ಕಳೆದ ಸುಮಾರು ೭೦-೮೦ ವರ್ಷಗಳಿಂದಲೂ ತಮ್ಮದು ಸಾಂಸ್ಕೃತಿಕ ಸಂಘಟನೆಯೆಂದು, ತಮಗೆ ರಾಜಕೀಯ ಅಧಿಕಾರ ಬೇಕಾಗಿಲ್ಲವೆಂದು ಹೇಳುತ್ತಲೇ, ಅಧಿಕಾರಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಾ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಸಂಘಪರಿವಾರಕ್ಕೆ, ಜಾಗತಿಕ ಮಟ್ಟದಲ್ಲಿ ಕಾರ್ಪೊರೇಟ್-ಫ್ಯಾಸೀವಾದೀ ಶಕ್ತಿಗಳು ಬಲಗೊಂಡಿದ್ದು ದೇಶೀಯವಾಗಿ ವರದಾನವಾಯಿತು. ಸಾಮಾನ್ಯ ಜನರ ಮುಗ್ಧತೆ, ಅನಕ್ಷರತೆ, ರಾಜಕೀಯ ಪ್ರಜ್ಞೆಯ ಕೊರತೆ, ಅತೀವ ಬಡತನ ಮತ್ತು ಜಾಗತೀಕರಣ ನೀತಿಗಳು ಹೆಚ್ಚಿಸಿದ ನಿರುದ್ಯೋಗ, ಹಿಂದಿನ ಸರ್ಕಾರಗಳ ಭ್ರಷ್ಟತೆ ಮತ್ತು ಅವು ಜನವಿರೋಧಿ ನೀತಿಗಳಿಗೆ ಕೊಟ್ಟ ಆದ್ಯತೆಗಳು, ಇವೆಲ್ಲವೂ, ಮುಖವಿಲ್ಲದ ಕಾರ್ಪೊರೇಟ್ ಬಂಡವಾಳದ ಹುಸಿ ಪ್ರಜಾತಾಂತ್ರಿಕ ಮುಖವಾಗಿ, ಸಂಘಪರಿವಾರದ ಅಧಿಕಾರ ಸ್ಥಾಪನೆಗೆ ಭದ್ರ ನೆಲೆಯನ್ನು ಒದಗಿಸಿದವು. ಫ್ಯಾಸಿಸ್ಟ್ ಸಂಘಟನೆಯಾಗಿ ಹುಟ್ಟಿದಾರಭ್ಯ ಸುಳ್ಳು-ವಂಚನೆ-ಕುಟಿಲೋಪಾಯಗಳಲ್ಲಿ ಪಳಗಿದ ಸಂಘಪರಿವಾರಕ್ಕೆ ಸಂಸ್ಕೃತಿ ಪ್ರಸರಣ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ತನ್ನ ಗುಪ್ತ ಕಾರ್ಯಕ್ರಮಗಳನ್ನು ಬಹಿರಂಗವಾಗೇ ಕಾರ್ಯರೂಪಕ್ಕೆ ತರುವುದು ಸಾಧ್ಯವಾಯಿತು.
ಸಂಘಪರಿವಾರವು ಶಿಕ್ಷಣ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ತಮ್ಮ ಫ್ಯಾಸೀ ತತ್ವಗಳನ್ನು ತಳಮಟ್ಟದಿಂದಲೇ ಎಳೆಯ ಮನಸ್ಸುಗಳಲ್ಲಿ ಬಿತ್ತುತ್ತಾ ಬಂದಿತ್ತು. ಇದರ ಫಲವಾಗಿ ಜಾಗತೀಕರಣವು ಸೃಷ್ಟಿಸಿದ ಬಿಕ್ಕಟ್ಟುಗಳೇ ಸಂಘಪರಿವಾರದ ಸುಳ್ಳು ಆಶ್ವಾಸನೆಗಳತ್ತ ಯುವಜನರು ಆಕರ್ಷಿತರಾಗುವಂತೆ ಮಾಡಿದವು.
ಇದಲ್ಲದೆ, ಸರ್ಕಾರದ ಕೃಪಾಶ್ರಯದಲ್ಲಿ ಕಾನೂನಿನ ಕವಚ ಹೊದ್ದ ಕಪ್ಪುಹಣ-ಭ್ರಷ್ಟಾಚಾರದ ಸಂಪನ್ಮೂಲಗಳು ಸಂಘಪರಿವಾರದ ಕುಟಿಲ ಕಾರ್ಯಕ್ರಮಗಳಿಗೆ ಬೇಕಾದ ಹಣವನ್ನು ಧಾರಾಳವಾಗಿ ಒದಗಿಸಿದವು.
ಮಾಹಿತಿ ತಂತ್ರಜ್ಞಾನವು ಡಿಜಟಲೀಕರಣಕ್ಕೆ ಒಳಗಾಗಿದ್ದು ಸಂಘಪರಿವಾರದ ಮಧ್ಯಯುಗದ ಕ್ರೌರ್ಯ-ಕುಟಿಲತೆಗಳನ್ನು ಬಲಪಡಿಸಿಕೊಳ್ಳಲು, ತಂತ್ರಜ್ಞಾನದ ಹೆಸರಿನಲ್ಲಿ ಅವಕ್ಕೆ ಆಧುನಿಕ ಶಿಷ್ಟ ರೂಪವನ್ನು ಒದಗಿಸಿ ಸಾಮಾನ್ಯ ಜನರಿಗೆ ಒಪ್ಪಿತವಾಗುವಂತೆ ಮಾಡಲು ಮತ್ತಷ್ಟು ಸಹಾಯಕವಾಯಿತು.
ಕಾನೂನಾತ್ಮಕ ಭ್ರಷ್ಟಾಚಾರ, ಸುಳ್ಳು-ವಂಚನೆ-ಕುಟಿಲತೆ-ದ್ವೇಷಗಳ ಜೊತೆಗೆ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಗಳಿಸಿದ ಲೆಕ್ಕವಿಲ್ಲದ ಗುಪ್ತ ಸಂಪತ್ತು ಮತ್ತು ಕುಟಿಲ ಅಧಿಕಾರದ ಮದವೇರಿಸಿಕೊಂಡ ಸಂಘಪರಿವಾರಕ್ಕೆ ಎದುರಾಳಿಗಳೇ ಇಲ್ಲದ ನಿರಂಕುಶ ಪ್ರಭುತ್ವವಾಗಬೇಕೆಂಬ ಯೋಜನೆಯಿದೆ.
ಒಂದು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕ್ಷಣದಿಂದಲೇ ಮುಂದಿನ ಚುನಾವಣೆ, ಅದರ ಮುಂದಿನ ಚುನಾವಣೆಗಳನ್ನು ಗೆಲ್ಲುವುದಕ್ಕಾಗಿ ತಯಾರಿ ನಡೆಸುವುದೇ ಅಭಿವೃದ್ಧಿ ಕಾರ್ಯಕ್ರಮ ಎಂದು ಭಾವಿಸಿ ಅದರಂತೆ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ರಾಷ್ಟ್ರೀಯವಾಗಿ ಜನರಿಂದ ಪಡೆಯುವ ಸಾಲಗಳ ಜೊತೆಗೆ ಜಾಗತಿಕ ಸಾಲಗಳ ಹೊರೆ ಬೆಳೆಯುತ್ತಲೇ ಇದೆ. ವಿದೇಶೀ ನೀತಿಯೆಂದರೆ, ನೆರೆ-ಹೊರೆ ರಾಷ್ಟ್ರಗಳೊಂದಿಗೆ ಯೋಜಿತ ದ್ವೇಷ, ಮತ್ತು ಯುದ್ದೋದ್ಯಮವನ್ನು ಉತ್ತೇಜಿಸುವ ದೇಶಗಳೊಂದಿಗೆ, ಯುದ್ಧವಿಮಾನ ಖರೀದಿ, ಶಸ್ತ್ರಾಸ್ತ್ರಗಳ ಖರೀದಿ ಮತ್ತು ರಹಸ್ಯ ವೀಕ್ಷಣಾ ಸಾಧನಗಳ ಹಾಗೂ ತಂತ್ರಜ್ಞಾನ ಖರೀದಿಯ ವ್ಯಾಪಾರ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳುವುದು ಎಂದಾಗಿದೆ. ಕೌತುಕದ ವಿಷಯವೆಂದರೆ, ತಮ್ಮ ಜನವಿರೋಧೀ ನೀತಿಗಳಿಂದಾಗಿ ಜನರು ಮುಂದಿನ ಚುನಾವಣೆಗಳಲ್ಲಿ ತಮಗೆ ಮತಹಾಕದಿದ್ದರೆ? ಎಂಬಂಥ ಅನುಮಾನವಾಗಲಿ, ಅಂಜಿಕೆಯಾಗಲಿ ಸ್ವಲ್ಪವೂ ಇದ್ದಂತೆ ತೋರುವುದಿಲ್ಲ.
ಹಸಿರು ಕ್ರಾಂತಿಯ ಆರ್ಥಿಕ ನೀತಿಗಳಿಂದಾಗಿ ಆಹಾರದ ಉತ್ಪಾದನೆಯು ಗಣನೀಯವಾಗಿ ಹೆಚ್ಚಿತು, ನಿಜ. ಆದರೆ ಕೃಷಿಕರು ಅದಕ್ಕೆ ತೆರಬಾಗಿದ್ದ ಬೆಲೆ ಸಾಲಗಳ ಹೊರೆ ಮತ್ತು ಕೃಷಿಯ ಮೇಲೆ ಮಾರುಕಟ್ಟೆಯ ಹಿಡಿತ. ಭೂಮಿ ಮತ್ತು ಶ್ರಮಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ವ್ಯಾಪಾರಿಗಳಿಗೆ ಲಾಭ ತರುವ ಸರಕುಗಳಾಗಿಬಿಟ್ಟವು. ಅತೀವ ಸಾಲದ ಹೊರೆಗೆ ಕುಸಿದು ಕಂಗಾಲಾದ ಕೃಷಿಕರಲ್ಲಿ ಅನೇಕರು ಆತ್ಮಹತ್ಯೆಯ ದಾರಿಯನ್ನು ಹಿಡಿದರು. ಹಣಕಾಸು ಬಂಡವಾಳದ ಪ್ರಾಬಲ್ಯದಿಂದಾಗಿ ಮೂಲಸೌಕರ್ಯದ ನಿರ್ಮಾಣದ ಹೆಸರಿನಲ್ಲಿ, ಬೃಹತ್ ನಗರೀಕರಣ, ಕೈಗಾಗಾರಿಕಾ ಕಾರಿಡಾರ್, ಸ್ಮಾರ್ಟ್ ಸಿಟಿಗಳ ನಿರ್ಮಾಣ, ಬಹುರಸ್ತೆಗಳ ಹೆದ್ದಾರಿಗಳ ನಿರ್ಮಾಣ, ಭೂ ಮಾಫಿಯಾ ರಾಜಕೀಯ ಮತ್ತು ಇವನ್ನು ಆದ್ಯತೆಯೆಂದು ಪರಿಗಣಿಸುವ ಸರ್ಕಾರಗಳು ಜಾರಿಗೊಳಿಸಿದ ಭೂಸಂಬಂಧಿ ಕಾನೂನುಗಳ ತಿದ್ದುಪಡಿಗಳಿಂದಾಗಿ ಕೃಷಿ ಭೂಮಿಯು ದಿನೇ ದಿನೇ ಕಿರಿದಾಗುತ್ತಾ ಹೋಯಿತು. ಸಾಲಾಧಾರಿತ ಕೃಷಿಯಲ್ಲಿ ತೊಡಗಿಸಿಕೊಂಡು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದರು. ಈ ಸ್ಥಿತಿಯಲ್ಲಿ ಕಾಣಿಸಿಕೊಂಡ ಕೋವಿಡ್-೧೯, ಸಂಘಪರಿವಾರ ಸರ್ಕಾರದ ತಿಳಿಗೇಡಿ ನೀತಿಗಳಿಂದಾಗಿ ಇಡೀ ಜನಜೀವನವು ಆರ್ಥಿಕವಾಗಿ ಕತ್ತಲು ಕವಿದ ಸ್ಥಿತಿಯನ್ನು ತಲುಪಿತು. ಸಂಘಪರಿವಾರವು ಜನರ ಎಲ್ಲಾ ಕಷ್ಟಗಳಿಗೂ ಕೋವಿಡ್ ಕಾರಣವೆಂದು ಪ್ರಚಾರ ಮಾಡಿತು. ಜನರ ಸಂಕಷ್ಟದ ಸಮಯವನ್ನೇ ಬಳಸಿಕೊಂಡು ಜನವಿರೋಧೀ ಕಾನೂನು ತಿದ್ದುಪಡಿಗಳನ್ನು ಕಾನೂನು ಸಂಹಿತೆಗಳ ಸಂದುಗೊಂದುಗಳಿಗೆ ತುರುಕಲು ಆರಂಭಿಸಿತು.
ಜಾಗತೀಕರಣದ ಬಂಡವಾಳವಾದೀ ತಾತ್ವಿಕತೆಯು ಬೋಧಿಸಿದ್ದೇನೆಂದರೆ, ಸೋಲು ಗೆಲುವಿನ ಮೆಟ್ಟಿಲು. ಸಮಸ್ಯೆಯೇ ಲಾಭದ ತಾಯಿ. ಕತ್ತಲಿನಲ್ಲೇ ಬೆಳಕಿದೆ. ನಿರುದ್ಯೋಗವು ಉದ್ಯೋಗದ ಮುಕ್ತ ಅವಕಾಶಗಳ ಗಣಿ. ಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದೇ ಅಭಿವೃದ್ದಿ. ಶ್ರೀಮಂತರು ಹೆಚ್ಚು ಹೆಚ್ಚು ಶ್ರೀಮಂತರಾದಷ್ಟೂ ದೇಶದ ಬಡತನ ತಗ್ಗುತ್ತಾ ಹೋಗುತ್ತದೆ, ಇತ್ಯಾದಿ. ಹೊಟ್ಟೆ ತುಂಬಿದ, ಅಧ್ಯಾತ್ಮದ ಆಕಾಶದಲ್ಲಿ ವಿಹರಿಸುವ ಮಧ್ಯಮವರ್ಗದ ಜನರಿಗೆ ಇದು ಸತ್ಯವೆಂದು ಕಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಕಗ್ಗತ್ತಲೆಯಲ್ಲಿ ಬೆಳಕಿನ ಕಿಂಡಿಗಾಗಿ ಎಲ್ಲರೂ ತಡಕಾಡುತ್ತಿರುವಾಗ, ಅಂಥದೊಂದು ಕಿಂಡಿಯು ಕೃಷಿಕರ ಆಂದೋಲನದ ಮೂಲಕ ಕಾಣಿಸಿಕೊಂಡಿದೆ. ಕೃಷಿ ‘ಕಾನೂನು’ಗಳ ರದ್ದತಿಗಾಗಿ ದೆಹಲಿಯ ಗಡಿಗಳಲ್ಲಿ ಅಪೂರ್ವ ರೀತಿಗಳಲ್ಲಿ ಸಂಘಟಿತವಾಗಿ ನಡೆಯುತ್ತಿರುವ ಚರಿತ್ರಾರ್ಹ ರೈತಚಳುವಳಿಯಲ್ಲಿ ಏಳು ಮುಖ್ಯ ಅಂಶಗಳು ಎಲ್ಲರ, ಅದರಲ್ಲೂ ಹೋರಾಟಗಾರರ ಗಮನವನ್ನು ಸೆಳೆಯುತ್ತವೆ. ಶಿಕ್ಷಣವೆಂದರೆ ಕೇವಲ ಪದವಿಗಳನ್ನು ಗಳಿಸುವುದಲ್ಲ. ಸಂಘಟನೆಯೆಂದರೆ ಕೇವಲ ಧಿಕ್ಕಾರ ಕೂಗುವ ಗುಂಪಲ್ಲ. ಹೋರಾಟವೆಂದರೆ ಕೇವಲ ಸಾಂಕೇತಿಕ ಧರಣಿ-ಮೆರವಣಿಗೆಗಳಲ್ಲ. ಇವಕ್ಕೆ ಮೂಲಭೂತವಾಗಿ ಬೇರೆಯದೇ ಆದ ಅರ್ಥಗಳಿವೆಯೆಂದು ದೆಹಲಿ ಗಡಿಗಳಲ್ಲಿ ದಿನ ದಿನವೂ ಹೆಚ್ಚುತ್ತಿರುವ ಭಾರತದ ರೈತಚಳುವಳಿಯು ತನ್ನ ವಿನೂತನ ಪ್ರತಿಭಟನಾ ವಿಧಾನಗಳ ಮೂಲಕ ಪ್ರತ್ಯಕ್ಷವಾಗಿ ತೋರಿಸುತ್ತಿದೆ. ತಮ್ಮ ತ್ಯಾಗ-ಬಲಿದಾನಗಳ ಮೂಲಕ ಇಡೀ ದೇಶವನ್ನೇ ಬಂಡವಳಿಗರಿಂದ ಪಾರುಮಾಡಬಲ್ಲ ಚಳುವಳಿ ಜ್ಞಾನವನ್ನು ಬೋಧಿಸುವ ‘ಬಯಲು ಶಾಲೆ’ಯೊಂದನ್ನು ಹುಟ್ಟುಹಾಕಿದ್ದಾರೆ.
ಆದರೆ, ಪ್ರಸ್ತುತ ಭಾರತದಲ್ಲಿ, ಕೃಷಿಕರಿಗೆ, ಶ್ರಮಜೀವಿಗಳಿಗೆ, ನೆಲದಮೇಲೆ ಜೀವಿಸುವ ಎಲ್ಲ ಮನುಷ್ಯರ ಬದುಕಿನಲ್ಲಿ ಹೆಚ್ಚುತ್ತಿರುವುದು ಒಂದೇ ಒಂದು- ನಿರುದ್ಯೋಗ-ಬಡತನಗಳ ಕಗ್ಗತ್ತಲೆ.
ಜನಸಾಮಾನ್ಯರಿಗೆ ಯಾವುದು ಸಮಸ್ಯೆಯ ಮೂಲವೋ, ಕಷ್ಟದ ಸಂದರ್ಭವೋ ಅದೇ ಬಂಡವಳಿಗರಿಗೆ ಲಾಭದ ಮೂಲವನ್ನು ಹೆಚ್ಚಿಸಿಕೊಳ್ಳುವ ಸುವರ್ಣ ಅವಕಾಶ.
ಗಾಡಿಯ ನೊಗಕ್ಕೆ ಹೆಗಲುಕೊಟ್ಟ ಎತ್ತು ಹೆಗಲಿನಲ್ಲಿ ಗಾಯವಾಗಿ ನರಳಿದಷ್ಟೂ ಎತ್ತಿನಮೇಲೆ ಕುಳಿತು ಆ ರಕ್ತ ಸಿಕ್ತ ಗಾಯವನ್ನು ಕುಕ್ಕುವ ಕಾಗೆಗೆ ಮಹದಾನಂದ.
ಕೋವಿಡ್ ಬರುವುದಕ್ಕಿಂತ ಮುಂಚೆಯೇ ಜನಸಾಮಾನ್ಯರ ಬದುಕು ಬಂಡವಾಳವಾದೀ ಆರ್ಥಿಕತೆಯಿಂದಾಗಿ ತೀವ್ರತರ ಸಮಸ್ಯೆಗಳಿಗೆ ಸಿಕ್ಕಿ ಹೈರಾಣವಾಗಿತ್ತು. ಜನಸಾಮಾನ್ಯರ ಬದುಕಿಗೆ ಮುಸುಕಿದ ಆರ್ಥಿಕ ಕತ್ತಲೆಯ ಸ್ಥಿತಿಯನ್ನು, ಕಾರ್ಪೊರೇಟ್ ಉದ್ಯಮಪತಿಗಳು ತಮ್ಮ ಮಿಲಿಯನ್ ಗಟ್ಟಲೆ ಮೌಲ್ಯದ ಸಂಪತ್ತನ್ನು ಡಿಜಿಟಲ್ ವ್ಯಾಪಾರದ ಮೂಲಕ ಸಾವಿರಾರು ಪಟ್ಟು ಹೆಚ್ಚಿಸಿಕೊಳ್ಳುವ ಮಹದವಕಾಶವಾಗಿ ಪರಿವರ್ತಿಸಿಕೊಳ್ಳಲು ಹೊರಟಿದ್ದರು. ಕೋವಿಡ್ ತಂದ ಕಷ್ಟಗಳ ಮರೆಯಲ್ಲಿ ಮಾಡಿದ ಹಗಲು ದರೋಡೆಯ ಹುನ್ನಾರಗಳನ್ನು ‘ಕೋವಿಡೋತ್ತರ ನಾರ್ಮಲ್’ ಎಂದೆಲ್ಲಾ ಪ್ರಚಾರ ಮಾಡಿದರು.
ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡು ಜೀವಿಸುವವರು ಕತ್ತಲೆ ಆವರಿಸಿದಾಗ ಮನೆಗೆ ಕನ್ನಹಾಕುವ ಕಳ್ಳರಂತೆ, ನೂಕು ನುಗ್ಗಲಿನಲ್ಲಿ ಎಲ್ಲಿಂದಲೋ ಕೈಹಾಕಿ ಜನರ ಜೇಬು ಕತ್ತರಿಸುವವ ಜೇಬುಗಳ್ಳನಂತೆ, ಮೊದಲೇ ಆರ್ಥಿಕ ದುಃಸ್ಥಿತಿಯಲ್ಲಿ ರೈತರು ಮುಳುಗಿದ್ದಾಗ, ಕೋವಿಡ್ ಕತ್ತಲೆಯ ಲಾಭಪಡೆದ ಸಂಘಪರಿವಾರ ಸರ್ಕಾರವು ಕಾರ್ಪೊರೇಟ್ ಬಂಡವಾಳದ ಪರವಾದ ಕಾರ್ಮಿಕ ಮತ್ತು ಕೃಷಿ ಕಾನೂನುಗಳನ್ನು ದೇಶದ ಸಂಹಿತೆಗಳೊಳಕ್ಕೆ ನುಗ್ಗಿಸಿಬಿಟ್ಟಿದೆ. ಭಾರತದ ವಿವಿಧ ಮಟ್ಟದ ರೈತರ ಕೃಷಿಯನ್ನು ಪೂರ್ಣಮಟ್ಟದ ಕಾರ್ಪೊರೇಟ್ ವ್ಯಾಪಾರವನ್ನಾಗಿಸಲು ಈ ತಿದ್ದುಪಡಿಗಳು ಕಾರ್ಪೊರೇಟ್ ಬಂಡವಳಿಗರಿಗೆ ಕಾನೂನಿನ ಬಲವನ್ನು ಒದಗಿಸುತ್ತವೆ. ಮನೆಗೆ ಕನ್ನ ಹಾಕಲು ಬರುವ ಕಳ್ಳರನ್ನು, ಮನೆಯ ರಕ್ಷಣೆಗಾಗಿ ನೇಮಿಸಿಕೊಂಡ ‘ಚೌಕೀದಾರನೇ’ ಸ್ವಾಗತಿಸಿ ಮನೆಯ ಮುಂಬಾಗಿಲನ್ನೇ ತೆರೆದಿಡುವ ವಿಕೃತ ಮತ್ತು ಘಾತುಕ ಕ್ರಮ ಇದು.
ಬಂಡವಾಳವು ತನ್ನ ಗೋರಿಯನ್ನು ತೋಡುವವರನ್ನು ತಾನೇ ಹುಟ್ಟಿಸುತ್ತದೆ ಎಂಬುದು ಹಳೆಯ ಮಾತು. ಈಗ ಅದು ಹಾಗೆ ಮಾಡುತ್ತಿಲ್ಲ. ಬದಲು, ಕಾರ್ಪೊರೇಟ್ ಬಂಡವಾಳದ ಮೂರ್ತರೂಪಗಳಾದ ಕೋಟ್ಯಾಧಿಪತಿಗಳು ತಮ್ಮ ಗೋರಿಗಳನ್ನು ಸ್ವತಹ ತಾವೇ ತೋಡಿಕೊಳ್ಳಲು ಹೊರಟಿದ್ದಾರೆ.
ಕಗ್ಗತ್ತಲೆಯಲ್ಲಿ ಬೆಳಕಿನ ಕಿಂಡಿಗಾಗಿ ಎಲ್ಲರೂ ತಡಕಾಡುತ್ತಿರುವಾಗ, ಅಂಥದೊಂದು ಕಿಂಡಿಯು ಕೃಷಿಕರ ಆಂದೋಲನದ ಮೂಲಕ ಕಾಣಿಸಿಕೊಂಡಿದೆ.
ಕೃಷಿ ‘ಕಾನೂನು’ಗಳ ರದ್ದತಿಗಾಗಿ ದೆಹಲಿಯ ಗಡಿಗಳಲ್ಲಿ ಅಪೂರ್ವ ರೀತಿಗಳಲ್ಲಿ ಸಂಘಟಿತವಾಗಿ ನಡೆಯುತ್ತಿರುವ ಚರಿತ್ರಾರ್ಹ ರೈತಚಳುವಳಿಯಲ್ಲಿ ಏಳು ಮುಖ್ಯ ಅಂಶಗಳು ಎಲ್ಲರ, ಅದರಲ್ಲೂ ಹೋರಾಟಗಾರರ ಗಮನವನ್ನು ಸೆಳೆಯುತ್ತವೆ. ಅವೆಂದರೆ-
೧. ಚಳುವಳಿಗೆ ಕಾರಣವಾಗಿರುವ ಮೂರು ಕಾನೂನುಗಳ ರಾಜಕೀಯ ಮತ್ತು ಆರ್ಥಿಕ ಒಳಸ್ವರೂಪದ ಬಗ್ಗೆ, ಅಂದರೆ ಕಾರ್ಪೊರೇಟ್ ಬಂಡವಾಳದ ಹುನ್ನಾರಗಳ ಬಗ್ಗೆ ಚಳುವಳಿ ನಿರತ ರೈತರಲ್ಲಿರುವ ಸ್ಪಷ್ಟ ಗ್ರಹಿಕೆ.
೨. ಚಳವಳಿಯು ದೀರ್ಘಕಾಲ ನಡೆಯಬೇಕಾಗಬಹುದೆಂಬ ಸ್ಪಷ್ಟ ಅಂದಾಜಿನೊಂದಿಗೆ ಮಾಡಿಕೊಂಡಿರುವ ತಾತ್ಕಾಲಿಕ ಗುಡಾರ ಸಾಧನ, ಸಂಚಾರ ಸಾಧನ, ಮತ್ತು ಸಂವಹನ-ಪ್ರಚಾರ ಸಾಧನಗಳ ಏರ್ಪಾಡಿನ ಹಿಂದೆ ಇರುವ ದೂರದೃಷ್ಟಿ ಮತ್ತು ಯೋಜನಾಶಿಸ್ತು.
೩. ಮಾನವ ಸಂಪನ್ಮೂಲ ಮತ್ತು ಜೀವನಾವಶ್ಯಕ ವಸ್ತುಗಳ ಸಂಗ್ರಹಣೆ ಮತ್ತು ನಿರ್ವಹಣೆ- ಅಂದರೆ ಜನಬಲ ಮತ್ತು ಧನಬಲದ ಯೋಜನಾಬದ್ಧ ಕ್ರೋಢೀಕರಣ ಹಾಗೂ ವಿನಿಯೋಗ.
೪. ಇವೆಲ್ಲಕ್ಕಿಂತಾ ಮುಖ್ಯವಾಗಿ, ಬೇರೆ ಬೇರೆ ಪ್ರದೇಶಗಳ, ಬೇರೆ ಬೇರೆ ಆರ್ಥಿಕ ಬಲದ, ಬೇರೆ ಬೇರೆ ಸೈದ್ಧಾಂತಿಕ ಸೂಕ್ಷ್ಮ ಭಿನ್ನತೆಗಳ ಹಿನ್ನೆಲೆಯಿಂದ ಬಂದ ೫೪೦ಕ್ಕೂ ಹೆಚ್ಚಿನ ಸಂಖ್ಯೆಯ ರೈತ ಸಂಘಟನೆಗಳಲ್ಲಿ ಕಾಣುವ ಭಾವೈಕ್ಯತೆ, ಭೌತಿಕ ಒಗ್ಗಟ್ಟು ಮತ್ತು ಮಾನಸಿಕ ಪ್ರಬುದ್ಧತೆ.
೫. ಚಳುವಳಿಯನ್ನು ಮುನ್ನೆಡೆಸುತ್ತಿರುವ ಮುಖಂಡರಲ್ಲಿರುವ ಅನುಭವಜನ್ಯ ಜ್ಞಾನ ರಣವ್ಯೂಹ, ರಣತಂತ್ರ, ಬದಲಾಗುವ ಸಂದರ್ಭಕ್ಕೆ ತಕ್ಕಂತೆ ಚಳುವಳಿಯ ಸ್ವರೂಪವನ್ನು ಹೊಂದಿಸಬಲ್ಲ ಹೋರಾಟಪ್ರತಿಭೆ ಎಲ್ಲೇ ನಡೆಸಬಹುದಾದ ಯಾವುದೇ ಆಂದೋಲನಕ್ಕೆ ಆದರ್ಶಪ್ರಾಯವಾಗಿದೆ.
೬. ವಯೋಸಹಜ ಮಿತಿಗಳನ್ನು ಲೆಕ್ಕಿಸದೆ ಚಳುವಳಿಯಲ್ಲಿ ನಿರತವಾಗಿರುವ ಜನರಿಗೆ, ಅವರ ನೇತಾರರು ಮತ್ತು ಹೋರಾಟದ ಗುರಿಯ ಬಗೆಗಿರುವ ಅಚಲ ವಿಶ್ವಾಸ, ದೃಢತೆ, ಕಷ್ಟ ಸಹಿಷ್ಣುತೆ, ಧಾರಣಸಾಮರ್ಥ್ಯ, ಮತ್ತು ವ್ಯಕ್ತಿಗಳ ದೈಹಿಕ-ಮಾನಸಿಕ ಸಾಮರ್ಥ್ಯಗಳನ್ನು ಆಧರಿಸಿದ ಶ್ರಮವಿಭಜನೆಯ ಸಾಮುದಾಯಿಕ ಸೇವೆಗಳು ಹೋರಾಟದ ನಡುವೆಯೇ ಸಮಾಜವಾದೀ ಸಮಾಜದ ಚಲನಶೀಲ ಪ್ರತಿರೂಪವೊಂದನ್ನು ನಿರ್ಮಿಸಿವೆ.
೭. ರ‍್ಯಾಡಿಕಲ್ ಆದ ಸೈದ್ಧಾಂತಿಕ ದೃಷ್ಟಿ, ಸರ್ಕಾರದ ಹಿಂಸಾತ್ಮಕ ಪ್ರಚೋದನೆಗೆ ಬಲಿಯಾಗದಂತೆ ಕಾಯ್ದುಕೊಳ್ಳುವ ಎಚ್ಚರ ಮತ್ತು ವಿವೇಕಯುತ ಸಂಯಮ, ಸಂಘಪರಿವಾರದಲ್ಲಿ ಮೈಗೂಡಿರುವ ಸುಳ್ಳು-ಕುಟಿಲತೆ-ವಂಚನೆಗಳನ್ನು, ದುರುಳ ಉದ್ದೇಶಗಳನ್ನು ಗ್ರಹಿಸಿ ನಿಷ್ಫಲಗೊಳಿಸುವ ಜಾಣ್ಮೆ ಇವೆಲ್ಲವೂ ಕೂಡಿಕೊಂಡು ಚಳುವಳಿಗೆ ಅನನ್ಯವಾದ ‘ಶಸ್ತ್ರರಹಿತ ಮಿಲಿಟರಿ ಶಿಸ್ತ’ನ್ನು ತಂದುಕೊಟ್ಟಿವೆ.
ಇವೆಲ್ಲವೂ ಸೇರಿದ ಗ್ರಹಿಕೆ, ಆಲೋಚನೆ, ನಿರ್ಧಾರಗಳು ಹಂತ ಹಂತವಾಗಿ ಭೌತಿಕರೂಪದ ಚಳುವಳಿಯಾಗಿ ಸಂಘಪರಿವಾರದ ಕೋಮುವಾದೀ-ಫ್ಯಾಸೀವಾದೀ-ಕಾರ್ಪೊರೇಟ್ ಸರ್ಕಾರವನ್ನು, ತಾವೇ ಸರ್ಕಾರ, ನೇತಾರರು, ದೇಶ, ಎಂದೆಲ್ಲಾ ಭ್ರಮಿಸಿದ್ದ ವ್ಯಕ್ತಿಗಳನ್ನು ಅಸಹಾಯಕ ಪರಿಸ್ಥಿತಿಯ ಅಡಕತ್ತರಿಗೆ ಸಿಕ್ಕಿಸಿದೆ. ಈ ಇಕ್ಕಟ್ಟಿನಿಂದ ಪಾರಾಗಲು ಅತ್ಯುಚ್ಚ ನ್ಯಾಯಾಲಯದ ಮೊರೆ ಹೊಕ್ಕಿದೆ.
‘ಜನರಿಂದ ಚಳುವಳಿಗಳು ಹುಟ್ಟುತ್ತವೆ, ಚಳುವಳಿಗಳಿಂದ ನೇತಾರರು ಬರುತ್ತಾರೆ’ ಎಂದು ಹೇಳಿದ ರೋಸಾ ಲಗ್ಸುಂಬರ್ಗ್ ಅವರ ಮಾತಿನ ಪ್ರತ್ಯಕ್ಷ ನಿದರ್ಶನವಾಗಿ ಪ್ರಸ್ತುತ ರೈತ ಚಳುವಳಿಯು ನಮ್ಮ ಎದುರಿಗಿದೆ.
ಡಾ. ಅಂಬೇಡ್ಕರ್ ದಲಿತ ವಿಮೋಚನೆಗಾಗಿ ಹೇಳಿದ ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಸೂತ್ರವು ರೈತ ಚಳುವಳಿಯ ಅನುಭವದ ಹಿನ್ನೆಲೆಯಲ್ಲಿ ಎಲ್ಲ ಹೋರಾಟಗಾರರ ಮತ್ತು ಹೋರಾಟಗಳ ದಾರಿ ದೀಪವಾಗಿದೆ.
ಶಿಕ್ಷಣವೆಂದರೆ ಕೇವಲ ಪದವಿಗಳನ್ನು ಗಳಿಸುವುದಲ್ಲ. ಸಂಘಟನೆಯೆಂದರೆ ಕೇವಲ ಧಿಕ್ಕಾರ ಕೂಗುವ ಗುಂಪಲ್ಲ. ಹೋರಾಟವೆಂದರೆ ಕೇವಲ ಸಾಂಕೇತಿಕ ಧರಣಿ-ಮೆರವಣಿಗೆಗಳಲ್ಲ. ಇವಕ್ಕೆ ಮೂಲಭೂತವಾಗಿ ಬೇರೆಯದೇ ಆದ ಅರ್ಥಗಳಿವೆಯೆಂದು ದೆಹಲಿ ಗಡಿಗಳಲ್ಲಿ ದಿನ ದಿನವೂ ಹೆಚ್ಚುತ್ತಿರುವ ಭಾರತದ ರೈತಚಳುವಳಿಯು ತನ್ನ ವಿನೂತನ ಪ್ರತಿಭಟನಾ ವಿಧಾನಗಳ ಮೂಲಕ ಪ್ರತ್ಯಕ್ಷವಾಗಿ ತೋರಿಸುತ್ತಿದೆ.
ದೆಹಲಿಯ ಗಡಿಗಳಲ್ಲಿ ಚಳಿ-ಮಳೆಗಳಿಗೆ ಮೈಯೊಡ್ಡಿ ಕುಳಿತಿರುವ ಬಾಲ-ಯುವ-ಮಧ್ಯ ವಯಸ್ಕ- ರೈತನ-ರೈತಳ-ಅಜ್ಜ-ಅಜ್ಜಿ-ಹೀಗೆ ಯಾರ ಬಾಯಲ್ಲಿ ನೋಡಿದರೂ ʻಪೂಂಜಿಪತಿಗಳು’ (ಬಂಡವಳಿಗರು), ‘ಕಾರ್ಪೋರೇಟ್ ಕುಳಗಳು’ ಮತ್ತು ಅವರ ‘ಚೌಕೀದಾರ-ಪರಿವಾರಗಳ’, ಸುಳ್ಳು ಮೋಸಗಳ ಬಗೆಗಿನ ಮಾತೇ. ಚಳುವಳಿನಿರತ ರೈತರ ವಿರುದ್ಧ ಆಳುವ ವರ್ಗಗಳು ಮತ್ತು ಅವುಗಳ ಕಾಲಾಳು-ದಳ್ಳಾಳಿಗಳ ವ್ಯವಸ್ಥಿತ ಅಪಪ್ರಚಾರದ ಖಂಡನೆಯೇ. ಅವರ ಸುಳ್ಳುಆರೋಪಗಳನ್ನು-ವಂಚನೆಯ ಮಾತುಗಳನ್ನು-ಕುಟಿಲ ತಂತ್ರಗಳನ್ನು ಬಯಲಿಗೆಳೆಯುವ ವಿವರಣೆಗಳೇ.
ತಾನು ದೇಶದ ಚೌಕೀದಾರನೆಂದೂ, ಪ್ರಧಾನ ಸೇವಕನೆಂದೂ ಹೇಳುವ ಭಾರತದ ಪ್ರಧಾನಿಯವರು ತಿಂಗಳಿಗೊಮ್ಮೆ ತಮ್ಮ ‘ಮನದ ಮಾತ’ನ್ನು ಜನರಿಗೆಂದು ಬಿತ್ತರಿಸುತ್ತಾರೆ. ಅವರು ಬಡಜನರ ಖಾತೆಗಳಿಗೆ ಹಾಕಿದರೆಂದು ಹೇಳಲಾಗುವ ಹಣವನ್ನು ‘ಜನ ಧನ್’ ಎಂದು ಕರೆದರು. ಅವರ ಕಲ್ಪನೆಯೆಲ್ಲಾ ಬರಿದಾದ ಮೇಲೆ, ಈಚೆಗೆ ಅವರ ‘ಮನದ ಮಾತಿ’ಗೆ ವಸ್ತುವನ್ನು ಒದಗಿಸಲು ಜನರ ಮನದಲ್ಲಿರುವುದನ್ನು ಅವರಿಗೆ ತಿಳಿಸಬೇಕೆಂದು ಜನರನ್ನು ವಿನಂತಿಸಲು ತೊಡಗಿದ್ದಾರೆ. ಈ ಮೂರೂ ಸೇರಿ ಅವರ ಬಾಯಲ್ಲಿ ಈಗ ಅದು ‘ಜನ್-ಮನ್-ಧನ್’ ಎಂದಾಗಿದೆ.
ಮತ್ತೊಂದು ಕಡೆ, ಈ ಪದಗಳ ಸರ್ಕಸ್ಸಿಗೆ ವ್ಯತಿರಿಕ್ತವಾದ ಆಚರಣೆಯ ಮಟ್ಟದಲ್ಲಿ ಭಾರತದ ಶಾಂತಿಪ್ರಿಯ ರೈತಾಪಿ ಜನರು ತಮ್ಮ ತನ್-ಮನ್-ಧನ್ ಗಳನ್ನು, ಮಾತ್ರವಲ್ಲ, ಜೊತೆಗೆ ಜೀವವನ್ನೂ ಚಳುವಳಿಗಾಗಿ ಅರ್ಪಿಸಿದ್ದಾರೆ. ತಮ್ಮ ತ್ಯಾಗ-ಬಲಿದಾನಗಳ ಮೂಲಕ ಇಡೀ ದೇಶವನ್ನೇ ಬಂಡವಳಿಗರಿಂದ ಪಾರುಮಾಡಬಲ್ಲ ಚಳುವಳಿ ಜ್ಞಾನವನ್ನು ಬೋಧಿಸುವ ‘ಬಯಲು ಶಾಲೆ’ಯೊಂದನ್ನು ಹುಟ್ಟುಹಾಕಿದ್ದಾರೆ. ಭಾರತದ ರಾಜಧಾನಿಯ ಕೊರೆಯುವ ಚಳಿಗಿಂತಲೂ ಕಠಿಣ ಶೀತಲ ಪಾಷಾಣ ಹೃದಯವನ್ನು ಹೊಂದಿರುವ ಸಂಘಪರಿವಾರದ ಸರ್ಕಾರ ಮತ್ತು ಅದರ ಅಡಿಗಲ್ಲಾದ ಕಾರ್ಪೊರೇಟ್ ಬಂಡವಳಿಗರೊಂದಿಗೆ ಸೆಣಸುವುದು ಎಷ್ಟು ಕಠಿಣವೆಂಬುದನ್ನು ಪ್ರತ್ಯಕ್ಷವಾಗಿ ತೋರಿಸುತ್ತಿದ್ದಾರೆ. ಸತ್ಯವು ಸಂಕಷ್ಟಕ್ಕೆ ಸಿಲುಕಬಹುದು, ಆದರೆ ಅಂತಿಮವಾಗಿ ಗೆಲ್ಲುವುದು ಸತ್ಯವೇ ಎಂದು ದೃಢವಾಗಿ ನಂಬಿದ್ದಾರೆ. ಆಂದೋಲನದ ಉದ್ದೇಶಿತ ಗುರಿಯನ್ನು ತಲುಪುವವರೆಗೂ, ಅಂದರೆ ರೈತಘಾತುಕ ೩ ಕೃಷಿಕಾನೂನುಗಳು ರದ್ದಾಗುವವರೆಗೂ ಚಳುವಳಿಯನ್ನು ನಿಲ್ಲಿಸುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಇದು ಭಾರತದ ಜನಮನದ ಮಾತೂ ಆಗಿದೆ.