ಹಿಟ್ನಾಳ್‌ ಸಹೋದರರ ಹೋಳಿ ಸಂಭ್ರಮ | ಪರೀಕ್ಷೆಯಿಂದ ಹೊರಗುಳಿದ ಮುಸ್ಲಿಂ ವಿದ್ಯಾರ್ಥಿನಿ

ದ್ವಿತೀಯ ಪಿಯುಸಿ ಉರ್ದು ಪರೀಕ್ಷೆಗೆ ಹಾಜರಾಗಬೇಕಿದ್ದ ಮುಸ್ಲಿಂ ವಿದ್ಯಾರ್ಥಿನಿ ಪರೀಕ್ಷೆಗೆ ಬರಲಿಲ್ಲ. ಕಾರಣ ಸ್ಪಷ್ಟವಾಗಿಲ್ಲ. ಕುಟುಂಬ ಮೌನದಲ್ಲಿದೆ. ಆದರೆ ನೆರೆಹೊರೆಯವರು ಸ್ಪಷ್ಟವಾಗಿ ಹೇಳುತ್ತಾರೆ “ಪರೀಕ್ಷೆ ಬಿಟ್ಟುಕೊಳ್ಳುವ ಹುಡುಗಿ ಅಲ್ಲ.” ಹೋಳಿ ಕಾರ್ಯಕ್ರಮದ ನಿಮಿತ್ತ ಒತ್ತಡ ಹೇರಲಾಗಿರಬಹುದೇ? ಈ ಪ್ರಶ್ನೆ ಈಗ ಕೇವಲ ಅನುಮಾನವಲ್ಲ; ಅದು ಸಾರ್ವಜನಿಕ ಚಿಂತನೆಯ ಕೇಂದ್ರವಾಗಿದೆ. ಹಿಟ್ನಾಳ್‌

ಕಾಂಗ್ರೆಸ್‌ನ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ಹೋಳಿ ಡ್ಯಾನ್ಸ್ ಕಾರ್ಯಕ್ರಮಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಪಿಯುಸಿ ಉರ್ದು ಪರೀಕ್ಷೆಗೆ ಹಾಜರಾಗಬೇಕಿದ್ದ ಮುಸ್ಲಿಂ ವಿದ್ಯಾರ್ಥಿನಿ ಪರೀಕ್ಷೆಗೆ ಬರದಂತೆ ಒತ್ತಡ ಹೇರಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಾರ್ಯಕ್ರಮ ನಡೆಯುತ್ತಿರುವ ಕ್ರೀಡಾಂಗಣದ ಹಿಂಭಾಗದಲ್ಲೇ ಕಾಲೇಜು ಇದೆ. ಸಾಮಾನ್ಯವಾಗಿ ಪರೀಕ್ಷೆಯ ವೇಳೆ ಆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಾಗಿರುತ್ತದೆ; ಶಬ್ದ, ಸಂಚಾರ ಮತ್ತು ಸಾರ್ವಜನಿಕ ಗದ್ದಲವನ್ನು ನಿಯಂತ್ರಿಸುವುದು ಆಡಳಿತದ ಕರ್ತವ್ಯ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬಳೇ ವಿದ್ಯಾರ್ಥಿನಿ ಹಾಜರಾಗಬೇಕಿತ್ತು ಎನ್ನುವುದು ಗಮನಾರ್ಹ ಸಂಗತಿ. ಆದರೆ ಆ ವಿದ್ಯಾರ್ಥಿನಿಯೇ ಪರೀಕ್ಷೆಗೆ ಬರದಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಕೇವಲ ಗೈರುಹಾಜರಿಯ ವಿಷಯವಲ್ಲ; ಪರೀಕ್ಷಾ ವಾತಾವರಣ, ಆಡಳಿತದ ಜವಾಬ್ದಾರಿ ಮತ್ತು ವಿದ್ಯಾರ್ಥಿನಿಯ ಹಕ್ಕಿನ ಪ್ರಶ್ನೆಯಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.

ಒಬ್ಬ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗದೆ ಉಳಿಯುವುದು ಸಾಮಾನ್ಯ ಸಂಗತಿ ಎಂದೆನಿಸಬಹುದು.  ಆದರೆ ಒತ್ತಡದ ಆರೋಪ ಹೊರಬಿದ್ದ ಕ್ಷಣದಿಂದಲೇ ಇದು ಸಂವಿಧಾನಾತ್ಮಕ ಪ್ರಶ್ನೆಯಾಗಿ ನೋಡಬೇಕಿದೆ.  ಶಿಕ್ಷಣವು ಮೂಲಭೂತ ಹಕ್ಕು (ಕಲಂ 21A). ಧರ್ಮ, ಲಿಂಗ, ಸಾಮಾಜಿಕ ಗುರುತಿನ ಆಧಾರದ ಮೇಲೆ ಯಾವುದೇ ಅಡ್ಡಿಪಡಿಸುವಿಕೆ ನಡೆಯಿದೆಯೇ ಎಂಬ ಅನುಮಾನ ಮೂಡಿದರೆ,  ಕಲಂ 14  ಮತ್ತು 15 ನ್ನು  ಉಲ್ಲಂಘಸಲಾಗಿದೆ ವಿದ್ಯಾರ್ಥಿನಿಯ ಭವಿಷ್ಯಕ್ಕೆ  ಹೊಡೆತ ನೀಡಿ, ಸಂವಿಧಾನಾತ್ಮಕ ಮೌಲ್ಯಗಳ ಉಲ್ಲಂಘಿಸಿರುವ ಶಾಸಕ ಮತ್ತು ಸಂಸದರ ಮೇಲೆ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.

ಇದನ್ನೂ ಓದಿ : AI ಕೃತಕ-ಬುದ್ದಿಮತ್ತೆ : ಡೇಟಾ ಯಾರದ್ದು? ಲಾಭ ಯಾರಿಗೆ?

ಪರೀಕ್ಷೆಯ ದಿನವೇ ಭರ್ಜರಿ ಹೋಳಿ ಡ್ಯಾನ್ಸ್ ಕಾರ್ಯಕ್ರಮ ಆಯೋಜನೆ — ಇದು ಕೇವಲ ಸಮಯದ ಅಸಂಗತತೆನಾ? ಅಥವಾ ಆದ್ಯತೆಗಳ ಬಹಿರಂಗ ಪ್ರದರ್ಶನವಾ? ಜನಪ್ರತಿನಿಧಿಗಳ ಕರ್ತವ್ಯ ಶಿಕ್ಷಣ ವ್ಯವಸ್ಥೆಗೆ ಬೆಂಬಲ ನೀಡುವುದು. ಆದರೆ ವೇದಿಕೆ, ಮೈಕ್, ಬೆಳಕು ಮತ್ತು ಈವೆಂಟ್ ನಿರ್ವಹಣೆಯಲ್ಲೇ ತೊಡಗಿಸಿಕೊಂಡರೆ, ಅದು ಯಾವ ಸಂದೇಶ ನೀಡುತ್ತದೆ? ಮೌಲ್ಯಾಧಾರಿತ ರಾಜಕೀಯದ ಬದಲು ಈವೆಂಟ್ ಆಧಾರಿತ ರಾಜಕೀಯವೇ ಮೇಲುಗೈ ಸಾಧಿಸುತ್ತಿದೆಯೇ?

ಹಬ್ಬಗಳ ಆಚರಣೆ ತಪ್ಪಲ್ಲ. ಆದರೆ ಶಿಕ್ಷಣ ಹಕ್ಕಿಗೆ ಧಕ್ಕೆಯಾಗುವ ಪರಿಸ್ಥಿತಿಯಲ್ಲಿಯೂ ಅದನ್ನೇ ಆದ್ಯತೆಯಾಗಿ ಮುಂದೂಡುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ. ರಾಜಶೇಖರ್ ಹಿಟ್ನಾಳ್ ಸಂಸದರಾದ ನಂತರದಿಂದಲೇ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. “ಈ ಹಿಂದೆ ಕೊಪ್ಪಳ ಹೀಗೆ ಇರಲಿಲ್ಲ” ಎಂದು ಹಿರಿಯರೊಬ್ಬರ ಬೇಸರದ ಮಾತು  ಮೌಲ್ಯ ಬದಲಾವಣೆಯ ಸೂಚನೆಯಾಗಿದೆ.

ಇದಕ್ಕೆ ಮತ್ತೊಂದು ಗಂಭೀರ ಆಯಾಮ ಏನು ಅಂದರೆ, ಕಾರ್ಯಕ್ರಮಕ್ಕೆ ಸ್ಥಳೀಯ ಕೈಗಾರಿಕೆಗಳಿಂದ ಹಣ ಸಂಗ್ರಹಿಸಲಾಗಿದೆ ಎನ್ನುವ ಮಾತು. ಇದು ಸತ್ಯವಾಗಿದ್ದರೆ, CSR (Corporate Social Responsibility) ಕಾನೂನು (Companies Act, Section 135) ಪ್ರಕಾರ ಅದರ ಪಾರದರ್ಶಕತೆ, ಉದ್ದೇಶ ಮತ್ತು ಸಾಮಾಜಿಕ ಲಾಭ ಪ್ರಶ್ನೆಗೆ ಒಳಪಡುತ್ತದೆ. ಪರಿಸರ ಮಾಲಿನ್ಯ ಆರೋಪಗಳನ್ನು ಎದುರಿಸುತ್ತಿರುವ ಕೈಗಾರಿಕೆಗಳಿಂದ ಹಣ ಸ್ವೀಕರಿಸಿ, ಅದೇ ಸಮಯದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮೌನ ವಹಿಸುವುದು ಹಿತಾಸಕ್ತಿ ಪ್ರಶ್ನೆಯಾಗಿ ಕಾಣುತ್ತಿದೆ.  ಜನಪ್ರತಿನಿಧಿಗಳು ಕೈಗಾರಿಕಾ ಹಿತಾಸಕ್ತಿಗಳ ಪರ ಮೃದುವಾಗಿದ್ದರೆ, ಅದು ಪ್ರಜಾಪ್ರಭುತ್ವದ ಸಮತೋಲನ ಕದಡುವ ಸೂಚನೆಯಾಗಿದೆ.

ಪ್ರತಿನಿಧಿತ್ವ ಎಂದರೆ ಜನರ ಪರ ನಿಲ್ಲುವುದು. ಕುಡಿಯುವ ನೀರಿನ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಶಾಲೆ–ಹಾಸ್ಟೆಲ್‌ಗಳ ಮೂಲಸೌಕರ್ಯ ಅಭಾವ, ನಿರುದ್ಯೋಗ ಮತ್ತು ಕೃಷಿ ಸಂಕಷ್ಟ ಇವೆಲ್ಲ ತುರ್ತು ಪ್ರಶ್ನೆಗಳು. ಆದರೆ ಅವುಗಳಿಗಿಂತ ಈವೆಂಟ್‌ಗಳಿಗೆ ಆದ್ಯತೆ ನೀಡಿದರೆ, ಅಭಿವೃದ್ಧಿ ರಾಜಕೀಯದ ಬದಲು ಮನರಂಜನಾ ರಾಜಕೀಯವೇ ಕೇಂದ್ರವಾಗುತ್ತದೆ.

ಆಡಳಿತದ ಪಾತ್ರವೂ ಇಲ್ಲಿ ಪರಿಶೀಲನೀಯ. ಪರೀಕ್ಷೆಯ ದಿನವೇ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದು ಯಾದೃಚ್ಛಿಕವೇ? ಸಾರ್ವಜನಿಕ ಶಾಂತಿ, ಶಿಕ್ಷಣ ಮತ್ತು ಕಾನೂನು ಸುವ್ಯವಸ್ಥೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಪೊಲೀಸ್ ಮತ್ತು ಜಿಲ್ಲಾಡಳಿತದ ಕರ್ತವ್ಯ. ರಾಜಕೀಯ ಪ್ರಭಾವದ ನೆರಳಲ್ಲಿ ನಿರ್ಧಾರಗಳು ತೆಗೆದುಕೊಳ್ಳಲಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

“ಹಿಟ್ನಾಳ್ ಸಹೋದರರು ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಅಲ್ಲಿ ಕಲಿತ ಚಿಂತನೆಗಳ ಪ್ರಭಾವ ಇಂದಿನ ನಡೆಗೆ ಗೋಚರಿಸುತ್ತಿದೆ” ಎಂದು ಮುಸ್ಲಿಂ ನಾಯಕರೊಬ್ಬರು ಹೇಳುತ್ತಾರೆ. ಕೊಪ್ಪಳದ ಆರ್‌ಎಸ್‌ಎಸ್‌ ವಲಯ ಮತ್ತು ಹಿಟ್ನಾಳ್ ಸಹೋದರರು ‘ಗಲಸ್ಯ ಕಂಠಸ್ಯ’ ಇದ್ದಂತೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲನೆಯ ವಿಷಯವೇ ಆಗಿರಲಿ; ಆದರೆ ಸಾಮಾಜಿಕ ವಿಶ್ವಾಸ ಕುಂದಿರುವುದೇ ದೊಡ್ಡ ಸೂಚನೆ.

ಜನಪ್ರತಿನಿಧಿಗಳ ಸ್ಥಾನಮಾನ ಹಬ್ಬಗಳ ಆಯೋಜನೆಗೆ ಅಲ್ಲ; ಜನರ ಜೀವನಮಟ್ಟ ಸುಧಾರಣೆಗೆ. ಒಬ್ಬ ವಿದ್ಯಾರ್ಥಿನಿಯ ಶಿಕ್ಷಣ ಹಕ್ಕು ಹಬ್ಬದ ಹೆಸರಿನಲ್ಲಿ ಬಲಿಯಾಗಬಾರದು. ಕೊಪ್ಪಳ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪು ನ್ಯಾಯಾಲಯದಲ್ಲಷ್ಟೇ ಅಲ್ಲ ಮತಪೆಟ್ಟಿಗೆಯಲ್ಲಿಯೂ ನೀಡಲಾಗುತ್ತದೆ ಎಂಬುದನ್ನು ಹಿಟ್ನಾಳ್‌ ಸಹೋದರರು ಮರೆಯಬಾರದು.

ಇದನ್ನೂ ನೋಡಿ : “ಸಂಘಟನೆ ಹಕ್ಕಿಗೆ ಕೈ ಹಾಕಿದರೆ ಹೋರಾಟ ತೀವ್ರ: ಮೀನಾಕ್ಷಿ ಸುಂದರಂ ಎಚ್ಚರಿಕೆ” Janashakthi Media

Donate Janashakthi Media

Leave a Reply

Your email address will not be published. Required fields are marked *