ಹಿರಿಯ ಪತ್ರಕರ್ತ-ರಂಗಕರ್ಮಿ ಗುಡಿಹಳ್ಳಿ ನಾಗರಾಜ ನಿಧನ

ಬೆಂಗಳೂರು: ರಂಗಕರ್ಮಿಯಾಗಿ ಹಾಗೂ ಪತ್ರಕರ್ತರಾಗಿ ರಾಜ್ಯದ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ (66 ವರ್ಷ) ನಗರದಲ್ಲಿ ನಿಧನರಾಗಿದ್ದಾರೆ.

ದಾವಣಗೆರೆ (ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ತಮ್ಮ ಆರಂಭದ ದಿನಗಳಲ್ಲೂ ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದವರು. ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ಉಪನ್ಯಾಸಕರಾಗಿದ್ದರು. 1983 ರಲ್ಲಿ ಪ್ರಜಾವಾಣಿ, ಸುಧಾ, ಡೆಕ್ಕನ್‌ ಹೆರಾಲ್ಡ್ ಪತ್ರಿಕಾ ಸಮೂಹದಲ್ಲಿ 31 ವರ್ಷ ಕಾಲ ವಿವಿಧ ಸಂಪಾದಕೀಯ ಹುದ್ದೆ ನಿರ್ವಹಿಸಿ ಸುದ್ದಿಸಂಪಾದಕರಾಗಿ ನಿವೃತ್ತರಾದರು.

ನಟ, ನಿರ್ದೇಶಕರಾಗಿ ರಂಗಪ್ರವೇಶ ಮತ್ತು ಸಂಘಟರಾಗಿಯೂ ಕೆಲಸ ಮಾಡಿದ ಗುಡಿಹಳ್ಳಿಯವರು ರಂಗ ಬರವಣಿಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದವರು. ರಾಜ್ಯೋತ್ಸವ, ಕೆಂಪೇಗೌಡ, ಮುರುಘರಾಜೇಂದ್ರ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಂಗ ದಿಗ್ಗಜರ ಹಲವಾರು ವ್ಯಕ್ತಿಚಿತ್ರಗಳು ಶಾಲೆ, ಕಾಲೇಜು ಪಠ್ಯಪುಸ್ತಕಗಳಲ್ಲಿ ಪಾಠಗಳಾಗಿವೆ. ಗುಡಿಹಳ್ಳಿ ಬರೆದದ್ದಕ್ಕಿಂತ ಬರೆಯಿಸಿದ್ದೇ ಹೆಚ್ಚು, ರಂಗದ ಮೇಲೆ ಮೆರೆದದ್ದಕ್ಕಿಂತ ತೆರೆಯ ಹಿಂದೆ ದುಡಿದದ್ದೇ ಹೆಚ್ಚು. ರಂಗಭೂಮಿ ಬಿಟ್ಟರೆ ಮತ್ತೇನು ಗೊತ್ತಿಲ್ಲ ಎಂಬಂತೆ ಬದುಕುತ್ತಿರುವ ನಿಷ್ಕಾಮ ರಂಗಕರ್ಮಿ.

ಗುಡಿಯಳ್ಳಿ ನಾಗರಾಜ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಾಗರಾಜ್‌ ಅವರ ಅಂತ್ಯಸಂಸ್ಕಾರವನ್ನು ದಾವಣಗೆರೆ ಜಿಲ್ಲೆಯ ಕೆರೆಗುಡಿಹಳ್ಳಿಯಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

“ರಂಗ ನೇಪಥ್ಯ” ರಂಗಪತ್ರಿಕೆಯ ಸಂಪಾದಕರಾಗಿ ಗೆಳೆಯ ಗುಡಿಹಳ್ಳಿ ನಾಗರಾಜ ಅವರು ನಿಧನದಿಂದ ದುಃಖವನ್ನು ತರಿಸಿದೆ. ಪ್ರಜಾವಾಣಿಯಿಂದ ನಿವೃತ್ತರಾದ ಮೇಲೆ “ಕನ್ನಡ ರಂಗಭೂಮಿ”ಯ ಜತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಮುಖ್ಯವಾಗಿ ‘ಕಂಪನಿ ನಾಟಕರಂಗ’ ಕುರಿತು ಲೇಖನಗಳನ್ನು ಬರೆಯುತ್ತಿದ್ದ ಗುಡಿಹಳ್ಳಿ ನಾಗರಾಜ 1979 ರಲ್ಲಿ ಸಮುದಾಯ ಆಯೋಜಿಸಿದ್ದ ಬಾದಲ್ ಸರ್ಕಾರ್ ಅವರ ರಂಗ ತರಬೇತಿ ಶಿಬಿರದಲ್ಲಿ ನಮ್ಮ ಜತೆ ಭಾಗವಹಿಸಿದ ನೆನಪು ನನಗಿದೆ. ಅವರ ಅಗಲಿಕೆ ಕನ್ನಡ ರಂಗಭೂಮಿಗೆ ದೊಡ್ಡ ನಷ್ಟ.

ಟಿ.ಸುರಂದ್ರರಾವ್‌, ರಂಗಕರ್ಮಿ, ಸಮುದಾಯ,

ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದ ಗುಡಿಹಳ್ಳಿ, ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಕೆಲಸ ಮಾಡಿದವರು. ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದುಡಿದವರು. ಕೆಯುಡಬ್ಲ್ಯೂಜೆ ಸಂಘಟನೆಯಲ್ಲಿ ಅವರ‌ ಸೇವೆ ಮರೆಯಲಾಗದು.

ಶಿವಾನಂದ ತಗಡೂರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ಚಿತ್ರದುರ್ಗದಲ್ಲಿ 1990 ರಿಂದಲೇ ಅವರು ಅಂದಿನ‌ ಅವಿಭಜಿತ ಜಿಲ್ಲೆಗೆ ಪ್ರಜಾವಾಣಿ ವರದಿಗಾರರಾಗಿ ಆಗಮಿಸಿದ ದಿನಮಾನಗಳಿಂದಲೂ ಪರಿಚಿತರು. ಜನಪರ ಹೋರಾಟ ಹಾಗೂ ಕಾರ್ಯಕ್ರಮಗಳಿಗೆ ಕೈಲಾದಷ್ಟು ಧನಸಹಾಯ‌ ಮಾಡುತ್ತಾ ಬಂದವರು. ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐ ಎರಡನೇ ಜಿಲ್ಲಾ ಸಮ್ಮೇಳನ ದಾವಣಗೆರೆಯಲ್ಲಿ ಸಂಘಟಿಸಿದ್ದಾಗ ಅದರ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನಮಗೆ ಸ್ಪೂರ್ತಿಯುತವಾಗಿ ಸಹಾಯ ಮಾಡಿದ್ದಾರೆ. ರಂಗಭೂಮಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದವರು ಅದಕ್ಕಾಗಿ ಇಡೀ ರಾಜ್ಯವನ್ನೇ ತಿರುಗಿದರು.

ಕೆ. ಮಹಾಂತೇಶ, ಸಿಐಟಿಯು ರಾಜ್ಯ ಕಾರ್ಯದರ್ಶಿ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಗುಡಿಹಳ್ಳಿ ನಾಗರಾಜ ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ.

ಗುಡಿಹಳ್ಳಿ ನಾಗರಾಜ್ ಅವರ ರಂಗಕೃತಿಗಳು: ರಂಗನಾಟಕ ಪ್ರಯೋಗ ಸಾರ್ಥಕತೆ, ತೆರೆ ಸರಿದಾಗ (ಮಾಲತಿಶ್ರೀ ಮೈಸೂರು ಆತ್ಮಕತೆ), ರಂಗಸಿರಿ (ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಆತ್ಮಕತೆ), ಗುಬ್ಬಿ ವೀರಣ್ಣ, ಡಾ.ಲಕ್ಷ್ಮಣದಾಸ್, ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು, ಮೇಕಪ್‍ಮನ್ ಸುಬ್ಬಣ್ಣ, ರಂಗನೇವರಿಕೆ, ರಂಗಸಂದರ್ಶನ, ರಂಗದಿಗ್ಗಜರು, ಚಿಂದೋಡಿ ಲೀಲಾ, ಕಲಾಗ್ರಾಮ, ಜನಪರ ರಂಗಭೂಮಿ, ರಂಗಸೆಲೆ ಇತ್ಯಾದಿ.

ಅವರ ಸಂಪಾದಿತ ಕೃತಿಗಳು: ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗಮಾಹಿತಿ ಮಾಲಿಕೆ, ಹಾಗೂ ರಂಗಸಂಪನ್ನರು ಮಾಲಿಕೆಯ 40 ಕೃತಿಗಳು, ವೃತ್ತಿ ರಂಗದ ಮಹತ್ತರ ನಾಟಕಗಳು (ರಾಮಕೃಷ್ಣ ಮರಾಠೆ ಜತೆಗೆ), ಶತಮಾನದ ಶಕಪುರುಷ ಏಣಗಿ ಬಾಳಪ್ಪ (ಈ ಮೂರೂ ಸರಣಿ ನಾಟಕ ಅಕಾಡೆಮಿ ಪ್ರಕಟಣೆ), ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು (ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ.

Donate Janashakthi Media

Leave a Reply

Your email address will not be published. Required fields are marked *