿ ಮಾಡಿಕೊಂಡ ಶೂದ್ರಾದಿ ಶೂದ್ರರ ( ಪಂಚಮರು ) ಜಾತಿಗಳಿಗೆ ಮಾತ್ರ ಸಿಪ್ಪೆತಿಂದ್ಯೇ ರಸಭರಿತವಾದ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದೇವೆ ಎಂದು ತೇಗುವ ಮಾದರಿಯ ವರ್ತನೆಯನ್ನು ಮಾಡಿ ಎಂದು ಧರ್ಮ ಜಾತಿ ಹಾಗೂ ದೇವರ ಆಜ್ಞೆಯ ಮೂಲಕ ಹೇಳುತ್ತಾರೆ. ಅಸ್ಪೃಶ್ಯರು ಇದನ್ನು ತಲೆಬಾಗಿ ಪಾಲಿಸುತ್ತಾರೆ. ಇಂತಹ ಹೊಟ್ಟೆ ಹಸಿದರೂ ಸಹ ಹೊಟ್ಟೆ ತುಂಬಿದ ಅಜ್ಞಾನದ ಆಚರಣೆಗಳನ್ನಲ್ಲವೇ ದಲಿತರು ( ಅಸ್ಪೃಶ್ಯರು ಎಂದು ಕರೆಸಿಕೊಳ್ಳುವವರು ) ಶತಶತಮಾನದ ಉದ್ದಕ್ಕೂ ತಲೆಬಾಗಿ ಮಾಡಿಕೊಂಡು ಬಂದದ್ದು.
ಬರಲು ಅಪೇಕ್ಷಿಸುತ್ತಿರುವುದು. ಇಂದಿಗೂ ಅಂಬೇಡ್ಕರ್ ಅವರ ಪ್ರಭಾವದಿಂದಾಗಿ ಬೌದ್ಧ ಧರ್ಮದ ಕಡೆ ಮುಖ ಮಾಡಲು ಹಂಬಲಿಸುತ್ತಿರುವ ಜನಾಂಗ ತಾವು ಸಿಪ್ಪೆ ತಿಂದು ಹಣ್ಣು ತಿಂದೆ ಎಂದು ಹೇಳಿಕೊಳ್ಳಲು ಹೆಮ್ಮೆಯಿಂದ ಮಾದಪ್ಪ- ಮಂಟೇಸ್ವಾಮಿ- ರಾಜಪ್ಪಜಿ -ಸಿದ್ದಪ್ಪಾಜಿ- ಬಿಳಿಗಿರಿ ರಂಗನಾಥ ತಿರುಪತಿ ತಿಮ್ಮ – ವೀರಭದ್ರ- ಮಲ್ಲಿಕಾರ್ಜುನ – ಚುಂಚನಗಿರಿ ಭೈರವ ದೇವರುಗಳನ್ನು ಪಾರಂಪರಿಕವಾಗಿ ನಮ್ಮ ಮನೆತನದ ಗೌರವ ಹಿನ್ನೆಲೆ ಎನ್ನುವ ಕಾರಣಕ್ಕಾಗಿ ಪೂಜೆ ಮಾಡಿಕೊಂಡು ಬರುತ್ತಿರುವುದು.
ಈ ದೋಣಿಯ ಮೇಲೂ ಒಂದು ಕಾಲನ್ನು ಹಾಕಿ – ಇತ್ತ ಅಂಬೇಡ್ಕರ್ ಅವರ ಕಟ್ಟ ಬೆಂಬಲಿಗ ಎಂದು ಹೇಳಿಕೊಂಡು ಅವರ ಹಾದಿಯಲ್ಲಿ ಬೌದ್ಧ ಧರ್ಮದ ದೋಣಿಗೂ ಒಂದು ಕಾಲನ್ನು ಹಾಕಿ ಆಷಾಢದ ಭೀಕರ ಗಾಳಿಯಲ್ಲಿ ತೇಲುವ ಸಮುದ್ರದ ಮೇಲೆ ( ಹಿಂದುತ್ವದ ಪ್ರವಾಹದಲ್ಲಿ) ನಾವು ಅಂಬೇಡ್ಕರ್ ರವರು ರೂಪಿಸಿದ ಧರ್ಮದ ಗುರಿಯನ್ನು ತಲುಪಲು ಸಾಧ್ಯವಾಗಬಹುದೇ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ದಲಿತರು ತನ್ನೊಳಗೆ ಹುಟ್ಟಕಕೊಳ್ಳಬೇಕಾಗಿದೆ. ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕಂಡುಕೊಂಡಾಗ ಮಾತ್ರ ಅಸ್ಪೃಶ್ಯರು ” ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡಿದವರಿಗೆ ಹಾಗೂ ಅಸ್ಪೃಶ್ಯತೆಯನ್ನು ಪಾಲಿಸುವವರಿಗೆ ” ಭಾರತದ ರಾಷ್ಟ್ರೀಯತೆ ಹಿನ್ನೆಲೆಯಿಂದ ಉತ್ತರವನ್ನು ಕೊಡಬಹುದು. ಇಲ್ಲದಿದ್ದರೆ ಈಗ ಅನುಭವಿಸುತ್ತಿರುವ ಧಾರ್ಮಿಕ ಅಂಧಕಾರದ ಹಿನ್ನೆಲೆಯಿಂದ ಶಾಶ್ವತವಾಗಿ ಸೊರಗಬೇಕಾಗುತ್ತದೆ.
ಹಣ್ಣುನು ಕಾಲಕಾಲವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಾಯಿ ತುಂಬ ತಿಂದವರಿಗೆ ( ಮಮದಿಯರು – ಮೊಘಲರು – ಬ್ರಿಟಿಷರು – ಹೈದರ್-ಟಿಪ್ಪುವಿನ ಕಾಲದಲ್ಲಿ ) ಇಂದಿನ ಪ್ರಜಾಪ್ರಭುತ್ವ ಹಿನ್ನೆಲೆಯ ಭಾರತದ ಸಂವಿಧಾನ ಹಾಗೂ ಅದರ ಆಶಯಗಳ ಪರಿಚಯ ಚೆನ್ನಾಗಿಯೇ ಗೊತ್ತು. ಈ ಸಂದರ್ಭದಲ್ಲಿ ನಾವು ಹೇಗೆ ಶ್ರೇಷ್ಠತೆಯಿಂದ ಬದುಕಬೇಕೆಂಬ ಪರಿಜ್ಞಾನವೂ ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಸಂವಿದಾನದ ಆಧಾರದ ಮೇಲೆಯೇ ಜಾತಿ ಸೃಷ್ಟಿಕರ್ತರು ತಾವು ಸೃಷ್ಟಿ ಮಾಡಿದ ಜಾತಿಯನ್ನೇ ಬಳಸಿಕೊಂಡು ಹೇಗೆ ತಮ್ಮ ಧರ್ಮ ಹಾಗೂ ಧರ್ಮಲೇಪಿತ ದೇವರನ್ನ ಹೇಗೆ ಉಳಿಸಿಕೊಳ್ಳಬೇಕು – ಬೆಳೆಸಿಕೊಳ್ಳಬೇಕು ಎಂಬುದು ಅವರಿಗೆ ಪಾರಂಪರಿಕ ಅಜ್ಞಾನದಿಂದಲೇ ತಿಳಿದಿದೆ. ಇಂದು ಅವರು ಬದುಕುವ ದಾರಿಯನ್ನು ದಲಿತರೊಂದಿಗೆ ಅವಿನಾಭಾವ ಸಂಬಂಧ ಹಾಗೂ ಸಾಮರತೆಯನ್ನು ಬೆಸೆಯುತ್ತಲೇ ಸಾಧಿಸಿಕೊಳ್ಳುತ್ತಾರೆ. ಇದು ಅವರ ಹುಟ್ಟುಗುಣ.
ಆದರೆ ಸಿಪ್ಪೆ ತಿಂದು ಮುಸ್ಟನ್ನ ತಿಂದವರಂತೆ ಮೆರೆಯುತ್ತಿರುವವರಿಗೆ ಭಾರತದ ಧರ್ಮ ಹಾಗೂ ದೇವರನ್ನು ಮೇಟಿಯನ್ನಾಗಿಸಿಕೊಂಡು ನಿರ್ಮಿಸಿದ ಜಾತಿಗಳ ಪ್ರಜ್ಞಾಪೂರ್ವಕ ಪರಿಜ್ಞಾನ ಇಲ್ಲ. ಇದನ್ನು ಪ್ರಜ್ಞಾಪೂರ್ವಕವಾಗಿ ಹೇಳಿದ ಬುದ್ಧ ಬಸವ ಅಂಬೇಡ್ಕರ್ ಅವರು ಇವರಿಗೆ ತಲುಪನೆ ಇಲ್ಲ. ಮೂರ್ತಿ ಪೂಜೆಯನ್ನೇ ಪರಮ ಭಕ್ತಿಯಿಂದ ಶತಶತಮಾನಗಳಿಂದ ಮಾಡಿಕೊಂಡು ಬಂದ ಇವರಿಗೆ ಬುದ್ಧ- ಅಂಬೇಡ್ಕರ್ ಅವರು ಸಹ ಮೂರ್ತಿಯ ರೂಪದಲ್ಲಿಯೇ ಕಂಡರು.

ಇವರ ಶಾಶ್ವತ “ಸ್ಥಾವರ” ದ ಮನಸ್ಸಿಗೆ ಬುದ್ಧ- ಬಸವ- ಅಲ್ಲಮ- ಬಸವಾದಿ ಶರಣ ಶರಣೀರು ಹಾಗೂ ಅಂಬೇಡ್ಕರ್ ವಾಸ್ತವದ ಜಂಗಮವಾಣಿ ತಲುಪಲೇ ಇಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಹೇಳಿದಂತೆ ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬ ಪರಿಜ್ಞಾನ ಒಂದು ಸಾವಿರ ವರ್ಷಗಳಾದರೂ ಸಹ ಜಾತಿಯನ್ನು ಸೃಷ್ಟಿ ಮಾಡಿದವರಿಗೆ – ಜಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ – ಜಾತಿಯ ಅಂಧಕಾರದಲ್ಲಿ ಶೋಷಣೆಗೆ ಒಳಗಾದವರಿಗೂ ತಿಳಿಯಲೇ ಇಲ್ಲ. ಇದಕ್ಕೆ ಕಾರಣ ಪುರಾಣದ ಹಿನ್ನೆಲೆಯಲ್ಲಿ ನಮ್ಮ ಮನ ಹಾಗೂ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ದೇವರು ಎಂಬ ಅಜ್ಞಾನದಪ್ರಬಲ ಅಸ್ತ್ರ.ಈ ಅಸ್ತ್ರದ ಮುಂದೆ ಯಾವ ಅಣುಬಾಂಬುಗಳೂ ಸಹ ಲೆಕ್ಕಕ್ಕಿಲ್ಲ.
ಇಂತಹ ಅಂಧಕಾರದ ಜನರಿಗೆ 78 ವರ್ಷಗಳ ಸ್ವಾತಂತ್ರ್ಯ ಭಾರತದ ಪರಿಕಲ್ಪನೆ ಗೊತ್ತಿಲ್ಲ – 75 ವರ್ಷಗಳ ಸಂವಿಧಾನದ ಭಾರತದ ಅರಿವೇ ಇಲ್ಲ. ಇಂದು ನಮ್ಮ ಪ್ರಜಾಪ್ರಭುತ್ವ ಭಾರತದಲ್ಲಿ ಆಳ್ವಿಕೆ ಮಾಡುತ್ತಿರುವ ಸಂವಿಧಾನದ ಆಶಯವೂ ಒಂದಷ್ಟು ಗೊತ್ತಿದ್ದರೂ ಸಹ ಅದರ ಬಳಕೆಗೆ ಇಷ್ಟ ಇಲ್ಲ . ಏಕೆಂದರೆ ಇದ್ಯಾವು ಸಹ ಅವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಈ ಸಂವಿಧಾನವನ್ನು ಮೀರಿ ನಾನು “ನನ್ನ ಜಾತಿ” – “ಜಾತಿಯ ಹಿನ್ನೆಲೆಯಿಂದ ನನ್ನದು ಈ ಧರ್ಮ” -“ಧರ್ಮದ ಹಿನ್ನೆಲೆಯಿಂದ ತುಂಬಿರುವ ಅಜ್ಞಾನ ” ಅಜ್ಞಾನದಿಂದಲೇ ಜಾತಿ ಜಾತಿ ಎಂಬ ಅಹಂಕಾರ.
ಭಾರತದ ಪ್ರಜ್ಞಾವಂತ ಪ್ರಜೆಗಳಾದ ನೀವೇ ಈಗ ಹೇಳಿ ಜಾತಿ ಮಾಡಿದವರಿಂದ ಹಾಗೂ ಜಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಂದ ಅಸ್ಪೃಶ್ಯತೆಗೆ ಒಳಗಾಗಿರುವವರು ಕೇವಲ “ಭೌತಿಕ ಅಸ್ಪೃಶ್ಯರು ” ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಜಾತಿಯನ್ನು ನಿರ್ಮಿಸಿದವರು ಹಾಗೂ ಈ ಜಾತೀಯತೆಯನ್ನು ಪಾಲಿಸುವವರು ನಿಜವಾಗಲೂ ಶತ ಶತಮಾನಗಳಿಂದ ಈ ನೆಲದ “ಮಾನಸಿಕ ಅಸ್ಪೃಶ್ಯರು” ಎಂಬುದನ್ನು ತಿಳಿಯಬೇಕಾಗಿದೆ. ಈ ಹಿನ್ನೆಲೆಯಿಂದ ಇವತ್ತು ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿರುವ ಹೊಲ ಮಾದಿಗರು ನಿಜ ಅರ್ಥದಲ್ಲಿ ಅಸ್ಪೃಶ್ಯರೆ ಅಲ್ಲ .
ಇಂದು ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿರುವ ಹೊಲ ಮಾದಿಗರು ಬೌದ್ಧಿಕವಾಗಿ ಸ್ಪೃಶ್ಯತೆ ಸ್ನಾನ ಮಾಡಿ ಒಳ್ಳೆ ಬಟ್ಟೆ ಹಾಕಿಕೊಳ್ಳುವ ಮೂಲಕ – ಇನ್ನಿತರೆ ಕಾರ್ಯಗಳನ್ನು ಸಾಧ್ಯ ಮಾಡಿಕೊಳ್ಳುವ ಮೂಲಕ ಅಸ್ಪೃಶ್ಯತೆಯಿಂದ ಮುಕ್ತರಾಗಬಹುದು .
ಆದರೆ, ಬ್ರಾಹ್ಮಣರ ಬ್ರಾಹ್ಮಣ್ಯ ಹಾಗೂ ಶೂದ್ರದ ಮನೆ ಹಾಗೂ ಮನದೊಳಗೆ ಶಾಶ್ವತವಾಗಿ ನೆಲೆಸಿರುವ ಮಾನಸಿಕ ಅಸ್ಪೃಶ್ಯತೆಯಿಂದ ಹೊರ ತರಲು ಯಾವ ಮಾರ್ಗವೂ ಇಲ್ಲ. ಈ ಹಿನ್ನಲೆಯಿಂದ ಇವರೇ ಈ ನೆಲದ ನಿಜವಾದ ಶಾಶ್ವತ ಅಸ್ಪೃಶ್ಯರು.
ಇಷ್ಟಾದರೂ ಸಹ ಬ್ರಾಹ್ಮಣರ ಅಸ್ಪೃಶ್ಯತಾ ಆಚರಣೆಗೆ ಚಲನೆ ಇದೆ – ಶೂದ್ರದ ಅಸ್ಪೃಶ್ಯತಾ ಆಚರಣೆಗೆ ಚಲನ ಇಲ್ಲ. ಈ ವಿಷಯದಲ್ಲಿ ಬ್ರಾಹ್ಮಣರದು ಊರಿಗೆ ಸೇರ್ಪಡೆಗೊಂಡ ಸೇರೋಕ್ಕಲಿನವರಾದರೆ – ಊರಿನಲ್ಲಿ ಶಾಶ್ವತವಾಗಿ ನೆಲೆ ನೆಲೆಸಿರುವ ಶೂದ್ರದ್ದು ಊರ್ಒಕ್ಕಲಿನ ಮಾದರಿಯ ಅಸ್ಪೃಶ್ಯತೆ. ಈ ಊರ ಒಕ್ಕಲಿನ ಜನರಿಗೆ ಬೌದ್ಧಿಕತೆ ಹಾಗೂ ಬೌದ್ಧಿಕತೆಯ ಯಾವುದೇ ಚಲನೆ ಇರುವುದಿಲ್ಲ.
ಅದಕ್ಕಾಗಿ ಗ್ರಾಮ – ನಗರ ಪ್ರದೇಶಗಳಲ್ಲಿ ಇಂದಿಗೂ ಸಹ ಅಸ್ಪೃಶ್ಯತೆ ಎಂಬ ಪಿಡುಗು ಜಟಿಲವಾಗಿದೆ. ನಗರೀಕರಣದಿಂದ ಅಸ್ಪೃಶ್ಯತೆ ಕಡಿಮೆಯಾಗಬಹುದು ಎಂಬುವುದು ಕೆಲವರ ವಾದ. ಆದರೆ ಈ ನಗರಕ್ಕೂ ಬಂದು ಈ ಊರನ್ನು ನಗರೀಕರಣಕ್ಕೆ ಒಳಪಡಿಸಿದವರು ಹಳ್ಳಿಯ ಜನ ಎಂಬುದನ್ನು ನಾವು ಮರೆಯಬಾರದು. ಹಳ್ಳಿಯ ಜನ ಏನೆಲ್ಲ ಹಳ್ಳಿಯಲ್ಲಿ ಬಿಟ್ಟು ಬಂದರೂ ಅವರು ಮರಿಯದೆ ಕೊಂಡುಕೊಂಡು ಬರುವ ಒಂದೇ ಒಂದು ಅಮೂಲ್ಯ ವಸ್ತುವೆಂದರೆ ಎಂದರೆ ಅದು ಜಾತಿ ಹಾಗೂ ಜಾತೀಯತೆ. ಈ ವಿಷಯದಲ್ಲಿ ಶೂದ್ರರದೇ ಮೇಲುಗೈ.
ಇದೆಲ್ಲವೂ ನಾಶವಾಗಿ -ನಾವೆಲ್ಲರೂ ಭಾರತೀಯರಾಗಿ – ಕನ್ನಡ ನಾಡಿನ ಸತ್ಪ್ರಜೆಗಳಾಗಿ , ಸರ್ವ ಜನಾಂಗದ ಶಾಂತಿಯ ತೋಟದ ಮಾದರಿಯಲ್ಲಿ ಜೀವಿಸಿ -ಬದುಕಿ ಊರು – ರಾಜ್ಯ- ರಾಷ್ಟ್ರವನ್ನು ಭದ್ರವಾಗಿ ಕಟ್ಟಿದರೆ ಮಾತ್ರ ಭಾರತ ಪ್ರಪಂಚದ ಭೂಪಟದಲ್ಲಿ ಪ್ರಭುದ್ಧ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಇಲ್ಲದಿದ್ದರೆ ನಾವೇನೇ ಪ್ರಗತಿ ಸಾಧಿಸಿ ಕೊಂಡಿದ್ದೇವೆ ಎಂದು ಕೇವಲ ಭೌತಿಕ ಅಂಶಗಳನ್ನು ಮಾತ್ರ ತೋರಿಸಿ – ಬೌದ್ಧಿಕವಾಗಿ ಶಾಶ್ವತ ಅಂಧಕಾರದಲ್ಲಿ ಮುಳುಗಿ ನಮಗೆ ನಾವೇ ದ್ರೋಹ ಮಾಡಿಕೊಳ್ಳಲು ಅನುವುವಾಗುತ್ತದೆ.
ಮುಂದುವರೆದು ಈ ಹಿನ್ನೆಲೆಯಿಂದ ಪ್ರಪಂಚದ ಭೂಪಟದಲ್ಲಿ ನಾವು ಇನ್ನೂ ಸಹ ಅತ್ಯಂತ ಹೆಚ್ಚು ಹಿಂದುಳಿದ ರಾಷ್ಟ್ರವೇಯಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಇದಾಗಬಾರದು. ನಮ್ಮ ದೇಶವನ್ನು ಭೌತಿಕವಾಗಿ ಕಟ್ಟುವುದರ ಜೊತೆಗೆ ಬೌದ್ಧಿಕವಾಗಿ ಗಟ್ಟಿತನದಿಂದ ಕಟ್ಟೋಣ. ಆಗ ಭಾರತ ಪ್ರಪಂಚದ ಭೂಪಟದಲ್ಲಿ ಗಟ್ಟಿತನವಾಗಿ ನಿಲ್ಲಲು ಸಾಧ್ಯ.
ಇದೇ ಅಂಬೇಡ್ಕರ್ ವಾದದ ತಿರುಳು. ಇದೇ ಅಂಬೇಡ್ಕರ್ ಅವರು ಬಯಸಿದ ಭಾರತದ ಜೀವಾಳ. ಇಂತಹ ಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಬದುಕಿದ್ದು ಹಾಗೂ ಇಂದಿಗೂ ನಮ್ಮ ನಡುವೆ ಬೌದ್ಧಿಕವಾಗಿ ಬದುಕಿರುವುದು. ಅವರ ಬೌಧಿಕತೆಯ ಶಾಶ್ವತ ಇರಿವಿಕೆಯನ್ನು ಅರ್ಥ ಮಾಡಿಕೊಂಡು ನಾವು ಬೌದ್ಧಿಕವಾಗಿ ಸಂಘಟಿತರಾಗಿ ಅಂಬೇಡ್ಕರ್ ವಾದದ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ.
ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋJanashakthi Media
