ಬೆಂಗಳೂರು: “ಪದವಿ ಪ್ರದಾನ ಸಮಾರಂಭಕ್ಕೆ ಹೋಗದಿರುವುದು ಪದವಿ ನಿರಾಕರಣೆಯಲ್ಲ. ಯಾರು ಪದವಿಪ್ರದಾನ ಮಾಡುವುದಿತ್ತೋ ಅವರಿಂದ ಅರ್ಹತಾ ಪತ್ರ ಪಡೆಯಲು ನಾನು ಸಿದ್ಧನಿರಲಿಲ್ಲವಾದ್ದರಿಂದ ನಾನು ಹೋಗಿ ಅರ್ಹತಾ ಪತ್ರ ಸ್ವೀಕರಿಸಿಲ್ಲ, ಎಂದು ಚಿಂತಕ ಡಾ.ಜಿ.ರಾಮಕೃಷ್ಣ ತಿಳಿಸಿದ್ದಾರೆ. ರಾಜ್ಯಪಾಲ
ಈ ಕುರಿತು ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಅದರ ಪೂರ್ಣ ಪಠ್ಯ ಈ ಕೆಳಗಿನಂತಿದೆ.
ಕನ್ನಡ ವಿ ವಿ, ಹಂಪಿ, ನನಗೆ ನೀಡಿದ ‘ನಾಡೋಜ ‘ ಗೌರವದ ಬಗ್ಗೆ ಕೆಲವು ಸಂವಾದಗಳು ಜರುಗಿವೆ. ಆ ಬಗ್ಗೆ ಒಂದು ವಿವರಣೆ ನೀಡಬಯಸುತ್ತೇನೆ. ಈ ವಿವಿ ಜೊತೆ ನನಗೆ ದೀರ್ಘಕಾಲದ ಸಂಬಂಧವಿದೆ. 30 ವರ್ಷಗಳ ಹಿಂದೆ 2 ವರ್ಷ ನಾನಲ್ಲಿ ಸಂದರ್ಶಕ ಪ್ರಾಧ್ಯಪಕನಾಗಿದ್ದು “ಭಾರತೀಯ ವಿಜ್ಞಾನದ ಹಾದಿ ” ಪುಸ್ತಕವನ್ನು ಬರೆದಿದ್ದು ಅದನ್ನು ವಿವಿ ಪ್ರಕಟಿಸಿದೆ. ಮೂರು ಆವೃತ್ತಿಗಳು ಬಂದಿವೆ. ಅಲ್ಲಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ರಾಜ್ಯಪಾಲ
ಕೆಲವು ಸಮಸ್ಯೆಗಳು ತೋರಿಬಂದಾಗ ವಿವಿಯ ಆಹ್ವಾನದ ಮೇರೆಗೆ ಮಧ್ಯಪ್ರವೇಶ ಮಾಡಿದ್ದೇನೆ. ಅಲ್ಲಿಯ ಬಹುತೇಕ ಅಧ್ಯಾಪಕರು ನನಗೆ ಮಿತ್ರರು. ಅಲ್ಲಿಯ ಸಿಂಡಿಕೆಟ್ ನನಗೆ ಗೌರವಾರ್ಥ ‘ನಾಡೋಜ’ ಪದವಿ ನೀಡಿದರೆ ನಾನದನ್ನು ಗೌರವವೆಂದು ಪರಿಗಣಿಸುತ್ತೇನೆ, ನಿರಾಕರಿಸುವ ಪ್ರಶ್ನೆಯೇ ಇಲ್ಲ. ಬೇರೇನೋ ಕಾರಣಕ್ಕೆ ನಾನು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿಲ್ಲ. ಮಾನ್ಯ ಕುಲಪತಿಗಳಿಗೆ ಪತ್ರ ಬರೆದು ಗೌರವ ಸ್ವೀಕರಿಸುವುದಾಗಿ ಮೊದಲೇ ತಿಳಿಸಿದ್ದೇನೆ.
ಇದನ್ನೂ ಓದಿ: ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ – ಭಾಗ 2
ಪದವಿ ಪ್ರದಾನ ಸಮಾರಂಭಕ್ಕೆ ಹೋಗದಿರುವುದು ಪದವಿ ನಿರಾಕರಣೆಯಲ್ಲ. ಯಾರು ಪದವಿಪ್ರದಾನ ಮಾಡುವುದಿತ್ತೋ ಅವರಿಂದ ಅರ್ಹತಾ ಪತ್ರ ಪಡೆಯಲು ನಾನು ಸಿದ್ಧನಿರಲಿಲ್ಲವಾದ್ದರಿಂದ ನಾನು ಹೋಗಿ ಅರ್ಹತಾ ಪತ್ರ ಸ್ವೀಕರಿಸಿಲ್ಲ, ಆಷ್ಟೇ. ಕನ್ನಡ ವಿವಿ ಬಗ್ಗೆ ನನಗೆ ಆಗಾಧ ಗೌರವವಿದೆ, ಅದರೊಡನ ಸಂಬಂಧ ನನಗೆ ಸದಾ ಆಪ್ಯಾಯಮಾನವೇ.
ಈಗಿನ ಕುಲಪತಿಗಳನ್ನು ನಾನು ಅತ್ಯಂತ ಗೌರವದಿಂದ ಕಾಣುತ್ತೇನೆ, ಅವರ ಮುತ್ಸದ್ದಿತನವನ್ನು ಆದರಿಸುತ್ತೇನೆ. ಅಲ್ಲಿಯ ಇತರರೆಲ್ಲಾ ನನ್ನ ಸ್ನೇಹ — ಗೌರವಗಳಿಗೆ ಪಾತ್ರರು. ಹೀಗಿರುವಾಗ ವಿವಿ ನೀಡುವ ಗೌರವವನ್ನು ತಿರಸ್ಕರಿಸುವ ಸಾಧ್ಯತೆ ಏನೂ ಇಲ್ಲ. ಹೋಗಿ ಗೌರವ ಸ್ವೀಕರಿಸದಿರಲು ಬೇರೇನೋ ಒಂದು ಪ್ರಬಲ ಕಾರಣವಿದೆ, ಆಷ್ಟೇ.

ರಾಜ್ಯದ ಈಗಿನ ರಾಜ್ಯಪಾಲರಿಂದ ನಾನು ಗೌರವ ಸ್ವೀಕರಿಸಲು ಸಿದ್ಧನಿರಲಿಲ್ಲ, ಈಗಲೂ ಇಲ್ಲ. ಅದಕ್ಕೆ ಕಾರಣವೂ ಇಲ್ಲಿ ಅಪ್ರಸ್ತುತ. ಕನ್ನಡದ ವಿವಿ ಮತ್ತು ಅದು ನೀಡುವ ಗೌರವವನ್ನು ನಾನು ಸದಾ ಸ್ವಾಗತಿಸುತ್ತೇನೆ, ಅದರಿಂದ ಪುಲಕಿತನಾಗುತ್ತೇನೆ. ಅಲ್ಲಿಯ ಸರ್ವರಿಗೂ ಇದನ್ನು ತಿಳಿಸಿದ್ದೇನೆ ಮತ್ತು ಅವರೆಲ್ಲಾ ಅದನ್ನು ಮಾನ್ಯ ಮಾಡಿದ್ದಾರೆಂದು ಭಾವಿಸುತ್ತೇನೆ. ಅವರೆಲ್ಲರಿಗೆ ಮತ್ತು ನನ್ನೆಲ್ಲ ಸ್ನೇಹಿತ – ಸ್ನೇಹಿತೆಯರಿಗೆ ಇದನ್ನು ವಿನಯದಿಂದ ಅರುಹಬಯಸುತ್ತೇನೆ.
ನಾನು ಯಾರ ಕೈಯಿಂದ ಪ್ರಶಸ್ತಿಪತ್ರ ಪಡೆಯಬೇಕಿತ್ತೋ ಅವರಿಂದ ಪಡೆಯಲಿಲ್ಲ ಮತ್ತು ಮುಂದೆಯೂ ಪಡೆಯುವುದಿಲ್ಲ. ನಮ್ಮ ರಾಜ್ಯದ ನಾಗರಿಕರು ಈ ತೀರ್ಮಾನವನ್ನು ಸ್ವಾಗತಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಎಲ್ಲರಿಗೂ ನಮಸ್ಕಾರ.
ಇದನ್ನೂ ನೋಡಿ: “ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ಪ್ರಚಾರ: ನಿಜವೇ, ರಾಜಕೀಯ ಆಟವೇ?” – ಶಿವಸುಂದರ್ Janashakthi Media
