ಇಡೀ ದೇಶವನ್ನು ಮಾರಾಟಕ್ಕಿಡಲು ಮೋದಿ ತಯಾರಿಯಲ್ಲಿದ್ದಾರೆ: ಎಸ್‌.ಆರ್‌.ಪಾಟೀಲ

ವಿಜಯಪುರ: ಈ ದೇಶದ ವಿಮಾನ ನಿಲ್ದಾಣ, ಬಂದರ್‌, ತೈಲ ಕಂಪನಿಗಳನ್ನು ಮಾರಾಟ ಮಾಡುವ, ದೇಶದ ಸಂಪತ್ತನ್ನು ಕೆಲವೇ ಶ್ರೀಮಂತರು ಅನುಭವಿಸುವಂತೆ ಮಾಡಿರುವ ಪ್ರಧಾನಿ ನರೇಂದ್ರಮೋದಿ ಅವರು ದೇಶವನ್ನು ಮಾರಾಟ ಮಾಡುವುದೇನು ಅನುಮಾನವಿಲ್ಲ ಎಂದು  ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ನೀತಿಗಳ ಬಗ್ಗೆ ವಿವರಿಸಿದರು.

ಇದನ್ನು ಓದಿ: ಕೇಂದ್ರ ಸರ್ಕಾರದ ಕೃಷಿ ಕರಾಳ ಮಸೂದೆ ವಿರುದ್ಧ ರೈತರಿಂದ ಬೃಹತ್‌ ಪ್ರತಿಭಟನೆ

ದೇಶದ ಆಗರ್ಭ ಶ್ರೀಮಂತರಾದ ಅದಾನಿ, ಅಂಬಾನಿ ಈ ದೇಶದ ಮಾಲೀಕರಾಗುವ ಕಾಲ ದೂರ ಉಳಿದಿಲ್ಲ. ಈಗಾಗಲೇ ಇವರ ಒಡತನಕ್ಕೆ ಮೋದಿ ದೇಶದ ಬೃಹತ್‌ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ರೈಲ್ವೆಯನ್ನು ಖಾಸಗಿಕರಣ ಮಾಡಿದ್ದಾರೆ. ಇನ್ನು ದೇಶದ ಜನರನ್ನು ಇವರಿಗೆ ಒತ್ತೆ ಇಡುವುದು ಮಾತ್ರ ಬಾಕಿ ಇದೆ ಎಂದರು. ಇದೇ ಸಂದರ್ಭದಲ್ಲಿ ತೈಲ ಬೆಳಗಳ ಏರಿಕೆಯ ಹಿಂದಿರುವ ಕೇಂದ್ರ ರಾಜ್ಯ ಸರಕಾರದ ತೆರಿಗೆ ನೀತಿಯ ಬಗ್ಗೆಯೂ ವಿವರಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಂಡಿತ ಎಂದ ಅವರು,  ರಾಜ್ಯದಲ್ಲಿ ಬಿಜೆಪಿ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆಯೋ ಅಷ್ಟು ದಿನ ರಾಜ್ಯದ ಜನತೆಗೆ ಸಂಕಷ್ಟ ತಪ್ಪಿದಲ್ಲ. ಬಿಜೆಪಿಯವರು ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತಾರೋ ರಾಜ್ಯದ ಜನತೆಗೆ ಅಷ್ಟು ಅನುಕೂಲ ಎಂದರು.

ಇದನ್ನು ಓದಿ: ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ

ಕೋವಿಡ್‌ ತಡೆಗಟ್ಟುವಲ್ಲಿ ಸರಕಾರ ಅನುಸರಿಸುತ್ತಿರುವ ಕಳಪೆ ನೀತಿಗಳ ಬಗ್ಗೆ ವಿವರಿಸುತ್ತಾ, ದೇಶದಲ್ಲಿ ಇದುವರೆಗೆ ಶೇ 5ರಷ್ಟು ಜನರಿಗೆ ಮಾತ್ರ ಕೋವಿಡ್‌ ಲಸಿಕೆ ಹಾಕಲಾಗಿದೆ. ಕೇಂದ್ರ ಸರ್ಕಾರ ದೇಶದ ಜನರಿಗೆ  ಕೋವಿಡ್‌ ಲಸಿಕೆ ಹಾಕುವುದನ್ನು ಬಿಟ್ಟು 196 ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಿದರು. ದೇಶದ ಜನರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಳುಗಡೆಯಾಗಲಿರುವ ಕೃಷಿ ಭೂಮಿ ಸ್ವಾಧೀನವಾಗಬೇಕಿದೆ, ಮನೆಗಳಿಗೆ ಪರಿಹಾರ ನೀಡಬೇಕಿದೆ ಎಂದು ಇದೇ ಸಂದರ್ಭದಲ್ಲಿ ಎಸ್‌ ಆರ್‌ ಪಾಟೀಲ ಅವರು ಪ್ರಸ್ತಾಪಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ವಿಠಲ ಕಟಕದೊಂಡ, ಎಸ್‌.ಎಂ.ಪಾಟೀಲ ಗಣಿಯಾರ, ರಫೀಕ್‌ ಟಪಾಲ್‌, ಉಸ್ಮಾನ್‌ ಪಟೇಲ್‌, ಜಮೀರ್‌ ಅಹ್ಮದ್‌ ಭಕ್ಷಿ, ಆರ್‌.ಪಿ.ಶಹಾಪೂರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *