ಶಿಗ್ಗಾಂವಿ| ಜಿ+1 ಮನೆ ಫಲಾನುಭವಿಗಳಿಗೆ ಮನೆ ಹಂಚಿಕೆ: ಡಿವೈಎಫ್ಐ ಹೋರಾಟದ ಫಲಶೃತಿ

ಶಿಗ್ಗಾಂವಿ: ಪಟ್ಟಣದಲ್ಲಿರುವ ವಸತಿರಹಿತ ಬಡ ಜನತೆಗೆ ವಸತಿ ಸೌಲಭ್ಯಕ್ಕಾಗಿಯೇ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ಜಿ+1 ಮನೆಗಳು ಸಿದ್ದಗೊಂಡು ಹಲವು ವರ್ಷ ಕಳೆದಿದ್ದರೂ, ಪುರಸಭೆಗೆ ವಂತಿಗೆ ಕಟ್ಟಿದ್ದ ಫಲಾನುಭವಿಗೆ ಮನೆಗಳನ್ನು ವಿತರಿಸುವುದು ನೆನೆಗುದಿಗೆ ಬಿದ್ದಿತ್ತು. ಬಡ ಫಲಾನುಭವಿಗಳಿಗೆ ಜಿ+1 ಮನೆಗಳನ್ನು ವಿತರಿಸಲು ಒತ್ತಾಯಿಸಿ ಡಿವೈಎಫ್ಐ ಸಂಘಟನೆಯ ನೇತೃತ್ವದಲ್ಲಿ ಹೋರಾಟ ತೀವ್ರವಾದ ಪರಿಣಾಮವಾಗಿ ಸೋಮವಾರ ಶಾಸಕರಾದ ಯಾಸೀರಖಾನ್ ಪಠಾಣ ರವರು ಹಾಗೂ ಪುರ ಸಭೆಯ ಆಡಳಿತ ಮಂಡಳಿಯವರು ಜಿ+ 1ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸ್ವಾಗತಿಸಿ ಸಂಭ್ರಮಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹರ್ಷ ವ್ಯಕ್ತಪಡಿಸಿದರು. ಶಿಗ್ಗಾಂವಿ

ನಗರದ ಪುರಸಭೆ ಕಛೇರಿಯಲ್ಲಿ ಮಂಗಳವಾರ ಪುರಸಭೆಯ ಅಧ್ಯಕ್ಷರಾದ ಸಿದ್ಧಾರ್ಥಗೌಡ ಪಾಟೀಲ ಹಾಗೂ ಮುಖ್ಯಾಧಿಕಾರಿಗಳಾದ ಕೆ. ಮಲ್ಲೇಶ್ ಅವರಿಗೆ ಉಳಿದಿರುವ ವಸತಿರಹಿತರಿಗೆ ಮನೆ ಸೌಲಭ್ಯ ಒದಗಿಸುವಂತೆ ಕೋರಿ ಮನವಿ ಸಲ್ಲಿಸಿ ಮಾತನಾಡಿದರು.

ಹತ್ತಾರು ವರ್ಷಗಳಿಂದ ಪುರಸಭೆಗೆ ವಂತಿಗೆ ಕಟ್ಟಿರುವ ಬಡ ವಸತರಹಿತ ಫಲಾನುಭವಿಗಳು ಬಾಡಿಗೆ ಮನೆಯಲ್ಲಿ ದುಡ್ಟುಕಟ್ಟಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. ಮನೆಗಳನ್ನು ವಿತರಿಸುವಂತೆ ಫಲಾನುಭವಿಗಳು ಸಾಕಷ್ಟು ಸಲ ಮನವಿ ಸಲ್ಲಿಸಿದ್ದರು. ನಂತರ ಡಿವೈಎಫ್ಐ ನೇತೃತ್ವದಲ್ಲಿ ಹೋರಾಟಕ್ಕಿಳಿದು ಪ್ರತಿಭಟನೆಯು ತೀವ್ರಗೊಂಡಿತ್ತು.

ಇದನ್ನೂ ಓದಿ: ಕಾರವಾರ| ವಿದ್ಯುತ್ ಶಾಕ್ ತಗುಲಿ ಹೆಣ್ಣು ಕಾಡಾನೆ ಸಾವು

ಈ ಹೋರಾಟಕ್ಕೆ ಸ್ಪಂದಿಸಿ ಮನೆಗಳನ್ನು ಹಂಚಿಕೆ ಮಾಡಿದ ಮಾನ್ಯ ಶಾಸಕರು, ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪುರಸಭೆಯ ಮುಖ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಆಶ್ರಯ ಸಮಿತಿ ಸದಸ್ಯರಿಗೆ ಹಾಗೂ ಮನೆ ಸೌಲಭ್ಯ ಕೊಡಿಸಲು ಈವರೆಗೂ ಪ್ರಯತ್ನಿಸಿದವರೆಲ್ಲರಿಗೂ ಡಿವೈಎಫ್ಐ ಸಂಘಟನೆಯು ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದರು.

180 ಜನ ಫಲಾನುಭವಿಗಳಿಗೆ ಈಗಾಗಲೇ ಮನೆಗಳನ್ನು ವಿತರಿಸಿರುವುದು ಸಂತಸದ ಸಂಗತಿಯಾಗಿದ್ದು, ಸದರಿ ಪ್ರಕ್ರಿಯೆಯಲ್ಲಿ ಪುರಸಭೆಗೆ ವಂತಿಗೆ ಕಟ್ಟದ 11 ಜನ ಬಡ ವಸತಿರಹಿತರು ಹಾಗೂ ಪುರಸಭೆಗೆ ವಂತಿಗೆ ಕಟ್ಟಿರುವ 58 ಜನ ಫಲಾನುಭವಿಗಳ ಹೆಸರಿನಲ್ಲಿ ಸಣ್ಣ ನಿವೇಶನ ಹಾಗೂ ಅತಿಸಣ್ಣ ಮನೆಗಳಿವೆ ಎಂಬ ತಾಂತ್ರಿಕ ಕಾರಣದಿಂದಾಗಿ ಜಿ+1 ಮನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಫಲಾನುಭವಿಗಳಲ್ಲಿ ಬಹುತೇಕರು ಅವಿಭಕ್ತ ಕುಟುಂಬದವರಾಗಿದ್ದಾರೆ ತಂದೆ ಅಥವಾ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಸಣ್ಣ ನಿವೇಶನ/ಮನೆ ಇದ್ದು, ಅತೀ ಸಣ್ಣ ಮನೆಯಲ್ಲಿ/ನಿವೇಶನದಲ್ಲಿ ಎರಡು, ಮೂರು, ನಾಲ್ಕು ಕುಟುಂಬಗಳು ವಾಸಿಸುವುದು ಕಷ್ಟದಾಯಕವಾದುದು.

ಈ ಕುಟುಂಬದಲ್ಲಿ ಯಾರದಾದರೂ ಒಬ್ಬರ ಹೆಸರಲ್ಲಿ ಈ ಸಣ್ಣ ಆಸ್ತಿಯಿರುವುದರಿಂದ ಅರ್ಜಿ ಹಾಕಿ ವಂತಿಗೆ ಕಟ್ಟಿದ ಫಲಾನುಭವಿಗಳಿಗೆ ಆಸ್ತಿಯಿದೆ ಎಂದು ಪರಿಗಣಿಸಿರುವುದರಿಂದ ವಸತಿ ಸೌಲಭ್ಯದಿಂದ ವಂಚಿತಗೊಳ್ಳುತ್ತಾರೆ. ಆದ್ದರಿಂದ ಈ 69 ಜನ ಫಲಾನುಭವಿಗಳಿಗೆ ಪುರಸಭೆಯ ವತಿಯಿಂದ ಮನೆ ಸೌಲಭ್ಯವನ್ನು ಒದಗಿಸಬೇಕು. ಅವರು ಪುರಸಭೆಗೆ ಕಟ್ಟಿರುವ ವಂತಿಗೆ ಹಣವನ್ನು ಮರಳಿ ಫಲಾನುಭವಿಗಳಿಗೆ ಕೊಡಬಾರದು, ವಂತಿಗೆ ಕಟ್ಟದ ವಸತಿರಹಿತರಿಗೆ ವಂತಿಗೆ ಹಣ ಕಟ್ಟಲು ಸಮಯಾವಾಕಾಶ ಒದಗಿಸಿ ಮನೆ ಸೌಲಭ್ಯ ಒದಗಿಸಬೇಕು ಎಂದರು.

ಈ ಫಲಾನುಭವಿಗಳ ಜೊತೆಯಲ್ಲಿ ಶಿಗ್ಗಾಂವಿ-ಸವಣೂರು ಪಟ್ಟಣಗಳಲ್ಲಿ ಹಾಗೂ ಎರಡೂ ತಾಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿಯೂ ಸಹ ಹಲವಾರು ಜನ ವಾಸಿಸಲು ಮನೆಗಳಿಲ್ಲದೇ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಶತ ಶತಮಾನಗಳಿಂದ ಘನತೆಯ ಬದುಕಿನಿಂದ ವಂಚಿತಗೊಂಡಿರುವ ಅಲೆಮಾರಿ, ಅರೆ ಅಲೆಮಾರಿ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರು ಹಾಗೂ ಇತರ ಸಮುದಾಯದ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಸತಿರಹಿತರ ಸಮೀಕ್ಷೆ ನಡೆಸಿ ಇವರೆಲ್ಲರಿಗೂ ವಾಸಯೋಗ್ಯ ಮನೆಗಳನ್ನು ಒದಗಿಸಿ ಇವರಿಗೂ ಘನತೆಯ ಬದುಕನ್ನು ಖಾತ್ರಿಪಡಿಸಬೇಕು ಎಂದರು.

ಈಗಾಗಲೇ ಶಾಸಕರು ವಿಧಾನಸಭಾ ಕ್ಷೇತ್ರ ವ್ಯಪ್ತಿಯಲ್ಲಿರುವ ವಸತರಹಿತರಿಗೆ ಮನೆ ಸೌಲಭ್ಯವನ್ನು ಕಲ್ಪಿಸಲು ಸರಕಾರದ ಮಟ್ದಲ್ಲಿ ಚರ್ಚೆಯಾಗಿದೆ, ಮುಂದಿನ ದಿನಗಳಲ್ಲಿ ವಸತಿರಹಿತರಿಗೆ ಮನೆಗಳನ್ನು ಒದಗಸಿಲಾಗುವುದು ಎಂದು ಭರವಸೆ ನೀಡಿರುವುದಕ್ಕೆ ಅಭಿನಂದನೆಗಳು, ಇದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕು ಎಂದರು.

ಮನವಿ ಸ್ವೀಕರಿಸಿದ ಪುರಸಭಾಕ್ಷರಾದ ಸಿದ್ಧಾರ್ಥಗೌಡ ಪಾಟೀಲ ಹಾಗೂ ಮುಖ್ಯಾಧಿಕಾರಿಗಳಾದ ಕೆ. ಮಲ್ಲೇಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಆದಷ್ಟು ಬೇಗನೆ ಈ ವಸತಿ ಯೋಜನೆಯಿಂದ ಹೊರಗುಳಿದ ಅರ್ಹ ಫಲಾನುಭವಿಗಳಿಗೆ ವಸತಿ ಮನೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ ವೀರಣ್ಣ ಗಡ್ಡಿಯವರ, ಮೌಲಾಲಿ ನವಲಗುಂದ, ಕಿಶೋರ ದೋತ್ರೆ, ಅಸ್ಮಾ ದೇವಸೂರು, ಶಾಂತವ್ವ ಗಡ್ಡಿ, ಓಂಕಾರ ವಿ.ಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media

Donate Janashakthi Media

Leave a Reply

Your email address will not be published. Required fields are marked *