ಸಪ್ಟಂಬರ್ 17; 1948 ಹೈದರಾಬಾದ್‍ ಸಂಸ್ಥಾನ ಸ್ವತಂತ್ರ ಭಾರತಕ್ಕೆ ಸೇರ್ಪಡೆಯಾದ ದಿನ

74 ವರ್ಷದ ಹಿಂದೆ, ಈ ದಿನ ಸಪ್ಟೆಂಬರ್ 17, 1948 ರಂದು ಹೈದರಾಬಾದ್ ನಿಜಾಮ್ ಶರಣಾದರು ಮತ್ತು ಆತನ ಆಳ್ವಿಕೆಯಲ್ಲಿದ್ದ ಸಂಸ್ಥಾನವು ಭಾರತೀಯ ಒಕ್ಕೂಟದ ಭಾಗವಾಯಿತು. ಭಾರತ ಆಗಸ್ಟ್ 15, 1947ರಂದು ಸ್ವತಂತ್ರವಾದಾಗ ಈತ ಭಾರತ ಒಕ್ಕೂಟವನ್ನು ಸೇರಲು  ನಿರಾಕರಿಸಿದವರಲ್ಲಿ ಪ್ರಮುಖರು. ಆದರೆ  ಸಪ್ಟಂಬರ್ 13ರಂದು ಆರಂಭವಾದ ಭಾರತೀಯ ಸೇನಾಪಡೆಯ ‘ಪೋಲೀಸ್‍ ಕಾರ್ಯಾಚರಣೆ’ಯನ್ನು ಎದುರಿಸುವುದು ಆತನ ಆಡಳಿತಕ್ಕೆ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಅದಾಗಲೇ ಎರಡು ವರ್ಷಗಳಿಂದ ತೆಲಂಗಾಣದ ರೈತರು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ನಡೆಸಿದ್ದ ಸಶಸ್ತ್ರ  ಹೋರಾಟ ನಿಜಾಮಶಾಹಿಯನ್ನು ಆಮೂಲಾಗ್ರವಾಗಿ ಅಲುಗಾಡಿಸಿ, ದುರ್ಬಲಗೊಳಿಸಿತ್ತು.

ಎರಡನೇ ಮಹಾಯುದ್ಧ ಮುಗಿದ ನಂತರ ದೇಶಾದ್ಯಂತ ಭುಗಿಲೆದ್ದ ರೈತ ಹೋರಾಟಗಳಲ್ಲಿ ತೆಲಂಗಾಣ ರೈತರ ಹೋರಾಟ ವಿಶಿಷ್ಟವಾದದ್ದು. ಅದುವರೆಗೂ ಬ್ರಿಟಿಶ್‍ ಸರಕಾರದ ನಿಷೇಧಕ್ಕೊಳಗಾಗಿದ್ದ ಕಮ್ಯುನಿಸ್ಟ್ ಪಕ್ಷ ಇದಕ್ಕೆ ನೇತೃತ್ವ ನೀಡುತ್ತಿತ್ತು. ಹೈದರಾಬಾದ್ ನಿಜಾಮನ ಆಳ್ವಿಕೆಯಿದ್ದ ತೆಲಂಗಾಣ ಪ್ರದೇಶದಲ್ಲಿ ಭೂಮಾಲಕತ್ವದ ವಿರುದ್ಧ ರೈತರ ಹೋರಾಟ ಜುಲೈ 4, 1946ರಂದು ಭೂಮಾಲಕರ ಗೂಂಡಾಗಳು ದೊಡ್ಡಿ ಕೊಮರಯ್ಯ ಎಂಬ ರೈತನನ್ನು ಬಲಿ ತೆಗೆದುಕೊಂಡ ನಂತರ ತೀವ್ರ ಸ್ವರೂಪವನ್ನು ಪಡೆಯಿತು. ಭಾರತ ಸ್ವತಂತ್ರವಾಗುವ ವೇಳೆಗೆ ಸುಮಾರು 4000 ಹಳ್ಳಿಗಳಲ್ಲಿ ನಿಜಾಮನ ಆಳ್ವಿಕೆ ಕೊನೆಗೊಂಡಿತ್ತು, ಆತನ ರಜಾಕಾರ ಗೂಂಡಾ ಪಡೆಗಳ ಭಯೋತ್ಪಾದನೆಯಿಂದ ಮುಕ್ತಿ ದೊರೆತಿತ್ತು. ಭೂಮಾಲಕತ್ವವನ್ನು ರದ್ದುಮಾಡಿ ಜನತೆಯ ಸಮಾನಾಂತರ ಆಡಳಿತ ವ್ಯವಸ್ಥೆ ಏರ್ಪಟ್ಟಿತ್ತು. ಭೂಮಿಯನ್ನು ಭೂಮಾಲಕರಿಂದ ಕಸಿದುಕೊಂಡು ಭೂಹೀನರಲ್ಲಿ ಹಂಚಲಾಗಿತ್ತು,  ಬಿಟ್ಟಿ ದುಡಿಮೆ ಮತ್ತು ಇನ್ನಿತರ ಊಳಿಗಮಾನ್ಯ ಶೋಷಣೆಗಳನ್ನು ನಿರ್ನಾಮಗೊಳಿಸಲಾಗಿತ್ತು.

ಗಮನಾರ್ಹ ಸಂಗತಿಯೆಂದರೆ ಸಪ್ಟಂಬರ್ 17, 1947ರಂದು ಹೈದರಾಬಾದ್‍ ಸಂಸ್ಥಾನವನ್ನು ಭಾರತದೊಡನೆ ವಿಲೀನಗೊಳಿಸಿದ ನಂತರವೂ ಭಾರತೀಯ ಸೇನಾಪಡೆಗಳು ಹಿಂದಿರುಗಲಿಲ್ಲ. ಬದಲಿಗೆ ಒಂದು ಮಿಲಿಟರಿ ಆಡಳಿತವನ್ನು ಹಾಕಲಾಯಿತು.  ಅವರು ಈಗ ತಾವು ಅದುವರೆಗೆ ಸಾಧಿಸಿದ್ದನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದ ರೈತ ಹೋರಾಟಗಾರರ  ಮತ್ತು ಕಮ್ಯುನಿಸ್ಟರ ಬೇಟೆಗೆ ಇಳಿದರು. ಮುಂದಿನ ಮೂರು ವರ್ಷಗಳಲ್ಲಿ, 2000ಕ್ಕೂ ಹೆಚ್ಚು ಹಳ್ಳಿಗಳಲ್ಲಿ 30 ಸಾವಿರ ರೈತರನ್ನು ಚಿತ್ರಹಿಂಸೆಗೆ ಗುರಿಪಡಿಸಲಾಯಿತು. ಸುಮಾರು 50 ಸಾವಿರ ಮಂದಿಯನ್ನು ಬಂಧಿಸಿ ಕ್ಯಾಂಪುಗಳಲ್ಲಿ ಇಡಲಾಯಿತು. ಸುಮಾರು 5000 ಮಂದಿ ವರ್ಷಾನುಗಟ್ಟಲೆ ಜೈಲುವಾಸ ಅನುಭವಿಸಬೇಕಾಯಿತು ಎಂದು 1920ರಿಂದ 1950ರ ನಡುವಿನ ದೇಶದ ರೈತ ಆಂದೋಲನದ ಅಧ್ಯಯನ ಮಾಡಿರುವ ಡಿ.ಎನ್‍ ಧನಗೆರೆಯವರು ಹೇಳಿದ್ದಾರೆ. ಕಮ್ಯುನಿಸ್ಟ್ ಪಕ್ಷ ಅಕ್ಟೋಬರ್ 21, 1951ರಂದು ಈ ಹೋರಾಟವನ್ನು ವಿಧ್ಯುಕ್ತವಾಗಿ ಹಿಂತೆಗೆದುಕೊಂಡಿತು. ಮೇಲ್ನೋಟಕ್ಕೆ ಈ ಹೋರಾಟ ವಿಫಲವಾದಂತೆ ಕಂಡರೂ ತೆಲಂಗಾಣ ರೈತರ ಹೋರಾಟ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಕೊನೆಯ ದಶಕದಲ್ಲಿ ತೀವ್ರಗೊಂಡ ರೈತ ಹೋರಾಟಗಳು ಭೂಸುಧಾರಣೆಯನ್ನು ಸ್ವತಂತ್ರ ಭಾರತದ ಆಡಳಿತಗಾರರ ಅಜೆಂಡಾದಲ್ಲಿ ಸ್ಥಾನ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದವು ಎಂದು ಇತಿಹಾಸಕಾರರು ಗುರುತಿಸುತ್ತಾರೆ.

ಆದರೆ ಈಗ ಸಂಘ ಪರಿವಾರದವರು ಸಪ್ಟಂಬರ್ 17 ನ್ನು ಹೈದರಾಬಾದ್‍ ವಿಮೋಚನಾ ದಿನ ಎಂದು ಆಚರಿಸಿ ಇದು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲಕಾರಣರಾದ ತೆಲಂಗಾಣದ ರೈತರ ಧೀರ ಹೋರಾಟದ ಭವ್ಯ ಹೋರಾಟವನ್ನು ಮರೆಮಾಚಲು, ಬದಲಿಗೆ ಇದು ಒಬ್ಬ ಮುಸ್ಲಿಂ ಶಾಸಕನಿಂದ ‘ವಿಮೋಚನೆ’ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಟಿಪ್ಪಣಿ ಮಾಡುತ್ತ, “ಆರ್‌ಎಸ್‌ಎಸ್  ಈ ತಥಾಕಥಿತ ‘ವಿಮೋಚನೆ’ ತನ್ನ ಸಾಧನೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದವಾಗಿದೆ. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, ಸರ್ದಾರ್ ಪಟೇಲ್ ಆರ್‌ಎಸ್‌ಎಸ್ ನ್ನು ನಿಷೇಧಿಸಿದರು. ನಿಷೇಧವು ಫೆಬ್ರವರಿ 4, 1948 ರಿಂದ ಜುಲೈ 11, 1949 ರವರೆಗೆ ಇತ್ತು. ಆದ್ದರಿಂದ ನಿಜಾಮ ಶರಣಾಗತನಾಗುವಂತೆ ಬಲವಂತಪಡಿಸುವುದರಲ್ಲಿ ತಮ್ಮ  ಪಾತ್ರವಿದೆ ಎಂಬ ಬಿಜೆಪಿಯ ದಾವೆ ಹಾಸ್ಯಾಸ್ಪದವಾಗಿದೆ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *