ಹಿಂದುತ್ವ ರಾಜಕಾರಣಕ್ಕೆ ಅಭಿವೃದ್ಧಿಯ ಹೊದಿಕೆ

ದೌರ್ಜನ್ಯ ಮತದ್ವೇಷ ಮತ್ತು ಮತಾಂಧತೆಯನ್ನು ಮರೆಮಾಚುತ್ತಿರುವ ಪ್ರಗತಿಯ ಕನಸು

ನಾ ದಿವಾಕರ

ಪ್ರಮುಖ ವಿರೋಧ ಪಕ್ಷಗಳಾದ ಎಸ್‍ಪಿ, ಬಿಎಸ್‍ಪಿ ಮತ್ತು ಕಾಂಗ್ರೆಸ್, ಬಿಜೆಪಿಯ ಈ ಆಕ್ರಮಣಕಾರಿ ಹಿಂದುತ್ವ ರಾಜಕಾರಣವನ್ನು ಎದುರಿಸುವಲ್ಲಿ ಸೋತಿವೆ. ಹಾಗೆಯೇ ಭಾರತದ ಬಹುತ್ವ ಸಂಸ್ಕೃತಿಯನ್ನು ಕಾಪಾಡುವಂತಹ, ಸಂವಿಧಾನದ ಆಶಯಗಳನ್ನು ಸಂರಕ್ಷಿಸುವಂತಹ ಒಂದು ಪರ್ಯಾಯ ರಾಜಕೀಯ ನೀತಿಯನ್ನು ಜನರ ಮುಂದಿಡುವಲ್ಲಿ ಮೂರೂ ಪಕ್ಷಗಳು ವಿಫಲವಾಗಿವೆ.

ಇತ್ತೀಚೆಗೆ ಮುಗಿದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಭವಿಷ್ಯದ ಭಾರತಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದೆ. ಭಾರತ ಬದಲಾಗುತ್ತಿದೆ. 2014ರಲ್ಲಿ ನರೇಂದ್ರ ಮೋದಿ ಸೃಷ್ಟಿಸಿದ ‘ಅಚ್ಚೇ ದಿನ್’ ಸಾಕಾರಗೊಳ್ಳುತ್ತಿದೆ ಎಂಬ ಭ್ರಮೆ ಜನಸಾಮಾನ್ಯರನ್ನೂ ಆವರಿಸಿರುವುದು ಈ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸುದಿನದ ಫಲಾನುಭವಿಗಳು ಯಾರು? ಮೋದಿ ಸರ್ಕಾರದ ಆಡಳಿತ ನೀತಿಗಳು ಸೃಷ್ಟಿಸಲಿರುವ ಅಭಿವೃದ್ಧಿ ಪಥದ ಇಕ್ಕೆಲಗಳಲ್ಲೂ ಢಾಳಾಗಿ ಕಂಡುಬರುತ್ತಿರುವ ಬಡತನ, ಹಸಿವು, ಅತ್ಯಾಚಾರ, ದೌರ್ಜನ್ಯ, ತಾರತಮ್ಯ ಮತ್ತು ದ್ವೇಷದ ಛಾಯೆಗಳು ಮತದಾರರ ಪಾಲಿಗೆ ಕೇವಲ ಅಪಭ್ರಂಶಗಳಾಗಿ ಕಾಣುತ್ತಿವೆಯೇ ಅಥವಾ ಈ ಕರಾಳ ವಿದ್ಯಮಾನಗಳನ್ನು ಮೀರಿದ ಒಂದು ಸಾಂಸ್ಕೃತಿಕ ರಾಷ್ಟ್ರೀಯತೆ ಜನಮಾನಸದ ಕಲ್ಪನೆಯನ್ನು ಅಪಹರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಮುನ್ನಡೆಯಲ್ಲಿ ಅಭಿವೃದ್ಧಿಯ ಪರಿಕಲ್ಪನೆಯೇ ತಾರತಮ್ಯಗಳಿಂದ ಕೂಡಿರುತ್ತದೆ. ಕಡುಬಡತನ ಮತ್ತು ಅಷ್ಟೈಶ್ವರ್ಯದ ನಡುವೆ ಇರುವ ಕಂದರದಲ್ಲಿ ಮರೆಯಾಗುವ ಸುಡುವಾಸ್ತವಗಳು ಸಮಾಜದ ತಳವರ್ಗಗಳನ್ನು ಕಾಡುತ್ತಲೇ ಇರುತ್ತದೆ, ಇದೇ ವೇಳೆ ಇಡೀ ದೇಶವೇ ಪ್ರಗತಿಯ ಹಾದಿಯಲ್ಲಿ ಪ್ರಜ್ವಲಿಸುತ್ತಿರುವಂತೆ ಬಿಂಬಿಸಲಾಗುತ್ತದೆ. ತಮ್ಮ ಜೀವನ ಮತ್ತು ಜೀವನೋಪಾಯವನ್ನು ನಿರ್ವಹಿಸಲು ಆಡಳಿತ ನೀತಿಗಳನ್ನು ರೂಪಿಸಬೇಕಾದ ಶಾಸನಸಭೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಾಮಾನ್ಯ ಜನತೆಯ ಮುಂದೆ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದು ತಮ್ಮ ಆ ಹೊತ್ತಿನ ಜೀವನ ನಿರ್ವಹಣೆಯ ಪರಿಸರ, ಎರಡನೆಯದು ವ್ಯಾಪಕ ಸಮಾಜದ ಸಾಮಾಜಿಕಾರ್ಥಿಕ ಸ್ಥಿರತೆ. ತಮ್ಮ ಬದುಕಿನ ಸುಲಭ ನಿರ್ವಹಣೆಗೆ ನೆರವಾಗುವ ಯಾವುದೇ ಆಡಳಿತ ನೀತಿಗಳನ್ನು ಜನರು ಬೇಷರತ್ತಾಗಿ ಒಪ್ಪಿಕೊಳ್ಳುತ್ತಾರೆ. ಈ ಹಾದಿಯಲ್ಲಿ ನಾಶವಾಗಬಹುದಾದ ಸಮಾನತೆ, ಸಮನ್ವಯತೆ, ಸೌಹಾರ್ದತೆ ಮತ್ತು ಭ್ರಾತೃತ್ವದ ನೆಲೆಗಳು ನಗಣ್ಯ ಎನಿಸಿಬಿಡುತ್ತದೆ.

ಉತ್ತರಪ್ರದೇಶವನ್ನೂ ಒಳಗೊಂಡಂತೆ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶಗಳು ಜನಸಾಮಾನ್ಯರ ಈ ಧೋರಣೆಯನ್ನು ಸ್ಪಷ್ಟವಾಗಿ ಬಿಂಬಿಸಿದೆ. ಗಾಂಧಿ, ಅಂಬೇಡ್ಕರ್ ಕನಸಿನ ಬಹುಸಂಸ್ಕೃತಿಯ, ಬಹುತ್ವದ, ಸಮನ್ವಯದ ಭಾರತವನ್ನು ಕ್ರಮೇಣವಾಗಿ ಏಕಸಂಸ್ಕೃತಿಯತ್ತ ಕೊಂಡೊಯ್ಯುವ ತನ್ನ ಪ್ರಯೋಗದಲ್ಲಿ ಹಿಂದುತ್ವ ರಾಜಕಾರಣ ಬೃಹತ್ ಮುನ್ನಡೆ ಸಾಧಿಸಿರುವುದು ಈ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಿಂದುತ್ವದ ಸಾಂಸ್ಕೃತಿಕ ರಾಷ್ಟ್ರೀಯತೆ ಸೃಷ್ಟಿಸಿರುವ ಅಲ್ಪಸಂಖ್ಯಾತ ವಿರೋಧಿ ವ್ಯಾಖ್ಯಾನಗಳು ಬಹುಸಂಖ್ಯಾತ ಹಿಂದೂಗಳಲ್ಲಿ ಮುಸ್ಲಿಂ ದ್ವೇಷದ ಬೀಜಗಳನ್ನು ಬಿತ್ತಿರುವುದು ಉತ್ತರಪ್ರದೇಶದ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅಲೆಯಲ್ಲಿ ಶೋಷಿತ ಸಮುದಾಯಗಳೂ ಸಹ ತೇಲಿಹೋಗಿರುವ ದುರಂತ ವಾಸ್ತವವನ್ನೂ ನಾವಿಂದು ಎದುರಿಸಬೇಕಿದೆ.

ಮಾರುಕಟ್ಟೆ ಆರ್ಥಿಕತೆಯಲ್ಲಿ ಅಳೆಯಲಾಗುವ ಅಭಿವೃದ್ಧಿಯ ಮಾನದಂಡಗಳನ್ನು ಮರೆಮಾಚಲೆಂದೇ ಬಂಡವಾಳಶಾಹಿ ಆಡಳಿತ ವ್ಯವಸ್ಥೆ ರೂಪಿಸುವ ಜನೋಪಯೋಗಿ ಆರ್ಥಿಕ ನೀತಿಗಳು ಸಮಾಜದಲ್ಲಿ ಢಾಳಾಗಿ ಕಾಣುವ ತಾರತಮ್ಯಗಳನ್ನೂ, ಕಂದರಗಳನ್ನೂ ಮರೆಮಾಚಿಬಿಡುತ್ತವೆ. ಇದರ ಒಂದು ಸ್ಪಷ್ಟ ಚಿತ್ರಣವನ್ನು ಉತ್ತರಪ್ರದೇಶದಲ್ಲಿ ಗುರುತಿಸಬಹುದು. ಕೋವಿದ್ ನಂತರದಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ದಾಖಲಿಸಿರುವ ಈ ರಾಜ್ಯದಲ್ಲಿ 2017ಕ್ಕೆ ಹೋಲಿಸಿದರೆ 2022ರಲ್ಲಿ 16 ಲಕ್ಷ ಉದ್ಯೋಗಾವಕಾಶಗಳು ಇಲ್ಲವಾಗಿವೆ. 2012-17ಕ್ಕೆ ಹೋಲಿಸಿದರೆ ರಾಜ್ಯದ ಜಿಡಿಪಿ ಕುಸಿತ ಕಂಡಿದೆ. ಬಹುಆಯಾಮದ ಬಡತನದ ಸೂಚ್ಯಂಕದಲ್ಲಿ ಉತ್ತರಪ್ರದೇಶ ಕೊನೆಯ ಸ್ಥಾನದಲ್ಲಿರುವುದನ್ನು ನೀತಿ ಆಯೋಗವೇ ದಾಖಲಿಸಿದೆ. ಹಾಥ್ರಸ್, ಉನ್ನಾವೋ ಸೇರಿದಂತೆ ಅತಿ ಹೆಚ್ಚಿನ ಮಹಿಳಾ ದೌರ್ಜನ್ಯ ಈ ರಾಜ್ಯದಲ್ಲಿ ದಾಖಲಾಗಿದೆ. ದಲಿತರ ಮೇಲಿನ ಮಾರಣಾಂತಿಕ ಹಲ್ಲೆಗಳು ಹೆಚ್ಚಾಗಿವೆ. ಕೋವಿದ್ ನಿರ್ವಹಣೆಯ ವೈಫಲ್ಯದಿಂದ ಅತಿ ಹೆಚ್ಚಿನ ಸಾವು ಈ ರಾಜ್ಯದಲ್ಲಿ ಸಂಭವಿಸಿದೆ. ಗಂಗೆಯಲ್ಲಿ ತೇಲಿಬಂದ ನೂರಾರು ಅನಾಥ ಶವಗಳು ಈ ವೈಫಲ್ಯಕ್ಕೆ ಸಾಕ್ಷಿಯಾಗಿವೆ.

ಇದನ್ನೂ ಓದಿ : ಉತ್ತರ ಪ್ರದೇಶ : ಉಪಮುಖ್ಯಮಂತ್ರಿ ಸೇರಿ 11 ಮಂತ್ರಿಗಳ ಸೋಲು

ಆದರೆ ಈ ಎಲ್ಲ ವೈಫಲ್ಯಗಳನ್ನೂ ಮರೆಮಾಚುವಂತಹ ಆಡಳಿತ ನೀತಿಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ಅನುಸರಿಸಿದೆ. ರಾಜ್ಯದ ಶೇ 80ರಷ್ಟು ಜನತೆಗೆ ಉಚಿತ ದವಸ ಧಾನ್ಯಗಳನ್ನು ನೀಡಲಾಗುತ್ತಿದೆ. ಶೇ 20ರಷ್ಟು ಜನರು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳಾಗಿದ್ದಾರೆ. ರೈತ ಬಂಡಾಯ ತೀವ್ರವಾಗಿದ್ದ ಪಶ್ಚಿಮ ಉತ್ತರಪ್ರದೇಶದ ಪ್ರಾಂತ್ಯಗಳಲ್ಲಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಲಾಗುವ ಹಣಕಾಸಿನ ನೆರವು ರೈತರ ಆಕ್ರೋಶವನ್ನು ತಣಿಸಲು ಯಶಸ್ವಿಯಾಗಿದೆ.  ಅಡುಗೆ ಅನಿಲ ಒದಗಿಸುವ ಉಜ್ವಲ ಯೋಜನೆ, ಆರೋಗ್ಯ ವಿಮೆ ಯೋಜನೆ, ಗೃಹ ನಿರ್ಮಾಣಕ್ಕೆ ನೆರವಾಗುವ ಪ್ರಧಾನಮಂತ್ರಿ ಆವಾಸ್ ಯೋಜನೆ, ಸಬ್ಸಿಡಿ ಸಹಿತ ಪಡಿತರ ವ್ಯವಸ್ಥೆ, ಉಚಿತ ಪಡಿತರ ವಿತರಣೆ, ಶೌಚಾಲಯ ವ್ಯವಸ್ಥೆ ಈ ಎಲ್ಲ ಯೋಜನೆಗಳಡಿ ಜನರ ಖಾತೆಗೆ ನೇರವಾಗುವ ಸಂದಾಯವಾಗುವ ಧನಸಹಾಯ, ಬಡ ಮತ್ತು ಕೆಳಮಧ್ಯಮ ವರ್ಗದ ಜನತೆಯ ಜೀವನ ನಿರ್ವಹಣೆಗೆ ಸಹಾಯಕವಾಗುವ ಅಂಶಗಳು.

ಭಾರತದ ಬಹುತ್ವ ಸಂಸ್ಕೃತಿಗೆ ಮಾರಕವಾಗುವಂತಹ ದ್ವೇಷ ರಾಜಕಾರಣವನ್ನು ವ್ಯವಸ್ಥಿತವಾಗಿ ಬೆಳೆಸುತ್ತಲೇ ಈ ಜನೋಪಯೋಗಿ ಯೋಜನೆಗಳ ಮೂಲಕ ಹಿಂದೂ ಮತದಾರರನ್ನು ಧೃವೀಕರಿಸುವ ಚಾಣಕ್ಯ ನೀತಿಯನ್ನು ಬಿಜೆಪಿ ಸಮರ್ಪಕವಾಗಿ ಅನುಸರಿಸಿದೆ. ಈ ಚುನಾವಣೆಗಳು 80:20 ಅನುಪಾತದಲ್ಲಿ ನಡೆಯಲಿದೆ ಎಂದು ಹೇಳುವ ಮೂಲಕ ಯೋಗಿ-ಮೋದಿ-ಶಾ ನೇತೃತ್ವದಲ್ಲಿ ಶೇ 80ರಷ್ಟು ಹಿಂದೂಗಳನ್ನು ಶೇ 20ರಷ್ಟಿರುವ ಮುಸ್ಲಿಂ ಸಮುದಾಯದೊಡನೆ ಮುಖಾಮುಖಿಯಾಗಿಸಲಾಗಿದೆ. ಈ ಶೇ 80ರಷ್ಟು ಹಿಂದೂಗಳನ್ನು ತನ್ನ ಸಾಂಸ್ಕೃತಿಕ  ರಾಷ್ಟ್ರೀಯತೆ ಮತ್ತು ಹಿಂದುತ್ವ ರಾಜಕಾರಣದಲ್ಲಿ ಬಂಧಿಸಲು ಬಳಸಿದ ದ್ವೇಷ ರಾಜಕಾರಣದ ಮಾರ್ಗ ಬಹುತ್ವ ಭಾರತದ ಮೂಲ ಅಡಿಪಾಯವನ್ನೇ ಅಲುಗಾಡಿಸಲಿದೆ.  ಉತ್ತರಪ್ರದೇಶ ಚುನಾವಣಾ ಪ್ರಸಾರದಲ್ಲಿ ಕಳೆದ ನವಂಬರ್ ನಿಂದ ಈ ವರ್ಷದ ಫೆಬ್ರವರಿಯವರೆಗೆ ನೂರಕ್ಕೂ ಹೆಚ್ಚು ದ್ವೇಷ ಭಾಷಣಗಳನ್ನು ದಾಖಲಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯ ಮೂಲಕ, ಮುಸ್ಲಿಂ ಸಮುದಾಯದ ಆರ್ಥಿಕ ತಳಪಾಯವನ್ನೇ ಅಸ್ಥಿರಗೊಳಿಸಿದ ಯೋಗಿ ಸರ್ಕಾರ ಮುಸ್ಲಿಂ ಸಮುದಾಯದ ಮಾರುಕಟ್ಟೆ ಅಸ್ತಿತ್ವವನ್ನೇ ಸಂಪೂರ್ಣವಾಗಿ ನಾಶಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮತಾಂತರ ನಿಷೇಧ ಕಾಯ್ದೆ, ಲವ್ ಜಿಹಾದ್ ನಿಷೇಧ ಮತ್ತು ಗೋಹತ್ಯೆ ನಿಷೇಧದ ಮೂಲಕ ಮುಸ್ಲಿಂ ಸಮುದಾಯದ ಸಾಮಾಜಿಕ ಬದುಕಿಗೂ ಸಾಕಷ್ಟು ಅಡ್ಡಿ ಆತಂಕಗಳನ್ನು ಉಂಟುಮಾಡಿರುವ ಯೋಗಿ ಸರ್ಕಾರ ತನ್ನ ದ್ವೇಷ ರಾಜಕಾರಣದ ಈ ಎಲ್ಲ ನೀತಿಗಳಿಗೆ ಬಹುಸಂಖ್ಯೆಯ ಹಿಂದೂಗಳ ಸಮ್ಮತಿಯನ್ನೂ ಪಡೆದಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

ಪ್ರಮುಖ ವಿರೋಧ ಪಕ್ಷಗಳಾದ ಎಸ್‍ಪಿ, ಬಿಎಸ್‍ಪಿ ಮತ್ತು ಕಾಂಗ್ರೆಸ್, ಬಿಜೆಪಿಯ ಈ ಆಕ್ರಮಣಕಾರಿ ಹಿಂದುತ್ವ ರಾಜಕಾರಣವನ್ನು ಎದುರಿಸುವಲ್ಲಿ ಸೋತಿವೆ. ಹಾಗೆಯೇ ಭಾರತದ ಬಹುತ್ವ ಸಂಸ್ಕೃತಿಯನ್ನು ಕಾಪಾಡುವಂತಹ, ಸಂವಿಧಾನದ ಆಶಯಗಳನ್ನು ಸಂರಕ್ಷಿಸುವಂತಹ ಒಂದು ಪರ್ಯಾಯ ರಾಜಕೀಯ ನೀತಿಯನ್ನು ಜನರ ಮುಂದಿಡುವಲ್ಲಿ ಮೂರೂ ಪಕ್ಷಗಳು ವಿಫಲವಾಗಿವೆ. ಯಾದವ್ ಸಮುದಾಯವನ್ನು ಹೊರತುಪಡಿಸಿದ ಒಬಿಸಿಗಳನ್ನು ಮತ್ತು ಜಾಟವ್ ಸಮುದಾಯವನ್ನು ಹೊರತುಪಡಿಸಿದ ದಲಿತರನ್ನು ತನ್ನ ಹಿಂದುತ್ವ ರಾಜಕಾರಣದ ಕಾಲಾಳುಗಳನ್ನಾಗಿ ಮಾಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಮಾಜವಾದಿ ಪಕ್ಷದ ಆಡಳಿತದಲ್ಲಿ ವ್ಯಾಪಕವಾಗಿದ್ದ ಗೂಂಡಾಗಿರಿಯನ್ನು ನಿಯಂತ್ರಿಸುವ ನೆಪದಲ್ಲಿ, ಪ್ರಧಾನವಾಗಿ ಮುಸ್ಲಿಂ ನಾಯಕರನ್ನೇ ಬಂಧಿಸುವ ಮೂಲಕ, ಸಮಾಜದಲ್ಲಿ ಗೂಂಡಾಗಿರಿ ವ್ಯಾಪಿಸಲು ಮುಸ್ಲಿಮರೇ ಕಾರಣ ಎಂದು ಬಿಂಬಿಸಲಾಗಿದೆ. ಇದು ಬಹುಸಂಖ್ಯಾತ ಹಿಂದೂ ಯುವಕರನ್ನು ಹಿಂದುತ್ವದೆಡೆಗೆ ಸೆಳೆಯಲು ನೆರವಾಗಿರುವುದು ಸ್ಪಷ್ಟ.

ಆಡಳಿತಾರೂಢ ಪಕ್ಷದ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡುವುದು ಚುನಾವಣೆಗಳ ಸಂದರ್ಭದಲ್ಲಿ ಸಹಜವಾದ ಪ್ರಕ್ರಿಯೆ. ಆದರೆ ತಾವು ಅಧಿಕಾರಕ್ಕೆ ಬಂದರೆ ಯಾವ ರೀತಿಯ ಆಡಳಿತ ನೀತಿಗಳನ್ನು ಅನುಸರಿಸುತ್ತೇವೆ ಎಂದು ಜನತೆಗೆ ಮನದಟ್ಟು ಮಾಡುವುದೂ ಅಷ್ಟೇ ಮುಖ್ಯವಾಗುತ್ತದೆ. ಯೋಗಿ ಅಥವಾ ಮೋದಿ ದೂಷಣೆಯೊಂದೇ ಜನರಲ್ಲಿ ವಿಶ್ವಾಸ ಮೂಡಿಸುವುದಿಲ್ಲ. ಇಂದು ನವ ಉದಾರವಾದ ಸೃಷ್ಟಿಸುತ್ತಿರುವ ಅನಿಶ್ಚಿತತೆ, ಸಾಮಾಜಿಕಾರ್ಥಿಕ ಅಭದ್ರತೆ ಮತ್ತು ತೀವ್ರಗೊಳಿಸುತ್ತಿರುವ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ತಮ್ಮ ಪಕ್ಷಗಳು ಯಾವ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತವೆ ಎಂಬ ಸ್ಪಷ್ಟ ಪ್ರಣಾಳಿಕೆಯನ್ನು ಜನರ ಮುಂದಿಡುವಲ್ಲಿ ಎಸ್‍ಪಿ, ಬಿಎಸ್‍ಪಿ ಮತ್ತು ಕಾಂಗ್ರೆಸ್ ವಿಫಲವಾಗಿವೆ. ಬೃಹದಾರ್ಥಿಕತೆಯ ನೆಲೆಯಲ್ಲಿ ಕಾರ್ಪೋರೇಟ್ ಪರ ಮಾರುಕಟ್ಟೆ ನೀತಿಗಳು ಸದ್ದಿಲ್ಲದೆ ಜಾರಿಯಾಗುತ್ತಿದ್ದು, ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸಲಾಗುತ್ತಿದೆ.

ದೇಶದ ಅಭಿವೃದ್ಧಿ ಎಂದರೆ ಈ ದೇಶದ ಬಹುಸಂಖ್ಯಾತ ದುಡಿಮೆಯ ಜೀವಗಳ ಪ್ರಗತಿ ಎಂಬ ಪರಿಕಲ್ಪನೆಯನ್ನೇ ಬದಿಗೊತ್ತಿ, ಕೆಲವೇ ಶ್ರೀಮಂತರ ಬದುಕಿಗೆ ನೆರವಾಗುವಂತಹ ಆರ್ಥಿಕ ನೀತಿಗಳನ್ನು ನರೇಂದ್ರ ಮೋದಿ ಸರ್ಕಾರ ಅಡೆತಡೆಯಿಲ್ಲದೆ ಜಾರಿಗೊಳಿಸುತ್ತಿದೆ. ಹಿಂಪಡೆಯಲಾಗಿರುವ ಕೃಷಿ ಕಾಯ್ದೆಗಳು ಭಾರತದ ರೈತಾಪಿಯ ಪಾಲಿಗೆ ಮಾರಣಾಂತಿಕವಾಗಿದ್ದು, ಇದೇ ಕಾಯ್ದೆಗಳನ್ನು ಕೊಂಚ ಬದಲಾವಣೆಗಳೊಂದಿಗೆ ಪುನಃ ಅನುಷ್ಟಾನಗೊಳಿಸಿ, ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್‍ಗಳಿಗೆ ಒಪ್ಪಿಸುವುದು ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಲಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ಕ್ಷೇತ್ರದ ಕಾರ್ಪೋರೇಟೀಕರಣ ಪರಿಪೂರ್ಣವಾಗಲಿದೆ. ಜೀವ ವಿಮಾ ನಿಗಮವನ್ನು ಖಾಸಗೀಕರಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ವಿಮಾನ ಯಾನ ಮತ್ತು ರೈಲ್ವೆ ಇಲಾಖೆಯನ್ನೂ ಖಾಸಗೀಕರಣಗೊಳಿಸಲು ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಈ ನೀತಿಗಳು ಭಾರತವನ್ನು ಮರುವಸಾಹತೀಕರಣದತ್ತ ಕೊಂಡೊಯ್ಯುವ ಅಪಾಯವನ್ನು ಜನರು ಮನಗಾಣುತ್ತಿಲ್ಲ ಎನ್ನುವುದು ಚಿಂತೆಗೀಡುಮಾಡುವ ವಿಚಾರ.

ಇದಕ್ಕೆ ಕಾರಣಗಳೂ ಇವೆ. ಭಾರತದ ಬಹುತೇಕ ಮಾಧ್ಯಮಗಳು ಸರ್ಕಾರದ ಮತ್ತು ಆಡಳಿತಾರೂಢ ಪಕ್ಷದ ವಕ್ತಾರರಂತಾಗಿವೆ. ಉನ್ಮತ್ತ ರಾಷ್ಟ್ರೀಯತೆ ಮತ್ತು ಮುಸ್ಲಿಂ ದ್ವೇಷದ ಉನ್ಮಾದವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಿಂದೂ ಮತಾಂಧ ಸಂಘಟನೆಗಳಿಗೆ ಉತ್ತೇಜನ ನೀಡುವಂತಹ ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ದಲಿತರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ವಿಚಾರಗಳು ಎಂದು ಬಿಂಬಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿವೆ. ಕರ್ನಾಟಕದ ಹಿಜಾಬ್ ವಿವಾದದಿಂದ ಹರಿದ್ವಾರದ ಧರ್ಮ ಸಂಸತ್ತಿನಲ್ಲಿ ಮೊಳಗಿದ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡದ ಕರೆಯವರೆಗೆ, ಏಕಸಂಸ್ಕೃತಿಯ ಬಲವಂತದ ಹೇರಿಕೆಯ ಪ್ರಯತ್ನಗಳನ್ನು ಕಾಣಬಹುದಾಗಿದೆ. ಈ ಆಕ್ರಮಣಕಾರಿ ಹಿಂದುತ್ವ ರಾಜಕಾರಣವನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳು ಸಂಪೂರ್ಣ ವಿಫಲವಾಗಿವೆ.

ಡಾ ಬಿ ಆರ್ ಅಂಬೇಡ್ಕರ್ ಚುನಾವಣೆಯಲ್ಲಿ ಮತಗಳಿಕೆಯ ಅಸ್ತ್ರವಾಗಲು ಸಾಧ್ಯವಿಲ್ಲ. ಆದರೆ ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಆಶಯಗಳು, ಸಮಾನತೆ, ಭ್ರಾತೃತ್ವ, ಸಮನ್ವಯ ಮತ್ತು ಜಾತ್ಯತೀತತೆಯ ಮೌಲ್ಯಗಳು ತುಳಿತಕ್ಕೊಳಗಾದವರನ್ನು, ಶೋಷಿತ-ದಮನಿತರನ್ನು ಮತ್ತು ಹಸಿವಿಗೆ ತುತ್ತಾಗುತ್ತಿರುವ ಕೋಟ್ಯಂತರ ಜನತೆಯನ್ನು ಕ್ರೋಢೀಕರಿಸಲು ನೆರವಾಗುತ್ತದೆ. ಈ ವ್ಯತ್ಯಾಸವನ್ನು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅರ್ಥಮಾಡಿಕೊಳ್ಳಬೇಕಿದೆ. ಜಾಗತೀಕರಣದ ಫಲಾನುಭವಿಗಳಾದ ಮಧ್ಯಮವರ್ಗಗಳನ್ನೇ ನಂಬಿಕೊಂಡಿರುವ ಬಿಎಸ್‍ಪಿ ಈ ಶೋಷಿತ ಸಮುದಾಯಗಳ ನೋವಿಗೆ ಸ್ಪಂದಿಸಲು ವಿಫಲವಾಗಿರುವುದು ಈ ಚುನಾವಣೆಗಳಲ್ಲೂ ಸ್ಪಷ್ಟವಾಗಿ ಕಾಣುತ್ತಿದೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ನೀತಿಗಳ ಫಲಾನುಭವಿಗಳಾಗಿರುವ ಬೃಹತ್ ಸಂಖ್ಯೆ ಮಧ್ಯಮ ವರ್ಗದ ಯುವ ಜನತೆ ಇಂದು ಹಿಂದುತ್ವ ರಾಜಕಾರಣ ಮತ್ತು ಅಲ್ಪಸಂಖ್ಯಾತ ವಿರೋಧಿ ಸಾಂಸ್ಕೃತಿಕ  ರಾಜಕಾರಣಕ್ಕೆ ಬಲಿಯಾಗಿದೆ. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರೂ ಸಹ ಇದರ ಒಂದು ಭಾಗವಾಗಿದ್ದಾರೆ.

ಈ ಮಧ್ಯಮ ವರ್ಗಗಳು ತಮ್ಮ ಹಿತವಲಯದ ಗೋಡೆಗಳನ್ನು ಭೇದಿಸಿ, ಸಮಾಜದಲ್ಲಿ ನಿಕೃಷ್ಟರಾಗಿ ಬದುಕುತ್ತಿರುವ ಕೋಟ್ಯಂತರ ಶ್ರಮಜೀವಿಗಳತ್ತ ನೋಡುವಂತೆ ಮಾಡುವುದು ಮಾಯಾವತಿಯಂತಹ ನಾಯಕಿಯ ಆದ್ಯತೆಯಾಗಬೇಕಿದೆ.  ಜಾಗತೀಕರಣದ ಫಲಾನುಭವಿಗಳಾಗದ ಈ ಮಧ್ಯಮ ವರ್ಗದ ಯುವ ಸಮುದಾಯ, ದಲಿತ-ಅಲ್ಪಸಂಖ್ಯಾತರನ್ನೂ ಒಳಗೊಂಡಂತೆ, ಸದಾ ನವ ಉದಾರವಾದದ ಉತ್ಸಾಹಿ ಕಾಲಾಳುಗಳಾಗಿಯೇ ಇರುತ್ತಾರೆ. ಹಾಗೆಯೇ ಹಿಂದುತ್ವದ ಆಕ್ರಮಣಕಾರಿ ರಾಷ್ಟ್ರೀಯತೆಯ ಉನ್ಮಾದಕ್ಕೊಳಗಾಗುವ ಈ ಬೃಹತ್ ಸಮುದಾಯ, ತಾವು ಎದುರಿಸುವ ಎಲ್ಲ ಸಮಸ್ಯೆಗಳ, ಸಂಕಷ್ಟಗಳ ಕಾರಣಗಳನ್ನು ಮಾರುಕಟ್ಟೆಯಲ್ಲಿ ಕಾಣುವುದಿಲ್ಲ. ಬದಲಾಗಿ ಈ ದೇಶದ ಅಲ್ಪಸಂಖ್ಯಾತರಲ್ಲಿ ಕಾಣುತ್ತಾರೆ. ಹಾಗಾಗಿಯೇ ಹಿಜಾಬ್, ತಲಾಖ್, ಬುರ್ಖಾ ಮತ್ತು ಮಸೀದಿಗಳು ಭಾವನಾತ್ಮಕ ವಿಚಾರಗಳಾಗಿ ಉನ್ಮಾದ ಸೃಷ್ಟಿಸುತ್ತವೆ. ತಮ್ಮ ಪ್ರಗತಿಯ ಹಾದಿಯ ಇಕ್ಕೆಲಗಳಲ್ಲಿ ಕಾಣುವ ಜಾತಿ ದೌರ್ಜನ್ಯಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು ಈ ಯುವ ಸಮುದಾಯದ ದೃಷ್ಟಿಯಲ್ಲಿ ಸಹನೀಯ ಸಹಜ ಪ್ರಕ್ರಿಯೆಗಳಾಗಿಬಿಡುತ್ತವೆ.

ಹಾಗಾಗಿಯೇ ಕಾರ್ಪೋರೇಟ್  ಮಾರುಕಟ್ಟೆ ಆರ್ಥಿಕ ನೀತಿ, ಉಗ್ರ ರಾಷ್ಟ್ರೀಯವಾದ, ಹಿಂದೂ ರಾಷ್ಟ್ರದ ಪರಿಕಲ್ಪನೆ ಮತ್ತು ಮೇಲ್ ಜಾತಿಯ ಪಾರಮ್ಯ ಇವೆಲ್ಲವೂ ಒಂದೇ ನೀತಿಯ ವಿಭಿನ್ನ ಆಯಾಮಗಳಾಗಿ ರೂಪುಗೊಳ್ಳುತ್ತವೆ. ಭಾರತದ ಸಂವಿಧಾನ ಬಯಸುವ ಸಂಪತ್ತಿನ ಸಮಾನ ಹಂಚಿಕೆಯ ಸಮಾಜವಾದಿ ಆಶಯಗಳು, ಸಮನ್ವಯದ ಬದುಕಿನ ಭ್ರಾತೃತ್ವದ ಕನಸುಗಳು, ಜಾತಿ ಶೋಷಣೆಯಿಂದ ಮುಕ್ತವಾದ ಸಮ ಸಮಾಜದ ಪರಿಕಲ್ಪನೆಗಳು ಮತ್ತು ಬಡವ-ಶ್ರೀಮಂತರ ನಡುವಿನ ಕಂದರವನ್ನು ಕುಗ್ಗಿಸಬಹುದಾದ ಆರ್ಥಿಕ ಸಮಾನತೆಯ ಭರವಸೆಗಳು , ಹಿಂದೂ ರಾಷ್ಟ್ರದ ಚೌಕಟ್ಟಿನಲ್ಲಿ ಸದ್ದಿಲ್ಲದೆ ಕಣ್ಮರೆಯಾಗಿಬಿಡುತ್ತವೆ. ಅಸಮಾನತೆ, ದೌರ್ಜನ್ಯ, ಶೋಷಣೆ, ಅತ್ಯಾಚಾರ ಮತ್ತು ತಾರತಮ್ಯಗಳನ್ನು ತನ್ನ ಒಡಲಲ್ಲಿರಿಸಿಕೊಂಡೇ ‘ಆತ್ಮ ನಿರ್ಭರ’ ಭಾರತವನ್ನು ‘ಅಮೃತ ಕಾಲ’ದತ್ತ ಕೊಂಡೊಯ್ಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತವೆ.

ಬಿಜೆಪಿ ಮತ್ತು ಸಂಘಪರಿವಾರ ಈ ಪ್ರಯತ್ನಗಳ ಮೂಲಕವೇ ಭಾರತದ ಬಹುತ್ವ ಸಂಸ್ಕೃತಿಯನ್ನು ಅಡ್ಡಡ್ಡಲಾಗಿ ಸೀಳುತ್ತಾ ಮುನ್ನಡೆದಿವೆ. ಈ ಸೀಳುವ ಪ್ರಕ್ರಿಯೆಗೆ ಪೂರಕವಾದ ಯಾವುದೇ ರಾಜಕೀಯ ನಡೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿಯೇ ಕಂಡುಬರುತ್ತದೆ. ಇನ್ನು ಮುಂಬರುವ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಕೃಷಿ ಕಾಯ್ದೆ, ಕಾರ್ಮಿಕ ಸಂಹಿತೆಗಳು, ಸಮಾನ ನಾಗರಿಕ ಸಂಹಿತೆ ಮತ್ತು ಮಾರುಕಟ್ಟೆ ಪ್ರೇರಿತ ಆರ್ಥಿಕ ನೀತಿಗಳು ಭಾರತದ ಬಹುಸಂಖ್ಯಾತ ಜನರನ್ನು ಮತ್ತಷ್ಟು ಅವಕಾಶವಂಚಿತರನ್ನಾಗಿ ಮಾಡುತ್ತವೆ. ಡಾ ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಸವಲತ್ತು ಮತ್ತು ಸೌಕರ್ಯಗಳನ್ನೂ ನಿರಾಕರಿಸುವ ಪ್ರಕ್ರಿಯೆಗೆ ಹಂತಹಂತವಾಗಿ ಚಾಲನೆ ನೀಡಲಾಗುತ್ತದೆ. ಶೋಷಿತ ಬಹುಜನರನ್ನು, ಶ್ರಮಜೀವಿ ವರ್ಗಗಳನ್ನು ಮತ್ತು ಬಹುಸಂಖ್ಯಾತ ದಮನಿತ ಮಹಿಳೆಯರನ್ನು ಪ್ರತಿನಿಧಿಸುವ ಯಾವುದೇ ರಾಜಕೀಯ ಪಕ್ಷಕ್ಕೆ ಈ ಬೆಳವಣಿಗೆಗಳು ಸವಾಲಾಗಿ ಪರಿಣಮಿಸುತ್ತವೆ.

ಸಂವಿಧಾನದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ದೇಶದ ನೂರಾರು ದಲಿತ, ಅಲ್ಪಸಂಖ್ಯಾತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಮುದಾಯ ಮತ್ತು ಮಹಿಳಾ ಆಂದೋಲನಗಳು ಉತ್ತರಪ್ರದೇಶದ ಚುನಾವಣಾ ಫಲಿತಾಂಶಗಳು ನೀಡಿರುವ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಿಂದುತ್ವ ರಾಷ್ಟ್ರೀಯತೆಯ  ಕೋಮು ಧೃವೀಕರಣ ಮತ್ತು ದ್ವೇಷ ರಾಜಕಾರಣಕ್ಕೆ ಪ್ರತಿರೋಧದ ದನಿಯಾಗಿ ಸಮ ಸಮಾಜದ ಕನಸುಗಳನ್ನು ಸಾಕಾರಗೊಳಿಸುವ ಬಹುತ್ವ ಭಾರತದ ಆಶಯಗಳನ್ನು ಶೋಷಿತರಿಗೆ, ದಮನಿತರಿಗೆ, ಅವಕಾಶವಂಚಿತರಿಗೆ, ತುಳಿತಕ್ಕೊಳಗಾದವರಿಗೆ, ದೌರ್ಜನ್ಯಕ್ಕೀಡಾದವರಿಗೆ ಮತ್ತು ಅಭಿವೃದ್ಧಿ ಪಥದ ಅಂಚಿಗೆ ತಳ್ಳಲ್ಪಡುತ್ತಿರುವ ಕೋಟ್ಯಂತರ ಶ್ರಮಜೀವಿಗಳಿಗೆ ಮನದಟ್ಟು ಮಾಡುವುದು ನಮ್ಮ ಮುಂದಿನ ರಾಜಕೀಯ ಪ್ರಣಾಳಿಕೆಯಾಗಬೇಕಿದೆ. ಕಾಂಗ್ರೆಸ್ ಒಳಗೊಂಡಂತೆ ಭಾರತದ ಪ್ರಧಾನ ವಿರೋಧ ಪಕ್ಷಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಲು ಸಾಧ್ಯವೇ ? ಇದು ನಮ್ಮ ಮುಂದಿರುವ ಮೂರ್ತ ಪ್ರಶ್ನೆ ಮತ್ತು ಬೃಹತ್ ಸವಾಲು.

Donate Janashakthi Media

Leave a Reply

Your email address will not be published. Required fields are marked *