ಗುರುರಾಜ ದೇಸಾಯಿ
”ಬಾಗಿಲೇ ಇಲ್ಲದ ಶೌಚಾಲಯಗಳು, ಕಾಂಪೌಂಡ್ ಇಲ್ಲದ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳು, ಉಪ್ಪು–ತರಕಾರಿ ಇಲ್ಲದ ನೀರೇ ಸಾಂಬಾರ್ ಆಗಿರುವ ಊಟ, ಶೈಕ್ಷಣಿಕ ತಾಣಗಳಾಗಿರಬೇಕಿದ್ದ ಹಾಸ್ಟೇಲ್‌ಗಳು ರೋಗಗಳ ತಾಣವಾಗುತ್ತಿವೆ. ಹಾಸ್ಟೇಲ್ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ SC/ST/OBC/ಅಲ್ಪಸಂಖ್ಯಾತ/ಆಶ್ರಮಶಾಲೆಗಳು ಸೇರಿ ಒಟ್ಟು 5 ಸಾವಿರಕ್ಕೂ ಹೆಚ್ಚು ಹಾಸ್ಟೇಲ್‌ಗಳಿವೆ. 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆ, ಗುಣಮಟ್ಟದ ಊಟದ ಕೊರತೆಯಿಂದ ವಿದ್ಯಾರ್ಥಿಗಳು ದಿನನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ತಾಣಗಳಾಗಿರಬೇಕಿದ್ದ ಹಾಸ್ಟೇಲ್‌ಗಳು ರೋಗಗ್ರಸ್ಥ ತಾಣಗಳಾಗಿವೆ. ಸೌಲಭ್ಯಗಳಿಲ್ಲದೆ ನರಳುತ್ತಿರುವ ಹಾಸ್ಟೇಲಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರತರಾಗಿದ್ದಾರೆ. ಹಾಸ್ಟೇಲ್‌ನಲ್ಲಿರುವ ವಿದ್ಯಾರ್ಥಿಗಳ ಗೋಳನ್ನು ಆಲಿಸಿ ಅವರ ಸಮಸ್ಯೆಗಳನ್ನು ನಿವಾರಿಸು ಪ್ರಯತ್ನಗಳನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಮಾಡುತ್ತಲೇ ಇಲ್ಲ. ಮುಖ್ಯವಾಗಿ ಸರಕಾರ ಹಾಸ್ಟೇಲ್‌ಗಳನ್ನು ಬಲಪಡಸಲು ಆಸಕ್ತಿ ತೋರದಿರುವುದು ಹಾಸ್ಟೇಲ್‌ಗಳು ಹೀನಾಯ ಸ್ಥಿತಿ ತಲುಪಲು ಕಾರಣವಾಗಿದೆ.
ಬಾಡಿಗೆ ಕಟ್ಟಡದಲ್ಲಿ ಹಾಸ್ಟೇಲ್ : ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೇಲ್‌ಗಳ ಸಂಖ್ಯೆ 1237, ಇಲ್ಲಿ 91,454 ವಿದ್ಯಾರ್ಥಿಗಳಿದ್ದಾರೆ. ಮೆಟ್ರಿಕ್ ನಂತರದ ಹಾಸ್ಟೇಲ್‌ಗಳ ಸಂಖ್ಯೆ 635 ಇದ್ದು, 70,143 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಒಟ್ಟು 1872 ಹಾಸ್ಟೇಲ್‌ಗಳಲ್ಲಿ 850 ಹಾಸ್ಟೇಲ್‌ಗಳಿಗೆ ಸ್ವಂತ ಕಟ್ಟಡ ಇಲ್ಲ. ಇನ್ನೂ ಹಿಂದುಳಿದ ವರ್ಗಳ ಇಲಾಖೆಯ ಹಾಸ್ಟೇಲ್ ಚಿತ್ರಣ ನೋಡುವುದಾದರೆ.ಮೆಟ್ರಿಕ್ ಪೂರ್ವವ ಹಾಸ್ಟೇಲ್‌ಗಳ ಸಂಖ್ಯೆ 1282 ಇದ್ದು, 69,068 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಮೆಟ್ರಿಕ್ ನಂತರದ ಹಾಸ್ಟೇಲ್‌ಗಳ ಸಂಖ್ಯೆ 1156 ಇದ್ದು ಅಲ್ಲಿ 1,58,768 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಒಟ್ಟು 2438 ಹಾಸ್ಟೇಲ್‌ಗಳಲ್ಲಿ 1031 ಹಾಸ್ಟೇಲ್‌ಗಳಿಗೆ ಸ್ವಂತ ಕಟ್ಟಡ ಇಲ್ಲ.
ಅಂದರೆ ಅರ್ದದಷ್ಟು ಹಾಸ್ಟೇಲ್‌ಗಳು ಬಾಡಿಗೆ ಕಟ್ಟದಲ್ಲಿ ನಡೆಯುತ್ತಿವೆ. ತಿಂಗಳಿಗೆ ಕಡಿಮೆ ಅಂದರೂ 1 ಲಕ್ಷ ರೂ ಹಣ ಬಾಡಿಗೆಗೆ ಖರ್ಚಾಗುತ್ತಿದೆ. ಬಹಳಷ್ಟು ಹಾಸ್ಟೇಲ್‌ಗಳು ಹತ್ತಾರುವರ್ಷದಿಂದ ಒಂದೇ ಜಾಗದಲ್ಲಿ ಬಾಡಿಗೆ ಪಡೆದು ಹಾಸ್ಟೇಲ್ ನಡೆಸುತ್ತಿವೆ. ಇಷ್ಟು ಹಣದಲ್ಲಿ ಒಂದು ಜಾಗ ಖರೀದಿಸಿ ಹಾಸ್ಟೇಲ್ ಕಟ್ಟಲು ಸಾಧ್ಯವಿತ್ತು. ಬಹುಷ ಈ ಹಾಸ್ಟೇಲ್ ಬಾಡಿಗೆಯಲ್ಲಿ ಸರಕಾರಕ್ಕೆ ಕಮೀಷನ್ ಹೋದಂತೆ ಕಾಣಿಸುತ್ತದೆ. ಹಾಗಾಗಿ ಬಾಡಿಗೆ ಮುಕ್ತ ಹಾಸ್ಟೇಲ್‌ಗಳ ನಿರ್ಮಾಣಕ್ಕೆ ಸರಕಾರ ಮುಂದಾಗುತ್ತಿಲ್ಲ.
ಇದನ್ನೂ ಓದಿ : ಸಿಲೆಂಡರ್ ಕೊಳ್ಳಲು ಸರಕಾರದ ಬಳಿ ಹಣವಿಲ್ಲ – ಶಿಕ್ಷಕರ ಜೇಬಿಗೆ ಬೀಳುತ್ತಿದೆ ಕತ್ತರಿ!
ಇನ್ನೂ ಹಾಸ್ಟೇಲ್‌ಗಳಲ್ಲಿ ವಾರ್ಡನ್‌ಗಳ ಕೊರತೆ ಕೂಡಾ ಇದ್ದು, ಒಬ್ಬ ವಾರ್ಡನ್ ಎರಡರಿಂದ ಮೂರು ಹಾಸ್ಟೇಲ್‌ಗಳನ್ನು ನೋಡಿಕೊಳ್ತಾ ಇದ್ದಾರೆ. ಹಾಗಾಗಿ ಇವರು ಊಟ, ತಿಂಡಿ ನೀಡುವ ಸಮಯದಲ್ಲಿ ಒಂದೇ ವಸತಿ ನಿಲಯದಲ್ಲಿ ಇರೋದಕ್ಕೆ ಕಷ್ಟವಾಗುತ್ತಿದೆ. ಇಲಾಖೆಯ ನಿಯಮದ ಪ್ರಕಾರ ಒಂದು ರೂಮಿನಲ್ಲಿ 5 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು. ಆದರೆ ಕೊಠಡಿ ಕೊರತೆಯಿಂದ ಒಂದು ರೂಮಿನಲ್ಲಿ 10 ರಿಂದ 15 ವಿದ್ಯಾರ್ಥಿಗಳು ವಾಸಿಸುವಂತಹ ಸ್ಥಿತಿ ಇದೆ. ಮಲಗಲು ಜಾಗವಿಲ್ಲದ ಪರಿಣಾಮ ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡದ ಮಹಡಿಯಲ್ಲಿ ,ಹೊರ ಆವರಣದಲ್ಲಿ ರಾತ್ರಿ ನಿದ್ರೆಮಾಡಬೇಕಿದೆ. ಮಳೆ, ಚಳಿ ಹೆಚ್ಚಾದರೆ ಎಲ್ಲರೂ ಒಂದೇ ಕೊಠಡಿಯಲ್ಲಿ ಕುರಿ ಹಿಂಡಿನಂತೆ ಮಲಗಬೇಕು. ಬೆಳಗ್ಗೆ ಎದ್ದರೆ ಶೌಚಾಲಯ, ಸ್ನಾನದ ಮನೆಯಲ್ಲಿ ಕ್ಯೂನಿಲ್ಲಬೇಕು.ಹೊಟ್ಟೆ ತುಂಬಾ ಊಟವಿಲ್ಲದೇ, ಕಣ್ ತುಂಬಾನಿದ್ರೆ ಇಲ್ಲದೇ ನೆಮ್ಮದಿಯ ಓದು ಎಂಬುದೇ ಹಾಸ್ಟೆಲ್‌ಗಳಲ್ಲಿ ಗಗನಕುಸುಮವಾಗಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ಸಮಸ್ಯೆಗಳನ್ನು ಹೊದ್ದು ಮಲಗಿರುವ ಹಾಸ್ಟೇಲ್ : ಇನ್ನೂ ಹಾಸ್ಟೇಲ್ ಊಟದ ವಿಚಾರಕ್ಕೆ ಬರುವುದಾದರೆ ಮೆಟ್ರಿಕ್ ಪೂರ್ವವ ಹಾಸ್ಟೇಲ್‌ಗೆ ಸರಕಾರ ಒಂದು ದಿನಕ್ಕೆ 1650 ರೂ ನೀಡಿದರೆ, ಮೆಟ್ರಿಕ್ ನಂತರದ ಹಾಸ್ಟೇಲ್ 1750 ರೂ ನೀಡುತ್ತದೆ. ಅಂದರೆ ದಿನವೊಂದಕ್ಕೆ 55 ರೂ ನಿಂದ 57 ರೂ ಮಾತ್ರ ಆಹಾರ ಭತ್ಯೆ ನೀಡಲಾಗುತ್ತಿದೆ. ಇಷ್ಟು ಹಣದಲ್ಲಿ ಗುಣಮಟ್ಟದ ಊಟ ಕೊಡಲು ಸಾಧ್ಯವೇ ಇಲ್ಲ. ಬೇಳೆ, ತರಕಾರಿ ಇಲ್ಲದ ಸಾಂಬಾರು, ಕಸ ಕಡ್ಡಿಯಿಂದ ಕೂಡಿದ ಮುಗ್ಗುನಾರುವ ಅಕ್ಕಿ, ಉಪ್ಪು ಹಾಕಿದರೆ ಉಪ್ಪಿಟ್ಟು, ಸಕ್ಕರೆ ಹಾಕಿದರೆ ಕೇಸರಿಬಾತ್ ಎನ್ನುವ ಸ್ಥಿತಿ ವಿದ್ಯಾರ್ಥಿಗಳದ್ದು.
ಪ್ರತಿ ಹಾಸ್ಟೇಲ್‌ನಲ್ಲೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲೆಂದು ಗ್ರಂಥಾಲಯಗಳನ್ನು ತೆರೆಯಬೇಕೆಂಬ ನಿಯಮ ಇದೆ. ಆದರೆ ಬಹುತೇಕ ಹಾಸ್ಟೇಲ್‌ಗಳಲ್ಲಿ ಗ್ರಂಥಾಲಯ ಸಿಗುವುದೆ ಇಲ್ಲ. ಇದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದಲ್ಲಿರುವ ಬಹಳಷ್ಟು ಆಶ್ರಮ ಶಾಲೆಗಳಲ್ಲಿ ಶೌಚಾಲಯ ಸಮಸ್ಯೆಗಳಿವೆ. ಹೊದಿಕೆ, ಕಾಟ್ ನೀಡುವಲ್ಲಿಯೂ ಸರಕಾರ ಹಿಂದೇಟು ಹಾಕುತ್ತಿದೆ. ಮೆಟ್ರಿಕ್ ಪೂರ್ವ ಹಾಸ್ಟೇಲ್ ಮಕ್ಕಳಿಗೆ ನೀಡುವ ಪೇಸ್ಟ್, ಸೋಪ್, ಕೊಬ್ಬರಿ ಎಣ್ಣಿ ಸರಿಯಾಗಿ ವಿತರಿಸುತ್ತಿಲ್ಲ, ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡಬೇಕೆಂಬ ನಿಯಮ ಇದೆ. ಆದರೆ ಇದೂ ಯಾವ ಹಾಸ್ಟೇಲ್‌ನಲ್ಲಿಯೂ ಜಾರಿ ಇಲ್ಲ. ಖಾಸಗೀ ಬಿಲ್ಡಂಗ್ ನಲ್ಲಿ ಹಾಸ್ಟೇಲ್‌ಗಳು ನಡೆಯುತ್ತಿರುವ ಕಾರಣ ಸೌಲಭ್ಯಗಳ ಕೊರತೆ ಹೆಚ್ಚಾಗುತ್ತಲೇ ಇದೆ. ಹಾಸ್ಟೇಲ್‌ಗಳು ಶೈಕ್ಷಣಿಕ ತಾಣದ ಬದಲಾಗಿ ದನದ ದೊಡ್ಡಿಯಾಗುತ್ತಿರುವುದು ದುಃಖದ ವಿಚಾರವಾಗಿದೆ. ಹಾಸ್ಟೇಲ್‌ಗಳು ಹೇಗಿವೆ ಎಂಬುದಕ್ಕೆ ಯಾರೂ ಸರ್ವೇ ಮಾಡಬೇಕಿಲ್ಲ, ಯಾವುದಾದರೊಂದು ಹಾಸ್ಟೇಲ್‌ಗೆ ಭೇಟಿ ನೀಡದರೆ ಸಾಕು ಸಮಸ್ಯೆಗಳೇ ಎಲ್ಲವನ್ನೂ ಹೇಳಿಬಿಡುತ್ತವೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಆರೋಪಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಇನ್ನೂ ಕೆಲ ಹಾಸ್ಟೇಲ್‌ಗಳಲ್ಲಿ ಟೆಂಡರ್ ಹೆಸರಿನಲ್ಲಿ ಅಕ್ರಮ ನಡೆಯುತ್ತಿದೆ. ಟೆಂಡರ್ ಎನ್ನುವುದು ಹಾಸ್ಟೇಲ್ ವ್ಯವಸ್ತೆಗೆ ಮಾರಕವಾಗಿದೆ. ಅಕಸ್ಮಾತ್ ಹಾಸ್ಟೇಲ್‌ನಲ್ಲಿ ಒಂದು ವಿದ್ಯುತ್ ಲೈಟ್ ಹಾಳಾದರೆ ಅದನ್ನು ತರಲು ಟೆಂಡರ್ ಆಗುವವರೆಗೂ ಕಾಯಬೇಕು ಇಲ್ಲವೇ ವಾರ್ಡನ್ ಕೈಯಿಂದ ಹಾಕಬೇಕು. ಹೀಗೆ ಹಾಸ್ಟೇಲ್‌ಗಳು ಸಮಸ್ಯೆಗಳ ಮೇಲೆ ಸಮಸ್ಯೆಯನ್ನು ಹೊದ್ದು ಮಲಗಿವೆ ಎಂದು ಹಾಸ್ಟೇಲ್ ನೌಕರರ ಸಂಘಟನೆಯ ಜಂಟಿ ಕಾರ್ಯದರ್ಶಿ ಹನಮೇಗೌಡ ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್ ತೆರೆಯಬೇಕು : ಒಂದೆಡೆ ಹಾಸ್ಟೇಲ್ ಸಮಸ್ಯೆಗಳ ನಡುವೆ ಹಾಸ್ಟೇಲ್ ಕೊರತೆಯೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸಿಗುತ್ತಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಅರ್ಜಿ ಹಾಕಿದರೆ 200 ರಿಂದ 300 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೇಲ್ ಸೌಲಭ್ಯ ದೊರೆಯುತ್ತಿದೆ. ಉಳಿದ ವಿದ್ಯಾರ್ಥಿಗಳು ರೂಮ್ ಮಾಡಿಕೊಂಡು ಓದಬೇಕಾದ ಸ್ಥಿತಿ ಇದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಾಸ್ಟೇಲ್ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಹೋರಾಟವನ್ನು ಮಾಡುತ್ತಾ ಬಂದಿವೆ. ಈ ಬಾರಿಯ ಬಜೆಟ್‌ನಲ್ಲಾದರೂ ಸರಕಾರ ಹೆಚ್ಚುವರಿ ಹಾಸ್ಟೇಲ್ ನಿರ್ಮಿಸುವ ಮತ್ತು ಸ್ವಂತ ಕಟ್ಟಡ ನೀಡಿ ಮೂಲಸೌಲಭ್ಯವನ್ನು ಹೆಚ್ಚಿಸುವತ್ತ ಗಮನ ನೀಡಬೇಕಿದೆ.
ಒಟ್ಟಾರೆ ಅಧ್ಯಯನ ಕೇಂದ್ರಗಳಾಗಿರಬೇಕಾದ ಹಾಸ್ಟೇಲ್‌ಗಳು ರೋಗಗ್ರಸ್ಥ ತಾಣಗಳಾಗುತ್ತವೆ. ಕೂಡಲೆ ರಾಜ್ಯ ಸರಕಾರ ಹಾಸ್ಟೇಲ್ಗಳಿಗೆ ಮೂಲಸೌಲಭ್ಯಗಳನ್ನುನೀಡಿ, ಗುಣಮಟ್ಟದ ಆಹಾರವನ್ನು ನೀಡಲು ಮುಂದಾಗಬೇಕಿದೆ. ಇಲ್ಲವಾದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರೋಗ್ಯದ ಮೇಲಾಗುವ ಸಮಸ್ಯೆಗಳಿಗೆ ತಾನೇ ಜವಬ್ದಾರಿಯಾಗಿರುತ್ತೇನೆ ಎಂಬುದನ್ನು ಸರಕಾರ ಮರೆಯಬಾರದು.