ಪ್ರಾದೇಶಕ ಅಸಮಾನತೆ ನಿವಾರಿಸುವಂತೆ ಪ್ರಭಲ ಹೋರಾಟಗಳು ನಡೆದಿವೆ. ಹೋರಾಟದ ಭಾಗವಾಗಿ 371(J) ಸ್ಥಾನಮಾನ ಸಿಕ್ಕಿದೆ ಯಾದರೂ ಅದು ಜಾರಿಗೊಂಡಿಲ್ಲ. ಜಾರಿಯಲ್ಲಿ ಅನೇಕ ತೊಡಕಗಳು ಎದುರಾಗುತ್ತಿವೆ. ಅವುಗಳನ್ನು ನಿವಾರಿಸುವಂತೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ, SFI, KPRS ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಜನರ ನಡುವೆ ಜಾಗೃತಿ ಮೂಡಿಸಲು ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮಲಗಿರುವ ಸರಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಲು ಸಾಕಾಗುತ್ತಿಲ್ಲ. ಹೈ.ಕ ಅಭಿವೃದ್ಧಿಗಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (HKRDB) ರಚಿಸಿ ಹತ್ತು ವರ್ಷಗಳಾಗುತ್ತಾ ಬಂದಿದೆ. (ಈಗ ಕಲ್ಯಾಣ ಕರ್ಣಾಟಕ ಅಭಿವೃದ್ಧಿ ಮಂಡಳಿ ಎಂದು ಕರೆಯಲಾಗುತ್ತಿದೆ) ಆದರೆ ಈ ಮಂಡಳಿಯ ಉದ್ದೇಶ ಇನ್ನೂ ಜಾರಿ ಆಗಿಲ್ಲ. ಖಾಯಂ ಕಾರ್ಯದರ್ಶಿ ಇಲ್ಲದ ಕಾರಣ ಬಂದ ಅನುದಾನದ ಸಮರ್ಪಕ ಬಳಕೆಯೂ ಇಲ್ಲದಾಗಿದೆ. ಡಾ. ಎಂ ನಂಜುಡ್ಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ತಾಲ್ಲೂಕುಗಳು ಇರುವುದು ಈ ಪ್ರದೇಶದಲ್ಲಿಯೇ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕನಸಿನ ಮಾತಾಗಿದೆ.
ಈ ಭಾಗದಲ್ಲಿ 31 ತಾಲ್ಲೂಕುಗಳಿದ್ದು 40 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿಭಾರಿಯೂ ಗೆದ್ದವರೇ ಚುನಾವಣೆಯಲ್ಲಿ ಮರು ಆಯ್ಕೆ ಯಾಗುತ್ತಿದ್ದಾರೆ. ಹೊಸಬರ ಆಯ್ಕೆಯೂ ನಡೆಯುತ್ತಿದೆ. ಆದರೆ ಇವರ್ಯಾರು ಈ ಪ್ರದೇಶದ ಅಭಿವೃದ್ಧಿಗೆ ಮನಸ್ಸು ಮಾಡಿ ಕೆಲಸ ಮಾಡುತ್ತಿಲ್ಲ. ಕೈಗೊಂಡ ಕಾಮಗಾರಿಗಳು ಅರ್ಧಕ್ಕೆ ನಿಂತದ್ದೆ ಹೆಚ್ಚು. ತಾಲ್ಲೂಕಗಳ ಅಭಿವೃದ್ಧಿಯಲ್ಲಿಯೂ ಅಸಮಾನತೆಯ ಪ್ರಮಾಣ ಹೆಚ್ಚಿದೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಮಂತ್ರಿಯಾಗಿದ್ದರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು ಎಂಬ ಕಾರಣಕ್ಕೆ ಕಲಬುರ್ಗಿ ಮೇಲ್ನೋಟಕ್ಕೆ ಅಭಿವೃದ್ಧಿಯಾದಂತೆ ಕಾಣುತ್ತಿದೆ. ದೇವದುರ್ಗ, ಶಹಪುರ, ಸುರಪುರ, ಬೀದರ್, ಬಸವಕಲ್ಯಾಣ, ಔರಧ್, ಕುಷ್ಟಗಿ, ಯಲಬುರ್ಗಾ, ಕುಕನೂರು, ಆಳಂದ, ಜೇವರ್ಗಿ, ತಾಲ್ಲೂಕಗಳ ಪರಸ್ಥಿತಿ ನೋಡಿದರೆ ಈ ಮಂಡಳಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ತಿಯುತ್ತದೆ. ಜಿಲ್ಲಾಧಿಕಾರಿಗಳು ಯೋಜನೆ ರೂಪಿಸದ ಕಾರಣ ಬಂದ ಹಣ ವಾಪಸ್ ಹೋದ ದಾಖಲೆಗಳು ಇವೆ.
ಈಗ ಸರಕಾರ ‘ಹೈ.ಕ ಪ್ರದೇಶವನ್ನು’ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಈ ಹೆಸರನ್ನು ಅಂತಿಮ ಮಾಡುವ ವೇಳೆ ಈ ಭಾಗದ ಜನರ ಅಭಿಪ್ರಾಯವನ್ನು ಕೇಳಲೆ ಇಲ್ಲ. ಹೆಸರನ್ನು ಬದಲಾಯಿಸುವ ಮೂಲಕ ಈ ಭಾಗದ ಸಮಸ್ಯೆಗಳನ್ನು ಮರೆ ಮಾಚಲಾಗಿದೆ. ಮುಖ್ಯವಾಗಿ ಆಗಬೇಕಿಗಿದ್ದು ಅಭಿವೃದ್ಧಿಯೇ ಹೊರತು ಹೆಸರಿನ ಬದಲಾವಣೆ ಎಲ್ಲ. 371(J) ಕಲಂ ಸಮರ್ಪಕ ಜಾರಿಯ ಜೊತೆಯಲ್ಲಿ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ಪ್ಯಾಕೇಜ್ ಜಾರಿ ಮಾಡಬೇಕಿದೆ. ಮುಖ್ಯವಾಗಿ ಶಾಲೆ, ಕಾಲೇಜ್, ಹಾಸ್ಟೇಲ್ ಗಳ ಬಲವರ್ಧನೆ, ಆರೋಗ್ಯ ಕೇಂದ್ರಗಳ ಸ್ಥಾಪನೆ, ರಸ್ತೆ, ಸಾರಿಗೆ, ಕುಡಿಯುವ ನೀರು, ರೈತರಿಗೆ ನೀರಾವರಿ ಸೌಲಭ್ಯ, ರೈತರು ಬೆಳೆದ ಬೆಲೆಗಳಿಗೆ ಬೆಂಬಲ ಬೆಲೆ, ಸುಸಜ್ಜಿತ ಮನೆ, ನಿವೇಶನ ಇತ್ಯಾದಿಗಳ ಅಗತ್ಯಕ್ಕೆ ಆಳುವ ಸರಕಾರ, ಈ ಭಾಗದ ರಾಜಕಾರಣಿಗಳು, ಅಧಿಕಾರಿಗಳು ಮುಂದಾಗಬೇಕಿದೆ. ಅಸಮತೋಲನದ ನಿವಾರಣೆಗಾಗಿ ಜನರ ನಡುವೆ ಜಾಗೃತೆ ಮೂಡಿಸಲು ಪ್ರಭಲ ಚಳುವಳಿಯೂ ಹೊರ ಹೊಮ್ಮಬೇಕಿದೆ. 371(J) ಜನರ ಹಕ್ಕಾಗಬೇಕೆ ಹೊರತು ರಾಜಕಾರಣಿಗಳ ರಾಜಕೀಯ ಲಾಭದ ಸಂಖ್ಯೆಯಾಗದಿರಲಿ. ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯನಗರ ಹೈಕ ಭಾಗದ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಸರಕಾರ ಹೈದರಾಬಾದ್ ಕರ್ನಾಟಕ ಭಾಗವನ್ನು ಸರಕಾರ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದೆ. ಅದೇ ರೀತಿ ಸರಕಾರ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಿದೆ. ಕೇವಲ ಉತ್ಸವ ಮಾಡದೆ ಕಲ್ಯಾಣ ಮಾಡುವತ್ತ ಸರಕಾರ ಮನಸ್ಸು ಮಾಡಬೇಕಿದೆ.
ವಿಮೋಚನೆಗೊಳಿಸಿದ್ದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು : ಹೈದರಾಬಾದಿನ ಜನತೆಯನ್ನು ನಿಜಾಮನ ಆಳ್ವಿಕೆಯಿಂದ ವಿಮೋಚನೆಗೊಳಿಸಿದ್ದರ ಶ್ರೇಯಸ್ಸು ಪ್ರಧಾನವಾಗಿ ಆಂಧ್ರ ಮಹಾಸಭಾ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಸಲ್ಲಬೇಕು. ನಿಜಾಮನ ಬರ್ಬರ ಪಾಳೆಯಗಾರಿಯ ವಿರುದ್ಧ 1945ರಿಂದ 3 ವರ್ಷಗಳ ಕಾಲ ನಡೆದ ಅತ್ಯಂತ ಸಮರಶೀಲ ಹೋರಾಟಕ್ಕೆ ಈ ರಾಜಕೀಯ ಶಕ್ತಿಗಳು ನಾಯಕತ್ವ ಕೊಟ್ಟಿದ್ದವು. ಇದನ್ನು ಸದೆಬಡಿಯಲು ನಿಜಾಮ ತನ್ನ ಸೈನ್ಯ ಮತ್ತು ಕುಖ್ಯಾತ ಅರೆಸೈನಿಕ ಪಡೆ ರಜಾಕಾರರನ್ನು ಹರಿಯಬಿಟ್ಟಿದ್ದ. ಅದರ ವಿರುದ್ಧ ಕಮ್ಯನಿಸ್ಟ್ ಪಕ್ಷದ ನಾಯಕತ್ವದಲ್ಲಿ ಸಶಸ್ತ್ರ ಗೆರಿಲ್ಲಾ ಹೋರಾಟ ಮಾಡಬೇಕಾಗಿ ಬಂದಿತ್ತು. 1947ರ ಮೊದಲು ಬ್ರಿಟಿಷ್ ಸರಕಾರ ನಿಜಾಮನಿಗೆ ಭಾರತೀಯ ಒಕ್ಕೂಟಕ್ಕೆ ಸೇರದೆ ಸ್ವತಂತ್ರವಾಗಿರಲು ಕುಮ್ಮಕ್ಕು ಕೊಡುತ್ತಿತ್ತು. 1946ರ ಕಾಂಗ್ರೆಸ್ ಲೀಗ್ ಸರಕಾರವಾಗಲಿ, 1947ರಲ್ಲಿ ಬಂದ ಕಾಂಗ್ರೆಸ್ ಸರಕಾರವಾಗಲಿ ನಿಜಾಮನ ವಿರುದ್ಧ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲ. ನಿಜಾಮನ ‘ಸ್ವತಂತ್ರ ಹೈದಾರಾಬಾದು’ ಯೋಜನೆಯನ್ನು ಅಂತರ್ರಾಷ್ಟ್ರೀಯಕರಿಸದಂತೆ ತಡೆಯಲು ಓಲೈಸುವುದರಲ್ಲಿ ಮಗ್ನವಾಗಿತ್ತು. ಇದಕ್ಕಾಗಿ ನವೆಂಬರ್ 1947ರಲ್ಲಿ ನಿಜಾಮನೊಂದಿಗೆ ‘ತಟಸ್ಥ ಒಪ್ಪಂದ’ (Standstill agreement) ಮಾಡಿಕೊಂಡಿತ್ತು. ಹೆಚ್ಚಿನ ವಿವರಗಳಿಗೆ, ಈ ಹೋರಾಟದ ಅಪ್ರತಿಮ ನಾಯಕ ಪಿ.ಸುಂದರಯ್ಯ ಅವರ ಈ ಎರಡು ಪುಸ್ತಕಗಳನ್ನು ಓದಬಹುದು.