ಹುಬ್ಬಳ್ಳಿ | ಪರ್ಯಾಯ ರಾಜಕಾರಣಕ್ಕಾಗಿ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ‘ಜನದನಿ ರ‍್ಯಾಲಿ’ ಆಯೋಜನೆ – ಕೆ. ಮಹಾಂತೇಶ

ಹುಬ್ಬಳ್ಳಿ : ಪರ್ಯಾಯ ರಾಜಕಾರಣವನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ಉದ್ದೇಶದಿಂದ ಸಿಪಿಐ(ಎಂ) ಪಕ್ಷವು ಬೃಹತ್ ಜನಾಂದೋಲನಕ್ಕೆ ಮುಂದಾಗಿದೆ. ಕೇರಳ ಮಾದರಿಯ ಪರ್ಯಾಯ ರಾಜಕಾರಣವನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ಉದ್ದೇಶದಿಂದ ಸಿಪಿಐ(ಎಂ) ಪಕ್ಷವು ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ‘ಜನದನಿ ರ‍್ಯಾಲಿ’ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯ  ಕಾರ್ಯದರ್ಶಿ ಮಂಡಳಿ ಸದಸ್ಯರಾದ  ಕೆ. ಮಹಾಂತೇಶ ತಿಳಿಸಿದರು.

ಡಿಸೆಂಬರ್ 6ರಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾಂತೇಶ, ನಗರದ ಬೈರಿದೇವರಕೋಪ್ಪ ದಲ್ಲಿ ಮನೆ ಮನೆ ಪ್ರಚಾರ  ಅಭಿಯಾನ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು  ನವೆಂಬರ್ 1ರಿಂದ ಡಿಸೆಂಬರ್ 15ರವರೆಗೆ ರಾಜ್ಯಾದ್ಯಂತ ಮನೆ ಮನೆ ಭೇಟಿ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದ ನಂತರ, ಡಿಸೆಂಬರ್ 21ರಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿಯು ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ‍್ಯಾಲಿ ಎಂಬ ಬೃಹತ್ ಜನಾಂದೋಲನವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ‘ಶೇ. 63ರಷ್ಟು ಭ್ರಷ್ಟಾಚಾರವಿದೆ’ ಹೇಳಿಕೆ ಬಗ್ಗೆ ನ್ಯಾಯಮೂರ್ತಿ ಬಿ. ವೀರಪ್ಪ ಸ್ಪಷ್ಟನೆ

ಈ ರ‍್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಮಧ್ಯಮ ಹಾಗೂ ಬಡ ರೈತರು, ಬಗರ್‌ಹುಕುಂ ಸಾಗುವಳಿದಾರರು, ಭೂಸ್ವಾಧೀನ ವಿರೋಧಿ ಹೋರಾಟ ನಿರತ ಸಂತ್ರಸ್ತ ರೈತರು, ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ಸರ್ಕಾರಿ ಯೋಜನಾ ಕಾರ್ಮಿಕರು, ಖಾಸಗಿ ಮತ್ತು ಸರ್ಕಾರಿ ವಲಯದ ಗುತ್ತಿಗೆ ನೌಕರರು, ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ ಕೃಷಿ ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಜನರು ಇದರಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಸಿಪಿಐ(ಎಂ) ನೇತೃತ್ವದ ಕೇರಳ, ಹಿಂದಿನ ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಸರ್ಕಾರಗಳು ಜಾರಿಗೊಳಿಸಿದ ಜನಪರ ನೀತಿಗಳು ಜನರ ಬದುಕನ್ನು ಹೇಗೆ ಸುಧಾರಿಸಿವೆ ಎಂಬುದನ್ನು ವಿವರಿಸಲಾಗುತ್ತಿದೆ. ರಾಜ್ಯದಲ್ಲಿ ಸಿಪಿಐ(ಎಂ) ಮತ್ತು ಇತರ ಎಡಪಂಥೀಯ ಶಕ್ತಿಗಳು ನಡೆಸುತ್ತಿರುವ ಪರ್ಯಾಯ ರಾಜಕಾರಣವನ್ನು ಜನರು ಬೆಂಬಲಿಸಬೇಕಾದ ಅಗತ್ಯವನ್ನೂ ತಿಳಿಸಲಾಗುತ್ತಿದೆ. ಸಿಪಿಐ(ಎಂ) ಶಾಖೆಗಳ ನೇತೃತ್ವದಲ್ಲಿ ನವೆಂಬರ್ 1ರಿಂದ ಡಿಸೆಂಬರ್ 15ರವರೆಗೆ ರಾಜ್ಯಾದ್ಯಂತ ನೂರಾರು ಕಾರ್ಯಕರ್ತರು ಕರಪತ್ರ ಮತ್ತು ಕಿರುಪುಸ್ತಕಗಳ ವಿತರಣೆ ಮೂಲಕ ಸಾವಿರಾರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಜನಸಾಮಾನ್ಯರ ಬದುಕಿನ ಮೇಲೆ ಬೀರಿರುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕರು ಎದುರಿಸುತ್ತಿರುವ 20ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮನೆ ಮನೆಗಳಿಂದ ಸಹಿ ಸಂಗ್ರಹ ಮತ್ತು ನಿಧಿ ಸಂಗ್ರಹವನ್ನೂ ನಡೆಸಲಾಗುತ್ತಿದೆ. ಇದಕ್ಕೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೆ. ಮಹಾಂತೇಶ ಹೇಳಿದರು.

ಡಿಸೆಂಬರ್ 21ರಂದು ನಡೆಯುವ ಬಹಿರಂಗ ಸಭೆಯಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯೂರೊ ಸದಸ್ಯರಾದ ಯು. ವಾಸುಕಿ ಹಾಗೂ ರಾಜ್ಯದ ಪ್ರಮುಖ ಸಿಪಿಐ(ಎಂ) ನಾಯಕರು ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ ಪತ್ತಾರ, ಬಸವರಾಜ ಪೂಜಾರ, ಗುರುಸಿದ್ಧಪ್ಪ ಅಂಬಿಗೇರ, ಬಿ.ಎನ್. ಪೂಜಾರಿ, ಎ . ಎಂ ಖಾನ್‌   ಉಪಸ್ಥಿತರಿದ್ದರು.

ಇದನ್ನೂ ನೋಡಿ : ಚುನಾವಣಾ ಆಯೋಗ RSSನ ಶಾಖೆಯೆ? ಕ್ಲಿಪ್ಟನ್ ಡಿ ರೊಜಾರಿಯೋ Janashakthi Media

 

 

 

Donate Janashakthi Media

Leave a Reply

Your email address will not be published. Required fields are marked *