ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರವನ್ನು ನಿಯಂತ್ರಣ ಮಾಡದೆ ನಿರಂತರವಾಗಿ ಅದರ ಮೇಲಿನ ತೆರಿಗೆಗಳನ್ನು ಹೆಚ್ಚಿಸಿ ಇದೀಗ ಅಲ್ಪಪ್ರಮಾಣದ ಇಳಿಕೆಗೆ ಕ್ರಮವಹಿಸಿರುವ ಬೆನ್ನಲ್ಲೆ ರಾಜ್ಯ ಹೋಟೆಲ್ ಮಾಲೀಕರ ಸಂಘ ಮತ್ತು ಬೆಂಗಳೂರು ಹೋಟೆಲ್ ಮಾಲೀಕರ ಸಂಘಗಳು ಅಧಿಕೃತವಾಗಿ ದರ ಏರಿಕೆ ಪ್ರಕಟಿಸಿ ಜಾರಿ ಮಾಡಿವೆ.
ದರ ಏರಿಕೆಯನ್ನು ಶೇಕಡಾ 10ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಿಸಿವೆ. ಆದರೆ, ಕೋವಿಡ್ ಲಾಕ್‌ಡೌನ್‌ನಿಂದಾಗಿ ರಾಜ್ಯ ಮತ್ತು ಬೆಂಗಳೂರಿನ ಜನತೆ ಉದ್ಯೋಗ ಮತ್ತು ಆದಾಯದಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ದರ ಏರಿಕೆಯು ಸಮಸ್ಯೆಗೆ ಪರಿಹಾರವಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ತಿಳಿಸಿವೆ.
ಇದನ್ನು ಓದಿ: ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ತೆರಿಗೆ ದರ ಕಾರಣವೇ?
ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್ ಅವರು ʻʻಬಿಜೆಪಿ ಸರ್ಕಾರಗಳು ಬೆಲೆ ಏರಿಕೆಯ ಕ್ರಮಗಳಿಂದ ಜನತೆಯ ಜೀವನಕ್ಕೆ ಉಂಟುಮಾಡಿರುವ ಗಾಯದ ಮೇಲೆ ಹೋಟೆಲ್ ಮಾಲೀಕರ ಸಂಘದ ದರ ಏರಿಕೆಯು ಬರೆ ಎಳೆದಿದೆ ಎಂದು ಸಿಪಿಐ(ಎಂ) ಟೀಕಿಸಿದೆ. ಹೋಟೆಲ್ ಮಾಲೀಕರ ಸಂಘದ ನಾಯಕತ್ವದಲ್ಲಿನ ಸಂಘ ಪರಿವಾರ ಮತ್ತು ಬಿಜೆಪಿ ಪರ ನಿಷ್ಠೆಯ ಕಾರಣ ಬೆಲೆ ಏರಿಕೆಯ ವಿರುದ್ಧ ಕಾರ್ಮಿಕ ಸಂಘಟನೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಗಳಿಗೆ ಬೆಂಬಲಿಸಲಿಲ್ಲ. ಮಾತ್ರವಲ್ಲದೆ, ಮುಷ್ಕರ ಬಂದ್ ವೇಳೆ ಬಂದ್ ಮಾಡದೆ ಬಿಜೆಪಿ ಸರ್ಕಾರಗಳ ಬೆಲೆ ಏರಿಕೆಯನ್ನು ಬೆಂಬಲಿಸಿವೆ. ಇದೀಗ ಹೋಟೆಲ್ ದರ ಏರಿಕೆಗೆ ಮುಂದಾಗಿವೆ ಎಂದಿದೆʼʼ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಜೇಬು ಸುಡುತ್ತಿದೆ ಹೋಟೆಲ್ ಬಿಲ್ ; ಟಿ, ಕಾಫೀ, ತಿಂಡಿ ಊಟದ ದರ ಹೆಚ್ಚಳ
ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ʻʻಮಾಲೀಕರ ಸಂಘದ ಪ್ರಕಟಣೆಗೂ ಮುನ್ನ ಈಗಾಗಲೇ ಹಲವು ಹೋಟೆಲುಗಳು ದರ ಏರಿಸಿವೆ. ಇದೀಗ ಅದನ್ನು ಅಧಿಕೃತಗೊಳಿಸುವ ಕ್ರಮಕ್ಕೆ ಮಾಲೀಕರ ಸಂಘ ಮುಂದಾಗಿದೆ. ಆದರೆ ಜನರ ಕೊಳ್ಳುವ ಶಕ್ತಿಯು ಕುಂಟಿತವಾಗಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಈ ದರ ಏರಿಕೆಯಿಂದ ಜನತೆಯು ಹೋಟೆಲ್ ಗಳಿಗೆ ಬರುವುದು ಸೀಮಿತವಾಗಿ ವ್ಯಾಪಾರವು ಕುಂಟಿತವಾಗಿ ದೀಘಾ೯ವಧಿಯಲ್ಲಿ ಹೋಟೆಲ್ ಉದ್ಯಮವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದಿದ್ದಾರೆ.
ಬೆಲೆ ಏರಿಕೆ ನೆಪದಲ್ಲಿ ಹೋಟೇಲುಗಳಲ್ಲಿ ದರ ಏರಿಸುವ ಬದಲು ಬೆಲೆ ಏರಿಕೆ ನಿಯಂತ್ರಣಕ್ಕೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವ ಹೋರಾಟಗಳಿಗೆ ಮುಂದಾಗಬೇಕೆಂದು ಹಾಗು ಬೆಲೆ ಏರಿಕೆಯ ವಿರುದ್ಧ ನಡೆದಿರುವ ಹೋರಾಟಗಳಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಲು ಮುಂದಾಗಬೇಕೆಂದು ಸಿಪಿಐ(ಎಂ) ಪಕ್ಷವು ಹೋಟೆಲ್ ಮಾಲೀಕರ ಸಂಘಗಳನ್ನು ಕೋರಿದೆ.