ಮಹಾಯುತಿಯ ‘ಮಹಾ’ ವಿಜಯ ಹೇಗಾಯಿತು? ಭಾಗ-2

– ವಸಂತರಾಜ ಎನ್.ಕೆ

ಬಿಜೆಪಿ ನಾಯಕತ್ವದ ಮಹಾಯುತಿ ಕೂಟ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಮಹಾವಿಜಯ ಗಳಿಸಿದೆ. ಎಪ್ರಿಲ್ ನ ಲೋಕಸಭಾ ಚುನಾವಣೆಯಲ್ಲಿ ನೆಲ ಕಚ್ಚಿದ್ದ ಮಹಾಯುತಿಯ ಚುನಾವಣಾ ಸಾಧನೆಯಲ್ಲಿ ನಾಟಕೀಯ ತಿರುವು ಕಂಡಿದೆ. ‘ಗೆಲುವು ನಮ್ಮದೇ’ ಎಂದು ಬೀಗಿದ್ದ ಮಹಾರಾಷ್ಟ್ರ ವಿಕಾಸ ಅಘಾಡಿ ಮಹಾಸೋಲು ಕಂಡಿದೆ. ಹರಿಯಾಣ, ಮಹಾರಾಷ್ಟ್ರಗಳಲ್ಲಿ ಬಿಜೆಪಿ/ಎನ್.ಡಿ.ಎ ಅನಿರೀಕ್ಷಿತ ವಿಜಯವು ದೇಶದ ರಾಜಕಾರಣದಲ್ಲಿ ಮಹತ್ವದ ಪರಿಣಾಮ ಬೀರಲಿದೆ. ಮಹಾಯುತಿಯ ಮಹಾವಿಜಯದ ವಿವರಗಳು ಭಾಗ-1ರಲ್ಲಿದ್ದರೆ , ಅದರ ಹಿಂದಿರುವ ಕಾರಣಗಳ ವಿಶ್ಲೇಷಣೆ ಭಾಗ-2 ರಲ್ಲಿದೆ.

ಮಹಾಯುತಿ ಕೂಟದ ಈ ಆಶ್ಚರ್ಯಕರ ಸಮಗ್ರ ‘ಮಹಾ’ ವಿಜಯ ಹೇಗಾಯಿತು, ಎನ್ನುವುದಕ್ಕೆ ಕೆಲವು ಸ್ಥೂಲ ಕಾರಣಗಳನ್ನು ಹುಡುಕಬಹುದು.

‘ಲಾಡ್ಕಿ ಬಹಿಣ’ ಯೋಜನೆ ಮೆಚ್ಚಿದ ಮಹಿಳೆಯರು

ಲೋಕಸಭೆಯಲ್ಲಿ ಪರಾಭವದ ನಂತರ ಮಹಾಯುತಿ ಸರಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಘೋಷಿಸಿತು, ಮಾತ್ರವಲ್ಲ ಮಿಂಚಿನ ವೇಗದಲ್ಲಿ ಚುನಾವಣೆಯ ವರೆಗೆ ಇದ್ದ ಅವಧಿಯಲ್ಲಿ ಅಚ್ಚುಕಟ್ಟಾಗಿ ಜಾರಿಗೆ ತಂದಿತು. ಅದರ ಕುರಿತು ಬಿರುಸಿನ ಪ್ರಚಾರ ಮಾಡಿತು. ಇವುಗಳಲ್ಲಿ ವಾರ್ಷಿಕ ಆಧಾಯ 2.5 ಲಕ್ಷ ರೂ ಗಿಂತ ಕಡಿಮೆ ಇರುವ 21-65 ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ ರೂ.1500 ಕೊಡುವ ‘ಲಾಡ್ಕಿ ಬಹಿಣ’ (ಮುದ್ದಿನ ಸೋದರಿ) ಯೋಜನೆ ಅತಿ ಹೆಚ್ಚು ಪ್ರಭಾವ
ಬೀರಿದಂತೆ ಕಾಣುತ್ತದೆ. ಇದನ್ನು 5 ತಿಂಗಳುಗಳ ಕಾಲ ಜಾರಿಗೆ ತಂದಿದ್ದು ಎಲ್ಲ ಜನವಿಭಾಗಗಳ ಬಡ ಮಹಿಳೆಯರಲ್ಲಿ ಇದು ಪ್ರಬಲ ಮಹಾಯುತಿ-ಪರ ಒಲವು ಉಂಟು ಮಾಡಿದಂತೆ ಕಾಣುತ್ತದೆ. ಮಹಿಳೆಯರ ಮತದಾನ (59.2% -> 65.1% 5.3 %) ರಷ್ಟು ಏರಿಕೆಯಾಗಿತ್ತು ಮತ್ತು ಮಹಿಳೆಯರು ಪುರುಷರಿಗಿಂತ 5.52 ಲಕ್ಷ ಹೆಚ್ಚು ಮತದಾನದಲ್ಲಿ ಭಾಗವಹಿಸಿದ್ದರು ಎಂಬುದು ಪರೋಕ್ಷವಾಗಿಯಾದರೂ ಇದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮಹಾಯುತಿಯ ‘ಮಹಾ’ ವಿಜಯ ಹೇಗಾಯಿತು? – ಭಾಗ-1

ಲೋಕನೀತಿ-ಸಿ.ಎಸ್.ಡಿ.ಎಸ್ ಮಾಡಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಹಿಳೆಯರಲ್ಲಿ ಪುರುಷರಿಗಿಂತ 3% ಹೆಚ್ಚು ಮಹಿಳೆಯರು ಮತ್ತು ಸರಾಸರಿ ಮಹಿಳೆಯರಿಗಿಂತ ಈ ಯೋಜನೆಗೆ ಅರ್ಜಿ ಹಾಕಿದ ಮಹಿಳೆಯರಲ್ಲಿ 4% ಹೆಚ್ಚು ಜನ ಮಹಾಯುತಿಗೆ ಮತ ನೀಡಿದ್ದಾರೆ. ಸಮೀಕ್ಷೆ ಮಾಡಿದವರಲ್ಲಿ 91% ಗ್ರಾಮೀಣ ಮತ್ತು 73% ನಗರ ಮಹಿಳೆಯರು ಈ ಯೋಜನೆಗೆ ಅರ್ಜಿ ಹಾಕಿದ್ದರು ಎಂದೂ ಸಮೀಕ್ಷೆ ಹೇಳಿದೆ.

ಈಗ ಚುನಾವಣೆಯ ಹೊತ್ತಿಗೆ ಅಧಿಕಾರದಲ್ಲಿರುವ ಮತ್ತು ವಿರೋಧ ಪಕ್ಷಗಳೆರಡೂ ನೇರ ನಗದು ವರ್ಗಾವಣೆಯ ‘ಗ್ಯಾರಂಟಿ’ ಯ ರಾಜಕೀಯದಲ್ಲಿ ತೊಡಗಿವೆ. ಇವೆಲ್ಲವೂ ಕೆಲಸ ಮಾಡಲಿಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಗೆ ಗ್ಯಾರಂಟಿಗಳು ಕೈ ಹಿಡಿದವು. ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ತೆಲಂಗಾಣದಲ್ಲಿ ಟಿ.ಆರ್.ಎಸ್ ಆಳುವ ಪಕ್ಷವಾಗಿದ್ದಾಗ ಜಾರಿ ಮಾಡಿದ್ದ ಇಂತಹ ಗ್ಯಾರಂಟಿಗಳು ಕೈ ಹಿಡಿಯಲಿಲ್ಲ. ಗ್ಯಾರಂಟಿ ರಾಜಕೀಯವಾಗಿ
ಸಾಮಾನ್ಯವಾಗುತ್ತಿದ್ದಂತೆ ಅದು ಪರಿಣಾಮಕಾರಿತನ ಕಳೆದುಕೊಳ್ಳುತ್ತಿದ್ದು, ‘ಗ್ಯಾರಂಟಿ’ ಗಳನ್ನು ಗೇಲಿ ಮಾಡುತ್ತಿದ್ದ ಬಿಜೆಪಿ ಮಧ್ಯಪ್ರದೇಶದಲ್ಲಿ ‘ಗ್ಯಾರಂಟಿ’ಯ ಯಶಸ್ಸಿಗೆ ಫಾರ್ಮುಲಾ ಹುಡುಕಿದಂತಿದೆ. ಆಳುವ ಪಕ್ಷ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಕಲ್ಯಾಣ ಯೋಜನೆ, ಗ್ಯಾರಂಟಿಗಳನ್ನು ಘೋಷಿಸಿ ಅದನ್ನು ತ್ವರಿತವಾಗಿ ಜಾರಿ ಮಾಡಿ ತೋರಿಸಬೇಕು.

ಬಿಜೆಪಿ ಈ ಫಾರ್ಮುಲಾವನ್ನು ಆಗ ಮಧ್ಯಪ್ರದೇಶದಲ್ಲಿ, ಈಗ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿ ಬಳಸಿದೆ. ಹಿಂದೆ ಲೋಕಸಭಾ ಚುನಾವಣೆಯ ಕೆಲವು ತಿಂಗಳ ಮೊದಲು ಕಿಸಾನ್ ಸಮ್ಮಾನ ಯೋಜನಾ ಜಾರಿಗೊಳಿಸಿತ್ತು. ಈಗ ರಾಜ್ಯಗಳಲ್ಲಿ ಅದನ್ನು ಪ್ರಯೋಗಿಸುತ್ತಿದೆ. ಮಹಾ ವಿಕಾಸ ಅಘಾಢಿಯ ಹೆಚ್ಚು ಸಮಗ್ರವಾದ ಪಂಚ ಗ್ಯಾರಂಟಿಗಳು ಜನರನ್ನು ಆಕರ್ಷಿಸಲಿಲ್ಲ ಎಂಬುದನ್ನು ಗಮನಿಸಬೇಕು.

ಕೃಷಿ ಬೆಳೆಗಳ (ವಿಶೇಷವಾಗಿ ಸೋಯಾಬೀನ್, ಈರುಳ್ಳಿ) ಬೆಲೆ ಏರುಪೇರು, ವ್ಯಾಪಕ ನಿರುದ್ಯೋಗ, ವಿಪರೀತ ಬೆಲೆಏರಿಕೆ – ಇವ್ಯಾವುವೂ ಚುನಾವಣಾ ವಿಷಯಗಳಾಗಲಿಲ್ಲ. ಇದಕ್ಕೂ ಕೆಲವು ತಿಂಗಳುಗಳ ಮೊದಲು ರೈತರು, ಒಬಿಸಿ ಮತ್ತಿತರ ಜನವಿಭಾಗಗಳಿಗೆ ಘೋಷಿಸಲಾದ ಹಲವಾರು ಕಲ್ಯಾಣ ಯೋಜನೆಗಳು ಕಾರಣವಾಗಿರಬಹುದು ಎನ್ನಲಾಗಿದೆ. ನವ-ಉದಾರವಾದಿ ನೀತಿಗಳ ಫಲವಾಗಿ ಉಲ್ಬಣಗೊಳ್ಳುತ್ತಿರುವ ನಿರುದ್ಯೋಗ, ಬೆಲೆಏರಿಕೆ ಯಿಂದ ತೀವ್ರ ಸಂಕಷ್ಟಕ್ಕೊಳಗಾದ ಬಡಜನತೆ, ನೇರ ನಗದು ವರ್ಗಾವಣೆಯ ‘ಗ್ಯಾರಂಟಿ’ ಯೋಜನೆಗಳ ಇಂತಹ ತಾತ್ಕಾಲಿಕ ಪರಿಹಾರವನ್ನು ಮೆಚ್ಚುತ್ತಾರೆ. ಈ ಯೋಜನೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಯಾಕೆ ತರಲಿಲ್ಲ, ಚುನಾವಣೆಗಳ ಕೆಲವು ತಿಂಗಳುಗಳ ಮೊದಲು ಮಾತ್ರ ಯಾಕೆ ತಂದಿರಿ ಅಂತ ಕೇಳುವ ರಾಜಕೀಯ ಪ್ರಜ್ಞೆ ಮೂಡಿಲ್ಲ. ಸದ್ಯ ಈಗಲಾಧರೂ ತಂದು ಜಾರಿ ಮಾಡಿದರಲ್ಲ ಎಂಬ ದುರ್ಭರ ಸ್ಥಿತಿಯಲ್ಲಿ ಜನ ಇದ್ದಾರೆ ಎಂದು ತೋರಿಸುತ್ತದೆ.

‘ಲಾಡ್ಕಿ ಬಹಿಣ’ ಮಹಾ ವಿಜಯಕ್ಕೆ ಕಾರಣವಾದ ಒಂದು ಅಂಶವೆಂಬುದಂತೂ ನಿಜ.

‘ಕಟೆಂಗೆ ತೊ ಬಂಟೆಂಗೆ’ ಮತ್ತು ‘ಏಕ್ ಹೈ ತೊ ಸೇಫ್ ಹೈ’ಯ ಹಲವು ಅವತಾರಗಳು

ಯುಪಿ ಯಲ್ಲಿ ಬಿಜೆಪಿ ಮತ್ತು ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಯೋಗಿ ಆದಿತ್ಯನಾಥ ಕೊಟ್ಟ ಘೋಷಣೆ ‘ಕಟೆಂಗೆ ತೊ ಬಂಟೆಂಗೆ’. ‘ಚಾರ್ ಸೋ ಪಾರ್’ ನಿಶ್ಚಿತ ಎಂದುಕೊಂಡು ಬಿಜೆಪಿ ಮತ್ತು ಸಂಘಪರಿವಾರದ ಒಳಗೆ ನಡೆದಿದ್ದ ಆಂತರಿಕ ಸಂಘರ್ಷದ ಸಂಧರ್ಭವೂ ಇದರ ಹಿಂದೆ ಇತ್ತು. ಇದು ಪ್ರಮುಖವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ ಕೊಟ್ಟ ಘೋಷಣೆ. ಒಂದು ಕಡೆ ಇದು ‘ಮುಸ್ಲಿಂ-
ಅಪಾಯ’ ದ ಹಿನ್ನೆಲೆಯಲ್ಲಿ ಹಿಂದೂಗಳು ಒಂದಾಗಬೇಕು ಎಂಬ ಧಾರ್ಮಿಕ ಧ್ರುವೀಕರಣದ ಎಂದಿನ ಘೋಷಣೆ. ಆದರೆ ಯುಪಿ ಯಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಪ್ರಮುಖವಾಗಿ ಅದರ ವಿರುದ್ಧ ದಲಿತರ ಮತ್ತು ಒಬಿಸಿ ಗಳ ಕ್ರೋಢೀಕರಣ.

ಅದರಿಂದಾಗಿಯೇ ಧಾರ್ಮಿಕ ಧ್ರುವೀಕರಣ ಸಾಧ್ಯವಾಗದೆ ಹೋದದ್ದು. ಬಿಜೆಪಿಯೊಳಗೆ ಮೋದಿ-ಶಾ ಮತ್ತು ಯೋಗಿ ಮತ್ತಿತರರ ನಡುವಿನ ಅಂತರ್-ಕಲಹ ಸಹ ಈ ಘೋಷಣೆಗೆ ಕಾರಣ. ಈ ಎಲ್ಲ ‘ವಿಭಜನೆ’ಗಳನ್ನು ಮೀರಿ ಐಕ್ಯತೆ ಸಾಧಿಸಬೇಕು ಎಂಬುದೂ ಅದರ ಆಶಯವಾಗಿತ್ತು. ಈ ಎಲ್ಲವೂ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಟ್ಟಿಗೂ ನಿಜವಾಗಿತ್ತು. ಹಾಗಾಗಿ ಅದೇ ಅರ್ಥ ಮಹಾರಾಷ್ಟ್ರದಲ್ಲೂ ಇತ್ತು.

ಬಿಜೆಪಿ ಯಾವುದೇ ಚುನಾವಣೆಯಲ್ಲಿ ‘ಹಿಂದುತ್ವ’ ರಾಜಕಾರಣಕ್ಕೆ ಬಲಿಯಾದ ತನ್ನ ಕೋರ್ ಮತದಾರರನ್ನು ಉಳಿಸಿಕೊಳ್ಳಲು ಧಾರ್ಮಿಕ ಧ್ರುವೀಕರಣವನ್ನು ಪ್ರಯೋಗಿಸುತ್ತದೆ. ಅದರ ಭಾಗವಾಗಿ ರಾಜ್ಯ ಚುನಾವಣೆಗಳಲ್ಲಿ ಯೋಗಿ ಅವರನ್ನು ಕರೆಸಿ ಈ ಘೋಷಣೆಯ ಸುತ್ತ ವ್ಯಾಪಕ ಪ್ರಚಾರ ಮಾಡಿತ್ತು. ಬಿಜೆಪಿ ಮತ್ತು ಮಹಾಯುತಿಯೊಳಗೆ ಬಿಜೆಪಿಯ ಪಂಕಜಾ ಮುಂಡೆ ಮತ್ತು ಹಲವು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎನ್.ಸಿ.ಪಿ ಯ ಅಜಿತ್ ಪವಾರ್ ‘ಇದು ಇಲ್ಲಿ ಬೇಡ’ ವೆಂದು ವಿರೋಧಿಸಿದ್ದರೂ ಅದನ್ನು ಮುಂದುವರೆಸಲಾಗಿತ್ತು. ತನ್ನ ‘ಮುಸ್ಲಿಂ-ದ್ವೇಷ’ವನ್ನು ಸಾಬೀತು ಪಡಿಸಲು ಮಹಾಯುತಿಯ (ಅಜಿತ್ ಪವಾರ್ ಎನ್.ಸಿ.ಇ ಯ) ಅಭ್ಯರ್ಥಿ ನವಾದ್ ಮಲ್ಲಿಕ್ ಗೆ ಬಿಜೆಪಿ ಬೆಂಬಲಿಸುವುದಿಲ್ಲವೆಂದು ಘೋಷಿಸಿತ್ತು, ಅವರು ಸೋತಿದ್ದು ಆಯಿತು. ಇನ್ನೊಂದು ಕಡೆ ಮನೆ-ಮನೆ ಮತ್ತು ಪ್ರಚಾರದ ವಲಯಗಳಿಗೆ ಅನುಸಾರವಾಗಿ, ಈ ಘೋಷಣೆಗೆ ಬೇರೆ ಬೇರೆ ರೀತಿಯ ಅರ್ಥ ಕಲ್ಪಿಸಲಾಯಿತು ಎಂದು ಹಲವು ವೀಕ್ಷಕರು ಹೇಳಿದ್ದಾರೆ.

ಉಚ್ಛ ಜಾತಿಗಳವರಲ್ಲಿ ಮರಾಠಾ, ಒಬಿಸಿ, ದಲಿತರು ತಮ್ಮ ಅಡಿಯಲ್ಲಿ ಇರಬೇಕೆ ವಿನಹ, ತಮ್ಮ ವಿರುದ್ಧ ಒಟ್ಟಾಗಿರಲು ಬಿಡಬಾರದೆಂದೂ, ಒಬಿಸಿ ವಲಯಗಳಲ್ಲಿ ಮರಾಠಾ ಪ್ರಾಬಲ್ಯ ಮುರಿಯಲು ಎಲ್ಲರೂ ಒಟ್ಟಾಗಬೇಕೆಂದೂ, ಮರಾಠಾ ವಲಯಗಳಲ್ಲಿ ದಲಿತ-ಮುಸ್ಲಿಂ ಐಕ್ಯತೆ ವಿರುದ್ಧ ಮಹಾಯುತಿಯನ್ನು ಬೆಂಬಲಿಸಬೇಕೆಂದೂ, ದಲಿತ ವಲಯಗಳಲ್ಲಿ ಮುಸ್ಲಿಮರು ಒಬಿಸಿ ನಿಮ್ಮ ಶತ್ರುಗಳು – ಹೀಗೆ ಈ ಘೋಷಣೆಯನ್ನು ಹಲವು ರೀತಿಯಲ್ಲಿ ತಳ ಮಟ್ಟದಲ್ಲಿ ಬಳಸಲಾಯಿತು ಎನ್ನಲಾಗಿದೆ. ಮಹಾಯುತಿಯ ಒಳಗಿನ ಪಕ್ಷಗಳ ಮತ್ತು ಬಣಗಳ ನಡುವೆ ಐಕ್ಯತೆ ತರಲೂ ಇದನ್ನು ಬಳಸಲಾಯಿತು.

ವಿರೋಧ ಪಕ್ಷಗಳು ಈ ಘೋಷಣೆಯ ವಿರುದ್ಧ ತೀವ್ರ ಆಕ್ಷೇಪ ಎತ್ತಿದಾಗ, ಸಾಮಾಜಿಕ ಮಾಧ್ಯಮಗಳಲ್ಲೂ ತೀವ್ರ ಪ್ರತಿಕ್ರಿಯೆ ಕಾಣಿಸಿಕೊಂಡಾಗ ಮತ್ತು ಈ ಘೋಷಣೆ ಬ್ಯೂಮರಾಂಗ್ ಆಗುವ ಭಯದಿಂದ ಪ್ರಧಾನಿ ಮೋದಿ “ಏಕ್ ಹೈ ತೋ ಸೇಫ್ ಹೈ” ಎಂಬ ಇನ್ನೊಂದು ಘೋಷಣೆ ಕೊಟ್ಟರು. ಇದಕ್ಕೂ ತಳ ಮಟ್ಟದಲ್ಲಿ ಮೇಲೆ ಹೇಳಿದ ವಿವಿಧ ಆಯಾಮಗಳೂ ಅರ್ಥಗಳೂ ಇದ್ದವು. ಆದರೆ ಹೂರಣ ಅದೇ ಇದ್ದರೂ, ಇದು ಹೆಚ್ಚು ಸಕಾರಾತ್ಮಕವಾಗಿ ಕಾಣುವ ಮತ್ತು ಸೇಫ್ ಘೋಷಣೆಯಾಗಿತ್ತು.
ಅದಕ್ಕೆ ಅರಾಜಕತೆ, ಅಭದ್ರತೆ, ದೇಶ-ವಿರೋಧಿ ಸಮಾಜ-ವಿರೋಧಿ ಜಾತಿವಾದಿ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಐಕ್ಯತೆ ಮುಂತಾದ ಸಕಾರಾತ್ಮಕ ವ್ಯಾಖ್ಯಾನ ಕೊಡುವ ಸಾಧ್ಯತೆಯಿತ್ತು. ಈ ಘೋಷಣೆಗಳು ಎಷ್ಟರ ಮಟ್ಟಿಗೆ ಮಹಾ ವಿಜಯ ಕ್ಕೆ ಕಾರಣವಾದವು ಎಂದು ಹೇಳುವುದು ಕಷ್ಟ. ಆದರೆ ಧಾರ್ಮಿಕ ಸೇರಿದಂತೆ ಎಲ್ಲಾ ರೀತಿಯ ಧ್ರುವೀಕರಣ ಬಿಜೆಪಿಯ ಬತ್ತಳಿಕೆಯಲ್ಲಿರುವ ಪರಿಣಾಮಕಾರಿ ಅಸ್ತ್ರಗಳಲ್ಲಿ ಒಂದು.

ಅದು ತಮ್ಮ ಕೋರ್ ಮತದಾರರನ್ನು ಕಾಯ್ದುಕೊಳ್ಳುವ ಜತೆ ಇತರ ಹಲವು ಜನವಿಭಾಗಗಳನ್ನು ಗೆದ್ದುಕೊಳ್ಳುವುದರಲ್ಲಿ ಒಂದು ಅಂಶವಾಗಿತ್ತೆಂದು ಸೇಫ್ ಆಗಿ ಹೇಳಬಹುದು. ‘ಹಿಂದುತ್ವ’ ರಾಜಕಾರಣ ಜತೆ ಗುರುತಿಸಲ್ಪಟ್ಟ ಶಿವಸೇನಾ ಮತ್ತು ‘ಸೆಕ್ಯುಲರ್’ ಎಂದು ಗುರುತಿಸಲ್ಪಟ್ಟ ಎನ್.ಸಿ,ಪಿ ಒಡೆದು ಬಣಗಳಾಗಿ ಎರಡೂ ಕೂಟಗಳಲ್ಲಿ ಇರುವುದರಿಂದ ‘ಕೋಮುವಾದ’ ಅಥವಾ ‘ಹುಸಿ ಸೆಕ್ಯುಲರ್’ ಎಂಬುದನ್ನು ಪ್ರಚಾರ ವಿಷಯವಾಗಿಸುವುದು ಇಬ್ಬರಿಗೂ ಇರುಸು ಮುರುಸಿನ ವಿಷಯವಾಗಿತ್ತು, ಬಹುಪಾಲು ‘ಸೆಕ್ಯುಲರ್’ ನೆಲೆ ಹೊಂದಿರುವ ವಿಕಾಸ ಆಘಾಢಿಯ ಭಾಗವಾಗಿ ‘ಹಿಂದುತ್ವ’ ಅಥವಾ ಧಾರ್ಮಿಕ ಧ್ರುವೀಕರಣಕ್ಕೆ ತೊಡಗುವುದು ಉದ್ಧವ್ ಶಿವಸೇನಾ ಬಣಕ್ಕೆ ಕಷ್ಟವಾಗಿತ್ತು. ಆದರೆ ಶಿಂಧೆ ಶಿವಸೇನಾ ಬಣ ಯಾವುದೇ ಎಗ್ಗಿಲ್ಲದೆ ‘ಹಿಂದುತ್ವ’ ರಾಜಕಾರಣ ಮಾಡಿತಲ್ಲದೆ, ಉದ್ಧವ್ ಶಿವಸೇನಾ ಬಣದ ಮೇಲೆ ತನ್ನ ಮೂಲ ಸಿದ್ಧಾಂತವನ್ನು ತೊರೆದ ಆರೋಪ ಮಾಡಿತು. ಇದೂ ವಿಕಾಸ ಆಘಾಢಿಯ ಮತಗಳಿಕೆ ಮೇಲೆ ಪರಿಣಾಮ ಬೀರಿರಬಹುದು.

ಜಾತಿ ಜನಗಣತಿ, ಜಾತಿ ಸಂಯೋಜನೆ, ಹಣ-ಅಧಿಕಾರದ ಬಲ

ಜಾತಿ ಜನಗಣತಿಯ ಪರ ಗಟ್ಟಿ ಘೋಷಣೆ, ಬಿಜೆಪಿ ಗೆ ಭಾರೀ ಬಹುಮತ (‘ಚಾರ್ ಸೌ ಪಾರ್’) ಬಂದರೆ ಸಂವಿಧಾನಕ್ಕೂ ಮೀಸಲಾತಿಗೂ ಅಪಾಯವಿದೆ ಎಂಬ ದಲಿತರಲ್ಲಿ ಮತ್ತು ಒಬಿಸಿಗಳಲ್ಲಿ ಆತಂಕ, ಬಿಜೆಪಿಯ ವಿರುದ್ಧ ಮರಾಠಾ ಆಕ್ರೋಶ – ಇವೆಲ್ಲ ಒಟ್ಟಾಗಿ ವಿಕಾಸ ಅಘಾಡಿಯ ಪರವಾಗಿ ಲೋಕಸಬಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರಲ್ಲದೆ ದಲಿತ, ಒಬಿಸಿ, ಮರಾಠಾಗಳ ಮತ ಕ್ರೋಢೀಕರಣವಾಗಿತ್ತು. ಈ ಬಾರಿ ಅದು ಆಗಿಲ್ಲ ಎಂಬುದು ಸ್ಪಷ್ಟ. ಆದರೆ ಯಾಕೆ, ಹೇಗೆ ಎಂಬುದು ಅಸ್ಪಷ್ಟ. ಇವುಗಳ ಅಪಾಯ ಕಂಡು ಬಿಜೆಪಿ ತಕ್ಕ ಪ್ರತಿಕ್ರಮಗಳನ್ನು ತೆಗೆದುಕೊಂಡಿತ್ತು. ಮರಾಠಾ ಮೀಸಲಾತಿ ಚಳುವಳಿಯನ್ನು ಮುಖ್ಯ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡು ಆಕ್ರೋಶವನ್ನು ಶಮನ ಮಾಡಿತು. ಮರಾಠಾ ಪ್ರಾಬಲ್ಯ ಮುರಿಯಲು ಧಂಗಾರ ಮತ್ತಿತರ ಒಬಿಸಿ ಸಮುದಾಯಗಳನ್ನು ಒಲಿಸುವ ಪ್ರಯತ್ನ ನಡೆಸಿತು.

ದಲಿತ ಮತ್ತು ಮುಸ್ಲಿಂ ಮತಗಳ ಕ್ರೋಢೀಕರಣ ತಡೆಯಲು ಈ ಸಮುದಾಯಗಳ ಪಕ್ಷಗಳ ಮತ್ತು ಪಕ್ಷೇತರರ ಅಭ್ಯರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಸ್ಪರ್ಧೆಗೆ ಕುಮ್ಮಕ್ಕು (ಪರೋಕ್ಷವಾಗಿ ಹಣ, ಮತ್ತಿತರ ಸವಲತ್ತು) ಕೊಡಲಾಯಿತೆನ್ನಲಾಗಿದೆ. ಬಿ.ಎಸ್.ಪಿ (237), ಹಿಂದೆ ಯು.ಪಿ.ಎ ಯಲ್ಲಿದ್ದ ವಂಚಿತ ಬಹುಜನ ಅಘಾಢಿ(200), ಬಹುಜನ ವಿಕಾಸ ಅಘಾಢಿ ಸಹ ಭಾರೀ ಸಂಖ್ಯೆಯ ಸೀಟುಗಳಲ್ಲಿ ಸ್ಪರ್ಧಿಸಿದವು. ಇವರಲ್ಲದೆ ದೊಡ್ಡ ಸಂಖ್ಯೆಯಲ್ಲಿ ಆಯಾ ಕ್ಷೇತ್ರದಲ್ಲಿ ವಿಕಾಸ ಅಘಾಢಿ ಸ್ಪರ್ಧಿಯ ಮತ ಒಡೆಯಲು ನೆರವಾಗುವ ದೊಡ್ಡ ಸಂಖ್ಯೆಯ ಪಕ್ಷೇತರರನ್ನು ಸ್ಪರ್ಧೆಗೆ ಇಳಿಸಲಾಯಿತು. ಇದನ್ನು ಸಾಧ್ಯ ಮಾಡಲು ಅಪಾರ ಹಣ, ಅಧಿಕಾರಗಳ
ದುರ್ಬಳಕೆ ಮಾಢಲಾಯಿತು ಎನ್ನಲಾಗಿದೆ. 2019ರಲ್ಲಿ ಇದೇ ತಂತ್ರವನ್ನು ಅನುಸರಿಸಲಾಗಿತ್ತು.

ಇದನ್ನು ಬಹುಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರಯೋಗಿಸಲಾಗಿತ್ತಾದರೂ ಅದು ಪರಿಣಾಮಕಾರಿಯಾಗಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ
ಹೆಚ್ಚಾಗಿ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಹಿಂದೆ ಹೇಳಿದ ಹಾಗೆ ಇತರ ಪಕ್ಷಗಳ ಮತ್ತು ಪಕ್ಷೇತರರ ಮತಗಳಿಕೆ ಶೇ.7 ರಷ್ಟು ಹೆಚ್ಚಾಗಿದೆ. ಮಹಾಯುತಿಗಿಂತ ಹೆಚ್ಚಾಗಿ ಇತರ ಪಕ್ಷಗಳ ಮತ್ತು ಪಕ್ಷೇತರರಿಗೆ, ವಿಕಾಸ ಅಘಾಢಿಯ ಮತಗಳನ್ನು ಕಳೆದುಕೊಂಡಿದೆ ಎಂಬುದನ್ನು ಹಿಂದೆ ಹೇಳಿದ ಅಂಕೆಸಂಖ್ಯೆಗಳು ಸೂಚಿಸುತ್ತವೆ. ಇದಲ್ಲದೆ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಮತದಾರರಿಗೆ ಹಣ ಇತರ ಉಡುಗೊರೆಗಳ ಲಂಚದ ಹೊಳೆಯೇ ಹರಿದಿದೆ ಎನ್ನಲಾಗಿದೆ.

ಬಿಜೆಪಿಗೆ ಭಾರೀ ಬಹುಮತ ಬರದೆ ಸಂವಿಧಾನ-ಮೀಸಲಾತಿಗಳಿಗೆ ಅಪಾಯ ಸದ್ಯಕ್ಕಿಲ್ಲ ಮತ್ತು ಜಾತಿ ಜನಗಣತಿಯನ್ನು ತಾನು ಆಳುವ ಪಕ್ಷ ರಾಜ್ಯಗಳಲ್ಲಿ ಕಾಂಗ್ರೆಸ್ ಜಾರಿ ಮಾಡದಿರುವುದು – ಇವು ಪ್ರಮುಖ ವಿಷಯವಾಗದೆ ಬಿಜೆಪಿಗೆ ಪ್ರತಿಕೂಲವಾಗದಿರುವುದು ಕಾರಣವಿರಬಹುದು. ಅಥವಾ ಬಿಜೆಪಿಯ ಪ್ರತಿಕ್ರಮಗಳು ಈ ಸಾಧ್ಯತೆಯನ್ನು ಚಿವುಟಿ ಹಾಕಿರಬಹುದು.

ಬಿಜೆಪಿ ಕೇಂದ್ರ ಸರಕಾರ ಮಹಾರಾಷ್ಟ್ರದಲ್ಲಿ ಗೆಲ್ಲಲುಶತಾಯ ಗತಾಯ ಎಲ್ಲ ಅಧಿಕಾರಗಳನ್ನು ದುರ್ಬಳಕೆ ಮಾಡಿತು. ನಾಲ್ಕು ರಾಜ್ಯಗಳ ಚುನಾವಣೆಯನ್ನು ಒಟ್ಟಿಗೆ ಮಾಡದೆ ಮಹಾರಾಷ್ಟ್ರ ಚುನಾವಣೆ ಕೊನೆಯಲ್ಲಿ ನಡೆಯುವ ಹಾಗೆ ನೋಡಿಕೊಂಡಿತು. ಇದಕ್ಕೆ ತಕ್ಕ ವೇಳಾಪಟ್ಟಿಯನ್ನು ಚುನಾವಣಾ ಕಮಿಶನ್ ಸಿದ್ದ ಪಡಿಸಿತು. ಎಂದಿನಂತೆ ಪ್ರಧಾನಿಯಿಂದ ಆರಂಭಿಸಿ ಬಿಜೆಪಿಯ ನಾಯಕರ ಚುನಾವಣಾ ಸಂಹಿತೆಯ ಸತತ ಉಲ್ಲಂಘನೆಗಳನ್ನು ನಿರ್ಲಕ್ಷಿಸಿತು. ವಿರೋಧ ಪಕ್ಷಗಳ ನಾಯಕರ ಮೇಲೆ ಈಡಿ-ಸಿಬಿಐ ದಾಳಿಗಳು ಮುಂದುವರೆದವು.

ವಿಕಾಸ ಅಘಾಢಿಯ ಕಾರ್ಯವ್ಯೂಹ, ಕಾರ್ಯತಂತ್ರಗಳ ನ್ಯೂನತೆಗಳು

ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಮಹಾಯುತಿ ವಿಧಾನಸಭೆ ಚುನಾವಣೆಗೆ ತಮ್ಮ ಕಾರ್ಯವ್ಯೂಹ, ಕಾರ್ಯತಂತ್ರಗಳನ್ನು ಹೆಣೆಯಲು ಆರಂಭಿಸಿದವು. ಮಹಾಯುತಿ ಮತ್ತು ಬಿಜೆಪಿ ಗಳೊಳಗೆ ಸಾಕಷ್ಟು ಸಮಸ್ಯೆಗಳಿದ್ದರೂ ಪಕ್ಷಗಳಿಗೆ ಕ್ಷೇತ್ರಗಳ ಹಂಚಿಕೆ, ಸ್ಪರ್ಧಿಗಳ ಆಯ್ಕೆ, ಪ್ರಚಾರ ಮತ್ತು ಮತದಾರರ ಸಂಪರ್ಕಕ್ಕೆ ರಾಜ್ಯ ಮತ್ತು ಕ್ಷೇತ್ರವಾರು ಬೂತ್, ಮನೆ-ಮನೆ ವರೆಗೆ ಉಸ್ತುವಾರಿಗಳ, ಕಾರ್ಯಕರ್ತರ ನೇಮಕ, ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಸಾಮಗ್ರಿ, ಅದರ ಹಂಚಿಕೆ, ಅದಕ್ಕೆ ಪ್ರತ್ಯೇಕ ಸಂಘಟನೆ, ಇವೆಲ್ಲದಕ್ಕೆ ಸಂಪನ್ಮೂಲಗಳ ಹೊಂಚುವಿಕೆ – ಹೀಗೆ
ಚುನಾವಣಾ ಯಂತ್ರ ಸಜ್ಜುಗೊಳಿಸಿ ಕೆಲಸಕ್ಕಿಳಿಯಿತು. ಆದರೆ ಮಹಾ ವಿಕಾಸ ಅಘಾಢಿ ಇದರಲ್ಲಿ ಸೋತಿದ್ದು ಅದರ ಸೋಲಿಗೆ ಮಹಾಯುತಿಯ ವಿಜಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು.

ಈ ಎಲ್ಲವನ್ನು ಅದು ಮಾಡಲೇ ಇಲ್ಲ ಎಂದಲ್ಲ, ಅಪಾರ ಸಂಪನ್ಮೂಲ (ಹಣ, ಕಾರ್ಯಕರ್ತರು, ಸಂಘಟನೆ, ಜನಸಂಪರ್ಕ, ಪ್ರಭಾವ) ಇರುವ ಬಿಜೆಪಿ ನಾಯಕತ್ವದ ಮಹಾಯುತಿಯ ವಿರುದ್ಧ ಗೆಲ್ಲಲು ಬೇಕಾದಷ್ಟು ಮುತುವರ್ಜಿ, ಗಂಭೀರತೆ, ತುರ್ತು ಗಳಿಂದ ಅವನ್ನು ಮಾಡಲಿಲ್ಲ. ಬದಲಿಗೆ ತಾವಾಗಲೇ ಗೆದ್ದು ಬಿಟ್ಟಿದ್ದೇವೋ ಅಥವಾ ಗೆಲ್ಲುವುದು ನಿಶ್ಚಿತವೋ ಎಂಬಂತೆ ಪಕ್ಷಗಳ ನಡುವಿನ ಮುಖ್ಯಮಂತ್ರಿ ಮತ್ತು ಹೆಚ್ಚಿನ ಸೀಟುಗಳಿಗೆ ಪೈಪೋಟಿಯಲ್ಲಿ, ಭಿನ್ನಮತ ಬಗೆಹರಿಸುವುದರಲ್ಲಿ ಅಮೂಲ್ಯ ಕಾಲಹರಣ ಮಾಡಿತು. ಜನರತ್ತ ಹೊಗುವುದು, ಕಾರ್ಯವ್ಯೂಹ, ಕಾರ್ಯತಂತ್ರ ರೂಪಿಸುವುದು ಇತ್ಯಾದಿಗಳಲ್ಲಿ ಸೋತಿತು.

ಇದನ್ನೂ ಓದಿ: ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರಾ?: ಸುಂದರಮಾಸ್ತರ್

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವ್ಯತ್ಯಾಸಗಳಿವೆ, ಅಲ್ಲಿ ಕೆಲಸ ಮಾಡಿದ ಅಂಶಗಳು, ಕಥನಗಳು, ತಂತ್ರಗಳು ಇಲ್ಲಿ ಕೆಲಸ ಮಾಡದಿರಬಹುದು ಎಂಬ ಪ್ರಾಥಮಿಕ ಅಂಶಗಳನ್ನು ಗ್ರಹಿಸದೆ ಹಿಂದಿನದ್ದನ್ನೇ ಪುನರಾವರ್ತನೆ ಮಾಡಿತು. ಬಿಜೆಪಿ, ಮಹಾಯುತಿಯ ಕಾರ್ಯಾಚರಣೆಗಳಿಂದ ಅದರ ಕಾರ್ಯವ್ಯೂಹ, ಕಾರ್ಯತಂತ್ರಗಳನ್ನು ಗ್ರಹಿಸಿ ಅವುಗಳಿಗೆ ಪ್ರತಿಕ್ರಮಗಳನ್ನು ರೂಪಿಸುವ ಕೆಲಸವೂ ನಡೆಯಲಿಲ್ಲ. ಹರಿಯಾಣದಂತೆ ಇಲ್ಲೂ ಎಲ್ಲವನ್ನೂ ರಾಜ್ಯ ನಾಯಕತ್ವಕ್ಕೆ
ಬಿಡುವ, ಸಮಸ್ಯೆ ಕಂಡಲ್ಲೂ ಸಕಾಲಿಕವಾಗಿ ಸೂಕ್ತ ಮಧ್ಯಪ್ರವೇಶ ನಡೆಯಲಿಲ್ಲ. ಜನವಿಭಾಗಗಳನ್ನು ಬಾಧಿಸುವ ಸಮಸ್ಯೆಗಳನ್ನು ಎತ್ತುವ, ಅದಕ್ಕೆ ಪರಿಹಾರ ಸೂಚಿಸುವ ಪ್ರಯ್ನ ನಡೆಯಲಿಲ್ಲ. ಪಂಚ ಗ್ಯಾರಂಟಿಗಳ ಸಮಗ್ರ ಪ್ರಣಾಳಿಕೆ ಉತ್ತಮವಾಗಿದ್ದರೂ ಅದರ ಬಿಡುಗಡೆಯಲ್ಲಿ ವಿಳಂಬ ಮತ್ತು ಅದರ ಸಂದೇಶವನ್ನು ಮನೆ-ಮನೆಗೆ ಮುಟ್ಟುವ ಕೆಲಸ ಆಗಲಿಲ್ಲ.

ಮಹಾ ವಿಜಯ ಸಂಶಯಾಸ್ಪದವಾಗಿದೆಯೇ?

ಈ ಎಲ್ಲ ಕಾರಣಗಳೂ ಒಟ್ಟಾಗಿ ಮಹಾಯುತಿಯ ಗೆಲುವನ್ನು ವಿವರಿಸಬಹುದೇ ವಿನಾ, ಆಶ್ಚರ್ಯಕಾರಿ ಸಮಗ್ರ ಮಹಾ ವಿಜಯವನ್ನು ವಿವರಿಸುವುದಿಲ್ಲ. ಇಂತಹ ಮಹಾವಿಜಯಕ್ಕೆ ಕಾರಣವಾದ 1-2 ಪ್ರಮುಖ ಅಂಶವನ್ನು ಲೋಕನೀತಿ- ಸಿ.ಎಸ್.ಡಿ.ಎಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಸಹ ಹೊರಗೆಡಹುವುದಿಲ್ಲ. ಉದ್ಧವ ಮತ್ತು ಶಿಂಧೆ ಸರಕಾರಗಳಲ್ಲಿ ಯಾವುದು ಒಳ್ಳೆಯದು, ಡಬ್ಬಲ್ ಇಂಜಿನ್ ಸರಕಾರ ಅಗತ್ಯವೇ, ಒಟ್ಟಾಗಿ ಎಲ್ಲ ಕಲ್ಯಾಣ ಯೋಜನೆಯ ಜಾರಿ ಮುಂತಾದ
ವಿಷಯಗಳ ಬಗೆಗಿನ ಸಮೀಕ್ಷೆ ಮಹಾಯುತಿಯ ಬಗ್ಗೆ ಭಾರಿ ಒಲವನ್ನೇನೂ ತೋರಿಸುವುದಿಲ್ಲ. ಈ ನಡುವೆ ಚುನಾವಣಾ ಕಮಿಶನ್ ಎಲ್ಲ ಅಂಕೆ ಸಂಖ್ಯೆಗಳು ಪ್ರಕಟವಾದ ನಂತರ ಹೊರಬಂದ ಅಂಶಗಳು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

ಚುನಾವಣಾ ಕಮಿಶನ್ ಒಟ್ಟು ದಾಖಲಾದ ಮತಗಳ ಸಂಖ್ಯೆಯನ್ನು ಬಹಳ ಹಿಂದಿನಿಂದಲೂ ಚುನಾವಣಾ ದಿನವೇ ತಡರಾತ್ರಿಯಲ್ಲಿ ಪ್ರಕಟಿಸುತ್ತಿತ್ತು. ಕಳೆದ ಹಲವು ಚುನಾವಣೆಗಳಿಂದ ಕಮಿಶನ್ ಮತಪ್ರಮಾಣ (%) ಮಾತ್ರ ಪ್ರಕಟಿಸುತ್ತಿದ್ದು, ದಾಖಲಾದ ಮತಗಳ ಸಂಖ್ಯೆಯ ಪ್ರಕಟಣೆಯಲ್ಲಿ 2-3 ದಿನಗಳಿಂದ ಹಲವು ದಿನಗಳ ವಿಳಂಬ ಕಂಡು ಬಂದಿದೆ. ಯಾವುದೇ ಪಕ್ಷಕ್ಕೆ ಫಲಿತಾಂಶದ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ 100% ವಿವಿಪ್ಯಾಟ್ ಗಳನ್ನು ಲೆಕ್ಕ ಹಾಕಿ ತಾಳೆ ಹಾಕಬೇಕು ಎಂಬ ಸರಿಯಾದ ಒತ್ತಾಯವನ್ನು ಕಮಿಶನ್ ವಿರೋಧಿಸುತ್ತಾ ಬಂದಿದೆ. ಕಮಿಶನ್ ಸ್ವತಃ ಪ್ರಕಟಿಸಿದ ದಾಖಲಾದ ಮತಗಳ ಮತ್ತು ಎಣಿಸಲಾದ ಮತಗಳ ಸಂಖ್ಯೆಗಳ ನಡುವೆ ಗಮನಾರ್ಹ ಅಂತರ ಕಳೆದ ಹಲವು ಚುನಾವಣೆಗಳಿಂದ ಸಂಶಯಕ್ಕೆ ಕಾರಣವಾಗಿದೆ. ಇದಕ್ಕೆ ಕಮಿಶನ್ ಯಾವುದೇ ಸಮಂಜಸ ಉತ್ತರ ನೀಡಿಲ್ಲ.

ಈ ಚುನಾವಣೆಯಲ್ಲಿ ಇನ್ನೊಂದು ತೀವ್ರ ಸಂಶಯಾಸ್ಪದ ಅಂಶ ಬೆಳಕಿಗೆ ಬಂದಿದೆ. ಮತದಾನ ಮುಗಿದ ಮೇಲೆ ಮತದಾನದ ಪ್ರಮಾಣ 58.22% ಎಂದು ಹೇಳಲಾಯಿತು. ಕೆಲವು ಗಂಟೆಗಳ ನಂತರ ಮತದಾನದ ಪ್ರಮಾಣ 65.02% ಎನ್ನಲಾಯಿತು. ಮೂರು ದಿನಗಳ ನಂತರ ಮತ ಎಣಿಕೆ ದಿನ 66.05% ಎಂದು ಹೇಳಲಾಯಿತು. ಇದರ ಅರ್ಥ ಮತದಾನ ಮುಗಿದ ಮೇಲೆ ಮತಪ್ರಮಾಣ 7.83% ನಷ್ಟು ಹೆಚ್ಚಾಯಿತು. ಇದು ಸುಮಾರು 76 ಲಕ್ಷಗಳಿಗೆ ಸಮನಾಗುತ್ತದೆ. ಈ ತೀವ್ರ ಸಂಶಯಕ್ಕೆಡೆ ಮಾಡುವ ಅಂಶವನ್ನು ‘ದಿ ವೈರ್’ ವರದಿ ಮಾಡಿದೆ. ಹೀಗಾಗಿ ಚುನಾವಣಾ ಕಮಿಶನ್ ಇದಕ್ಕೆ ಸೂಕ್ತ ಸಮಜಾಯಿಷಿ ನೀಡದೆ ಮಹಾಯುತಿಯ ಮಹಾವಿಜಯ ಸಂಶಯಾಸ್ಪದವಾಗಿದೆ ಎನ್ನಬಹುದು.

ಇದನ್ನೂ ನೋಡಿ: ಒಂದು ದೇಶ, ಒಂದು ಚುನಾವಣೆ | ಒಂದು… ಒಂದು.. ಎನ್ನುವುದರ ಹಿಂದೆ ದೇಶಕ್ಕೆ ಕಾದಿದೆ ಅಪಾಯ – ಡಾ.ಸಿದ್ದನಗೌಡ ಪಾಟೀಲ್

Donate Janashakthi Media

Leave a Reply

Your email address will not be published. Required fields are marked *