ಇದು ಹಿಂದಕ್ಕೆ ಹೋಗುವ ಮತ್ತು, ಅವನತಿ ತರುವ ಬಜೆಟ್ ಮಾತ್ರವೇ ಅಲ್ಲ, ಒಂದು ನಿರ್ದಯ ಹಾಗೂ ಕ್ರಿಮಿನಲ್ ಬಜೆಟ್ ಕೂಡ. ಇದು ಜನಗಳ ಜೀವನಾಧಾರಗಳ ಮೇಲಿನ ಇಬ್ಬಗೆಯ ದಾಳಿಯನ್ನು ಎದುರಿಸುವುದಿಲ್ಲ. ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತದ “ಸಂಪತ್ತನ್ನು ಬರಿದು” ಗೊಳಿಸಲಾಗುತ್ತಿತ್ತು, ಈ ಸರಕಾರದ ಅಡಿಯಲ್ಲಿ ನಮ್ಮ ಸಂಪತ್ತಿನ ಲೂಟಿಯಾಗುತ್ತಿದೆ.
“ಜನಗಳು ಇಬ್ಬಗೆಯ ಸಂಕಟಗಳಿಂದ ನರಳುತ್ತಿದ್ದಾರೆ. ಕೊರೊನ ಸೋಂಕು ಅವರ ಬದುಕುಗಳು ತತ್ತರಿಸುವಂತೆ ಮಾಡಿದ್ದರೆ, ಬಜೆಟ್ ಪ್ರಸ್ತಾವನೆಗಳು ಅವರ ಸಂಕಟಗಳನ್ನು ಮತ್ತಷ್ಟು ಉಲ್ಬಣಗೊಳಿಸಲಿವೆ”ಎಂದು ಫೆಬ್ರುವರಿ 2 ರಂದು ಬಜೆಟ್ 2020-21ರ ಬಗ್ಗೆ ಆನ್ಲೈನ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದರು.
ಇದನ್ನು ಓದಿ : 2021-22 ರ ಬಜೆಟ್ ಎನ್ನುವ ಒಂದು ಕಣ್ಕಟ್ಟು
ಕೇಂದ್ರ ಸರಕಾರ ಬಹಳಷ್ಟು ಪ್ರತಿಪಾದಿಸುತ್ತಿರುವ V ಆಕಾರದ ಆರ್ಥಿಕ ಪುನಶ್ಚೇತನದ ಮಾತು ಸಂಪೂರ್ಣ ಸುಳ್ಳು, ಪುನಶ್ಚೇತನವೇನಾದರೂ ಆದರೆ ಅದು K ಆಕಾರದ್ದು ಆಗಿರುತ್ತದೆ, ಅಂದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ, ಬಡವರು ಇನ್ನಷ್ಟು ಬಡವರಾಗುತ್ತಾರೆ ಎಂದು ಮುಂದುವರೆದು ಅವರು ಹೇಳಿದರು.
ಈ ಬಜೆಟ್ ದೇಶದ ಬಡಜನಗಳನ್ನು ಸುಲಿದು ಕೊಟ್ಟಿರುವ ‘ಕಾರ್ಪೋರೇಟ್-ಪರ ಉಡುಗೊರೆ’ಎಂದು ಅಣಕಿಸುತ್ತ ಯೆಚುರಿ ಐದು ಮಹತ್ವದ ಅಂಶಗಳನ್ನು ಮುಂದಿಟ್ಟರು.
* ಮೊದಲನೆಯದಾಗಿ, ಇದು ಸ್ವಾವಲಂಬಿ ಬಜೆಟ್ ಎಂಬ ತುತ್ತೂರಿ ಊದಲಾಗುತ್ತಿದೆ. ಇದು ಸಂಪೂರ್ಣ ತಪ್ಪು. ಇದು ಕಾರ್ಫೋರೇಟ್ – ದೇಶೀ ಮತ್ತು ವಿದೇಶೀ ಎರಡೂ-ಬಂಡವಾಳಕ್ಕೆ ಸ್ವಯಂ-ಅಡಿಯಾಳುತನದ ಬಜೆಟ್. ಏಕೆ?
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಏಕೆಂದರೆ ಈ ಬಜೆಟ್ ಭಾರತೀಯ ಜನಗಳ ಸೊತ್ತುಗಳನ್ನು ಮಾರಿ ಅದರಿಂದ 1.75ಲಕ್ಷ ಕೋಟಿ ರೂ.ಗಳನ್ನು ಎತ್ತುವ ಗುರಿ ಇಟ್ಟುಕೊಂಡಿದೆ. ಇದು ನಮ್ಮ ರಾಷ್ಟೀಯ ಸಂಪತ್ತಿನ ಸಂಪೂರ್ಣ ಲೂಟಿ. ನಮ್ಮ ರಾಷ್ಟ್ರೀಯ ಸೊತ್ತುಗಳನ್ನು ಖಾಸಗೀಕರಿಸಲಾಗುತ್ತದೆ. ವಿಮಾ ವಲಯದಲ್ಲಿ ವಿದೇಶಿ ಹೂಡಿಕೆಗಳ ಮಿತಿಯನ್ನು 74ಶೇ.ಕ್ಕೆ ಏರಿಸಲಾಗಿದೆ; ಭಾರತೀಯ ಬ್ಯಾಂಕುಗಳನ್ನು ವಿದೇಶಿ ಬ್ಯಾಂಕುಗಳಿಗೆ ಮಾರುವ ಗುರಿಯಿಟ್ಟುಕೊಳ್ಳಲಾಗಿದೆ. ಇದು ವಿದೇಶಿ ಹಣಕಾಸು ಬಂಡವಾಳಕ್ಕೆ ಜನಗಳ ಸೊತ್ತುಗಳ ಶರಣಾಗತಿ. ಹೀಗೆ ವಹಿಸಿಕೊಂಡ ಮೇಲೆ, ಈ ಸಂಪತ್ತನ್ನು ಮತ್ತೆ ಭಾರತದಲ್ಲಿಯೇ ಹೂಡಲಿಕ್ಕಿಲ್ಲ, ವಿದೇಶಿ ಬಂಡವಾಳಕ್ಕೆ ಜಗತ್ತಿನಲ್ಲಿ ಎಲ್ಲಿ ಹೆಚ್ಚು ಲಾಭಗಳು ಸಿಗುತ್ತವೋ ಅಲ್ಲಿ ಅದು ಹೂಡಿಕೆಯಾಗುತ್ತದೆ. ಆದ್ದರಿಂದ ಈ ಬಜೆಟ್ ಜನಗಳಿಗಾಗಿಯೂ ಅಲ್ಲ, ದೇಶದ ಅರ್ಥವ್ಯವಸ್ಥೆಗಾಗಿಯೂ ಅಲ್ಲ.
“ವಾವ್! ಕೇವಲ ಬಾಗಿಲನ್ನಷ್ಟೇ ಪೂರ್ಣ ತೆರಯುತ್ತಿರಿ ಅಂದುಕೊಂಡಿದ್ದೆ”
ವ್ಯಂಗ್ಯಚಿತ್ರ ಕೃಪೆ: ಸುಭಾನಿ, ಡೆಕ್ಕನ್ ಕ್ರಾನಿಕಲ್
* ಎರಡನೆಯ ಅಂಶ: ಲಕ್ಷಾಂತರ ರೈತರು ರಸ್ತೆಗಳಲ್ಲಿ ಪ್ರತಿಭಟನೆಗಳ ನಡುವೆ ಇದ್ದಾರೆ. ಅವರು ಪರಿಹಾರ ಕೇಳುತ್ತಿದ್ದಾರೆ. ಅದರ ಬದಲಿಗೆ, ಸರಕಾರ ಕೊಟ್ಟಿರುವುದು ಗಮನಾರ್ಹ ಕಡಿತಗಳನ್ನೇ.
ಇದನ್ನು ಓದಿ : ಕೇಂದ್ರ ಬಜೆಟ್ 2021 : ಯಾವುದು ದುಬಾರಿ?! ಯಾವುದು ಅಗ್ಗ?!!
ಕೋಟ್ಯಂತರ ರೂ.ಗಳಷ್ಟು ರಸಗೊಬ್ಬರ ಸಬ್ಸಿಡಿಯನ್ನು ಕಡಿತ ಮಾಡುತ್ತಿದೆ; ಆಹಾರ ಸಬ್ಸಿಡಿ ಗಮನಾರ್ಹವಾಗಿ ಕಡಿತವಾಗಿದೆ. ಇದು ರೇಶನ್ ಅಂಗಡಿಗಳನ್ನು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ತಟ್ಟುತ್ತದೆ; ಹಣದುಬ್ಬರ, ಒಟ್ಟು ಬೆಲೆಯೇರಿಕೆ ಇರುವಾಗ ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದೆ; ಹಿಂದಿನ ವರ್ಷದ ಮೂರನೇ ಒಂದು ಭಾಗ ಮಾತ್ರ ಉಳಿದಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚು ತೆರಿಗೆ ಮತ್ತು ಅದರಿಂದ ಸಂಪತ್ತು ರಾಶಿ ಹಾಕುವ ದಿಕ್ಕಿನಲ್ಲಿ ಸಾಗುತ್ತಿದೆ. ನಿರುದ್ಯೋಗ ಏರುತ್ತಿದೆ, ಆದರೆ ಮನರೇಗ ಬಜೆಟಿನಲ್ಲಿ 42ಶೇ. ಕಡಿತವಾಗುತ್ತದೆ. ಇದರಿಂದ ಮತ್ತಷ್ಟು ನಿರುದ್ಯೋಗ. ಆರೋಗ್ಯ ಬಿಕ್ಕಟ್ಟಿನ ನಡುವೆ ಆರೋಗ್ಯದ ಮೇಲೆ ಬಜೆಟ್ ಕಡಿತವಾಗಿದೆ. ಜನಗಳ ಆಕಾಂಕ್ಷೆಗಳನ್ನು ಹುಸಿಗೊಳಿಸಲಾಗುತ್ತಿದೆ.
* ಮೂರನೆಯದ್ದು, ಸರಕಾರ ಹೆಚ್ಚು ವೆಚ್ಚ ಮಾಡಿದಾಗಲೇ ಜನಗಳಿಗೆ ಪರಿಹಾರ ಸಿಗಲು ಸಾಧ್ಯ..ಆದರೆ ಒಟ್ಟು ಸರಕಾರೀ ವೆಚ್ಚದಲ್ಲಿ ಸ್ಥಗಿತತೆ ಇದೆ.
ಸರಕಾರ ಹೆಚ್ಚು ವೆಚ್ಚ ಮಾಡಿದರೆ, ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆ ನಿರ್ಮಾಣವಾಗುತ್ತದೆ, ಅದರ ಫಲಿತಾಂಶವಾಗಿ ಆರ್ಥಿಕ ಪುನಶ್ಚೇತನ ಉಂಟಾಗುತ್ತದೆ. ಆದರೆ ಒಟ್ಟು ಸರಕಾರೀ ವೆಚ್ಚದಲ್ಲಿ ಸ್ಥಗಿತತೆ ಇದೆ.
ಇದೂ ಅಲ್ಲದೆ, ಹಣಕಾಸು ಕೊರತೆಯಲ್ಲಿ ಹೆಚ್ಚಳ ಸರಕಾರ ಹೆಚ್ಚು ವೆಚ್ಚ ಮಾಡುತ್ತಿದೆ ಎಂಬುದರ ಸಂಕೇತ ಎಂದು ಕಣ್ಣಿಗೆ ಮಣ್ಣೆರಚುತ್ತದೆ. ನಿಜ ಹೇಳಬೇಕೆಂದರೆ, ಹಣಕಾಸು ಕೊರತೆ ಸರಕಾರ ಹೆಚ್ಚು ವೆಚ್ಚ ಮಾಡುತ್ತಿರುವುದರಿಮದಾಗಿ ಅಲ್ಲ, ಬದಲಾಗಿ ರೆವಿನ್ನೂ ಆದಾಯ ಮುದುಡಿರುವುದರಿಂದಾಗಿ ಆಗಿದೆ. ಹಣದುಬ್ಬರವನ್ನು ಪರಿಗಣನೆಗೆ ತಗೊಂಡರೆ ಸರಕಾರದ ವೆಚ್ಚ ಈ ವರ್ಷ ಕಳೆದ ವರ್ಷಕ್ಕಿಂತ ಬಹಳ ಕಡಿಮೆಯಾಗುತ್ತದೆ. ಆದ್ದರಿಂದ ಆರ್ಥಿಕ ಹಿಂಜರಿತವನ್ನು ಬದಲಿಸುವ ಬದಲು, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಕಾರ್ಪೋರೇಟ್ ತೆರಿಗೆಯನ್ನು ಮತ್ತಷ್ಟು ಇಳಿಸಲಾಗಿದೆ. 1 ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೋರೇಟ್ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಲಿದೆ. ಕಳೆದ ಒಂದು ವರ್ಷದಲ್ಲೇ 100 ಬಿಲಿಯಾಧಿಪತಿಗಳ ಸಂಪತ್ತಿನಲ್ಲಿ 13 ಲಕ್ಷ ಕೊಟಿ ರೂ.ಗಳ ಏರಿಕೆಯಾಗಿದೆ. ಆದ್ದರಿಂದ ಈ ಬಜೆಟ್ ಯಾವ ದಿಕ್ಕಿನಲ್ಲಿದೆ ಎಂಬುದು ನಮಗೆ ತಿಳಿದಿದೆ.
* ನಾಲ್ಕನೆಯ ಅಂಶವೆಂದರೆ, ಬಂಡವಾಳಕ್ಕೆ ಹೆಚ್ಚು ರಿಯಾಯ್ತಿಗಳನ್ನು ಕೊಡುವುದರ ಅರ್ಥ ಹೆಚ್ಚಿನ ಹೂಡಿಕೆ, ಅದರಿಂದಾಗಿ ಹೆಚ್ಚಿನ ಆರ್ಥಿಕ ಬೆಳವಣಿಗೆ ಎಂದು ಸರಕಾರ ಹೇಳುತ್ತಿರುವಾಗಲೇ ಇದೆಲ್ಲವೂ ಸಂಭವಿಸಿದೆ. ಹೆಚ್ಚು ರಿಯಾಯ್ತಿಗಳಿಂದ ಹೆಚ್ಚಿನ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದು ನಿಜವಲ್ಲ. ಇದು ದೋಷಪೂರಿತ ತರ್ಕ.
ಹೂಡಿಕೆ ಹೆಚ್ಚಿ ಉತ್ಪಾದನೆ ಹೆಚ್ಚಿದರೂ, ಈ ಉತ್ಪನ್ನಗಳ ಮಾರಾಟವಾಗಲು ಮಾರುಕಟ್ಟೆಯಲ್ಲಿ ಬೇಡಿಕೆ ಇರಬೇಕಾಗುತ್ತದೆ. ಆದರೆ ಅಂತಹ ಬೇಡಿಕೆ ಇಲ್ಲ. ಆದ್ದರಿಂದ ಈ ರೀತಿಯ ಹೂಡಿಕೆ ಜನಗಳ ನಡುವೆ ಅಂತರವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದೇನೂ ಅಪೇಕ್ಷಣಿಯ ಮಾದರಿಯಾಗಲಾರದು. ಹೆಚ್ಚಿನ ಸರಕಾರೀ ವೆಚ್ಚ ಎಂದರೆ, ಹೆಚ್ಚಿನ ಉದ್ಯೋಗಾವಕಾಶ ನಿರ್ಮಾಣ ಮತ್ತು ಅದರಿಂದ ಹೆಚ್ಚಿನ ಬೇಡಿಕೆ ನಿರ್ಮಾಣ.
* ಕೊನೆಯ ಅಂಶ ಒಕ್ಕೂಟ ರಚನೆ ಕುರಿತಾದ್ದು.
ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯದ ಹಂಚಿಕೆ ಆಗುತ್ತದೆ. ಉಪಕರ(ಸೆಸ್) ಮತ್ತು ಅಧಿಕರ(ಸರ್ಚಾರ್ಜ್) ಹಂಚಿಕೆ ಇರುವುದಿಲ್ಲ. ಇವು ಕೇಂದ್ರ ಸರಕಾರದ ಬಳಿಯೇ ಉಳಿಯುತ್ತವೆ. ಈ ಬಜೆಟಿನಲ್ಲಿ ಕೃಷಿಯ ಹೆಸರಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಒಂದು ಸೆಸ್ ಹಾಕಲಾಗಿದೆ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಏರುತ್ತವೆ. ಆದರೆ ಪ್ರಧಾನಿಗಳು ಹೇಳುತ್ತಾರೆ, ಅಬಕಾರಿ ಸುಂಕವನ್ನು ಇಳಿಸಲಾಗುತ್ತದೆ. ಇದರ ಅರ್ಥ ರಾಜ್ಯಗಳು ಈ ಬಾಬ್ತಿನಲ್ಲಿ ಪಡೆಯುವ ಆದಾಯ ಕಡಿತಗೊಳ್ಳುತ್ತದೆ. ಇದರಿಂದ ರಾಜ್ಯಗಳ ಪಾಲಿನಲ್ಲಿ ಖೋತಾ ಆಗುತ್ತದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರದಲ್ಲಿ ಇಳಿಕೆ 20,000 ಕೋಟಿ ರೂ.ಗಳಿಗಿಂತಲೂ ಹೆಚ್ಚು. ರಾಜ್ಯಗಳಿಗೆ ಸಂಪನ್ಮೂಲಗಳು ಇಲ್ಲದಂತಾಗುತ್ತದೆ. ಇದು ಅವುಗಳ ಹಣಕಾಸನ್ನು ಬಹಳವಾಗಿ ತಟ್ಟುತ್ತದೆ. ರಾಜ್ಯಗಳು ಭಿಕ್ಷಾಪಾತ್ರೆ ಹಿಡಿದು ಕೇಂದ್ರದ ಬಳಿ ಬರಬೇಕಾಗುತ್ತದೆ. ಇದು ಜನಗಳ ಮತ್ತು ರಾಜ್ಯಗಳ ಘನತೆಗೆ ಕುಂದು ತರುತ್ತದೆ. ಇದು ಬಹಳ ಪ್ರತಿಗಾಮಿ.
ಒಟ್ಟಾಗಿ, ಇದು ಹಿಂದಕ್ಕೆ ಹೋಗುವ, ಅವನತಿ ತರುವ ಬಜೆಟ್ ಮಾತ್ರವೇ ಅಲ್ಲ, ಒಂದು ನಿರ್ದಯ ಮತ್ತು ಕ್ರಿಮಿನಲ್ ಬಜೆಟ್ ಕೂಡ. ಇದು ಜನಗಳ ಜೀವನಾಧಾರಗಳ ಮೇಲಿನ ಇಬ್ಬಗೆಯ ದಾಳಿಯನ್ನು ಎದುರಿಸುವುದಿಲ್ಲ. ಇದು ನಮ್ಮ ರಾಷ್ಟ್ರೀಯ ಸೊತ್ತುಗಳ ಲೂಟಿ. ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತದ “ಸಂಪತ್ತನ್ನು ಬರಿದು”ಗೊಳಿಸಲಾಗುತ್ತಿತ್ತು, ಈ ಸರಕಾರದ ಅಡಿಯಲ್ಲಿ ನಮ್ಮ ಸಂಪತ್ತಿನ ಲೂಟಿಯಾಗುತ್ತಿದೆ.
ಬ್ಯಾಂಕ್ಸ್ ತಗೊಳ್ಳಿ.. ಏರ್ ಲೈನ್ಸ್ ತಗೊಳ್ಳಿ…ಏರ್ ಪೋರ್ಟ್ ತಗೊಳ್ಳಿ…
ಬಿಪಿಸಿಎಲ್ ತಗೊಳ್ಳಿ…ಶಿಪ್ಪಿಂಗ್ ಕಾರ್ಪೋರೇಷನ್ ತಗೊಳ್ಳಿ
…ಸ್ವಲ್ಪ ಎಲ್ ಐ ಸಿ ಯನ್ನೂ ತಗೊಳ್ಳಿ
(ವ್ಯಂಗ್ಯ ಚಿತ್ರ: ಅಲೋಕ್ ನಿರಂತರ್)