ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ವಿಶ್ವವಿದ್ಯಾಲಯಗಳು, ಇಲಾಖೆಗಳು, ನಿಗಮಗಳು, ಮಂಡಳಿಗಳು, ಸಹಕಾರ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಿಂಬಾಕಿ) ಹುದ್ದೆಗಳನ್ನು ಭರ್ತಿ ಮಾಡದೇ ಇದ್ದರೆ, ಅಂತಹ ಇಲಾಖೆಗಳ ಮುಖ್ಯಸ್ಥರ ಹೆಸರನ್ನು ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ನೀಡಲಾಗುವುದು ಎಂದು ‘ಬ್ಯಾಕ್‌ಲಾಗ್ ಸಚಿವ ಸಂಪುಟ ಉಪ ಸಮಿತಿ’ ಎಚ್ಚರಿಕೆ ನೀಡಿದೆ.
ವಿವಿಧ ಇಲಾಖೆಗಳಲ್ಲಿ 2025ರ ಜ.24ರವರೆಗೆ 916 ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ. ಈ ಪೈಕಿ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಅತೀ ಹೆಚ್ಚು 530, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 185, ಜಲಸಂಪನ್ಮೂಲ ಇಲಾಖೆಯಲ್ಲಿ 112 ಹುದ್ದೆಗಳು ಖಾಲಿ ಇವೆ. ಬೆಂಗಳೂರು
ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಂತೆ ಹೈಕೋರ್ಟ್‌ನಲ್ಲಿ 2023ರಲ್ಲಿಯೇ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಆರು ತಿಂಗಳ ಒಳಗೆ ಈ ಹುದ್ದೆಗಳನ್ನು ಭರ್ತಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಬಹುತೇಕ ಇಲಾಖೆಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ, 2024ರ ಮಾರ್ಚ್ 26ರಂದೇ ನ್ಯಾಯಾಂಗ ನಿಂದನಾ ಅರ್ಜಿ ದಾಖಲಾಗಿದ್ದು, ಪ್ರಕರಣವು ವಿಚಾರಣಾ ಹಂತದಲ್ಲಿದೆ. ಬೆಂಗಳೂರು
ಇದನ್ನೂ ಓದಿ: ಧ್ವೇಷದ ರಾಜಕಾರಣಕ್ಕೆ ಜಿಲ್ಲೆಯ ಅಭಿವೃದ್ಧಿ ಸ್ಥಗಿತ: ಹೆಚ್.ಡಿ. ರೇವಣ್ಣ ಆಕ್ರೋಶ
ಹೈಕೋರ್ಟ್‌ನಲ್ಲಿರುವ ಈ ಅರ್ಜಿಯನ್ನು ಬ್ಯಾಕ್‌ಲಾಗ್ ಹುದ್ದೆಗಳ ಉಸ್ತುವಾರಿಗಾಗಿ ರಚಿಸಲಾದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ, ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯದಂತೆ, ಒಳ ಮೀಸಲಾತಿ ಜಾರಿಯಾಗುವವರೆಗೆ ಹೊಸತಾಗಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಬಾರದೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) 2024ರ ನ. 25ರಂದು ಸುತ್ತೋಲೆ ಹೊರಡಿಸಿದೆ. ಬೆಂಗಳೂರು
ಡಿಪಿಎಆರ್ ಸುತ್ತೋಲೆ ಹೊರಡಿಸುವುದಕ್ಕೂ ಮೊದಲು, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿರುವ ಇಲಾಖೆಗಳು ಯಾವುದೇ ವಿಳಂಬ ಮಾಡದೆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು. ತಪ್ಪಿದರೆ ಇಲಾಖೆಗಳ ಮುಖ್ಯಸ್ಥರೇ ಹೊಣೆ. ಇಲಾಖೆಗಳ ಮುಖ್ಯಸ್ಥರ ಮಾಹಿತಿಯನ್ನು ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ. ಬೆಂ ಗಳೂರು
ತಕ್ಷಣ ಕ್ರಮ ವಹಿಸಬೇಕು
ಉನ್ನತ ಶಿಕ್ಷಣ ಇಲಾಖೆಯಡಿ ಅನುದಾನಿತ ಕಾಲೇಜುಗಳಲ್ಲಿ ಗ್ರೂಪ್ ‘ಬಿ’ 146 ಹುದ್ದೆಗಳು ಸೇರಿ 332 ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ. ಆ ಪೈಕಿ, ಗ್ರೂಪ್ ‘ಸಿ’ 99 ಮತ್ತು ಗ್ರೂಪ್ ‘ಡಿ’ 87 (ಒಟ್ಟು 186) ಹುದ್ದೆಗಳು. ಗ್ರೂಪ್ ‘ಸಿ’ ಮತ್ತು ಡಿ’ ಹುದ್ದೆಗಳು ಕಾಯಂ ಆಗಿ ಮಂಜೂರಾಗಿರುವುದರಿಂದ ಹೊರ ಗುತ್ತಿಗೆಯಡಿ ಭರ್ತಿ ಮಾಡಿದರೆ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಸಮಿತಿ ಹೇಳಿದೆ. ಬೆಂಗಳೂರು
ಎಂಜಿನಿಯರಿಂಗ್ ಕಾಲೇಜು ಮತ್ತು ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಬೋಧಕ, ಬೋಧಕೇತರ ವೃಂದಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ವಿನಾಯಿತಿ ನೀಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಕೋರಿಕೆ ಸಲ್ಲಿಸಿದೆ. ಬೆಂಗಳೂರು
ನಿಗದಿತ ಕಾರ್ಯಭಾರ ಇಲ್ಲದ 106, ಮುಚ್ಚಿರುವ ಎಂಜಿನಿಯರಿಂಗ್ ಕಾಲೇಜುಗಳ 93, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹುದ್ದೆಗಳು ಖಾಲಿ ಇಲ್ಲದೇ ಇರುವುದರಿಂದ ತುಂಬಲು ಸಾಧ್ಯ ಇಲ್ಲದ 50, ಪಾಲಿಟೆಕ್ನಿಕ್‌ಗಳಲ್ಲಿ ತುಂಬಲು ಸಾಧ್ಯ ಇಲ್ಲದ 349 ಹುದ್ದೆಗಳನ್ನು ಭರ್ತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದೆ. ಆದರೆ, ಕಾರ್ಯಭಾರ ಕೊರತೆ ಕಾರಣಕ್ಕೆ ಬ್ಯಾಕ್‌ಲಾಗ್ ಹುದ್ದೆಗಳಿಗೆ ವಿನಾಯಿತಿ ನೀಡಲು ಅವಕಾಶ ಇಲ್ಲ. ಬ್ಯಾಕ್‌ಲಾಗ್ ಹುದ್ದೆಗಳನ್ನು ಕಾರ್ಯಭಾರ ಇರುವ ಕಾಲೇಜುಗಳಿಗೆ ಮರು ಹಂಚಿಕೆ ಮಾಡಿಕೊಂಡು ನಿಯಮದ ಪ್ರಕಾರ ಭರ್ತಿ ಮಾಡಲೇಬೇಕು ಎಂದು ಸಮಿತಿ ಸೂಚನೆ ನೀಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಲ ಸಂಪನ್ಮೂಲ, ಬಂದರು ಮತ್ತು ಒಳನಾಡು ಜಲಸಾರಿಗೆ, ಸಾರಿಗೆ, ನಗರಾಭಿವೃದ್ಧಿ, ತೋಟಗಾರಿಕೆ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಅರಣ್ಯ, ವೈದ್ಯಕೀಯ ಶಿಕ್ಷಣ ಕೃಷಿ, ಕನ್ನಡ ಮತ್ತು ಸಂಸ್ಕೃತಿ, ಗೃಹ, ಡಿಪಿಎಆರ್, ಕಂದಾಯ, ರೇಷ್ಮೆ ಮತ್ತು ಸಹಕಾರ ಇಲಾಖೆಯಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳಿಗೆ ಸಂಬಂಧಿಸಿದಂತೆಯೂ ಸಮಿತಿ ಚರ್ಚೆ ನಡೆಸಿದೆ. ಆರ್ಥಿಕ ಇಲಾಖೆಯ ಸಹಮತಿ ಇದೆ ಎಂದು ಭಾವಿಸಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಗತ್ಯವಾದರೆ ಕೆಪಿಎಸ್‌ಸಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದ ವಿಶ್ವವಿದ್ಯಾಲಯಗಳ ಕುಲಪತಿಗಳ ವಿರುದ್ಧ ವಿಚಾರಣೆ ನಡೆಸಿ ವರದಿ ನೀಡಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗುವುದು ಎಂದೂ ಸಮಿತಿ ಎಚ್ಚರಿಕೆ ನೀಡಿದೆ.
ಇಲಾಖೆಗಳಿಗೆ ನಿರ್ದೇಶನಗಳೇನು?
- ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಸಹಮತ ಅವಶ್ಯಕತೆ ಇಲ್ಲ
- ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕು
- ಸಾಮಾನ್ಯ ಹುದ್ದೆಗಳೊಂದಿಗೆ ಸೇರಿಸಿ ನೇಮಕಾತಿ ಅಧಿಸೂಚನೆ ಹೊರಡಿಸಲು ಅವಕಾಶ ಇಲ್ಲ
- ಎಲ್ಲ ಇಲಾಖೆಗಳ ಮುಖ್ಯಸ್ಥರು ಸಚಿವ ಸಂಪುಟ ಉಪ ಸಮಿತಿ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು
ನಿಯಮ ಗೊಂದಲ; ತಿದ್ದುಪಡಿಗೆ ಸೂಚನೆ
ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ 2001ರ ನಿಯಮ ಜಾರಿಯಲ್ಲಿದೆ. ಆದರೆ, 2001ರ ಪೂರ್ವದಲ್ಲಿ ಗುರುತಿಸಿದ ಹುದ್ದೆಗಳಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಆ ನಂತರದಲ್ಲಿ ಗುರುತಿಸಿದ ಹುದ್ದೆಗಳಿಗೂ ಈ ನಿಯಮಗಳನ್ನು ಅನ್ವಯಿಸುವ ವಿಚಾರದಲ್ಲಿ ಗೊಂದಲವಿದೆ. ಹೀಗಾಗಿ, ಈ ನಿಯಮಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ. ಈ ಕುರಿತ ಪ್ರಸ್ತಾವವನ್ನು ಸಮಾಜ ಕಲ್ಯಾಣ ಇಲಾಖೆಯು ಡಿಪಿಎಆರ್‌ಗೆ ಸಲ್ಲಿಸಬೇಕು. ಅಲ್ಲದೆ, ಬ್ಯಾಕ್‌ಲಾಗ್ ಹುದ್ದೆಗಳಿಗೆ ಪ್ರಸ್ತುತ ವಯೋಮಿತಿ 29ರಿಂದ 40 ಇರುವುದನ್ನು 29ರಿಂದ 45ಕ್ಕೆ ಪರಿಷ್ಕರಿಸಲು ಕೂಡಾ ನಿಯಮ ತಿದ್ದುಪಡಿಗೆ ಸಮಿತಿ ನಿರ್ಧರಿಸಿದೆ.
ಮುಂಬಡ್ತಿಯಲ್ಲೂ ಪರಿಶಿಷ್ಟ ಜಾತಿಗೆ ಶೇ 17, ಪರಿಶಿಷ್ಟ ಪಂಗಡಕ್ಕೆ ಶೇ 7 ಮೀಸಲಾತಿ ನೀಡಬೇಕಿದೆ. ಹೀಗಾಗಿ, ಡಿಪಿಎಆರ್ 1999ರ ಫೆ. 3 ಮತ್ತು ಏಪ್ರಿಲ್ 13ರಂದು ಹೊರಡಿಸಿದ್ದ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು. ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇದ್ದು, ಎಸ್‌ಸಿ ಮತ್ತು ಎಸ್‌ಟಿ ಅರ್ಹ ಅಭ್ಯರ್ಥಿಗಳು ಮುಂಬಡ್ತಿಗೆ ಲಭ್ಯವಿದ್ದರೆ ಅರ್ಹರಿಗೆ ಮುಂಬಡ್ತಿ ನೀಡಲು ಅವಕಾಶವಾಗುವಂತೆ 2023ರ ನ. 28ರಂದು ಹೊರಡಿಸಿರುವ ಆದೇಶವನ್ನು ತಿದ್ದುಪಡಿ ಮಾಡುವಂತೆಯೂ ಡಿಪಿಎಆರ್‌ಗೆ ಸಮಿತಿ ಸೂಚನೆ ನೀಡಲು ಮುಂದಾಗಿದೆ.
ಇದನ್ನೂ ನೋಡಿ: ನಶಿಸಿಹೋಗುತ್ತಿರುವ ಕನ್ನಡ ಶಾಲೆಗಳು – ಪುರುಷೋತ್ತಮ ಬಿಳಿಮಲೆ ಕಳವಳJanashakthi Media