ಭಾರತದ ಹಸಿವು 111ಕ್ಕೆ ಏರಿಕೆ; ವಾಡಿಕೆಯಂತೆ ವರದಿ ನಿರಾಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದಲ್ಲಿ ಹಸಿವು ಮತ್ತಷ್ಟು ಹೆಚ್ಚಿದೆ ಎಂದು ಗುರುವಾರ ಬಿಡುಗಡೆಯಾದ ”ಜಾಗತಿಕ ಹಸಿವು ಸೂಚ್ಯಂಕ-2023” ನಿರೂಪಿಸಿದೆ. 125 ದೇಶಗಳ ಪೈಕಿ ಭಾರತವೂ 111 ನೇ ಸ್ಥಾನದಲ್ಲಿದೆ ಎಂದು ವರದಿ ಸೂಚಿಸಿದೆ. 2022ರಲ್ಲಿ ಪ್ರಕಟವಾದ ವರದಿಯಲ್ಲಿ ಭಾರತವೂ 121 ದೇಶಗಳ ಪಟ್ಟಿಯಲ್ಲಿ 107ನೇ ಸ್ಥಾನವನ್ನು ಪಡೆದಿತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ವಾಡಿಕೆಯಂತೆ ವರದಿಯನ್ನು ತಿರಸ್ಕರಿಸಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (102), ಬಾಂಗ್ಲಾದೇಶ (81), ನೇಪಾಳ (69) ಮತ್ತು ಶ್ರೀಲಂಕಾ (60) ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ.

“ಜಾಗತಿಕ ಹಸಿವು ಸೂಚ್ಯಂಕ”ವು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವ ಮತ್ತು ಟ್ರ್ಯಾಕ್ ಮಾಡುವ ಸಾಧನವಾಗಿದೆ. ಇದು ಪ್ರಮುಖವಾಗಿ ಅಪೌಷ್ಟಿಕತೆ, ಮಕ್ಕಳ ಕುಂಠಿತ, ಮಕ್ಕಳ ಕ್ಷೀಣಿಸುವಿಕೆ, ಮಕ್ಕಳ ಮರಣ ಎಂಬ ನಾಲ್ಕು ಘಟಕ ಸೂಚಕಗಳನ್ನು ಆಧರಿಸಿ ಹಸಿವಿನ ಮೌಲ್ಯ ಮಾಪನ ಮಾಡುತ್ತದೆ.

ಇದನ್ನೂ ಓದಿ: ಪ್ಯಾಲೆಸ್ತೈನ್‍ ಮತ್ತು ಇಸ್ರೇಲಿನಲ್ಲಿ ರಕ್ತಪಾತದ ಚಕ್ರ  – ವಿಶ್ವ ಶಾಂತಿ ಮಂಡಳಿ ಆತಂಕ

“2018-22ರ ಅವಧಿಯಲ್ಲಿ ಭಾರತದ ಮಕ್ಕಳ ಕ್ಷೀಣಿಸುವಿಕೆಯ ಪ್ರಮಾಣ 18.7%ದಷ್ಟು ಹೆಚ್ಚಳವಾಗಿದ್ದು, ಇದು ವಿಶ್ವದಲ್ಲೆ ಅತೀ ಹೆಚ್ಚಾಗಿದೆ” ಎಂದು ವರದಿಯು ಹೇಳಿದೆ. ಈ ಅಂಶವೂ ಭಾರತದ ಮಕ್ಕಳಲ್ಲಿ ತೀವ್ರವಾದ ಅಪೌಷ್ಟಿಕತೆಯಿದೆ ಎಂಬುವುದನ್ನು ಸೂಚಿಸಿತ್ತದೆ. ಕ್ಷೀಣಿಸುವಿಕೆಯನ್ನು ಮಕ್ಕಳ ಎತ್ತರಕ್ಕೆ ಹೋಲಿಸಿ ಅವರ ತೂಕದ ಆಧಾರದ ಮೇಲೆ ಅಳೆಯಲಾಗುತ್ತದೆ.

ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣವು  16.6% ರಷ್ಟಿದ್ದು, ಐದು ವರ್ಷದೊಳಗಿನ ಮಕ್ಕಳ ಮರಣವು 3.1% ರಷ್ಟಿದೆ ಎಂದು ವರದಿ ಉಲ್ಲೇಖಿಸಿದೆ. 15 ರಿಂದ 24 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣವು 58.1% ರಷ್ಟಿದೆ ಎಂದು ವರದಿ ಹೇಳಿದೆ.

ವರದಿಯ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಸಚಿವಾಲಯ ಪ್ರತಿಕ್ರಿಯಿಸಿದ್ದು, ವರದಿಯು “ದೋಷಪೂರಿತ” ಮತ್ತು “ದುರುದ್ದೇಶಪೂರಿತ”ವಾಗಿದೆ, ಅದು ಭಾರತದ ನಿಜವಾದ ಹಸಿವನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: Maysore Dasara | ಪಂಡಿತ್ ರಾಜೀವ್ ತಾರಾನಾಥ್ ಬಳಿ ಕಮಿಷನ್ ಕೇಳಿದ ಅಧಿಕಾರಿಗಳು

“ವರದಿಯಲ್ಲಿ ಹಸಿವನ್ನು ತಪ್ಪಾಗಿ ಅಳತೆ ಮಾಡಲಾಗಿದೆ. ಕ್ರಮಶಾಸ್ತ್ರೀಯ ವಿಚಾರದಲ್ಲಿ ಗಂಭೀರ ತಪ್ಪುಗಳಾಗಿವೆ. ಸೂಚ್ಯಂಕದ ಲೆಕ್ಕಾಚಾರಕ್ಕೆ ಬಳಸಲಾಗುವ ನಾಲ್ಕು ಸೂಚಕಗಳಲ್ಲಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ, ಆದರೆ ಮಕ್ಕಳು ಎಲ್ಲಾ ಜನರ ಪ್ರತಿನಿಧಿಯಾಗಿರಲು ಸಾಧ್ಯವಿಲ್ಲ” ಎಂದು ಕೇಂದ್ರ ಸರ್ಕಾರ ಹೇಳಿದೆ.

“ಅಲ್ಲದೆ, ನಾಲ್ಕನೇ ಮತ್ತು ಪ್ರಮುಖ ಸೂಚಕವಾದ ‘ಅಪೌಷ್ಟಿಕತೆಯ (ಪಿಒಯು) ಜನಸಂಖ್ಯೆಯ ಅನುಪಾತ’ವನ್ನು 3,000 ಜನರ ಅತ್ಯಂತ ಸಣ್ಣ ಮಾದರಿ ಗಾತ್ರದ ಮೇಲೆ ನಡೆಸಿದ ಅಭಿಪ್ರಾಯ ಸಂಗ್ರಹವನ್ನು ಆಧರಿಸಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.

2023 ರ ಜಾಗತಿಕ ಹಸಿವು ಸೂಚ್ಯಂಕವು ಕೆಲವು ದೇಶಗಳು ಹಸಿವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ ಎಂದು ತೋರಿಸುತ್ತದೆ ವರದಿ ಹೇಳಿದೆ. 2015 ರಿಂದ ಜಾಗತಿಕ ಮಟ್ಟದಲ್ಲಿ ಸ್ವಲ್ಪ ಪ್ರಗತಿಯನ್ನು ಸಾಧಿಸಲಾಗಿದೆಯಾದರೂ, ವಿಶ್ವದ 43 ದೇಶಗಳಲ್ಲಿ ಹಸಿವು ಗಂಭೀರವಾಗಿದೆ ಅಥವಾ ಆತಂಕಕಾರಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ವಿಡಿಯೊ ನೋಡಿ: ಕೇಂದ್ರೀಯ ವಿ.ವಿ. ‘ಸತ್ಯನಾರಾಯಣ’ನ ಗುಡಿಯಲ್ಲ – ಹೋರಾಟಗಾರರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *