ಮೈಸೂರು: ಜನವರಿ 18ರಂದು ಮಧ್ಯಾಹ್ನ 3ಕ್ಕೆ ಇಲ್ಲಿನ ಲಕ್ಷ್ಮೀಪುರಂನಲ್ಲಿರುವ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 7, 8 ಹಾಗೂ 9ನೇ ವಾರ್ಷಿಕ ಘಟಿಕೋತ್ಸವವನ್ನು ಆಯೋಜಿಸಲಾಗಿದೆ. ಸಾಧಕ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ, ʼಅಧ್ಯಕ್ಷತೆ ವಹಿಸಿ ಪದವಿ ಪ್ರದಾನವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಪಾಲ್ಗೊಳ್ಳುವರು. ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು. ಸಾಧಕ
‘ಒಟ್ಟು 9 ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. 2021-22ನೇ ಸಾಲಿನಲ್ಲಿ ಭರತನಾಟ್ಯ ಕಲಾವಿದ ಸತ್ಯನಾರಾಯಣರಾಜು, ವಿದ್ವಾನ್ ಸಿ. ಚೆಲುವರಾಜು, ರಂಗಭೂಮಿ ಹಾಗೂ ಚಲನಚಿತ್ರ ನಟಿ ಗಿರಿಜಾ ಲೋಕೇಶ್, 2022-23ನೇ ಸಾಲಿನಲ್ಲಿ ಭರತನಾಟ್ಯ ಕಲಾವಿದೆ ಸಂಧ್ಯಾ ಪುರೆಚ, ಗಮಕ ವಿದ್ವಾನ್ ಎಂ.ಆರ್. ಸತ್ಯನಾರಾಯಣ, ಪ್ರದರ್ಶಕ ಕಲೆಗಳ ವಿಭಾಗದಿಂದ ಚಲನಚಿತ್ರ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ, 2023-24ನೇ ಸಾಲಿನಲ್ಲಿ ವಿದುಷಿ ವೀಣಾಮೂರ್ತಿ ವಿಜಯ್, ವಿದುಷಿ ಪುಷ್ಪಾ ಶ್ರೀನಿವಾಸನ್ ಹಾಗೂ ರಂಗಕರ್ಮಿ ಸಿ.ಬಸವಲಿಂಗಯ್ಯ ರನ್ನು ಆಯ್ಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. ಸಾಧಕ
ಇದನ್ನೂ ಓದಿ: ಬೆಂಗಳೂರು| ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ; ಇಬ್ಬರು ಸಾವು
‘ವಿ.ವಿಯು ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಿ 15 ವರ್ಷ ತುಂಬುತ್ತಿದೆ. ಈಗ, 7, 8 ಹಾಗೂ 9ನೇ ವಾರ್ಷಿಕ ಘಟಿಕೋತ್ಸವವನ್ನು ಒಟ್ಟಿಗೇ ನಡೆಸಲಾಗುತ್ತಿದೆ. ಈಗ ಪದವಿ ಪಡೆಯುತ್ತಿರುವವರೆಲ್ಲರೂ ನಮ್ಮಲ್ಲೇ ವ್ಯಾಸಂಗ ಮಾಡಿದವರಾಗಿದ್ದಾರೆ. ಕಳೆದೊಂದು ವರ್ಷದಿಂದ ರಾಜ್ಯದಾದ್ಯಂತ 70 ಸಂಸ್ಥೆಗಳು ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಅಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಅಲ್ಲಿ ಪದವಿ ಪಡೆದವರು ಎರಡು ವರ್ಷದ ನಂತರದ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ’ ಎಂದರು.
‘ಒಟ್ಟು 14 ಮಂದಿಗೆ ಡಿ.ಲಿಟ್ ಪದವಿ ನೀಡಲಾಗುವುದು. 27 ವಿದ್ಯಾರ್ಥಿಗಳು ಒಟ್ಟು 69 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 540 ಮಂದಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು. 2021-22ರ ಎಂಪಿವಿ ಕೋರ್ಸ್‌ನಲ್ಲಿ ಮೈಸೂರಿನ ವಿ.ವಿಜಯಶ್ರೀ ಅತಿ ಹೆಚ್ಚು ಅಂದರೆ 9 ಚಿನ್ನದ ಪದಕ ಪಡೆದಿದ್ದಾರೆ. 2022-23ರಲ್ಲಿ ಎಲ್.ಬಿ. ಬಿಂದು 6, ಟಿ.ಎ. ಕೀರ್ತನಾ 5, 2023-24ನೇ ಸಾಲಿನಲ್ಲಿ ಕೆ.ಆರ್. ಅಶ್ವಿನಿ ಹಾಗೂ ಬಿ.ಆರ್. ಮನೋಜ ತಲಾ 6 ಚಿನ್ನದ ಪದಕ ಪಡೆದಿದ್ದಾರೆ. ಸಿದ್ದಿ ಸಮಾಜದ ರೇಣುಕಾ ಸಿದ್ದಿ ನಾಟಕ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವುದು ವಿಶೇಷ’ ಎಂದು ತಿಳಿಸಿದರು.
‘ಬಿಪಿಎ ವಿಭಾಗದಲ್ಲಿ 2021-22ರಲ್ಲಿ ಡಿ.ಎಸ್. ಕಾವೇರಿ 3 ಹಾಗೂ ಎಸ್.ಎ. ಅಶ್ವಿನಿ 2, 2022-23ರಲ್ಲಿ ಆರ್. ರಂಜಿನಿಶ್ರೀ 6, ಡಿ.ಎನ್. ಇಂದ್ರಕುಮಾರ್ 2, 2023-24ರಲ್ಲಿ ಪಿ.ಆರ್. ರೂಪಾ 5 ಮತ್ತು ಬಿ.ಆರ್. ಶ್ರೀಹರಿ ಭಟ್ 2 ಚಿನ್ನದ ಪದಕ ಗಳಿಸಿದ್ದಾರೆ’ ಎಂದು ವಿವರಿಸಿದರು.
‘ಮೈಸೂರು ತಾಲ್ಲೂಕಿನ ನಾಡನಹಳ್ಳಿ ಐದೂವರೆ ಎಕರೆ ಜಾಗ ದೊರೆತಿದ್ದು, ಅಲ್ಲಿ ಸ್ವಂತ ಕ್ಯಾಂಪಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿ.ವಿಯ ಆಂತರಿಕ ಸಂಪನ್ಮೂಲದಿಂದ ಆಡಳಿತಾತ್ಮಕ ಬ್ಲಾಕ್, ತರಗತಿ ಕೊಠಡಿ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.
ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ‘ದಲಿತ’ ಪದ ಅಸ್ಮಿತೆಯೋ? ಅವಮಾನವೋ? Janashakthi Media