ರೈತ ಆಂದೋಲನಕ್ಕೆ ವಿಜಯ: ಸಂಭ್ರಮಾಚರಣೆಯೊಂದಿಗೆ ಊರುಗಳತ್ತ ಹೆಜ್ಜೆ ಹಾಕಿದ ಹೋರಾಟಗಾರರು

ನವದೆಹಲಿ: ವಿವಾದಿತ ತಿದ್ದುಪಡಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಬಾರದು, ಅವುಗಳನ್ನು ಹಿಂಪಡೆಯಬೇಕೆಂದು ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ನಡೆಸುತ್ತಿದ್ದ ಪ್ರತಿಭಟನೆಯು ಇಂದು ಅಂತ್ಯಗೊಳ್ಳಲಿದೆ. ರೈತರ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಿಂದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಸೇರಿದಂತೆ ಹಲವು ಸಂಘಟನೆಗಳು ವಿಜಯೋತ್ಸವ ಆಚರಿಸುತ್ತಾ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

ಒಂದು ವರ್ಷದ ರೈತರ ಪ್ರತಿಭಟನೆಯು ಯಶಸ್ವಿಯಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರವು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದಿದೆ. ಅಲ್ಲದೆ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ರೈತರಿಗೆ ಭರವಸೆ ನೀಡಿದೆ. ಸರ್ಕಾರದ ಭರವಸೆಯೊಂದಿಗೆ ಪ್ರತಿಭಟನೆ ಹಿಂಪಡೆದಿರುವ ರೈತರು, ರೈತ ಸಂಘಟನೆಗಳು, ಪ್ರತಿನಿಧಿಗಳು ಟಿಕ್ರಿ ಗಡಿಭಾಗದಲ್ಲಿ ನೃತ್ಯ ಮಾಡುತ್ತಾ ವಿಜಯೋತ್ಸಾಹ ನಡೆಸಿದರು. ಅಲ್ಲಿ ಹಾಕಿದ್ದ ಟೆಂಟ್-ಡೇರೆಗಳನ್ನು, ಗಾಜಿಪುರ ಗಡಿಯಲ್ಲಿದ್ದ ಟೆಂಟ್ ಗಳನ್ನು ತೆರವುಗೊಳಿಸುತ್ತಿದ್ದಾರೆ.

ವರ್ಣರಂಜಿತ ದೀಪಗಳಿಂದ ಅಲಂಕರಿಸಲ್ಪಟ್ಟ ಟ್ರ್ಯಾಕ್ಟರ್‌ಗಳು ಪ್ರತಿಭಟನಾ ಸ್ಥಳಗಳಿಂದ ವಿಜಯದ ಹಾಡುಗಳನ್ನು ಮೊಳಗಿಸಿ ಹೊರಟವು. ವೃದ್ಧರು ತಮ್ಮ ಬಣ್ಣಬಣ್ಣದ ರುಮಾಲುಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರೆ, ಯುವಕರು ನೃತ್ಯ ಮಾಡಿ ಸಂತಸ ವ್ಯಕ್ತಪಡಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಸೇರಿದಂತೆ ಹಲವು ಸಂಘಟನೆಗಳು ನೀಡಿದ್ದ ವಾಗ್ಧಾನದಂತೆ ಇಂದು ದೆಹಲಿ ಗಡಿಯನ್ನು ಖಾಲಿ ಮಾಡುವುದಾಗಿ ಮತ್ತು ಜನವರಿ 15 ರಂದು ಮತ್ತೊಂದು ಸಭೆ ನಡೆಸುವುದಾಗಿ ರೈತರು ಹೇಳಿದ್ದಾರೆ.

ಗಾಜಿಪುರ ಗಡಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಕಾಯತ್, ಇಂದು ಬೆಳಗ್ಗೆ ರೈತರ ದೊಡ್ಡ ಗುಂಪು ಪ್ರತಿಭಟನಾ ಸ್ಥಳ ತೊರೆದಿದೆ. ಇಂದಿನ ಸಭೆಯಲ್ಲಿ ಸಭೆ ನಡೆಸಿ ಪ್ರಾರ್ಥನೆ, ಭಜನೆ, ನೃತ್ಯ ಮಾಡಿ ಸಂತೋಷದಿಂದ ತಮ್ಮೂರಿಗೆ ತೆರಳುತ್ತಾರೆ. ಈಗಾಗಲೇ ಹಲವರು ಗಡಿ ತೊರೆದಿದ್ದಾರೆ. ಎಲ್ಲರೂ ಸಂಪೂರ್ಣವಾಗಿ ತೊರೆಯುವ ಪ್ರಕ್ರಿಯೆ ಮುಗಿಯಲು ನಾಲ್ಕೈದು ದಿನಗಳು ಬೇಕಾಗಬಹುದು, ನಾನು ಡಿಸೆಂಬರ್ 15ಕ್ಕೆ ತೆರಳುತ್ತೇನೆ ಎಂದರು.

ಪಂಜಾಬ್‌ನ ಮೋಗಾದ ರೈತ ಕುಲ್ಜೀತ್ ಸಿಂಗ್ ಔಲಾಖ್ ‘ಹೋರಾಟದ ಸ್ಥಳವಾದ ಸಿಂಘು ಗಡಿ ನಮ್ಮ ತವರು ಮನೆಯಾಗಿತ್ತು. ಈ ಆಂದೋಲನ ದೇಶದ ರೈತರನ್ನು ಒಗ್ಗೂಡಿಸಿತು. ನಾವು ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಕರಾಳ ಕಾನೂನಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ್ದೇವೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ಮನೆಗೆ ಹಿಂದಿರುಗುವ ಮೊದಲು ಹೇಳಿದರು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಸಾವಿರಾರು ರೈತರು ವರ್ಷಗಳಿಗೂ ಅಧಿಕ ಕಾಲದಿಂದ ದೆಹಲಿಯ ಹೊರವಲಯದಲ್ಲಿ ಹೋರಾಟದಲ್ಲಿ ತೊಡಗಿದ್ದರು. ಹೋರಾಟದ ನೆಲವನ್ನು ತೊರೆಯುವಾಗ ರೈತರು ಭಾವುಕರಾಗಿದ್ದೂ ಕಂಡುಬಂತು. ಎಲ್ಲರೂ ಪರಸ್ಪರರನ್ನು ಅ‍ಪ್ಪಿಕೊಂಡು ಭಾವುಕ ವಿದಾಯ ಹೇಳಿದರು.

ಮತ್ತೊಂದೆಡೆ ಯುಪಿ ಗೇಟ್ ಪ್ರತಿಭಟನಾ ಸ್ಥಳವನ್ನು ಡಿಸೆಂಬರ್ 15 ರೊಳಗೆ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ರೈತರು ಹೇಳಿದ್ದಾರೆ.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ–2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ–2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ–2020 ಅನ್ನು ರದ್ದುಗೊಳಿಸುವ ಮಸೂದೆಯನ್ನು ಸಂಸತ್ತು ನವೆಂಬರ್ 29 ರಂದು ಅಂಗೀಕರಿಸಿದೆ.

Donate Janashakthi Media

Leave a Reply

Your email address will not be published. Required fields are marked *