ಮಹಾಯುತಿಯ ‘ಮಹಾ’ ವಿಜಯ ಹೇಗಾಯಿತು? – ಭಾಗ-1

-ವಸಂತರಾಜ ಎನ್.ಕೆ.

ಬಿಜೆಪಿ ನಾಯಕತ್ವದ ಮಹಾಯುತಿ ಕೂಟ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಮಹಾವಿಜಯ ಗಳಿಸಿದೆ. ಎಪ್ರಿಲ್ ನ ಲೋಕಸಭಾ ಚುನಾವಣೆಯಲ್ಲಿ ನೆಲ ಕಚ್ಚಿದ್ದ ಮಹಾಯುತಿಯ ಚುನಾವಣಾ ಸಾಧನೆಯಲ್ಲಿ ನಾಟಕೀಯ ತಿರುವು ಕಂಡಿದೆ. ‘ಗೆಲುವು ನಮ್ಮದೇ’ ಎಂದು ಬೀಗಿದ್ದ ಮಹಾರಾಷ್ಟ್ರ ವಿಕಾಸ ಅಘಾಡಿ ಮಹಾಸೋಲು ಕಂಡಿದೆ. ಹರಿಯಾಣ, ಮಹಾರಾಷ್ಟ್ರಗಳಲ್ಲಿ ಬಿಜೆಪಿ/ಎನ್.ಡಿ.ಎ ಅನಿರೀಕ್ಷಿತ ವಿಜಯವು ದೇಶದ ರಾಜಕಾರಣದಲ್ಲಿ ಮಹತ್ವದ ಪರಿಣಾಮ ಬೀರಲಿದೆ. ಮಹಾಯುತಿಯ ಮಹಾವಿಜಯದ ವಿವರಗಳು ಭಾಗ-1ರಲ್ಲಿದ್ದರೆ , ಅದರ ಹಿಂದಿರುವ ಕಾರಣಗಳ ವಿಶ್ಲೇಷಣೆ ಭಾಗ-2 ರಲ್ಲಿದೆ (ಭಾಗ ಎರಡು ನಾಳೆ ಪ್ರಕಟವಾಗಲಿದೆ)

ಚುನಾವಣಾ ಅಂಕಿಅಂಶಗಳನ್ನು ನೋಡಿದರೆ ಮಹಾಯುತಿಗೆ ಮಹಾವಿಜಯ ದೊರಕಿದೆ. ಕೆಲವೇ ತಿಂಗಳುಗಳ ಹಿಂದೆ ನಡೆದ ಲೋಕಸಬಾ ಚುನಾವಣೆಗೆ ಹೋಲಿಸಿದರೆ ಪ್ರಚಂಡ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭೆಗೆ ಹೋಲಿಸಿದರೂ ಉತ್ತಮ ಮುನ್ನಡೆ ಸಾಧಿಸಿದೆ. ಕೋಷ್ಠಕ-1ರಲ್ಲಿ ಪ್ರತಿ ಪಕ್ಷ ಮತ್ತು ಕೂಟದ ಸೀಟು ಗಳಿಕೆ ಹಾಗೂ ಕಳೆದ ವಿಧಾನಸಭೆಯ (2022ರಲ್ಲಿ ಶಿವಸೇನಾ ಮತ್ತು ಎನ್.ಸಿ.ಪಿ ವಿಭಜನೆಯ ನಂತರದ) ಸೀಟು ಸ್ಥಿತಿಯಿಂದ ಮತ್ತು ಇತ್ತೀಚಿನ (ಏಪ್ರಿಲ್ 2024) ಲೋಕಸಬಾ ಚುನಾವಣೆಗಳಲ್ಲಿ ವಿಧಾನಸಭೆಗಳಲ್ಲಿ ಮುನ್ನಡೆಯಿಂದ ವ್ಯತ್ಯಾಸ (ಏರಿಕೆ/ಇಳಿಕೆ), ಪ್ರತಿ ಪಕ್ಷ ಮತ್ತು ಕೂಟದ ಮತ ಗಳಿಕೆ ಪ್ರಮಾಣ (%), ಲೋಕಸಬಾ ಚುನಾವಣೆಯ ಫಲಿತಾಂಶಧಿಂದ ವ್ಯತ್ಯಾಸ (ಏರಿಕೆ/ಇಳಿಕೆ) ವನ್ನು ಸಹ ಕೊಡಲಾಗಿದೆ.

ಕೋಷ್ಟಕ-1

* ಎರಡು ಕೂಟದಲ್ಲೂ ಪಕ್ಷಗಳು ತಮಗೆ ಕೂಟದಲ್ಲಿ ದೊರಕದ ಕೆಲವು ಸೀಟುಗಳಲ್ಲಿ ಪರಸ್ಪರ ಸ್ಪರ್ಧೆಗೆ ಇಳಿದಿದ್ದರಿಂದ ಒಟ್ಟು ಸ್ಪರ್ಧಿಸಿದ ಸೀಟುಗಳ ಸಂಖ್ಯೆ 288 ಕ್ಕಿಂತ ಹೆಚ್ಚಿಗಿದೆ.
# ಮಹಾಯುತಿಯಲ್ಲಿ ಸ್ಪರ್ಧಿಸಿದ ಇತರ ಪಕ್ಷಗಳು (ಮತ್ತು ಪಡೆದ ಸೀಟುಗಳು) – JSS (2), RYSP(1), RSVA(1)
& ಮಹಾ ವಿಕಾಸ ಅಘಾಢಿಯಲ್ಲಿ ಸ್ಪರ್ಧಿಸಿದ ಇತರ ಪಕ್ಷಗಳು (ಮತ್ತು ಪಡೆದ ಸೀಟುಗಳು) – SP (2), CPI(M) (1), PWPI (1)
! ಕೂಟಕ್ಕೆ ಸೇರದ ಇತರ ಪಕ್ಷಗಳು – AIMIM(1), RSPS(1)

ಇದನ್ನೂ ಓದಿ: ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ!

ಕೋಷ್ಟಕ 1ರಿಂದ ತಿಳಿಯುವ ಅಂಶಗಳು ಹೀಗಿವೆ:

* ಮಹಾಯುತಿ ಕೂಟ ತನ್ನ ಮತಗಳಿಕೆಯನ್ನು ಶೇಕಡಾ 4.3 ರಷ್ಟು ಹೆಚ್ಚಿಸಿಕೊಂಡಿದೆ. ಮಹಾ ವಿಕಾಸ ಅಘಾಡಿ ಶೇ.10ರಷ್ಟು ಮತ ಕಳೆದುಕೊಂಡಿದೆ. ಹೀಗಾಗಿ ಮಹಾಯುತಿ ಕೂಟ ಶೇ. 15ರಷ್ಟು ಮತ ಅಂತರದಿಂದ ಪ್ರಚಂಡ ಮುನ್ನಡೆ ಸಾಧಿಸಿ ಮುಕ್ಕಾಲಕ್ಕಿಂತಲೂ ಹೆಚ್ಚು ಸೀಟುಗಳನ್ನು ಪಡೆದಿದೆ.

* ಮಹಾಯುತಿಯ ಪಕ್ಷಗಳಲ್ಲಿ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶಿವಸೇನಾ (ಶಿಂಧೆ ಬಣ) ದ ಮತಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಗಿದ್ದು (-0.6%) ಮತ್ತು ಬಿಜೆಪಿಯ ಮತಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿದ್ದು (+0.6), ಎನ್,ಸಿ,ಪಿ (ಅಜಿತ್ ಪವಾರ್ ಬಣ) ಮತಪ್ರಮಾಣದಲ್ಲಿ ಗಮನಾರ್ಹ ಏರಿಕೆ (ಶೇ. 5.4) ಕಂಡಿದೆ.

* ಮಹಾ ವಿಕಾಸ ಅಘಾಡಿ ಯ ಪಕ್ಷಗಳಲ್ಲಿ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮತಪ್ರಮಾಣದಲ್ಲಿ ಶೀವಸೇನಾ (ಊದ್ಧವ ಬಣ) (-6.5%) ಕಾಂಗ್ರೆಸ್ (-4.5%) ಗಮನಾರ್ಹ ಇಳಿಕೆಯಾಗಿದೆ, ಎನ್,ಸಿ,ಪಿ (ಶರತ್ ಪವಾರ್ ಬಣ) ಮತಪ್ರಮಾಣದಲ್ಲಿ ಸಣ್ಣ ಏರಿಕೆ (1.0%) ಆಗಿದೆ.

* ಮಹಾಯುತಿ ಕಳೆದ ಲೋಕಸಭಾ ಚುನಾವಣೆಯ ಸ್ಥಿತಿಗೆ ಹೋಲಿಸಿದರೆ 106 ಹೆಚ್ಚಿನ ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭೆಯ (2022ರ ನಂತರದ ಸ್ಥಿತಿಗೆ) ಹೋಲಿಸಿದರೆ 49 ಹೆಚ್ಚಿನ ಸೀಟು ಪಡೆದಿದೆ. ಎನ್.ಸಿ.ಪಿ ಲೋಕಸಭಾ ಚುನಾವಣೆ ಸ್ಥಿತಿಗೆ ಹೋಲಿಸಿದರೆ (ಇದರಲ್ಲಿ ಅದರ ಸಾಧನೆ ಭಾರೀ ಕಳಪೆಯಾಗಿದ್ದರಿಂದ) ಭಾರೀ ಮುನ್ನಡೆ ಸಾಧಿಸಿದರೆ, ಹಿಂದಿನ ವಿಧಾನಸಭೆಗೆ ಹೋಲಿಸಿದರೆ ತನ್ನ ಸ್ಥಾನಗಳನ್ನು ಕಾಯ್ದುಕೊಂಡಿದೆ ಅಷ್ಟೇ.

* ಮಹಾ ವಿಕಾಸ ಅಘಾಡಿ ಕಳೆದ ಲೋಕಸಭಾ ಚುನಾವಣೆ ಸ್ಥಿತಿಗೆ ಹೋಲಿಸಿದರೆ 105 ಸೀಟುಗಳನ್ನು, ಮತ್ತು ಕಳೆದ ವಿಧಾನಸಭೆಯ (2022ರ ನಂತರದ ಸ್ಥಿತಿಗೆ) ಹೋಲಿಸಿದರೆ 26 ಸೀಟುಗಳನ್ನೂ ಕಳೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆ ಸ್ಥಿತಿಗೆ ಹೋಲಿಸಿದರೆ ಕೂಟ ಭಾರೀ ಸಂಖ್ಯೆಯ ಸೀಟುಗಳನ್ನು ಕಳೆದುಕೊಂಡಿವೆ. ಆದರೆ ಹಿಂದಿನ ವಿಧಾನಸಭೆಗೆ ಹೋಲಿಸಿದರೆ ಎನ್,ಸಿ,ಪಿ (ಶರತ್ ಪವಾರ್ ಬಣ) 2 ಸೀಟು ಕಳೆದುಕೊಂಡಿದೆ. ಶಿವಸೇನಾ (ಉದ್ಧವ್ ಬಣ) 4 ಸೀಟು
ಹೆಚ್ಚಿಸಿಕೊಂಡಿದೆ. ಆದರೆ ಕಾಂಗ್ರೆಸ್ ಭಾರೀ ಪ್ರಮಾಣದಲ್ಲಿ (28) ಸೀಟು ಕಳೆದುಕೊಂಡಿದೆ.

* ಇತರ ಪಕ್ಷಗಳು ಮತ್ತು ಪಕ್ಷೇತರರ ಮತಪ್ರಮಾಣ ಸಹ ಈ ಬಾರಿ ಶೇ.6.9 ಏರಿದ್ದೂ ಮಹಾಯುತಿಯ ಪ್ರಚಂಡ ಗೆಲುವಿಗೆ ನೆರವಾಗಿದೆ. 2019ರ ವಿಧಾನಸಭೆಯಲ್ಲಿ ಹಲವುಪಕ್ಷೇತರರು ಮತ್ತು ಎರಡೂ ಕೂಟಗಳಿಗೆ ಸೇರದ ಹಲವು ಪಕ್ಷಗಳು ಗಮನಾರ್ಹ ಮತಪ್ರಮಾಣ ಮತ್ತು ಸೀಟು ಗಳಿಸಿದ್ದವು. ಪಕ್ಷೇತರರು 13 ಮತ್ತು ಇತರ ಪಕ್ಷಗಳ 5 ಅಭ್ಯರ್ಥಿಗಳು ಗೆದ್ದಿದ್ದು, ಶೇ. 20 ರಷ್ಟು ಮತ ಪಡೆದಿದ್ದರು. ಅದು ಯುಪಿಎಯ ಸೋಲಿಗೆ ಒಂದು ಕಾರಣವಾಗಿತ್ತು. ಆದರೆ ಇವರ ಮತಪ್ರಮಾಣ 2024ರ
ಲೋಕಸಭಾ ಚುನಾವಣೆಯಲ್ಲಿ ಕಡಿಮೆಯಾಗಿದ್ದು, ಮತ್ತೆ 2024ರ ವಿಧಾನಸಭಾ ಚುನಾವಣೆಗಳಲ್ಲಿ ಹೆಚ್ಚಾಗಿದೆ.

ಮಹಾವಿಜಯ – ಸಮಗ್ರ, ಆಶ್ಚರ್ಯಕರ

‘ದಿ ಹಿಂದೂ’ ಪತ್ರಿಕೆ ನಡೆಸಿದ ಮತದಾನದ ವಿವರವಾದ ಅಧ್ಯಯನದ ಪ್ರಕಾರ, ಮಹಾ ವಿಕಾಸ ಅಘಾಡಿ ರಾಜ್ಯದ ಆರೂ ಪ್ರದೇಶಗಳಲ್ಲಿ ಗಮನಾರ್ಹ ಮತಪ್ರಮಾಣ ಕಳೆದುಕೊಂಡಿದೆ. ಯಾವ ಪ್ರದೇಶದಲ್ಲೂ ಮುನ್ನಡೆ ಸಾಧಿಸಿಲ್ಲ, ಹಿಂದಿನ ಮುನ್ನಡೆ ಉಳಿಸಿಕೊಂಡಿಲ್ಲ. ಈ ಕೂಟ ಹಿಂದೆ ಗ್ರಾಮೀಣ, ಅರೆ ಗ್ರಾಮೀಣ ಪ್ರದೇಶಗಳಲ್ಲಿ ಇದ್ದ ಮುನ್ನಡೆ ಸಹ ಕಳೆದುಕೊಂಡಿದೆ.

ಅದೇ ರೀತಿ– ಶ್ರೀಮಂತ, ಮಧ್ಯಮ, ಬಡ – ಎಲ್ಲ ಆದಾಯ ಗುಂಪುಗಳಲ್ಲಿ ಗಮನಾರ್ಹ ಮತಪ್ರಮಾಣ ಕಳೆದುಕೊಂಡಿದೆ. ಹೀಗೆ ಮಹಾಯುತಿ ಮಹಾ ವಿಕಾಸ ಅಘಾಡಿ ಮೇಲೆ ಸಮಗ್ರ ಜಯ ಗಳಿಸಿದೆ, ಭಾರೀ ಮುನ್ನಡೆ ಸಾಧಿಸಿದೆ ಎಂದು ಅಂಕೆಸಂಖ್ಯೆಗಳು ಹೇಳುತ್ತಿವೆ.

‘ದಿ ಹಿಂದೂ’ ಅಧ್ಯಯನದಿಂದ ಈ ಮುಂದಿನ ಅಂಶಗಳನ್ನು ಗಮನಿಸಬಹುದು : ಕೊಂಕಣ, ಮುಂಬಯಿ-ಠಾಣೆ, ಪಶ್ಚಿಮ ಮಹಾರಾಷ್ಟ್ರ, ಉತ್ತರ ಮಹಾರಾಷ್ಟ್ರ, ವಿದರ್ಭ, ಮರಾಠವಾಡ – ಚಾರಿತ್ರಿಕ, ಸಮಾಜೋ-ಆರ್ಥಿಕ ಬೆಳವಣಿಗೆಗಳಲ್ಲಿ ಭಿನ್ನವಾಗಿದ್ದು ಹೀಗಾಗಿ ರಾಜಕೀಯವಾಗೂ ಭಿನ್ನವಾಗಿ ವರ್ತಿಸುವ ರಾಜ್ಯದ ಆರು ಪ್ರದೇಶಗಳು. ಕೊಂಕಣ, ಮುಂಬಯಿ- ಠಾಣೆಗಳಲ್ಲಿ ಶಿವಸೇನಾ ಪ್ರಬಲವಾಗಿದ್ದರೆ, ಪಶ್ಚಿಮ ಭಾಗ ಎನ್.ಸಿ,ಪಿ ಪ್ರಾಬಲ್ಯದ ಸಕ್ಕರೆ ನಾಡು, ವಿದರ್ಭ ಮರಾಠವಾಡ
ಗಳು ಕಾಂಗ್ರೆಸ್ ಪ್ರಬಲ ಪ್ರದೇಶಗಳಾದರೆ, ಬಿಜೆಪಿ ಹೆಚ್ಚಿನ ಪ್ರದೇಶಗಳಲ್ಲಿ ನಗರ, ಅರೆ-ನಗರ ಪ್ರದೇಶಗಳಲ್ಲಿ ಪ್ರಬಲವಾಗಿದೆ.

ಕಾಂಗ್ರೆಸ್ ಗ್ರಾಮೀಣ, ಅರೆ-ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಹೊಂದಿದ್ದವು. ಹಾಗೆನೇ ಶ್ರೀಮಂತ, ಮಧ್ಯಮ ವರ್ಗಗಳಲ್ಲಿ ಬಿಜೆಪಿ ಹೆಚ್ಚು ಗಟ್ಟಿ ನೆಲೆ ಹೊಂದಿದ್ದರೆ, ಕಾಂಗ್ರೆಸ್ ಬಡವರಲ್ಲಿ ಹೆಚ್ಚು ನೆಲೆ ಹೊಂದಿದ್ದವು. ಶಿವಸೇನಾ, ಎನ್.ಸಿ.ಪಿ ಪ್ರಬಲ ಮರಾಠಾ ಸಮುದಾಯದಲ್ಲಿ ನೆಲೆ ಹೊಂದಿದ್ದರೆ, ಬಿಜೆಪಿ ಉಚ್ಛ ಜಾತಿಗಳು,
ಕೆಲವು ಒಬಿಸಿ ಸಮುದಾಯಗಳಲ್ಲಿ, ಕಾಂಗ್ರೆಸ್ ದಲಿತ, ಆದಿವಾಸಿ, ಮುಸ್ಲಿಂ ಸಮುದಾಯಗಳಲ್ಲಿ ನೆಲೆ ಹೊಂದಿತ್ತು.

ಇವು ಮತಗಳಿಕೆ, ಸೀಟು ಗಳಿಕೆಯಲ್ಲಿ ಬಿಂಬಿತವಾಗುತ್ತಿದ್ದವು ಆದರೆ ಈ ಯಾವ ಭಿನ್ನತೆಗಳಿಲ್ಲದೆ ಎಲ್ಲ ಜನವಿಭಾಗಗಳಲ್ಲೂ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮಹಾಯುತಿ ಮತಪ್ರಮಾಣವನ್ನು (ಸಮಾನವಾಗಿ ಅಲ್ಲದಿದ್ದರೂ) ಗಮನಾರ್ಹವಾಗಿ ಏರಿಸಿಕೊಂಡಿರುವುದು, ಮಹಾ ವಿಕಾಸ ಅಘಾಢಿ ಎಲ್ಲ ಜನವಿಭಾಗಗಳಲ್ಲಿ ಮತಪ್ರಮಾಣವನ್ನು ಗಮನಾರ್ಹವಾಗಿ ಕಳೆದುಕೊಂಡಿರುವುದು ಆಶ್ವರ್ಯಕರವೂ ಆಗಿದೆ.

ಇದನ್ನೂ ನೋಡಿ: ಮಂಗಳೂರು | ನಗರ ಪೊಲೀಸ್ ಕಮೀಷನರ್ ಹಟಾವೋ ಎಂದ ಯುವಜನ ಕಾರ್ಯಕರ್ತರುJanashakthi Media

Donate Janashakthi Media

Leave a Reply

Your email address will not be published. Required fields are marked *