ಬೆಳಗಾವಿ : ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನ ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು ಇದಕ್ಕೆ ವಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಮಂಗಳವಾರ ಮಧ್ಯಾಹ್ನ ಊಟದ ನಂತರ ಕಲಾಪ ಆರಂಭವಾದ ತಕ್ಷಣ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವಕಾಶ ನೀಡಿದರು. ವಿಧೇಯಕ ಮಂಡನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ಸದಸ್ಯರು, ತರಾತುರಿಯಲ್ಲಿ ವಿಧೇಯಕ ಮಂಡನೆ ಮಾಡಲಾಗಿದೆ. ವಿಧೇಯಕ ಪ್ರತಿ ನೀಡಿಲ್ಲ. ಬಿಎಸಿಯಲ್ಲಿ ಚರ್ಚೆಯಾಗಿಲ್ಲವೆಂದು ಆರೋಪಿಸಿದರು. ಹಾಗೆಯೇ ಕದ್ದುಮುಚ್ಚಿ ಯಾಕೆ ಮಂಡನೆ ಮಾಡುತ್ತಿದ್ದೀರಿ ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿದರು. ಇದರ ಮಧ್ಯೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದರು.
ಇದನ್ನೂ ಓದಿ : ಮದುವೆಗಾಗಿ ಮತಾಂತರ ಅಪರಾಧವೆ?
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ವಿಧಾನದ ಪ್ರಕಾರ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಲು ಸರ್ಕಾರಕ್ಕೆ ಅನುಮತಿ ನೀಡಿದರು ಮತ್ತು ಅದನ್ನು ನಾಳೆ (ಡಿಸೆಂಬರ್ 22) ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು. ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ವಿಧೇಯಕದ ಪ್ರತಿಯನ್ನು ಕಾಂಗ್ರೆಸ್ ಸದಸ್ಯರು ಹರಿದು ಹಾಕಿ ಪ್ರತಿಭಟನೆ ನಡೆಸಿದರು.